ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಒಳ್ಳೆ ನಡತೆ ಮುಖ್ಯಾನಾ?

ಒಳ್ಳೆ ನಡತೆ ಮುಖ್ಯಾನಾ?

‘ಯಾರೂ ನನಗೋಸ್ಕರ ಬಾಗಿಲು ತೆಗೆದಿಡಲ್ಲ; ನಾನು ಯಾಕೆ ಬೇರೆಯವರಿಗೆ ಬಾಗಿಲು ತೆಗೆದಿಡಬೇಕು?’

‘ನನ್ನ ಕೆಲಸ ಬರೀ “ಥ್ಯಾಂಕ್ಸ್‌,” “ಎಕ್ಸ್‌ಕ್ಯೂಸ್‌ ಮೀ” ಮತ್ತು “ಪ್ಲೀಸ್‌” ಹೇಳೋದಾ?’

‘ಒಡಹುಟ್ಟಿದವರಿಗೆಲ್ಲ ಏನು ಮರ್ಯಾದೆ! ನಾವೆಲ್ಲ ಒಂದೇ ಕುಟುಂಬ ತಾನೇ.’

ಇಲ್ಲಿರೋ ತರ ನೀವೂ ಹೇಳ್ತೀರಾ? ಹಾಗಾದ್ರೆ ಒಳ್ಳೆ ನಡತೆಯಿಂದ ಸಿಗೋ ಪ್ರಯೋಜನ ನಿಮಗೆ ಸಿಕ್ತಿಲ್ಲ ಅಂತ ಆಯ್ತು.

 ಒಳ್ಳೆ ನಡತೆ ಅಂದ್ರೆ ಏನು?

 ಒಳ್ಳೆ ನಡತೆ ತೋರಿಸಿದ್ರೆ ಜೀವನದಲ್ಲಿ ಮೂರು ಪ್ರಯೋಜನಗಳು ಸಿಗುತ್ತೆ:

  1.   ಒಳ್ಳೆ ಹೆಸರು. ನೀವು ನಡ್ಕೊಳ್ಳೋ ವಿಧದಿಂದ ನೀವು ಒಳ್ಳೆಯವರಾ ಕೆಟ್ಟವರಾ ಅಂತ ಗೊತ್ತಾಗುತ್ತೆ. ನೀವು ಒಳ್ಳೆ ನಡತೆ ತೋರಿಸಿದ್ರೆ ಜನರಿಗೆ ನೀವು ಇಷ್ಟ ಆಗ್ತೀರ, ನೀವು ಜವಾಬ್ದಾರಿ ಇರೋ ವ್ಯಕ್ತಿ ಅಂತ ಅರ್ಥ ಮಾಡ್ಕೊಳ್ತಾರೆ. ಅವರೂ ಅದೇ ತರ ನಿಮ್ಮ ಜೊತೆ ನಡ್ಕೊಳ್ತಾರೆ. ಒಂದುವೇಳೆ ನೀವು ಅಹಂಕಾರದಿಂದ ನಡ್ಕೊಂಡ್ರೆ ನೀವು ನಿಮ್ಮ ಬಗ್ಗೆ ಮಾತ್ರ ಯೋಚನೆ ಮಾಡ್ತೀರಾ ಅಂತ ಜನರಿಗೆ ಗೊತ್ತಾಗುತ್ತೆ. ಇದರಿಂದ ನಿಮಗೆ ಕೆಲಸನೂ ಸಿಗಲ್ಲ, ಬೇರೆ ಒಳ್ಳೆ ಅವಕಾಶಗಳನ್ನೂ ಕಳ್ಕೊಬೇಕಾಗುತ್ತೆ. ಅದಕ್ಕೆ ಬೈಬಲ್‌ “ಕ್ರೂರಿ ತನ್ನ ಮೇಲೆನೇ ಅವಮಾನ ತಂದ್ಕೊಳ್ತಾನೆ” ಅಂತ ಹೇಳುತ್ತೆ.—ಜ್ಞಾನೋಕ್ತಿ 11:17; ಪಾದಟಿಪ್ಪಣಿ.

  2.   ಒಳ್ಳೆ ಜೀವನ. “ಪ್ರೀತಿಯನ್ನ ಹಾಕ್ಕೊಳ್ಳಿ, ಯಾಕಂದ್ರೆ ಎಲ್ರನ್ನೂ ಒಂದು ಮಾಡೋದು ಈ ಪ್ರೀತಿನೇ” ಅಂತ ಬೈಬಲ್‌ ಹೇಳುತ್ತೆ. (ಕೊಲೊಸ್ಸೆ 3:14) ಸ್ನೇಹಿತರ ವಿಷಯದಲ್ಲಿ ಇದು ನೂರಕ್ಕೆ ನೂರು ಸತ್ಯ. ನಮ್ಮ ಜೊತೆ ಚೆನ್ನಾಗಿ ನಡ್ಕೊಳ್ಳುವವರ ಹತ್ತಿರ ನಾವು ಇರೋಕೆ ಇಷ್ಟಪಡ್ತೀವಿ. ನಾವೂ ಅವರ ಜೊತೆ ಚೆನ್ನಾಗಿ ನಡ್ಕೊಳ್ತೀವಿ. ಅಸಹ್ಯವಾಗಿ, ಅಹಂಕಾರದಿಂದ ಮಾತಾಡುವವರ ಜೊತೆ ಯಾರು ತಾನೇ ಇರೋಕೆ ಇಷ್ಟಪಡ್ತಾರೆ ಹೇಳಿ?

  3.   ಜನ ಚೆನ್ನಾಗಿ ನಡ್ಕೊಳ್ತಾರೆ. “ನಾವು ಯಾವಾಗಲೂ ಪ್ರೀತಿ ಕಾಳಜಿಯಿಂದ ನಡ್ಕೊಂಡ್ರೆ ನಮ್ಮ ಜೊತೆ ಕ್ರೂರವಾಗಿ ನಡ್ಕೊಳ್ಳೋ ವ್ಯಕ್ತಿ ಕೂಡ ಚೆನ್ನಾಗಿ ನಡ್ಕೊಳ್ಳೋ ಸಾಧ್ಯತೆ ಇದೆ” ಅಂತ ಜೆನಿಫರ್‌ ಹೇಳ್ತಾಳೆ. ಒಂದುವೇಳೆ ನೀವು ಕೋಪದಿಂದ ನಡ್ಕೊಂಡ್ರೆ ಜನರೂ ನಿಮ್ಮ ಜೊತೆ ಕೋಪದಿಂದಾನೇ ನಡ್ಕೊಳ್ತಾರೆ. ಅದಕ್ಕೆ ಬೈಬಲ್‌ ಹೀಗೆ ಹೇಳುತ್ತೆ: “ನೀವು ಜನ್ರ ಹತ್ರ ಹೇಗೆ ನಡ್ಕೊಳ್ತೀರೋ ಅವ್ರೂ ನಿಮ್ಮ ಹತ್ರ ಅದೇ ರೀತಿ ನಡ್ಕೊಳ್ತಾರೆ.”—ಮತ್ತಾಯ 7:2.

 ನಮಗಿರೋ ಪಾಠ: ನಾವು ಪ್ರತಿದಿನ ಜನರ ಜೊತೆ ಬೆರೆಯಲೇಬೇಕು. ನೀವು ಜನರ ಜೊತೆ ಹೇಗೆ ನಡ್ಕೊಳ್ತಿರೋ ಹಾಗೇ ಜನರು ನಿಮ್ಮ ಜೊತೆ ನಡ್ಕೊಳ್ತಾರೆ. ಹಾಗಾಗಿ ಒಳ್ಳೆ ನಡತೆ ತುಂಬ ಪ್ರಾಮುಖ್ಯ!

 ನಾವು ಹೇಗೆ ಒಳ್ಳೇ ನಡತೆ ತೋರಿಸಬಹುದು?

  1.   ನಿಮಗೆ ‘ಒಳ್ಳೆ ನಡತೆ ಇದ್ಯಾ ಅಂತ ಪರೀಕ್ಷಿಸಿ.’ ಅದಕ್ಕೋಸ್ಕರ ಈ ಪ್ರಶ್ನೆಗಳನ್ನ ಕೇಳಿಕೊಳ್ಳಿ: ‘ದೊಡ್ಡವರಿಗೆ ನಾನು ಮರ್ಯಾದೆ ಕೊಡ್ತೀನಾ? “ಪ್ಲೀಸ್‌,” “ಥ್ಯಾಂಕ್ಯು,” “ಎಕ್ಸ್‌ಕ್ಯೂಸ್‌ ಮೀ” ಅಂತ ನಾನು ಹೇಳ್ತಿನಾ? ಯಾರಾದ್ರೂ ನನ್ನ ಜೊತೆ ಮಾತಾಡುವಾಗ ಅದಕ್ಕೆ ಗಮನ ಕೊಡದೆ ಫೋನ್‌ ನೋಡ್ತಾ ಮೆಸೇಜ್‌ ಮಾಡ್ತೀನಾ? ಅಪ್ಪಅಮ್ಮಗೆ, ಒಡಹುಟ್ಟಿದವರಿಗೆ ನಾನು ಗೌರವ ಕೊಡ್ತೀನಾ ಅಥವಾ ಇವರು “ನನ್ನ ಕುಟುಂಬ” ತಾನೇ ಇವರಿಗೇನು ಮರ್ಯಾದೆ ಅಂತ ಅಂದುಕೊಳ್ಳುತ್ತೀನಾ?’

     ಬೈಬಲ್‌ ಹೀಗೆ ಹೇಳುತ್ತೆ: “ಗೌರವ ತೋರಿಸೋದ್ರಲ್ಲಿ ಒಬ್ರಿಗಿಂತ ಒಬ್ರು ಮುಂದೆ ಬನ್ನಿ.”—ರೋಮನ್ನರಿಗೆ 12:10.

  2.   ಗುರಿ ಇಡಿ. ನೀವು ಬದಲಾವಣೆ ಮಾಡಬೇಕಾಗಿರೋ ಮೂರು ವಿಷಯಗಳು ಯಾವುದು ಅಂತ ಬರೆಯಿರಿ. ಉದಾಹರಣೆಗೆ 15 ವರ್ಷದ ಆ್ಯಲಿಸನ್‌, “ನಾನು ಮಾತಾಡೋದನ್ನ ಕಮ್ಮಿ ಮಾಡಿ ಕೇಳಿಸಿಕೊಳ್ಳೋದನ್ನ ಜಾಸ್ತಿ ಮಾಡಬೇಕು” ಅಂತಾಳೆ. 19 ವರ್ಷದ ಡೇವಿಡ್‌ ಹೀಗೆ ಹೇಳ್ತಾನೆ, “ಕುಟುಂಬದವ್ರ ಜೊತೆ, ಫ್ರೆಂಡ್ಸ್‌ ಜೊತೆಯಿರುವಾಗ ನಾನು ಮೆಸೇಜ್‌ ಮಾಡೋದನ್ನ ನಿಲ್ಲಿಸಬೇಕು. ಇಲ್ಲಾಂದ್ರೆ ನಿಮಗಿಂತ ಬೇರೆಯವರ ಜೊತೆ ಮಾತಾಡೋದೇ ಒಳ್ಳೇದು ಅಂತ ಅವರಿಗೆ ಹೇಳಿದಾಗಿರುತ್ತೆ. ಇದು ಗೌರವ ಕೊಡೋ ತರ ಇರಲ್ಲ. ಅದಕ್ಕೆ ನಾನು ಈ ಅಭ್ಯಾಸನ ಬಿಡಬೇಕು ಅಂತ ಅಂದ್ಕೊಂಡಿದ್ದೀನಿ.” “ಬೇರೆಯವರು ಮಾತಾಡುವಾಗ ನಾನು ಮಧ್ಯದಲ್ಲಿ ಬಾಯಿ ಹಾಕೋದನ್ನ ನಿಲ್ಲಿಸಬೇಕು” ಅಂತ 17 ವರ್ಷದ ಎಡ್ವರ್ಡ್‌ ಹೇಳ್ತಾನೆ. ಈ ಮುಂಚೆ ಹೇಳಿದ ಜೆನಿಫರ್‌ ವಯಸ್ಸಾದವರ ಜೊತೆ ನಡ್ಕೊಳ್ಳೋ ರೀತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಳು. ಅವಳು ಹೀಗೆ ಹೇಳ್ತಾಳೆ: “ಮುಂಚೆ ನಾನು ವಯಸ್ಸಾದವರಿಗೆ ಬರಿ ಒಂದು ಹಲೋ ಹೇಳಿ ತಕ್ಷಣ ನನ್ನ ಫ್ರೆಂಡ್ಸ್‌ ಹತ್ತಿರ ಹೋಗಿ ಮಾತಾಡ್ತಿದ್ದೆ. ಆದ್ರೆ ಈಗ, ನಾನು ಅವರ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ, ಅವರ ಜೊತೆ ಸಮಯ ಕಳಿಯೋಕೆ ಪ್ರಯತ್ನ ಮಾಡ್ತಿದ್ದೀನಿ. ಇದ್ರಿಂದ ನಂಗೆ ತುಂಬಾ ಒಳ್ಳೇದಾಗಿದೆ.” 

     ಬೈಬಲ್‌ ಹೀಗೆ ಹೇಳುತ್ತೆ: “ನಿಮ್ಮ ಬಗ್ಗೆ ಮಾತ್ರ ಯೋಚಿಸದೆ, ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.”—ಫಿಲಿಪ್ಪಿ 2:4.

  3.   ಬದಲಾಗ್ತಿದ್ದಿರಾ ಇಲ್ವಾ ಅಂತ ತಿಳ್ಕೊಳಿ. ನಿಮ್ಮ ಮಾತಲ್ಲಿ ಅಥವಾ ನಡತೆಯಲ್ಲಿ ಏನಾದರೂ ಬದಲಾವಣೆ ಮಾಡಬೇಕಾ ಅಂತ ಒಂದು ತಿಂಗಳು ಬರೆದಿಡಿ. ತಿಂಗಳ ಕೊನೆಯಲ್ಲಿ, ‘ಒಳ್ಳೆ ರೀತಿಯಲ್ಲಿ ನಡ್ಕೊಂಡಿದ್ರಿಂದ ನಂಗೆ ಏನಾದ್ರೂ ಪ್ರಯೋಜನ ಆಯ್ತಾ? ನಾನು ಇನ್ನು ಎಲ್ಲಾದ್ರೂ ಬದಲಾವಣೆ ಮಾಡಬೇಕಾ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ಹೀಗೆ ಹೊಸ ಹೊಸ ಗುರಿಗಳನ್ನ ಇಡ್ತಾ ಇರಿ.

     ಬೈಬಲ್‌ ಹೀಗೆ ಹೇಳುತ್ತೆ: “ಜನ ನಿಮಗೇನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.”—ಲೂಕ 6:31.