ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹತ್ತೊಂಬತ್ತು

ಸಂರಕ್ಷಿಸಿದ, ಪೋಷಿಸಿದ, ಪಟ್ಟುಹಿಡಿದ

ಸಂರಕ್ಷಿಸಿದ, ಪೋಷಿಸಿದ, ಪಟ್ಟುಹಿಡಿದ

1, 2. (1) ಯೋಸೇಫ ಮತ್ತವನ ಕುಟುಂಬ ಯಾವ ದೊಡ್ಡ ಬದಲಾವಣೆಗೆ ಹೊಂದಿಕೊಳ್ಳುವ ಸಂದರ್ಭ ಎದುರಾಗಲಿತ್ತು? (2) ಯೋಸೇಫ ತನ್ನ ಪತ್ನಿಗೆ ಯಾವ ಕೆಟ್ಟ ಸುದ್ದಿ ಹೇಳಿದನು?

ಯೋಸೇಫ ಕೊನೆಯ ಮೂಟೆಯನ್ನೆತ್ತಿ ಕತ್ತೆಯ ಮೇಲಿಟ್ಟ. ಬಹುಶಃ ಸುತ್ತ ಕಣ್ಣು ಹಾಯಿಸಿ ಕತ್ತಲಲ್ಲಿ ಮುಳುಗಿದ್ದ ತನ್ನ ಊರಾದ ಬೇತ್ಲೆಹೇಮನ್ನು ಒಮ್ಮೆ ಕಣ್ತುಂಬಿಕೊಂಡ. ಅನಂತರ ಕತ್ತೆಯ ಪಕ್ಕೆಯನ್ನು ತಟ್ಟಿ ಅದರ ಜತೆಗೇ ಮುಂದೆ ಸಾಗಿದ. ತನ್ನ ಪುಟ್ಟ ಸಂಸಾರದೊಟ್ಟಿಗೆ ದೂರದ ಈಜಿಪ್ಟಿಗೆ ಹೊರಟಿದ್ದ. ಪಯಣದ ಯೋಚನೆಗಳೇ ಅವನ ತಲೆಯಲ್ಲಿ ಗಿರಕಿಹೊಡೆಯುತ್ತಿದ್ದವು. ಆ ಸ್ಥಳ, ಜನ, ಭಾಷೆ, ರೀತಿರಿವಾಜು ಎಲ್ಲವೂ ಹೊಸದು. ಈ ದೊಡ್ಡ ಬದಲಾವಣೆಗೆ ತನ್ನ ಕುಟುಂಬ ಹೇಗೆ ಹೊಂದಿಕೊಳ್ಳುವುದೊ ಎಂಬ ಚಿಂತೆ ಅವನಿಗೆ.

2 ಯೋಸೇಫನಿಗೆ ಹೆಂಡತಿ ಮಗು ಸಮೇತ ರಾತ್ರೋರಾತ್ರಿ ಊರು ಬಿಟ್ಟುಹೋಗುವ ಅನಿವಾರ್ಯತೆಯಾದರೂ ಏನಿತ್ತು? ರಾಜ ಹೆರೋದ ಅವರ ಪುಟ್ಟ ಕೂಸನ್ನು ಕೊಲ್ಲಬೇಕೆಂದಿದ್ದ, ಹಾಗಾಗಿ ಅವರು ಕೂಡಲೇ ಬೇತ್ಲೆಹೇಮ್‌ ಬಿಟ್ಟು ಹೋಗಬೇಕೆಂದು ಒಬ್ಬ ದೇವದೂತ ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು ಹೇಳಿದ್ದನು. (ಮತ್ತಾಯ 2:13, 14 ಓದಿ.) ಈ ಕೆಟ್ಟ ಸುದ್ದಿಯನ್ನು ತನ್ನ ಪ್ರೀತಿಯ ಮಡದಿಯಾದ ಮರಿಯಳಿಗೆ ಹೇಳಲು ಯೋಸೇಫನಿಗೆ ಬಾಯಿಯೇ ಬರಲಿಲ್ಲ. ಆದರೂ ಧೈರ್ಯಮಾಡಿ ಹೇಳಿಬಿಟ್ಟ. ಮರಿಯಳಿಗೆ ಗಾಬರಿಯಾಯಿತು. ಯಾರಿಗೂ ಹಾನಿಮಾಡಲಾಗದ ಈ ಮುಗ್ಧ ಕಂದನ ಜೀವತೆಗೆಯಲು ಏಕೆ ಹವಣಿಸುತ್ತಿದ್ದಾರೆಂದು ಅವಳಿಗಾಗಲಿ ಯೋಸೇಫನಿಗಾಗಲಿ ಅರ್ಥ ಆಗಲಿಲ್ಲ. ಆದರೂ ಯೆಹೋವನು ಹೇಳಿದ ಮಾತಿನಲ್ಲಿ ಅವರಿಗೆ ಭರವಸೆಯಿತ್ತು. ಆದ್ದರಿಂದ ಈಜಿಪ್ಟಿಗೆ ಹೊರಟಿದ್ದರು.

3. ಯೋಸೇಫ ಮತ್ತವನ ಕುಟುಂಬ ಬೇತ್ಲೆಹೇಮಿನಿಂದ ಹೊರಟದ್ದನ್ನು ವಿವರಿಸಿ. (ಪುಟ 189ರ ಚಿತ್ರ ಸಹ ನೋಡಿ.)

3 ಯೋಸೇಫನು ಹೆಂಡತಿ ಮಗುವಿನೊಂದಿಗೆ ಬೇತ್ಲೆಹೇಮ್‌ ಬಿಟ್ಟು ಹೊರಟಾಗ ಅಲ್ಲಿನ ಜನರೆಲ್ಲ ಗಾಢ ನಿದ್ದೆಯಲ್ಲಿದ್ದರು. ಅವರಿಗೆ ಹೆರೋದನ ಕ್ರೂರ ಯೋಜನೆಯ ಬಗ್ಗೆ ಒಂದಿಷ್ಟೂ ಸುಳಿವಿರಲಿಲ್ಲ. ಯೋಸೇಫನ ಕುಟುಂಬ ದಕ್ಷಿಣ ದಿಕ್ಕಿನತ್ತ ಪ್ರಯಾಣ ಬೆಳೆಸಿತು. ಸ್ವಲ್ಪದರಲ್ಲೇ ಪೂರ್ವದಲ್ಲಿ ಬೆಳಕು ಇಣುಕಲಾರಂಭಿಸಿತು. ಹೀಗೆ ಸಾಗುತ್ತಿದ್ದಾಗ ಮುಂದೇನು ಕಾದಿದೆಯೆಂದು ಯೋಸೇಫ ಯೋಚಿಸುತ್ತಿದ್ದಿರಬಹುದು. ಬಡಪಾಯಿ ಬಡಗಿಯಾಗಿದ್ದ ಅವನು ತನ್ನ ಮಗುವಿನ ಜೀವತೆಗೆಯಲು ಹವಣಿಸುತ್ತಿದ್ದ ಬಲಾಢ್ಯ ಶಕ್ತಿಗಳ ವಿರುದ್ಧ ತನ್ನ ಕುಟುಂಬವನ್ನು ಸಂರಕ್ಷಿಸಬಲ್ಲನೇ? ಮುಂದಕ್ಕೂ ತನ್ನ ಕುಟುಂಬವನ್ನು ಪೋಷಿಸಲು ಅವನಿಂದ ಆದೀತೇ? ಬಹು ವಿಶಿಷ್ಟವಾದ ಈ ಮಗುವನ್ನು ಸಾಕಿಸಲಹುವ ದೊಡ್ಡ ನೇಮಕ ಪೂರೈಸಲು ಪಟ್ಟುಹಿಡಿಯುವನೇ? ಯೋಸೇಫನ ಮುಂದೆ ಬೆಟ್ಟದಷ್ಟು ದೊಡ್ಡದಾದ ಸವಾಲುಗಳಿದ್ದವು. ಇದರಲ್ಲಿ ಒಂದೊಂದನ್ನೂ ಹೇಗೆ ನಿಭಾಯಿಸಿದ? ಇಂದಿನ ಅಪ್ಪಂದಿರು ಮತ್ತು ನಾವೆಲ್ಲರೂ ಹೇಗೆ ಅವನ ನಂಬಿಕೆ ಅನುಕರಿಸಬೇಕು? ಈಗ ನೋಡೋಣ.

ಕುಟುಂಬವನ್ನು ಸಂರಕ್ಷಿಸಿದ

4, 5. (1) ಯೋಸೇಫನ ಬದುಕು ಹೇಗೆ ಪೂರ್ತಿ ಬದಲಾಯಿತು? (2) ಯೋಸೇಫ ಒಂದು ಭಾರೀ ನೇಮಕವನ್ನು ವಹಿಸಿಕೊಳ್ಳುವಂತೆ ದೇವದೂತ ಪ್ರೋತ್ಸಾಹಿಸಿದ್ದು ಹೇಗೆ?

4 ಒಂದು ವರ್ಷಕ್ಕಿಂತ ಹೆಚ್ಚು ಹಿಂದೆ ಯೋಸೇಫನಿಗೆ ತನ್ನೂರಾದ ನಜರೇತಿನಲ್ಲಿ ಹೇಲಿಯ ಮಗಳೊಟ್ಟಿಗೆ ನಿಶ್ಚಿತಾರ್ಥವಾಗಿತ್ತು. ಆ ಬಳಿಕ ಅವನ ಬದುಕು ಪೂರ್ತಿ ಬದಲಾಯಿತು. ಮರಿಯಳು ಯೆಹೋವನನ್ನೂ ಆತನ ಮಟ್ಟಗಳನ್ನೂ ಪ್ರೀತಿಸುವವಳೆಂದು ಯೋಸೇಫನಿಗೆ ಗೊತ್ತಿತ್ತು. ಹಾಗಾಗಿ ಆಕೆ ಬಸುರಿಯಾಗಿದ್ದಾಳೆಂದು ಕೇಳಿ ಅವನಿಗೆ ಆಘಾತ ಆಯಿತು. ಆಕೆಗೆ ವಿಚ್ಛೇದನ ಕೊಡಬೇಕೆಂದಿದ್ದ. * ಆದರೆ ಆಕೆ ಎಲ್ಲರ ಬಾಯಿಗೆ ತುತ್ತಾಗಬಾರದೆಂದು ಅದನ್ನು ಗುಟ್ಟಾಗಿ ಮಾಡಬೇಕೆಂದಿದ್ದ. ಆಗ ಕನಸಿನಲ್ಲಿ ಒಬ್ಬ ದೇವದೂತ ಅವನೊಟ್ಟಿಗೆ ಮಾತಾಡಿ, ಮರಿಯಳು ಗರ್ಭಿಣಿಯಾಗಿರುವುದು ಯೆಹೋವನ ಪವಿತ್ರಾತ್ಮದ ಸಹಾಯದಿಂದ, ಆಕೆಗೆ ಹುಟ್ಟುವ ಮಗ ‘ಜನರನ್ನು ಅವರ ಪಾಪಗಳಿಂದ ರಕ್ಷಿಸುವ’ ಎಂದು ತಿಳಿಸಿದ್ದ. ಹಾಗಾಗಿ ‘ನಿನ್ನ ಹೆಂಡತಿಯಾದ ಮರಿಯಳನ್ನು ಮನೆಗೆ ಸೇರಿಸಿಕೊಳ್ಳಲು ಹೆದರಬೇಡ’ ಎಂದು ಯೋಸೇಫನಲ್ಲಿ ಧೈರ್ಯತುಂಬಿದ್ದ.—ಮತ್ತಾ. 1:18-21.

5 ನೀತಿವಂತನೂ ವಿಧೇಯನೂ ಆಗಿದ್ದ ಯೋಸೇಫನು ದೇವದೂತ ಹೇಳಿದಂತೆಯೇ ಮಾಡಿದ್ದನು. ತನ್ನ ಸ್ವಂತ ಮಗನಲ್ಲದಿದ್ದರೂ ದೇವರ ಕಣ್ಮಣಿಯಾಗಿದ್ದವನನ್ನು ಸಾಕಿಸಲಹುವ ಅತ್ಯಂತ ಭಾರೀ ನೇಮಕವನ್ನು ಸ್ವೀಕರಿಸಿದ್ದನು. ಸಮಯಾನಂತರ ಯೋಸೇಫನು ಕೈಸರನ ಅಪ್ಪಣೆಯಂತೆ ಹೆಸರನ್ನು ನೋಂದಾಯಿಸಲು ಗರ್ಭಿಣಿಯಾಗಿದ್ದ ಪತ್ನಿಯ ಜೊತೆಗೆ ಬೇತ್ಲೆಹೇಮಿಗೆ ಹೋಗಿದ್ದ. ಅಲ್ಲೇ ಮಗುವಿನ ಜನನವಾಗಿತ್ತು.

6-8. (1) ಯೋಸೇಫ ಮತ್ತವನ ಪುಟ್ಟ ಕುಟುಂಬದ ಬದುಕಲ್ಲಿ ಇನ್ನೊಂದು ಬದಲಾವಣೆ ತಂದ ಘಟನೆ ಯಾವುದು? (2) ಆ ನಕ್ಷತ್ರವನ್ನು ಕಳುಹಿಸಿದವನು ಸೈತಾನನೆಂದು ಹೇಗೆ ಗೊತ್ತಾಗುತ್ತದೆ? (ಪಾದಟಿಪ್ಪಣಿ ಸಹ ನೋಡಿ.)

6 ಆಮೇಲೆ ಯೋಸೇಫ ಕುಟುಂಬವನ್ನು ವಾಪಸ್‌ ನಜರೇತಿಗೆ ಕರೆದೊಯ್ಯಲಿಲ್ಲ. ಅವರು ಬೇತ್ಲೆಹೇಮಿನಲ್ಲೇ ನೆಲೆಸಿದರು. ಇದು ಯೆರೂಸಲೇಮಿನಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿತ್ತು. ಯೋಸೇಫನು ಬಡವನಾಗಿದ್ದರೂ ಹೆಂಡತಿ, ಮಗನಿಗೆ ಯಾವುದಕ್ಕೂ ಕೊರತೆಯಾಗದಂತೆ, ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ತನ್ನಿಂದಾದುದೆಲ್ಲವನ್ನು ಮಾಡಿದನು. ಸ್ವಲ್ಪ ಸಮಯದಲ್ಲೇ ವಾಸಕ್ಕಾಗಿ ಅವರಿಗೊಂದು ಚಿಕ್ಕ ಮನೆ ಸಿಕ್ಕಿತ್ತು. ಹೀಗೆ ಸುಮಾರು ಒಂದು ವರ್ಷಕ್ಕಿಂತ ಹೆಚ್ಚು ಸಮಯ ದಾಟಿತು. ಆಗ ಯೇಸು ನವಜಾತ ಕೂಸಾಗಿರಲಿಲ್ಲ. ಇದ್ದಕ್ಕಿದ್ದಂತೆ ಪುನಃ ಒಮ್ಮೆ ಅವರ ಬದುಕು ಬದಲಾಯಿತು.

7 ಪೂರ್ವದಿಂದ ಅಂದರೆ ಬಹುಶಃ ದೂರದ ಬಾಬೆಲಿನಿಂದ ಕೆಲವು ಜ್ಯೋತಿಷಿಗಳು ಯೋಸೇಫ ಮತ್ತು ಮರಿಯಳ ಮನೆಗೆ ಬಂದರು. ಇವರು ಒಂದು ನಕ್ಷತ್ರವನ್ನು ಹಿಂಬಾಲಿಸುತ್ತಾ ಅಲ್ಲಿಗೆ ತಲಪಿದರು. ಮುಂದೆ ಯೆಹೂದ್ಯರ ಅರಸನಾಗಲಿದ್ದ ಮಗುವನ್ನು ಹುಡುಕಿಕೊಂಡು ಬಂದಿದ್ದ ಅವರು ಆ ಮಗುವಿಗೆ ತುಂಬ ಗೌರವ ತೋರಿಸಿದರು.

8 ಆದರೆ ಆ ಜ್ಯೋತಿಷಿಗಳು ತಿಳಿದೊ ತಿಳಿಯದೆಯೊ ಪುಟ್ಟ ಯೇಸುವಿನ ಜೀವಕ್ಕೆ ಸಂಚಕಾರ ತಂದೊಡ್ಡಿದ್ದರು. ಹೇಗೆ? ಅವರು ಯಾವ ನಕ್ಷತ್ರವನ್ನು ಹಿಂಬಾಲಿಸಿಕೊಂಡು ಬಂದಿದ್ದರೊ ಅದು ಅವರನ್ನು ನೇರವಾಗಿ ಬೇತ್ಲೆಹೇಮಿಗಲ್ಲ ಬದಲಾಗಿ ಮೊದಲು ಯೆರೂಸಲೇಮಿಗೆ ನಡಿಸಿತ್ತು. * ಅಲ್ಲಿ ಅವರು ದುಷ್ಟ ರಾಜನಾದ ಹೆರೋದನಿಗೆ ತಾವು ಒಂದು ಮಗುವನ್ನು ಹುಡುಕಿಕೊಂಡು ಬಂದಿದ್ದೇವೆ, ಆ ಮಗು ಮುಂದೆ ಯೆಹೂದ್ಯರ ರಾಜನಾಗಲಿದ್ದಾನೆ ಎಂದು ಹೇಳಿದರು. ಇದನ್ನು ಕೇಳಿ ರಾಜನಿಗೆ ಹೊಟ್ಟೆಕಿಚ್ಚಾಗಿ ದ್ವೇಷ ಕೆರಳಿತು.

9-11. (1) ಹೆರೋದ ಮತ್ತು ಸೈತಾನನಿಗಿಂತ ಹೆಚ್ಚು ಬಲಾಢ್ಯನಾದ ಯೆಹೋವನು ಹೇಗೆಲ್ಲ ಸಹಾಯಮಾಡಿದನು? (2) ಯೋಸೇಫನ ಕುಟುಂಬ ಈಜಿಪ್ಟಿಗೆ ಮಾಡಿದ ಪ್ರಯಾಣವು ಅಪಾಕ್ರಿಫಲ್‌ ಪುಸ್ತಕಗಳಲ್ಲಿನ ವರ್ಣನೆಗಿಂತ ಭಿನ್ನವಾಗಿತ್ತು ಹೇಗೆ?

9 ಸಂತೋಷದ ಸಂಗತಿಯೇನೆಂದರೆ ಹೆರೋದ ಹಾಗೂ ಸೈತಾನನಿಗಿಂತ ಹೆಚ್ಚು ಬಲಾಢ್ಯನಾಗಿದ್ದ ಯೆಹೋವನೇ ಈ ಕುಟುಂಬಕ್ಕೆ ಸಹಾಯಕ್ಕಿದ್ದನು. ಹೇಗೆಂದು ನೋಡೋಣ. ಆ ಸಂದರ್ಶಕರು ಯೋಸೇಫನ ಮನೆ ತಲಪಿದಾಗ ತಾಯಿ ಜೊತೆಯಿದ್ದ ಯೇಸುವನ್ನು ನೋಡಿ ತಂದಿದ್ದ ಉಡುಗೊರೆಗಳನ್ನು ಕೊಟ್ಟರು. ಪ್ರತಿಯಾಗಿ ಏನನ್ನೂ ಕೇಳಿಕೊಳ್ಳಲಿಲ್ಲ. ಯೋಸೇಫ ಮತ್ತು ಮರಿಯಳಿಗೆ ಒಮ್ಮಿಂದೊಮ್ಮೆಲೇ ಅತ್ಯಮೂಲ್ಯ ವಸ್ತುಗಳಾದ “ಚಿನ್ನ ಧೂಪ ಮತ್ತು ರಕ್ತಬೋಳ” ಸಿಕ್ಕಿದಾಗ ಕಸಿವಿಸಿ ಆಗಿರಬಹುದು. ಜ್ಯೋತಿಷಿಗಳು ವಾಪಸ್‌ ರಾಜ ಹೆರೋದನ ಬಳಿ ಹೋಗಿ ಮಗುವನ್ನು ಯಾವ ಸ್ಥಳದಲ್ಲಿ ನೋಡಿದ್ದೇವೆಂದು ಹೇಳಬೇಕೆಂದಿದ್ದರು. ಆದರೆ ಯೆಹೋವನು ಮಧ್ಯ ಪ್ರವೇಶಿಸಿ, ಅವರು ಅಲ್ಲಿಗೆ ಹೋಗದೆ ಇನ್ನೊಂದು ಮಾರ್ಗವಾಗಿ ಮನೆಗೆ ಹಿಂದಿರುಗಬೇಕೆಂದು ಅವರ ಕನಸಲ್ಲಿ ಅಪ್ಪಣೆಕೊಟ್ಟನು.—ಮತ್ತಾಯ 2:1-12 ಓದಿ.

10 ಜ್ಯೋತಿಷಿಗಳು ಹಾಗೇ ಮಾಡಿದರು. ಸ್ವಲ್ಪದರಲ್ಲೇ ಯೋಸೇಫನಿಗೆ ಯೆಹೋವನ ದೂತನೊಬ್ಬನು “ನೀನು ಎದ್ದು ಮಗುವನ್ನೂ ಅದರ ತಾಯಿಯನ್ನೂ ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು; ನಾನು ಹೇಳುವ ತನಕ ಅಲ್ಲಿಯೇ ಇರು. ಏಕೆಂದರೆ ಮಗುವನ್ನು ಕೊಲ್ಲಲಿಕ್ಕಾಗಿ ಹೆರೋದನು ಅದನ್ನು ಹುಡುಕುವುದರಲ್ಲಿದ್ದಾನೆ” ಎಂದು ಎಚ್ಚರಿಕೆ ಕೊಟ್ಟನು. (ಮತ್ತಾ. 2:13) ಈ ಲೇಖನದ ಆರಂಭದಲ್ಲಿ ನೋಡಿದಂತೆ ಯೋಸೇಫನು ತಕ್ಷಣ ವಿಧೇಯನಾದನು. ತನ್ನ ಮಗುವಿನ ಸುರಕ್ಷೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟನು. ಕುಟುಂಬವನ್ನು ಈಜಿಪ್ಟಿಗೆ ಕೊಂಡೊಯ್ದನು. ಆ ವಿಧರ್ಮಿ ಜ್ಯೋತಿಷಿಗಳಿಂದ ಸಿಕ್ಕಿದ ಬೆಲೆಬಾಳುವ ಉಡುಗೊರೆಗಳು ಪ್ರಯಾಣದ ಖರ್ಚಿಗೆ ಹಾಗೂ ಹೊಸ ಊರಲ್ಲಿ ಜೀವನ ಸಾಗಿಸಲು ಅವನ ಉಪಯೋಗಕ್ಕೆ ಬಂದಿರಬೇಕು.

ತನ್ನ ಮಗುವನ್ನು ಸಂರಕ್ಷಿಸಲು ಯೋಸೇಫ ನಿಸ್ವಾರ್ಥದಿಂದ ನಿರ್ಣಾಯಕ ಕ್ರಮ ಕೈಗೊಂಡ

11 ಅಪಾಕ್ರಿಫಲ್‌ ಪುಸ್ತಕಗಳಲ್ಲಿರುವ ಕಥೆ, ಪುರಾಣಗಳು ಯೋಸೇಫ ತನ್ನ ಕುಟುಂಬವನ್ನು ಈಜಿಪ್ಟಿಗೆ ಕರೆದೊಯ್ದ ವಿಷಯವನ್ನು ಬಣ್ಣಹಚ್ಚಿ ವರ್ಣಿಸಿವೆ. ಆ ಕಥೆಗಳಿಗನುಸಾರ ಪುಟ್ಟ ಯೇಸು ಅದ್ಭುತ ರೀತಿಯಲ್ಲಿ ಆ ಪ್ರಯಾಣವನ್ನು ಮೊಟಕುಗೊಳಿಸಿದನಂತೆ, ದಾರಿಗಳ್ಳರು ತಮಗೆ ಹಾನಿಮಾಡದ ಹಾಗೆ ನೋಡಿಕೊಂಡನಂತೆ, ಖರ್ಜೂರದ ಮರಗಳು ಬಾಗಿ ತನ್ನ ತಾಯಿಗೆ ಹಣ್ಣುಕೊಡುವ ಹಾಗೆ ಮಾಡಿದನಂತೆ. * ಆದರೆ ನಿಜ ಸಂಗತಿ ಅದಲ್ಲ. ಅಪರಿಚಿತ ಊರಿಗೆ ಅವರು ಮಾಡಿದ ಆ ಪ್ರಯಾಣ ದೀರ್ಘವಾಗಿತ್ತು, ಪ್ರಯಾಸಕರವಾಗಿತ್ತು.

ಯೋಸೇಫ ತನ್ನ ಕುಟುಂಬಕ್ಕಾಗಿ ಸ್ವಂತ ಅನುಕೂಲವನ್ನು ತ್ಯಾಗಮಾಡಿದನು

12. ಈ ಅಪಾಯಕಾರಿ ಜಗತ್ತಿನಲ್ಲಿ ಮಕ್ಕಳನ್ನು ಸಾಕಿಸಲಹುತ್ತಿರುವ ಹೆತ್ತವರು ಯೋಸೇಫನಿಂದ ಏನು ಕಲಿಯಬಹುದು?

12 ಹೆತ್ತವರು ಯೋಸೇಫನಿಂದ ಬಹಳಷ್ಟನ್ನು ಕಲಿಯಬಹುದು. ಯೋಸೇಫ ಕುಟುಂಬದ ಸಂರಕ್ಷಣೆಗಾಗಿ ತನ್ನ ಕೆಲಸವನ್ನೆಲ್ಲ ಬದಿಗೊತ್ತಲು ಸಿದ್ಧನಿದ್ದನು. ತನ್ನ ಅನುಕೂಲವನ್ನೂ ತ್ಯಾಗಮಾಡಿದನು. ಇದು ಅವನು ತನ್ನ ಕುಟುಂಬವನ್ನು ಅಮೂಲ್ಯವಾದ ದೇವದತ್ತ ವರವಾಗಿ ವೀಕ್ಷಿಸಿದನೆಂದು ಸ್ಪಷ್ಟವಾಗಿ ತೋರಿಸುತ್ತದೆ. ಇಂದಿನ ಜಗತ್ತು ತುಂಬ ಅಪಾಯಕಾರಿ. ಸೈತಾನನ ಈ ಲೋಕ ತಪ್ಪಾದದ್ದನ್ನೇ ಮಾಡುವಂತೆ ಎಳೆಯರನ್ನು ಪ್ರೇರಿಸುತ್ತದೆ, ಅವರಿಗೆ ಕಷ್ಟವನ್ನು ತಂದೊಡ್ಡುತ್ತದೆ, ಅವರ ಇಡೀ ಬದುಕನ್ನೇ ನಾಶಮಾಡಿಬಿಡುತ್ತದೆ. ಇಂಥ ಒಂದು ಜಗತ್ತಿನಲ್ಲಿ ಹೆತ್ತವರು ಮಕ್ಕಳನ್ನು ಸಾಕಿಸಲಹಬೇಕಾಗಿದೆ. ಮಕ್ಕಳು ಅಂಥ ಪ್ರಭಾವಗಳಿಗೆ ತುತ್ತಾಗದಂತೆ ಸಂರಕ್ಷಿಸಲು ಪ್ರಯಾಸಪಡುತ್ತಾ ಯೋಸೇಫನಂತೆ ಅಪ್ಪಅಮ್ಮಂದಿರು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಾಗ ಅದು ನಿಜಕ್ಕೂ ಪ್ರಶಂಸನೀಯ!

ಕುಟುಂಬವನ್ನು ಪೋಷಿಸಿದ

13, 14. ಯೋಸೇಫ ಮತ್ತು ಮರಿಯ ನಜರೇತಿಗೆ ವಾಪಸ್‌ ಹೋಗುವಂತಾದದ್ದು ಹೇಗೆ?

13 ಈ ಕುಟುಂಬ ಈಜಿಪ್ಟಿನಲ್ಲಿ ತುಂಬ ಸಮಯ ತಂಗಲಿಲ್ಲವೆಂದು ತೋರುತ್ತದೆ. ಏಕೆಂದರೆ ಸ್ವಲ್ಪ ಸಮಯದಲ್ಲೇ ದೇವದೂತನು ಯೋಸೇಫನಿಗೆ ಹೆರೋದ ಮೃತಪಟ್ಟ ಸುದ್ದಿ ಕೊಟ್ಟ. ಯೋಸೇಫ ತನ್ನ ಕುಟುಂಬವನ್ನು ವಾಪಸ್‌ ತಾಯ್ನಾಡಿಗೆ ಕರೆತಂದ. ಯೆಹೋವನು ತನ್ನ ಮಗನನ್ನು ‘ಈಜಿಪ್ಟಿನಿಂದ ಕರೆಯುವನು’ ಎಂದು ಒಂದು ಪ್ರಾಚೀನ ಪ್ರವಾದನೆಯಲ್ಲಿ ಮುಂತಿಳಿಸಲಾಗಿತ್ತು. (ಮತ್ತಾ. 2:15) ಆ ಪ್ರವಾದನೆಯನ್ನು ನೆರವೇರಿಸಲು ಯೋಸೇಫ ನೆರವಾದನು. ಆದರೆ ತನ್ನ ಕುಟುಂಬವನ್ನು ತಾಯ್ನಾಡಲ್ಲಿ ಎಲ್ಲಿಗೆ ಕೊಂಡೊಯ್ದನು?

14 ಯೋಸೇಫ ತುಂಬ ಎಚ್ಚರವಹಿಸಿದನು. ಅವನಿಗೆ ಹೆರೋದನ ಉತ್ತರಾಧಿಕಾರಿ ಅರ್ಖೆಲಾಯನ ಬಗ್ಗೆ ಭಯವಿತ್ತು. ಏಕೆಂದರೆ ಅರ್ಖೆಲಾಯ ತನ್ನ ತಂದೆಯಂತೆಯೇ ಕ್ರೂರಿಯೂ ಕೊಲೆಗಡುಕನೂ ಆಗಿದ್ದ. ಯೋಸೇಫ ದೈವಿಕ ಮಾರ್ಗದರ್ಶನವನ್ನು ಪಾಲಿಸುತ್ತಾ ಯೆರೂಸಲೇಮ್‌ ಮತ್ತು ಅದರಲ್ಲಿರುವ ಎಲ್ಲ ಹಂತಕರಿಂದ ದೂರಕ್ಕೆ ಹೋದನು. ಅಂದರೆ ಉತ್ತರ ದಿಕ್ಕಿನಲ್ಲಿದ್ದ ಗಲಿಲಾಯದಲ್ಲಿ ತನ್ನೂರಾದ ನಜರೇತಿಗೆ ಹಿಂದಿರುಗಿದನು. ಯೋಸೇಫ ಮರಿಯ ಅಲ್ಲೇ ಸಂಸಾರ ಹೂಡಿದರು.—ಮತ್ತಾಯ 2:19-23 ಓದಿ.

15, 16. (1) ಯೋಸೇಫನ ಕೆಲಸ ಯಾವ ರೀತಿಯದ್ದಾಗಿತ್ತು? (2) ಅವನು ಯಾವ್ಯಾವ ಸಲಕರಣೆಗಳನ್ನು ಬಳಸಿರಬಹುದು?

15 ಅವರ ಬದುಕು ಸರಳವಾಗಿತ್ತು. ಸುಲಭವಂತೂ ಆಗಿರಲಿಲ್ಲ. ಯೋಸೇಫ ಬಡಗಿ ಆಗಿದ್ದನೆಂದು ಬೈಬಲ್‌ ಹೇಳುತ್ತದೆ. ಆ ಕಾಲದ ಬಡಗಿಗಳು ತಮ್ಮ ಕೆಲಸಕ್ಕೆ ಬೇಕಾದ ಮರವನ್ನು ತಾವೇ ಕಡಿದು, ಎಳೆದು ತಂದು, ಒಣಗಿಸಬೇಕಿತ್ತು. ಮನೆಗಳನ್ನು, ಚಿಕ್ಕ ಸೇತುವೆಗಳನ್ನು ಕಟ್ಟಲು ಮತ್ತು ದೋಣಿ, ಬಂಡಿ, ಚಕ್ರ, ನೊಗ, ಕೃಷಿ ಸಲಕರಣೆಗಳನ್ನು ತಯಾರಿಸಲು ಆ ಮರವನ್ನು ಬಳಸಲಾಗುತ್ತಿತ್ತು. (ಮತ್ತಾ. 13:55) ಇದು ಕಠಿನವಾದ ದೈಹಿಕ ಶ್ರಮವಾಗಿತ್ತು. ಆ ಕಾಲದ ಬಡಗಿಗಳು ಹೆಚ್ಚಾಗಿ ತಮ್ಮ ಪುಟ್ಟ ಮನೆಯ ಬಾಗಿಲ ಹತ್ತಿರ ಇಲ್ಲವೆ ಮನೆಗೆ ಜೋಡಿಸಿರುವ ಒಂದು ಚಿಕ್ಕ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದರು.

16 ಯೋಸೇಫ ವಿಧವಿಧವಾದ ಸಲಕರಣೆಗಳನ್ನು ಬಳಸುತ್ತಿದ್ದನು. ಇವುಗಳಲ್ಲಿ ಕೆಲವೊಂದನ್ನು ಅವನು ತನ್ನ ತಂದೆಯಿಂದ ಬಳುವಳಿಯಾಗಿ ಪಡೆದುಕೊಂಡಿರಬೇಕು. ಚೌಪಟ್ಟೆ, ತೂಗುಗುಂಡು, ಸುಣ್ಣದ ದಾರ, ಕೈಗೊಡಲಿ, ಗರಗಸ, ಬಡಿಗೆ, ಸುತ್ತಿಗೆ, ಉಳಿ, ರಂಧ್ರ ಕೊರೆಯಲು ಕೈಯಿಂದ ತಿರುಗಿಸಬೇಕಾದ ಬೈರಿಗೆ, ನಾನಾ ತರದ ಅಂಟು ಇದೆಲ್ಲವನ್ನು ಅವನು ಬಳಸಿರಬಹುದು. ಮೊಳೆಗಳು ದುಬಾರಿ ಆಗಿದ್ದರೂ ಕೆಲವನ್ನು ಬಳಸಿರಬಹುದು.

17, 18. (1) ಯೇಸು ತನ್ನ ಸಾಕುತಂದೆಯಿಂದ ಏನು ಕಲಿತನು? (2) ಯೋಸೇಫನು ಇನ್ನೂ ಹೆಚ್ಚು ಶ್ರಮಪಟ್ಟು ದುಡಿಯಬೇಕಾಯಿತು ಏಕೆ?

17 ಪುಟ್ಟ ಬಾಲಕನಾಗಿದ್ದ ಯೇಸು ತನ್ನ ಸಾಕುತಂದೆ ಕೆಲಸಮಾಡುತ್ತಿದ್ದಾಗ ನೋಡುತ್ತಾ ನಿಂತಿರುವುದನ್ನು ಸ್ವಲ್ಪ ಊಹಿಸಿ. ಯೋಸೇಫನ ಒಂದೊಂದು ಚಲನೆಯನ್ನೂ ಕಣ್ಣು ಮಿಟುಕಿಸದೆ, ಸೂಕ್ಷ್ಮವಾಗಿ ಗಮನಿಸುತ್ತಿದ್ದಿರಬಹುದು. ಯೋಸೇಫನ ಅಗಲವಾದ ಭುಜಗಳಲ್ಲಿ, ಗಟ್ಟಿಮುಟ್ಟಾದ ತೋಳುಗಳಲ್ಲಿ ಇದ್ದ ಬಲ, ಕೈಗಳಲ್ಲಿನ ಚಾಕಚಕ್ಯತೆ, ಕಣ್ಣುಗಳಲ್ಲಿನ ಚುರುಕುತನ ಇವೆಲ್ಲವನ್ನೂ ಬಾಲಕ ಯೇಸು ತುಂಬ ಹೆಮ್ಮೆಯಿಂದ ನೋಡುತ್ತಾ ಇದ್ದನೇನೊ. ಯೋಸೇಫ ತನ್ನ ಈ ಎಳೆಯ ಮಗನಿಗೆ ಚಿಕ್ಕಪುಟ್ಟ ಕೆಲಸಗಳನ್ನು ಕಲಿಸಲಾರಂಭಿಸಿರಬಹುದು. ಉದಾಹರಣೆಗೆ, ಒಣಗಿದ ಮೀನಿನ ಚರ್ಮ ಬಳಸಿ ಮರದ ಒರಟಾದ ಮೇಲ್ಮೈಯನ್ನು ನುಣುಪಾಗಿಸುವುದು ಹೇಗೆಂದು ಆತ ತೋರಿಸಿಕೊಟ್ಟಿರಬೇಕು. ತನ್ನ ಕೆಲಸದಲ್ಲಿ ಬಳಸುತ್ತಿದ್ದ ಸಿಕಮೋರ್‌ ಅಂಜೂರ ಮರ, ಓಕ್‌ ಮರ, ಆಲಿವ್‌ ಮರ ಇತ್ಯಾದಿ ಮರಗಳ ನಡುವಿನ ವ್ಯತ್ಯಾಸಗಳನ್ನು ಅವನಿಗೆ ಹೇಳಿಕೊಟ್ಟಿರಬಹುದು.

ಯೋಸೇಫ ತನ್ನ ಮಗನಿಗೆ ಬಡಗಿಯಾಗಲು ತರಬೇತಿಕೊಟ್ಟನು

18 ಮರಗಳನ್ನು ಕಡಿದುಹಾಕುತ್ತಿದ್ದ, ತೊಲೆಗಳನ್ನು ತಯಾರಿಸುತ್ತಿದ್ದ, ಒಂದಕ್ಕೊಂದು ಜೋಡಿಸಲು ಮರದ ತುಂಡುಗಳ ಮೇಲೆ ಜೋರಾಗಿ ಹೊಡೆಯುತ್ತಿದ್ದ ಅದೇ ಬಲಿಷ್ಠ ಕೈಗಳು ತನ್ನನ್ನು, ಅಮ್ಮನನ್ನು, ಒಡಹುಟ್ಟಿದವರನ್ನು ಪ್ರೀತಿಯಿಂದ ಕೋಮಲವಾಗಿ ನೇವರಿಸುವ, ಸಂತೈಸುವ ಕೈಗಳೂ ಆಗಿರುವುದನ್ನು ಯೇಸು ಕಂಡುಕೊಂಡನು. ಯೋಸೇಫ ಮತ್ತು ಮರಿಯಳ ಕುಟುಂಬವು ದೊಡ್ಡದಾಗುತ್ತಾ ಹೋಯಿತು. ಯೇಸುವಲ್ಲದೆ ಅವರಿಗೆ ಕಡಿಮೆಪಕ್ಷ ಆರು ಮಕ್ಕಳು ಇದ್ದರು. (ಮತ್ತಾ. 13:55, 56) ಆದ್ದರಿಂದ ಅವರೆಲ್ಲರನ್ನು ನೋಡಿಕೊಳ್ಳಲಿಕ್ಕಾಗಿ ಯೋಸೇಫನು ಇನ್ನೂ ಹೆಚ್ಚು ಶ್ರಮಪಟ್ಟು ದುಡಿಯಬೇಕಾಯಿತು.

ಕುಟುಂಬದ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವುದೇ ಅತಿ ಪ್ರಾಮುಖ್ಯವೆಂದು ಯೋಸೇಫ ಅರಿತಿದ್ದನು

19. ಯೋಸೇಫ ತನ್ನ ಕುಟುಂಬದ ಆಧ್ಯಾತ್ಮಿಕ ಅಗತ್ಯಗಳನ್ನು ಹೇಗೆ ಪೂರೈಸಿದನು?

19 ಕುಟುಂಬದ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವುದೇ ಎಲ್ಲಕ್ಕಿಂತ ಪ್ರಾಮುಖ್ಯವೆಂದು ಯೋಸೇಫ ಅರಿತಿದ್ದನು. ಆದ್ದರಿಂದ ತನ್ನ ಮಕ್ಕಳಿಗೆ ಯೆಹೋವ ದೇವರ ಬಗ್ಗೆ, ಆತನ ನಿಯಮಗಳ ಬಗ್ಗೆ ಕಲಿಸಲು ಸಮಯ ಕೊಟ್ಟನು. ಅವನೂ ಮರಿಯಳೂ ಸೇರಿ ಮಕ್ಕಳನ್ನು ಸ್ಥಳೀಯ ಸಭಾಮಂದಿರಕ್ಕೆ ನಿಯತವಾಗಿ ಕರಕೊಂಡು ಹೋಗುತ್ತಿದ್ದರು. ಅಲ್ಲಿ ಧರ್ಮಶಾಸ್ತ್ರವನ್ನು ಗಟ್ಟಿಯಾಗಿ ಓದಿ ವಿವರಿಸಲಾಗುತ್ತಿತ್ತು. ಅಲ್ಲಿಂದ ಹೊರಟು ಬರುವಾಗ ಬಹುಶಃ ಯೇಸು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದಿರಬಹುದು. ಯೋಸೇಫನು ತನ್ನಿಂದ ಆದಷ್ಟು ಮಟ್ಟಿಗೆ ಆ ಹುಡುಗನ ಆಧ್ಯಾತ್ಮಿಕ ಹಸಿವನ್ನು ನೀಗಿಸಲು ಪ್ರಯತ್ನಿಸಿದ್ದಿರಬಹುದು. ಯೋಸೇಫ ತನ್ನ ಕುಟುಂಬವನ್ನು ಯೆರೂಸಲೇಮಿನಲ್ಲಿ ನಡೆಯುತ್ತಿದ್ದ ಧಾರ್ಮಿಕ ಹಬ್ಬಗಳಿಗೂ ಕರೆದೊಯ್ದನು. ವಾರ್ಷಿಕ ಪಸ್ಕಹಬ್ಬಕ್ಕಾಗಿ ಯೆರೂಸಲೇಮಿಗೆ ಸುಮಾರು 120 ಕಿ.ಮೀ. ದೂರ ಪ್ರಯಾಣಿಸಿ, ಹಬ್ಬ ಆಚರಿಸಿ, ಮನೆಗೆ ವಾಪಸಾಗಲು ಅವರಿಗೆ ಬಹುಶಃ ಎರಡು ವಾರಗಳು ಹಿಡಿಯುತ್ತಿತ್ತು.

ಯೋಸೇಫ ತನ್ನ ಕುಟುಂಬವನ್ನು ನಿಯತವಾಗಿ ಯೆರೂಸಲೇಮಿನಲ್ಲಿದ್ದ ಆಲಯಕ್ಕೆ ಆರಾಧನೆಗೆಂದು ಕರಕೊಂಡು ಹೋಗುತ್ತಿದ್ದ

20. ಕ್ರೈಸ್ತ ಕುಟುಂಬದ ಶಿರಸ್ಸುಗಳು ಯೋಸೇಫನ ಮಾದರಿಯನ್ನು ಹೇಗೆ ಅನುಸರಿಸಬಲ್ಲರು?

20 ಇಂದು ಕ್ರೈಸ್ತ ಕುಟುಂಬದ ಶಿರಸ್ಸುಗಳು ಯೋಸೇಫನಂತೆಯೇ ಮಾಡುತ್ತಾರೆ. ತಮ್ಮ ಮಕ್ಕಳಿಗಾಗಿ ತಮ್ಮನ್ನೇ ಕೊಟ್ಟುಕೊಳ್ಳುತ್ತಾರೆ. ಆದರೆ ಭೌತಿಕ ಸುಖಸೌಕರ್ಯವನ್ನು ಒದಗಿಸುವುದಕ್ಕಿಂತಲೂ ಹೆಚ್ಚಾಗಿ ಆಧ್ಯಾತ್ಮಿಕ ತರಬೇತಿ ಕೊಡಲು ಆದ್ಯತೆ ನೀಡುತ್ತಾರೆ. ತಪ್ಪದೇ ಕುಟುಂಬ ಆರಾಧನೆ ನಡೆಸಲು ಹಾಗೂ ಮಕ್ಕಳನ್ನು ಕೂಟಗಳಿಗೆ, ಸಮ್ಮೇಳನಗಳಿಗೆ ಕರಕೊಂಡು ಹೋಗಲು ತಮ್ಮಿಂದಾದುದ್ದೆಲ್ಲವನ್ನು ಮಾಡುತ್ತಾರೆ. ತಮ್ಮ ಮಕ್ಕಳಿಗೆ ಆಧ್ಯಾತ್ಮಿಕ ತರಬೇತಿ ಕೊಡುವುದಕ್ಕಿಂತ ಮಿಗಿಲಾದದ್ದು ಬೇರಾವುದೂ ಇಲ್ಲವೆಂದು ಯೋಸೇಫನಂತೆ ಅವರಿಗೂ ತಿಳಿದಿದೆ.

“ಮನೋವ್ಯಥೆ”

21. (1) ಯೋಸೇಫನ ಕುಟುಂಬಕ್ಕೆ ಪಸ್ಕಹಬ್ಬ ಎಂಥ ಸಮಯ ಆಗಿರುತ್ತಿತ್ತು? (2) ಯೇಸು ತಮ್ಮ ಜೊತೆ ಇಲ್ಲವೆಂದು ಯೋಸೇಫ ಮತ್ತು ಮರಿಯಳಿಗೆ ಗೊತ್ತಾದದ್ದು ಯಾವಾಗ?

21 ಯೇಸುವಿಗೆ 12 ವರ್ಷವಾಗಿದ್ದಾಗ ಯೋಸೇಫ ಪ್ರತಿ ವರ್ಷದಂತೆ ಕುಟುಂಬವನ್ನು ಯೆರೂಸಲೇಮಿಗೆ ಕರಕೊಂಡು ಹೋದ. ಪಸ್ಕಹಬ್ಬ ಸಂತೋಷಸಂಭ್ರಮದ ಸಮಯ ಆಗಿರುತ್ತಿತ್ತು. ದೊಡ್ಡ ದೊಡ್ಡ ಕುಟುಂಬಗಳು ಒಟ್ಟೊಟ್ಟಾಗಿ ಹಸಿರಾದ ಹಳ್ಳಿಗಾಡು ಪ್ರದೇಶಗಳ ಮಾರ್ಗವಾಗಿ ಪ್ರಯಾಣಿಸುತ್ತಿದ್ದವು. ಗುಡ್ಡದ ಮೇಲಿದ್ದ ಯೆರೂಸಲೇಮಿನ ಸಮೀಪದಲ್ಲಿ ಬರಡಾದ ಕ್ಷೇತ್ರಗಳಿದ್ದವು. ಇವುಗಳನ್ನು ದಾಟುವಾಗ ಅನೇಕರು ಯಾತ್ರಾಗೀತಗಳನ್ನು ಹಾಡುತ್ತಿದ್ದರು. (ಕೀರ್ತ. 120–134) ಹಬ್ಬದ ಸಮಯದಲ್ಲಿ ಯೆರೂಸಲೇಮ್‌ ನಗರ ಸಾವಿರಾರು ಜನರಿಂದ ಕಿಕ್ಕಿರಿಯುತ್ತಿತ್ತು. ಹಬ್ಬ ಆಚರಿಸಿ ಈ ಕುಟುಂಬಗಳು ಮನೆಯ ದಾರಿ ಹಿಡಿಯುತ್ತಿದ್ದವು. ಈ ಬಾರಿ ಹಿಂದಿರುಗುತ್ತಿದ್ದಾಗಲೂ ಯೋಸೇಫ ಮತ್ತು ಮರಿಯಳಿಗೆ ಹತ್ತಾರು ವಿಷಯಗಳನ್ನು ನೋಡಿಕೊಳ್ಳಲಿಕ್ಕಿತ್ತು. ಯೇಸು ಬೇರೆಯವರೊಟ್ಟಿಗೆ ಬಹುಶಃ ಸಂಬಂಧಿಕರ ಜತೆ ಇದ್ದಾನೆಂದು ಅವರು ನೆನಸಿದರು. ಒಂದು ಇಡೀ ದಿನ ಪ್ರಯಾಣ ಮಾಡಿದ ನಂತರ ಯೇಸು ತಮ್ಮ ಜೊತೆ ಇಲ್ಲ ಅಂತ ಅವರಿಗೆ ಗೊತ್ತಾಯಿತು. ಆಗ ಅವರ ಹೃದಯ ಧಸ್ಸಕ್ಕೆಂದಿರಬೇಕು!—ಲೂಕ 2:41-44.

22, 23. (1) ಮಗ ತಮ್ಮ ಜೊತೆ ಇಲ್ಲವೆಂದು ಯೋಸೇಫ ಮತ್ತು ಮರಿಯಳಿಗೆ ಗೊತ್ತಾದಾಗ ಏನು ಮಾಡಿದರು? (2) ಅವನು ಸಿಕ್ಕಿದಾಗ ಮರಿಯಳು ಏನಂದಳು?

22 ಗಾಬರಿಯಿಂದ ಎದ್ದುಬಿದ್ದು ವಾಪಸ್‌ ಯೆರೂಸಲೇಮಿಗೆ ಓಡಿದರು. ಅವರು ಏನೆಲ್ಲ ಮಾಡಿರಬಹುದೆಂದು ಸ್ವಲ್ಪ ಕಣ್ಮುಂದೆ ತಂದುಕೊಳ್ಳಿ: ಎಲ್ಲಾ ಕಡೆ ಮಗನಿಗಾಗಿ ಹುಡುಕಿದರು. ಅವನ ಹೆಸರನ್ನು ಕೂಗುತ್ತಾ ಆ ನಗರದ ಬೀದಿ ಬೀದಿಗಳಲ್ಲಿ ತಿರುಗಿದರು. ಅವರ ಕಣ್ಣುಗಳು ಮಗನನ್ನಷ್ಟೇ ಹುಡುಕುತ್ತಿದ್ದವು, ಬೇರಾವುದರ ಪರಿವೆಯೇ ಅವರಿಗಿರಲಿಲ್ಲ. ಮಗ ಎಲ್ಲಿರಬಹುದೆಂಬ ಚಿಂತೆ ಹೆಚ್ಚುತ್ತಾ ಹೋಯಿತು. ಈ ಹುಡುಕಾಟದಲ್ಲಿ ಎರಡು ದಿನಗಳೇ ಕಳೆದವು. ಮೂರನೇ ದಿನ ಹುಡುಕುತ್ತಿದ್ದಾಗ ಯೋಸೇಫನಿಗೆ, ಯೆಹೋವನು ತನ್ನ ಕೈಗೆ ಒಪ್ಪಿಸಿದ ಈ ಅಮೂಲ್ಯ ಉಡುಗೊರೆಯನ್ನು ತಾನು ಜೋಕೆವಹಿಸದಿದ್ದ ಕಾರಣವೇ ಹೀಗಾಯಿತೇನೊ ಎಂಬ ಸಂದೇಹ ಮನಸ್ಸಲ್ಲಿ ಮೂಡಿರಬಹುದೇ? ಕೊನೆಗೆ ಗಂಡಹೆಂಡತಿ ಇಬ್ಬರೂ ಆಲಯಕ್ಕೆ ಹೋದರು. ಎಲ್ಲಾ ಕಡೆ ಹುಡುಕುತ್ತಾ ಹುಡುಕುತ್ತಾ ಒಂದು ದೊಡ್ಡ ಕೋಣೆಗೆ ಬಂದಾಗ ಧರ್ಮಶಾಸ್ತ್ರ ಪಂಡಿತರಾಗಿದ್ದ ಅನೇಕ ಶಿಕ್ಷಿತ ಪುರುಷರ ಮಧ್ಯೆ ಯೇಸು ಕೂತಿರುವುದು ಕಣ್ಣಿಗೆ ಬಿತ್ತು. ಅವನನ್ನು ನೋಡಿ ಯೋಸೇಫ ಮತ್ತು ಮರಿಯಳಿಗೆ ಹೋದ ಜೀವ ಬಂದಂತಾಗಿರಬೇಕು!—ಲೂಕ 2:45, 46.

23 ಯೇಸು ಆ ಶಿಕ್ಷಿತ ಜನರ ಮಾತನ್ನು ಆಲಿಸುತ್ತಾ ಇದ್ದನು. ಒಂದರ ನಂತರ ಒಂದು ಪ್ರಶ್ನೆಗಳನ್ನೂ ಕೇಳುತ್ತಿದ್ದನು. ಈ ಬಾಲಕನ ತಿಳುವಳಿಕೆ, ಅವನು ಕೊಡುತ್ತಿದ್ದ ಉತ್ತರಗಳನ್ನು ಕೇಳಿ ಆ ಪುರುಷರು ಮೂಗಿನ ಮೇಲೆ ಬೆರಳಿಟ್ಟರು. ಮಗ ಹೀಗೆ ಮಾತಾಡುತ್ತಿರುವುದನ್ನು ಕಂಡು ಯೋಸೇಫ ಮತ್ತು ಮರಿಯ ದಂಗಾದರು. ಈ ಸಂದರ್ಭದಲ್ಲಿ ಯೋಸೇಫ ಯೇಸುವಿಗೆ ಏನಂದನು ಎಂಬ ಬಗ್ಗೆ ಬೈಬಲಿನಲ್ಲಿ ಏನೂ ದಾಖಲಾಗಿಲ್ಲ. ಆದರೆ ಅವರಿಬ್ಬರೂ ಈ ವರೆಗೆ ಅನುಭವಿಸಿದ ಸಂಕಟವನ್ನು ಮರಿಯಳು ಆಡಿದ ಈ ಮಾತುಗಳು ಹೊರಗೆಡಹಿದವು: “ಕಂದಾ, ನೀನು ಏಕೆ ಹೀಗೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಮನೋವ್ಯಥೆಯಿಂದ ನಿನ್ನನ್ನು ಹುಡುಕುತ್ತಾ ಇದ್ದೆವು.”—ಲೂಕ 2:47, 48.

24. ಹೆತ್ತವರ ಜವಾಬ್ದಾರಿಯ ಬಗ್ಗೆ ಬೈಬಲ್‌ ಯಾವ ನೈಜ ಚಿತ್ರಣ ಕೊಡುತ್ತದೆ?

24 ಬೈಬಲಿನ ಈ ವೃತ್ತಾಂತವು ಹೆತ್ತವರ ಜವಾಬ್ದಾರಿ ತುಂಬ ಒತ್ತಡಭರಿತ ಎಂಬ ನೈಜ ಚಿತ್ರಣವನ್ನು ಕೊಡುತ್ತದೆ. ಪರಿಪೂರ್ಣ ಮಗನಿದ್ದ ಯೋಸೇಫ ಮತ್ತು ಮರಿಯಳಿಗೇ ಆ ಜವಾಬ್ದಾರಿ ಒತ್ತಡದಾಯಕವಾಗಿತ್ತು! ಇಂದಿನ ಅಪಾಯಕಾರಿ ಜಗತ್ತಿನಲ್ಲಂತೂ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಬಹಳಷ್ಟು ‘ಮನೋವ್ಯಥೆ’ ತರಬಲ್ಲದು. ಹಾಗಿದ್ದರೂ, ಈ ದೊಡ್ಡ ಸವಾಲು ಹೆತ್ತವರ ಮುಂದಿರುವುದನ್ನು ಬೈಬಲ್‌ ಒಪ್ಪಿಕೊಳ್ಳುತ್ತದೆಂಬ ಸಂಗತಿ ಅಪ್ಪಅಮ್ಮಂದಿರಿಗೆ ಸಮಾಧಾನ ತರುತ್ತದೆ.

25, 26. (1) ಯೇಸು ತನ್ನ ಹೆತ್ತವರಿಗೆ ಏನು ಉತ್ತರ ಕೊಟ್ಟನು? (2) ತನ್ನ ಮಗನಾಡಿದ ಮಾತುಗಳ ಬಗ್ಗೆ ಯೋಸೇಫನಿಗೆ ಹೇಗನಿಸಿರಬೇಕು?

25 ಯೇಸುವಿಗೆ ಸ್ವರ್ಗದಲ್ಲಿನ ತನ್ನ ತಂದೆಯಾದ ಯೆಹೋವನ ಹತ್ತಿರವಿದ್ದೇನೆ ಎಂಬ ಭಾವನೆ ಬರಿಸುತ್ತಿದ್ದ ಏಕೈಕ ಸ್ಥಳ ಆ ಆಲಯವಾಗಿತ್ತು. ಹಾಗಾಗಿ ಅಲ್ಲೇ ಉಳಿದಿದ್ದನು. ಅಲ್ಲಿ ಅವನು ಯೆಹೋವನ ಬಗ್ಗೆ ತನ್ನಿಂದ ಸಾಧ್ಯವಿರುವುದೆಲ್ಲವನ್ನು ಕಲಿಯಲು ಸಹ ಸಂತೋಷಪಟ್ಟನು. ಆದ್ದರಿಂದ ಹೀಗೆ ಉತ್ತರಿಸಿದನು: “ನೀವು ನನ್ನನ್ನು ಹುಡುಕುತ್ತಾ ಹೋದದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿರಬೇಕು ಎಂಬುದು ನಿಮಗೆ ತಿಳಿದಿರಲಿಲ್ಲವೊ?” ಇದನ್ನು ಅಗೌರವದಿಂದಲ್ಲ, ಬದಲಾಗಿ ಅವರಿಗದು ಯಾಕೆ ಅರ್ಥವಾಗಲಿಲ್ಲವೆಂದು ಮುಗ್ಧತೆಯಿಂದ ಕೇಳಿದನು.—ಲೂಕ 2:49.

26 ಆ ಮಾತುಗಳನ್ನು ಯೋಸೇಫನು ಖಂಡಿತವಾಗಿ ಮೆಲುಕುಹಾಕಿದನು. ಅದರ ಬಗ್ಗೆ ಯೋಚಿಸಿದಾಗೆಲ್ಲ ಹೆಮ್ಮೆಯಿಂದ ಬೀಗಿರಲೂಬಹುದು. ಏಕೆಂದರೆ ಯೆಹೋವ ದೇವರ ಬಗ್ಗೆ ತನ್ನ ದತ್ತು ಪುತ್ರನಿಗೆ ಆ ರೀತಿಯ ಭಾವನೆ ಬರುವಂತೆ ಶ್ರದ್ಧೆಯಿಂದ ಬೋಧಿಸಿದವನು ಅವನೇ ಅಲ್ಲವೇ? ಬಾಲಕನಾಗಿದ್ದ ಯೇಸುವಿನಲ್ಲಿ ಆ ವಯಸ್ಸಿನಷ್ಟಕ್ಕೆ “ತಂದೆ” ಎಂಬ ಪದ ಕೇಳಿದೊಡನೆ ಪ್ರೀತಿತುಂಬಿದ ಭಾವನೆಗಳು ಉಕ್ಕುತ್ತಿದ್ದವು. ಅವನಲ್ಲಿ ಈ ರೀತಿಯ ಭಾವನೆಗಳು ಹುಟ್ಟಲು ಒಂದು ಕಾರಣ ಯೋಸೇಫ ಒಬ್ಬ ಒಳ್ಳೇ ತಂದೆ ಆಗಿದ್ದದ್ದೇ.

27. (1) ನೀವು ತಂದೆಯಾಗಿದ್ದರೆ ಯಾವ ಸುಯೋಗ ನಿಮಗಿದೆ? (2) ನೀವೇಕೆ ಯೋಸೇಫನ ಮಾದರಿಯನ್ನು ನೆನಪಿನಲ್ಲಿಡಬೇಕು?

27 ನೀವೊಬ್ಬ ತಂದೆಯಾಗಿದ್ದರೆ ಯೆಹೋವನು ಸಂರಕ್ಷಿಸುವ, ಪ್ರೀತಿಸುವ ತಂದೆಯಾಗಿದ್ದಾನೆಂದು ಮಕ್ಕಳಿಗೆ ಮನಗಾಣಿಸುವ ಸುಯೋಗ ನಿಮಗಿದೆ. ಇದನ್ನು ಸ್ವತಃ ನೀವೇ ಒಬ್ಬ ಒಳ್ಳೇ ತಂದೆಯಾಗಿದ್ದು ಅವರನ್ನು ಪ್ರೀತಿಸಿ, ಸಂರಕ್ಷಿಸುವ ಮೂಲಕ ಮಾಡಬಹುದು. ಒಂದುವೇಳೆ ನಿಮಗೆ ಮಲಮಕ್ಕಳು ಇಲ್ಲವೆ ದತ್ತು ಮಕ್ಕಳು ಇರುವಲ್ಲಿ ಯೋಸೇಫನ ಮಾದರಿಯನ್ನು ನೆನಪಿಟ್ಟು ಒಂದೊಂದು ಮಗುವನ್ನೂ ವಿಶಿಷ್ಟವೆಂದೂ ಅಮೂಲ್ಯವೆಂದೂ ಪರಿಗಣಿಸಿ. ಆ ಮಕ್ಕಳು ಸ್ವರ್ಗದಲ್ಲಿರುವ ಅವರ ತಂದೆಯಾದ ಯೆಹೋವ ದೇವರಿಗೆ ಆಪ್ತರಾಗಲು ಸಹಾಯಮಾಡಿ.—ಎಫೆಸ 6:4 ಓದಿ.

ನಂಬಿಗಸ್ತಿಕೆಯಿಂದ ಪಟ್ಟುಹಿಡಿದ

28, 29. (1) ಲೂಕ 2:51, 52 ರಲ್ಲಿರುವ ಮಾತುಗಳಿಂದ ಯೋಸೇಫನ ಬಗ್ಗೆ ಏನು ಗೊತ್ತಾಗುತ್ತದೆ? (2) ಯೇಸು ವಿವೇಕದಲ್ಲಿ ಪ್ರಗತಿಹೊಂದುವುದರಲ್ಲಿ ಯೋಸೇಫನ ಪಾತ್ರವೇನಾಗಿತ್ತು?

28 ಯೋಸೇಫನ ಬದುಕಿನ ಉಳಿದ ಭಾಗದ ಬಗ್ಗೆ ಬೈಬಲಿನಿಂದ ಸಿಗುವ ಸುಳಿವುಗಳು ಕೆಲವೇ. ಆದರೆ ಅವುಗಳನ್ನು ಗಮನಕೊಟ್ಟು ಪರಿಗಣಿಸುವುದು ತುಂಬ ಪ್ರಯೋಜನಕರ. ಯೇಸು ತನ್ನ ಹೆತ್ತವರಿಗೆ “ಅಧೀನನಾಗಿ ಮುಂದುವರಿದನು” ಎಂದು ಬೈಬಲ್‌ ಹೇಳುತ್ತದೆ. ಅವನು “ವಿವೇಕದಲ್ಲಿಯೂ ಶಾರೀರಿಕ ಬೆಳವಣಿಗೆಯಲ್ಲಿಯೂ ದೇವರ ಮತ್ತು ಮನುಷ್ಯರ ಅನುಗ್ರಹದಲ್ಲಿಯೂ ಪ್ರಗತಿಹೊಂದುತ್ತಾ ಹೋದನು” ಎಂದೂ ತಿಳಿಸುತ್ತದೆ. (ಲೂಕ 2:51, 52 ಓದಿ.) ಈ ಮಾತುಗಳಿಂದ ಯೋಸೇಫನ ಬಗ್ಗೆ ಏನು ಗೊತ್ತಾಗುತ್ತದೆ? ಹಲವಾರು ಸಂಗತಿಗಳು. ಪರಿಪೂರ್ಣ ಮಗನಾಗಿದ್ದ ಯೇಸು ತನ್ನ ಸಾಕುತಂದೆಯ ಅಧಿಕಾರವನ್ನು ಗೌರವಿಸುತ್ತಾ ಅಧೀನನಾಗಿದ್ದ ವಿಷಯದಿಂದ ಕುಟುಂಬದಲ್ಲಿ ಯೋಸೇಫ ಮುಂದಾಳತ್ವ ವಹಿಸುವುದನ್ನು ಮುಂದುವರಿಸಿದನೆಂದು ಗೊತ್ತಾಗುತ್ತದೆ.

29 ಯೇಸು ವಿವೇಕದಲ್ಲಿಯೂ ಪ್ರಗತಿಹೊಂದಿದನೆಂದು ಬೈಬಲ್‌ ಹೇಳುತ್ತದೆ. ಇದರಲ್ಲಿ ಯೋಸೇಫ ಪ್ರಾಮುಖ್ಯ ಪಾತ್ರ ವಹಿಸಿದ್ದನು. ಆ ಕಾಲದ ಯೆಹೂದ್ಯರ ನಡುವೆ ಒಂದು ಪ್ರಾಚೀನ ಗಾದೆ ಬಳಕೆಯಲ್ಲಿತ್ತು. ಅದು ಈಗಲೂ ಪುಸ್ತಕಗಳಲ್ಲಿ ಓದಲು ಸಿಗುತ್ತದೆ. ಆ ಗಾದೆ ಪ್ರಕಾರ, ಧನಿಕ ಹಾಗೂ ಅಧಿಕಾರವುಳ್ಳ ಪುರುಷರು ಮಾತ್ರ ವಿವೇಕಿಗಳಾಗಬಲ್ಲರು. ಬಡಗಿ, ರೈತ, ಕಮ್ಮಾರರಂಥ ಕಸುಬಿನವರೆಲ್ಲ ವಿವೇಕಿಗಳಾಗಸಾಧ್ಯವಿಲ್ಲ. ಹಾಗಾಗಿ ಅವರಿಗೆ ಸರಿತಪ್ಪಿನ ಬಗ್ಗೆ ಅರಿವಿಲ್ಲ, ನ್ಯಾಯ ಮಾಡುವ ಸಾಮರ್ಥ್ಯವಿಲ್ಲ, ಸಾಮ್ಯಗಳ ಚರ್ಚೆ ನಡೆಯುವ ಸ್ಥಳಗಳಲ್ಲಂತೂ ಅಪ್ಪಿತಪ್ಪಿಯೂ ಅವರು ಕಾಣಸಿಗುವುದಿಲ್ಲ. ಆದರೆ ಆ ಗಾದೆ ತಪ್ಪೆಂದು ಯೇಸು ತೋರಿಸಿಕೊಟ್ಟನು. ಅವನು ತುಂಬ ವಿವೇಕಿ ಆಗಿದ್ದನು. ಕಾರಣ ಅವನ ಸಾಕುತಂದೆ ಯೋಸೇಫ ಸಾಧಾರಣ ಬಡಗಿಯಾಗಿದ್ದರೂ ಯೆಹೋವನ ದೃಷ್ಟಿಯಲ್ಲಿ ಯಾವುದು ಸರಿ ಯಾವುದು ತಪ್ಪೆಂದು ಅವನಿಗೆ ಚಿಕ್ಕಂದಿನಿಂದಲೇ ಪರಿಣಾಮಕಾರಿಯಾಗಿ ಬೋಧಿಸಿದ್ದನು.

30. ಇಂದು ಕುಟುಂಬದ ಶಿರಸ್ಸುಗಳಿಗೆ ಯೋಸೇಫ ಹೇಗೆ ಮಾದರಿ ಆಗಿದ್ದಾನೆ?

30 ಯೇಸುವಿನ ಶಾರೀರಿಕ ಬೆಳವಣಿಗೆಯಲ್ಲೂ ಯೋಸೇಫನ ಪಾತ್ರ ಮಹತ್ವದ್ದಾಗಿತ್ತು. ಯೇಸುವಿಗೆ ಒಳ್ಳೇ ಪೋಷಣೆ ಸಿಕ್ಕಿದ್ದರಿಂದಲೇ ಅವನು ಬೆಳೆದಾಗ ಗಟ್ಟಿಮುಟ್ಟಾದ, ಆರೋಗ್ಯವಂತ ಪುರುಷನಾದನು. ತನ್ನ ಈ ಮಗನು ಕೆಲಸದಲ್ಲೂ ನಿಪುಣನಾಗಲು ಯೋಸೇಫ ತರಬೇತು ಕೊಟ್ಟನು. ಆದ್ದರಿಂದಲೇ ಜನರು ಯೇಸುವನ್ನು ಬಡಗಿಯ ಮಗ ಎಂದು ಮಾತ್ರವಲ್ಲ ಸ್ವತಃ ಅವನನ್ನೇ “ಬಡಗಿ” ಎಂದು ಕರೆಯುತ್ತಿದ್ದರು. (ಮಾರ್ಕ 6:3) ಯೋಸೇಫನ ತರಬೇತಿ ಫಲಕಾರಿ ಆಗಿತ್ತೆಂದು ಇದು ತೋರಿಸುತ್ತದೆ. ಇಂದು ಕುಟುಂಬದ ಶಿರಸ್ಸುಗಳು ಯೋಸೇಫನನ್ನು ಅನುಕರಿಸುವುದು ವಿವೇಕಯುತ. ಅವರು ಮಕ್ಕಳ ಶಾರೀರಿಕ ಕ್ಷೇಮ ನೋಡಿಕೊಳ್ಳಬೇಕು, ಜೊತೆಗೆ ಸ್ವಾವಲಂಬಿಗಳಾಗುವಂತೆ ಮಕ್ಕಳಿಗೆ ತರಬೇತಿ ಕೊಡಬೇಕು.

31. (1) ಯೋಸೇಫ ಯಾವಾಗ ಸತ್ತನೆಂಬುದರ ಬಗ್ಗೆ ಪುರಾವೆ ಏನು ತೋರಿಸುತ್ತದೆ? ( ಚೌಕ ಸೇರಿಸಿ.) (2) ಯೋಸೇಫ ಹೇಗೆ ನಮಗೆ ಮಾದರಿ ಆಗಿದ್ದಾನೆ?

31 ಯೇಸು 30ರ ಪ್ರಾಯದಲ್ಲಿ ದೀಕ್ಷಾಸ್ನಾನ ಪಡೆದದ್ದನ್ನು ತಿಳಿಸುವ ಬೈಬಲ್‌ ಭಾಗಕ್ಕೆ ನಾವು ಬರುವಷ್ಟರಲ್ಲಿ ಯೋಸೇಫ ಇನ್ನು ಮುಂದೆ ಕಥೆಯ ಭಾಗವಾಗಿಲ್ಲ ಎಂದು ಗೊತ್ತಾಗುತ್ತದೆ. ಪುರಾವೆ ತೋರಿಸುವಂತೆ ಯೇಸು ತನ್ನ ಸೇವೆಯನ್ನು ಆರಂಭಿಸುವ ಸಮಯದಷ್ಟಕ್ಕೆ ಮರಿಯಳು ವಿಧವೆಯಾಗಿದ್ದಳು. (“ ಯೋಸೇಫ ಯಾವಾಗ ಸತ್ತನು?” ಚೌಕ ನೋಡಿ.) ಹೌದು ಯೋಸೇಫ ತನ್ನ ಕುಟುಂಬವನ್ನು ಸಂರಕ್ಷಿಸಿದ, ಪೋಷಿಸಿದ ಮತ್ತು ಕೊನೆವರೆಗೆ ನಂಬಿಗಸ್ತಿಕೆಯಿಂದ ಪಟ್ಟುಹಿಡಿದ ತಂದೆಯಾಗಿ ಉಜ್ವಲ ಮಾದರಿಯನ್ನು ಬಿಟ್ಟುಹೋದ. ಅಪ್ಪಂದಿರು, ಕುಟುಂಬದ ಶಿರಸ್ಸುಗಳು, ಕ್ರೈಸ್ತರೆಲ್ಲರೂ ಯೋಸೇಫನ ನಂಬಿಕೆಯನ್ನು ಅನುಕರಿಸಲೇಬೇಕು.

^ ಪ್ಯಾರ. 4 ಆ ದಿನಗಳಲ್ಲಿ ನಿಶ್ಚಿತಾರ್ಥವನ್ನು ಬಹುಮಟ್ಟಿಗೆ ವಿವಾಹಕ್ಕೆ ಸಮನಾಗಿ ಕಾಣಲಾಗುತ್ತಿತ್ತು.

^ ಪ್ಯಾರ. 8 ಈ ನಕ್ಷತ್ರವನ್ನು ಕಳುಹಿಸಿದ್ದು ದೇವರಲ್ಲ. ಅದೊಂದು ನಿಜವಾದ ತಾರೆಯಲ್ಲ, ಯಾವುದೇ ಆಕಾಶಕಾಯವೂ ಅಲ್ಲ. ಅದು ಸೈತಾನನು ಯೇಸುವನ್ನು ಕೊಲ್ಲುವ ದುಷ್ಟ ಸಂಚಿನ ಭಾಗವಾಗಿ ಬಳಸಿದ ಸಾಧನವಾಗಿತ್ತು. ಆ ಜ್ಯೋತಿಷಿಗಳಿಗೆ ಅದು ನಕ್ಷತ್ರದಂತೆ ಕಂಡಿರಬೇಕು.

^ ಪ್ಯಾರ. 11 ಯೇಸು ತನ್ನ “ಸೂಚಕಕಾರ್ಯಗಳಲ್ಲಿ ಮೊದಲನೆಯ” ಅದ್ಭುತ ನಡಿಸಿದ್ದು ಅವನ ದೀಕ್ಷಾಸ್ನಾನದ ಬಳಿಕವೇ ಎಂದು ಬೈಬಲ್‌ ಸ್ಪಷ್ಟವಾಗಿ ತೋರಿಸುತ್ತದೆ.—ಯೋಹಾ. 2:1-11.