ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಾನ್ಯಾಕೆ ಯಾವಾಗಲೂ ಹಿಂದೆ-ಮುಂದೆ ಯೋಚಿಸದೆ ಮಾತಾಡ್ತೀನಿ?

ನಾನ್ಯಾಕೆ ಯಾವಾಗಲೂ ಹಿಂದೆ-ಮುಂದೆ ಯೋಚಿಸದೆ ಮಾತಾಡ್ತೀನಿ?

 “ಕೆಲವೊಮ್ಮೆ ನಾನು ಸ್ವಲ್ಪ ಹಿಂದೆ-ಮುಂದೆ ಯೋಚಿಸಿ ಮಾತಾಡ್ತೀನಿ, ಆದರೆ ಇನ್ನು ಕೆಲವೊಮ್ಮೆ ನನಗೇ ಗೊತ್ತಿಲ್ಲದೆ ಮಿತಿ ಮೀರಿ ಮಾತಾಡಿಬಿಡ್ತೀನಿ.”—ಜೇಮ್ಸ್‌.

 “ನನಗೆ ತುಂಬ ಟೆನ್ಶನ್‌ ಇರುವಾಗ ಯೋಚಿಸದೆ ಮಾತಾಡ್ತೀನಿ, ಎಲ್ಲಾ ಸರಿಯಾಗಿರುವಾಗ ಜಾಸ್ತಿನೇ ಮಾತಾಡ್ತೀನಿ. ಹೀಗೆ ಎಲ್ಲಾ ಟೈಮಲ್ಲೂ ತಪ್ಪಾಗೇ ಮಾತಾಡಿಬಿಡ್ತೀನಿ.”—ಮರೀ.

 “ನಾಲಿಗೆಯು ಬೆಂಕಿಯಾಗಿದೆ” ಮತ್ತು “ಎಷ್ಟೋ ದೊಡ್ಡ ಕಾಡನ್ನು ಸುಟ್ಟುಬಿಡಲು ಎಷ್ಟು ಚಿಕ್ಕ ಬೆಂಕಿ ಸಾಕಾಗುತ್ತದೆ” ಎಂದು ಬೈಬಲ್‌ ಹೇಳುತ್ತದೆ. (ಯಾಕೋಬ 3:5, 6) ನಿಮ್ಮ ಮಾತಿನಿಂದಾಗಿ ನಿಮಗೇ ಮುಜುಗರ ಆಗುತ್ತಿದೆಯಾ? ಹಾಗಾದರೆ ಈ ಸಮಸ್ಯೆಯಿಂದ ಹೊರ ಬರಲು ಈ ಲೇಖನ ನಿಮಗೆ ಸಹಾಯ ಮಾಡುತ್ತದೆ.

 ನಾನ್ಯಾಕೆ ಹಿಂದೆ-ಮುಂದೆ ಯೋಚಿಸದೆ ಮಾತಾಡ್ತೀನಿ?

 ಅಪರಿಪೂರ್ಣತೆ. ‘ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ. ಯಾವನಾದರೂ ಮಾತಿನಲ್ಲಿ ಎಡವದಿರುವುದಾದರೆ ಅಂಥವನು ಪರಿಪೂರ್ಣನಾಗಿದ್ದಾನೆ’ ಎಂದು ಬೈಬಲ್‌ ಹೇಳುತ್ತದೆ. (ಯಾಕೋಬ 3:2) ನಾವೆಲ್ಲರೂ ಅಪರಿಪೂರ್ಣರಾಗಿರುವುದರಿಂದ ನಡೆದಾಡುವಾಗ ಮಾತ್ರವಲ್ಲ ಮಾತಾಡುವಾಗಲೂ ಎಡವುತ್ತೇವೆ.

 “ನನಗೆ ಅಪರಿಪೂರ್ಣ ಮಿದುಳು ಮತ್ತು ನಾಲಿಗೆ ಇರೋದರಿಂದ ಇವೆರಡೂ ನನ್ನ ನಿಯಂತ್ರಣದಲ್ಲಿದೆ ಎಂದು ಹೇಳೋದು ಹುಚ್ಚುಮಾತಾಗಿದೆ.”—ಆ್ಯನ.

 ಜಾಸ್ತಿ ಮಾತಾಡೋದು. “ಮಾತಾಳಿಗೆ ಪಾಪ ತಪ್ಪದು”ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 10:19) ಯಾರೆಲ್ಲಾ ಬೇರೆಯವರು ಹೇಳೋದನ್ನ ಕೇಳದೆ ತಾವೇ ಜಾಸ್ತಿ ಮಾತಾಡುತ್ತಾರೋ ಅಂಥವರು ಹೆಚ್ಚಾಗಿ ತಮ್ಮ ಮಾತಿನ ಮೂಲಕ ಇತರರ ಮನನೋಯಿಸುತ್ತಾರೆ.

 “ಮಾತಾಡುವವರೇ ಯಾವಾಗಲೂ ಜಾಣರಾಗಲ್ಲ. ಭೂಮಿಯಲ್ಲಿ ಜೀವಿಸಿದವರಲ್ಲೇ ಅತ್ಯಂತ ಜಾಣ ಯೇಸು ಆಗಿದ್ದನು, ಆದರೆ ಯೇಸು ಕೂಡ ಅನೇಕ ಸಲ ಸುಮ್ಮನಿದ್ದನು.”—ಜೂಲ್ಯ.

 ಚುಚ್ಚುಮಾತು. “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು”ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 12:18) ದುಡುಕಿ ಮಾತಾಡುವುದಕ್ಕೆ ಒಂದು ಉದಾಹರಣೆ ಚುಚ್ಚಿ ಮಾತಾಡುವುದೇ ಆಗಿದೆ, ಅಂದರೆ ಬೇರೆಯವರಿಗೆ ನೋವಾಗುವಂತೆ ಅವರನ್ನು ಜರೆಯುವುದು ಅಥವಾ ಹೀನೈಸಿ ಮಾತಾಡುವುದೇ ಆಗಿದೆ. ಈ ರೀತಿ ಚುಚ್ಚುಮಾತು ಆಡುವವರು “ನಾನು ಸುಮ್ನೆ ತಮಾಷೆ ಮಾಡಿದೆ” ಅಂತ ಹೇಳಬಹುದು. ಆದರೆ ಇತರರನ್ನು ಅವಮಾನ ಮಾಡುವುದು ತಮಾಷೆಯ ವಿಷಯವಲ್ಲ. ಬೈಬಲ್‌ ನಮಗೆ “ನಿಂದಾತ್ಮಕ ಮಾತುಗಳನ್ನು ಸಕಲ ವಿಧವಾದ ಕೆಟ್ಟತನದೊಂದಿಗೆ ನಿಮ್ಮಿಂದ ತೆಗೆದುಹಾಕಿರಿ”ಎಂದು ಹೇಳುತ್ತದೆ.—ಎಫೆಸ 4:31.

 “ತಮಾಷೆ ಮಾಡೋದಂದರೆ ನನಗಿಷ್ಟ, ಯಾವಾಗಲೂ ತಮಾಷೆ ಮಾಡ್ತಿರುತ್ತೇನೆ. ಆದರೆ ತಮಾಷೆ ಮಾಡ್ತಾ ಮಾಡ್ತಾ ಚುಚ್ಚುಮಾತು ಆಡೋಕೆ ಶುರುಮಾಡಿಬಿಡ್ತೀನಿ, ಇದರಿಂದ ಅನೇಕ ಸಲ ಸಮಸ್ಯೆಗಳಿಗೆ ತಗಲಾಕೊಂಡಿದ್ದೀನಿ.”—ಒಕ್ಸಾನ.

ಒಂದ್ಸಲ ಟೂತ್‌ಪೇಸ್ಟನ್ನು ತೆಗೆದ ಮೇಲೆ ಅದನ್ನ ಮತ್ತೆ ಟ್ಯೂಬ್‌ನಲ್ಲಿ ತುರುಕಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ಒಂದ್ಸಲ ಏನಾದರೂ ಹೇಳಿಬಿಟ್ಟರೆ ಮತ್ತೆ ಅದನ್ನ ವಾಪಸ್‌ ತಗೊಳ್ಳಲು ಸಾಧ್ಯವಿಲ್ಲ

 ನಾಲಿಗೆ ಬಿಗಿಹಿಡಿದು ಮಾತಾಡೋದು ಹೇಗೆ?

 ನಾಲಿಗೆಯನ್ನು ಹತೋಟಿಯಲ್ಲಿಡಲು ಕಲಿಯುವುದು ಅಷ್ಟು ಸುಲಭವಲ್ಲ. ಆದರೆ ಬೈಬಲ್‌ ತತ್ವಗಳನ್ನು ಪಾಲಿಸೋದಾದರೆ ಅದು ಸಾಧ್ಯ. ಉದಾಹರಣೆಗೆ ಈ ಕೆಳಗಿನ ಸಲಹೆಗಳನ್ನು ಗಮನಿಸಿ.

 “ಮೌನವಾಗಿರಿ . . . ಹೃದಯದಲ್ಲೇ ಆಲೋಚಿಸಿಕೊಳ್ಳಿರಿ.”—ಕೀರ್ತನೆ 4:4.

 ಕೆಲವೊಮ್ಮೆ ಸುಮ್ಮನೆ ಮೌನವಾಗಿರುವುದೇ ಒಳ್ಳೇದು. ಲಾರಾ ಎನ್ನುವ 25 ವಯಸ್ಸಿನ ಸ್ತ್ರೀ ಹೇಳುವುದು: “ನನಗೆ ಸಿಟ್ಟು ಬಂದಾಗ ಯೋಚಿಸೋದಕ್ಕೂ ಸಿಟ್ಟಿಳಿದ ಮೇಲೆ ಯೋಚಿಸುವುದಕ್ಕೂ ತುಂಬ ವ್ಯತ್ಯಾಸವಿದೆ. ನನಗೆ ಸಮಾಧಾನವಾದ ಮೇಲೆ ಸಿಟ್ಟಿನಲ್ಲಿ ನಾನೇನೂ ಮಾತಾಡದೇ ಇದ್ದದ್ದಕ್ಕೆ ತುಂಬ ಸಂತೋಷವಾಗುತ್ತದೆ.” ಮಾತನ್ನು ಕೆಲವೇ ಸೆಕೆಂಡು ತಡೆದು ಆಲೋಚಿಸಿದರೂ ನೀವು ತಪ್ಪಾಗಿ ಮಾತಾಡದಿರಲು ಸಹಾಯವಾಗುತ್ತದೆ.

 “ನಾಲಿಗೆಯು ಆಹಾರದ ರುಚಿ ನೋಡುವಂತೆ ಕಿವಿಯು ಮಾತುಗಳನ್ನು ಪರೀಕ್ಷಿಸುತ್ತದಲ್ಲಾ?”—ಯೋಬ 12:11, ನೂತನ ಲೋಕ ಭಾಷಾಂತರ.

 ಈ ಕೆಳಗಿನ ಪ್ರಶ್ನೆಗಳನ್ನು ಉಪಯೋಗಿಸಿ ನೀವು ಹೇಳಬೇಕೆಂದಿರುವ ವಿಷಯವನ್ನು ಪರೀಕ್ಷಿಸಿದರೆ ನಂತರ ಕೊರಗದಂತೆ ತಡೆಯಬಹುದು:

  •   ಇದು ನಿಜಾನಾ? ಇದನ್ನು ಹೇಳಿದರೆ ದಯೆ ತೋರಿಸಿದಂತಾಗುತ್ತಾ? ಹೇಳುವುದು ಅಷ್ಟೊಂದು ಅಗತ್ಯನಾ?—ರೋಮನ್ನರಿಗೆ 14:19.

  •   ಇದೇ ಮಾತನ್ನು ನನಗೆ ಯಾರಾದರೂ ಹೇಳಿದರೆ ನನಗೆ ಹೇಗನಿಸುತ್ತೆ?—ಮತ್ತಾಯ 7:12.

  •   ನಾನು ಇದನ್ನು ಹೇಳಿದರೆ ಬೇರೆಯವರ ಯೋಚನೆಗಳನ್ನು ಗೌರವಿಸಿದಂತೆ ಆಗುತ್ತಾ?—ರೋಮನ್ನರಿಗೆ 12:10.

  •   ಇದನ್ನು ಹೇಳಲು ಇದು ಸರಿಯಾದ ಸಮಯಾನ?—ಪ್ರಸಂಗಿ 3:7.

 “ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ.”—ಫಿಲಿಪ್ಪಿ 2:3.

 ಈ ಸಲಹೆಯನ್ನು ಪಾಲಿಸುವಾಗ ಬೇರೆಯವರ ಬಗ್ಗೆ ಸರಿಯಾದ ಮನೋಭಾವ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಇದರಿಂದಾಗಿ ನಾಲಿಗೆ ಬಿಗಿಹಿಡಿದು ಮಾತಾಡಲು ಮತ್ತು ಯೋಚಿಸಿ ಮಾತಾಡಲು ಸಹಾಯವಾಗುತ್ತದೆ. ನೀವೇನಾದರೂ ಬೇರೆಯವರಿಗೆ ಮನನೋಯಿಸುವಂಥ ಮಾತನ್ನು ಈಗಾಗಲೇ ಹೇಳಿಯಾಗಿದ್ದರೂ ನೀವು ಆದಷ್ಟು ಬೇಗ ಅವರ ಹತ್ತಿರ ಕ್ಷಮೆ ಕೇಳಲು ದೀನತೆ ಸಹಾಯ ಮಾಡುತ್ತದೆ. (ಮತ್ತಾಯ 5:23, 24) ನಂತರ, ಮುಂದೆ ಯಾವಾಗಲೂ ನಾಲಿಗೆಯನ್ನು ನಿಯಂತ್ರಣದಲ್ಲಿಡುವ ದೃಢ ತೀರ್ಮಾನ ಮಾಡಿ.