ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹತ್ತು

ಶುದ್ಧಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಂತವನು

ಶುದ್ಧಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಂತವನು

1, 2. (1) ಎಲೀಯನ ಜನರು ಯಾವ ಕಷ್ಟದಲ್ಲಿದ್ದರು? (2) ಕರ್ಮೆಲ್‌ ಬೆಟ್ಟದಲ್ಲಿ ಎಲೀಯನಿಗೆ ಯಾವ ರೀತಿಯ ವಿರೋಧವಿತ್ತು?

ಎಲೀಯ ಕರ್ಮೆಲ್‌ ಬೆಟ್ಟದ ಇಳಕಲ್ಲಿನ ಕಡೆ ಕಣ್ಣುಹಾಯಿಸಿದನು. ಜನರು ಹತ್ತಿಬರುತ್ತಿದ್ದರು. ಅವರಿಗೆ ತ್ರಾಣವಿರಲಿಲ್ಲ. ಬಡತನದ ಬೇಗೆಯಲ್ಲಿ ಬೆಂದಿದ್ದರು. ಸರಿಯಾಗಿ ಆಹಾರ ಇರಲಿಲ್ಲ. ಏಕೆಂದರೆ ಆ ಪ್ರದೇಶ ಮೂರುವರೆ ವರ್ಷಗಳಿಂದ ಬರಪೀಡಿತವಾಗಿತ್ತು. ಇಷ್ಟು ದಿನ ಪಟ್ಟ ಕಷ್ಟಗಳು ಬೆಟ್ಟ ಹತ್ತುತ್ತಿದ್ದ ಆ ಜನರ ಮುಖಗಳಲ್ಲಿ ಮುಂಜಾವಿನ ಆ ನಸುಬೆಳಕಿನಲ್ಲೂ ಎದ್ದುಕಾಣುತ್ತಿತ್ತು.

2 ಆ ಜನರ ಮಧ್ಯೆ ಬಾಳನ 450 ಮಂದಿ ಪ್ರವಾದಿಗಳೂ ಇದ್ದರು. ಅವರು ಜಂಬದಿಂದ, ದುರಹಂಕಾರದಿಂದ ನಡೆಯುತ್ತಿದ್ದರು. ಯೆಹೋವನ ಪ್ರವಾದಿ ಎಲೀಯನ ಬಗ್ಗೆ ಅವರಲ್ಲಿ ದ್ವೇಷ ಕುದಿಯುತ್ತಿತ್ತು. ಏಕೆಂದರೆ ಈಜೆಬೆಲ್‌ ರಾಣಿ ಯೆಹೋವನ ಅನೇಕ ಸೇವಕರನ್ನು ಹತಿಸಿದ್ದರೂ ಎಲೀಯನು ಅಂಜದೆ ಬಾಳಾರಾಧನೆಯ ವಿರುದ್ಧ ಸ್ಥಿರವಾಗಿ ನಿಂತಿದ್ದನು. ಎಷ್ಟು ದಿನ ಅಂತ ಹೀಗೆ ಮಾಡ್ತಾನೆ, ನೋಡೋಣ ಎಂದವರು ಅಂದುಕೊಂಡಿರಬಹುದು. ನಾವಿಲ್ಲಿ ಇಷ್ಟು ಮಂದಿ ಇರುವಾಗ ಅವನೊಬ್ಬನೇ ನಮ್ಮ ಮುಂದೆ ನಿಲ್ಲಲಾರ ಎಂದವರು ತರ್ಕಿಸಿರಲೂಬಹುದು. (1 ಅರ. 18:4, 19, 20) ರಾಜ ಅಹಾಬನೂ ತನ್ನ ರಥದಲ್ಲಿ ಅಲ್ಲಿಗೆ ಬಂದಿದ್ದನು. ಆದರೆ ಅವನಿಗೂ ಎಲೀಯನನ್ನು ಕಂಡರೆ ಆಗುತ್ತಿರಲಿಲ್ಲ.

3, 4. (1) ಆ ಮಹತ್ವಪೂರ್ಣ ದಿನ ಉದಯಿಸಿದಾಗ ಎಲೀಯನಿಗೆ ಸ್ವಲ್ಪ ಭಯ ಆಗಿರಬೇಕು ಏಕೆ? (2) ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

3 ಅಲ್ಲಿ ನಿಂತಿದ್ದ ಆ ಒಂಟಿ ಪ್ರವಾದಿಯ ಜೀವನದಲ್ಲಿ ಅದೊಂದು ಅವಿಸ್ಮರಣೀಯ ದಿನವಾಗಿರಲಿತ್ತು. ಲೋಕವು ಆ ವರೆಗೆ ಕಂಡಿರದ ನಾಟಕೀಯ ಹಣಾಹಣಿಗಾಗಿ ಅವನ ಕಣ್ಮುಂದೆ ರಂಗ ಸಜ್ಜಾಗುತ್ತಿತ್ತು. ಯಾರು ಹೆಚ್ಚು ಶಕ್ತಿಶಾಲಿ? ದೇವರೊ ದುಷ್ಟ ಜನರೊ? ಎಂಬದು ಈಗ ಇತ್ಯರ್ಥವಾಗಲಿತ್ತು. ಆ ದಿನ ಉದಯವಾದಾಗ ಎಲೀಯನಿಗೆ ಹೇಗನಿಸಿತು? ಅವನು “ನಮ್ಮಂಥ ಭಾವನೆಗಳಿದ್ದ ಮನುಷ್ಯನಾಗಿದ್ದ” ಕಾರಣ ಅವನಿಗೆ ಭಯವಾಗಿರಬಹುದು. (ಯಾಕೋಬ 5:17 ಓದಿ.) ಆದರೆ ಒಂದಂತೂ ಸತ್ಯ. ಯೆಹೋವನಲ್ಲಿ ನಂಬಿಕೆ ಕಳಕೊಂಡಿದ್ದ ಜನ, ಅವರ ಧರ್ಮಭ್ರಷ್ಟ ರಾಜ, ಆ ಕೊಲೆಗಡುಕ ಪುರೋಹಿತರು ಇವರೆಲ್ಲರ ಮಧ್ಯೆ ಒಬ್ಬನೇ ನಿಂತಿದ್ದ ಎಲೀಯನಿಗೆ ತಾನು ಒಬ್ಬಂಟಿಗನೆಂದು ಅನಿಸಿತು.—1 ಅರ. 18:22.

4 ಆದರೆ ಇಸ್ರಾಯೇಲ್‌ ಜನಾಂಗ ಈ ಸಂಕಷ್ಟಕ್ಕೆ ಸಿಲುಕಲು ಕಾರಣವೇನು? ಈ ವೃತ್ತಾಂತದಿಂದ ನೀವೇನು ಕಲಿಯಬಲ್ಲಿರಿ? ನಂಬಿಕೆಯ ವಿಷಯದಲ್ಲಿ ಎಲೀಯನಿಟ್ಟ ಮಾದರಿಯನ್ನು ಮತ್ತು ಅದು ನಮಗಿಂದು ಹೇಗೆ ಉಪಯುಕ್ತವಾಗಿದೆ ಎಂಬದನ್ನು ಪರಿಗಣಿಸಿ.

ದೀರ್ಘಕಾಲ ಸೆಣಸಾಟದ ಪರಾಕಾಷ್ಠೆ

5, 6. (1) ಇಸ್ರಾಯೇಲಿನಲ್ಲಿ ಯಾವ ಸೆಣಸಾಟ ನಡೆಯುತ್ತಾ ಇತ್ತು? (2) ರಾಜ ಅಹಾಬ ಯೆಹೋವನಿಗೆ ಕೋಪಬರುವ ರೀತಿಯಲ್ಲಿ ನಡೆದುಕೊಂಡಿದ್ದು ಹೇಗೆ?

5 ಎಲೀಯನ ಜೀವಮಾನದ ಹೆಚ್ಚಿನ ಸಮಯ ಇಸ್ರಾಯೇಲಿನಲ್ಲಿ ಸತ್ಯಾರಾಧನೆ ಬದಿಗೊತ್ತಲ್ಪಟ್ಟಿತ್ತು, ತುಳಿದುಹಾಕಲ್ಪಟ್ಟಿತ್ತು. ಇದು ಎಲೀಯನ ಕಣ್ಮುಂದೆಯೇ ನಡೆಯುತ್ತಿದ್ದರೂ ಅದರ ಬಗ್ಗೆ ಅವನೇನೂ ಮಾಡಲಾಗಲಿಲ್ಲ. ದೀರ್ಘಕಾಲದಿಂದ ಇಸ್ರಾಯೇಲ್ಯರು ಶುದ್ಧಾರಾಧನೆಯನ್ನು ಬಿಟ್ಟು ಸುಳ್ಳಾರಾಧನೆಯನ್ನು ಅನುಸರಿಸಲಾರಂಭಿಸಿದ್ದರು. ಯೆಹೋವ ದೇವರನ್ನು ಆರಾಧಿಸುವ ಬದಲು ಸುತ್ತಲಿನ ಜನಾಂಗಗಳ ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದರು. ಸುಳ್ಳಾರಾಧನೆ ಮತ್ತು ಸತ್ಯಾರಾಧನೆಯ ನಡುವಿನ ಈ ಸೆಣಸಾಟ ಎಲೀಯನ ದಿನಗಳಲ್ಲಿ ತಾರಕಕ್ಕೇರಿತು.

6 ರಾಜ ಅಹಾಬನು ಯೆಹೋವನಿಗೆ ತುಂಬ ಕೋಪಬರುವ ರೀತಿಯಲ್ಲಿ ನಡೆದುಕೊಂಡಿದ್ದ. ಚೀದೋನ್‌ನ ರಾಜಕುಮಾರಿ ಈಜೆಬೆಲಳನ್ನು ಮದುವೆಯಾದ. ಈಜೆಬೆಲಳು ಬಾಳನ ಆರಾಧನೆಯನ್ನು ಇಸ್ರಾಯೇಲಿನಲ್ಲಿ ಎಲ್ಲೆಡೆ ಹಬ್ಬಿಸಿ ಯೆಹೋವನ ಆರಾಧನೆಯನ್ನು ಅಳಿಸಿಹಾಕಲು ಪಣತೊಟ್ಟಿದ್ದಳು. ಅಹಾಬ ಬೇಗನೆ ಅವಳ ಕೈಗೊಂಬೆಯಾದ. ಬಾಳನಿಗೆ ಒಂದು ಗುಡಿ ಕಟ್ಟಿ ಯಜ್ಞವೇದಿಯನ್ನು ನಿರ್ಮಿಸಿದ. ಇಸ್ರಾಯೇಲಿನ ರಾಜನಾದ ಅವನೇ ಈ ವಿಧರ್ಮಿ ದೇವರಿಗೆ ಅಡ್ಡಬಿದ್ದ.—1 ಅರ. 16:30-33.

7. (1) ಬಾಳನ ಆರಾಧನೆ ಏಕೆ ತುಂಬ ಕೆಟ್ಟದ್ದಾಗಿತ್ತು? (2) ಎಲೀಯನ ದಿನದಲ್ಲಿ ಬಂದ ಬರಗಾಲದ ಅವಧಿಯ ಕುರಿತು ಬೈಬಲಿನ ಮಾತುಗಳಲ್ಲಿ ವಿರೋಧೋಕ್ತಿ ಇಲ್ಲವೆಂದು ಏಕೆ ಖಾತ್ರಿಯಿಂದ ಹೇಳಬಹುದು? ( ಚೌಕವನ್ನು ಸೇರಿಸಿ.)

7 ಬಾಳನ ಆರಾಧನೆ ತುಂಬ ಕೆಟ್ಟದ್ದಾಗಿತ್ತು. ಏಕೆ? ಅದು ಅನೇಕ ಇಸ್ರಾಯೇಲ್ಯರನ್ನು ಸತ್ಯ ದೇವರಿಂದ ದೂರ ಮಾಡಿತ್ತು. ಅದೊಂದು ಅಸಹ್ಯಕರ, ಕ್ರೂರ ಧರ್ಮವಾಗಿತ್ತು. ಉದಾಹರಣೆಗೆ ಸ್ತ್ರೀಪುರುಷರ ವೇಶ್ಯಾವಾಟಿಕೆ, ಲೈಂಗಿಕ ಕಾಮಕೇಳಿಗಳು ಬಾಳನ ಗುಡಿಗಳಲ್ಲಿ ನಡೆಯುತ್ತಿದ್ದವು. ಮುಗ್ಧ ಹಸುಗೂಸುಗಳನ್ನೂ ಬಲಿಕೊಡಲಾಗುತ್ತಿತ್ತು. ಹಾಗಾಗಿ ಯೆಹೋವನು ತನ್ನ ಪ್ರವಾದಿ ಎಲೀಯನನ್ನು ಅಹಾಬನ ಬಳಿ ಕಳುಹಿಸಿ ಬರಗಾಲವನ್ನು ಪ್ರಕಟಿಸಿದನು. ಆ ಬರಗಾಲದ ಅಂತ್ಯವನ್ನು ಎಲೀಯನು ಪ್ರಕಟಪಡಿಸುವ ವರೆಗೆ ಅದು ಮುಂದುವರಿಯಲಿತ್ತು. (1 ಅರ. 17:1) ಹೀಗೆ ಕೆಲವು ವರ್ಷಗಳು ದಾಟಿದವು. ಆಗ ಎಲೀಯನು ಅಹಾಬನನ್ನು ಭೇಟಿಯಾಗಿ ಇಸ್ರಾಯೇಲ್ಯರನ್ನೂ ಬಾಳನ ಪ್ರವಾದಿಗಳನ್ನೂ ಕರ್ಮೆಲ್‌ ಬೆಟ್ಟದಲ್ಲಿ ಒಟ್ಟುಸೇರಿಸಬೇಕೆಂದು ಅವನಿಗೆ ಹೇಳಿದನು. *

ಬಾಳನ ಆರಾಧನೆಯಲ್ಲಿದ್ದ ಅತಿ ಪ್ರಮುಖ ಅಂಶಗಳು ಒಂದರ್ಥದಲ್ಲಿ ಈಗಲೂ ಎಲ್ಲೆಡೆ ರಾರಾಜಿಸುತ್ತಿವೆ

8. ಸತ್ಯ ಮತ್ತು ಸುಳ್ಳು ಆರಾಧನೆಗಳ ಸೆಣಸಾಟದ ಕುರಿತ ಈ ವೃತ್ತಾಂತದಿಂದ ನಾವೇನು ಕಲಿಯಬಹುದು?

8 ಸತ್ಯಾರಾಧನೆ ಹಾಗೂ ಸುಳ್ಳಾರಾಧನೆಯ ನಡುವಿನ ಸೆಣಸಾಟದ ಬಗ್ಗೆ ತಿಳಿಸುವ ಈ ವೃತ್ತಾಂತದಿಂದ ನಾವೇನು ಕಲಿಯಬಹುದು? ಇಂದು ಬಾಳನ ದೇವಸ್ಥಾನಗಳು, ಯಜ್ಞವೇದಿಗಳು ನಮ್ಮ ಸುತ್ತಮುತ್ತ ಎಲ್ಲೂ ಇಲ್ಲ. ಆದ್ದರಿಂದ ಆ ವೃತ್ತಾಂತ ನಮ್ಮೀ ಕಾಲಕ್ಕೆ ಉಪಯುಕ್ತವಲ್ಲವೆಂದು ಕೆಲವರು ಭಾವಿಸುತ್ತಾರೆ. ಆದರೆ ಈ ವೃತ್ತಾಂತ ಕೇವಲ ಪ್ರಾಚೀನ ಇತಿಹಾಸವಲ್ಲ. (ರೋಮ. 15:4) “ಬಾಳ” ಅಂದರೆ ಅರ್ಥ “ಒಡೆಯ” ಅಥವಾ “ಯಜಮಾನ.” ಇಂದು ಜನರು ಸರ್ವಶಕ್ತ ದೇವರನ್ನು ಯಜಮಾನನಾಗಿ ಸ್ವೀಕರಿಸುವ ಬದಲು ಬೇರೆ ಬೇರೆ ಯಜಮಾನರನ್ನು ಆರಿಸಿಕೊಂಡಿದ್ದಾರೆ. ಉದಾಹರಣೆಗೆ ಜನರು ತಮ್ಮ ಬದುಕಲ್ಲಿ ಬರೀ ಹಣ, ಉದ್ಯೋಗ, ಮನೋರಂಜನೆ, ಲೈಂಗಿಕ ಸುಖಾನುಭವಕ್ಕೆ ಪ್ರಾಶಸ್ತ್ಯ ಕೊಡುವ ಮೂಲಕ ಅವುಗಳನ್ನೇ ತಮ್ಮ ಯಜಮಾನರನ್ನಾಗಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಯೆಹೋವನ ಬದಲು ಅಸಂಖ್ಯಾತ ದೇವರುಗಳಲ್ಲಿ ಒಂದನ್ನು ಪೂಜಿಸುವ ಮೂಲಕ ಬೇರೊಬ್ಬ ಯಜಮಾನನನ್ನು ಆರಿಸಿಕೊಂಡಿದ್ದಾರೆ. (ಮತ್ತಾ. 6:24; ರೋಮನ್ನರಿಗೆ 6:16 ಓದಿ.) ಬಾಳನ ಆರಾಧನೆಯಲ್ಲಿದ್ದ ಅತಿ ಪ್ರಮುಖ ಅಂಶಗಳು ಒಂದರ್ಥದಲ್ಲಿ ಈಗಲೂ ಎಲ್ಲೆಡೆ ರಾರಾಜಿಸುತ್ತಿವೆ. ಆದ್ದರಿಂದ, ಸತ್ಯ ದೇವರು ಯಾರೆಂಬುದರ ಕುರಿತು ಎಲೀಯನ ಕಾಲದಲ್ಲಿ ನಡೆದ ಆ ಸತ್ವಪರೀಕ್ಷೆಯ ಕುರಿತು ಗಾಢವಾಗಿ ಯೋಚಿಸುವುದು ನಾವು ಯಾರನ್ನು ಸೇವಿಸಬೇಕು ಎಂಬ ವಿಷಯದಲ್ಲಿ ವಿವೇಕಯುತ ನಿರ್ಣಯಮಾಡಲು ನೆರವಾಗುತ್ತದೆ.

‘ಎರಡು ಮನಸ್ಸುಳ್ಳವರಾಗಿದ್ದರು’

9. (1) ಬಾಳನ ಆರಾಧನೆ ತಪ್ಪೆಂದು ಬಯಲಿಗೆಳೆಯಲು ಕರ್ಮೆಲ್‌ ಬೆಟ್ಟವೇ ಸೂಕ್ತ ಸ್ಥಳವಾಗಿತ್ತು ಏಕೆ? (ಪಾದಟಿಪ್ಪಣಿ ಸಹ ನೋಡಿ.) (2) ಎಲೀಯ ಜನರಿಗೆ ಏನಂದನು?

9 ಕರ್ಮೆಲ್‌ ಬೆಟ್ಟದ ಮೇಲೆ ನಿಂತರೆ ಕೆಳಭಾಗದಲ್ಲಿರುವ ಕೀಷೋನ್‌ ತೊರೆಕಣಿವೆಯಿಂದ ಹಿಡಿದು ಹತ್ತಿರದಲ್ಲೇ ಇದ್ದ ಮಹಾ ಸಮುದ್ರದ (ಮೆಡಿಟರೇನಿಯನ್‌ ಸಮುದ್ರ) ವರೆಗೆ ಮತ್ತು ದೂರದ ಉತ್ತರ ದಿಗಂತದಲ್ಲಿ ಲೆಬನೋನಿನ ಪರ್ವತಸಾಲು ಕಾಣುತ್ತಿತ್ತು. * ಆ ನಿರ್ಣಾಯಕ ದಿನದಂದು ಸೂರ್ಯ ಉದಯಿಸಿ ಮೇಲೇರುತ್ತಾ ಹೋದಂತೆ ಇಸ್ರಾಯೇಲಿನ ಈ ಭೂಭಾಗದ ದೃಶ್ಯವು ಕರಾಳವಾಗಿ ತೋರುತ್ತಿತ್ತು. ಯೆಹೋವನು ಅಬ್ರಹಾಮನ ಸಂತತಿಗೆ ಕೊಟ್ಟಿದ್ದ ಈ ಭೂಮಿ ಒಂದು ಕಾಲದಲ್ಲಿ ಫಲವತ್ತಾಗಿತ್ತು. ಆದರೆ ದೇವರ ಸ್ವಂತ ಜನರು ಮಾಡಿದ್ದ ತಪ್ಪುಗಳ ಫಲವಾಗಿ ಈಗ ಅದು ಮಳೆಯಿಲ್ಲದೆ ಸೂರ್ಯನ ಕಡುತಾಪದಿಂದ ಸುಟ್ಟು ಬರಡಾಗಿತ್ತು! ಜನರು ಕರ್ಮೆಲ್‌ ಬೆಟ್ಟದ ಮೇಲೆ ನೆರೆದು ಬರುತ್ತಿದ್ದಂತೆ ಎಲೀಯನು ಅವರನ್ನು ಸಮೀಪಿಸಿ “ನೀವು ಎಷ್ಟರ ವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ” ಎಂದು ಹೇಳಿದನು.—1 ಅರ. 18:21.

10. (1) ಎಲೀಯನ ಜನರು ಹೇಗೆ ‘ಎರಡು ಮನಸ್ಸುಳ್ಳವರಾಗಿದ್ದರು?’ (2) ಯಾವ ಮೂಲ ಸತ್ಯವನ್ನು ಅವರು ಮರೆತಿದ್ದರು?

10 ಇಸ್ರಾಯೇಲ್ಯರು ‘ಎರಡು ಮನಸ್ಸುಳ್ಳವರಾಗಿದ್ದರು’ ಎಂದು ಎಲೀಯ ಹೇಳಿದ್ದೇಕೆ? ಯೆಹೋವನ ಆರಾಧನೆ ಇಲ್ಲವೆ ಬಾಳನ ಆರಾಧನೆ—ಇವೆರಡರಲ್ಲಿ ಒಂದನ್ನು ಮಾತ್ರ ಆರಿಸಿಕೊಳ್ಳಬೇಕು ಎಂಬದನ್ನು ಆ ಜನರು ಗ್ರಹಿಸಿರಲಿಲ್ಲ. ಎರಡನ್ನೂ ಮಾಡಬಹುದೆಂದು ಎಣಿಸಿದ್ದರು. ಅಸಹ್ಯಕರ ಸಂಸ್ಕಾರಗಳ ಮೂಲಕ ಬಾಳನನ್ನು ಪ್ರಸನ್ನಗೊಳಿಸಬಹುದು, ಅದೇ ಸಮಯ ಯೆಹೋವ ದೇವರ ಅನುಗ್ರಹಕ್ಕಾಗಿಯೂ ಬೇಡಬಹುದೆಂದು ಆ ಜನರು ನೆನಸಿದ್ದರು. ಬಾಳನು ತಮ್ಮ ಬೆಳೆಗಳನ್ನೂ ಜಾನುವಾರುಗಳನ್ನೂ ಆಶೀರ್ವದಿಸುವನು, ‘ಸೇನಾಧೀಶ್ವರ’ ಯೆಹೋವನು ತಮ್ಮನ್ನು ಯುದ್ಧದಲ್ಲಿ ಕಾಪಾಡುವನೆಂದು ಅವರು ತರ್ಕಿಸಿರಬಹುದು. (1 ಸಮು. 17:45) ಯೆಹೋವನು ತನಗೆ ಸಲ್ಲುವ ಆರಾಧನೆಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂಬ ಮೂಲ ಸತ್ಯವನ್ನು ಅವರು ಮರೆತುಬಿಟ್ಟಿದ್ದರು. ಆ ಸತ್ಯವನ್ನು ಇಂದು ಸಹ ಅನೇಕರು ಮನಗಾಣುವುದಿಲ್ಲ. ಯೆಹೋವನು ಸಂಪೂರ್ಣ ಭಕ್ತಿಯನ್ನು ಕೇಳಿಕೊಳ್ಳುತ್ತಾನೆ. ಅದಕ್ಕೆ ಅರ್ಹನೂ ಆಗಿದ್ದಾನೆ. ಆತನ ಆರಾಧನೆಯನ್ನು ಬೇರಾವುದೇ ರೀತಿಯ ಆರಾಧನೆಯೊಂದಿಗೆ ಬೆರೆಸಿದರೆ ಆತನದನ್ನು ಸ್ವೀಕರಿಸುವುದಿಲ್ಲ. ಅದು ಆತನಿಗೆ ಅಸಹ್ಯವೂ ಆಗಿದೆ!—ವಿಮೋಚನಕಾಂಡ 20:5 ಓದಿ.

11. ಕರ್ಮೆಲ್‌ ಬೆಟ್ಟದ ಮೇಲೆ ಎಲೀಯನು ಹೇಳಿದ ಮಾತುಗಳು ನಮ್ಮ ಆದ್ಯತೆಗಳನ್ನು, ಆರಾಧನೆಯನ್ನು ಪರಿಶೀಲಿಸುವಂತೆ ಹೇಗೆ ಸಹಾಯ ಮಾಡಬಲ್ಲದು?

11 ಆ ಇಸ್ರಾಯೇಲ್ಯರು ಎರಡು ದೋಣಿಗಳಲ್ಲಿ ಕಾಲಿಟ್ಟಂತಿತ್ತು. ಇಂದು ಅನೇಕ ಜನರು ಅದೇ ತಪ್ಪನ್ನು ಮಾಡುತ್ತಾರೆ! ಬೇರೆ ‘ಬಾಳರು’ ತಮ್ಮ ಜೀವನದೊಳಗೆ ನುಸುಳುವಂತೆ ಬಿಟ್ಟುಕೊಟ್ಟು, ದೇವರ ಆರಾಧನೆಯನ್ನು ಬದಿಗೊತ್ತುತ್ತಾರೆ. ಹಾಗಾಗಿ, ಎರಡು ಮನಸ್ಸುಳ್ಳವರಾಗಿರದಂತೆ ಎಲೀಯನು ಕೊಟ್ಟ ತುರ್ತು ಕರೆಗೆ ನಾವು ಕಿವಿಗೊಟ್ಟರೆ ನಮ್ಮ ಆದ್ಯತೆಗಳನ್ನು, ಆರಾಧನೆಯನ್ನು ಪರಿಶೀಲಿಸಲು ನಮಗೆ ಸಹಾಯವಾಗುವುದು.

ನಿರ್ಣಯಾತ್ಮಕ ಪರೀಕ್ಷೆ

12, 13. (1) ಎಲೀಯ ಯಾವ ಪರೀಕ್ಷೆಯನ್ನು ಪ್ರಸ್ತಾಪಿಸಿದನು? (2) ಎಲೀಯ ದೇವರಲ್ಲಿ ಇಟ್ಟಷ್ಟೇ ಭರವಸೆಯನ್ನು ನಾವೂ ಇಟ್ಟಿದ್ದೇವೆಂದು ಹೇಗೆ ತೋರಿಸಬಹುದು?

12 ಎಲೀಯನು ಮುಂದಕ್ಕೆ ಒಂದು ಪರೀಕ್ಷೆಯ ಪ್ರಸ್ತಾಪವಿಟ್ಟನು. ಅದು ತುಂಬ ಸರಳ ಪರೀಕ್ಷೆ. ಬಾಳನ ಪುರೋಹಿತರು ಒಂದು ಯಜ್ಞವೇದಿ ಕಟ್ಟಿ, ಒಂದು ಹೋರಿಯನ್ನು ಕಡಿದು ತುಂಡು ಮಾಡಿ ಅದರ ಮೇಲಿಡಬೇಕಿತ್ತು. ಬಳಿಕ ಅದಕ್ಕೆ ಬೆಂಕಿ ಹೊತ್ತಿಸುವಂತೆ ತಮ್ಮ ದೇವರಿಗೆ ಪ್ರಾರ್ಥಿಸಬೇಕಿತ್ತು. ಎಲೀಯನೂ ಹಾಗೆ ಮಾಡಲಿದ್ದನು. “ಯಾವನು ಲಾಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ [ಸತ್ಯ] ದೇವರೆಂದು” ಅವನು ಹೇಳಿದನು. ಸತ್ಯ ದೇವರು ಯಾರೆಂದು ಎಲೀಯನಿಗಂತೂ ಚೆನ್ನಾಗಿ ತಿಳಿದಿತ್ತು. ಅವನ ನಂಬಿಕೆ ಎಷ್ಟು ಬಲವಾಗಿತ್ತೆಂದರೆ ತನ್ನ ವಿರೋಧಿಗಳಾದ ಬಾಳನ ಪ್ರವಾದಿಗಳಿಗೇ ಮೊದಲ ಅವಕಾಶ ಕೊಟ್ಟನು. ಆದ್ದರಿಂದ ಅವರು ಯಜ್ಞದ ಹೋರಿಯನ್ನು ಕಡಿದು, ವೇದಿಯ ಮೇಲಿಟ್ಟು ಬಾಳನಿಗೆ ಮೊರೆಯಿಟ್ಟರು. *1 ಅರ. 18:24, 25.

13 ಯೆಹೋವನು ಅಂದು ಮಾಡಿದಂತೆ ಇಂದು ಅದ್ಭುತಗಳನ್ನು ನಡೆಸುವುದಿಲ್ಲ. ಹಾಗಂತ ಯೆಹೋವನು ಮಾರ್ಪಟ್ಟಿದ್ದಾನೆಂದಲ್ಲ. ನಾವು ಆತನಲ್ಲಿ ಎಲೀಯನು ಇಟ್ಟಷ್ಟೇ ಭರವಸೆ ಇಡಬಲ್ಲೆವು. ನಾವು ತಿಳಿಸುವ ಬೈಬಲ್‌ ಬೋಧನೆಯನ್ನು ಒಬ್ಬರು ಒಪ್ಪುತ್ತಿಲ್ಲ ಎಂದಿಟ್ಟುಕೊಳ್ಳಿ. ಆಗ ಅದರ ಬಗ್ಗೆ ಅವರಿಗೆ ಏನು ಹೇಳಲಿಕ್ಕಿದೆಯೋ ಅದನ್ನು ಹೇಳುವಂತೆ ಮೊದಲು ಅವಕಾಶ ಕೊಡೋಣ. ನಾವು ಹೆದರಬೇಕಾಗಿಲ್ಲ. ಎಲೀಯನು ಮಾಡಿದಂತೆ ನಾವು ಸಹ ಸತ್ಯ ದೇವರೇ ವಿಷಯವನ್ನು ಬಗೆಹರಿಸುವಂತೆ ಬಿಡಬೇಕು. ಹೇಗೆ? ನಾವು ನಮ್ಮ ಮೇಲೆ ಹೊಂದಿಕೊಳ್ಳದೆ ಆತನ ಪ್ರೇರಿತ ವಾಕ್ಯದ ಮೇಲೆ ಹೊಂದಿಕೊಳ್ಳುವ ಮೂಲಕವೇ. ಏಕೆಂದರೆ ಅದು ‘ವಿಷಯಗಳನ್ನು ಸರಿಪಡಿಸಲಿಕ್ಕಾಗಿ’ ರಚಿಸಲ್ಪಟ್ಟಿದೆ.—2 ತಿಮೊ. 3:16.

ಬಾಳನ ಆರಾಧನೆ ಬರೀ ಮೋಸ ಎನ್ನುವುದರಲ್ಲಿ ಎಲೀಯನಿಗೆ ಸಂಶಯವೇ ಇರಲಿಲ್ಲ. ಇದು ದೇವಜನರಿಗೂ ಗೊತ್ತಾಗಬೇಕೆಂದು ಬಯಸಿದನು

14. ಎಲೀಯನು ಬಾಳನ ಪ್ರವಾದಿಗಳನ್ನು ಏನೆಂದು ಅಪಹಾಸ್ಯ ಮಾಡಿದನು? ಏಕೆ?

14 ಬಾಳನ ಪ್ರವಾದಿಗಳು ತಮ್ಮ ಯಜ್ಞವನ್ನು ಸಿದ್ಧಪಡಿಸಿ ತಮ್ಮ ದೇವರಿಗೆ ಪ್ರಾರ್ಥಿಸತೊಡಗಿದರು. “ಬಾಳನೇ, ನಮಗೆ ಕಿವಿಗೊಡು” ಎಂದು ಕೂಗುತ್ತಾ ಇದ್ದರು. ನಿಮಿಷಗಳು ಕಳೆದವು. ತಾಸುಗಳು ಉರುಳಿದವು. ಅವರ ಕೂಗು ನಿಲ್ಲಲಿಲ್ಲ. ಆದರೂ “ಆಕಾಶವಾಣಿಯಾಗಲಿಲ್ಲ; . . . ಯಾರೂ ಉತ್ತರ ದಯಪಾಲಿಸಲಿಲ್ಲ” ಎನ್ನುತ್ತದೆ ಬೈಬಲ್‌. ಮಧ್ಯಾಹ್ನವಾದಾಗ ಎಲೀಯನು ಅವರನ್ನು ಅಪಹಾಸ್ಯ ಮಾಡಲಾರಂಭಿಸಿದನು. ಬಾಳನು ತುಂಬ ಕಾರ್ಯಮಗ್ನನಾಗಿರಬೇಕು ಅದಕ್ಕೆ ಉತ್ತರಕೊಡುತ್ತಿಲ್ಲ, ಯಾವುದೊ ಕೆಲಸ ಅಥವಾ ಪ್ರಯಾಣದಲ್ಲಿ ಇರಬೇಕು, ಇಲ್ಲವೆ ನಿದ್ರಿಸುತ್ತಿರುವುದರಿಂದ ಅವನನ್ನು ಎಚ್ಚರಿಸಬೇಕೆಂದು ಎಲೀಯ ವ್ಯಂಗ್ಯವಾಡಿದನು. “ಗಟ್ಟಿಯಾಗಿ ಕೂಗಿರಿ” ಎಂದನು ಆ ಠಕ್ಕರಿಗೆ. ಬಾಳನ ಆರಾಧನೆ ಬರೀ ಮೋಸ ಎನ್ನುವುದರಲ್ಲಿ ಅವನಿಗಂತೂ ಸಂಶಯವೇ ಇರಲಿಲ್ಲ. ಇದು ದೇವಜನರಿಗೂ ಗೊತ್ತಾಗಬೇಕೆಂದು ಬಯಸಿದನು.—1 ಅರ. 18:26, 27.

15. ಬಾಳನ ಪುರೋಹಿತರಿಗೆ ಏನಾಯಿತೊ ಅದು ನಮಗೇನನ್ನು ಕಲಿಸುತ್ತದೆ?

15 ಎಲೀಯನ ಮಾತಿಗೆ ಪ್ರತಿಕ್ರಿಯೆಯಲ್ಲಿ ಬಾಳನ ಪುರೋಹಿತರು ಇನ್ನಷ್ಟು ಉನ್ಮಾದದಿಂದ “ಗಟ್ಟಿಯಾಗಿ ಕೂಗಿ ತಮ್ಮ ಪದ್ಧತಿಯ ಪ್ರಕಾರ ಈಟಿಕತ್ತಿಗಳಿಂದ ರಕ್ತಸೋರುವಷ್ಟು ಗಾಯಮಾಡಿಕೊಂಡರು.” ಆದರೂ ಪ್ರಯೋಜನವಾಗಲಿಲ್ಲ! “ಆಕಾಶವಾಣಿಯಾಗಲಿಲ್ಲ; ಯಾವನೂ ಅವರಿಗೆ ಉತ್ತರಕೊಡಲಿಲ್ಲ, ಅವರನ್ನು ಲಕ್ಷಿಸಲಿಲ್ಲ.” (1 ಅರ. 18:28, 29) ಬಾಳ ಎಂಬವನು ಇದ್ದರೆ ತಾನೇ? ಅಸ್ತಿತ್ವದಲ್ಲೇ ಇಲ್ಲದ ಆ ಬಾಳನನ್ನು ಹುಟ್ಟುಹಾಕಿದವನು ಸೈತಾನನೇ. ಇದರ ಉದ್ದೇಶ ಜನರನ್ನು ಯೆಹೋವನಿಂದ ದೂರ ಮಾಡುವುದೇ ಆಗಿತ್ತು. ನಿಜವೇನೆಂದರೆ ಯೆಹೋವನನ್ನು ಬಿಟ್ಟು ಇನ್ಯಾರನ್ನೊ ಯಾವುದನ್ನೊ ಯಜಮಾನನನ್ನಾಗಿ ಆರಿಸಿಕೊಂಡರೆ ನಿರಾಶೆ ಕಟ್ಟಿಟ್ಟ ಬುತ್ತಿ. ಅವಮಾನವೂ ತಪ್ಪಿದ್ದಲ್ಲ!—ಕೀರ್ತನೆ 25:3; 115:4-8 ಓದಿ.

ಸಿಕ್ಕಿದ ಉತ್ತರ

16. (1) ಕರ್ಮೆಲ್‌ ಬೆಟ್ಟದ ಮೇಲಿದ್ದ ಯೆಹೋವನ ವೇದಿಯನ್ನು ಎಲೀಯನು ಪುನಃ ಕಟ್ಟಿಸಿದ್ದು ಇಸ್ರಾಯೇಲ್ಯರಿಗೆ ಯಾವುದರ ನೆನಪು ಹುಟ್ಟಿಸಿರಬೇಕು? (2) ತನ್ನ ದೇವರಲ್ಲಿದ್ದ ಭರವಸೆಯನ್ನು ಎಲೀಯನು ಇನ್ಯಾವ ವಿಧದಲ್ಲಿ ತೋರಿಸಿದನು?

16 ಮಧ್ಯಾಹ್ನದ ಮೇಲೆ ಎಲೀಯನ ಸರದಿ ಬಂತು. ಈ ಮುಂಚೆ ಶುದ್ಧಾರಾಧನೆಯ ವಿರೋಧಿಗಳು ಕೆಡವಿಹಾಕಿದ್ದ ಯೆಹೋವನ ವೇದಿಯೊಂದು ಅಲ್ಲಿತ್ತು. ಅದನ್ನು ಈಗ ಎಲೀಯ ಪುನಃ ಕಟ್ಟಿಸಿದನು. ಅದಕ್ಕಾಗಿ 12 ಕಲ್ಲುಗಳನ್ನು ಉಪಯೋಗಿಸಿದನು. ಏಕಿರಬಹುದು? ಯೆಹೋವನು ಧರ್ಮಶಾಸ್ತ್ರವನ್ನು 12 ಕುಲಗಳಿಗೆ ಕೊಟ್ಟಿದ್ದನು. ಅದನ್ನು ಪಾಲಿಸುವ ಹಂಗು 10 ಕುಲಗಳ ಇಸ್ರಾಯೇಲ್‌ ರಾಜ್ಯಕ್ಕೆ ಇನ್ನೂ ಇದೆ ಎಂದು ನೆನಪಿಸಲಿಕ್ಕಾಗಿ ಇರಬಹುದು. ಬಳಿಕ ಅವನು ಹೋರಿಯನ್ನು ವಧಿಸಿ ಅದನ್ನು ವೇದಿಯ ಮೇಲಿಟ್ಟು ನೀರಿನಿಂದ ಎಲ್ಲವನ್ನೂ ತೋಯಿಸಿದನು. ಆ ನೀರನ್ನು ಸಮೀಪದ ಮೆಡಿಟರೇನಿಯನ್‌ ಸಮುದ್ರದಿಂದ ತರಿಸಿರಬೇಕು. ವೇದಿಯ ಸುತ್ತ ಕಾಲುವೆ ಮಾಡಿಸಿ ಅದರಲ್ಲೂ ನೀರು ತುಂಬಿಸಿದನು. ಅವನು ಬಾಳನ ಪ್ರವಾದಿಗಳಿಗೆ ಎಷ್ಟೊಂದು ಅನುಕೂಲ ಮಾಡಿಕೊಟ್ಟಿದ್ದನೊ, ಅಷ್ಟೇ ಅನನುಕೂಲ ತನ್ನ ದೇವರಾದ ಯೆಹೋವನಿಗೆ ಮಾಡಿಕೊಟ್ಟನು. ಏಕೆಂದರೆ ಆತನಲ್ಲಿ ಎಲೀಯನಿಗೆ ಪೂರ್ಣ ಭರವಸೆ ಇತ್ತು.—1 ಅರ. 18:30-35.

ಎಲೀಯನಿಗೆ ಜನರ ಬಗ್ಗೆ ಕಾಳಜಿ ಇತ್ತೆಂದು ಅವನ ಪ್ರಾರ್ಥನೆ ತೋರಿಸಿತು. ಆದ್ದರಿಂದಲೇ ಯೆಹೋವನು ‘ಜನರ ಮನಸ್ಸನ್ನು’ ತನ್ನ ಕಡೆಗೆ ತಿರುಗಿಸಿಕೊಳ್ಳುವುದನ್ನು ನೋಡಲು ಎಲೀಯ ಆಸಕ್ತನಾಗಿದ್ದನು

17. (1) ಎಲೀಯನ ಪ್ರಾರ್ಥನೆ ಅವನಿಗೆ ಯಾವ ಸಂಗತಿಗಳು ಪ್ರಾಮುಖ್ಯವಾಗಿದ್ದವೆಂದು ತೋರಿಸಿತು? (2) ಎಲೀಯನಂತೆ ನಮ್ಮ ಪ್ರಾರ್ಥನೆಗಳಲ್ಲಿ ನಾವೇನನ್ನು ವ್ಯಕ್ತಪಡಿಸಬಹುದು?

17 ಎಲ್ಲವನ್ನೂ ಸಿದ್ಧಪಡಿಸಿದ ಬಳಿಕ ಎಲೀಯ ಪ್ರಾರ್ಥಿಸಿದನು. ಆ ಸರಳ ಪ್ರಾರ್ಥನೆಯು ಎಲೀಯನಿಗೆ ಯಾವುದು ಅತಿ ಪ್ರಾಮುಖ್ಯವಾಗಿತ್ತು ಎಂಬದನ್ನು ಸ್ಪಷ್ಟವಾಗಿ ತೋರಿಸಿತು. ಮೊದಲನೆಯದಾಗಿ, ‘ಇಸ್ರಾಯೇಲ್ಯರ ದೇವರು’ ಯೆಹೋವನೇ ಹೊರತು ಆ ಬಾಳನಲ್ಲ ಎಂದು ಎಲ್ಲರಿಗೂ ಗೊತ್ತಾಗಬೇಕೆಂಬುದು ಅವನ ಬಯಕೆಯಾಗಿತ್ತು. ಎರಡನೆಯದಾಗಿ, ತಾನು ಬರೀ ಯೆಹೋವನ ಸೇವಕ ಅಷ್ಟೇ ಎಂಬದನ್ನು ಎಲ್ಲರೂ ತಿಳಿದು ಯೆಹೋವನಿಗೆ ಸಕಲ ಮಹಿಮೆ, ಕೀರ್ತಿ ಸಲ್ಲಿಸಬೇಕೆಂಬುದು ಅವನ ಇಚ್ಛೆಯಾಗಿತ್ತು. ಕೊನೆಯದಾಗಿ, ಯೆಹೋವನು ‘ಜನರ ಮನಸ್ಸನ್ನು’ ತನ್ನ ಕಡೆಗೆ ತಿರುಗಿಸಿಕೊಳ್ಳುವುದನ್ನು ನೋಡಲು ಎಲೀಯನು ಆಸಕ್ತನಾಗಿದ್ದನು ಏಕೆಂದರೆ ಆ ಜನರ ಬಗ್ಗೆ ಅವನಿಗೆ ಕಾಳಜಿಯಿತ್ತು. (1 ಅರ. 18:36, 37) ಅವರ ಅಪನಂಬಿಕೆಯಿಂದ ಇಸ್ರಾಯೇಲಿನಲ್ಲಿ ಅಷ್ಟೊಂದು ದುರವಸ್ಥೆ ಬಂದಿದ್ದರೂ ಎಲೀಯನಿಗೆ ಅವರ ಮೇಲಿದ್ದ ಪ್ರೀತಿ ಕಡಿಮೆಯಾಗಿರಲಿಲ್ಲ. ಎಲೀಯನಂತೆ ನಾವೂ ನಮ್ಮ ಪ್ರಾರ್ಥನೆಗಳಲ್ಲಿ ದೈನ್ಯವನ್ನು, ಯೆಹೋವನ ನಾಮದ ಬಗ್ಗೆ ಚಿಂತೆಯನ್ನು, ನೆರವಿನ ಅಗತ್ಯವಿರುವವರ ಬಗ್ಗೆ ಕನಿಕರವನ್ನು ವ್ಯಕ್ತಪಡಿಸುತ್ತೇವೊ?

18, 19. (1) ಯೆಹೋವನು ಎಲೀಯನ ಪ್ರಾರ್ಥನೆಗೆ ಹೇಗೆ ಉತ್ತರಕೊಟ್ಟನು? (2) ಜನರು ಏನು ಮಾಡಬೇಕೆಂದು ಎಲೀಯ ಅಪ್ಪಣೆಕೊಟ್ಟನು? (3) ಬಾಳನ ಪುರೋಹಿತರು ಏಕೆ ಕರುಣೆಗೆ ಯೋಗ್ಯರಾಗಿರಲಿಲ್ಲ?

18 ಎಲೀಯ ಪ್ರಾರ್ಥನೆ ಮಾಡುವ ಮೊದಲು ಅಲ್ಲಿದ್ದ ಜನರು ಬಾಳನಂತೆ ಯೆಹೋವನು ಕೂಡ ಉತ್ತರ ಕೊಡುವುದಿಲ್ಲ ಅಂತ ನೆನಸಿರಬಹುದು. ಆದರೆ ಆ ಪ್ರಾರ್ಥನೆಯ ನಂತರ ಹಾಗೆ ಯೋಚಿಸಲಿಕ್ಕೆ ಆಸ್ಪದವೇ ಇರಲಿಲ್ಲ. “ಕೂಡಲೆ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಮಾಂಸವನ್ನೂ ಕಟ್ಟಿಗೆಕಲ್ಲುಮಣ್ಣುಗಳನ್ನೂ ದಹಿಸಿಬಿಟ್ಟು ಕಾಲಿವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು” ಎನ್ನುತ್ತದೆ ವೃತ್ತಾಂತ. (1 ಅರ. 18:38) ಎಂತಹ ಉತ್ತರ! ಅದು ಅಲ್ಲಿ ನೆರೆದು ಬಂದವರ ಕಣ್ಣಿಗೆ ಕಟ್ಟುವಂತಿತ್ತು! ಜನರು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದರು?

‘ಕೂಡಲೆ ಯೆಹೋವನ ಕಡೆಯಿಂದ ಬೆಂಕಿಬಿತ್ತು’

19 “ಯೆಹೋವನೇ [ಸತ್ಯ] ದೇವರು, ಯೆಹೋವನೇ [ಸತ್ಯ] ದೇವರು” ಎಂದು ಅಲ್ಲಿದ್ದ ಇಸ್ರಾಯೇಲ್ಯರೆಲ್ಲರೂ ಕೂಗಿದರು. (1 ಅರ. 18:39) ಕೊನೆಗಾದರೂ ಅವರಿಗೆ ಸತ್ಯ ಏನೆಂದು ಗೊತ್ತಾಯಿತು. ಆದರೆ ಅವರು ನಂಬಿಕೆ ತೋರಿಸಿದರು ಎನ್ನಲಾಗದು. ಏಕೆಂದರೆ, ಪ್ರಾರ್ಥನೆಗೆ ಉತ್ತರವಾಗಿ ಆಕಾಶದಿಂದ ಬೆಂಕಿ ಬೀಳುವುದನ್ನು ನೋಡಿದ ಬಳಿಕವೇ ಯೆಹೋವನು ಸತ್ಯ ದೇವರೆಂದು ಒಪ್ಪಿಕೊಳ್ಳುವುದು ನಂಬಿಕೆಯ ಮಹಾನ್‌ ಪ್ರದರ್ಶನವೇನಲ್ಲ. ಹಾಗಾಗಿ ಅವರು ತಮ್ಮ ನಂಬಿಕೆಯನ್ನು ತೋರಿಸಲು ಎಲೀಯ ಇನ್ನೊಂದು ವಿಧವನ್ನು ಸೂಚಿಸಿದನು. ಅವರು ವರ್ಷಗಳ ಹಿಂದೆ ಮಾಡಬೇಕಾಗಿದ್ದನ್ನೇ ಈಗ ಮಾಡುವಂತೆ ಕೇಳಿಕೊಂಡನು. ಅಂದರೆ ದೇವರ ಧರ್ಮಶಾಸ್ತ್ರ ಹೇಳಿದಂತೆ ಸುಳ್ಳು ಪ್ರವಾದಿಗಳನ್ನು ಮತ್ತು ವಿಗ್ರಹಾರಾಧಕರನ್ನು ಅವರು ಹತಿಸಬೇಕಿತ್ತು. (ಧರ್ಮೋ. 13:5-9) ಬಾಳನ ಈ ಪುರೋಹಿತರು ಯೆಹೋವನ ಬದ್ಧ ವೈರಿಗಳಾಗಿದ್ದರು. ಬೇಕುಬೇಕೆಂದೇ ಆತನ ಉದ್ದೇಶಗಳಿಗೆ ವಿರುದ್ಧವಾಗಿ ಕೆಲಸಮಾಡುತ್ತಿದ್ದರು. ಅವರಿಗೆ ಕರುಣೆ ತೋರಿಸಬೇಕಿತ್ತಾ? ಖಂಡಿತ ಇಲ್ಲ. ಮುಗ್ಧ ಹಸುಳೆಗಳನ್ನು ಬಾಳನಿಗೆ ಜೀವಂತವಾಗಿ ಆಹುತಿ ಕೊಟ್ಟ ಕಟುಕರು ಇವರು. ಆಗ ಅವರು ಸ್ವಲ್ಪವಾದರೂ ಕರುಣೆ ತೋರಿಸಿದ್ದರಾ? ಇಲ್ಲ. (ಜ್ಞಾನೋಕ್ತಿ 21:13 ಓದಿ; ಯೆರೆ. 19:5) ಆದ್ದರಿಂದ ಅವರು ಖಂಡಿತ ಕರುಣೆಗೆ ಯೋಗ್ಯರಾಗಿರಲಿಲ್ಲ. ಅವರನ್ನು ಹತಿಸುವಂತೆ ಎಲೀಯ ಆಜ್ಞಾಪಿಸಿದನು. ಅವನ ಮಾತಿನಂತೆ ಇಸ್ರಾಯೇಲ್ಯರು ಅವರೆಲ್ಲರನ್ನೂ ಹತಿಸಿದರು.—1 ಅರ. 18:40.

20. ಎಲೀಯನು ಬಾಳನ ಪುರೋಹಿತರನ್ನು ಹತಿಸಿದ್ದರ ಬಗ್ಗೆ ಆಧುನಿಕ ವಿಮರ್ಶಕರು ಟೀಕಿಸಲು ಆಧಾರವಿಲ್ಲ ಏಕೆ?

20 ಕರ್ಮೆಲ್‌ ಬೆಟ್ಟದ ಮೇಲೆ ನಡೆದ ಪರೀಕ್ಷೆ ಈ ರೀತಿ ಸಂಹಾರದಲ್ಲಿ ಕೊನೆಗೊಂಡದ್ದರ ವಿರುದ್ಧ ಆಧುನಿಕ ವಿಮರ್ಶಕರು ದನಿಯೆತ್ತಬಹುದು. ಈ ಘಟನೆಯನ್ನು ಧರ್ಮಾಂಧರು ಆಧಾರವಾಗಿಟ್ಟುಕೊಂಡು ಬೇರೆ ಧರ್ಮಗಳವರ ವಿರುದ್ಧ ನಡೆಸುವ ಹಿಂಸಾತ್ಮಕ ಕೃತ್ಯಗಳನ್ನು ಸಮರ್ಥಿಸುವರೆಂಬ ಚಿಂತೆ ಇನ್ನೂ ಕೆಲವು ಜನರಿಗಿರಬಹುದು. ಇಂದು ಹಿಂಸಾತ್ಮಕ ಮತಾಂಧರು ಅನೇಕರಿದ್ದಾರೆ ಎಂಬುದು ವಿಷಾದದ ಸಂಗತಿ. ಆದರೆ ಎಲೀಯ ಮತಾಂಧನಾಗಿರಲಿಲ್ಲ. ಅವನು ಯೆಹೋವನ ಮಾತಿನ ಮೇರೆಗೆ ನ್ಯಾಯವಾದ ವಧೆಯನ್ನು ನಡೆಸಿದ್ದನು. ಇನ್ನೊಂದೇನೆಂದರೆ, ಎಲೀಯನು ಹತಿಸಿದಂತೆ ನಿಜ ಕ್ರೈಸ್ತರು ದುಷ್ಟರನ್ನು ಹತಿಸುವುದಿಲ್ಲ. “ನಿನ್ನ ಕತ್ತಿಯನ್ನು ಒರೆಗೆ ಸೇರಿಸು; ಕತ್ತಿಯನ್ನು ಹಿಡಿಯುವವರೆಲ್ಲರು ಕತ್ತಿಯಿಂದಲೇ ನಾಶವಾಗುವರು” ಎಂದು ಯೇಸು ಪೇತ್ರನಿಗೆ ಹೇಳಿದ ಮಾತುಗಳಲ್ಲಿ ತನ್ನ ಶಿಷ್ಯರೆಲ್ಲರಿಗಾಗಿ ಒಂದು ಮಟ್ಟವನ್ನಿಟ್ಟನು. ಅದನ್ನೇ ನಿಜ ಕ್ರೈಸ್ತರು ಪಾಲಿಸುತ್ತಾರೆ. (ಮತ್ತಾ. 26:52) ಭವಿಷ್ಯತ್ತಿನಲ್ಲಿ ಯೆಹೋವನೇ ತನ್ನ ಪುತ್ರನ ಮೂಲಕ ದುಷ್ಟರ ವಿರುದ್ಧ ನ್ಯಾಯ ತೀರಿಸುವನು.

21. ಎಲೀಯನ ಮಾದರಿ ನಿಜ ಕ್ರೈಸ್ತರಿಗೆ ಇಂದು ಹೇಗೆ ತಕ್ಕದ್ದಾಗಿದೆ?

21 ನಂಬಿಕೆಯನ್ನು ತನ್ನ ಜೀವನ ರೀತಿಯಲ್ಲಿ ತೋರಿಸುವುದು ನಿಜ ಕ್ರೈಸ್ತನೊಬ್ಬನ ಜವಾಬ್ದಾರಿ. (ಯೋಹಾ. 3:16) ಇದನ್ನು ಮಾಡುವ ಒಂದು ವಿಧ ಎಲೀಯನಂಥ ನಂಬಿಗಸ್ತರನ್ನು ಅನುಕರಿಸುವುದೇ ಆಗಿದೆ. ಎಲೀಯ ಯೆಹೋವನನ್ನು ಮಾತ್ರ ಆರಾಧಿಸಿದನು. ಇತರರು ಸಹ ಆತನನ್ನೇ ಆರಾಧಿಸುವಂತೆ ಪ್ರೋತ್ಸಾಹಿಸಿದನು. ಜನರನ್ನು ಯೆಹೋವನಿಂದ ದೂರ ಮಾಡಲು ಸೈತಾನನು ಬಳಸಿದ ಒಂದು ಧರ್ಮವನ್ನು ಮೋಸಕರವೆಂದು ಧೈರ್ಯದಿಂದ ಬಯಲುಪಡಿಸಿದನು. ಯಾವುದೇ ವಿಷಯ ಇತ್ಯರ್ಥಗೊಳಿಸಲು ತನ್ನ ಸ್ವಂತ ಸಾಮರ್ಥ್ಯ ಮತ್ತು ಇಚ್ಛೆಯ ಮೇಲೆ ಹೊಂದಿಕೊಳ್ಳದೆ ಯೆಹೋವನ ಮೇಲೆ ಭರವಸೆಯಿಟ್ಟನು. ಹೌದು, ಎಲೀಯ ಶುದ್ಧಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಂತನು. ನಾವೆಲ್ಲರೂ ಅವನ ನಂಬಿಕೆಯನ್ನು ಅನುಕರಿಸೋಣ!

^ ಪ್ಯಾರ. 9 ಸಾಮಾನ್ಯವಾಗಿ ಕರ್ಮೆಲ್‌ ಬೆಟ್ಟ ಹಚ್ಚಹಸಿರಾಗಿರುತ್ತದೆ. ಸಮುದ್ರದಿಂದ ತೇವಾಂಶವುಳ್ಳ ಗಾಳಿ ಬೆಟ್ಟದ ಇಳಕಲುಗಳಲ್ಲಿ ಬೀಸುವುದರಿಂದ ಆಗಿಂದಾಗ್ಗೆ ಅಲ್ಲಿ ಮಳೆ ಮತ್ತು ಧಾರಾಳ ಮಂಜು ಬೀಳುತ್ತದೆ. ಮಳೆ ಬರುವಂತೆ ಮಾಡುವವನು ಬಾಳನೆಂದು ಜನರು ನಂಬುತ್ತಿದ್ದ ಕಾರಣ ಈ ಬೆಟ್ಟವು ಬಾಳನ ಆರಾಧನೆಯ ಪ್ರಮುಖ ಸ್ಥಳವಾಗಿತ್ತೆಂಬುದು ವ್ಯಕ್ತ. ಆದರೆ ಈಗ ಆ ಬೆಟ್ಟ ಬರಡಾಗಿತ್ತು, ಒಣಗಿಹೋಗಿತ್ತು. ಆದ್ದರಿಂದ ಬಾಳನ ಆರಾಧನೆ ತಪ್ಪೆಂದು ಬಯಲುಪಡಿಸಲು ಇದೇ ಸೂಕ್ತ ಸ್ಥಳವಾಗಿತ್ತು.

^ ಪ್ಯಾರ. 12 ಯಜ್ಞಕ್ಕೆ “ಬೆಂಕಿಹೊತ್ತಿಸಕೂಡದು” ಎಂದು ಎಲೀಯನು ಬಾಳನ ಪ್ರವಾದಿಗಳಿಗೆ ಹೇಳಿದನು. ಈ ಮಾತು ಗಮನಾರ್ಹ. ಏಕೆಂದರೆ ಇಂಥ ವಿಗ್ರಹಾರಾಧಕರು ಬೆಂಕಿಯು ಪವಾಡವಾಗಿ ಹೊತ್ತಿಕೊಂಡಂತೆ ತೋರಿಬರಲೆಂದು ಕೆಲವೊಮ್ಮೆ ಯಜ್ಞವೇದಿಗಳಲ್ಲಿ ಯಾರಿಗೂ ಕಾಣದಂಥ ಕುಳಿ ಮಾಡಿ ಬೆಂಕಿ ಹೊತ್ತಿಸಿಡುತ್ತಿದ್ದರೆಂದು ಕೆಲವು ವಿದ್ವಾಂಸರು ಹೇಳುತ್ತಾರೆ.