ಲೂಕ 6:1-49

  • ಯೇಸು “ಸಬ್ಬತ್‌ ದಿನದ ಒಡೆಯ” (1-5)

  • ಕೈಗೆ ಲಕ್ವ ಹೊಡಿದಿದ್ದ ವ್ಯಕ್ತಿ ವಾಸಿಯಾದ (6-11)

  • 12 ಅಪೊಸ್ತಲರು (12-16)

  • ಯೇಸು ಕಲಿಸಿದನು ಮತ್ತು ಕಾಯಿಲೆ ವಾಸಿ ಮಾಡಿದನು (17-19)

  • ಸಂತೋಷ ಮತ್ತು ಕಷ್ಟ (20-26)

  • ಶತ್ರುಗಳನ್ನ ಪ್ರೀತಿಸಿ (27-36)

  • ತಪ್ಪು ಹುಡುಕೋದನ್ನ ನಿಲ್ಲಿಸಿ (37-42)

  • ಹಣ್ಣು ನೋಡಿದ್ರೆ ಗೊತ್ತಾಗುತ್ತೆ (43-45)

  • ಚೆನ್ನಾಗಿ ಕಟ್ಟಿರೋ ಮನೆ; ಒಳ್ಳೇ ಅಡಿಪಾಯ ಹಾಕಿ ಕಟ್ಟದೇ ಇರೋ ಮನೆ (46-49)

6  ಒಮ್ಮೆ ಸಬ್ಬತ್‌ ದಿನದಲ್ಲಿ ಯೇಸು ಶಿಷ್ಯರ ಜೊತೆ ಹೊಲ ದಾಟ್ತಿದ್ದಾಗ ಶಿಷ್ಯರಿಗೆ ಸಿಕ್ಕಾಪಟ್ಟೆ ಹಸಿವಾಗಿತ್ತು. ಅವರು ತೆನೆಗಳನ್ನ ಕಿತ್ತು ತಿಂದ್ರು.+  ಇದನ್ನ ನೋಡಿ ಫರಿಸಾಯರು “ನಿನ್ನ ಶಿಷ್ಯರು ಸಬ್ಬತ್‌ ದಿನದಲ್ಲಿ ಮಾಡಬಾರದ ಕೆಲಸ ಮಾಡ್ತಿದ್ದಾರೆ”+ ಅಂದ್ರು.  ಅದಕ್ಕೆ ಯೇಸು “ದಾವೀದ ಮತ್ತು ಅವನ ಜನ್ರು ಹಸಿದಾಗ ಅವನು ಏನು ಮಾಡಿದ ಅಂತ ನೀವು ಓದಿಲ್ವಾ?+  ದೇವಾಲಯಕ್ಕೆ ಹೋಗಿ ಪುರೋಹಿತರು ಮಾತ್ರ ತಿನ್ನಬೇಕಾಗಿದ್ದ ನೈವೇದ್ಯದ ರೊಟ್ಟಿಗಳನ್ನ ಅವನೂ ಅವನ ಜೊತೆ ಇರೋರು ತಿಂದ್ರಲ್ವಾ?”+ ಅಂದನು.  ಆಮೇಲೆ “ಮನುಷ್ಯಕುಮಾರ ಸಬ್ಬತ್‌ ದಿನದ ಒಡೆಯ”+ ಅಂದನು.  ಇನ್ನೊಂದು ಸಬ್ಬತ್‌ ದಿನದಲ್ಲಿ+ ಆತನು ಸಭಾಮಂದಿರಕ್ಕೆ ಹೋಗಿ ಕಲಿಸೋಕೆ ಶುರುಮಾಡಿದನು. ಕೈಗೆ ಲಕ್ವ ಹೊಡಿದಿದ್ದ ಒಬ್ಬ ವ್ಯಕ್ತಿ ಅಲ್ಲಿದ್ದ.+  ಯೇಸು ಮೇಲೆ ತಪ್ಪು ಹೊರಿಸೋ ಉದ್ದೇಶದಿಂದ ಸಬ್ಬತ್‌ ದಿನದಲ್ಲಿ ಆ ವ್ಯಕ್ತಿಯನ್ನ ವಾಸಿ ಮಾಡ್ತಾನಾ ಇಲ್ವಾ ಅಂತ ಫರಿಸಾಯರು ನೋಡ್ತಾ ಇದ್ರು.  ಅವರು ಏನು ಯೋಚಿಸ್ತಾ ಇದ್ದಾರೆ ಅಂತ ಗೊತ್ತಿದ್ದ+ ಯೇಸು ಆ ಲಕ್ವ ಹೊಡೆದವನಿಗೆ “ಎದ್ದು ಬಂದು ಮಧ್ಯದಲ್ಲಿ ನಿಂತ್ಕೊ” ಅಂತ ಕರೆದನು. ಆಗ ಅವನು ಬಂದು ಮಧ್ಯದಲ್ಲಿ ನಿಂತ.  “ಸಬ್ಬತ್‌ ದಿನದಲ್ಲಿ ಒಳ್ಳೇದು ಮಾಡಬೇಕಾ ಕೆಟ್ಟದು ಮಾಡಬೇಕಾ? ಜೀವ ಉಳಿಸಬೇಕಾ ತೆಗಿಬೇಕಾ?”+ ಅಂತ ಯೇಸು ಅವ್ರನ್ನ ಕೇಳಿದನು. 10  ಸುತ್ತಲೂ ನಿಂತಿದ್ದ ಜನ್ರನ್ನ ನೋಡಿ ಆ ವ್ಯಕ್ತಿಗೆ “ನಿನ್ನ ಕೈಚಾಚು” ಅಂದನು. ಕೈ ಚಾಚಿದಾಗ ಅದು ಇನ್ನೊಂದು ಕೈ ತರಾನೇ ಆಯ್ತು. 11  ಅವ್ರಿಗೆ ತುಂಬ ಕೋಪ ಬಂತು. ಯೇಸುನ ಏನು ಮಾಡಬೇಕಂತ ಮಾತಾಡ್ಕೊಳ್ತಾ ಇದ್ರು. 12  ಒಂದಿನ ಯೇಸು ಪ್ರಾರ್ಥನೆ ಮಾಡೋಕೆ ಬೆಟ್ಟಕ್ಕೆ ಹೋಗಿ+ ರಾತ್ರಿಯೆಲ್ಲ ದೇವ್ರಿಗೆ ಪ್ರಾರ್ಥನೆ ಮಾಡ್ತಾ ಕಳೆದನು.+ 13  ಬೆಳಿಗ್ಗೆ ಆದಾಗ ತನ್ನ ಶಿಷ್ಯರನ್ನ ಹತ್ರ ಕರೆದು ಅವ್ರಲ್ಲಿ 12 ಜನ್ರನ್ನ ಆರಿಸ್ಕೊಂಡು ಅಪೊಸ್ತಲರು ಅಂತ ಹೆಸ್ರಿಟ್ಟನು.+ 14  ಅವರು ಯಾರಂದ್ರೆ, ಸೀಮೋನ (ಯೇಸು ಇವನಿಗೆ ಪೇತ್ರ ಅಂತ ಹೆಸ್ರಿಟ್ಟನು) ಅವನ ತಮ್ಮ ಅಂದ್ರೆಯ, ಯಾಕೋಬ, ಯೋಹಾನ, ಫಿಲಿಪ್ಪ,+ ಬಾರ್ತೊಲೊಮಾಯ, 15  ಮತ್ತಾಯ, ತೋಮ,+ ಅಲ್ಫಾಯನ ಮಗ ಯಾಕೋಬ, “ತುಂಬ ಹುರುಪಿನ ವ್ಯಕ್ತಿ” ಅನ್ನೋ ಹೆಸ್ರಿದ್ದ ಸೀಮೋನ, 16  ಯಾಕೋಬನ ಮಗ ಯೂದ ಮತ್ತು ಇಸ್ಕರಿಯೂತ ಯೂದ. ಈ ಯೂದನೇ ಯೇಸುಗೆ ನಂಬಿಕೆ ದ್ರೋಹ ಮಾಡಿದ್ದು. 17  ಆತನು ಅವ್ರ ಜೊತೆ ಬೆಟ್ಟ ಇಳಿದು ಬಂದನು. ಕೆಳಗೆ ಬಂದಾಗ ಅಲ್ಲಿ ತುಂಬ ಶಿಷ್ಯರಿದ್ರು. ಅವರು ಆತನ ಮಾತುಗಳನ್ನ ಕೇಳಿಸ್ಕೊಳ್ಳೋಕೆ, ರೋಗಗಳನ್ನ ವಾಸಿಮಾಡ್ಕೊಳ್ಳೋಕೆ ಯೂದಾಯದಿಂದ, ಯೆರೂಸಲೇಮಿಂದ, ತೂರ್‌ ಮತ್ತು ಸೀದೋನ್‌ ಪಟ್ಟಣದ ಕರಾವಳಿ ಪ್ರದೇಶದಿಂದೆಲ್ಲ ಬಂದಿದ್ರು. 18  ಕೆಟ್ಟ ದೇವದೂತರು ಹಿಡಿದಿದ್ದ ಜನ್ರನ್ನೂ ಯೇಸು ವಾಸಿಮಾಡಿದನು. 19  ಜನ ಆತನನ್ನ ಮುಟ್ಟಿದಾಗ ಆತನಿಂದ ಶಕ್ತಿ ಬಂದು+ ಅವ್ರನ್ನ ವಾಸಿಮಾಡ್ತಾ ಇತ್ತು. ಹಾಗಾಗಿ ಎಲ್ರೂ ಆತನನ್ನ ಮುಟ್ಟೋಕೆ ಪ್ರಯತ್ನ ಮಾಡ್ತಿದ್ರು. 20  ಆಮೇಲೆ ಯೇಸು ಶಿಷ್ಯರನ್ನ ನೋಡಿ ಹೀಗಂದನು “ಬಡವರಾಗಿರೋ ನೀವು ಸಂತೋಷವಾಗಿ ಇರ್ತಿರ. ಯಾಕಂದ್ರೆ ದೇವರ ಆಳ್ವಿಕೆ ನಿಮಗಂತಾನೇ ಬರುತ್ತೆ.+ 21  ಈಗ ಹಸಿದಿರೋ ನೀವು ಸಂತೋಷವಾಗಿ ಇರ್ತಿರ. ಯಾಕಂದ್ರೆ ನಿಮಗೆ ತೃಪ್ತಿ ಇರುತ್ತೆ.+ ಈಗ ಅಳ್ತಿರೋ ನೀವು ಸಂತೋಷವಾಗಿ ಇರ್ತಿರ. ಯಾಕಂದ್ರೆ ಕೊನೇಲಿ ನಿಮಗೆ ಸಂತೋಷ ಸಿಗುತ್ತೆ.+ 22  ಮನುಷ್ಯಕುಮಾರನ ಕಾರಣ ಜನ ನಿಮ್ಮನ್ನ ದ್ವೇಷಿಸಿ,+ ಬಹಿಷ್ಕರಿಸಿ,+ ಆರೋಪ ಹಾಕಿ, ನಿಮ್ಮ ಹೆಸರನ್ನ ಹಾಳು ಮಾಡಿದಾಗ ಸಂತೋಷವಾಗಿ ಇರ್ತಿರ. 23  ಆ ದಿನ ಉಲ್ಲಾಸಪಡಿ, ಕುಣಿದಾಡಿ. ಯಾಕಂದ್ರೆ ಸ್ವರ್ಗದಲ್ಲಿ ನಿಮಗೆ ದೊಡ್ಡ ಪ್ರತಿಫಲ ಇದೆ. ಈ ಮುಂಚೆ ಅವ್ರ ಪೂರ್ವಜರು ಸಹ ಪ್ರವಾದಿಗಳಿಗೆ ಹೀಗೇ ಹಿಂಸೆ ಕೊಟ್ರು.+ 24  ಶ್ರೀಮಂತರೇ, ನಿಮ್ಮ ಗತಿ ಏನು ಹೇಳಲಿ!+ ಯಾಕಂದ್ರೆ ನಿಮಗೆ ಸಿಗಬೇಕಾಗಿದ್ದ ಎಲ್ಲ ಸೌಕರ್ಯ ಈಗಾಗಲೇ ಸಿಕ್ಕಿದೆ.+ 25  ಹೊಟ್ಟೆತುಂಬಿದವರೇ, ನಿಮ್ಮ ಗತಿ ಏನು ಹೇಳಲಿ! ಯಾಕಂದ್ರೆ ಹಸಿವೆ ನಿಮ್ಮನ್ನ ಕಿತ್ತು ತಿನ್ನುತ್ತೆ. ನಗುತ್ತಿರುವವರೇ, ನಿಮ್ಮ ಗತಿ ಏನು ಹೇಳಲಿ! ಯಾಕಂದ್ರೆ ನೀವು ಅಳ್ತೀರ, ಗೋಳಾಡ್ತೀರ.+ 26  ಎಲ್ಲ ಜನ ನಿಮ್ಮ ಬಗ್ಗೆ ಒಳ್ಳೇದು ಮಾತಾಡಿದ್ರೆ ನಿಮ್ಮ ಗತಿ ಏನಂತ ಹೇಳಲಿ!+ ಯಾಕಂದ್ರೆ ಈ ಮುಂಚೆ ಅವ್ರ ಪೂರ್ವಜರು ಸಹ ಸುಳ್ಳು ಪ್ರವಾದಿಗಳಿಗೆ ಹಾಗೇ ಹಾಡಿಹೊಗಳ್ತಾ ಇದ್ರು. 27  ಆದ್ರೆ ನನ್ನ ಮಾತು ಕೇಳ್ತಿರೋ ನಿಮಗೆ ಹೇಳ್ತಿದ್ದೀನಿ, ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ. ಯಾರು ನಿಮ್ಮನ್ನ ಹಿಂಸಿಸ್ತಾರೋ ಅವ್ರಿಗಾಗಿ ಪ್ರಾರ್ಥನೆ ಮಾಡ್ತಾ ಇರಿ.+ 28  ನಿಮ್ಮ ಮೇಲೆ ಶಾಪ ಹಾಕುವವರನ್ನ ಆಶೀರ್ವದಿಸಿ. ನಿಮ್ಮನ್ನ ಅವಮಾನಿಸೋ ಜನ್ರಿಗಾಗಿ ಪ್ರಾರ್ಥಿಸ್ತಾ ಇರಿ.+ 29  ನಿನ್ನ ಒಂದು ಕೆನ್ನೆಗೆ ಹೊಡೆದ್ರೆ ಇನ್ನೊಂದು ಕೆನ್ನೆಯನ್ನೂ ತೋರಿಸು. ನಿನ್ನ ಅಂಗಿ ಕಿತ್ಕೊಳ್ಳಬೇಕು ಅಂತ ಇರುವವನಿಗೆ ನಿನ್ನ ಒಳಗಿನ ಅಂಗಿಯನ್ನೂ ಕೊಟ್ಟುಬಿಡು.+ 30  ನಿನ್ನ ಹತ್ರ ಯಾರಾದ್ರೂ ಏನಾದ್ರೂ ಕೇಳಿದ್ರೆ ಅದನ್ನ ಕೊಟ್ಟುಬಿಡು.+ ನಿನ್ನಿಂದ ಏನಾದ್ರೂ ಕಿತ್ಕೊಂಡ್ರೆ ಅವ್ರಿಂದ ವಾಪಸ್‌ ಕೇಳಬೇಡ. 31  ಅಷ್ಟೇ ಅಲ್ಲ ಜನ ನಿಮಗೇನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.+ 32  ನಿಮ್ಮನ್ನ ಪ್ರೀತಿಸುವವರನ್ನ ನೀವು ಪ್ರೀತಿಸಿದ್ರೆ ಅದ್ರಲ್ಲಿ ದೊಡ್ಡದೇನಿದೆ? ಪಾಪಿಗಳು ಸಹ ಅದನ್ನೇ ಮಾಡ್ತಾರೆ.+ 33  ನಿಮಗೆ ಒಳ್ಳೇದನ್ನ ಮಾಡುವವ್ರಿಗೇ ನೀವು ಒಳ್ಳೇದು ಮಾಡಿದ್ರೆ ಅದ್ರಲ್ಲಿ ದೊಡ್ಡದೇನಿದೆ? ಪಾಪಿಗಳು ಸಹ ಇದನ್ನೇ ಮಾಡ್ತಾರೆ. 34  ಯಾರು ಸಾಲ ತೀರಿಸ್ತಾರೋ ಅವ್ರಿಗೆ ಮಾತ್ರ* ಸಾಲ ಕೊಟ್ರೆ ಅದ್ರಲ್ಲಿ ದೊಡ್ಡದೇನಿದೆ?+ ಪಾಪಿಗಳು ಸಹ ಸಾಲ ತೀರಿಸುವಂಥ ಪಾಪಿಗಳಿಗೇ ಸಾಲ ಕೊಡ್ತಾರೆ. 35  ನೀವು, ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಅವ್ರಿಗೆ ಒಳ್ಳೇದನ್ನ ಮಾಡ್ತಾ ಇರಿ. ವಾಪಸ್‌ ಏನಾದ್ರೂ ಸಿಗುತ್ತೆ ಅಂತ ನೆನಸದೆ ಕೊಡ್ತಾ ಇರಿ.+ ಆಗ ನಿಮಗೆ ದೊಡ್ಡ ಪ್ರತಿಫಲ ಸಿಗುತ್ತೆ. ನೀವು ಸರ್ವೋನ್ನತನ ಮಕ್ಕಳು ಆಗ್ತೀರ. ಯಾಕಂದ್ರೆ ಆತನು ಉಪಕಾರ ನೆನಸದ ಕೆಟ್ಟವರಿಗೆ ದಯೆ ತೋರಿಸ್ತಾ ಇದ್ದಾನೆ.+ 36  ನಿಮ್ಮ ಅಪ್ಪ ಕರುಣೆ ತೋರಿಸಿರೋ ತರ ನೀವು ಸಹ ಕರುಣೆ ತೋರಿಸ್ತಾ ಇರಿ.+ 37  ಬೇರೆಯವ್ರಲ್ಲಿ ತಪ್ಪು ಹುಡುಕೋದನ್ನ ನಿಲ್ಲಿಸಿ, ಯಾಕಂದ್ರೆ ದೇವರು ಯಾವಾಗ್ಲೂ ತಪ್ಪು ಹುಡುಕ್ತಾ ಇರಲ್ಲ.+ ಆರೋಪ ಹಾಕೋದನ್ನ ನಿಲ್ಲಿಸಿ, ಆಗ ಬೇರೆಯವರು ನಿಮ್ಮ ಮೇಲೆ ಆರೋಪ ಹಾಕಲ್ಲ. ಕ್ಷಮಿಸ್ತಾ ಇರಿ, ಆಗ ನಿಮಗೆ ಕ್ಷಮೆ ಸಿಗುತ್ತೆ.+ 38  ಕೊಡೋದನ್ನ ರೂಢಿ ಮಾಡ್ಕೊಳ್ಳಿ, ಆಗ ಜನ ನಿಮಗೆ ಕೊಡ್ತಾರೆ.+ ಅವರು ಚೆನ್ನಾಗಿ ಅಳೆದು, ಒತ್ತಿ, ಅಲ್ಲಾಡಿಸಿ, ತುಂಬಿತುಳುಕ್ತಾ ಇರುವಾಗ ನಿಮ್ಮ ಮಡಿಲಿಗೆ ಹಾಕ್ತಾರೆ. ಯಾಕಂದ್ರೆ ನೀವು ಜನ್ರ ಹತ್ರ ಹೇಗೆ ನಡಿತಿರೋ ಅವರೂ ನಿಮ್ಮ ಹತ್ರ ಅದೇ ರೀತಿ ನಡ್ಕೊಳ್ತಾರೆ.” 39  ಆಮೇಲೆ ಆತನು ಒಂದು ಉದಾಹರಣೆ ಹೇಳಿದನು. ಅದೇನಂದ್ರೆ “ಒಬ್ಬ ಕುರುಡ ಇನ್ನೊಬ್ಬ ಕುರುಡನಿಗೆ ದಾರಿ ತೋರಿಸೋಕಾಗಲ್ಲ, ಸರಿ ತಾನೇ? ತೋರಿಸಿದ್ರೆ ಇಬ್ರೂ ಹೋಗಿ ಹಳ್ಳಕ್ಕೆ ಬೀಳ್ತಾರೆ.+ 40  ಗುರುಗಿಂತ ಶಿಷ್ಯ* ದೊಡ್ಡವನಲ್ಲ, ಆದ್ರೆ ಗುರು ಹತ್ರ ಎಲ್ಲ ಕಲಿತಿರೋ ಶಿಷ್ಯ ಗುರು ತರ ಆಗ್ತಾನೆ. 41  ಹಾಗಿರುವಾಗ ನಿನ್ನ ಕಣ್ಣಲ್ಲಿರೋ ಮರದ ಕಂಬ ನೋಡದೆ ನಿನ್ನ ಸಹೋದರನ ಕಣ್ಣಲ್ಲಿರೋ ಮರದ ಚೂರನ್ನ ಯಾಕೆ ನೋಡ್ತೀಯಾ?+ 42  ನಿನ್ನ ಕಣ್ಣಲ್ಲಿರೋ ಮರದ ಕಂಬ ನೋಡದೆ ‘ನಿನ್ನ ಕಣ್ಣಿಂದ ಮರದ ಚೂರನ್ನ ತೆಗಿತೀನಿ ಬಾ’ ಅಂತ ಸಹೋದರನಿಗೆ ಹೇಗೆ ಹೇಳ್ತೀಯ? ಕಪಟಿಯೇ, ಮೊದ್ಲು ನಿನ್ನ ಕಣ್ಣಿಂದ ಮರದ ಕಂಬ ತೆಗಿ. ಆಮೇಲೆ ಸಹೋದರನ ಕಣ್ಣಲ್ಲಿರೋ ಮರದ ಚೂರನ್ನ ನೋಡಿ ತೆಗಿಯೋಕೆ ಆಗುತ್ತೆ. 43  ಒಳ್ಳೇ ಮರ ಕೆಟ್ಟ ಹಣ್ಣು ಕೊಡಲ್ಲ. ಕೆಟ್ಟ ಮರ ಒಳ್ಳೇ ಹಣ್ಣು ಕೊಡಲ್ಲ.+ 44  ಮರ ಒಳ್ಳೇದಾ ಕೆಟ್ಟದಾ ಅಂತ ಹಣ್ಣು ನೋಡಿನೇ ಹೇಳಬಹುದು.+ ಉದಾಹರಣೆಗೆ ಮುಳ್ಳುಗಿಡದಲ್ಲಿ ಅಂಜೂರ ಸಿಗಲ್ಲ. ಮುಳ್ಳುಪೊದೆಯಲ್ಲಿ ದ್ರಾಕ್ಷಿ ಸಿಗಲ್ಲ. 45  ಒಬ್ಬ ಒಳ್ಳೇ ವ್ಯಕ್ತಿ ತನ್ನ ಹೃದಯದ ಒಳ್ಳೇ ಖಜಾನೆಯಿಂದ ಒಳ್ಳೇ ವಿಷ್ಯಗಳನ್ನ ಹೊರಗೆ ತೆಗಿತಾನೆ. ಆದ್ರೆ ಕೆಟ್ಟ ವ್ಯಕ್ತಿ ತನ್ನ ಕೆಟ್ಟ ಖಜಾನೆಯಿಂದ ಕೆಟ್ಟದ್ದನ್ನ ಹೊರಗೆ ತೆಗಿತಾನೆ. ಹೃದಯದಲ್ಲಿ ತುಂಬಿರೋದೇ ಬಾಯಲ್ಲಿ ಬರುತ್ತೆ.+ 46  ನೀವು ನನ್ನನ್ನ ‘ಸ್ವಾಮಿ! ಸ್ವಾಮಿ!’ ಅಂತ ಕರಿತೀರ. ಆದ್ರೆ ಯಾಕೆ ನಾನು ಹೇಳೋದನ್ನ ಮಾಡಲ್ಲ?+ 47  ನನ್ನ ಹತ್ರ ಬಂದು ನನ್ನ ಮಾತನ್ನ ಕೇಳಿಸ್ಕೊಂಡು ಅದ್ರ ಪ್ರಕಾರ ಮಾಡೋ ವ್ಯಕ್ತಿ ಹೇಗೆ ಇರ್ತಾನೆ ಅಂತ ಹೇಳ್ತೀನಿ.+ 48  ಅವನು ಆಳವಾಗಿ ಅಗೆದು ಬಂಡೆ ಮೇಲೆ ಅಡಿಪಾಯ ಹಾಕಿ ಕಟ್ಟಿರೋ ಮನೆ ತರ ಇರ್ತಾನೆ. ಜೋರಾಗಿ ಮಳೆ ಬಂತು, ನೀರು ಮನೆಗೆ ಬಡಿತು. ಆದ್ರೆ ಅದನ್ನ ಗಟ್ಟಿಯಾಗಿ ಕಟ್ಟಿದ್ರಿಂದ ಅದು ಅಲ್ಲಾಡಲಿಲ್ಲ.+ 49  ಆದ್ರೆ ನನ್ನ ಮಾತು ಕೇಳಿಸ್ಕೊಂಡು ಅದ್ರ ಪ್ರಕಾರ ಮಾಡದವನು,+ ಅಡಿಪಾಯ ಇಲ್ಲದ ನೆಲದ ಮೇಲೆ ಕಟ್ಟಿರೋ ಮನೆ ತರ ಇದ್ದಾನೆ. ನೀರು ಬಂದು ಬಡಿದಾಗ ಅದು ಧಡಂ ಅಂತ ಕುಸಿತು. ಆ ಮನೆಗೆ ತುಂಬ ಹಾನಿ ಆಯ್ತು.”

ಪಾದಟಿಪ್ಪಣಿ

ಅಂದ್ರೆ, ಬಡ್ಡಿ ಇಲ್ಲದೆ.
ಅಥವಾ “ವಿದ್ಯಾರ್ಥಿ.”