ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹನ್ನೊಂದು

ಗಮನಿಸುತ್ತಾ ಇದ್ದನು, ಕಾಯುತ್ತಾ ಇದ್ದನು

ಗಮನಿಸುತ್ತಾ ಇದ್ದನು, ಕಾಯುತ್ತಾ ಇದ್ದನು

1, 2. (1) ಎಲೀಯನು ಬೆಟ್ಟದ ಮೇಲೆ ಹೋಗುವ ಮುಂಚೆ ಏನು ಮಾಡಬೇಕಿತ್ತು? (2) ಎಲೀಯ ಮತ್ತು ಅಹಾಬ ಹೇಗೆ ಭಿನ್ನರಾಗಿದ್ದರು?

ಎಲೀಯ ಏಕಾಂತದಲ್ಲಿ ತನ್ನ ತಂದೆಯಾದ ಯೆಹೋವನಿಗೆ ಪ್ರಾರ್ಥಿಸಲು ತವಕಿಸಿದನು. ಆದರೆ ಜನರ ಗುಂಪು ಅವನನ್ನು ಸುತ್ತುವರಿದಿತ್ತು. ಆಕಾಶದಿಂದ ಬೆಂಕಿ ಬರುವಂತೆ ಈ ಸತ್ಯ ಪ್ರವಾದಿ ಮಾಡಿದ್ದನ್ನು ಆಗಷ್ಟೇ ನೋಡಿದ್ದ ಅವರಲ್ಲಿ ಅನೇಕರು ಅವನನ್ನು ಹೊಗಳಿ ತಮಗೂ ಒಳ್ಳೇದನ್ನು ಮಾಡುವಂತೆ ಕೇಳಿಕೊಳ್ಳಲು ಮುಗಿಬೀಳುತ್ತಿದ್ದಿರಬಹುದು. ಎಲೀಯ ಪ್ರಾರ್ಥನೆ ಮಾಡಲು ಕರ್ಮೆಲ್‌ ಬೆಟ್ಟದ ಮೇಲೆ ಹೋಗುವ ಮುಂಚೆ ಇನ್ನೇನೋ ಮಾಡಬೇಕಿತ್ತು. ಅಂದರೆ ರಾಜ ಅಹಾಬನ ಹತ್ತಿರ ಮಾತಾಡಬೇಕಿತ್ತು. ಇದೇನೂ ಖುಷಿ ತರುವ ಕೆಲಸವಾಗಿರಲಿಲ್ಲ.

2 ಎಲೀಯನಿಗೂ ಅಹಾಬನಿಗೂ ಅಜಗಜಾಂತರ. ರಾಜ ಅಹಾಬ ವೈಭವದ ಬಟ್ಟೆ ಧರಿಸಿದ್ದನು. ಲೋಭಿ, ಇನ್ನೊಬ್ಬರ ತಾಳಕ್ಕೆ ತಕ್ಕಂತೆ ಕುಣಿಯುವ ಮತಭ್ರಷ್ಟ. ಆದರೆ ಎಲೀಯನು ಪ್ರವಾದಿಯ ಉಡುಪನ್ನು ತೊಟ್ಟಿದ್ದನು. ಅದು ಸರಳವಾದ ಉದ್ದನೆಯ ನಿಲುವಂಗಿ. ಬಹುಶಃ ಪ್ರಾಣಿಯ ತೊಗಲಿನಿಂದ ಅಥವಾ ಒಂಟೆ ಇಲ್ಲವೆ ಆಡಿನ ಕೂದಲಿನಿಂದ ನೆಯ್ದದ್ದು. ಅವನು ಕೆಚ್ಚೆದೆಯ ಮನುಷ್ಯ. ಸಮಗ್ರತೆ ಮತ್ತು ನಂಬಿಕೆಯ ವ್ಯಕ್ತಿ. ಸತ್ಯ ದೇವರು ಯಾರೆಂದು ರುಜುವಾದ ಆ ದಿನದಂದು ನಡೆದ ಸಂಗತಿಗಳಿಂದ ಇವರಿಬ್ಬರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಬೆಳಕಿಗೆ ಬಂದಿತು.

3, 4. (1) ಅಹಾಬ ಮತ್ತು ಬಾಳನ ಇತರ ಆರಾಧಕರಿಗೆ ಏಕೆ ಅದೊಂದು ಕೆಟ್ಟ ದಿನವಾಗಿತ್ತು? (2) ಯಾವ ಪ್ರಶ್ನೆಗಳನ್ನು ಚರ್ಚಿಸಲಿಕ್ಕಿದ್ದೇವೆ?

3 ಅಹಾಬ ಮತ್ತು ಬಾಳನ ಇತರ ಆರಾಧಕರಿಗೆ ಇದೊಂದು ಕೆಟ್ಟ ದಿನವಾಗಿತ್ತು. ಏಕೆಂದರೆ ಅಹಾಬ ಮತ್ತವನ ಪತ್ನಿ ರಾಣಿ ಈಜೆಬೆಲ್‌ ಹತ್ತು ಕುಲಗಳಿದ್ದ ಇಸ್ರಾಯೇಲ್‌ ರಾಜ್ಯದಲ್ಲಿ ಪ್ರವರ್ಧಿಸಿದ್ದ ಸುಳ್ಳು ಧರ್ಮಕ್ಕೆ ಅಂದು ಮಾರಕ ಹೊಡೆತ ಬಿದ್ದಿತ್ತು. ಬಾಳನ ಆರಾಧನೆ ಬರೀ ಮೋಸ ಎಂಬುದು ಬಯಲಾಗಿತ್ತು. ಬಾಳನ ಪ್ರವಾದಿಗಳು ಎಷ್ಟೇ ಬೊಬ್ಬೆಯಿಟ್ಟರೂ ಎಷ್ಟೇ ಕುಣಿದಾಡಿದರೂ ರಕ್ತ ಬರುವಷ್ಟು ಗಾಯ ಮಾಡಿಕೊಂಡರು ಕೂಡ ಜೀವವೇ ಇಲ್ಲದ ಆ ದೇವನಿಗೆ ಬೆಂಕಿ ಹೊತ್ತಿಸಲಿಕ್ಕೆ ಆಗಲಿಲ್ಲ. ಆ 450 ಪ್ರವಾದಿಗಳು ಹತರಾಗಲಿಕ್ಕಿದ್ದಾಗಲೂ ಅವನು ಬಂದು ಕಾಪಾಡಲಿಲ್ಲ. ಇನ್ನೊಂದು ವಿಷಯವನ್ನೂ ಅವನಿಂದ ಮಾಡಲಿಕ್ಕಾಗಲಿಲ್ಲ. ಆ ದೇಶವನ್ನು ಬಾಧಿಸುತ್ತಿದ್ದ ಬರಗಾಲವನ್ನು ಕೊನೆಗಾಣಿಸಲು ಮೂರಕ್ಕಿಂತ ಹೆಚ್ಚು ವರ್ಷಗಳಿಂದ ಬಾಳನಿಗೆ ಅವನ ಪ್ರವಾದಿಗಳು ಮೊರೆಯಿಟ್ಟಿದ್ದರೂ ಮಳೆ ತರಲು ಅವನಿಂದ ಸಾಧ್ಯವಾಗಿರಲಿಲ್ಲ. ಆದರೆ ಯೆಹೋವನು ಬಲು ಬೇಗನೆ ಆ ಬರಗಾಲವನ್ನು ಕೊನೆಗೊಳಿಸಿ ತಾನೇ ಸತ್ಯದೇವರು ಎಂದು ತೋರಿಸಿಕೊಡಲಿದ್ದನು.—1 ಅರ. 16:30–17:1; 18:1-40.

4 ಆದರೆ ಆತನು ಯಾವಾಗ ಬರಗಾಲವನ್ನು ಕೊನೆಗಾಣಿಸಲಿದ್ದನು? ಅಲ್ಲಿಯ ವರೆಗೆ ಎಲೀಯ ಏನು ಮಾಡಲಿದ್ದನು? ಈ ನಂಬಿಗಸ್ತ ವ್ಯಕ್ತಿಯಿಂದ ನಾವೇನು ಕಲಿಯಬಹುದು? ವೃತ್ತಾಂತವನ್ನು ಪರಿಶೀಲಿಸುವಾಗ ನಾವದನ್ನು ತಿಳಿಯೋಣ.1 ಅರಸುಗಳು 18:41-46 ಓದಿ.

ಪ್ರಾರ್ಥನಾ ಮನೋಭಾವ

5. (1) ಎಲೀಯ ಅಹಾಬನಿಗೆ ಏನು ಹೇಳಿದನು? (2) ಆ ದಿನ ನಡೆದ ಘಟನೆಗಳಿಂದ ಅಹಾಬ ಏನಾದರೂ ಪಾಠ ಕಲಿತಿದ್ದನೇ?

5 ಎಲೀಯನು ಅಹಾಬನ ಬಳಿ ಬಂದು “ನೀನು ಮೇಲೆ ಹೋಗಿ ಅನ್ನಪಾನಗಳನ್ನು ತೆಗೆದುಕೋ; ದೊಡ್ಡ ಮಳೆಯ ಶಬ್ದವು ಕೇಳಿಸುತ್ತದೆ” ಎಂದು ಹೇಳಿದನು. ಅಂದು ನಡೆದ ಘಟನೆಗಳಿಂದ ಅಹಾಬ ಏನಾದರೂ ಪಾಠ ಕಲಿತಿದ್ದನೇ? ಅವನು ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ ಎಂದು ವೃತ್ತಾಂತದಿಂದ ಗೊತ್ತಾಗುತ್ತದೆ. ಏಕೆಂದರೆ ಅವನು ಪಶ್ಚಾತ್ತಾಪಪಟ್ಟನೆಂದಾಗಲಿ ಕ್ಷಮೆಗಾಗಿ ಯೆಹೋವನ ಬಳಿ ಪ್ರಾರ್ಥಿಸಲು ಪ್ರವಾದಿಯ ಸಹಾಯ ಕೇಳಿಕೊಂಡನೆಂದಾಗಲಿ ವೃತ್ತಾಂತದಲ್ಲಿ ಎಲ್ಲೂ ಇಲ್ಲ. ಏನೂ ನಡೆದಿಲ್ಲವೆಂಬಂತೆ ಅಹಾಬ ‘ಅನ್ನಪಾನಗಳನ್ನು ತೆಗೆದುಕೊಳ್ಳಲು ಹೋದನು.’ (1 ಅರ. 18:41, 42) ಆದರೆ ಎಲೀಯ ಏನು ಮಾಡಿದನು?

6, 7. ಎಲೀಯ ಯಾವುದಕ್ಕಾಗಿ ಪ್ರಾರ್ಥಿಸಿದನು? ಏಕೆ?

6 “ಎಲೀಯನು ಕರ್ಮೆಲಿನ ತುದಿಗೆ ಹೋಗಿ ಅಲ್ಲಿ ನೆಲದ ಮೇಲೆ ಬಿದ್ದುಕೊಂಡು ಮೊಣಕಾಲಿನ ಮೇಲೆ ತಲೆಯನ್ನಿಟ್ಟನು.” ಅಹಾಬ ಹೊಟ್ಟೆ ತುಂಬಿಸಿಕೊಳ್ಳಲು ಹೋದದ್ದರಿಂದ ಎಲೀಯನಿಗೆ ತನ್ನ ತಂದೆಯಾದ ಯೆಹೋವನ ಬಳಿ ಪ್ರಾರ್ಥಿಸಲು ಅವಕಾಶ ಸಿಕ್ಕಿತು. ವಚನದಲ್ಲಿ ವರ್ಣಿಸಲಾದ ಅವನ ವಿನಮ್ರ ದೇಹಭಂಗಿಯನ್ನು ಗಮನಿಸಿ. ಎಲೀಯ ನೆಲದ ಮೇಲೆ ಮಂಡಿಯೂರಿ ತಲೆಯನ್ನು ಎಷ್ಟು ಬಗ್ಗಿಸಿದನೆಂದರೆ ಅವನ ಮುಖ ಮೊಣಕಾಲಿಗೆ ತಾಗುವಂತಿತ್ತು. ಅವನೇನು ಮಾಡುತ್ತಿದ್ದನು? ನಾವು ಊಹಿಸಬೇಕಾಗಿಲ್ಲ. ಬೈಬಲೇ ತಿಳಿಸುತ್ತದೆ. ಎಲೀಯ ಬರಗಾಲಕ್ಕೆ ಅಂತ್ಯ ಬರಲಿ ಎಂದು ಪ್ರಾರ್ಥಿಸಿದ ಎನ್ನುತ್ತದೆ ಯಾಕೋಬ 5:18. ಅಂಥ ಒಂದು ಪ್ರಾರ್ಥನೆಯನ್ನೇ ಎಲೀಯ ಈಗ ಕರ್ಮೆಲ್‌ ಬೆಟ್ಟದ ಮೇಲೆ ಮಾಡುತ್ತಿದ್ದಿರಬಹುದು.

ದೇವರ ಚಿತ್ತ ನೆರವೇರುವುದನ್ನು ನೋಡುವ ತೀವ್ರ ಆಸೆ ಎಲೀಯನಿಗಿತ್ತೆಂದು ಅವನ ಪ್ರಾರ್ಥನೆಗಳು ತೋರಿಸಿದವು

7 “ನಾನು ದೇಶಕ್ಕೆ ಮಳೆ ಕೊಡುತ್ತೇನೆ” ಎಂದು ಯೆಹೋವನು ಮುಂಚೆಯೇ ಹೇಳಿದ್ದನು. (1 ಅರ. 18:1) ಆದ್ದರಿಂದ ಯೆಹೋವನ ಈ ಚಿತ್ತ ನೆರವೇರಬೇಕೆಂದು ಎಲೀಯ ಪ್ರಾರ್ಥಿಸಿದನು. ಹೆಚ್ಚುಕಡಿಮೆ ಒಂದು ಸಾವಿರ ವರ್ಷಗಳ ನಂತರ ಯೇಸು ಕೂಡ ತನ್ನ ತಂದೆಯ ಚಿತ್ತ ನೆರವೇರುವಂತೆ ಪ್ರಾರ್ಥಿಸಲು ಶಿಷ್ಯರಿಗೆ ಕಲಿಸಿದನು.—ಮತ್ತಾ. 6:9, 10.

8. ಪ್ರಾರ್ಥನೆಯ ವಿಷಯದಲ್ಲಿ ಎಲೀಯನಿಂದ ಏನು ಕಲಿಯುತ್ತೇವೆ?

8 ಪ್ರಾರ್ಥನೆಯ ವಿಷಯದಲ್ಲಿ ಎಲೀಯನಿಂದ ನಾವು ತುಂಬ ಕಲಿಯಬಹುದು. ಎಲೀಯ ಪ್ರಾರ್ಥಿಸುವಾಗ ದೇವರ ಚಿತ್ತ ನೆರವೇರಬೇಕೆಂಬ ವಿಷಯಕ್ಕೆ ಮೊದಲ ಆದ್ಯತೆ ಕೊಟ್ಟನು. ನಾವು ಪ್ರಾರ್ಥಿಸುವಾಗ ದೇವರ “ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆ” ಎನ್ನುವುದನ್ನು ಮರೆಯದಿರೋಣ. (1 ಯೋಹಾ. 5:14) ಯೆಹೋವನು ಅಂಗೀಕರಿಸುವಂಥ ರೀತಿಯಲ್ಲಿ ನಾವು ಪ್ರಾರ್ಥಿಸಬೇಕಾದರೆ ಮೊದಲು ಆತನ ಚಿತ್ತ ಏನೆಂದು ತಿಳಿಯಬೇಕು. ಅದಕ್ಕಾಗಿ ದಿನನಿತ್ಯ ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡಬೇಕು. ಸ್ವಜನರು ಕಷ್ಟಪಡುತ್ತಿದ್ದ ಕಾರಣಕ್ಕಾಗಿಯೂ ಎಲೀಯನು ಬರಗಾಲ ಅಂತ್ಯವಾಗಬೇಕೆಂದು ಬಯಸಿ ಪ್ರಾರ್ಥಿಸಿರಬೇಕು. ಅಲ್ಲದೆ ಯೆಹೋವನು ಆ ದಿನ ಈಗಾಗಲೇ ನಡೆಸಿದ ಅದ್ಭುತಕ್ಕಾಗಿ ಅವನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿರಬೇಕು. ಅದೇ ರೀತಿ ಪ್ರಾರ್ಥನೆಯಲ್ಲಿ ನಾವು ಇತರರ ಹಿತಕ್ಕಾಗಿ ಬೇಡಬೇಕು ಮತ್ತು ಯೆಹೋವನಿಗೆ ಕೃತಜ್ಞತೆ ಸಲ್ಲಿಸಬೇಕು.2 ಕೊರಿಂಥ 1:11; ಫಿಲಿಪ್ಪಿ 4:6 ಓದಿ.

ಭರವಸೆಯಿಂದಿದ್ದನು, ಎಚ್ಚರದಿಂದ ಗಮನಿಸುವವನಾಗಿದ್ದನು

9. (1) ಎಲೀಯ ತನ್ನ ಸೇವಕನಿಗೆ ಏನು ಮಾಡುವಂತೆ ಹೇಳಿದನು? (2) ಯಾವ ಎರಡು ಗುಣಗಳ ಬಗ್ಗೆ ಚರ್ಚಿಸಲಿಕ್ಕಿದ್ದೇವೆ?

9 ಬರಗಾಲವನ್ನು ಕೊನೆಗಾಣಿಸಲು ಯೆಹೋವನು ಕ್ರಿಯೆಗೈಯುವನೆಂದು ಎಲೀಯನಿಗೆ ಗೊತ್ತಿತ್ತು. ಆದರೆ ಯಾವಾಗ ಅನ್ನೋದು ಮಾತ್ರ ಗೊತ್ತಿರಲಿಲ್ಲ. ಅಲ್ಲಿವರೆಗೆ ಎಲೀಯ ಏನು ಮಾಡಿದನು? ವೃತ್ತಾಂತ ಹೇಳುವುದನ್ನು ಗಮನಿಸಿ. “ಅವನು ತನ್ನ ಸೇವಕನಿಗೆ—ನೀನು ಮೇಲೆ ಹೋಗಿ ಸಮುದ್ರದ ಕಡೆಗೆ ನೋಡು ಎಂದು ಆಜ್ಞಾಪಿಸಿದನು. ಸೇವಕನು ಹೋಗಿ ನೋಡಿ ಬಂದು ಏನೂ ತೋರುವದಿಲ್ಲ ಎಂದು ಹೇಳಿದನು. ಹೀಗೆ ಅವನನ್ನು ಏಳು ಸಾರಿ ಕಳುಹಿಸಿದನು.” (1 ಅರ. 18:43) ಇಲ್ಲಿ ನಾವು ಎಲೀಯನಿಂದ ಕಡಿಮೆಪಕ್ಷ ಎರಡು ಪಾಠಗಳನ್ನು ಕಲಿಯುತ್ತೇವೆ. ಮೊದಲನೆಯದು ಯೆಹೋವನು ಖಂಡಿತ ಕ್ರಿಯೆಗೈಯುತ್ತಾನೆಂಬ ವಿಷಯದಲ್ಲಿ ಅವನಿಗಿದ್ದ ದೃಢಭರವಸೆ. ಎರಡನೆಯದು ಅವನು ಎಚ್ಚರದಿಂದ ಗಮನಿಸುತ್ತಾ ಇದ್ದನು.

ಯೆಹೋವನು ಬೇಗನೆ ಕ್ರಿಯೆಗೈಯುವ ಸೂಚನೆಯೇನಾದರೂ ಕಾಣಿಸುತ್ತದೆಯೇ ಎಂದು ಎಲೀಯ ತವಕದಿಂದ ಗಮನಿಸುತ್ತಾ ಇದ್ದನು

10, 11. (1) ಯೆಹೋವನ ಮಾತಿನಲ್ಲಿ ತನಗಿದ್ದ ಭರವಸೆಯನ್ನು ಎಲೀಯ ಹೇಗೆ ತೋರಿಸಿದನು? (2) ನಾವೂ ಅಂಥ ಭರವಸೆ ಇಡಬಹುದೇಕೆ?

10 ಯೆಹೋವನು ಕೊಟ್ಟ ಮಾತಿನಲ್ಲಿ ಎಲೀಯನಿಗೆ ಸಂಪೂರ್ಣ ಭರವಸೆ ಇದ್ದದ್ದರಿಂದಲೇ ಆತನು ಬೇಗನೆ ಕ್ರಿಯೆಗೈಯಲಿರುವ ಸೂಚನೆಯೇನಾದರೂ ಕಾಣಿಸುತ್ತದೆಯೇ ಎಂದು ತವಕದಿಂದ ಗಮನಿಸುತ್ತಾ ಇದ್ದನು. ಅವನು ತನ್ನ ಸೇವಕನಿಗೆ ಎತ್ತರದ ಸ್ಥಳಕ್ಕೆ ಹೋಗಿ ಸಮುದ್ರದ ಕಡೆಗೆ ದೃಷ್ಟಿಹಾಯಿಸಿ ಮಳೆಯ ಸೂಚನೆಗಳೇನಾದರೂ ಬಾನಂಚಿನಲ್ಲಿ ತೋರುತ್ತದಾ ಎಂದು ನೋಡುವಂತೆ ತಿಳಿಸಿದನು. ಅದರಂತೆ ಸೇವಕನು ಹೋಗಿ ನೋಡಿ ಹಿಂದಿರುಗಿ ಬಂದು ನಿರಾಶೆಯಿಂದ “ಏನೂ ತೋರುವದಿಲ್ಲ” ಎಂದ. ಬಾನಂಚಿನಲ್ಲಿ ಏನೂ ಕಾಣಲಿಲ್ಲ. ಆಕಾಶದಲ್ಲಿ ಮೋಡವೇ ಇರಲಿಲ್ಲ. ಗಮನಾರ್ಹ ವಿಷಯವೇನೆಂದರೆ ಮಳೆ ಬರುವ ಯಾವುದೇ ಸೂಚನೆ ಆಕಾಶದಲ್ಲಿ ತೋರಿಬರದಿದ್ದರೂ ಎಲೀಯನು ಸ್ವಲ್ಪ ಮುಂಚೆ ರಾಜ ಅಹಾಬನಿಗೆ “ದೊಡ್ಡ ಮಳೆಯ ಶಬ್ದವು ಕೇಳಿಸುತ್ತದೆ” ಎಂದಿದ್ದನು. ಪ್ರವಾದಿ ಹಾಗೆ ಹೇಳಲು ಹೇಗೆ ಸಾಧ್ಯ?

11 ಮಳೆ ತರುವೆನೆಂದು ಯೆಹೋವನು ಕೊಟ್ಟ ಮಾತನ್ನು ನೆರವೇರಿಸಿಯೇ ತೀರುವನೆಂಬ ಭರವಸೆ ದೇವರ ಪ್ರವಾದಿಯಾದ, ವಕ್ತಾರನಾದ ಎಲೀಯನಿಗಿತ್ತು. ಆ ಭರವಸೆ ಎಷ್ಟು ದೃಢವಾಗಿತ್ತೆಂದರೆ ಈಗಾಗಲೇ ಅವನು ಮಳೆಯ ಶಬ್ದವನ್ನು ಕೇಳಿಸಿಕೊಂಡು ಆ ಮಾತುಗಳನ್ನು ಹೇಳಿದಂತಿತ್ತು. ಇದು ನಮಗೆ ಮೋಶೆಯ ಬಗ್ಗೆ ಬೈಬಲ್‌ ತಿಳಿಸುವ ಸಂಗತಿಯನ್ನು ನೆನಪಿಗೆ ತರುತ್ತದೆ. ಮೋಶೆ “ಅದೃಶ್ಯನಾಗಿರುವಾತನನ್ನು ನೋಡುವವನೋ ಎಂಬಂತೆ . . . ಸ್ಥಿರಚಿತ್ತನಾಗಿ ಮುಂದುವರಿದನು.” ಯೆಹೋವ ದೇವರು ನಿಮಗೂ ಅಷ್ಟು ನೈಜವಾಗಿದ್ದಾನಾ? ದೇವರು ನಮಗೆ ಆತನಲ್ಲಿ ಮತ್ತು ಆತನ ವಾಗ್ದಾನಗಳಲ್ಲಿ ಅಂಥ ನಂಬಿಕೆ ಇಡಲು ಯಥೇಚ್ಛ ಕಾರಣ ಕೊಡುತ್ತಾನೆ.—ಇಬ್ರಿ. 11:1, 27.

12. (1) ಎಲೀಯ ಹೇಗೆ ಎಚ್ಚರದಿಂದ ಗಮನಿಸುವವನಾಗಿದ್ದನು? (2) ಒಂದು ಚಿಕ್ಕ ಮೋಡ ಕಾಣಿಸುತ್ತಿದೆಯೆಂದು ತಿಳಿದಾಗ ಅವನು ಹೇಗೆ ಪ್ರತಿಕ್ರಿಯಿಸಿದನು?

12 ನಾವೀಗ ಎಲೀಯ ಹೇಗೆ ಗಮನಿಸುವವನಾಗಿದ್ದ ಎಂದು ನೋಡೋಣ. ಅವನು ತನ್ನ ಸೇವಕನನ್ನು ಕಳುಹಿಸಿದ್ದು ಒಂದು ಸಲ ಎರಡು ಸಲ ಅಲ್ಲ, ಏಳು ಸಲ! ಹೋಗಿ ಬಂದು ಹೋಗಿ ಬಂದು ಸೇವಕನು ಖಂಡಿತ ಸುಸ್ತಾಗಿದ್ದಿರಬಹುದು. ಆದರೂ ಮಳೆಯ ಸೂಚನೆಯನ್ನು ನೋಡಲು ಎಲೀಯನಿಗಿದ್ದ ಕಾತರ ಒಂಚೂರು ಕಮ್ಮಿಯಾಗಲಿಲ್ಲ. ಸೇವಕನು ಏಳನೇ ಸಾರಿ ಹಿಂದಿರುಗಿ ಬಂದಾಗ “ಅಂಗೈಯಷ್ಟು ಚಿಕ್ಕದಾದ ಮೋಡವು ಸಮುದ್ರದಿಂದ ಏರಿ ಬರುತ್ತಲಿದೆ” ಎಂದು ಹೇಳಿದನು. ಮಹಾ ಸಮುದ್ರದ ದಿಗಂತದಿಂದ ಏರಿಬರುತ್ತಿದ್ದ ಆ ಚಿಕ್ಕ ಮೋಡದ ಗಾತ್ರವನ್ನು ಸೂಚಿಸಲು ಸೇವಕನು ತನ್ನ ಕೈಚಾಚಿ ಅಂಗೈಯನ್ನು ಅಗಲಿಸಿ ತೋರಿಸುತ್ತಿರುವುದನ್ನು ಚಿತ್ರಿಸಿಕೊಳ್ಳಿ. ಈ ಚಿಕ್ಕ ಮೋಡದಿಂದ ಅಂಥದ್ದೇನು ಮಹಾ ಮಳೆ ಬರುತ್ತದೆ ಅಂತ ಸೇವಕನಿಗೆ ಅನಿಸಿರಬಹುದು. ಆದರೆ ಎಲೀಯನಿಗೆ ಅಷ್ಟು ಚಿಕ್ಕ ಮೋಡ ಸಹ ಅತೀ ಮಹತ್ವದ್ದಾಗಿತ್ತು. ಕೂಡಲೇ ತನ್ನ ಸೇವಕನಿಗೆ ತುರ್ತಿನ ನಿರ್ದೇಶನ ಕೊಡುತ್ತಾ, “ನೀನು ಹೋಗಿ ಅಹಾಬನಿಗೆ—ಬೇಗನೆ ರಥವನ್ನು ಹೂಡಿಸಿಕೊಂಡು ಮಳೆಯು ನಿನ್ನನ್ನು ತಡೆಯದಂತೆ ಬೆಟ್ಟವನ್ನಿಳಿದು ಹೋಗು ಎಂದು ಹೇಳು” ಅಂದನು.—1 ಅರ. 18:44.

13, 14. (1) ಗಮನಿಸುವವರಾಗಿರುವ ವಿಷಯದಲ್ಲಿ ನಾವು ಎಲೀಯನನ್ನು ಹೇಗೆ ಅನುಕರಿಸಬಹುದು? (2) ನಾವೀಗ ತುರ್ತಾಗಿ ಕ್ರಿಯೆಗೈಯಲು ಯಾವ ಕಾರಣಗಳಿವೆ?

13 ಗಮನಿಸುವವರಾಗಿರುವ ವಿಷಯದಲ್ಲಿ ಸಹ ಎಲೀಯ ನಮಗೆಲ್ಲರಿಗೆ ಅತ್ಯುತ್ತಮ ಮಾದರಿ. ಯೆಹೋವನು ಈಗಾಗಲೇ ತಿಳಿಯಪಡಿಸಿರುವ ತನ್ನ ಉದ್ದೇಶವನ್ನು ನೆರವೇರಿಸಲು ಬೇಗನೆ ಕ್ರಿಯೆಗೈಯಲಿಕ್ಕಿರುವ ಸಮಯದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ಎಲೀಯ ಬರಗಾಲದ ಅಂತ್ಯಕ್ಕಾಗಿ ಕಾದನು. ದೇವರ ಸೇವಕರಾದ ನಾವು ಈ ಭ್ರಷ್ಟ ಲೋಕವ್ಯವಸ್ಥೆಯ ಅಂತ್ಯಕ್ಕಾಗಿ ಕಾಯುತ್ತಿದ್ದೇವೆ. (1 ಯೋಹಾ. 2:17) ಹಾಗಾಗಿ ಯೆಹೋವನು ಕ್ರಿಯೆಗೈಯುವ ವರೆಗೆ ನಾವು ಎಲೀಯನಂತೆ ಸದಾ ಎಚ್ಚರದಿಂದ ಗಮನಿಸುವವರಾಗಿರಬೇಕು. “ನಿಮ್ಮ ಕರ್ತನು ಯಾವ ದಿನದಲ್ಲಿ ಬರುತ್ತಾನೆಂಬುದು ನಿಮಗೆ ತಿಳಿದಿಲ್ಲದ ಕಾರಣ ಸದಾ ಎಚ್ಚರವಾಗಿರಿ” ಎಂದು ದೇವರ ಮಗನಾದ ಯೇಸು ತನ್ನ ಹಿಂಬಾಲಕರಿಗೆ ಹೇಳಿದನು. (ಮತ್ತಾ. 24:42) ಇದರರ್ಥ ಅವನ ಹಿಂಬಾಲಕರಿಗೆ ಅಂತ್ಯ ಹತ್ತಿರವಿರುವಾಗ ಗೊತ್ತಾಗುವುದಿಲ್ಲವೆಂದಾ? ಖಂಡಿತ ಇಲ್ಲ. ಏಕೆಂದರೆ ಅಂತ್ಯ ಹತ್ತಿರವಾಗುವಾಗ ಲೋಕದ ಪರಿಸ್ಥಿತಿ ಹೇಗಿರುತ್ತದೆಂದು ಅವನು ವಿವರಿಸಿದ್ದನು. “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಬಗ್ಗೆ ಯೇಸು ಕೊಟ್ಟ ಆ ಸೂಚನೆಯಲ್ಲಿರುವ ಎಲ್ಲಾ ಸಂಗತಿಗಳು ನೆರವೇರುತ್ತಿರುವುದನ್ನು ನಾವೆಲ್ಲರೂ ಇಂದು ಗಮನಿಸುತ್ತೇವೆ.ಮತ್ತಾಯ 24:3-7 ಓದಿ.

ಬಾನಂಚಿನಿಂದ ಏರಿಬಂದ ಆ ಸಣ್ಣ ಮೋಡ ಎಲೀಯನಿಗೆ ಯೆಹೋವನು ಇನ್ನೇನು ಕ್ರಿಯೆಗೈಯಲಿದ್ದಾನೆಂದು ನಂಬಲು ಸಾಕಷ್ಟು ಕಾರಣ ಕೊಟ್ಟಿತು. ನಾವು ತುರ್ತಾಗಿ ಕ್ರಿಯೆಗೈಯಲು ಅಂತ್ಯಕಾಲದ ಸೂಚನೆ ಬಲವಾದ ಕಾರಣಗಳನ್ನು ಕೊಡುತ್ತದೆ

14 ಆ ಸೂಚನೆಯ ಒಂದೊಂದು ಸಂಗತಿಯು ನೆರವೇರುತ್ತಿರುವುದು ಅಂತ್ಯ ಹತ್ತಿರವಿದೆಯೆಂದು ಮನಗಾಣಲು ನಮಗೆ ಬಲವಾದ ಪುರಾವೆ ಕೊಡುತ್ತದೆ. ಯೆಹೋವನ ಸೇವೆಯ ಸಂಬಂಧದಲ್ಲಿ ನಾವು ತುರ್ತಾಗಿ ಕ್ರಿಯೆಗೈಯಲು ಆ ಪುರಾವೆ ಸಾಕಲ್ಲವೇ? ಬಾನಂಚಿನಿಂದ ಏರಿಬಂದ ಆ ಸಣ್ಣ ಮೋಡ ಯೆಹೋವನು ಇನ್ನೇನು ಕ್ರಿಯೆಗೈಯಲಿದ್ದಾನೆಂದು ನಂಬಲು ಎಲೀಯನಿಗೆ ಸಾಕಾಗಿತ್ತು. ಆ ನಂಬಿಗಸ್ತ ಪ್ರವಾದಿಯ ಆ ನಿರೀಕ್ಷೆ ಹುಸಿಯಾಯಿತೇ?

ಯೆಹೋವನು ಪರಿಹಾರ ಮತ್ತು ಆಶೀರ್ವಾದಗಳನ್ನು ತಂದನು

15, 16. (1) ಒಂದರ ನಂತರ ಒಂದರಂತೆ ಯಾವ ಘಟನೆಗಳು ನಡೆದವು? (2) ಅಹಾಬನ ವಿಷಯದಲ್ಲಿ ಎಲೀಯ ಯಾವ ನಿರೀಕ್ಷೆ ಇಟ್ಟುಕೊಂಡಿರಬೇಕು?

15 “ತುಸುಹೊತ್ತಿನಲ್ಲಿಯೇ ಆಕಾಶವು ಮೋಡಗಾಳಿಗಳಿಂದ ಕಪ್ಪಾಗಿ ದೊಡ್ಡ ಮಳೆಯು ಪ್ರಾರಂಭವಾಯಿತು. ಅಹಾಬನು ರಥದಲ್ಲಿ ಕೂತುಕೊಂಡು ಇಜ್ರೇಲಿಗೆ ಹೋದನು” ಎಂದು ವೃತ್ತಾಂತ ಹೇಳುತ್ತದೆ. (1 ಅರ. 18:45) ಘಟನೆಗಳು ಒಂದರ ನಂತರ ಒಂದು ನಡೆದವು. ಸೇವಕನು ಹೋಗಿ ಪ್ರವಾದಿಯ ಸಂದೇಶವನ್ನು ಅಹಾಬನಿಗೆ ಹೇಳುತ್ತಿರುವಾಗಲೇ ಆ ಚಿಕ್ಕ ಮೋಡ ಚದರಿ ಇಡೀ ಆಕಾಶ ಕಾರ್ಮೋಡಗಳಿಂದ ಮುಚ್ಚಿಕೊಂಡಿತು. ರಭಸವಾಗಿ ಗಾಳಿ ಬೀಸಿತು. ಮೂರುವರೆ ವರ್ಷಗಳ ನಂತರ ಕೊನೆಗೂ ಇಸ್ರಾಯೇಲಿನ ನೆಲ ಮಳೆ ಕಂಡಿತು. ಬಿಸಿಲಿನ ಬೇಗೆಗೆ ಬರಡಾಗಿದ್ದ ಭೂಮಿ ಮಳೆಯ ನೀರಿನಿಂದ ತನ್ನ ದಾಹವನ್ನು ತೀರಿಸಿಕೊಂಡಿತು. ಮಳೆ ಧಾರಾಕಾರವಾಗಿ ಸುರಿದಂತೆ ಉಕ್ಕಿಹರಿದ ಕೀಷೋನ್‌ ನದಿಯ ನೀರು ಹತರಾದ ಬಾಳನ ಪ್ರವಾದಿಗಳ ರಕ್ತವನ್ನು ತೊಳೆದುಹಾಕಿತು. ತಮ್ಮ ದೇಶದಿಂದ ಬಾಳನ ಆರಾಧನೆಯ ಕಳಂಕವನ್ನು ತೆಗೆದುಹಾಕಿ ಶುದ್ಧೀಕರಿಸಲು ಅವಿಧೇಯರಾದ ಇಸ್ರಾಯೇಲ್ಯರಿಗೆ ಇದೊಂದು ಅವಕಾಶವಾಗಿತ್ತು.

“ದೊಡ್ಡ ಮಳೆಯು ಪ್ರಾರಂಭವಾಯಿತು”

16 ಇಸ್ರಾಯೇಲ್ಯರು ಹಾಗೆಯೇ ಮಾಡುವರೆಂದು ಎಲೀಯ ಖಂಡಿತ ನಿರೀಕ್ಷಿಸಿದನು. ಕಣ್ಮುಂದೆ ನಡೆಯುತ್ತಿದ್ದ ರೋಮಾಂಚಕ ಘಟನೆಗಳಿಗೆ ಅಹಾಬ ಹೇಗೆ ಪ್ರತಿಕ್ರಿಯಿಸಬಹುದೆಂದು ಎಲೀಯ ಯೋಚಿಸುತ್ತಿದ್ದಿರಬೇಕು. ಅಹಾಬನು ಪಶ್ಚಾತ್ತಾಪಪಟ್ಟು ಬಾಳನ ಆರಾಧನೆಯನ್ನು ಬಿಟ್ಟುಬಿಡುವನೆಂದು ಅವನು ನೆನಸಿರಬೇಕು. ಏಕೆಂದರೆ ಆ ದಿನ ನಡೆದ ಸಂಗತಿಗಳು ಅಹಾಬನಿಗೆ ತನ್ನನ್ನು ತಿದ್ದಿಕೊಳ್ಳಲು ಬಲವಾದ ಕಾರಣಗಳನ್ನು ಕೊಟ್ಟವು. ಆ ಕ್ಷಣದಲ್ಲಿ ಅಹಾಬನು ತನ್ನ ಮನಸ್ಸಿನಲ್ಲಿ ಏನು ಯೋಚಿಸುತ್ತಿದ್ದನೆಂದು ಗೊತ್ತಿಲ್ಲ ನಿಜ. ಆದರೆ “ಅಹಾಬನು ರಥದಲ್ಲಿ ಕೂತುಕೊಂಡು ಇಜ್ರೇಲಿಗೆ ಹೋದನು” ಎನ್ನುತ್ತದೆ ವೃತ್ತಾಂತ. ಅವತ್ತಿನ ಘಟನೆಗಳಿಂದ ಅವನು ಪಾಠ ಕಲಿತಿದ್ದನೇ? ಈಗಲಾದರೂ ಬದಲಾಗಲು ನಿರ್ಧರಿಸಿದ್ದನೇ? ಇಲ್ಲ ಎಂದು ಮುಂದಿನ ಘಟನೆಗಳಿಂದ ತಿಳಿದುಬರುತ್ತದೆ. ಆದರೆ ಆ ದಿನ ಅಷ್ಟಕ್ಕೆ ಮುಗಿದಿರಲಿಲ್ಲ.

17, 18. (1) ಇಜ್ರೇಲಿಗೆ ಹೊರಟಿದ್ದ ಎಲೀಯನಿಗೆ ಯಾವ ಸಹಾಯ ಸಿಕ್ಕಿತು? (2) ಕರ್ಮೆಲಿನಿಂದ ಇಜ್ರೇಲಿಗೆ ಎಲೀಯನು ಓಡಿದ್ದರ ವಿಶೇಷತೆ ಏನು? (ಪಾದಟಿಪ್ಪಣಿ ಸಹ ನೋಡಿ.)

17 ಅಹಾಬ ಹೋದ ದಾರಿಯಲ್ಲೇ ಯೆಹೋವನ ಪ್ರವಾದಿ ಸಹ ಹೊರಟನು. ಅವನು ಬಹು ದೂರ ಹೋಗಲಿಕ್ಕಿತ್ತು. ಮಳೆ ಸುರಿಯುತ್ತಿತ್ತು. ಕತ್ತಲು ಕವಿದಿತ್ತು. ಹಾಗಾದರೆ ಎಲೀಯ ಹೇಗೆ ಹೋದನು? ಅನಿರೀಕ್ಷಿತ ಸಂಗತಿಯೊಂದು ನಡೆಯಿತು.

18 “ಯೆಹೋವನ ಹಸ್ತವು ಎಲೀಯನ ಸಂಗಡ ಇದ್ದದರಿಂದ ಅವನು ನಡುಕಟ್ಟಿಕೊಂಡು ಅಹಾಬನ ಮುಂದೆ ಓಡುತ್ತಾ ಇಜ್ರೇಲನ್ನು ಸೇರಿದನು.” (1 ಅರ. 18:46) ಇಜ್ರೇಲ್‌ 30 ಕಿ.ಮೀ. ದೂರದಲ್ಲಿತ್ತು. ಎಲೀಯನೇನೂ ಯುವಕನಾಗಿರಲಿಲ್ಲ. * ನಿಜವಾಗಿಯೂ “ಯೆಹೋವನ ಹಸ್ತವು” ಊಹಿಸಲಸಾಧ್ಯವಾದ ರೀತಿಯಲ್ಲಿ ಎಲೀಯನಿಗೆ ಸಹಾಯಮಾಡಿತು. ಅವನು ತನ್ನ ಉದ್ದನೆಯ ನಿಲುವಂಗಿ ಕಾಲಿಗೆ ಸಿಕ್ಕಿಕೊಳ್ಳದಂತೆ ಅದನ್ನು ಎತ್ತಿ ಸೊಂಟಕ್ಕೆ ಕಟ್ಟಿಕೊಂಡು ಮಳೆಯ ನೀರು ಹರಿಯುತ್ತಿದ್ದ ದಾರಿಯಲ್ಲಿ ಓಡುವುದನ್ನು ಚಿತ್ರಿಸಿಕೊಳ್ಳಿ. ಎಷ್ಟು ವೇಗವಾಗಿ ಓಡಿದನೆಂದರೆ ಅವನಿಗಿಂತ ಮುಂದಾಗಿ ಹೊರಟಿದ್ದ ಅಹಾಬನ ರಥದ ಸಮಕ್ಕೆ ಬಂದು ಅದನ್ನು ಹಿಂದಿಕ್ಕಿ ಮುಂದೆ ಸಾಗಿದನು!

19. (1) ಎಲೀಯನಿಗೆ ದೇವರು ಶಕ್ತಿ ಮತ್ತು ತಾಕತ್ತನ್ನು ಕೊಟ್ಟದ್ದು ನಮಗೆ ಯಾವ ಪ್ರವಾದನೆಗಳನ್ನು ನೆನಪಿಸುತ್ತದೆ? (2) ಇಜ್ರೇಲಿಗೆ ಓಡುತ್ತಿದ್ದ ಎಲೀಯನಿಗೆ ಯಾವ ಖಾತ್ರಿಯಿತ್ತು?

19 ಈ ಇಳಿವಯಸ್ಸಿನಲ್ಲಿ ಬಹುಶಃ ಯೌವನದಲ್ಲಿ ಇದ್ದದ್ದಕ್ಕಿಂತಲೂ ಹೆಚ್ಚಿನ ಶಕ್ತಿ, ಚೈತನ್ಯ, ತಾಕತ್ತನ್ನು ಹೊಂದಿದ್ದು ನಿಜಕ್ಕೂ ಎಲೀಯನಿಗೆ ರೋಮಾಂಚಕ ಅನುಭವವಾಗಿತ್ತು. ಎಂತಹ ಒಂದು ಆಶೀರ್ವಾದ! ಇದು, ನಂಬಿಗಸ್ತ ಜನರಿಗೆ ಪರದೈಸ್‌ ಭೂಮಿಯಲ್ಲಿ ಪರಿಪೂರ್ಣ ಆರೋಗ್ಯ ಮತ್ತು ಚೈತನ್ಯಭರಿತ ಜೀವನವನ್ನು ವಾಗ್ದಾನಿಸುವ ಪ್ರವಾದನೆಗಳನ್ನು ನಮ್ಮ ನೆನಪಿಗೆ ತರುತ್ತದೆ. (ಯೆಶಾಯ 35:6 ಓದಿ; ಲೂಕ 23:43) ಆ ಬಿರುಮಳೆಯಲ್ಲಿಯೂ ಓಡುತ್ತಾ ಇದ್ದ ಎಲೀಯನಿಗೆ ತನ್ನ ತಂದೆಯಾಗಿರುವ ಒಬ್ಬನೇ ಸತ್ಯದೇವರಾದ ಯೆಹೋವನ ಆಶೀರ್ವಾದ ತನ್ನ ಮೇಲಿದೆ ಎಂಬ ಖಾತ್ರಿಯಿತ್ತು.

20. ಯೆಹೋವನ ಆಶೀರ್ವಾದಗಳನ್ನು ನಾವು ಹೇಗೆ ಪಡೆಯಬಹುದು?

20 ಯೆಹೋವನು ನಮ್ಮನ್ನು ಆಶೀರ್ವದಿಸಲು ಅತ್ಯಾಸಕ್ತಿಯುಳ್ಳವನಾಗಿದ್ದಾನೆ. ಆತನ ಆಶೀರ್ವಾದಗಳು ಅತ್ಯಮೂಲ್ಯ. ಆದ್ದರಿಂದ ಆತನ ಆಶೀರ್ವಾದ ಪಡೆಯಲು ನಮ್ಮಿಂದಾದುದೆಲ್ಲವನ್ನು ಮಾಡೋಣ. ಎಲೀಯನಂತೆ ನಾವು ಎಚ್ಚರದಿಂದ ಗಮನಿಸುವವರಾಗಿರೋಣ. ಈ ಅಪಾಯಕಾರಿ, ತುರ್ತಿನ ಸಮಯದಲ್ಲಿ ಯೆಹೋವನು ಬೇಗನೆ ಕ್ರಿಯೆಗೈಯಲಿದ್ದಾನೆಂದು ತೋರಿಸುತ್ತಿರುವ ಪ್ರಬಲ ಪುರಾವೆಯನ್ನು ಜಾಗ್ರತೆಯಿಂದ ಪರಿಶೀಲಿಸೋಣ. “ಸತ್ಯವಂತ” ದೇವರಾದ ಯೆಹೋವನ ವಾಗ್ದಾನಗಳಲ್ಲಿ ಸಂಪೂರ್ಣ ಭರವಸೆ ಇಡಲು ಎಲೀಯನಿಗಿದ್ದಂತೆ ನಮಗೂ ಹೇರಳ ಆಧಾರಗಳು ಇವೆ.—ರೋಮ. 3:4.

^ ಪ್ಯಾರ. 18 ಎಲೀಯನಿಗೆ ಈಗಾಗಲೇ ವಯಸ್ಸಾಗಿತ್ತೆಂದು ತೋರುತ್ತದೆ. ಹೀಗೇಕೆ ಹೇಳಸಾಧ್ಯ? ಈ ಘಟನೆ ನಡೆದ ಸ್ವಲ್ಪದರಲ್ಲೇ ಯೆಹೋವನು ಎಲೀಷನನ್ನು ಎಲೀಯನ ಸೇವಕನಾಗಿ ನೇಮಿಸಿದನು. ಮುಂದೆ ಈ ಎಲೀಷನು “ಎಲೀಯನ ಕೈಗೆ ನೀರು ಕೊಡುತ್ತಿದ್ದವ”ನೆಂದು ಜ್ಞಾತನಾದನು. (2 ಅರ. 3:11) ಅವನು ಎಲೀಯನಿಗೆ ಬೇಕಾದ ಸಹಾಯ ಮಾಡುತ್ತಾ ಕೆಲಸ ಮಾಡಿದನು.