ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಇಪ್ಪತ್ತೆರಡು

ನಂಬಿಕೆಯ ಪರೀಕ್ಷೆಗಳ ಮಧ್ಯೆಯೂ ನಿಷ್ಠೆ ತೋರಿಸಿದವನು

ನಂಬಿಕೆಯ ಪರೀಕ್ಷೆಗಳ ಮಧ್ಯೆಯೂ ನಿಷ್ಠೆ ತೋರಿಸಿದವನು

1, 2. (1) ಕಪೆರ್ನೌಮಿನಲ್ಲಿ ಯೇಸು ಮಾತಾಡುತ್ತಿದ್ದಾಗ ಪೇತ್ರ ಯಾವ ಆಸೆಯಿಟ್ಟುಕೊಂಡಿದ್ದನು? (2) ಆದರೆ ಏನಾಯಿತು?

ಪೇತ್ರ ಸುತ್ತಲು ಕಣ್ಣಾಡಿಸಿ ಯೇಸುವಿಗೆ ಕಿವಿಗೊಡುತ್ತಿದ್ದವರ ಮುಖಗಳನ್ನು ಕಾತರದಿಂದ ನೋಡಿದ. ಅದು ಕಪೆರ್ನೌಮ್‌ನ ಸಭಾಮಂದಿರ. ಪೇತ್ರನ ವಾಸ್ತವ್ಯವೂ ಈ ಊರಿನಲ್ಲೇ. ಮೀನುಗಾರಿಕೆಯ ಅವನ ಕಸುಬು ಕೂಡ ಇಲ್ಲೇ, ಗಲಿಲಾಯ ಸಮುದ್ರದ ಉತ್ತರ ತೀರದಲ್ಲಿ. ಅವನ ಬಹುತೇಕ ಸ್ನೇಹಿತರು, ಸಂಬಂಧಿಕರು, ಜೊತೆ-ಬೆಸ್ತರು ಇದ್ದದ್ದು ಅಲ್ಲೇ. ತನ್ನಂತೆ ತನ್ನ ಊರಿನವರು ಸಹ ಯೇಸುವನ್ನು ಮೆಸ್ಸೀಯನೆಂದು ಅಂಗೀಕರಿಸುವರು, ಅತ್ಯಂತ ಮಹಾನ್‌ ಬೋಧಕನಾದ ಆತನಿಂದ ದೇವರ ರಾಜ್ಯದ ಕುರಿತು ಸಂತೋಷದಿಂದ ಕಲಿಯುವರು ಎಂದು ಪೇತ್ರ ಆಸೆಯಿಟ್ಟುಕೊಂಡಿದ್ದನು. ಆದರೆ ಹಾಗಾಗುತ್ತಿರುವಂತೆ ಕಾಣುತ್ತಿರಲಿಲ್ಲ.

2 ಅನೇಕರಿಗೆ ಯೇಸುವಿನಿಂದ ಇನ್ನು ಮುಂದಕ್ಕೆ ಏನನ್ನೂ ಕೇಳಿಸಿಕೊಳ್ಳಲು ಇಷ್ಟವಿರಲಿಲ್ಲ. ಇನ್ನಿತರರು ಜೋರಾಗಿ ಗುಣುಗುಟ್ಟುತ್ತಾ ಆಕ್ಷೇಪವೆತ್ತಿದರು. ಆದರೆ ಪೇತ್ರನಿಗೆ ಎಲ್ಲಕ್ಕಿಂತ ಹೆಚ್ಚಾಗಿ ಬೇಸರ ತಂದದ್ದು ಯೇಸುವಿನ ಶಿಷ್ಯರಲ್ಲೇ ಕೆಲವರು ತೋರಿಸಿದ ಪ್ರತಿಕ್ರಿಯೆ. ಹೊಸ ಸತ್ಯ ಕಲಿತೇವಲ್ಲಾ ಎಂಬ ಆಶ್ಚರ್ಯ, ರೋಮಾಂಚನ, ಖುಷಿ ಈಗ ಅವರ ಮುಖದಲ್ಲಿ ಒಂಚೂರು ಇರಲಿಲ್ಲ. ಅದರ ಬದಲು ಗೊಂದಲವಿತ್ತು. ಸಿಟ್ಟು ಕೂಡ ತೋರಿಬರುತ್ತಿತ್ತು. ಯೇಸುವಿನ ಮಾತು ಅಸಹನೀಯ ಎಂದು ಕೆಲವರು ಬಾಯಿಬಿಟ್ಟು ಹೇಳಿದರು. ಆತನಿಗೆ ಕಿವಿಗೊಡಲು ಮನಸ್ಸಿಲ್ಲದವರಾಗಿ ಸಭಾಮಂದಿರದಿಂದ ಹೊರಟೇಹೋದರು. ಯೇಸುವನ್ನು ಹಿಂಬಾಲಿಸುವುದನ್ನೂ ಬಿಟ್ಟುಬಿಟ್ಟರು.—ಯೋಹಾನ 6:60, 66 ಓದಿ.

3. ಪೇತ್ರನ ನಂಬಿಕೆ ಅನೇಕ ಸಂದರ್ಭಗಳಲ್ಲಿ ಅವನಿಗೆ ಹೇಗೆ ಸಹಾಯಮಾಡಿತು?

3 ಅದು ಪೇತ್ರನಿಗೂ ಇತರ ಅಪೊಸ್ತಲರಿಗೂ ಕಠಿಣ ಸಮಯವಾಗಿತ್ತು. ಅಂದು ಯೇಸು ಏನು ಹೇಳಿದನೋ ಅದು ಪೇತ್ರನಿಗೂ ಪೂರ್ತಿ ಅರ್ಥವಾಗಿರಲಿಲ್ಲ. ಯೇಸುವಿನ ಮಾತನ್ನು ಅಕ್ಷರಶಃವಾಗಿ ತೆಗೆದುಕೊಂಡರೆ ನಿಜಕ್ಕೂ ಹೇವರಿಕೆ ಬರಿಸುವಂಥದ್ದೆಂದು ಪೇತ್ರನಿಗೆ ಗೊತ್ತಿತ್ತು. ಅವನೇನು ಮಾಡಿದನು? ಕರ್ತನ ಕಡೆಗಿನ ಅವನ ನಿಷ್ಠೆಯ ಪರೀಕ್ಷೆ ಇದಾಗಿತ್ತು. ಆದರೆ ಇಂಥ ಪರೀಕ್ಷೆ ಎದುರಾದದ್ದು ಇದೇನೂ ಮೊದಲ ಬಾರಿಯಲ್ಲ. ಕೊನೆಯದ್ದೂ ಅಲ್ಲ. ಇಂಥ ಸವಾಲುಗಳನ್ನು ಎದುರಿಸಲು ಮತ್ತು ನಿಷ್ಠೆಯಿಂದ ಉಳಿಯಲು ಪೇತ್ರನ ನಂಬಿಕೆ ಅವನಿಗೆ ಹೇಗೆ ಸಹಾಯಮಾಡಿತೆಂದು ನೋಡೋಣ.

ಇತರರು ನಿಷ್ಠಾಹೀನರಾದರೂ ನಿಷ್ಠೆಯಿಂದ ಉಳಿದನು

4, 5. ಯೇಸು ಹೇಗೆ ಜನರ ನಿರೀಕ್ಷೆಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದನು?

4 ಯೇಸು ಮಾಡುತ್ತಿದ್ದ ಹೇಳುತ್ತಿದ್ದ ವಿಷಯಗಳು ಎಷ್ಟೋ ಸಲ ಪೇತ್ರನಿಗೆ ಆಶ್ಚರ್ಯ ತಂದದ್ದುಂಟು. ಏಕೆಂದರೆ ತನ್ನ ಕರ್ತನು ಜನರ ನಿರೀಕ್ಷೆಗೆ ತದ್ವಿರುದ್ಧವಾದದ್ದನ್ನು ಒಮ್ಮೊಮ್ಮೆ ಮಾಡುತ್ತಿದ್ದನು, ಹೇಳುತ್ತಿದ್ದನು ಎಂದು ಪೇತ್ರನಿಗೆ ಅನಿಸುತ್ತಿತ್ತು. ಉದಾಹರಣೆಗೆ ಹಿಂದಿನ ದಿನವಷ್ಟೇ ಯೇಸು ಅದ್ಭುತ ಮಾಡಿ ಸಾವಿರಾರು ಜನರಿಗೆ ಊಟ ಕೊಟ್ಟಾಗ ಆ ಜನರು ಅವನನ್ನು ರಾಜನನ್ನಾಗಿ ಮಾಡಲು ಪ್ರಯತ್ನಿಸಿದರು. ಆದರೆ ಯೇಸು ಅಲ್ಲಿಂದ ಹೊರಟುಹೋದನು. ಮಾತ್ರವಲ್ಲ ತನ್ನ ಶಿಷ್ಯರಿಗೆ ದೋಣಿ ಹತ್ತಿ ಕಪೆರ್ನೌಮಿನ ಕಡೆ ಹೋಗುವಂತೆ ಹೇಳಿದ್ದನು. ಇದರಿಂದ ಅನೇಕರಿಗೆ ಆಶ್ಚರ್ಯವಾಗಿರಬೇಕು. ಆ ರಾತ್ರಿ ಗಲಿಲಾಯ ಸಮುದ್ರದಲ್ಲಿ ಶಿಷ್ಯರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅವರಿಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಯೇಸು ಆ ಸಮುದ್ರದ ನೀರಿನ ಮೇಲೆ ನಡೆದು ಬಂದಿದ್ದನು! ಆ ಸಂದರ್ಭದಲ್ಲಿ ನಂಬಿಕೆಯ ವಿಷಯದಲ್ಲಿ ಪೇತ್ರನಿಗೆ ಒಂದು ಪ್ರಾಮುಖ್ಯ ಪಾಠವನ್ನೂ ಕಲಿಸಿದ್ದನು.

5 ಬೆಳಿಗ್ಗೆ ಯೇಸು ಮತ್ತವನ ಶಿಷ್ಯರು ಆಚೆ ದಡದಲ್ಲಿದ್ದಾಗ ತಮ್ಮನ್ನು ಹುಡುಕಿಕೊಂಡು ಜನರು ಬಂದದ್ದನ್ನು ನೋಡಿದರು. ಪುನಃ ಯೇಸು ಅದ್ಭುತ ಮಾಡಿ ತಮ್ಮ ಹೊಟ್ಟೆ ತುಂಬಿಸುವನೆಂದು ಆ ಜನರು ಅಪೇಕ್ಷಿಸಿದರೇ ವಿನಃ ಆಧ್ಯಾತ್ಮಿಕ ಸತ್ಯದ ಹಸಿವು ಅವರಿಗಿರಲಿಲ್ಲ. ಬರೀ ಐಹಿಕ ವಿಷಯಗಳಿಗಾಗಿ ಆಸೆಪಡುತ್ತಿರುವುದಕ್ಕಾಗಿ ಯೇಸು ಅವರನ್ನು ಗದರಿಸಿದನು. (ಯೋಹಾ. 6:25-27) ಈ ವಿಷಯದ ಕುರಿತ ಚರ್ಚೆ ಕಪೆರ್ನೌಮಿನ ಸಭಾಮಂದಿರದಲ್ಲೂ ಮುಂದುವರಿಯಿತು. ಇಲ್ಲಿಯೂ ಯೇಸು ಕಲಿಸಿದ ಪ್ರಾಮುಖ್ಯ ಸತ್ಯವು ಜನರ ನಿರೀಕ್ಷೆಗೆ ತದ್ವಿರುದ್ಧವಾಗಿತ್ತು. ಆ ಸತ್ಯವನ್ನು ಅರಗಿಸಿಕೊಳ್ಳಲು ಅವರಿಂದ ಆಗಲಿಲ್ಲ.

6. (1) ಯೇಸು ಯಾವ ದೃಷ್ಟಾಂತ ಕೊಟ್ಟನು? (2) ಅವನಿಗೆ ಕಿವಿಗೊಡುತ್ತಿದ್ದವರು ಹೇಗೆ ಪ್ರತಿಕ್ರಿಯಿಸಿದರು?

6 ಜನರು ತನ್ನನ್ನು ಶಾರೀರಿಕ ಆಹಾರ ಕೊಡುವವನಾಗಿ ಅಲ್ಲ, ಬದಲಾಗಿ ದೇವರು ಕಳುಹಿಸಿಕೊಟ್ಟಿರುವ ಆಧ್ಯಾತ್ಮಿಕ ಒದಗಿಸುವಿಕೆಯಾಗಿ ಗುರುತಿಸಬೇಕೆಂದು ಯೇಸು ಬಯಸಿದನು. ಅಂದರೆ ಮಾನವನಾಗಿ ಅವನ ಜೀವನ ಹಾಗೂ ಮರಣದ ಮೂಲಕ ಮಾನವಕುಲಕ್ಕೆ ದೇವರು ನಿತ್ಯಜೀವವನ್ನು ಸಾಧ್ಯಗೊಳಿಸುತ್ತಿದ್ದಾನೆ ಎಂದವರು ಮನಗಾಣಬೇಕಿತ್ತು. ಆದ್ದರಿಂದ ಯೇಸು ಒಂದು ದೃಷ್ಟಾಂತ ಕೊಟ್ಟು, ಅದರಲ್ಲಿ ತನ್ನನ್ನು ಮೋಶೆಯ ದಿನಗಳಲ್ಲಿ ಸ್ವರ್ಗದಿಂದ ಬಂದ ಮನ್ನಕ್ಕೆ ಅಂದರೆ ರೊಟ್ಟಿಗೆ ಹೋಲಿಸಿದನು. ಅದಕ್ಕೆ ಜನರು ಆಕ್ಷೇಪವೆತ್ತಿದರು. ಆಗ ಯೇಸು ಆ ದೃಷ್ಟಾಂತವನ್ನು ಬಿಡಿಸಿ ಹೇಳುತ್ತಾ ತನ್ನ ಮಾಂಸವನ್ನು ತಿಂದು ತನ್ನ ರಕ್ತವನ್ನು ಕುಡಿಯುವಲ್ಲಿ ಮಾತ್ರ ನಿತ್ಯಜೀವ ಸಿಗುತ್ತದೆಂದು ವಿವರಿಸಿದನು. ಜನರು ಇನ್ನಷ್ಟೂ ಸಿಡಿಮಿಡಿಗೊಂಡದ್ದು ಆಗಲೇ. “ಇದು ಅಸಹನೀಯವಾದ ಮಾತು; ಇದನ್ನು ಯಾರು ತಾನೇ ಕೇಳಿಸಿಕೊಳ್ಳುವರು?” ಎಂದರು ಕೆಲವರು. ಜೊತೆಗೆ ಯೇಸುವಿನ ಶಿಷ್ಯರಲ್ಲಿ ಬಹುಮಂದಿ ಅವನನ್ನು ಹಿಂಬಾಲಿಸುವುದನ್ನು ಬಿಟ್ಟುಬಿಟ್ಟರು. *ಯೋಹಾ. 6:48-60, 66.

7, 8. (1) ಯೇಸುವಿನ ಪಾತ್ರದ ಕುರಿತ ಯಾವ ವಿಷಯವನ್ನು ಪೇತ್ರ ಇನ್ನೂ ಅರ್ಥಮಾಡಿಕೊಂಡಿರಲಿಲ್ಲ? (2) ಯೇಸು ಅಪೊಸ್ತಲರಿಗೆ ಕೇಳಿದ ಪ್ರಶ್ನೆಗೆ ಪೇತ್ರನ ಉತ್ತರವೇನಾಗಿತ್ತು?

7 ಆದರೆ ಪೇತ್ರ ಏನು ಮಾಡಿದನು? ಯೇಸುವಿನ ಮಾತಿನಿಂದ ಅವನಿಗೂ ತಬ್ಬಿಬ್ಬಾಗಿರಬೇಕು. ಏಕೆಂದರೆ ದೇವರ ಉದ್ದೇಶವನ್ನು ನೆರವೇರಿಸಲಿಕ್ಕಾಗಿ ಯೇಸು ಸಾಯಬೇಕೆಂಬ ವಿಷಯ ಅವನಿಗೆ ಆಗಿನ್ನೂ ಅರ್ಥವಾಗಿರಲಿಲ್ಲ. ಆ ದಿನ ಯೇಸುವನ್ನು ಬಿಟ್ಟುಹೋದ ಚಂಚಲ ಮನಸ್ಸಿನ ಶಿಷ್ಯರಂತೆ ಅವನಿಗೂ ಬಿಟ್ಟುಹೋಗಲು ಮನಸ್ಸಾಯಿತೇ? ಖಂಡಿತ ಇಲ್ಲ. ಅವನಲ್ಲಿದ್ದ ಒಂದು ವಿಶೇಷ ಗುಣದಿಂದಾಗಿ ಆ ಶಿಷ್ಯರೆಲ್ಲರಿಗಿಂತ ಅವನು ಭಿನ್ನನಾಗಿದ್ದನು. ಆ ಗುಣ ಯಾವುದು?

8 ಯೇಸು ತನ್ನ ಅಪೊಸ್ತಲರ ಕಡೆಗೆ ತಿರುಗಿ ಅವರು ಸಹ ತನ್ನನ್ನು ಬಿಟ್ಟುಹೋಗಬೇಕೆಂದಿದ್ದಾರಾ ಎಂದು ಕೇಳಿದನು. (ಯೋಹಾ. 6:67) ಆತನು 12 ಮಂದಿ ಅಪೊಸ್ತಲರನ್ನು ಉದ್ದೇಶಿಸಿ ಈ ಪ್ರಶ್ನೆ ಕೇಳಿದ್ದರೂ ಉತ್ತರ ಕೊಟ್ಟದ್ದು ಪೇತ್ರ. ಹೀಗೆ ಎಷ್ಟೋ ಸಲ ಆದದ್ದುಂಟು. ಇದಕ್ಕೆ ಕಾರಣ ಅವನು ವಯಸ್ಸಿನಲ್ಲಿ ಬಹುಶಃ ಎಲ್ಲರಿಗಿಂತ ದೊಡ್ಡವನಾಗಿದ್ದ. ಕಾರಣ ಏನೇ ಇದ್ದರೂ ಬೇರೆಲ್ಲರಿಗಿಂತ ಪೇತ್ರ ನೇರ ನುಡಿಯವನು. ಮನಸ್ಸಿನಲ್ಲಿ ಇದ್ದದನ್ನು ಅನೇಕವೇಳೆ ಹಿಂದೆಮುಂದೆ ನೋಡದೆ ಹೇಳಿಯೇ ಬಿಡುತ್ತಿದ್ದನೆಂದು ತೋರುತ್ತದೆ. ಈ ಸಲವೂ ಅದನ್ನೇ ಮಾಡಿದ. “ಕರ್ತನೇ, ನಾವು ಯಾರ ಬಳಿಗೆ ಹೋಗುವುದು? ನಿತ್ಯಜೀವದ ಮಾತುಗಳು ನಿನ್ನಲ್ಲಿವೆ” ಎಂದನಾತ. ಎಂದಿಗೂ ಮರೆಯಲಾಗದ ಎಂಥ ಸೊಗಸಾದ ಹೇಳಿಕೆಯಿದು!—ಯೋಹಾ. 6:68.

9. ಪೇತ್ರ ಯೇಸುವಿಗೆ ಹೇಗೆ ನಿಷ್ಠೆ ತೋರಿಸಿದ?

9 ಪೇತ್ರನ ಆ ಮಾತುಗಳು ನಿಮ್ಮ ಮನಸ್ಸನ್ನೂ ಸ್ಪರ್ಶಿಸಿರಬೇಕಲ್ಲವೇ? ಅವನಿಗೆ ಯೇಸುವಿನಲ್ಲಿದ್ದ ನಂಬಿಕೆಯು ಅತ್ಯಮೂಲ್ಯ ಗುಣವಾದ ನಿಷ್ಠೆಯನ್ನು ಬೆಳೆಸಿಕೊಳ್ಳಲು ಸಹಾಯಮಾಡಿತು. ಯೆಹೋವನು ಒದಗಿಸಿರುವ ಏಕೈಕ ರಕ್ಷಕನು ಯೇಸು ಮತ್ತು ಆತನ ಮಾತುಗಳಿಂದ ಅಂದರೆ ದೇವರ ರಾಜ್ಯದ ಕುರಿತ ಆತನ ಬೋಧನೆಗಳಿಂದ ಮಾತ್ರ ರಕ್ಷಣೆ ಸಿಗುತ್ತದೆಂದು ಪೇತ್ರ ಚೆನ್ನಾಗಿ ಅರಿತಿದ್ದ. ಅವನಿಗೆ ಕೆಲವು ವಿಷಯಗಳು ಅರ್ಥವಾಗದಿದ್ದರೂ ಯೇಸುವನ್ನು ಬಿಟ್ಟು ಹೋದರೆ ಬೇರೆಲ್ಲೂ ದೇವರ ಮೆಚ್ಚಿಗೆ ಮತ್ತು ನಿತ್ಯಜೀವವೆಂಬ ಆಶೀರ್ವಾದ ಸಿಗಲಾರದೆಂದು ಅವನಿಗೆ ಗೊತ್ತಿತ್ತು.

ಯೇಸುವಿನ ಬೋಧನೆಗಳು ನಮಗೆ ಅರ್ಥವಾಗದಿದ್ದರೂ ಅಥವಾ ನಮ್ಮ ಇಷ್ಟದ ಪ್ರಕಾರ ಇಲ್ಲದಿದ್ದರೂ ನಾವು ಅವುಗಳಿಗೆ ನಿಷ್ಠರಾಗಿರಬೇಕು

10. ಪೇತ್ರನ ನಿಷ್ಠೆಯನ್ನು ನಾವು ಹೇಗೆ ಅನುಕರಿಸಬಲ್ಲೆವು?

10 ನಿಮಗೂ ಪೇತ್ರನಂತೆಯೇ ಅನಿಸುತ್ತದಾ? ದುಃಖದ ಸಂಗತಿಯೇನೆಂದರೆ ಇಂದು ಅನೇಕರು ಯೇಸುವನ್ನು ಪ್ರೀತಿಸುತ್ತೇವೆಂದು ಹೇಳುತ್ತಾರೆ ಆದರೆ ಆತನಿಗೆ ನಿಷ್ಠೆ ತೋರಿಸುವುದಿಲ್ಲ. ಕ್ರಿಸ್ತನಿಗೆ ನಾವು ನಿಜವಾದ ನಿಷ್ಠೆ ತೋರಿಸಬೇಕಾದರೆ ಆತನ ಬೋಧನೆಗಳ ಬಗ್ಗೆ ಪೇತ್ರನಿಗಿದ್ದ ನೋಟ ನಮಗಿರಬೇಕು. ಆ ಬೋಧನೆಗಳೇನೆಂದು ನಾವು ಕಲಿಯಬೇಕು, ಅರ್ಥ ಗ್ರಹಿಸಬೇಕು, ಅವುಗಳಿಗೆ ತಕ್ಕಂತೆ ಜೀವಿಸಬೇಕು. ಒಂದುವೇಳೆ ಆತನ ಬೋಧನೆಗಳು ನಮಗೆ ಅರ್ಥವಾಗದಿದ್ದರೂ ಅಥವಾ ನಮ್ಮ ಇಷ್ಟದ ಪ್ರಕಾರ ಇಲ್ಲದಿದ್ದರೂ ನಾವದನ್ನು ಮಾಡಬೇಕು. ಹೀಗೆ ನಾವು ನಿಷ್ಠರಾಗಿ ಉಳಿದರೆ ಮಾತ್ರ ನಿತ್ಯಜೀವ ಪಡೆಯಲು ಸಾಧ್ಯ. ಇದನ್ನು ಪಡೆಯಬೇಕೆಂಬುದೇ ಯೇಸುವಿನ ಅಪೇಕ್ಷೆ.—ಕೀರ್ತನೆ 97:10 ಓದಿ.

ತಿದ್ದಲ್ಪಟ್ಟಾಗಲೂ ಯೇಸುವಿಗೆ ನಿಷ್ಠನು

11. ಯೇಸು ತನ್ನ ಹಿಂಬಾಲಕರನ್ನು ಎಲ್ಲಿಗೆ ಕರೆದೊಯ್ದನು? (ಪಾದಟಿಪ್ಪಣಿ ಸಹ ನೋಡಿ.)

11 ಯೇಸು ತುಂಬ ಕಾರ್ಯಮಗ್ನನಾಗಿದ್ದ ಆ ಸಂದರ್ಭದ ಸ್ವಲ್ಪ ಸಮಯಾನಂತರ ಅವನು ತನ್ನ ಅಪೊಸ್ತಲರು ಮತ್ತು ಕೆಲವು ಶಿಷ್ಯರೊಂದಿಗೆ ಕೈಸರೈಯ ಫಿಲಿಪ್ಪಿಗೆ ಸಮೀಪದ ಹಳ್ಳಿಗಳಿಗೆ ಹೊರಟನು. * ಕಾಲ್ನಡಿಗೆಯಲ್ಲಿ ಹೋಗಲು ಅವರಿಗೆ ಕೆಲವು ದಿನಗಳೇ ತಗಲಿರಬೇಕು. ಕೈಸರೈಯ ಫಿಲಿಪ್ಪಿಯಿಂದ ಸ್ವಲ್ಪ ದೂರದಲ್ಲಿ ಅಂದರೆ ವಾಗ್ದತ್ತ ದೇಶದ ಉತ್ತರದಿಕ್ಕಿನ ಮೂಲೆಯಲ್ಲಿ ಹೆರ್ಮೋನ್‌ ಬೆಟ್ಟವಿತ್ತು. ಅದರ ಹಿಮಾವೃತ ಶಿಖರವು ಗಲಿಲಾಯ ಸಮುದ್ರದಿಂದ ಒಮ್ಮೊಮ್ಮೆ ಕಾಣಿಸುತ್ತಿತ್ತು. ಯೇಸು ಮತ್ತು ಅವನ ಹಿಂಬಾಲಕರು ಪ್ರಯಾಣ ಮಾಡುತ್ತಾ ಕೈಸರೈಯ ಫಿಲಿಪ್ಪಿ ಬಳಿ ಎತ್ತರ ಪ್ರದೇಶದಲ್ಲಿದ್ದ ಹಳ್ಳಿಗಳಿಗೆ ಬಂದರು. ಅಲ್ಲಿಂದ ಹೆರ್ಮೋನ್‌ ಬೆಟ್ಟ ಪೂರ್ಣವಾಗಿ ಕಾಣುತ್ತಿತ್ತು. ದಕ್ಷಿಣಕ್ಕೆ ವಾಗ್ದತ್ತ ದೇಶದ ಬಹುಭಾಗ ಕಾಣುತ್ತಿತ್ತು. ಅದೊಂದು ರಮಣೀಯ ದೃಶ್ಯ. ಕಣ್ಮನ ತಣಿಸುವ ಇಂಥ ಮನೋಹರ ಸುತ್ತುಗಟ್ಟಿನಲ್ಲಿ ಯೇಸು ತನ್ನ ಹಿಂಬಾಲಕರಿಗೆ ಒಂದು ಮುಖ್ಯ ಪ್ರಶ್ನೆ ಕೇಳಿದನು.

12, 13. (1) ತಾನು ಯಾರೆಂಬುದರ ಬಗ್ಗೆ ಜನರ ಅಭಿಪ್ರಾಯವೇನೆಂದು ಯೇಸು ತಿಳಿಯಲಿಚ್ಛಿಸಿದ್ದು ಏಕೆ? (2) ಪೇತ್ರ ಯೇಸುವಿಗೆ ಕೊಟ್ಟ ಉತ್ತರದಲ್ಲಿ ಅವನ ಯಥಾರ್ಥ ನಂಬಿಕೆ ಹೇಗೆ ತೋರಿಬರುತ್ತದೆ?

12 “ನಾನು ಯಾರೆಂದು ಜನರು ಹೇಳುತ್ತಾರೆ?” ಎಂದು ಯೇಸು ಕೇಳಿದ. ಅವನ ಚುರುಕು ಕಣ್ಣುಗಳನ್ನು ಪೇತ್ರ ನೋಡುತ್ತಿರುವುದನ್ನು ಊಹಿಸಿಕೊಳ್ಳಿ. ತನ್ನ ಕರ್ತನಲ್ಲಿದ್ದ ದಯೆ, ಬುದ್ಧಿವಂತಿಕೆಯನ್ನು ಈ ಸಂದರ್ಭದಲ್ಲೂ ಪೇತ್ರ ಗ್ರಹಿಸಿದ. ಯೇಸುವಿಗೆ ಜನರು ತನ್ನನ್ನು ಯಾರೆಂದು ನೆನಸಿದ್ದಾರೆ, ತಾನು ಮಾಡಿದ ಹೇಳಿದ ವಿಷಯಗಳಿಂದ ಯಾರೆಂದು ಗುರುತಿಸಿದ್ದಾರೆ ಎಂದು ತಿಳಿಯುವ ತವಕವಿತ್ತು. ಆಗ ಶಿಷ್ಯರು ಹೆಚ್ಚಿನ ಜನರಿಗಿದ್ದ ತಪ್ಪಭಿಪ್ರಾಯಗಳನ್ನು ಒಂದೊಂದಾಗಿ ಹೇಳಿದರು. ತನ್ನ ಅತ್ಯಾಪ್ತ ಹಿಂಬಾಲಕರು ಸಹ ಅಂಥದ್ದೇ ತಪ್ಪು ನಿರ್ಣಯಕ್ಕೆ ಬಂದಿದ್ದಾರೋ ಎಂದಾತ ತಿಳಿಯಲಿಚ್ಛಿಸಿದ. ಹಾಗಾಗಿ “ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಿದ.—ಲೂಕ 9:18-20.

13 ಈ ಬಾರಿಯೂ ತಕ್ಷಣ ಉತ್ತರ ಕೊಟ್ಟದ್ದು ಪೇತ್ರನೇ. ಅವನು ಅಲ್ಲಿದ್ದ ಅನೇಕರ ಮನಸ್ಸಿನ ಮಾತನ್ನು ನಿರ್ಭೀತಿಯಿಂದ ಸ್ಪಷ್ಟವಾಗಿ ಹೇಳಿದನು. ಅವನಂದದ್ದು: “ನೀನು ಕ್ರಿಸ್ತನು, ಜೀವವುಳ್ಳ ದೇವರ ಮಗನು.” ಇದಕ್ಕಾಗಿ ಯೇಸು ಅವನನ್ನು ಪ್ರಶಂಸಿಸುವಾಗ ಮೆಚ್ಚಿಕೆಯ ನಸುನಗೆ ಬೀರಿದ್ದನ್ನು ಊಹಿಸಿಕೊಳ್ಳಿ. ಆ ಪ್ರಮುಖ ಸತ್ಯವನ್ನು ಅವನಂಥ ಯಥಾರ್ಥ ನಂಬಿಕೆಯುಳ್ಳವರಿಗೆ ಸ್ಪಷ್ಟಪಡಿಸಿದವನು ಒಬ್ಬ ಮಾನವನಲ್ಲ ಬದಲಿಗೆ ಯೆಹೋವ ದೇವರೇ ಎಂದು ಯೇಸು ಪೇತ್ರನಿಗೆ ಹೇಳಿದನು. ಹಾಗಾಗಿ ಮೆಸ್ಸೀಯ ಅಥವಾ ಕ್ರಿಸ್ತನು ಯಾರಾಗಿರುವನು ಎಂಬ ಬಗ್ಗೆ ಅಲ್ಲಿಯ ವರೆಗೆ ಯೆಹೋವನು ಪ್ರಕಟಿಸಿದ್ದ ಸರ್ವಶ್ರೇಷ್ಠ ಸತ್ಯಗಳಲ್ಲೊಂದನ್ನು ಗ್ರಹಿಸಲು ಪೇತ್ರನಿಗೆ ಸಾಧ್ಯವಾಗಿತ್ತು.—ಮತ್ತಾಯ 16:16, 17 ಓದಿ.

14. ಯಾವ ಪ್ರಾಮುಖ್ಯ ಜವಾಬ್ದಾರಿಗಳನ್ನು ಯೇಸು ಪೇತ್ರನಿಗೆ ವಹಿಸಿದನು?

14 ಪ್ರಾಚೀನ ಪ್ರವಾದನೆಯೊಂದರಲ್ಲಿ, ಕಟ್ಟುವವರು ತಿರಸ್ಕರಿಸಿದ ಕಲ್ಲೊಂದಕ್ಕೆ ಕ್ರಿಸ್ತನನ್ನು ಹೋಲಿಸಲಾಗಿತ್ತು. (ಕೀರ್ತ. 118:22; ಲೂಕ 20:17) ಈ ರೀತಿಯ ಪ್ರವಾದನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಯೇಸು ಒಂದು ವಿಷಯ ತಿಳಿಸಿದನು. ಅದೇನೆಂದರೆ ಆ ಕಲ್ಲು ಅಥವಾ ಬಂಡೆಯ ಮೇಲೆಯೇ ಯೆಹೋವನು ಒಂದು ಸಭೆಯನ್ನು ಸ್ಥಾಪಿಸುವನು ಎಂದು. ಪೇತ್ರ ಆಗಷ್ಟೇ ಕ್ರಿಸ್ತನೆಂದು ಗುರುತಿಸಿದ್ದ ಯೇಸುವೇ ಆ ಕಲ್ಲು ಅಥವಾ ಬಂಡೆ ಆಗಿದ್ದ. ಬಳಿಕ ಪೇತ್ರನಿಗೆ “ರಾಜ್ಯದ ಬೀಗದ ಕೈಗಳನ್ನು” ಕೊಟ್ಟನು. (ಮತ್ತಾ. 16:18, 19) ಇದರರ್ಥ ದೇವರ ರಾಜ್ಯವನ್ನು ಪ್ರವೇಶಿಸುವ ಅವಕಾಶದ ಬಾಗಿಲನ್ನು ಮೂರು ರೀತಿಯ ಜನರ ಮುಂದೆ ತೆರೆಯುವ ಸುಯೋಗವನ್ನು ಯೇಸು ಪೇತ್ರನಿಗೆ ಕೊಟ್ಟನು. ಮೊದಲು ಯೆಹೂದ್ಯರಿಗೆ, ನಂತರ ಸಮಾರ್ಯದವರಿಗೆ, ಕೊನೆಯದಾಗಿ ಅನ್ಯಜನರಿಗೆ ಅಂದರೆ ಯೆಹೂದ್ಯರಲ್ಲದವರಿಗೆ. ಕೆಲವರು ನೆನಸುವಂತೆ ಯೇಸು ಪೇತ್ರನಿಗೆ ಇತರ ಅಪೊಸ್ತಲರಿಗಿಂತ ಶ್ರೇಷ್ಠ ಸ್ಥಾನಮಾನ ಕೊಡಲಿಲ್ಲ. ಬದಲಾಗಿ ಅವನಿಗೆ ಕೊಟ್ಟದ್ದು ಕ್ರೈಸ್ತ ಸಭೆಯಲ್ಲಿ ಬಹುಮುಖ್ಯ ಜವಾಬ್ದಾರಿಗಳನ್ನು.

15. (1) ಪೇತ್ರ ಯೇಸುವನ್ನು ಗದರಿಸಿದ್ದು ಏಕೆ? (2) ಏನೆಂದು ಗದರಿಸಿದ?

15 ಆದರೆ ಯಾರಿಗೆ ಹೆಚ್ಚು ಕೊಡಲಾಗುತ್ತದೋ ಅವರು ಹೆಚ್ಚು ಲೆಕ್ಕಕೊಡಬೇಕೆಂದೂ ಸಮಯಾನಂತರ ಯೇಸು ಹೇಳಿದನು. ಈ ಮಾತು ಪೇತ್ರನ ವಿಷಯದಲ್ಲಿ ಸತ್ಯವಾಗಿತ್ತು. (ಲೂಕ 12:48) ಮುಂದೆ ಯೇಸು ತನ್ನ ಅಪೊಸ್ತಲರಿಗೆ ಮೆಸ್ಸೀಯ-ಸಂಬಂಧಿತ ಪ್ರಮುಖ ಸತ್ಯಗಳನ್ನು, ಯೆರೂಸಲೇಮಿನಲ್ಲಿ ಅವನು ಕಷ್ಟಾನುಭವಿಸಿ ಸಾಯಲಿರುವ ವಿಷಯವನ್ನೂ ತಿಳಿಸಿದನು. ಇದನ್ನು ಕೇಳಿ ಪೇತ್ರನ ಮನಕಲಕಿತು. ಹಾಗಾಗಿ ಅವನು ಯೇಸುವನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಗದರಿಸುತ್ತಾ “ಕರ್ತನೇ, ನಿನಗೆ ದಯೆತೋರಿಸಿಕೋ; ನಿನಗೆ ಈ ಗತಿ ಎಂದಿಗೂ ಆಗದು” ಎಂದು ಹೇಳಿದನು.—ಮತ್ತಾ. 16:21, 22.

16. (1) ಯೇಸು ಪೇತ್ರನನ್ನು ಹೇಗೆ ತಿದ್ದಿದನು? (2) ನಾವೆಲ್ಲರೂ ಅನ್ವಯಿಸಬೇಕಾದ ಯಾವ ಬುದ್ಧಿಮಾತು ಯೇಸುವಿನ ಮಾತಿನಲ್ಲಿದೆ?

16 ಪೇತ್ರ ಯೇಸುವಿನ ಹಿತಬಯಸಿ ಹಾಗಂದಿದ್ದ. ಆದರೆ ಸಿಕ್ಕಿದ ಉತ್ತರದಿಂದ ಅವನಿಗೆ ಆಶ್ಚರ್ಯವಾಗಿರಬೇಕು. ಯೇಸು ಪೇತ್ರನಿಗೆ ಬೆನ್ನುಹಾಕಿ, ಬಹುಶಃ ಪೇತ್ರನಂತೇ ಯೋಚಿಸುತ್ತಿದ್ದ ಇನ್ನುಳಿದ ಶಿಷ್ಯರ ಕಡೆ ತಿರುಗಿ “ಸೈತಾನನೇ, ನನ್ನಿಂದ ತೊಲಗಿಹೋಗು. ನೀನು ನನಗೆ ಎಡವುಗಲ್ಲಾಗಿದ್ದೀ, ಏಕೆಂದರೆ ನೀನು ಆಲೋಚಿಸುವುದು ಮನುಷ್ಯರ ಆಲೋಚನೆಗಳೇ ಹೊರತು ದೇವರದಲ್ಲ!” ಎಂದು ಹೇಳಿದನು. (ಮತ್ತಾ. 16:23; ಮಾರ್ಕ 8:32, 33) ಯೇಸುವಿನ ಈ ಮಾತುಗಳಲ್ಲಿ ನಾವೆಲ್ಲರೂ ಅನ್ವಯಿಸಬೇಕಾದ ಬುದ್ಧಿಮಾತಿದೆ. ದೇವರ ಆಲೋಚನೆಗಳಿಗಿಂತ ಮಾನವ ಆಲೋಚನೆಗಳೇ ಹೆಚ್ಚು ಮಹತ್ವದ್ದಾಗಿಬಿಡುವುದು ತೀರ ಸುಲಭ. ಇನ್ನೊಬ್ಬರ ಹಿತದೃಷ್ಟಿಯಿಂದ ನಾವಾಡುವ ಮಾತುಗಳ ಬಗ್ಗೆ ಜಾಗ್ರತೆವಹಿಸಬೇಕು. ಏಕೆಂದರೆ ಕೆಲವೊಮ್ಮೆ ಅಂಥ ಮಾತುಗಳು ಅವರು ದೇವರಿಗಿಂತ ಸೈತಾನನನ್ನೇ ಖುಷಿಪಡಿಸುವ ವಿಷಯಗಳನ್ನು ಮಾಡುವಂತೆ ಪ್ರೋತ್ಸಾಹಿಸುತ್ತಿರಬಹುದು. ಯೇಸುವಿನ ತಿದ್ದುಪಾಟಿಗೆ ಪೇತ್ರ ಹೇಗೆ ಪ್ರತಿಕ್ರಿಯಿಸಿದ?

17. “ನನ್ನ ಹಿಂದೆ ಹೋಗು” ಎಂದು ಯೇಸು ಪೇತ್ರನಿಗೆ ಹೇಳಿದ್ದರ ಅರ್ಥವೇನು?

17 ಅಕ್ಷರಶಃ ತನ್ನನ್ನು ಪಿಶಾಚನಾದ ಸೈತಾನನೆಂದು ಯೇಸು ಕರೆಯುತ್ತಿಲ್ಲವೆಂದು ಪೇತ್ರನಿಗೆ ಗೊತ್ತಿದ್ದಿರಬೇಕು. ಏಕೆಂದರೆ ಯೇಸು ಸೈತಾನನೊಂದಿಗೆ ಮಾತಾಡಿದಷ್ಟು ಕಟುವಾಗಿ ಪೇತ್ರನೊಂದಿಗೆ ಮಾತಾಡಿರಲಿಲ್ಲ. ಸೈತಾನನಿಗೆ ಯೇಸು ಹೇಳಿದ್ದು “ತೊಲಗಿಹೋಗು” ಎಂದು. ಆದರೆ ಪೇತ್ರನಿಗೆ ಯೇಸು ಹೇಳಿದ ಮಾತು ಮೂಲಭಾಷೆಗನುಸಾರ “ನನ್ನ ಹಿಂದೆ ಹೋಗು!” ಎಂದಾಗಿದೆ. (ಮತ್ತಾ. 4:10) ಯೇಸು ಪೇತ್ರನಲ್ಲಿ ಅನೇಕ ಒಳ್ಳೇ ಗುಣಗಳನ್ನು ನೋಡಿದ್ದರಿಂದ ಅವನನ್ನು ತಿರಸ್ಕರಿಸಿಬಿಡಲಿಲ್ಲ. ಪೇತ್ರನಿಗಿದ್ದ ತಪ್ಪು ಯೋಚನೆಯನ್ನು ಸರಿಪಡಿಸಿದನಷ್ಟೆ. ತನ್ನ ಮುಂದೆ ಅವನು ಎಡವುಗಲ್ಲಾಗಿ ನಿಲ್ಲದೆ ತನ್ನ ಹಿಂದೆ ಬೆಂಬಲಿಸುವ ಹಿಂಬಾಲಕನಾಗಿ ಇರಬೇಕಿತ್ತೆಂಬುದು ಯೇಸುವಿನ ಮಾತಿನ ಅರ್ಥವಾಗಿತ್ತು.

ನಮಗೆ ಸಿಗುವ ತಿದ್ದುಪಾಟನ್ನು ದೀನತೆಯಿಂದ ಸ್ವೀಕರಿಸಿ ಅದರಂತೆ ನಡೆದಾಗ ಮಾತ್ರ ಯೇಸು ಕ್ರಿಸ್ತನಿಗೂ ಅವನ ತಂದೆಯಾದ ಯೆಹೋವ ದೇವರಿಗೂ ಹೆಚ್ಚೆಚ್ಚು ಆಪ್ತರಾಗುತ್ತಾ ಹೋಗುವೆವು

18. (1) ಪೇತ್ರ ಯಾವ ರೀತಿಯಲ್ಲಿ ನಿಷ್ಠೆ ತೋರಿಸಿದ? (2) ಅವನನ್ನು ನಾವು ಹೇಗೆ ಅನುಕರಿಸಬಹುದು?

18 ಪೇತ್ರ ವಾದಕ್ಕಿಳಿದನೇ? ಕೋಪಗೊಂಡನೇ? ಮುಖ ಗಂಟಿಕ್ಕಿಕೊಂಡು ಮಾತುಬಿಟ್ಟನೇ? ಖಂಡಿತ ಇಲ್ಲ. ದೀನತೆಯಿಂದ ತಿದ್ದುಪಾಟು ಸ್ವೀಕರಿಸಿದನು. ಹೀಗೆ ಪುನಃ ಒಮ್ಮೆ ನಿಷ್ಠೆ ತೋರಿಸಿದನು. ಕ್ರಿಸ್ತನ ಹಿಂಬಾಲಕರೆಲ್ಲರಿಗೆ ಆಗಾಗ್ಗೆ ತಿದ್ದುಪಾಟು ಬೇಕಾಗುತ್ತದೆ. ಆ “ಸದುಪದೇಶ” ಅಂದರೆ ತಿದ್ದುಪಾಟನ್ನು ದೀನತೆಯಿಂದ ಸ್ವೀಕರಿಸಿ ನಮ್ಮನ್ನು ತಿದ್ದಿಕೊಂಡಾಗ ಮಾತ್ರ ಯೇಸು ಕ್ರಿಸ್ತನಿಗೂ ಅವನ ತಂದೆಯಾದ ಯೆಹೋವ ದೇವರಿಗೂ ಹೆಚ್ಚೆಚ್ಚು ಆಪ್ತರಾಗುತ್ತಾ ಹೋಗುವೆವು.—ಜ್ಞಾನೋಕ್ತಿ 4:13 ಓದಿ.

ತಿದ್ದುಪಾಟು ಸಿಕ್ಕಿದಾಗಲೂ ಪೇತ್ರ ನಿಷ್ಠೆಯಿಂದ ಯೇಸುವಿಗೆ ಅಂಟಿಕೊಂಡ

ನಿಷ್ಠೆಗೆ ಸಿಕ್ಕಿದ ಬಹುಮಾನ

19. (1) ಚಕಿತಗೊಳಿಸುವ ಯಾವ ಮಾತನ್ನು ಯೇಸು ನುಡಿದನು? (2) ಪೇತ್ರ ಏನೆಂದು ನೆನಸಿರಬೇಕು?

19 ಪೇತ್ರನಿಗೆ ತಿದ್ದುಪಾಟು ನೀಡಿದ ಸ್ವಲ್ಪದರಲ್ಲೇ ಯೇಸು, “ಇಲ್ಲಿ ನಿಂತಿರುವವರಲ್ಲಿ ಕೆಲವರು ಮೊದಲು ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವುದನ್ನು ನೋಡುವ ವರೆಗೆ ಮರಣಹೊಂದುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಎಂಬ ಚಕಿತಗೊಳಿಸುವ ಇನ್ನೊಂದು ಮಾತನ್ನು ನುಡಿದನು. (ಮತ್ತಾ. 16:28) ಅದನ್ನು ಕೇಳಿದೊಡನೆ ಆ ಮಾತಿನ ಅರ್ಥ ಏನಿರಬಹುದು ಎಂದು ಪೇತ್ರನಲ್ಲಿ ಕುತೂಹಲ ಹುಟ್ಟಿರಬಹುದು. ಆಗಷ್ಟೇ ಕಟುವಾದ ತಿದ್ದುಪಾಟನ್ನು ಪಡೆದಿದ್ದ ತನಗೆ ಅಂಥ ವಿಶೇಷ ಸುಯೋಗಗಳೇನೂ ಸಿಗಲಿಕ್ಕಿಲ್ಲವೆಂದು ಅವನು ನೆನಸಿರಬೇಕು.

20, 21. (1) ಪೇತ್ರನು ನೋಡಿದ ದರ್ಶನವನ್ನು ವರ್ಣಿಸಿ. (2) ದರ್ಶನದಲ್ಲಿ ನಡೆದ ಸಂಭಾಷಣೆ ಪೇತ್ರನಿಗೆ ತನ್ನ ಯೋಚನೆಯನ್ನು ಸರಿಪಡಿಸಿಕೊಳ್ಳಲು ಹೇಗೆ ನೆರವಾಯಿತು?

20 ಆದರೆ ಯೇಸು ಸುಮಾರು ಒಂದು ವಾರದ ನಂತರ ಯಾಕೋಬ, ಯೋಹಾನ ಮತ್ತು ಪೇತ್ರನನ್ನು “ಎತ್ತರವಾದ ಒಂದು ಬೆಟ್ಟಕ್ಕೆ” ಕರೆದುಕೊಂಡು ಹೋದನು. ಅದು ಬರೀ 25 ಕಿ.ಮೀ. ದೂರದಲ್ಲಿದ್ದ ಹೆರ್ಮೋನ್‌ ಬೆಟ್ಟವಾಗಿದ್ದಿರಬೇಕು. ಬಹುಶಃ ರಾತ್ರಿ ಸಮಯ. ಆದ್ದರಿಂದ ಈ ಮೂವರು ನಿದ್ರೆಯ ಮಂಪರಿನಲ್ಲಿದ್ದರು. ಆದರೆ ಯೇಸು ಪ್ರಾರ್ಥಿಸುತ್ತಿದ್ದಾಗ ಏನು ನಡೆಯಿತೋ ಅದನ್ನು ನೋಡಿ ಅವರ ನಿದ್ರೆಯೆಲ್ಲ ಓಡಿಹೋಯಿತು.—ಮತ್ತಾ. 17:1; ಲೂಕ 9:28, 29, 32.

21 ಅವರ ಕಣ್ಮುಂದೆಯೇ ಯೇಸುವಿನ ತೋರಿಕೆ ಬದಲಾಗತೊಡಗಿತು. ಅವನ ಮುಖಕ್ಕೆ ಒಂದು ರೀತಿಯ ತೇಜಸ್ಸು ಬಂತು, ಹೊಳೆಯಲಾರಂಭಿಸಿತು. ಎಷ್ಟರ ಮಟ್ಟಿಗೆಂದರೆ ಸೂರ್ಯನಂತೆ ಪ್ರಜ್ವಲಿಸುತ್ತಿತ್ತು. ಅವನ ಬಟ್ಟೆ ಕೂಡ ಬೆಳ್ಳಗೆ ಮಿರಮಿರನೆ ಹೊಳೆಯುತ್ತಿತ್ತು. ಬಳಿಕ ಯೇಸುವಿನ ಜೊತೆ ಇಬ್ಬರು ಕಾಣಿಸಿಕೊಂಡರು. ಒಬ್ಬನು ಮೋಶೆ ತರ, ಇನ್ನೊಬ್ಬನು ಎಲೀಯನ ತರ ಕಾಣುತ್ತಿದ್ದನು. ಅವರಿಬ್ಬರು ಯೇಸುವಿನೊಂದಿಗೆ “ಯೆರೂಸಲೇಮಿನಲ್ಲಿ ಪೂರೈಸಬೇಕಾಗಿದ್ದ ಅವನ ನಿರ್ಗಮನದ ಕುರಿತು” ಅಂದರೆ ಬಹುಶಃ ಅವನ ಮರಣ ಹಾಗೂ ಪುನರುತ್ಥಾನದ ಕುರಿತು ಮಾತಾಡುತ್ತಿದ್ದರು. ಇದನ್ನು ಕೇಳಿಸಿಕೊಂಡ ಪೇತ್ರನು ಯೇಸು ಕಷ್ಟಗಳನ್ನು ಅನುಭವಿಸಿ ಸಾಯುವುದಿಲ್ಲವೆಂದು ತಾನು ನೆನಸಿದ್ದು ತಪ್ಪೆಂದು ಅರಿತುಕೊಂಡ.—ಲೂಕ 9:30, 31.

22, 23. (1) ಪೇತ್ರ ಹುಮ್ಮಸ್ಸು ಮತ್ತು ದಯೆ ತೋರಿಸಿದ್ದು ಹೇಗೆ? (2) ಆ ರಾತ್ರಿ ಪೇತ್ರ, ಯಾಕೋಬ, ಯೋಹಾನರು ಬೇರಾವ ಬಹುಮಾನ ಪಡೆದರು?

22 ಈ ದರ್ಶನ ಎಷ್ಟು ರೋಮಾಂಚಕವಾಗಿತ್ತೆಂದರೆ ಪೇತ್ರನಿಗೆ ಅದರಲ್ಲಿ ಹೇಗಾದರೂ ಒಳಗೂಡಲೇಬೇಕು, ಆ ದರ್ಶನ ಇನ್ನೂ ಮುಂದುವರಿಯುವಂತೆ ಮಾಡಬೇಕು ಎಂದನಿಸಿತು. ಮೋಶೆ ಮತ್ತು ಎಲೀಯ ಯೇಸುವನ್ನು ಬಿಟ್ಟುಹೋಗುತ್ತಿರುವಂತೆ ಕಂಡಾಗ ಪೇತ್ರನಿಗೆ ಸುಮ್ಮನಿರಲು ಆಗಲಿಲ್ಲ. “ಉಪದೇಶಕನೇ, ನಾವು ಇಲ್ಲೇ ಇರುವುದು ಒಳ್ಳೇದು; ಆದುದರಿಂದ ನಿನಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದರಂತೆ ನಾವು ಮೂರು ಗುಡಾರಗಳನ್ನು ಕಟ್ಟೋಣ” ಎಂದ. ಯೆಹೋವನ ಆ ಇಬ್ಬರು ಸೇವಕರು ಸತ್ತು ಎಷ್ಟೋ ವರ್ಷಗಳಾಗಿದ್ದವು. ದರ್ಶನದಲ್ಲಿ ಕಾಣಿಸಿದ್ದು ಬರೀ ಅವರ ಪ್ರತಿರೂಪವಷ್ಟೇ. ಹಾಗಾಗಿ ಅವರಿಗೆ ಗುಡಾರಗಳ ಅಗತ್ಯವಿರಲಿಲ್ಲ. ಪೇತ್ರ ಸರಿಯಾಗಿ ಯೋಚಿಸದೇ ಏನೋ ಹೇಳಿಬಿಟ್ಟ. ಅಷ್ಟು ಹುಮ್ಮಸ್ಸು ಅವನಲ್ಲಿ. ದಯಾಮಯಿಯೂ ಹೌದು. ಈ ಗುಣಗಳೇ ನಮ್ಮನ್ನು ಅವನೆಡೆಗೆ ಸೂಜಿಗಲ್ಲಿನಂತೆ ಆಕರ್ಷಿಸುತ್ತವಲ್ಲವೇ?—ಲೂಕ 9:33.

ಯಾಕೋಬ ಯೋಹಾನರೊಂದಿಗೆ ಪೇತ್ರನಿಗೂ ಒಂದು ರೋಮಾಂಚಕ ದರ್ಶನವನ್ನು ನೋಡುವ ಬಹುಮಾನ ಸಿಕ್ಕಿತು

23 ಪೇತ್ರ, ಯಾಕೋಬ, ಯೋಹಾನರಿಗೆ ಇನ್ನೊಂದು ಬಹುಮಾನವೂ ಸಿಕ್ಕಿತು. ಆ ಪರ್ವತದ ಮೇಲಿದ್ದ ಆ ಮೂವರ ಮೇಲೆ ಒಂದು ಮೋಡ ಕವಿದು ಅದರೊಳಗಿಂದ “ಇವನು ನಾನು ಆರಿಸಿಕೊಂಡಿರುವ ನನ್ನ ಮಗನು. ಇವನ ಮಾತಿಗೆ ಕಿವಿಗೊಡಿರಿ” ಎಂಬ ವಾಣಿ ಕೇಳಿಬಂತು. ಆ ವಾಣಿ ಯೆಹೋವ ದೇವರದ್ದು! ಅಲ್ಲಿಗೆ ಆ ದರ್ಶನ ಮುಕ್ತಾಯಗೊಂಡಿತು. ಅವರೊಂದಿಗೆ ಯೇಸು ಮಾತ್ರ ಉಳಿದನು.—ಲೂಕ 9:34-36.

24. (1) ರೂಪಾಂತರ ದರ್ಶನದಿಂದ ಪೇತ್ರನಿಗೆ ಹೇಗೆ ಸಹಾಯವಾಯಿತು? (2) ನಮಗಿಂದು ಅದು ಯಾವ ರೀತಿಯಲ್ಲಿ ಸಹಾಯ ಮಾಡುವುದು?

24 ಆ ರೂಪಾಂತರ ದರ್ಶನವು ಪೇತ್ರನಿಗೆ ಖಂಡಿತ ಒಂದು ಉಡುಗೊರೆಯಾಗಿತ್ತು. ನಮಗೂ ಒಂದು ಉಡುಗೊರೆಯಾಗಿದೆ! ಯೇಸು ಸ್ವರ್ಗದಲ್ಲಿ ಮಹಿಮಾನ್ವಿತ ರಾಜನಾಗಿರುವುದರ ಮುನ್ನೋಟವನ್ನು ಆ ರಾತ್ರಿ ಪ್ರತ್ಯಕ್ಷವಾಗಿ ನೋಡಲು ಮತ್ತು “ಅವನ ಮಹತ್ತನ್ನು ಕಣ್ಣಾರೆ ಕಂಡ”ವರಲ್ಲಿ ಒಬ್ಬನಾಗಲು ಸಿಕ್ಕಿದ ಸುಯೋಗದ ಕುರಿತು ಪೇತ್ರ ದಶಕಗಳ ನಂತರ ಬರೆದನು. ಆ ದರ್ಶನವು ದೇವರ ವಾಕ್ಯದಲ್ಲಿದ್ದ ಅನೇಕ ಪ್ರವಾದನೆಗಳು ಸತ್ಯವೆಂದು ಸ್ಥಿರೀಕರಿಸಿತು. ಮಾತ್ರವಲ್ಲ ಮುಂದೆ ಬರಲಿದ್ದ ಸಂಕಷ್ಟಗಳನ್ನು ತಾಳಿಕೊಳ್ಳಲು ಪೇತ್ರನ ನಂಬಿಕೆಯನ್ನು ಬಲಪಡಿಸಿತು. (2 ಪೇತ್ರ 1:16-19 ಓದಿ.) ಆ ದರ್ಶನ ನಮ್ಮ ನಂಬಿಕೆಯನ್ನು ಕೂಡ ಬಲಪಡಿಸಬಲ್ಲದು. ಅದಕ್ಕಾಗಿ ನಾವು ಯೆಹೋವನು ನಮ್ಮ ಮೇಲೆ ನೇಮಿಸಿರುವ ಯಜಮಾನನಾದ ಯೇಸುವಿಗೆ ಪೇತ್ರನಂತೆ ನಿಷ್ಠರಾಗಿ ಉಳಿಯಬೇಕು. ಅವನಿಂದ ಕಲಿಯಬೇಕು. ಅವನು ಗದರಿಕೆ ತಿದ್ದುಪಾಟು ನೀಡುವಾಗ ಸ್ವೀಕರಿಸಬೇಕು. ದಿನದಿನವೂ ಅವನನ್ನು ದೀನತೆಯಿಂದ ಹಿಂಬಾಲಿಸಬೇಕು.

^ ಪ್ಯಾರ. 6 ಈ ಸಂದರ್ಭದಲ್ಲಿ ಯೇಸುವಿನ ಮಾತಿಗೆ ಸಭಾಮಂದಿರದಲ್ಲಿದ್ದ ಜನರು ತೋರಿಸಿದ ಭಿನ್ನ ಪ್ರತಿಕ್ರಿಯೆಗಳು ಅವರ ಚಂಚಲ ಮನಸ್ಸಿಗೆ ಹಿಡಿದ ಕನ್ನಡಿಯಾಗಿತ್ತು. ಹಿಂದಿನ ದಿನವೇ ಅವರು ಯೇಸುವನ್ನು ದೇವರ ಪ್ರವಾದಿ ಎಂದು ಉತ್ಸಾಹದಿಂದ ಘೋಷಿಸಿದ್ದರು. ಆದರೆ ಒಂದೇ ದಿನದೊಳಗೆ ಅವರ ಪ್ರತಿಕ್ರಿಯೆ ಬದಲಾಗಿತ್ತು.—ಯೋಹಾ. 6:14.

^ ಪ್ಯಾರ. 11 ಈ ಪ್ರಯಾಣ 50 ಕಿ.ಮೀ. ದೂರದ್ದಾಗಿತ್ತು. ಅವರು ಗಲಿಲಾಯ ಸಮುದ್ರ ತೀರದಿಂದ ಪ್ರಯಾಣ ಆರಂಭಿಸಿದರು. ಇದು ಸಮುದ್ರ ಮಟ್ಟದಿಂದ 700 ಅಡಿ ಕೆಳಗಿತ್ತು. ಹೋದ ಸ್ಥಳ ಸಮುದ್ರ ಮಟ್ಟದಿಂದ 1,150 ಅಡಿ ಎತ್ತರದಲ್ಲಿತ್ತು. ಪ್ರಕೃತಿ ಸೌಂದರ್ಯವನ್ನು ಮೈವೆತ್ತಿ ನಿಂತ ರಮಣೀಯ ಪ್ರದೇಶಗಳನ್ನು ಅವರು ಹಾದುಹೋದರು.