ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಾನು ಹೇಗೆ ದುಃಖದಿಂದ ಹೊರಗೆ ಬರಲಿ?

ನಾನು ಹೇಗೆ ದುಃಖದಿಂದ ಹೊರಗೆ ಬರಲಿ?

 ಇತ್ತೀಚಿಗೆ ನಿಮ್ಮ ಕುಟುಂಬದವರು ಅಥವಾ ಸ್ನೇಹಿತರು ಯಾರಾದರೂ ತೀರಿಹೋಗಿದ್ದಾರಾ? ಒಂದುವೇಳೆ ತೀರಿಹೋಗಿದ್ದರೆ ನಿಮಗೆ ಆಗಿರೋ ನೋವನ್ನ ಕಡಿಮೆ ಮಾಡೋಕೆ ಈ ಲೇಖನ ಸಹಾಯ ಮಾಡುತ್ತೆ.

ಈ ಲೇಖನದಲ್ಲಿ

 ನಾನು ದುಃಖದಲ್ಲೇ ಮುಳುಗಿ ಹೋಗಿದ್ದಿನಾ?

 ಕೆಲವು ಜನರಿಗೆ ತಮ್ಮ ಪ್ರೀತಿಪಾತ್ರರು ತೀರಿ ಹೋದಾಗ ತುಂಬ ದುಃಖ ಆಗುತ್ತೆ. ಆ ದುಃಖದಿಂದ ಹೊರಬರಲು ವರ್ಷಗಳೇ ಹಿಡಿಯುತ್ತೆ.

 “ನನ್ನ ತಾತ ತೀರಿಹೋಗಿ ಎರಡು ವರ್ಷವಾದ್ರೂ ಅವರನ್ನ ನೆನಸದ ದಿನಗಳೇ ಇಲ್ಲ. ಅವರ ಬಗ್ಗೆ ನೆನಸಿಕೊಂಡಾಗೆಲ್ಲಾ ಕಣ್ಣಲ್ಲಿ ನೀರು ಬರುತ್ತೆ.”—ಒಲಿವಿಯಾ.

 “ಜೀವನದಲ್ಲಿ ಗುರಿಗಳನ್ನ ಇಡೋಕೆ ಸಹಾಯ ಮಾಡಿದ್ದೇ ನನ್ನಜ್ಜಿ. ಆದ್ರೆ ಆ ಗುರಿಗಳನ್ನ ಮುಟ್ಟಿದಾಗ ಅದೆನ್ನೆಲ್ಲಾ ನೋಡೋಕೆ ಅಜ್ಜಿ ನನ್ನ ಜೊತೆ ಇರಲಿಲ್ಲ. ಅದಕ್ಕೆ ಪ್ರತಿ ಸಲ ಗುರಿ ಮುಟ್ಟಿದಾಗ ಖುಷಿಗಿಂತ ತುಂಬ ನೋವಾಗುತ್ತಿತ್ತು.”—ಆ್ಯಲಿಸನ್‌.

 ನಾವು ಯಾರನ್ನಾದರೂ ಕಳಕೊಂಡಾಗ ತುಂಬ ಭಾವನೆಗಳು ನಮ್ಮನ್ನ ಮುತ್ತಿಕೊಂಡಿರುತ್ತೆ. ಉದಾಹರಣೆಗೆ:

 “ನನ್ನ ಅಂಕಲ್‌ ತೀರಿಕೊಂಡಾಗ ತುಂಬ ಶಾಕ್‌ ಆಯ್ತು. ತುಂಬ ಸಮಯದವರೆಗೆ ಅವರು ತೀರಿ ಹೋದ್ರು ಅನ್ನೋ ಸತ್ಯವನ್ನ ನನ್ನಿಂದ ಒಪ್ಪಿಕೊಳ್ಳೋಕೆ ಆಗಲಿಲ್ಲ. ನನ್ನ ಮನಸ್ಸಿಗೆ ತುಂಬ ಹತ್ರ ಆದವರು ತೀರಿಹೋಗಿದ್ದು ಇದೇ ಮೊದಲು. ಹಾಗಾಗಿ ನನ್ನ ಮೇಲೆ ಟ್ರೈನ್‌ ಹರಿದಂಗಾಯ್ತು.”—ನೇಡಿನ್‌

 “ಅಜ್ಜ ತೀರಿಹೋದಾಗ ನನಗೆ ಅವರ ಮೇಲೆ ತುಂಬ ಕೋಪ ಬಂತು. ಯಾಕಂದ್ರೆ ಆರೋಗ್ಯ ನೋಡ್ಕೊಳ್ಳಿ ಅಂತ ನಾವು ಎಷ್ಟು ಹೇಳಿದ್ರೂ ಅವರು ನಮ್ಮ ಮಾತೇ ಕೇಳಲಿಲ್ಲ.”—ಕಾರ್ಲೋಸ್‌.

 “ನನ್ನ ಅಜ್ಜ ತೀರಿಹೋಗೋ ಸಮಯದಲ್ಲಿ ನಾನು ಮತ್ತು ಅಕ್ಕ ಅವರ ಪಕ್ಕದಲ್ಲಿ ಇರೋಕೆ ಆಗಲಿಲ್ಲ. ಸಾಯೋ ಟೈಮಲ್ಲೂ ಅವರ ಜೊತೆ ಇರೋಕೆ ಆಗಲಿಲ್ಲ ಅನ್ನೋ ಕೊರಗು ನನ್ನನ್ನ ಈಗಲೂ ಕಾಡ್ತಿದೆ.”—ಆ್ಯಡ್ರಿಯಾನ.

 “ನಮ್ಮ ಕುಟುಂಬಕ್ಕೆ ತುಂಬ ಹತ್ತಿರ ಆಗಿದ್ದ ಒಬ್ಬ ದಂಪತಿ ಕಾರು ಆಕ್ಸಿಡೆಂಟಲ್ಲಿ ತೀರಿಹೋದರು. ಅವತ್ತಿಂದ ನಮ್ಮ ಮನೆಯಿಂದ ಯಾರೇ ಹೊರಗೆ ಹೋದರೂ ಇವರೂ ತೀರಿ ಹೋಗ್ತಾರೇನೋ ಅನ್ನೋ ಭಯ ಕಾಡ್ತಿದೆ.”—ಜೆರೆಡ್‌.

 “ನನ್ನ ಅಜ್ಜಿ ತೀರಿ ಹೋಗಿ ಮೂರು ವರ್ಷ ಆಯ್ತು. ಅವರಿದ್ದಾಗ ಅವರ ಜೊತೆ ಸಮಯ ಕಳೆಯಲಿಲ್ಲವಲ್ಲಾ ಅಂತ ಇವತ್ತಿಗೂ ಬೇಜಾರಾಗುತ್ತೆ.”—ಜ್ಯೂಲಿಯಾನ.

 ದುಃಖದಲ್ಲಿರುವಾಗ ಶಾಕು, ಕೋಪ, ಕೊರಗು, ಭಯ ಮತ್ತು ಬೇಜಾರಾಗುತ್ತೆ. ನೀವು ಈ ತರದ ನೋವಲ್ಲಿದ್ರೆ, ಕುಗ್ಗಿ ಹೋಗಬೇಡಿ. ಒಂದಲ್ಲಾ ಒಂದು ದಿನ ಇದೆಲ್ಲಾ ಕಮ್ಮಿ ಆಗುತ್ತೆ. ಆದ್ರೆ ಈ ದುಃಖದಿಂದ ಹೇಗೆ ಹೊರಗೆ ಬರೋದು?

 ದುಃಖದಿಂದ ಹೊರಗೆ ಬರೋಕೆ ಏನು ಮಾಡಲಿ?

 ಫ್ರೆಂಡ್‌ ಜೊತೆ ಮಾತಾಡಿ. ನಿಜವಾದ ಸ್ನೇಹಿತ ‘ಕಷ್ಟಕಾಲದಲ್ಲಿ ನಿಮ್ಮ ಸಹೋದರನಾಗ್ತಾನೆ’ ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 17:17) ನಿಮಗೆ ಹೇಗೆ ಅನಿಸುತ್ತೆ ಅಂತ ಬೇರೆಯವರ ಹತ್ತಿರ ಹೇಳಿಕೊಂಡ್ರೆ ಅವರಿಂದ ನಿಮಗೆ ಸಹಾಯ ಸಿಗುತ್ತೆ.

 “ನೋವಾದಾಗ ಅಳೋದು, ದುಃಖ ಪಡೋದು ಸಾಮಾನ್ಯ. ಕೆಲವೊಮ್ಮೆ ಒಬ್ಬರೇ ಕೂತು ಅಳಬಹುದು. ಆದ್ರೆ ಆಗ ನನ್ನ ನೋವಿಗೆ ಕೊನೆನೇ ಇಲ್ಲವೇನೋ ಅನಿಸಿಬಿಡುತ್ತೆ. ಅದಕ್ಕೆ ಬೇರೆಯವರ ಹತ್ತಿರ ಮಾತಾಡಿದ್ರೆ ಚೆನ್ನಾಗಿರುತ್ತೆ.”—ಇವೆಟ್‌.

 ಕಳ್ಕೊಂಡಿರುವವರನ್ನ ನೆನಪಿಸಿಕೊಳ್ಳಿ. “ಒಳ್ಳೆಯವನ ಹೃದಯದಲ್ಲಿ ಒಳ್ಳೆಯದಿರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಒಳ್ಳೆಯವು ಹೊರಬರುತ್ತವೆ” ಅಂತ ಬೈಬಲ್‌ ಹೇಳುತ್ತೆ. (ಲೂಕ 6:45, ಪರಿಶುದ್ದ ಬೈಬಲ್‌ a) ನೀವು ಅವರ ಜೊತೆ ಕಳೆದ ಸವಿ ನೆನಪುಗಳನ್ನ ಬರೆದಿಡಿ ಅಥವಾ ಆಲ್ಬಮ್‌ ಮಾಡಿ ಇಟ್ಟುಕೊಳ್ಳಿ.

 “ನನ್ನ ಫ್ರೆಂಡ್‌ಸಾಯೋ ಮುಂಚೆ ನನಗೆ ಕಲಿಸಿದ ವಿಷಯಗಳನ್ನೆಲ್ಲಾ ಬರೆದಿಡಬೇಕು ಅಂತ ತೀರ್ಮಾನ ಮಾಡಿದೆ. ಇದ್ರಿಂದ ನನಗೆ ತುಂಬ ಪ್ರಯೋಜನ ಆಯಿತು. ನಾನು ಈ ತರ ಬರೆದಿದ್ರಿಂದ ಅವನು ನನ್ನ ಜೊತೆ ಇಲ್ಲ ಅಂದ್ರೂ ಆ ನೋವನ್ನ ತಾಳಿಕೊಳ್ಳೋಕೆ ಸಹಾಯ ಆಯ್ತು.”—ಜೆಫ್ರಿ.

 ಆರೋಗ್ಯ ನೋಡ್ಕೊಳ್ಳಿ. ವ್ಯಾಯಾಮದಿಂದ ಪ್ರಯೋಜನ ಇದೆ ಅಂತ ಬೈಬಲ್‌ ಹೇಳುತ್ತೆ. (1 ತಿಮೊತಿ 4:8) ಪೌಷ್ಠಿಕ ಆಹಾರ ತಿನ್ನಿ, ವ್ಯಾಯಾಮ ಮಾಡಿ ಮತ್ತು ಒಳ್ಳೆ ರೆಸ್ಟ್‌ ತಗೊಳ್ಳಿ.

 “ದುಃಖದಲ್ಲಿ ಮುಳುಗಿ ಹೋದ್ರೆ ಸರಿಯಾಗಿ ಯೋಚನೆ ಮಾಡೋಕೆ ಕಷ್ಟ ಆಗುತ್ತೆ. ಹಾಗಾಗಿ ಊಟ ಮಾಡೋದನ್ನ, ನಿದ್ದೆ ಮಾಡೋದನ್ನ ಬಿಡಬೇಡಿ. ನಿಮ್ಮ ಆರೋಗ್ಯ ನೋಡ್ಕೊಳ್ಳಿ.”—ಮರಿಯಾ.

 ಸಹಾಯ ಮಾಡಿ. “ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ” ಅಂತ ಬೈಬಲ್‌ ಹೇಳುತ್ತೆ.—ಅಪೊಸ್ತಲರ ಕಾರ್ಯ 20:35.

 “ನಿಮ್ಮ ತರಾನೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಆಗ ನೀವೊಬ್ಬರೇ ಅಲ್ಲ ಬೇರೆಯವರು ಸಹ ಕಷ್ಟಪಡ್ತಿದ್ದಾರೆ ಅಂತ ಅರ್ಥಮಾಡ್ಕೊಳ್ತೀರ.”—ಕಾರ್ಲೋಸ್‌.

 ಪ್ರಾರ್ಥನೆಯಲ್ಲಿ ದುಃಖ ತೋಡಿಕೊಳ್ಳಿ. ಬೈಬಲ್‌ ಯೆಹೋವನನ್ನ “ಪ್ರಾರ್ಥನೆ ಕೇಳುವವನೇ” ಅಂತ ಹೇಳುತ್ತೆ. (ಕೀರ್ತನೆ 65:2) ಅಷ್ಟೇ ಅಲ್ಲ ಯೆಹೋವ ದೇವರು “ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ, ಅವರ ಗಾಯಗಳಿಗೆ ಪಟ್ಟಿ ಕಟ್ತಾನೆ” ಅಂತನೂ ಬೈಬಲ್‌ ಹೇಳುತ್ತೆ.—ಕೀರ್ತನೆ 147:3.

 “ಬೇಕಾಗಿರೋ ಸಹಾಯ ಮತ್ತು ಪ್ರೋತ್ಸಾಹ ಕೊಡಿ ಅಂತ ಯೆಹೋವನನ್ನ ಕೇಳಿ. ಕೆಲವೊಂದು ಸಲ ನಮಗೆ ‘ನನ್ನ ಕೈಯಲ್ಲಿ ಇನ್ನು ಆಗಲ್ಲವೇನೋ’ ಅಂತ ಅನಿಸಬಹುದು. ಆದ್ರೆ ಯೆಹೋವ ಯಾವಾಗಲೂ ನಮ್ಮ ಜೊತೆನೆ ಇರುತ್ತಾನೆ ಅಂತ ನೆನಪಿಡಿ.”—ಜಾನೆಟ್‌

 ತಕ್ಷಣ ಎಲ್ಲ ಸರಿಯಾಗಬೇಕು ಅಂದುಕೊಳ್ಳಬೇಡಿ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ದುಃಖಪಡ್ತಾರೆ. ಯಾಕೋಬನಿಗೆ ತನ್ನ ಮಗ ಸತ್ತು ಹೋಗಿದ್ದಾನೆ ಅನ್ನೋ ಸುದ್ದಿ ಸಿಕ್ಕಿದಾಗ ಯಾರು ಎಷ್ಟೇ “ಸಮಾಧಾನ ಮಾಡಿದ್ರೂ” ಅವನ ದುಃಖ ಕಮ್ಮಿ ಆಗಲಿಲ್ಲ. (ಆದಿಕಾಂಡ 37:35) ಹಾಗಾಗಿ ನಿಮ್ಮ ದುಃಖ ಕಮ್ಮಿನೇ ಆಗ್ತಿಲ್ಲಾ ಅಂತ ಅನಿಸಿದ್ರೆ ಆಶ್ಚರ್ಯಪಡಬೇಡಿ.

 “ನನ್ನ ಅಜ್ಜಿಯ ಆಕ್ಕ ತೀರಿಹೋಗಿ 15 ವರ್ಷ ಆಯ್ತು. ಆದ್ರೆ ಈಗಲೂ ಕೆಲವೊಂದು ವಿಷಯಗಳನ್ನ ನೋಡಿದಾಗ ಅವರ ನೆನಪಾಗುತ್ತೆ.”—ಟೇಲರ್‌.

 ನೀವು ಒಂದು ಮೂಳೆ ಮುರಿದುಕೊಂಡಿದ್ದೀರಾ ಅಂತ ನೆನಸಿ. ಅದ್ರಿಂದ ನಿಮಗೆ ತುಂಬ ನೋವಾಗುತ್ತೆ, ಅದು ವಾಸಿಯಾಗೋಕೆ ಟೈಮ್‌ ಹಿಡಿಯುತ್ತೆ. ಆದ್ರೆ ವಾಸಿಯಾಗೋಕೆ ಎನು ಮಾಡಬೇಕು ಅಂತ ಡಾಕ್ಟರ್‌ ನಿಮಗೆ ಸಲಹೆಗಳನ್ನ ಕೊಡುತ್ತಾರೆ.

 ಗಾಯದ ನೋವಿಂದ ಹೊರಬರೋಕೆ ಸಮಯ ಹಿಡಿಯೋ ತರಾನೇ ಯಾರನ್ನಾದರೂ ಸಾವಲ್ಲಿ ಕಳಕೊಂಡರೆ ಆ ನೋವು ಕಡಿಮೆಯಾಗೋಕೆ ಟೈಮ್‌ ಹಿಡಿಯುತ್ತೆ. ಹಾಗಾಗಿ ತಾಳ್ಮೆಯಿಂದ ಇರಿ. ಈ ಲೇಖನದಲ್ಲಿರೋ ಯಾವ ಸಲಹೆಗಳು ನಿಮಗೆ ಸಹಾಯ ಮಾಡುತ್ತೆ ಅಂತ ನೋಡಿ.

a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.