ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಒಂದು

“ಅವನು ಸತ್ತುಹೋದರೂ . . . ಇನ್ನೂ ಮಾತಾಡುತ್ತಾನೆ”

“ಅವನು ಸತ್ತುಹೋದರೂ . . . ಇನ್ನೂ ಮಾತಾಡುತ್ತಾನೆ”

1. (1) ಆದಾಮಹವ್ವ ಮತ್ತವರ ಮಕ್ಕಳು ಏದೆನ್‌ ತೋಟವನ್ನು ಪ್ರವೇಶಿಸದಂತೆ ಯಾವುದು ತಡೆಯುತ್ತಿತ್ತು? (2) ಹೇಬೆಲನ ಮನದ ಇಂಗಿತ ಏನಾಗಿತ್ತು?

ಹೇಬೆಲ ಒಂದೆಡೆ ಕೂತು ಗುಡ್ಡದ ಇಳಿಜಾರಿನಲ್ಲಿ ಮೇಯುತ್ತಿರುವ ತನ್ನ ಕುರಿಮಂದೆಯನ್ನು ನೋಡಿದ. ಅನಂತರ ಬಹುಶಃ ಅವನ ದೃಷ್ಟಿ ಕುರಿಮಂದೆಯಿಂದಾಚೆ ದೂರಕ್ಕೆ ನೆಟ್ಟಿತು. ಅಲ್ಲಿ ಮಸುಕುಮಸುಕಾದ ಬೆಳಕೊಂದು ಕಾಣುತ್ತಿತ್ತು. ಅದು ಏದೆನ್‌ ತೋಟದ ಪ್ರವೇಶದ್ವಾರದಲ್ಲಿ ಧಗಧಗನೆ ಪ್ರಜ್ವಲಿಸುತ್ತಾ ಸದಾ ತಿರುಗುತ್ತಿದ್ದ ಕತ್ತಿಯ ಬೆಳಕು ಎಂದವನಿಗೆ ಗೊತ್ತಿತ್ತು. ಯಾರೂ ಒಳಗೆ ಪ್ರವೇಶಿಸದಂತೆ ಅದನ್ನು ಇಡಲಾಗಿತ್ತು. ಒಂದು ಸಮಯದಲ್ಲಿ ಅವನ ಅಪ್ಪಅಮ್ಮ ಆ ತೋಟದಲ್ಲೇ ವಾಸಿಸುತ್ತಿದ್ದರು. ಆದರೆ ಈಗ ಅವರಿಗಾಗಲಿ ಅವರ ಮಕ್ಕಳಿಗಾಗಲಿ ಅಲ್ಲಿಗೆ ಪ್ರವೇಶವಿರಲಿಲ್ಲ. ಮುಸ್ಸಂಜೆಯ ತಂಗಾಳಿ ಹೇಬೆಲನ ತಲೆಗೂದಲನ್ನು ನವುರಾಗಿ ಹಿಂದಕ್ಕೆ ತಳ್ಳಿತು. ಅವನು ತಲೆಯೆತ್ತಿ ಮೇಲೆ ನೋಡುತ್ತಾ ತನ್ನ ಸೃಷ್ಟಿಕರ್ತನನ್ನು ನೆನಪಿಸಿಕೊಂಡ. ದೇವರ ಮತ್ತು ಮನುಷ್ಯರ ಮಧ್ಯೆ ಕಡಿದುಹೋದ ಸಂಬಂಧ ಎಂದಾದರೂ ಸರಿಯಾಗುವುದೇ ಎಂದು ಯೋಚಿಸಿದ. ಅದು ಸರಿಯಾಗಬೇಕು ಎನ್ನುವುದೊಂದೇ ಅವನ ಮನದ ಇಂಗಿತವಾಗಿತ್ತು. ಅವನಿಗೆ ಬೇರೇನೂ ಬೇಕಿರಲಿಲ್ಲ.

2-4. ಹೇಬೆಲ ನಮ್ಮೊಂದಿಗೆ ಇಂದು ಮಾತಾಡುವುದು ಹೇಗೆ?

2 ಹೇಬೆಲ ಇಂದು ನಿಮ್ಮ ಜೊತೆ ಮಾತಾಡುತ್ತಿದ್ದಾನೆ. ನಿಮಗೆ ಕೇಳಿಸುತ್ತಿದೆಯಾ? ‘ಅರೆ, ಅದು ಹೇಗೆ ಸಾಧ್ಯ?’ ಎಂದು ನೀವು ಹುಬ್ಬೇರಿಸಬಹುದು. ಕಾರಣ ಆದಾಮನ ಎರಡನೇ ಮಗನಾದ ಹೇಬೆಲ ಸತ್ತು ಯುಗಗಳೇ ಕಳೆದಿವೆ. ಸುಮಾರು 6,000 ವರ್ಷಗಳ ಹಿಂದೆಯೇ ಅವನ ದೇಹ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ಸತ್ತವರಿಗೆ “ಯಾವ ತಿಳಿವಳಿಕೆಯೂ ಇಲ್ಲ” ಎಂದು ಬೈಬಲ್‌ ಹೇಳುತ್ತದೆ. (ಪ್ರಸಂ. 9:5, 10) ಅದೂ ಅಲ್ಲದೆ, ಹೇಬೆಲ ಆಡಿದ ಒಂದೇ ಒಂದು ಮಾತು ಬೈಬಲಿನಲ್ಲಿಲ್ಲ. ಹೀಗಿರುವಾಗ ಅವನು ನಮ್ಮ ಜೊತೆ ಮಾತಾಡುವುದಾದರೂ ಹೇಗೆ?

3 “ಅವನು ಸತ್ತುಹೋದರೂ . . . ಇನ್ನೂ ಮಾತಾಡುತ್ತಾನೆ” ಎಂದು ಹೇಬೆಲನ ಕುರಿತು ಅಪೊಸ್ತಲ ಪೌಲ ದೇವಪ್ರೇರಣೆಯಿಂದ ಬರೆದ. (ಇಬ್ರಿಯ 11:4 ಓದಿ.) ಹೇಬೆಲ ಹೇಗೆ ಮಾತಾಡುತ್ತಾನೆ? ನಂಬಿಕೆಯ ಮೂಲಕ ಎನ್ನುತ್ತದೆ ಅದೇ ವಚನ. ಈ ಉತ್ಕೃಷ್ಟ ಗುಣವನ್ನು ಬೆಳೆಸಿಕೊಂಡ ಪ್ರಪ್ರಥಮ ಮಾನವ ಹೇಬೆಲ. ಅವನು ಮಹತ್ತಾದ ವಿಧದಲ್ಲಿ ಆ ನಂಬಿಕೆಯನ್ನು ತೋರಿಸಿದ. ಆದುದರಿಂದ ಅವನ ಮಾದರಿ ಇವತ್ತಿಗೂ ಜೀವಂತ, ಅನುಕರಣಯೋಗ್ಯ. ಅವನ ನಂಬಿಕೆಯ ಕುರಿತು ತಿಳಿದುಕೊಂಡು ಅದನ್ನು ಅನುಕರಿಸಲು ಪ್ರಯತ್ನಿಸುವಾಗ ನಾವು ಹೇಬೆಲ ಮಾತಾಡುವುದನ್ನು ಕೇಳಿಸಿಕೊಳ್ಳುತ್ತಿದ್ದೇವೆ ಎಂದರ್ಥ.

4 ಹೇಬೆಲನ ಕುರಿತು ಬೈಬಲಿನಲ್ಲಿ ಅಷ್ಟೇನು ಮಾಹಿತಿ ಇಲ್ಲ. ಹೀಗಿರುವಾಗ ಅವನ ಕುರಿತು, ಅವನ ನಂಬಿಕೆಯ ಕುರಿತು ಕಲಿಯುವುದು ಹೇಗೆ? ಬನ್ನಿ ತಿಳಿಯೋಣ.

‘ಲೋಕದ ಆದಿಯಲ್ಲಿ’ ಬೆಳೆದವ

5. ಹೇಬೆಲನನ್ನು ‘ಲೋಕದ ಆದಿಯಲ್ಲಿ’ ಜೀವಿಸಿದವನೆಂದು ಯೇಸು ಸೂಚಿಸಿದ್ದರ ಅರ್ಥವೇನು? (ಪಾದಟಿಪ್ಪಣಿ ಸಹ ನೋಡಿ.)

5 ಪ್ರಥಮ ಮಾನವರು ಸೃಷ್ಟಿಸಲ್ಪಟ್ಟ ಸ್ವಲ್ಪ ಸಮಯಕ್ಕೆ ಹೇಬೆಲ ಹುಟ್ಟಿದ. ಯೇಸು ಹೇಬೆಲನ ಬಗ್ಗೆ ಮಾತಾಡುವಾಗ ಅವನು “ಲೋಕದ ಆದಿ”ಯಲ್ಲಿ ಜೀವಿಸಿದವನೆಂದು ಸೂಚಿಸಿದನು. (ಲೂಕ 11:50, 51 ಓದಿ.) ಇಲ್ಲಿ ಯೇಸು ಲೋಕ ಎಂಬ ಪದವನ್ನು ಪಾಪದಿಂದ ಬಿಡುಗಡೆ ಹೊಂದಲು ಸಾಧ್ಯತೆಯುಳ್ಳ ಜನರಿಗೆ ಸೂಚಿಸಲು ಬಳಸಿದನು. ಹೇಬೆಲನು ನಾಲ್ಕನೇ ಮಾನವನಾಗಿದ್ದರೂ ಪಾಪದಿಂದ ವಿಮೋಚಿಸಬಹುದಾದ ಮೊತ್ತಮೊದಲ ವ್ಯಕ್ತಿಯಾಗಿ ದೇವರು ಕಂಡನೆಂದು ತೋರುತ್ತದೆ. * ಹೇಬೆಲನಿಗೆ ಬಾಲ್ಯದಿಂದಲೂ ಆದರ್ಶ ವ್ಯಕ್ತಿಗಳು ಒಬ್ಬರೂ ಇರಲಿಲ್ಲವೆಂದು ಇದರಿಂದ ಗೊತ್ತಾಗುತ್ತದೆ.

6. ಹೇಬೆಲನ ಹೆತ್ತವರು ಎಂಥವರಾಗಿದ್ದರು?

6 ಮಾನವಕುಲದ ಆರಂಭ ಆಗಷ್ಟೇ ಆಗಿತ್ತಾದರೂ ಅಷ್ಟರಲ್ಲಿ ದುಃಖಬೇನೆಯ ದೊಡ್ಡ ಕಾರ್ಮೋಡವೇ ಕವಿದಿತ್ತು. ಹೇಬೆಲನ ಹೆತ್ತವರಾದ ಆದಾಮಹವ್ವರಿಗೆ ಸೌಂದರ್ಯ, ಅಪಾರ ಶಕ್ತಿಚೈತನ್ಯ ಇದ್ದಿರಬಹುದು. ಆದರೂ ಅವರ ಬದುಕು ನೆಲಕಚ್ಚಿತ್ತು. ಇದು ಅವರಿಗೂ ತಿಳಿದಿತ್ತು. ಹಿಂದೊಮ್ಮೆ ಅವರು ಪರಿಪೂರ್ಣರಾಗಿದ್ದರು, ಅನಂತಕಾಲ ಜೀವಿಸುವ ಪ್ರತೀಕ್ಷೆ ಅವರಿಗಿತ್ತು. ಆದರೆ ಯೆಹೋವ ದೇವರ ವಿರುದ್ಧ ದಂಗೆ ಎದ್ದ ಕಾರಣ ಅವರ ಬೀಡಾಗಿದ್ದ ಏದೆನ್‌ ತೋಟದಿಂದ ಹೊರಗಟ್ಟಲಾಗಿತ್ತು. ಸ್ವಾರ್ಥ ಅಭಿಲಾಷೆಗಳಿಗೆ ಪ್ರಾಶಸ್ತ್ಯ ಕೊಟ್ಟದ್ದರಿಂದ ಅವರು ಪರಿಪೂರ್ಣತೆಯನ್ನೂ ಶಾಶ್ವತ ಜೀವನವನ್ನೂ ಕಳೆದುಕೊಂಡರು. ತಮ್ಮ ಮಕ್ಕಳ ಬಗ್ಗೆಯೂ ಅವರು ಕಿಂಚಿತ್ತೂ ಚಿಂತಿಸಲಿಲ್ಲ.—ಆದಿ. 2:15–3:24.

7, 8. (1) ಕಾಯಿನ ಹುಟ್ಟಿದಾಗ ಹವ್ವ ಏನಂದಳು? (2) ಅವಳ ಮನಸ್ಸಿನಲ್ಲಿ ಏನಿದ್ದಿರಬಹುದು?

7 ಶಿಕ್ಷೆಯ ಫಲವಾಗಿ ಆದಾಮಹವ್ವರು ಏದೆನ್‌ ತೋಟದಿಂದ ಹೊರಹಾಕಲ್ಪಟ್ಟ ಮೇಲೆ ಅವರ ಬಾಳು ದುಸ್ತರವಾಯಿತು. ಆದರೂ ಮೊದಲನೇ ಮಗ ಕಾಯಿನ ಹುಟ್ಟಿದಾಗ “ಯೆಹೋವನ ಅನುಗ್ರಹದಿಂದ ಗಂಡುಮಗುವನ್ನು ಪಡೆದಿದ್ದೇನೆ” ಎಂದು ಹವ್ವ ಉದ್ಗಾರವೆತ್ತಿದಳು. ಹಾಗೆ ಹೇಳುವಾಗ ಪ್ರಾಯಶಃ ಅವಳಿಗೆ, ಸ್ತ್ರೀಯೊಬ್ಬಳು “ಸಂತಾನ”ವನ್ನು ಪಡೆಯುವುದರ ಕುರಿತು ಏದೆನ್‌ ತೋಟದಲ್ಲಿ ಯೆಹೋವನು ಮಾಡಿದ ವಾಗ್ದಾನ ಮನಸ್ಸಿನಲ್ಲಿದ್ದಿರಬಹುದು. ಆದಾಮಹವ್ವರನ್ನು ದಾರಿತಪ್ಪಿಸಿದ ಕೆಡುಕನನ್ನು ಆ ಸಂತಾನ ನಾಶಮಾಡುತ್ತದೆಂದು ಆತನು ಪ್ರವಾದನೆ ನುಡಿದಿದ್ದನು. (ಆದಿ. 3:15; 4:1) ತಾನೇ ಆ ಸ್ತ್ರೀ, ತನ್ನ ಮಗ ಕಾಯಿನನೇ ಆ ವಾಗ್ದತ್ತ “ಸಂತಾನ” ಎಂದು ಹವ್ವಳು ಭಾವಿಸಿರಬಹುದಾ?

8 ಹಾಗೆ ಭಾವಿಸಿದ್ದಲ್ಲಿ ಅದು ತಪ್ಪಾಗಿತ್ತು. ಅಲ್ಲದೆ ಒಂದುವೇಳೆ ಅವಳು ಮತ್ತು ಆದಾಮ ಇಬ್ಬರೂ ಅಂಥ ವಿಚಾರಗಳನ್ನು ಕಾಯಿನನ ತಲೆಯಲ್ಲಿ ತುಂಬಿಸಿದ್ದಲ್ಲಿ ಅವನು ಗರ್ವದಿಂದ ಉಬ್ಬಿಹೋಗಿರಬೇಕು. ಸಮಯಾನಂತರ ಹವ್ವ ಎರಡನೇ ಮಗುವನ್ನು ಹಡೆದಳು. ಆದರೆ ಆ ಗಂಡು ಮಗುವಿನ ಬಗ್ಗೆ ಹೆಗ್ಗಳಿಕೆಯ ಯಾವ ಮಾತೂ ಅವಳ ಬಾಯಿಂದ ಬರಲಿಲ್ಲ. ಆ ಮಗುವಿಗೆ ಹೇಬೆಲ ಎಂದು ಹೆಸರಿಟ್ಟರು. ಅದರರ್ಥ “ಬಿಟ್ಟ ಉಸಿರು” ಅಥವಾ “ವ್ಯರ್ಥ” ಎಂದಾಗಿರಬಹುದು. (ಆದಿ. 4:2) ಅವರಿಟ್ಟ ಆ ಹೆಸರು ಹೇಬೆಲನ ಮೇಲೆ ಅವರು ಅಷ್ಟೇನೂ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ, ಕಾಯಿನನೇ ಅವರಿಗೆ ಹೆಚ್ಚಾಗಿದ್ದನೆಂದು ತೋರಿಸುತ್ತದಾ? ಇರಬಹುದೇನೋ.

9. ಪ್ರಥಮ ಹೆತ್ತವರು ಮಾಡಿದ ಸಂಗತಿಗಳಿಂದ ಇಂದಿನ ಹೆತ್ತವರಿಗೆ ಯಾವ ಎಚ್ಚರಿಕೆಯ ಪಾಠವಿದೆ?

9 ಆ ಪ್ರಥಮ ಹೆತ್ತವರು ಮಾಡಿದ ಸಂಗತಿಗಳಿಂದ ಇಂದಿನ ಹೆತ್ತವರಿಗೆ ಎಚ್ಚರಿಕೆಯ ಪಾಠವಿದೆ. ಹೆತ್ತವರೇ, ನಿಮ್ಮ ಮಕ್ಕಳಿಗೆ ಏನು ಹೇಳುತ್ತೀರೋ, ಅವರಿಗಾಗಿ ಏನು ಮಾಡುತ್ತೀರೋ ಅದು ಅವರಲ್ಲಿ ಅಹಂಕಾರ, ಹೆಬ್ಬಯಕೆ, ಸ್ವಾರ್ಥವನ್ನು ನೀರೆರೆದು ಪೋಷಿಸುತ್ತಿದೆಯೇ? ಅಥವಾ ಯೆಹೋವ ದೇವರನ್ನು ಪ್ರೀತಿಸುವಂತೆ, ಆತನ ಸ್ನೇಹಿತರಾಗಲು ಪ್ರಯತ್ನಿಸುವಂತೆ ಕಲಿಸುತ್ತಿದೆಯೇ? ಈ ನಿಟ್ಟಿನಲ್ಲಿ ಮೊದಲ ಹೆತ್ತವರು ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಲಿಲ್ಲವಾದರೂ ಅವರ ಮಕ್ಕಳಿಗೆ ಅದನ್ನು ಕಲಿಯುವ ಅವಕಾಶವೇ ಇರಲಿಲ್ಲ ಎಂದಲ್ಲ.

ಹೇಬೆಲ ನಂಬಿಕೆಯನ್ನು ಬೆಳೆಸಿಕೊಂಡ ವಿಧ

10, 11. (1) ಕಾಯಿನ ಮತ್ತು ಹೇಬೆಲ ಯಾವ ಕೆಲಸಗಳನ್ನು ಕೈಗೆತ್ತಿಕೊಂಡರು? (2) ಹೇಬೆಲ ಬೆಳೆಸಿಕೊಂಡ ಗುಣ ಯಾವುದು?

10 ಆ ಇಬ್ಬರು ಹುಡುಗರು ಬೆಳೆದು ದೊಡ್ಡವರಾಗುತ್ತಿದ್ದಂತೆ ಹೊಟ್ಟೆಪಾಡಿಗಾಗಿ ದುಡಿಯಲು ಆದಾಮ ತರಬೇತಿ ಕೊಟ್ಟಿರಬೇಕು. ಕಾಯಿನ ಬೇಸಾಯವನ್ನು ಕೈಗೆತ್ತಿಕೊಂಡ. ಹೇಬೆಲ ಕುರಿ ಕಾಯುವವನಾದ.

11 ಆದರೆ ಹೇಬೆಲ ಇದಕ್ಕಿಂತ ಪ್ರಮುಖವಾದ ವಿಷಯವೊಂದನ್ನು ಮಾಡಿದ. ವರ್ಷಗಳು ಉರುಳಿದಂತೆ ದೇವರಲ್ಲಿ ನಂಬಿಕೆ ಬೆಳೆಸಿಕೊಂಡ. ಆ ಸೊಗಸಾದ ಗುಣದ ಬಗ್ಗೆಯೇ ಸಮಯಾನಂತರ ಅಪೊಸ್ತಲ ಪೌಲ ಬರೆದನು. ಸ್ವಲ್ಪ ಯೋಚಿಸಿ, ಮಾನವರ ಪೈಕಿ ಹೇಬೆಲನಿಗೆ ಆದರ್ಶಪ್ರಾಯರು ಯಾರೂ ಇರಲಿಲ್ಲ. ಹೀಗಿರುವಾಗ ಅವನು ಯೆಹೋವ ದೇವರಲ್ಲಿ ನಂಬಿಕೆ ಬೆಳೆಸಿಕೊಂಡದ್ದಾದರೂ ಹೇಗೆ? ಅವನಿಗೆ ಸಹಾಯ ಮಾಡಿರಬಹುದಾದ ಮೂರು ವಿಷಯಗಳನ್ನು ನೋಡೋಣ.

12, 13. ಯೆಹೋವನ ಸೃಷ್ಟಿಯನ್ನು ಗಮನಿಸಿದ್ದು ಹೇಬೆಲನಿಗೆ ನಂಬಿಕೆಯನ್ನು ಬೆಳೆಸಿಕೊಳ್ಳಲು ಹೇಗೆ ನೆರವಾಗಿದ್ದಿರಬಹುದು?

12 ಯೆಹೋವನ ಸೃಷ್ಟಿ. ಯೆಹೋವನು ಭೂಮಿಗೆ ಶಾಪಕೊಟ್ಟಿದ್ದನು. ಪರಿಣಾಮವಾಗಿ ಭೂಮಿಯ ಮೇಲೆ ಮುಳ್ಳುಗಿಡಗಳು, ಕಳೆಗಳು ಬೆಳೆದು ಉಳುಮೆ ಮಾಡುವುದು ತುಂಬ ಕಷ್ಟವಾಗಿತ್ತು ನಿಜ. ಹಾಗಿದ್ದರೂ ಭೂಮಿ ಸಾಕಷ್ಟು ಆಹಾರವನ್ನು ಉತ್ಪಾದಿಸಿತು. ಇದರಿಂದ ಹೇಬೆಲನ ಕುಟುಂಬದವರು ಬದುಕುಳಿಯಲು ಸಾಧ್ಯವಾಯಿತು. ಮಾತ್ರವಲ್ಲ ಪ್ರಾಣಿ, ಪಕ್ಷಿ, ಮೀನುಗಳ ಮೇಲಾಗಲಿ ಬೆಟ್ಟ, ಸರೋವರ, ನದಿ, ಸಮುದ್ರಗಳ ಮೇಲಾಗಲಿ ಶಾಪವಿರಲಿಲ್ಲ. ಆಕಾಶ, ಸೂರ್ಯ, ಚಂದ್ರ, ಮೋಡಗಳ, ನಕ್ಷತ್ರಗಳ ಮೇಲೆಯೂ ಶಾಪವಿರಲಿಲ್ಲ. ಸೃಷ್ಟಿಕರ್ತನಾದ ಯೆಹೋವ ದೇವರ ಅಪಾರ ಪ್ರೀತಿ, ವಿವೇಕ, ಒಳ್ಳೇತನದ ರುಜುವಾತು ಹೇಬೆಲನಿಗೆ ದೃಷ್ಟಿ ಹಾಯಿಸಿದಲ್ಲೆಲ್ಲ ನೋಡಲು ಸಿಗುತ್ತಿತ್ತು. (ರೋಮನ್ನರಿಗೆ 1:20 ಓದಿ.) ಸೃಷ್ಟಿಯ ಸೊಬಗನ್ನು ನೋಡಿ ಆನಂದಿಸುತ್ತಾ ದೇವರ ಗುಣಗಳ ಬಗ್ಗೆ ಧ್ಯಾನಿಸುತ್ತಿದ್ದಂತೆ ಹೇಬೆಲನಿಗೆ ದೇವರ ಮೇಲಿದ್ದ ನಂಬಿಕೆಯೂ ಗಾಢವಾಗುತ್ತಾ ಹೋಯಿತು ಎಂಬುದರಲ್ಲಿ ಎರಡು ಮಾತಿಲ್ಲ.

ಸೃಷ್ಟಿಯನ್ನು ನೋಡಿ ಹೇಬೆಲನಿಗೆ ಪ್ರೀತಿಪರನಾದ ಸೃಷ್ಟಿಕರ್ತನಲ್ಲಿ ನಂಬಿಕೆ ಬೆಳೆಸಿಕೊಳ್ಳಲು ಬಲವಾದ ಆಧಾರ ಸಿಕ್ಕಿತು

13 ಹೇಬೆಲ ನಿಶ್ಚಯವಾಗಿ ಯೆಹೋವನ ಕುರಿತು ಆಳವಾಗಿ ಯೋಚಿಸಲು ಸಮಯ ತೆಗೆದುಕೊಂಡ. ಉದಾಹರಣೆಗೆ ಅವನು ಕುರಿಮಂದೆ ಮೇಯಿಸುತ್ತಿರುವಾಗ ಏನು ಮಾಡುತ್ತಿದ್ದಿರಬಹುದೆಂದು ಚಿತ್ರಿಸಿಕೊಳ್ಳಿ. ಕುರುಬ ಅಂದಮೇಲೆ ತುಂಬ ನಡೆಯಬೇಕಾಗುತ್ತಿತ್ತು. ಆ ಸಾಧು ಪ್ರಾಣಿಗಳಿಗಾಗಿ ಹಚ್ಚಹಸುರಾದ ಹುಲ್ಲಿರುವ ಸ್ಥಳಗಳನ್ನು, ನೀರಿನ ಹಳ್ಳಗಳನ್ನು, ವಿಶ್ರಾಂತಿ ತಾಣಗಳನ್ನು ಹುಡುಕಿಕೊಂಡು ಹೋಗುವಾಗ ಹೇಬೆಲ ಅವುಗಳನ್ನು ಬೆಟ್ಟಗುಡ್ಡ, ಕಣಿವೆ, ನದಿಗಳ ಮಾರ್ಗವಾಗಿ ಕೊಂಡೊಯ್ಯಬೇಕಾಗುತ್ತಿತ್ತು. ದೇವರ ಸೃಷ್ಟಿಜೀವಿಗಳಲ್ಲೇ ಕುರಿಗಳು ಅತ್ಯಂತ ನಿಸ್ಸಹಾಯಕ ಜೀವಿಗಳಂತಿದ್ದು, ಮನುಷ್ಯನು ಅವನ್ನು ನಡೆಸಿ ಸಂರಕ್ಷಿಸುವಂಥ ರೀತಿಯಲ್ಲಿ ಸೃಷ್ಟಿಸಲ್ಪಟ್ಟಿವೆಯೆಂದು ಹೇಬೆಲನಿಗೆ ತೋರುತ್ತಿತ್ತು. ಅದೇ ರೀತಿ ತನಗೆ ಸಹ ಮಾನವನಿಗಿಂತ ಹೆಚ್ಚು ವಿವೇಕಿಯೂ ಶಕ್ತಿಶಾಲಿಯೂ ಆದ ದೇವರ ಮಾರ್ಗದರ್ಶನೆ, ಸಂರಕ್ಷಣೆ, ಪೋಷಣೆ ಬೇಕಿದೆಯೆಂದು ಹೇಬೆಲ ಮನಗಂಡಿರಬಹುದು. ಇಂಥ ಎಷ್ಟೋ ಯೋಚನೆಗಳನ್ನು ಪ್ರಾರ್ಥನೆಯಲ್ಲಿ ಅವನು ವ್ಯಕ್ತಪಡಿಸಿರಲೂಬಹುದು. ಫಲಿತಾಂಶವಾಗಿ ಅವನ ನಂಬಿಕೆ ಬೆಳೆಯುತ್ತಾ ಹೋಯಿತು.

14, 15. ಯೆಹೋವನು ನುಡಿದ ಮಾತುಗಳಿಂದ ಹೇಬೆಲನಿಗೆ ಧ್ಯಾನಿಸಲು ಯಾವ ವಿಷಯಗಳು ಸಿಕ್ಕಿದವು?

14 ಯೆಹೋವನ ಮಾತು. ಏದೆನ್‌ ತೋಟದಿಂದ ಹೊರಹಾಕಲ್ಪಡುವ ತನಕ ಏನೆಲ್ಲ ನಡೆಯಿತು, ಯೆಹೋವನು ಏನೆಲ್ಲಾ ನುಡಿದಿದ್ದನು ಎಂದು ಆದಾಮಹವ್ವರು ತಮ್ಮ ಪುತ್ರರಿಗೆ ತಿಳಿಸಿರಬೇಕು. ಇದರಿಂದ ಹೇಬೆಲನಿಗೆ ಧ್ಯಾನಿಸಲು ಅನೇಕಾನೇಕ ಸಂಗತಿಗಳು ಸಿಕ್ಕಿದವು.

15 ಭೂಮಿಗೆ ಶಾಪ ಬಂದಿದೆ ಎಂದು ಯೆಹೋವನು ನುಡಿದಿದ್ದನು. ಆ ಮಾತಿನ ನೆರೆವೇರಿಕೆಯಾಗಿ ಭೂಮಿಯ ಮೇಲೆ ಬೆಳೆಯುತ್ತಿದ್ದ ಮುಳ್ಳುಗಿಡಗಳನ್ನು, ಕಳೆಗಳನ್ನು ಹೇಬೆಲ ನೋಡಿದನು. ಗರ್ಭಿಣಿಯಾಗಿರುವಾಗ ಮತ್ತು ಹೆರಿಗೆಯ ಸಮಯದಲ್ಲಿ ಹವ್ವಳು ತುಂಬ ಕಷ್ಟಪಡುವಳು, ನೋವು ಅನುಭವಿಸುವಳು ಎಂದೂ ಯೆಹೋವನು ಮುಂತಿಳಿಸಿದ್ದನು. ತನಗೆ ತಮ್ಮತಂಗಿಯರು ಹುಟ್ಟಿದಾಗೆಲ್ಲ ಯೆಹೋವನ ಈ ಮಾತು ನಿಜವಾದದ್ದನ್ನು ಹೇಬೆಲ ಕಣ್ಣಾರೆ ನೋಡಿದನು. ಹವ್ವಳು ಗಂಡನ ಪ್ರೀತಿ, ಗಮನಕ್ಕೆ ಅತಿಯಾಗಿ ಆಶೆಪಡುವಳು ಮತ್ತು ಆದಾಮ ಅವಳ ಮೇಲೆ ಒಡೆಯನಂತೆ ಅಧಿಕಾರ ಚಲಾಯಿಸುವನು ಎಂದು ಯೆಹೋವನು ಮುನ್ನುಡಿದಿದ್ದನು. ಈ ಕಹಿ ನಿಜಾಂಶ ತನ್ನ ಕಣ್ಮುಂದೆ ನಡೆಯುತ್ತಿದ್ದದ್ದನ್ನು ಹೇಬೆಲ ಕಂಡನು. ಹೀಗೆ ಪ್ರತಿ ವಿಷಯದಲ್ಲೂ ಯೆಹೋವನ ಮಾತು ನಿಜವಾಗುವುದನ್ನು ಹೇಬೆಲ ನೋಡಿದನು. ಆದ್ದರಿಂದ ಏದೆನ್‌ ತೋಟದಲ್ಲಿ ಆರಂಭವಾದ ಎಡವಟ್ಟುಗಳನ್ನೆಲ್ಲ ಮುಂದೊಂದು ದಿನ ಸರಿಪಡಿಸಲಿರುವ ‘ಸಂತಾನದ’ ಕುರಿತು ದೇವರು ಮಾಡಿದ ವಾಗ್ದಾನದಲ್ಲಿ ಪೂರ್ಣ ನಂಬಿಕೆಯಿಡಲು ಅವನಿಗೆ ಬಲವಾದ ಕಾರಣಗಳಿದ್ದವು.—ಆದಿ. 3:15-19.

16, 17. ಯೆಹೋವನ ಸೇವಕರಾದ ಕೆರೂಬಿಗಳಿಂದ ಹೇಬೆಲ ಏನು ಕಲಿತುಕೊಂಡ?

16 ಯೆಹೋವನ ಸೇವಕರು. ಮಾನವರ ಪೈಕಿ ಹೇಬೆಲನಿಗೆ ಆದರ್ಶಪ್ರಾಯರಾಗಿದ್ದವರು ಯಾರೂ ಇರಲಿಲ್ಲ ನಿಜ. ಆದರೆ ನೆನಪಿಡಿ, ಆ ಕಾಲದಲ್ಲಿ ಭೂಮಿಯ ಮೇಲೆ ಬುದ್ಧಿಸಾಮರ್ಥ್ಯವುಳ್ಳ ಜೀವಿಗಳು ಮಾನವರು ಮಾತ್ರವೇ ಅಲ್ಲ ಬೇರೆಯವರೂ ಇದ್ದರು. ಏದೆನ್‌ತೋಟದ ಪ್ರವೇಶದ್ವಾರದಲ್ಲಿ ನಿಂತಿದ್ದ ಕೆರೂಬಿಗಳೇ ಅವರು. ಆದಾಮಹವ್ವರನ್ನು ಭೂಪರದೈಸ್‌ನಿಂದ ಹೊರಗಟ್ಟಿದ ನಂತರ ಅವರಾಗಲಿ ಅವರ ಮಕ್ಕಳಾಗಲಿ ಅಲ್ಲಿಗೆ ಮತ್ತೆ ಕಾಲಿಡದಂತೆ ಆ ಅತಿ ಉನ್ನತ ಶ್ರೇಣಿಯ ದೇವದೂತರನ್ನು ಯೆಹೋವನು ಕಾವಲಿರಿಸಿದ್ದನು. ಜೊತೆಗೆ ಧಗಧಗನೆ ಪ್ರಜ್ವಲಿಸುತ್ತಾ ನಿರಂತರವಾಗಿ ಸುತ್ತುವ ಕತ್ತಿಯನ್ನೂ ಇಟ್ಟಿದ್ದನು.—ಆದಿಕಾಂಡ 3:24 ಓದಿ.

17 ಬಾಲಕ ಹೇಬೆಲ ಆ ಕೆರೂಬಿಗಳನ್ನು ನೋಡುತ್ತಿದ್ದದ್ದು ಅವನ ಮೇಲೆ ಹೇಗೆ ಪ್ರಭಾವ ಬೀರಿರಬಹುದೆಂದು ಚಿತ್ರಿಸಿಕೊಳ್ಳಿ. ಆ ಕೆರೂಬಿಗಳು ಮಾನವ ರೂಪದಲ್ಲಿದ್ದುದ್ದರಿಂದ ಅವರು ಬಹಳಷ್ಟು ಬಲಶಾಲಿಗಳೆಂದು ಅವನಿಗೆ ಕಾಣುತ್ತಿತ್ತು. ಮಾತ್ರವಲ್ಲ ಸದಾ ಪ್ರಜ್ವಲಿಸುತ್ತಿರುವ, ನಿರಂತರ ಸುತ್ತುತ್ತಿರುವ ಆ “ಕತ್ತಿ” ನೋಡಿದಾಗಲೂ ಅವನಲ್ಲಿ ಭಯವಿಸ್ಮಯ ಮೂಡಿತು. ಹೇಬೆಲ ದೊಡ್ಡವನಾಗುತ್ತಾ ಹೋದಂತೆ ಯಾವತ್ತಾದರೂ ಆ ಕೆರೂಬಿಗಳು ತಮ್ಮ ನೇಮಕದಿಂದ ಬೇಸತ್ತು ಬಿಟ್ಟುಹೋದದ್ದನ್ನು ನೋಡಿದನೊ? ಖಂಡಿತ ಇಲ್ಲ. ಹಗಲೂರಾತ್ರಿ ಎನ್ನದೆ ತಮ್ಮ ನೇಮಕವನ್ನು ಪೂರೈಸಿದರು. ದಿನಗಳು ಕಳೆದವು, ವರ್ಷಗಳು ಉರುಳಿದವು, ದಶಕಗಳೂ ಸಂದವು. ಬುದ್ಧಿಸಾಮರ್ಥ್ಯವುಳ್ಳ ಆ ಬಲಿಷ್ಠ ಕೆರೂಬಿಗಳು ಮಾತ್ರ ತಮ್ಮ ನೇಮಿತ ಸ್ಥಳ ಬಿಟ್ಟು ಕದಲಲಿಲ್ಲ. ಸ್ಥಿರಚಿತ್ತರಾದ ನೀತಿವಂತ ಸೇವಕರು ಯೆಹೋವನಿಗೆ ಇದ್ದಾರೆಂದು ಹೇಬೆಲ ಇದರಿಂದ ತಿಳಿದುಕೊಂಡ. ತನ್ನ ಕುಟುಂಬದವರ್ಯಾರೂ ತೋರಿಸದಿದ್ದ ನಿಷ್ಠೆ, ವಿಧೇಯತೆಯನ್ನು ಈ ಕೆರೂಬಿಗಳು ತೋರಿಸುವುದನ್ನು ಹೇಬೆಲ ಕಣ್ಣಾರೆ ಕಂಡ. ಕೆರೂಬಿಗಳ ಈ ಉತ್ತಮ ಮಾದರಿ ಅವನ ನಂಬಿಕೆಯನ್ನು ಬಲಪಡಿಸಿತೆನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

ಕೆರೂಬಿಯರು ಯೆಹೋವನ ನಂಬಿಗಸ್ತ, ವಿಧೇಯ ಸೇವಕರಾಗಿರುವುದನ್ನು ಹೇಬೆಲ ಚಿಕ್ಕಂದಿನಿಂದಲೂ ನೋಡುತ್ತಿದ್ದ

18. ನಂಬಿಕೆಯನ್ನು ಬೆಳೆಸಿಕೊಳ್ಳಲು ನಮಗಿಂದು ಯಾವ ಆಧಾರಗಳಿವೆ?

18 ಯೆಹೋವನು ಸೃಷ್ಟಿಯ ಮೂಲಕ ತನ್ನ ಕುರಿತು ತಿಳಿಯಪಡಿಸಿರುವ ಸಂಗತಿಗಳು, ಆತನ ಮಾತುಗಳು ಮತ್ತು ಆತನ ಸೇವಕರಾದ ಕೆರೂಬಿಗಳ ಮಾದರಿ ಇವೆಲ್ಲದರ ಬಗ್ಗೆ ಹೇಬೆಲ ಧ್ಯಾನಿಸುತ್ತಾ ಇದ್ದದರಿಂದ ಅವನ ನಂಬಿಕೆ ಹೆಚ್ಚೆಚ್ಚು ಬಲಗೊಂಡಿತು. ಇಂದು ನಾವು ಅವನ ಮಾದರಿಯಿಂದ ಅನೇಕ ವಿಷಯಗಳನ್ನು ಕಲಿಯಬಲ್ಲೆವು. ಮುಖ್ಯವಾಗಿ ಯುವಜನರಿಗೆ ಹೇಬೆಲನ ಮಾದರಿ ಪ್ರೋತ್ಸಾಹದಾಯಕ. ತಮ್ಮ ಕುಟುಂಬದಲ್ಲಿ ಯಾರೂ ಒಳ್ಳೇ ಮಾದರಿಯಾಗಿರದಿದ್ದರೂ ಅವರು ಹೇಬೆಲನಂತೆ ಯೆಹೋವ ದೇವರಲ್ಲಿ ಯಥಾರ್ಥ ನಂಬಿಕೆಯನ್ನು ಬೆಳೆಸಿಕೊಳ್ಳಸಾಧ್ಯ. ಸುತ್ತಲೂ ಇರುವ ಅದ್ಭುತ ಸೃಷ್ಟಿ, ಲಭ್ಯವಿರುವ ಸಂಪೂರ್ಣ ಬೈಬಲ್‌ ಹಾಗೂ ಅನೇಕ ಸ್ತ್ರೀಪುರುಷರ ನಂಬಿಕೆಯ ಉತ್ತಮ ಮಾದರಿ ಇವೆಲ್ಲವೂ ನಂಬಿಕೆ ಬೆಳೆಸಿಕೊಳ್ಳಲು ನಮಗೆ ಆಧಾರಗಳಾಗಿವೆ.

ಹೇಬೆಲ ಅರ್ಪಿಸಿದ ಯಜ್ಞ ಏಕೆ ಶ್ರೇಷ್ಠವಾಗಿತ್ತು?

19. ಸಮಯಾನಂತರ ಹೇಬೆಲ ಯಾವ ಗಹನ ಸತ್ಯವನ್ನು ಗ್ರಹಿಸಿಕೊಂಡ?

19 ಹೇಬೆಲನಿಗೆ ದೇವರ ಮೇಲಿದ್ದ ನಂಬಿಕೆ ಗಾಢವಾಗುತ್ತಾ ಹೋದಂತೆ ಆ ನಂಬಿಕೆಯನ್ನು ಕ್ರಿಯೆಯಲ್ಲಿ ತೋರಿಸಲು ಮಾರ್ಗ ಹುಡುಕಿದ. ಒಬ್ಬ ಹುಲುಮಾನವ ವಿಶ್ವವನ್ನೇ ಸೃಷ್ಟಿಸಿದಾತನಿಗಾಗಿ ಏನು ತಾನೇ ಕೊಡಸಾಧ್ಯ? ಆತನಿಗೂ ಮನುಷ್ಯನಿಂದ ಕೊಡುಗೆಯಾಗಲಿ ಸಹಾಯವಾಗಲಿ ಪಡೆಯುವ ಅಗತ್ಯವಿಲ್ಲವಲ್ಲ. ಆದರೆ ಸಮಯಾನಂತರ ಹೇಬೆಲ ಗಹನವಾದ ಸತ್ಯವೊಂದನ್ನು ಗ್ರಹಿಸಿದ. ಅದೇನೆಂದರೆ ತನ್ನಲ್ಲಿರುವುದರಲ್ಲೇ ಸರ್ವೋತ್ತಮವಾದುದನ್ನು ಸರಿಯಾದ ಇರಾದೆಯಿಂದ ಪ್ರೀತಿಯ ತಂದೆಯಾದ ಯೆಹೋವನಿಗೆ ಅರ್ಪಿಸುವಲ್ಲಿ ಆತನನ್ನು ಸಂತೋಷಪಡಿಸಲು ಸಾಧ್ಯವೆಂದೇ.

ಯಜ್ಞ ಅರ್ಪಿಸಲು ಹೇಬೆಲನನ್ನು ಪ್ರೇರಿಸಿದ್ದು ಅವನ ನಂಬಿಕೆ. ಇದು ಕಾಯಿನನಲ್ಲಿ ಇರಲಿಲ್ಲ

20, 21. (1) ಕಾಯಿನ ಮತ್ತು ಹೇಬೆಲ ಯೆಹೋವನಿಗೆ ಏನನ್ನು ಅರ್ಪಿಸಿದರು? (2) ಯೆಹೋವನ ಪ್ರತಿಕ್ರಿಯೆ ಏನಾಗಿತ್ತು?

20 ಈ ಸತ್ಯ ಗ್ರಹಿಸಿದ ಹೇಬೆಲ ತನ್ನ ಮಂದೆಯಿಂದ ಕೆಲವು ಕುರಿಗಳನ್ನು ಅರ್ಪಿಸಲು ಮುಂದಾದ. ಸರ್ವೋತ್ತಮವಾದುದನ್ನು ಅಂದರೆ ಚೊಚ್ಚಲು ಕುರಿಗಳನ್ನು ಆರಿಸಿಕೊಂಡ. ಅವುಗಳಲ್ಲೂ ಅತ್ಯುತ್ತಮ ಭಾಗಗಳೆಂದು ಅವನಿಗನಿಸಿದ್ದನ್ನು ಆಯ್ಕೆಮಾಡಿದ. ಅದೇ ಸಮಯದಲ್ಲಿ ಕಾಯಿನನು ಸಹ ದೇವರ ಆಶೀರ್ವಾದ, ಮೆಚ್ಚಿಗೆ ಪಡೆಯಲು ಪ್ರಯತ್ನಿಸುತ್ತಾ ಅವನು ಬೆಳೆದದ್ದರಲ್ಲಿ ಕೆಲವನ್ನು ತಂದ. ಆದರೆ ಹೇಬೆಲನಿಗಿದ್ದ ಇರಾದೆ ಅವನಿಗಿರಲಿಲ್ಲ. ಇದು ಆ ಅಣ್ಣತಮ್ಮಂದಿರು ತಮ್ಮತಮ್ಮ ಕಾಣಿಕೆಗಳನ್ನು ಅರ್ಪಿಸಿದಾಗ ಬೆಳಕಿಗೆ ಬಂತು.

21 ಕಾಣಿಕೆಗಳನ್ನು ಅರ್ಪಿಸಲು ಆದಾಮನ ಈ ಪುತ್ರರಿಬ್ಬರೂ ಯಜ್ಞವೇದಿ ಕಟ್ಟಿರಬಹುದು, ಬೆಂಕಿಯನ್ನು ಬಳಸಿರಬಹುದು. ಬಹುಶಃ ಕೆರೂಬಿಗಳ ಕಣ್ಣಳತೆ ದೂರದಲ್ಲೇ ಆ ಕಾಣಿಕೆಗಳನ್ನು ಅರ್ಪಿಸಿರಲೂಬಹುದು. ಏಕೆಂದರೆ ಆ ಸಮಯದಲ್ಲಿ ಭೂಮಿ ಮೇಲೆ ಯೆಹೋವನ ಜೀವಂತ ಪ್ರತಿನಿಧಿಗಳಾಗಿದ್ದವರು ಆ ಕೆರೂಬಿಗಳು ಮಾತ್ರ. ಸಂತೋಷದ ಸಂಗತಿಯೆಂದರೆ ಯೆಹೋವನು ಸ್ಪಂದಿಸಿದನು! “ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿ”ದನು ಎನ್ನುತ್ತದೆ ಬೈಬಲ್‌. (ಆದಿ. 4:5) ಆತನು ತನ್ನ ಮೆಚ್ಚಿಗೆಯನ್ನು ಹೇಗೆ ವ್ಯಕ್ತಪಡಿಸಿದನೆಂದು ಬೈಬಲ್‌ ತಿಳಿಸುವುದಿಲ್ಲ.

22, 23. ಹೇಬೆಲನ ಅರ್ಪಣೆಯನ್ನು ಯೆಹೋವನು ಮೆಚ್ಚಲು ಕಾರಣವೇನು?

22 ದೇವರು ಹೇಬೆಲನ ಯಜ್ಞವನ್ನು ಮೆಚ್ಚಿದ್ದಾದರೂ ಯಾಕೆ? ಅವನು ಅರ್ಪಿಸಿದ ಕಾಣಿಕೆ ಜೀವವುಳ್ಳ, ಉಸಿರಾಡುವ ಜೀವಿಗಳಾಗಿದ್ದು ಅವುಗಳ ರಕ್ತವನ್ನೂ ಅರ್ಪಿಸಿದ ಎಂಬ ಕಾರಣಕ್ಕೆ ಇರಬಹುದು. ಈ ರೀತಿಯ ಯಜ್ಞವನ್ನು ಅರ್ಪಿಸುವುದರ ಮಹತ್ವ ಹೇಬೆಲನಿಗೆ ತಿಳಿದಿತ್ತೇ? ಅವನು ಸತ್ತು ಅನೇಕ ಶತಮಾನಗಳ ನಂತರ ದೇವರು ದೋಷರಹಿತ ಕುರಿಮರಿಯ ಯಜ್ಞವನ್ನು ತನ್ನ ಸ್ವಂತ ಪರಿಪೂರ್ಣ ಮಗನ ಯಜ್ಞದ ಮುನ್‌ಚಿತ್ರಣವಾಗಿ ಬಳಸಿದನು. “ದೇವರ ಕುರಿಮರಿ”ಯಾದ ಯೇಸುವಿನ ನಿರ್ದೋಷ ರಕ್ತವು ಸುರಿಸಲ್ಪಡಲಿತ್ತು. (ಯೋಹಾ. 1:29; ವಿಮೋ. 12:5-7) ಆದರೆ ಇದರ ಬಗ್ಗೆ ಹೇಬೆಲನಿಗೆ ಹೆಚ್ಚಿನದ್ದು ತಿಳಿದಿರಲಿಲ್ಲ ಎಂಬುದು ನಿಶ್ಚಯ.

23 ಆದರೆ ನಮಗೆ ಇಷ್ಟು ಮಾತ್ರ ಖಂಡಿತ ಗೊತ್ತು, ಏನೆಂದರೆ ಹೇಬೆಲ ತನ್ನ ಬಳಿ ಏನಿತ್ತೋ ಅದರಲ್ಲಿ ಸರ್ವೋತ್ತಮವಾದುದನ್ನು ಅರ್ಪಿಸಿದ್ದ. ಯೆಹೋವನು ಆ ಅರ್ಪಣೆಯನ್ನು ಮಾತ್ರವಲ್ಲ ಅದನ್ನು ಕೊಟ್ಟವನನ್ನೂ ಮೆಚ್ಚಿದ. ಏಕೆಂದರೆ ಯೆಹೋವನ ಮೇಲಿನ ಪ್ರೀತಿ ಮತ್ತು ಯಥಾರ್ಥ ನಂಬಿಕೆಯಿಂದ ಹೇಬೆಲ ಆ ಯಜ್ಞವನ್ನು ಅರ್ಪಿಸಿದ್ದ.

24. (1) ಕಾಯಿನ ಅರ್ಪಿಸಿದ ಕಾಣಿಕೆ ಸರಿಯಿರಲಿಲ್ಲವೆಂದು ಹೇಳಲಾಗದು ಏಕೆ? (2) ಇಂದಿನ ಎಷ್ಟೋ ಜನರಂತೆ ಕಾಯಿನನೂ ಏನು ಎಣಿಸಿರಬೇಕು?

24 ಆದರೆ ಕಾಯಿನನ ವಿಷಯವೇ ಬೇರೆಯಾಗಿತ್ತು. ಯೆಹೋವನು “ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ.” (ಆದಿ. 4:5) ಕಾಯಿನ ಅರ್ಪಿಸಿದ ಕಾಣಿಕೆ ಸರಿಯಿರಲಿಲ್ಲ ಎಂದು ಇದರರ್ಥವಲ್ಲ. ಏಕೆಂದರೆ ಸಮಯಾನಂತರ ಹೊಲದ ಬೆಳೆಯನ್ನು ಅರ್ಪಿಸಲು ಧರ್ಮಶಾಸ್ತ್ರದಲ್ಲಿ ದೇವರೇ ಅನುಮತಿಕೊಟ್ಟ. (ಯಾಜ. 6:14, 15) ಹಾಗಾಗಿ ದೇವರು ಕಾಯಿನನ ಕಾಣಿಕೆಯನ್ನು ಮೆಚ್ಚದಿರಲು ಕಾರಣ ಅವನ ‘ಕೃತ್ಯಗಳು ಕೆಟ್ಟವುಗಳಾಗಿದ್ದದ್ದೇ.’ (1 ಯೋಹಾನ 3:12 ಓದಿ.) ಇಂದು ಎಷ್ಟೋ ಜನ ನೆನಸುವಂತೆ ದೇವರ ಮೇಲೆ ಭಕ್ತಿಯಿದೆ ಎಂದು ಮೇಲ್ಮೇಲೆ ತೋರಿಸಿಕೊಂಡರೆ ಸಾಕು ಅಂತ ಕಾಯಿನನು ಸಹ ನೆನಸಿರಬೇಕು. ಅವನಿಗೆ ಯೆಹೋವನ ಮೇಲೆ ಯಥಾರ್ಥ ನಂಬಿಕೆ, ಪ್ರೀತಿ ಇಲ್ಲದಿದ್ದದ್ದು ಅವನ ಕ್ರಿಯೆಗಳಲ್ಲಿ ತೋರಿಬಂತು.

25, 26. (1) ಯೆಹೋವನು ಕಾಯಿನನಿಗೆ ಯಾವ ಎಚ್ಚರಿಕೆ ಕೊಟ್ಟನು? (2) ಆದರೂ ಕಾಯಿನ ಏನು ಮಾಡಿದ?

25 ಯೆಹೋವನ ಮೆಚ್ಚಿಕೆ ತನಗೆ ದೊರೆಯಲಿಲ್ಲವೆಂದು ಕಾಯಿನನಿಗೆ ಗೊತ್ತಾದಾಗ ಹೇಬೆಲನನ್ನು ನೋಡಿ ಕಲಿತನೇ? ಇಲ್ಲ. ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ತಮ್ಮನ ಮೇಲೆ ದ್ವೇಷವಿಟ್ಟುಕೊಂಡ. ಯೆಹೋವನು ಕಾಯಿನನ ಹೃದಯವನ್ನು ನೋಡಿ ಅವನಿಗೆ ತಾಳ್ಮೆಯಿಂದ ಅರ್ಥಮಾಡಿಸಲು ಪ್ರಯತ್ನಿಸಿದನು. ಅವನ ಕೋಪದ್ವೇಷ ಗಂಭೀರ ಪಾಪಕ್ಕೆ ನಡೆಸುವುದೆಂಬ ಎಚ್ಚರಿಕೆ ಕೂಡ ಕೊಟ್ಟನು. ಕಾಯಿನ ತಿದ್ದಿನಡೆದರೆ ಅವನ ‘ತಲೆ ಎತ್ತಲ್ಪಡುವುದು’ ಅಂದರೆ ತನ್ನ ಮೆಚ್ಚಿಗೆಗೆ ಪಾತ್ರನಾಗುವನು ಎಂದು ಸಹ ಯೆಹೋವನು ಹೇಳಿದನು.—ಆದಿ. 4:6, 7.

26 ಆದರೆ ಕಾಯಿನ ದೇವರ ಎಚ್ಚರಿಕೆಯನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಅಡವಿಗೆ ಹೋಗೋಣ ಎಂದು ತಮ್ಮನನ್ನು ಕರೆದ. ಅಣ್ಣನ ಬಗ್ಗೆ ಯಾವುದೇ ಶಂಕೆಯಿರದ ಹೇಬೆಲ ಅವನ ಜೊತೆ ಹೋದ. ಅಲ್ಲಿ ಕಾಯಿನ ಹೇಬೆಲನ ಮೇಲೆ ಹಲ್ಲೆನಡೆಸಿ ಕೊಂದೇಬಿಟ್ಟ. (ಆದಿ. 4:8) ಹೀಗೆ ಒಂದರ್ಥದಲ್ಲಿ ಧಾರ್ಮಿಕ ಹಿಂಸೆಗೆ ಬಲಿಯಾದವರಲ್ಲಿ ಹೇಬೆಲ ಮೊದಲಿಗ, ಪ್ರಪ್ರಥಮ ಹುತಾತ್ಮ. ಹೇಬೆಲ ಸತ್ತುಹೋದ ನಿಜ, ಆದರೆ ಯೆಹೋವನು ಅವನನ್ನು ಮರೆಯಲಿಲ್ಲ.

27. (1) ಹೇಬೆಲನ ಪುನರುತ್ಥಾನ ಆಗಲಿದೆ ಎಂದು ನಾವೇಕೆ ಭರವಸೆಯಿಂದಿರಬಹುದು? (2) ನಾವೇನು ಮಾಡಿದರೆ ಮುಂದೆ ಹೇಬೆಲನನ್ನು ಭೇಟಿಯಾಗಬಹುದು?

27 ಹೇಬೆಲನ ರಕ್ತ ಸಾಂಕೇತಿಕ ಅರ್ಥದಲ್ಲಿ ಪ್ರತೀಕಾರಕ್ಕಾಗಿ ಇಲ್ಲವೆ ನ್ಯಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡಿತು. ದುಷ್ಟ ಕಾಯಿನನ ಪಾತಕಕ್ಕೆ ದೇವರು ಶಿಕ್ಷೆ ವಿಧಿಸಿ ನ್ಯಾಯ ತೀರಿಸಿದನು. (ಆದಿ. 4:9-12) ಇದಕ್ಕಿಂತ ಮಿಗಿಲಾದ ಸಂಗತಿಯೇನೆಂದರೆ, ಹೇಬೆಲನ ನಂಬಿಕೆಯ ಕುರಿತ ದಾಖಲೆ ಇಂದು ನಮ್ಮೊಂದಿಗೆ ಮಾತಾಡುತ್ತದೆ. ಅವನು ಬದುಕಿದ್ದು ಸುಮಾರು ನೂರು ವರುಷ. ಆ ಕಾಲದ ಜನರ ಆಯಸ್ಸಿಗೆ ಹೋಲಿಸುವಾಗ ಅವನ ಆಯಸ್ಸು ತೀರ ಮೊಟಕಾಗಿತ್ತು. ಆದರೆ ಅವನು ಬದುಕಿದ್ದಷ್ಟು ಕಾಲ ದೇವರಿಗೆ ಮೆಚ್ಚಿಗೆಯಾಗುವಂತೆ ನಡೆದುಕೊಂಡ. ತನ್ನ ತಂದೆಯಾದ ಯೆಹೋವನ ಪ್ರೀತಿ, ಅನುಗ್ರಹ ತನ್ನ ಮೇಲಿದೆಯೆಂದು ಅವನಿಗೆ ಸಾಯುವುದಕ್ಕೆ ಮುಂಚೆಯೇ ಗೊತ್ತಾಗಿತ್ತು. (ಇಬ್ರಿ. 11:4) ಅಪರಿಮಿತ ಸ್ಮರಣೆಯುಳ್ಳ ಯೆಹೋವನ ನೆನಪಲ್ಲಿ ಅವನಿದ್ದಾನೆ ಮತ್ತು ಭೂಪರದೈಸಿನಲ್ಲಿ ಅವನ ಪುನರುತ್ಥಾನ ಆಗುವುದೆಂಬ ಖಾತರಿ ನಮಗಿದೆ. (ಯೋಹಾ. 5:28, 29) ಪರದೈಸಿನಲ್ಲಿ ಹೇಬೆಲನನ್ನು ಭೇಟಿಯಾಗುವಿರಾ? ಇಂದು ಅವನ ಗಮನಾರ್ಹ ನಂಬಿಕೆಯನ್ನು ಅನುಕರಿಸುವ ಮೂಲಕ ಅವನು ಮಾತಾಡುವುದನ್ನು ಆಲಿಸಲು ದೃಢಮನಸ್ಸುಳ್ಳವರಾಗಿದ್ದರೆ ಖಂಡಿತ ಭೇಟಿಯಾಗುವಿರಿ.

^ ಪ್ಯಾರ. 5 ಮೂಲಭಾಷೆಯಲ್ಲಿ “ಲೋಕದ ಆದಿ” ಎಂಬುದಕ್ಕಿರುವ ಅರ್ಥ ಸಂತಾನೋತ್ಪತ್ತಿಯನ್ನು ಸೂಚಿಸುತ್ತದೆ. ಆದ್ದರಿಂದ ಅದು ಮಾನವಕುಲದ ಮೊದಲ ಸಂತಾನವನ್ನು ಸೂಚಿಸುತ್ತದೆ. ಹಾಗಿದ್ದರೆ ಯೇಸು ಆದಾಮನ ಮೊದಲ ಮಗನಾದ ಕಾಯಿನನನ್ನು ಬಿಟ್ಟು ಹೇಬೆಲನನ್ನು “ಲೋಕದ ಆದಿ”ಯಲ್ಲಿ ಜೀವಿಸಿದವನೆಂದು ಸೂಚಿಸಿದ್ದೇಕೆ? ಕಾಯಿನನು ಮಾಡಿದ ನಿರ್ಣಯಗಳು, ಕೆಲಸಗಳು ಬೇಕುಬೇಕೆಂದೇ ಯೆಹೋವ ದೇವರ ವಿರುದ್ಧ ಮಾಡಿದ ದಂಗೆಯಾಗಿತ್ತು. ಅವನ ಹೆತ್ತವರಂತೆಯೇ ಕಾಯಿನನಿಗೂ ಪುನರುತ್ಥಾನವಾಗಲಿ ಪಾಪದಿಂದ ವಿಮೋಚನೆಯಾಗಲಿ ಇಲ್ಲವೆಂಬ ತೀರ್ಮಾನಕ್ಕೆ ಬರಬಹುದು.