ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹದಿನೆಂಟು

‘ತನ್ನ ಹೃದಯದಲ್ಲಿ ತೀರ್ಮಾನಗಳನ್ನು ಮಾಡಿಕೊಂಡಾಕೆ’

‘ತನ್ನ ಹೃದಯದಲ್ಲಿ ತೀರ್ಮಾನಗಳನ್ನು ಮಾಡಿಕೊಂಡಾಕೆ’

1, 2. (1) ಮರಿಯಳ ಪ್ರಯಾಣವನ್ನು ವರ್ಣಿಸಿ. (2) ಆ ಪ್ರಯಾಣ ಅವಳಿಗೆ ಏಕೆ ಕಷ್ಟಕರವಾಗಿತ್ತೆಂದು ವಿವರಿಸಿ.

ಮರಿಯಳು ಕತ್ತೆಯ ಮೇಲೆ ಕುಳಿತು ಪ್ರಯಾಣ ಆರಂಭಿಸಿ ಅನೇಕ ತಾಸುಗಳು ಕಳೆದಿದ್ದವು. ಯೋಸೇಫನು ಕತ್ತೆಯನ್ನು ಎಳೆಯುತ್ತಾ ಮುಂದೆ ಮುಂದೆ ನಡೆಯುತ್ತಿದ್ದ. ಅವರು ಹೋಗುತ್ತಿದ್ದದ್ದು ಬೇತ್ಲೆಹೇಮ್‌ಗೆ. ಮರಿಯ ಆಗಾಗ ಆ ಕಡೆ ಈ ಕಡೆ ಜರುಗುತ್ತ ಸರಿಯಾಗಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದಳು. ಗರ್ಭದಲ್ಲಿದ್ದ ಮಗು ಆಗೊಮ್ಮೆ ಈಗೊಮ್ಮೆ ಚಲಿಸುತ್ತಿದ್ದ ಅನುಭವ ಆಕೆಗೆ ಆಗುತ್ತಿತ್ತು.

2 ಮರಿಯಳು “ದಿನತುಂಬಿದ ಗರ್ಭಿಣಿ”ಯಾಗಿದ್ದಳೆಂದು ಬೈಬಲ್‌ ವರ್ಣಿಸುತ್ತದೆ. (ಲೂಕ 2:5) ಈ ದಂಪತಿ ಪ್ರಯಾಣಿಸುತ್ತಾ ಒಂದರ ನಂತರ ಒಂದು ಹೊಲವನ್ನು ದಾಟುತ್ತಿದ್ದಂತೆ ಅಲ್ಲಿ ಉಳುತ್ತಿದ್ದ ಬಿತ್ತುತ್ತಿದ್ದ ರೈತರಲ್ಲಿ ಕೆಲವರು ಅವರತ್ತ ನೋಡಿ ಯಾಕೆ ಈ ಸ್ತ್ರೀ ಇಂಥಾ ಸ್ಥಿತಿಯಲ್ಲಿ ಪ್ರಯಾಣಿಸುತ್ತಿದ್ದಾಳೆ ಎಂದು ಆಶ್ಚರ್ಯಪಟ್ಟಿರಬೇಕು. ಹೌದು, ಮರಿಯ ನಜರೇತಿನಿಂದ ಇಷ್ಟು ದೂರ ಪ್ರಯಾಣ ಬೆಳಸಲು ಕಾರಣವೇನು?

3. (1) ಮರಿಯಳಿಗೆ ಯಾವ ನೇಮಕ ಸಿಕ್ಕಿತ್ತು? (2) ಆಕೆಯ ಬಗ್ಗೆ ನಾವೇನು ಕಲಿಯಲಿದ್ದೇವೆ?

3 ಕೆಲವು ತಿಂಗಳುಗಳ ಮೊದಲು ಆ ಯೆಹೂದಿ ಯುವತಿ ಮಾನವ ಇತಿಹಾಸದಲ್ಲೇ ಅದ್ವಿತೀಯವಾದ ಒಂದು ನೇಮಕವನ್ನು ಪಡೆದಿದ್ದಳು. ಅದೇನೆಂದರೆ ದೇವಕುಮಾರನನ್ನು ಆಕೆ ತನ್ನ ಗರ್ಭದಲ್ಲಿ ಹೊತ್ತು, ಹೆರಬೇಕಿತ್ತು. ಮುಂದೆ ಮೆಸ್ಸೀಯನಾಗಲಿದ್ದವನು ಅವನೇ! (ಲೂಕ 1:35) ಹೆರಿಗೆ ಸಮಯ ಹತ್ತಿರವಾಗುತ್ತಿದ್ದಾಗಲೇ ಆ ಅನಿರೀಕ್ಷಿತ ಪ್ರಯಾಣ ಮಾಡಬೇಕಾಗಿ ಬಂತು. ಈ ಮಧ್ಯೆ ಮರಿಯಳ ನಂಬಿಕೆಗೆ ಅನೇಕ ಸವಾಲುಗಳು ಎದುರಾದವು. ಆಧ್ಯಾತ್ಮಿಕವಾಗಿ ದೃಢವಾಗಿ ಉಳಿಯಲು ಆಕೆಗೆ ಯಾವುದು ಸಹಾಯಮಾಡಿತೆಂದು ನಾವೀಗ ನೋಡೋಣ.

ಬೇತ್ಲೆಹೇಮಿಗೆ ಪಯಣ

4, 5. (1) ಯೋಸೇಫ ಮತ್ತು ಮರಿಯ ಬೇತ್ಲೆಹೇಮಿಗೆ ಏಕೆ ಹೋಗಬೇಕಾಯಿತು? (2) ಕೈಸರನು ಕೊಟ್ಟ ಆಜ್ಞೆಯಿಂದ ಯಾವ ಪ್ರವಾದನೆ ನೆರವೇರಲು ಸಹಾಯವಾಯಿತು?

4 ಯೋಸೇಫ ಮರಿಯರಷ್ಟೆ ಅಲ್ಲ ಬೇರೆ ಜನರೂ ಪ್ರಯಾಣಿಸುತ್ತಿದ್ದರು. ಏಕೆಂದರೆ ಎಲ್ಲರು ತಮ್ಮ ತಮ್ಮ ಊರಿಗೆ ಹೋಗಿ ಹೆಸರು ನೋಂದಾಯಿಸಬೇಕೆಂದು ಕೈಸರ ಔಗುಸ್ತನು ಆಗತಾನೇ ಒಂದು ಆಜ್ಞೆ ಹೊರಡಿಸಿದ್ದನು. “ಯೋಸೇಫನು ದಾವೀದನ ಮನೆತನದವನೂ ವಂಶದವನೂ ಆಗಿದ್ದರಿಂದ ಅವನು ಸಹ ಗಲಿಲಾಯ ಸೀಮೆಯ ನಜರೇತ್‌ ಎಂಬ ಊರಿನಿಂದ ಹೊರಟು ಯೂದಾಯದಲ್ಲಿ ಬೇತ್ಲೆಹೇಮ್‌ ಎಂದು ಕರೆಯಲ್ಪಡುತ್ತಿದ್ದ ದಾವೀದನ ಊರಿಗೆ. . . ಹೋದನು” ಎನ್ನುತ್ತದೆ ವೃತ್ತಾಂತ.—ಲೂಕ 2:1-5.

5 ಈ ಸಮಯದಲ್ಲಿ ಕೈಸರನು ಕೊಟ್ಟ ಆಜ್ಞೆ ಆಕಸ್ಮಿಕವಾಗಿರಲಿಲ್ಲ. ಯಾಕೆಂದರೆ ಬೇತ್ಲೆಹೇಮಿನಲ್ಲಿ ಮೆಸ್ಸೀಯನು ಜನಿಸುವನೆಂದು ಸುಮಾರು 700 ವರ್ಷಗಳ ಹಿಂದೆಯೇ ತಿಳಿಸಲಾಗಿತ್ತು. ನಜರೇತಿನಿಂದ ಕೇವಲ 11 ಕಿ.ಮೀ. ದೂರದಲ್ಲೂ ಬೇತ್ಲೆಹೇಮ್‌ ಎಂಬ ಒಂದು ಊರಿತ್ತು. ಆದರೆ ಮೆಸ್ಸೀಯನು ಹುಟ್ಟಲಿದ್ದ ಸ್ಥಳ ‘ಎಫ್ರಾತದ ಬೇತ್ಲೆಹೇಮ್‌’ ಎಂದು ಪ್ರವಾದನೆ ನಿರ್ದಿಷ್ಟವಾಗಿ ಹೇಳಿತ್ತು. (ಮೀಕ 5:2 ಓದಿ.) ನಜರೇತಿನಿಂದ ಆ ಚಿಕ್ಕ ಊರಿಗೆ ಹೋಗಲು ಪ್ರಯಾಣಿಕರು ಸಮಾರ್ಯದ ಮಾರ್ಗವಾಗಿ 130 ಕಿ.ಮೀ. ದೂರ ಕ್ರಮಿಸಬೇಕಾಗುತ್ತಿತ್ತು. ಗುಡ್ಡಗಾಡಿನ ದಾರಿ ಅದು. ಯೋಸೇಫ ಹೋಗಬೇಕಾಗಿದ್ದದ್ದು ಈ ಬೇತ್ಲೆಹೇಮಿಗೇ. ಅದು ಅರಸನಾದ ದಾವೀದನ ಊರಾಗಿತ್ತು. ಯೋಸೇಫನೂ ಮರಿಯಳೂ ದಾವೀದನ ಮನೆತನಕ್ಕೆ ಸೇರಿದವರಾಗಿದ್ದದರಿಂದ ಅಲ್ಲಿಗೆ ಹೋಗಬೇಕಿತ್ತು.

6, 7. (1) ಬೇತ್ಲೆಹೇಮ್‌ಗೆ ಪ್ರಯಾಣ ಬೆಳೆಸಿದರೆ ಮರಿಯಳಿಗೆ ಯಾವೆಲ್ಲ ಕಷ್ಟಗಳು ಎದುರಾಗಲಿಕ್ಕಿದ್ದವು? (2) ಮದುವೆಯಾದ ಬಳಿಕ ಮರಿಯಳು ನಿರ್ಣಯಗಳನ್ನು ಮಾಡುವ ವಿಷಯದಲ್ಲಿ ಯಾವ ಬದಲಾವಣೆಯಾಯಿತು? (ಪಾದಟಿಪ್ಪಣಿ ಸಹ ನೋಡಿ.)

6 ಆದರೆ ಬೇತ್ಲೆಹೇಮಿಗೆ ಪ್ರಯಾಣಿಸಲು ಯೋಸೇಫ ನಿರ್ಣಯಿಸಿದಾಗ ಅವನೊಂದಿಗೆ ಹೋಗಲು ಮರಿಯಳು ಒಪ್ಪಿದಳಾ? ಆಕೆಗೆ ಆ ಪ್ರಯಾಣ ಕಷ್ಟಕರವಾಗಿರಲಿತ್ತು. ಅದು ಶರತ್ಕಾಲದ ಆರಂಭವಾಗಿದ್ದರಿಂದ ಅಲ್ಪಸ್ವಲ್ಪ ಮಳೆ ಬೀಳುವ ಸಂಭವವೂ ಇತ್ತು. ಅಷ್ಟೇ ಅಲ್ಲ, ಬೇತ್ಲೆಹೇಮ್‌ 2,500 ಅಡಿಗಿಂತ ಹೆಚ್ಚು ಎತ್ತರದಲ್ಲಿತ್ತು. ಗುಡ್ಡಗಾಡಿನ ದಾರಿಯಲ್ಲಿ ಹಲವಾರು ದಿನಗಳ ಪ್ರಯಾಣದ ಕೊನೆಯಲ್ಲಿ ಅಷ್ಟೊಂದು ಎತ್ತರದ ಪ್ರದೇಶಕ್ಕೆ ಹತ್ತುವುದು ತುಂಬಾ ಆಯಾಸಕರ. ಗರ್ಭಿಣಿಯಾಗಿದ್ದ ಮರಿಯಳು ವಿಶ್ರಾಂತಿಗಾಗಿ ಅಲ್ಲಲ್ಲಿ ನಿಲ್ಲಬೇಕಾಗಿ ಬರಬಹುದಾದ ಕಾರಣ ಬೇತ್ಲೆಹೇಮ್‌ಗೆ ತಲಪಲು ಮಾಮೂಲಿಗಿಂತ ಹೆಚ್ಚು ಸಮಯ ಹಿಡಿಯಲಿತ್ತು. ಈ ಕಾರಣಗಳಿಂದಾಗಿ ಮರಿಯಳಿಗೆ ಈ ಪ್ರಯಾಣ ಬೆಳಸಲು ಧೈರ್ಯ ಬೇಕಿತ್ತೆಂಬುದು ನಿಸ್ಸಂದೇಹ. ತುಂಬು ಗರ್ಭಿಣಿಯಾಗಿರುವ ಯಾವ ಹೆಣ್ಣೇ ಆಗಲಿ ಇಂಥ ಸಮಯದಲ್ಲಿ ಮನೆಯಲ್ಲಿರಲು ಆಶಿಸುತ್ತಾಳೆ. ಹೆರಿಗೆ ನೋವು ಶುರುವಾಗುವಾಗ ಕುಟುಂಬದವರು, ಮಿತ್ರರು ಹತ್ತಿರದಲ್ಲೇ ಇರುತ್ತಾರೆಂಬ ಕಾರಣಕ್ಕೆ.

ಬೇತ್ಲೆಹೇಮಿನ ಪ್ರಯಾಣ ಸುಲಭದ್ದಾಗಿರಲಿಲ್ಲ

7 ಹೀಗಿದ್ದರೂ ಮರಿಯಳು ಯೋಸೇಫನೊಂದಿಗೆ ಹೋಗಲು ಒಪ್ಪಿದಳು. ಯೋಸೇಫನು “ತನ್ನ ಪತ್ನಿಯಾಗಿದ್ದ ಮರಿಯಳೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಲಿಕ್ಕಾಗಿ ಹೋದನು” ಎಂದು ಬೈಬಲ್‌ ಲೇಖಕರಲ್ಲೊಬ್ಬನಾದ ಲೂಕ ಹೇಳುತ್ತಾನೆ. (ಲೂಕ 2:5) ಮದುವೆಯಾದ ಮೇಲೆ ಕುಟುಂಬದ ಶಿರಸ್ಸು ಯೋಸೇಫನೆಂದು ಮರಿಯಳು ಒಪ್ಪಿಕೊಂಡಳು. ಹಾಗಾಗಿ ಗಂಡನಿಗೆ ಸಹಕಾರಿಣಿಯಾಗಿರುವಂತೆ ದೇವರು ಕೊಟ್ಟ ಪಾತ್ರಕ್ಕನುಸಾರ ಆಕೆ ಯೋಸೇಫನ ನಿರ್ಣಯಗಳನ್ನು ಬೆಂಬಲಿಸಿದಳು. * ತನಗೆ ಕಷ್ಟಗಳನ್ನು ತರಲಿಕ್ಕಿದ್ದ ಒಂದು ನಿರ್ಣಯಕ್ಕೆ ವಿಧೇಯಳಾಗಬೇಕೋ ಇಲ್ಲವೋ ಎನ್ನುವ ಪ್ರಶ್ನೆ ಆಕೆಯ ನಂಬಿಕೆಗೆ ಸವಾಲೊಡ್ಡಿದಾಗ ವಿಧೇಯತೆ ತೋರಿಸುವ ಮೂಲಕ ಅದನ್ನು ಎದುರಿಸಿದಳು.

8. (1) ಮರಿಯಳು ಯೋಸೇಫನೊಂದಿಗೆ ಬೇತ್ಲೆಹೇಮ್‌ಗೆ ಹೋಗಲು ಇನ್ನೇನು ಕಾರಣವಿದ್ದಿರಬಹುದು? (2) ಮರಿಯಳ ಮಾದರಿ ನಂಬಿಗಸ್ತ ಜನರಿಗೆ ಏಕೆ ಪ್ರೋತ್ಸಾಹದಾಯಕ?

8 ಮರಿಯಳು ಯೋಸೇಫನಿಗೆ ವಿಧೇಯತೆ ತೋರಿಸಲು ಇನ್ನೇನು ಕಾರಣವಿದ್ದಿರಬಹುದು? ಮೆಸ್ಸೀಯನು ಎಫ್ರಾತದ ಬೇತ್ಲೆಹೇಮ್‌ನಲ್ಲಿ ಜನಿಸುವನೆಂದು ತಿಳಿಸಿದ ಪ್ರವಾದನೆ ಆಕೆಗೆ ಗೊತ್ತಿತ್ತಾ? ಆ ಬಗ್ಗೆ ಬೈಬಲ್‌ ಏನೂ ತಿಳಿಸುವುದಿಲ್ಲ. ಆದರೆ ಆ ಪ್ರವಾದನೆಯ ಕುರಿತು ಅವಳಿಗೆ ಗೊತ್ತಿರಲಿಲ್ಲವೆಂದೂ ಹೇಳಸಾಧ್ಯವಿಲ್ಲ. ಏಕೆಂದರೆ ಆ ಪ್ರವಾದನೆ ಧಾರ್ಮಿಕ ಮುಖಂಡರಿಗೆ ಮಾತ್ರವಲ್ಲ ಜನಸಾಮಾನ್ಯರಿಗೂ ತಿಳಿದಿತ್ತು. (ಮತ್ತಾ. 2:1-7; ಯೋಹಾ. 7:40-42) ಮರಿಯಳಿಗಂತೂ ಶಾಸ್ತ್ರಗ್ರಂಥದ ವಿಷಯದಲ್ಲಿ ಒಳ್ಳೇ ಜ್ಞಾನವಿತ್ತು. (ಲೂಕ 1:46-55) ಆಕೆ ಬೇತ್ಲೆಹೇಮ್‌ಗೆ ಹೋದದ್ದು ಗಂಡನಿಗೆ ವಿಧೇಯಳಾಗಲಿಕ್ಕಾ? ಕೈಸರನ ಆಜ್ಞೆ ಪಾಲಿಸಲಿಕ್ಕಾ? ಅಥವಾ ಯೆಹೋವನ ಪ್ರವಾದನೆ ಗೊತ್ತಿದ್ದರಿಂದನಾ? ಅಥವಾ ಈ ಮೂರೂ ಕಾರಣಗಳಿಂದಾಗಿ ಹೋಗಿದ್ದಳಾ? ಕಾರಣ ಏನೇ ಇರಲಿ ಅವಳ ಮಾದರಿಯಂತೂ ಗಮನಾರ್ಹ. ಪುರುಷ, ಸ್ತ್ರೀ ಇಬ್ಬರಲ್ಲೂ ಈ ದೀನ ಮತ್ತು ವಿಧೇಯ ಮನೋಭಾವ ಇರಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೆ. ಅಧೀನತೆ ಎಂಬ ಸದ್ಗುಣವು ಕಡೆಗಣಿಸಲ್ಪಡುತ್ತಿರುವ ಈ ದಿನಗಳಲ್ಲಿ ಮರಿಯಳ ಮಾದರಿಯು ನಂಬಿಗಸ್ತ ಜನರೆಲ್ಲರಿಗೆ ಪ್ರೋತ್ಸಾಹದಾಯಕ.

ಕ್ರಿಸ್ತನ ಜನನ

9, 10. (1) ಬೇತ್ಲೆಹೇಮ್‌ನ ಹತ್ತಿರ ಬರುತ್ತಿದ್ದಂತೆ ಯೋಸೇಫ ಮತ್ತು ಮರಿಯಳಿಗೆ ಯಾವುದರ ನೆನಪಾಗಿರಬೇಕು? (2) ಅವರಿಬ್ಬರು ಎಲ್ಲಿ ತಂಗಿದರು ಮತ್ತು ಏಕೆ?

9 ಪ್ರಯಾಣ ಮಾಡುತ್ತಾ ಬಂದಂತೆ ದೂರದಿಂದ ಬೇತ್ಲೆಹೇಮ್‌ ಕಣ್ಣಿಗೆ ಬಿದ್ದಾಗ ಮರಿಯಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿರಬೇಕು. ಅಲ್ಲಿಗೆ ತಲಪಲು ಯೋಸೇಫ ಮರಿಯ ಗುಡ್ಡವನ್ನು ಹತ್ತುತ್ತಾ ಕೊನೆಯ ಕೊಯ್ಲಿಗೆ ಸಿದ್ಧವಾಗಿದ್ದ ಆಲಿವ್‌ ತೋಟಗಳನ್ನು ದಾಟುವಾಗ ಆ ಚಿಕ್ಕ ಊರಿನ ಇತಿಹಾಸದ ನೆನಪು ಅವರಿಗೆ ಮರುಕಳಿಸಿರಬೇಕು. ಪ್ರವಾದಿ ಮೀಕನು ಹೇಳಿದಂತೆ ಅದು ಯೆಹೂದದಲ್ಲೇ ಅತಿ ಚಿಕ್ಕ ಊರಾಗಿತ್ತು. ಆದರೆ ಅಲ್ಲೇ ಒಂದು ಸಾವಿರಕ್ಕಿಂತ ಹೆಚ್ಚು ವರ್ಷಗಳ ಮುಂಚೆ ಬೋವಜ, ನೊವೊಮಿ ನಂತರ ದಾವೀದ ಹುಟ್ಟಿದ್ದರು.

10 ಯೋಸೇಫ ಮತ್ತು ಮರಿಯಳು ಬಂದಾಗ ಆ ಊರು ಜನರಿಂದ ಕಿಕ್ಕಿರಿದಿತ್ತು. ಎಷ್ಟೋ ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮೊದಲೇ ಬಂದಿದ್ದರಿಂದ ವಸತಿಗೃಹದಲ್ಲಿ ಯೋಸೇಫ ಮರಿಯಳಿಗೆ ಸ್ಥಳ ಸಿಕ್ಕಲಿಲ್ಲ. * ಬೇರೆ ದಾರಿ ಕಾಣದೆ ಆ ರಾತ್ರಿ ಒಂದು ಕೊಟ್ಟಿಗೆಯಲ್ಲಿ ತಂಗಿದರು. ಅಲ್ಲಿ ಮರಿಯಳಿಗೆ ಅವಳು ಹಿಂದೆಂದೂ ಅನುಭವಿಸಿರದಂಥ ನೋವು ಶುರುವಾಯಿತು. ಅಂಥ ಒಂದು ಅನನುಕೂಲ ಸ್ಥಳದಲ್ಲಿ ಅವಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆ ನೋವು ಹೆಚ್ಚಾಗುತ್ತಿದ್ದಂತೆ ಮರಿಯಳು ನರಳುತ್ತಿರುವುದನ್ನು ಕಂಡು ಯೋಸೇಫನಿಗಾದ ಕಳವಳವನ್ನು ಊಹಿಸಿ.

11. (1) ಮರಿಯಳ ಕಷ್ಟವನ್ನು ಜಗತ್ತಿನ ಯಾವ ಸ್ತ್ರೀಯಾದರೂ ಅರ್ಥಮಾಡಿಕೊಳ್ಳಶಕ್ತಳು ಏಕೆ? (2) ಯೇಸು ಯಾವ ವಿಧಗಳಲ್ಲಿ “ಜ್ಯೇಷ್ಠ ಪುತ್ರ”?

11 ಮರಿಯಳ ಈ ನೋವನ್ನು ಜಗತ್ತಿನ ಯಾವ ಸ್ತ್ರೀಯಾದರೂ ಅರ್ಥಮಾಡಿಕೊಳ್ಳಶಕ್ತಳು. ಬಾಧ್ಯತೆಯಾಗಿ ಬಂದ ಪಾಪದ ಕಾರಣ ಸ್ತ್ರೀಯರು ಮಕ್ಕಳನ್ನು ಹೆರುವಾಗ ತೀವ್ರ ನೋವನ್ನು ಅನುಭವಿಸುವರೆಂದು ಯೆಹೋವನು ಸುಮಾರು 4,000 ವರುಷಗಳ ಹಿಂದೆಯೇ ಮುಂತಿಳಿಸಿದ್ದನು. (ಆದಿ. 3:16) ಮರಿಯಳಿಗೆ ಈ ನೋವಿನಿಂದ ವಿನಾಯಿತಿ ಇತ್ತೆಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಆಕೆ ಅನುಭವಿಸಿದ ನೋವಿನ ಬಗ್ಗೆ ಲೂಕನು ತನ್ನ ವೃತ್ತಾಂತದಲ್ಲಿ ಏನೂ ವರ್ಣಿಸಿಲ್ಲ. “ಅವಳು ತನ್ನ ಚೊಚ್ಚಲು ಮಗನನ್ನು” ಹೆತ್ತಳು ಎಂದಷ್ಟೇ ಹೇಳಿದ್ದಾನೆ. (ಲೂಕ 2:7) ಹೌದು, ಮರಿಯಳ “ಚೊಚ್ಚಲು ಮಗ” ಅಥವಾ ಜ್ಯೇಷ್ಠ ಪುತ್ರನು ಹುಟ್ಟಿದ್ದನು. ಅವಳಿಗೆ ಹುಟ್ಟಿದ ಕಡಿಮೆಪಕ್ಷ ಏಳು ಮಕ್ಕಳಲ್ಲಿ ಇವನೇ ಮೊದಲನೆಯವನು. (ಮಾರ್ಕ 6:3) ಆದರೆ ಇವನು ಅವಳ ಬೇರೆ ಮಕ್ಕಳಿಗಿಂತ ತುಂಬ ಭಿನ್ನನಾಗಿದ್ದನು. ಏಕೆಂದರೆ ಇವನು ಮರಿಯಳ ಜ್ಯೇಷ್ಠಪುತ್ರನಷ್ಟೇ ಅಲ್ಲ, ಯೆಹೋವ ದೇವರ “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನೂ” ಆತನ ಏಕೈಕಜಾತ ಕುಮಾರನೂ ಆಗಿದ್ದನು.—ಕೊಲೊ. 1:15.

12. (1) ಮರಿಯಳು ಮಗುವನ್ನು ಎಲ್ಲಿ ಮಲಗಿಸಿದಳು? (2) ವರ್ಣಚಿತ್ರಗಳು, ನಾಟಕಗಳು, ಕ್ರಿಸ್ಮಸ್‌ ಗೋದಲಿಗಳು ಯೇಸುವಿನ ಜನನ ದೃಶ್ಯದ ಬಗ್ಗೆ ಕೊಡುವ ವರ್ಣನೆಗೂ ನಿಜ ಸಂಗತಿಗೂ ವ್ಯತ್ಯಾಸವೇನು?

12 ಈ ಹಂತದಲ್ಲಿ, ಲೂಕನ ವೃತ್ತಾಂತ ಒಂದು ಚಿರಪರಿಚಿತ ವಿವರವನ್ನು ಸೇರಿಸುತ್ತದೆ. ಮರಿಯಳು ಮಗುವನ್ನು “ಬಟ್ಟೆಯಲ್ಲಿ ಸುತ್ತಿ . . . ಗೋದಲಿಯಲ್ಲಿ ಮಲಗಿಸಿದಳು.” (ಲೂಕ 2:7) ಭೂಮಿಯಾದ್ಯಂತ ವರ್ಣಚಿತ್ರಗಳು, ನಾಟಕಗಳು, ಕ್ರಿಸ್ಮಸ್‌ ಗೋದಲಿಗಳು ಅತಿರೇಕಕ್ಕೆ ಹೋಗಿ ಯೇಸುವಿನ ಜನನ ದೃಶ್ಯವನ್ನು ಸುಂದರವಾಗಿ ಕಾಣುವಂತೆ ಬಣ್ಣಿಸುತ್ತವೆ. ಆದರೆ ನಿಜ ಸಂಗತಿಯೇ ಬೇರೆ. ಗೋದಲಿ ಅಂದರೆ ದನಕರುಗಳಿಗೆ ಮೇವು ಹಾಕುವ ಒಂದು ಬಾನೆ. ಇದು ಇರುವುದು ಕೊಟ್ಟಿಗೆಯಲ್ಲಿ. ಅಂದು ಮಾತ್ರವಲ್ಲ ಇಂದು ಕೂಡ ಶುದ್ಧಗಾಳಿ, ನೈರ್ಮಲ್ಯ ಇರದ ಸ್ಥಳವದು. ಅಂಥ ಒಂದು ಸ್ಥಳದಲ್ಲಿ ಈ ಕುಟುಂಬ ತಂಗಿತ್ತು. ಒಂದುವೇಳೆ ಬೇರೆ ಸ್ಥಳ ಲಭ್ಯವಿರುತ್ತಿದ್ದರೆ ಇಂಥ ಸ್ಥಳವನ್ನು ಯಾವ ಹೆತ್ತವರೂ ಆರಿಸಿಕೊಳ್ಳುತ್ತಿರಲಿಲ್ಲ. ಹೆಚ್ಚಿನ ಹೆತ್ತವರು ತಮ್ಮ ಮಕ್ಕಳಿಗೆ ಅತ್ಯುತ್ತಮವಾದುದನ್ನೇ ಕೊಡಲು ಬಯಸುತ್ತಾರೆ. ಹೀಗಿರುವಾಗ, ದೇವಕುಮಾರನಿಗಾಗಿ ಮರಿಯ ಯೋಸೇಫರು ಸಹ ಎಷ್ಟೋ ಹೆಚ್ಚು ಉತ್ತಮವಾದದ್ದನ್ನು ಕೊಡಲು ಬಯಸಿರಬೇಕಲ್ಲಾ?

13. (1) ಮಗುವಿನ ಆರೈಕೆಯಲ್ಲಿ ಮರಿಯ ಯೋಸೇಫರು ತಮ್ಮ ಬಳಿ ಇದ್ದದ್ದನ್ನೇ ಹೇಗೆ ಉತ್ತಮವಾಗಿ ಬಳಸಿಕೊಂಡರು? (2) ಇಂದು ವಿವೇಚನೆಯುಳ್ಳ ಹೆತ್ತವರು ಮರಿಯ ಯೋಸೇಫರಂತೆ ಯಾವುದಕ್ಕೆ ಆದ್ಯತೆ ಕೊಡಬೇಕು?

13 ಆದರೂ ಅವರು ತಮ್ಮಿಂದ ಏನು ಮಾಡಲಿಕ್ಕೆ ಆಗಲಿಲ್ಲವೋ ಅದರ ಬಗ್ಗೆ ಯೋಚಿಸುತ್ತ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ತಮ್ಮ ಬಳಿ ಇದ್ದದ್ದನ್ನೇ ಉತ್ತಮವಾಗಿ ಬಳಸಿಕೊಂಡರು. ಉದಾಹರಣೆಗೆ, ಮರಿಯಳು ತಾನೇ ಕೂಸಿನ ಆರೈಕೆ ಮಾಡಿದಳು. ಅದನ್ನು ಬಟ್ಟೆಯಿಂದ ಸುತ್ತಿ ಮೆಲ್ಲನೆ ಗೋದಲಿಯಲ್ಲಿ ಮಲಗಿಸಿದಳು. ಮಗುವನ್ನು ಬೆಚ್ಚಗೆ ಸುರಕ್ಷಿತವಾಗಿರಿಸಿದಳು. ಮಗುವಿಗಾಗಿ ತನ್ನಿಂದಾದುದೆಲ್ಲವನ್ನು ಮಾಡುವುದರಲ್ಲಿ ನಿರತಳಾದಳೇ ಹೊರತು ತನ್ನ ಅನನುಕೂಲ ಪರಿಸ್ಥಿತಿ ಕುರಿತು ಹಲುಬುತ್ತಾ ಇರಲಿಲ್ಲ. ಈ ಮಗುವನ್ನು ಆಧ್ಯಾತ್ಮಿಕವಾಗಿ ಪರಿಪಾಲಿಸುವುದೇ ಅತಿ ಪ್ರಾಮುಖ್ಯವೆಂದು ಮರಿಯ ಯೋಸೇಫರಿಬ್ಬರೂ ಅರಿತಿದ್ದರು. (ಧರ್ಮೋಪದೇಶಕಾಂಡ 6:6-8 ಓದಿ.) ಆಧ್ಯಾತ್ಮಿಕತೆಗೆ ಬೆಲೆ ಇಲ್ಲದ ಈ ಲೋಕದಲ್ಲಿ ಇಂದು ತಮ್ಮ ಮಕ್ಕಳನ್ನು ಪರಿಪಾಲಿಸುವಾಗ ವಿವೇಚನೆಯುಳ್ಳ ಹೆತ್ತವರು ಇದೇ ರೀತಿ ಆಧ್ಯಾತ್ಮಿಕ ಪರಿಪಾಲನೆಗೆ ಆದ್ಯತೆ ಕೊಡುತ್ತಾರೆ.

ಪ್ರೋತ್ಸಾಹದಾಯಕ ಭೇಟಿ

14, 15. (1) ಕುರುಬರು ಮಗುವನ್ನು ನೋಡಲು ಏಕೆ ಆತುರದಿಂದಿದ್ದರು? (2) ಕುರುಬರು ಕೊಟ್ಟಿಗೆಯಲ್ಲಿ ಯೇಸುವನ್ನು ನೋಡಿದ ನಂತರ ಏನು ಮಾಡಿದರು?

14 ಆ ಪ್ರಶಾಂತವಾದ ಸನ್ನಿವೇಶ ಥಟ್ಟನೆ ಬದಲಾಯಿತು! ಕೆಲವು ಕುರುಬರು ಆ ಕೊಟ್ಟಿಗೆಯೊಳಗೆ ಧಾವಿಸಿ ಬಂದರು. ಮುಖ್ಯವಾಗಿ ಮಗುವನ್ನು ನೋಡಲು ಆತುರದಿಂದಿದ್ದರು. ಅವರಲ್ಲೇನೊ ಸಡಗರ ಸಂಭ್ರಮ. ಮುಖದಲ್ಲಿ ಸಂತೋಷ ಎದ್ದುಕಾಣುತ್ತಿತ್ತು. ಗುಡ್ಡದ ಮಗ್ಗುಲಲ್ಲಿ ತಮ್ಮ ಕುರಿಹಿಂಡುಗಳೊಂದಿಗಿದ್ದ ಅವರು ತರಾತುರಿಯಿಂದ ಹೊರಟುಬಂದಿದ್ದರು. * ಬೆರಗಾಗಿ ಅವರನ್ನೇ ನೋಡುತ್ತಿದ್ದ ಮರಿಯ ಯೋಸೇಫರಿಗೆ ಆ ಕುರುಬರು ಸ್ವಲ್ಪ ಮುಂಚೆ ತಮಗಾದ ಅದ್ಭುತ ಅನುಭವವನ್ನು ಹೇಳತೊಡಗಿದರು. ಮಧ್ಯರಾತ್ರಿ ಫಕ್ಕನೆ ಒಬ್ಬ ದೇವದೂತನು ಅವರಿಗೆ ಕಾಣಿಸಿಕೊಂಡಿದ್ದನು. ಯೆಹೋವನ ಪ್ರಭೆಯು ಸುತ್ತಲೂ ಹೊಳೆಯುತ್ತಿತ್ತು. ಕ್ರಿಸ್ತ ಅಥವಾ ಮೆಸ್ಸೀಯನು ಬೇತ್ಲೆಹೇಮಿನಲ್ಲಿ ಈಗಷ್ಟೇ ಜನಿಸಿದ್ದಾನೆಂದು ಆ ದೇವದೂತನು ಘೋಷಿಸಿದ್ದನು. ಆ ಕೂಸನ್ನು ಬಟ್ಟೆಯಿಂದ ಸುತ್ತಿ ಗೋದಲಿಯಲ್ಲಿ ಮಲಗಿಸಿರುವುದನ್ನು ಕಾಣುವಿರಿ ಎಂದು ಹೇಳಿದ್ದನು. ಆಗ ಅವರನ್ನು ಇನ್ನಷ್ಟು ವಿಸ್ಮಯಗೊಳಿಸಿದ ಸಂಗತಿ ನಡೆಯಿತು. ಅಲ್ಲಿ ದೊಡ್ಡ ದೇವದೂತ ಗಣವು ಕಾಣಿಸಿಕೊಂಡು ಯೆಹೋವನನ್ನು ಕೊಂಡಾಡಿತು. ಇದನ್ನೆಲ್ಲಾ ಕುರುಬರು ಯೋಸೇಫ ಮತ್ತು ಮರಿಯಳಿಗೆ ವಿವರಿಸಿದರು.—ಲೂಕ 2:8-14.

15 ಈ ದೀನರಾದ ಕುರುಬರು ಬೇತ್ಲೆಹೇಮಿಗೆ ಓಡೋಡಿ ಬಂದದ್ದರಲ್ಲಿ ಆಶ್ಚರ್ಯವೇನಿಲ್ಲ! ದೇವದೂತನು ಹೇಳಿದಂತೆಯೇ ಗೋದಲಿಯಲ್ಲಿ ಮಲಗಿಸಲಾಗಿದ್ದ ಆ ನವಜನಿತ ಕೂಸನ್ನು ನೋಡಿ ಅವರು ಪುಳಕಿತರಾಗಿರಬೇಕು! ಈ ಶುಭವರ್ತಮಾನವನ್ನು ಅವರು ತಮ್ಮಲ್ಲೇ ಇಟ್ಟುಕೊಳ್ಳದೆ ತಾವು ನೋಡಿದ್ದನ್ನೆಲ್ಲಾ ಎಲ್ಲರಿಗೂ ತಿಳಿಸಿದರು. “ಕುರುಬರು ಹೇಳಿದ ವಿಷಯಗಳನ್ನು ಕೇಳಿಸಿಕೊಂಡವರೆಲ್ಲರೂ ಅತ್ಯಾಶ್ಚರ್ಯಪಟ್ಟರು.” (ಲೂಕ 2:17, 18) ಆ ದಿನಗಳ ಧರ್ಮಗುರುಗಳು ಕುರುಬರನ್ನು ತುಚ್ಛವಾಗಿ ನೋಡುತ್ತಿದ್ದರು. ಯೆಹೋವನಾದರೋ ಈ ದೀನ ನಂಬಿಗಸ್ತ ಪುರುಷರಿಗೆ ತನ್ನ ಮಗನ ಜನನದ ಸುದ್ದಿಯನ್ನು ಮೊದಲು ತಿಳಿಯಪಡಿಸುವ ಮೂಲಕ ಅವರನ್ನು ಮಾನ್ಯ ಮಾಡಿದನು. ಈ ಭೇಟಿ ಮರಿಯಳ ಮೇಲೆ ಯಾವ ಪರಿಣಾಮ ಬೀರಿತು?

ಯೆಹೋವನು ಆ ದೀನ ನಂಬಿಗಸ್ತ ಪುರುಷರನ್ನು ಮಾನ್ಯ ಮಾಡಿದನು

16. (1) ಮರಿಯಳು ಚಿಂತನಶೀಲ ಸ್ತ್ರೀಯಾಗಿದ್ದಳೆಂದು ನಮಗೆ ಹೇಗೆ ಗೊತ್ತಾಗುತ್ತದೆ? (2) ಜೀವನಪೂರ್ತಿ ಬಲವಾದ ನಂಬಿಕೆ ತೋರಿಸಲು ಅವಳಿಗೆ ಸಹಾಯಮಾಡಿದ ಒಂದು ಪ್ರಮುಖ ಅಂಶ ಯಾವುದು?

16 ಹೆರಿಗೆಯಿಂದಾಗಿ ಮರಿಯಳು ತೀರ ಸುಸ್ತಾಗಿ ಹೋಗಿದ್ದಳೆಂಬುದು ಖಂಡಿತ. ಆದರೂ ಅವಳು ಕುರುಬರ ಒಂದೊಂದು ಮಾತನ್ನು ಕಿವಿಗೊಟ್ಟು ಕೇಳಿದಳು. ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಾಗಿ “ಈ ಎಲ್ಲ ಮಾತುಗಳನ್ನು ಮನಸ್ಸಿನಲ್ಲಿ ಜೋಪಾನವಾಗಿಟ್ಟುಕೊಳ್ಳತೊಡಗಿದಳು ಮತ್ತು ತನ್ನ ಹೃದಯದಲ್ಲಿ ತೀರ್ಮಾನಗಳನ್ನು ಮಾಡಿಕೊಂಡಳು.” (ಲೂಕ 2:19) ಈಕೆ ಚಿಂತನಶೀಲ ಸ್ತ್ರೀಯಾಗಿದ್ದಳು. ಕುರುಬರಿಗೆ ದೇವದೂತರು ಕೊಟ್ಟ ಈ ಸಂದೇಶ ತನಗೆ ಮಹತ್ತ್ವದ್ದೆಂದು ಆಕೆಗೆ ತಿಳಿದಿತ್ತು. ಅವಳ ಮಗನು ಯಾರು, ಅವನ ಮಹತ್ವವೇನು ಎಂಬುದನ್ನು ಅರಿತು ಮಾನ್ಯ ಮಾಡುವಂತೆ ಅವಳ ದೇವರಾದ ಯೆಹೋವನು ಬಯಸಿದ್ದನು. ಆದಕಾರಣ, ಆಕೆ ಆ ಮಾತುಗಳನ್ನು ಆಲಿಸಿದ್ದಷ್ಟೇ ಅಲ್ಲ ಅದನ್ನೆಲ್ಲಾ ನೆನಪಿನಲ್ಲಿಟ್ಟುಕೊಂಡಳು. ಮುಂದಿನ ತಿಂಗಳುಗಳಲ್ಲಿ ವರ್ಷಗಳಲ್ಲಿ ಆ ಮಾತುಗಳ ಬಗ್ಗೆ ಪದೇಪದೇ ಯೋಚಿಸುತ್ತಿದ್ದಳು. ಅವಳಿಗೆ ಜೀವನಪೂರ್ತಿ ನಂಬಿಕೆ ತೋರಿಸಲು ಸಹಾಯಮಾಡಿದ ಒಂದು ಪ್ರಮುಖ ಅಂಶ ಇದಾಗಿತ್ತು.—ಇಬ್ರಿಯ 11:1 ಓದಿ.

ಮರಿಯಳು ಕುರುಬರ ಮಾತುಗಳನ್ನು ಗಮನಕೊಟ್ಟು ಕೇಳಿ ಮನಸ್ಸಿನಲ್ಲಿ ಜೋಪಾನವಾಗಿಟ್ಟಳು

17. ಆಧ್ಯಾತ್ಮಿಕ ಸತ್ಯಗಳ ವಿಷಯದಲ್ಲಿ ಮರಿಯಳ ಮಾದರಿಯನ್ನು ನಾವು ಹೇಗೆ ಅನುಸರಿಸಬಹುದು?

17 ಮರಿಯಳ ಮಾದರಿಯನ್ನು ನೀವೂ ಅನುಸರಿಸುವಿರಾ? ಯೆಹೋವನ ವಾಕ್ಯವಾದ ಬೈಬಲಿನಲ್ಲಿ ಮಹತ್ತ್ವಪೂರ್ಣ ಆಧ್ಯಾತ್ಮಿಕ ಸತ್ಯಗಳಿವೆ. ಆದರೆ ನಾವು ಆ ಸತ್ಯಗಳಿಗೆ ಗಮನ ಕೊಟ್ಟರೆ ಮಾತ್ರ ಅದರಿಂದ ನಮಗೆ ಒಳಿತಾಗುತ್ತದೆ. ಪಟ್ಟುಬಿಡದೆ ಬೈಬಲ್‌ ವಾಚನ ಮಾಡಿದರೆ ಆ ಸತ್ಯಗಳಿಗೆ ಗಮನ ಕೊಡಲು ಸಾಧ್ಯ. ಬೈಬಲ್‌ ಒಂದು ಒಳ್ಳೇ ಸಾಹಿತ್ಯವೆಂಬ ದೃಷ್ಟಿಯಿಂದ ಮಾತ್ರ ಓದಬಾರದು, ಬದಲಿಗೆ ಅದು ದೇವರ ಪ್ರೇರಿತ ವಾಕ್ಯವೆಂದು ಮನಸ್ಸಿನಲ್ಲಿಟ್ಟು ಓದಬೇಕು. (2 ತಿಮೊ. 3:16) ಬಳಿಕ, ಮರಿಯಳಂತೆ ನಾವು ಆಧ್ಯಾತ್ಮಿಕ ಸತ್ಯಗಳನ್ನು ಕಲಿತು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಅವುಗಳ ಕುರಿತು ಧ್ಯಾನಿಸುತ್ತಾ ಇರಬೇಕು. ಬೈಬಲಿನಿಂದ ನಾವು ಓದಿದ್ದನ್ನು ಧ್ಯಾನಿಸುತ್ತಾ ಯೆಹೋವನ ಬುದ್ಧಿವಾದವನ್ನು ಯಾವ ವಿಧಗಳಲ್ಲಿ ಇನ್ನಷ್ಟು ಚೆನ್ನಾಗಿ ಅನ್ವಯಿಸಬಹುದೆಂದು ಆಲೋಚಿಸಿದರೆ ನಮ್ಮ ನಂಬಿಕೆ ಹೆಚ್ಚೆಚ್ಚು ಬಲಗೊಳ್ಳುವುದು.

ಮನಸ್ಸಿನಲ್ಲಿ ಜೋಪಾನವಾಗಿಡಲು ಇನ್ನಷ್ಟು ಮಾತುಗಳು

18. (1) ಯೇಸು ಶಿಶುವಾಗಿದ್ದಾಗ ಮರಿಯ ಯೋಸೇಫರು ಧರ್ಮಶಾಸ್ತ್ರದ ನಿಯಮವನ್ನು ಹೇಗೆ ಪಾಲಿಸಿದರು? (2) ದೇವಾಲಯದಲ್ಲಿ ಅವರು ಕೊಟ್ಟ ಅರ್ಪಣೆಯಿಂದ ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಏನು ತಿಳಿದುಬರುತ್ತದೆ?

18 ಎಂಟು ದಿನ ತುಂಬಿದಾಗ ಮಗುವಿಗೆ ಮರಿಯ ಯೋಸೇಫರು ಧರ್ಮಶಾಸ್ತ್ರದ ನಿಯಮದ ಪ್ರಕಾರ ಸುನ್ನತಿ ಮಾಡಿಸಿದರು. ಅವರಿಗೆ ಮುಂಚೆಯೇ ನಿರ್ದೇಶಿಸಲಾದಂತೆ ಕೂಸಿಗೆ ಯೇಸು ಎಂದು ಹೆಸರಿಟ್ಟರು. (ಲೂಕ 1:31) ಮಗುವಿಗೆ ನಲ್ವತ್ತು ದಿನ ತುಂಬಿದಾಗ ಅವನನ್ನು ಬೇತ್ಲೆಹೇಮಿನಿಂದ ಸುಮಾರು 10 ಕಿ.ಮೀ. ದೂರದಲ್ಲಿದ್ದ ಯೆರೂಸಲೇಮಿನ ದೇವಾಲಯಕ್ಕೆ ತಕ್ಕೊಂಡು ಹೋದರು. ಶುದ್ಧೀಕರಣ ಅರ್ಪಣೆಗಾಗಿ ಧರ್ಮಶಾಸ್ತ್ರಕ್ಕನುಸಾರ ಬಡವರು ಕೊಡಬಹುದಾದ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳಗಳನ್ನು ಅರ್ಪಿಸಿದರು. ಅನುಕೂಲಸ್ಥ ಹೆತ್ತವರಂತೆ ತಮ್ಮಿಂದ ಹೋತ ಮತ್ತು ಬೆಳವಕ್ಕಿಯನ್ನು ಕೊಡಲಾಗಲಿಲ್ಲವಲ್ಲಾ ಎಂದು ಅವರಿಗೆ ಬೇಸರ ಆಗಿರಬಹುದು. ಆದರೂ ಅದನ್ನು ಬದಿಗೊತ್ತಿ ಧರ್ಮಶಾಸ್ತ್ರ ಪಾಲಿಸಲು ತಮ್ಮ ಸಾಮರ್ಥ್ಯಕ್ಕನುಸಾರ ಅರ್ಪಣೆ ಮಾಡಿದರು. ಅದೂ ಅಲ್ಲದೆ ದೇವಾಲಯದಲ್ಲಿದ್ದಾಗ ಅವರಿಗೆ ಪ್ರೋತ್ಸಾಹವೂ ಸಿಕ್ಕಿತು.—ಲೂಕ 2:21-24.

19. (1) ಸಿಮೆಯೋನನಿಂದ ಮರಿಯಳಿಗೆ ಮನಸ್ಸಿನಲ್ಲಿಡಲು ಇನ್ನಷ್ಟು ಮಾತುಗಳು ಸಿಕ್ಕಿದ್ದು ಹೇಗೆ? (2) ಯೇಸುವನ್ನು ನೋಡಿ ಅನ್ನ ಹೇಗೆ ಪ್ರತಿಕ್ರಿಯಿಸಿದಳು?

19 ಸಿಮೆಯೋನನೆಂಬ ವೃದ್ಧನು ಅವರ ಬಳಿ ಬಂದು ಮಾತಾಡಿದಾಗ ಮರಿಯಳಿಗೆ ತನ್ನ ಮನಸ್ಸಿನಲ್ಲಿಡಲು ಇನ್ನಷ್ಟು ಮಾತುಗಳು ದೊರೆತವು. ಸಿಮೆಯೋನನು ಸಾಯುವ ಮೊದಲು ಮೆಸ್ಸೀಯನನ್ನು ನೋಡೇ ನೋಡುವನೆಂದು ದೇವರು ಅವನಿಗೆ ಮಾತುಕೊಟ್ಟಿದ್ದನು. ಈ ಮಗುವಾದ ಯೇಸುವೇ ಮುಂತಿಳಿಸಲ್ಪಟ್ಟ ಆ ರಕ್ಷಕನೆಂದು ಯೆಹೋವನ ಪವಿತ್ರಾತ್ಮವು ಸಿಮೆಯೋನನಿಗೆ ಸೂಚಿಸಿತು. ಮುಂದೊಂದು ದಿನ ಮರಿಯಳು ತಾಳಿಕೊಳ್ಳಲಿಕ್ಕಿರುವ ವೇದನೆಯ ಕುರಿತೂ ಅವನು ಆಕೆಗೆ ಮುಂತಿಳಿಸಿದನು. ಉದ್ದ ಕತ್ತಿ ತಿವಿದಂಥ ಅನುಭವ ಅವಳಿಗಾಗುವುದೆಂದು ಹೇಳಿದನು. (ಲೂಕ 2:25-35) ಅವು ಆಘಾತಕಾರಿ ಮಾತುಗಳಾಗಿದ್ದರೂ ಮೂರು ದಶಕಗಳ ಬಳಿಕ ಬಂದ ಆ ಕಠಿನ ಸಮಯವನ್ನು ಸಹಿಸಿಕೊಳ್ಳಲು ಆಕೆಗೆ ನೆರವಾಗಿದ್ದಿರಬಹುದು. ಸಿಮೆಯೋನನ ನಂತರ, ಅನ್ನ ಎಂಬ ಪ್ರವಾದಿನಿ ಸಹ ಹತ್ತಿರ ಬಂದು ಪುಟ್ಟ ಯೇಸುವನ್ನು ನೋಡಿದಳು. ಆಮೇಲೆ ಅವಳು ಯೆರೂಸಲೇಮಿನ ಬಿಡುಗಡೆಗಾಗಿ ಕಾಯುತ್ತಿದ್ದ ಎಲ್ಲರೊಂದಿಗೆ ಮಗುವಿನ ಕುರಿತಾಗಿ ಮಾತಾಡಿದಳು.—ಲೂಕ 2:36-38 ಓದಿ.

ಯೆರೂಸಲೇಮಿನಲ್ಲಿದ್ದ ಯೆಹೋವನ ಆಲಯದಲ್ಲಿ ಮರಿಯ ಯೋಸೇಫರಿಗೆ ಹೇರಳ ಪ್ರೋತ್ಸಾಹ ಸಿಕ್ಕಿತು

20. ಯೋಸೇಫ ಮತ್ತು ಮರಿಯಳು ಯೆರೂಸಲೇಮಿನ ದೇವಾಲಯಕ್ಕೆ ಮಗುವಾದ ಯೇಸುವನ್ನು ತಂದದ್ದು ಉತ್ತಮ ನಿರ್ಣಯವಾಗಿತ್ತೇಕೆ?

20 ಯೋಸೇಫ ಮತ್ತು ಮರಿಯಳು ತಮ್ಮ ಪುಟ್ಟ ಕಂದನನ್ನು ಯೆರೂಸಲೇಮಿನಲ್ಲಿದ್ದ ಯೆಹೋವನ ಆಲಯಕ್ಕೆ ತಂದದ್ದು ನಿಜಕ್ಕೂ ಒಂದು ಉತ್ತಮ ನಿರ್ಣಯ! ಅವರ ಮಗನಿಗೆ ಜೀವನಪರ್ಯಂತ ನಂಬಿಗಸ್ತಿಕೆಯಿಂದ ತಪ್ಪದೆ ಯೆಹೋವನ ಆಲಯಕ್ಕೆ ಹೋಗುವ ಅಭ್ಯಾಸ ಹೀಗೆ ಶುರುವಾಯಿತು. ಅಲ್ಲಿದ್ದಾಗ ಅವರು ತಮ್ಮ ಸಾಮರ್ಥ್ಯಕ್ಕನುಸಾರ ದೇವರಿಗೆ ಅರ್ಪಣೆಗಳನ್ನು ಕೊಟ್ಟರು. ಉಪದೇಶ, ಪ್ರೋತ್ಸಾಹ ಕೂಡ ಪಡೆದುಕೊಂಡರು. ಆ ದಿನ ಮರಿಯಳು ದೇವಾಲಯದಿಂದ ಹೊರಬಂದಾಗ ಅವಳ ನಂಬಿಕೆಯು ಇನ್ನಷ್ಟೂ ಬಲಗೊಂಡಿತ್ತು. ಮಾತ್ರವಲ್ಲ ಯೋಚಿಸಲು ಹಾಗೂ ಇತರರಿಗೆ ತಿಳಿಸಲು ಅವಳ ಮನಸ್ಸಿನಲ್ಲಿ ಆಧ್ಯಾತ್ಮಿಕ ಸತ್ಯಗಳು ತುಂಬಿಕೊಂಡಿದ್ದವು.

21. ಮರಿಯಳಂತೆ ನಮ್ಮ ನಂಬಿಕೆಯನ್ನು ನಾವು ಹೇಗೆ ಇನ್ನಷ್ಟು ಬಲಪಡಿಸಿಕೊಳ್ಳಬಹುದು?

21 ಇಂದಿನ ಹೆತ್ತವರು ಆ ಮಾದರಿಯನ್ನೇ ಅನುಸರಿಸುತ್ತಿರುವುದನ್ನು ನೋಡುವಾಗ ತುಂಬ ಖುಷಿಯಾಗುತ್ತದೆ. ಯೆಹೋವನ ಸಾಕ್ಷಿಗಳಾಗಿರುವ ಹೆತ್ತವರು ತಮ್ಮ ಮಕ್ಕಳನ್ನು ಕ್ರೈಸ್ತ ಕೂಟಗಳಿಗೆ ತಪ್ಪದೆ ಕರೆದುಕೊಂಡು ಬರುತ್ತಾರೆ. ಇಂಥ ಹೆತ್ತವರು ಜೊತೆ ವಿಶ್ವಾಸಿಗಳಿಗೆ ಪ್ರೋತ್ಸಾಹ ಕೊಡುವ ಮೂಲಕ ಯೋಸೇಫ ಮರಿಯರಂತೆ ತಮ್ಮಿಂದಾದುದ್ದನ್ನು ಕೊಡುತ್ತಾರೆ. ಕೂಟವನ್ನು ಮುಗಿಸಿ ಹೊರಬರುವಾಗ ಈ ಹೆತ್ತವರಿಗೆ ಹೆಚ್ಚು ಸಂತೋಷ, ಹೆಚ್ಚು ಬಲವಾದ ನಂಬಿಕೆ ಮತ್ತು ಇತರರೊಂದಿಗೆ ಹಂಚಿಕೊಳ್ಳಲು ಹೆಚ್ಚು ಒಳ್ಳೇ ವಿಷಯಗಳು ಇರುತ್ತವೆ. ಅಂಥ ಹೆತ್ತವರೊಂದಿಗೆ ಕೂಟಗಳಲ್ಲಿ ಸಹವಾಸಿಸುವುದು ಖಂಡಿತ ಹರ್ಷಕರ. ಇಂಥ ಕೂಟಗಳಲ್ಲಿ ಹಾಜರಾಗುವಾಗ ಮರಿಯಳಂತೆ ನಮ್ಮ ನಂಬಿಕೆಯೂ ಇನ್ನಷ್ಟು ಬಲಗೊಳ್ಳುವುದು.

^ ಪ್ಯಾರ. 7 ಈ ಪ್ರಯಾಣದ ಬಗ್ಗೆ ಮತ್ತು ಈ ಮುಂಚೆ ಮರಿಯಳು ಮಾಡಿದ ಪ್ರಯಾಣದ ಬಗ್ಗೆ ಬೈಬಲ್‌ ಕೊಡುವ ವರ್ಣನೆಯಲ್ಲಿರುವ ವ್ಯತ್ಯಾಸ ಗಮನಿಸಿ. ಆಗ ಸಂಬಂಧಿಕಳಾದ ಎಲಿಸಬೇತಳ ಬಳಿಗೆ ‘ಮರಿಯಳು ಹೋದಳು’ ಎಂದು ಬೈಬಲ್‌ ತಿಳಿಸುತ್ತದೆ. (ಲೂಕ 1:39) ಆ ಸಮಯದಲ್ಲಿ ಮರಿಯಳಿಗೆ ನಿಶ್ಚಿತಾರ್ಥವಾಗಿತ್ತು, ಇನ್ನೂ ಮದುವೆಯಾಗಿರಲಿಲ್ಲ. ಆದಕಾರಣ ಯೋಸೇಫನನ್ನು ವಿಚಾರಿಸದೇ ಅವಳು ಅಲ್ಲಿಗೆ ಹೋಗಿದ್ದಿರಬಹುದು. ಆದರೆ ಲೂಕ 2:4, 5 ರಲ್ಲಿರುವ ‘ಯೋಸೇಫನು ಹೋದನು’ ಎಂಬ ಮಾತಿನಿಂದ ಮದುವೆಯ ಬಳಿಕ ಅವರು ಜೊತೆಗೂಡಿ ಮಾಡಿದ ಈ ಪ್ರಯಾಣದ ನಿರ್ಣಯವನ್ನು ಮರಿಯಳಲ್ಲ ಯೋಸೇಫ ಮಾಡಿದನೆಂದು ತಿಳಿದುಬರುತ್ತದೆ.

^ ಪ್ಯಾರ. 10 ಆ ದಿನಗಳಲ್ಲಿ ಪ್ರಯಾಣಿಕರಿಗೂ ಯಾತ್ರಿಕ ತಂಡಗಳಿಗೂ ತಂಗಲಿಕ್ಕಾಗಿ ವಸತಿಗೃಹವನ್ನು ಒದಗಿಸುವ ವಾಡಿಕೆ ಎಲ್ಲ ಊರುಗಳಲ್ಲಿತ್ತು.

^ ಪ್ಯಾರ. 14 ಬೈಬಲಿನ ಕಾಲಗಣನೆಯು ಕ್ರಿಸ್ತನು ಡಿಸೆಂಬರ್‌ನಲ್ಲಿ ಅಲ್ಲ ಅಕ್ಟೋಬರ್‌ನ ಆರಂಭದಲ್ಲಿ ಹುಟ್ಟಿದನೆಂದು ಸೂಚಿಸುತ್ತದೆ. ಇದನ್ನು, “ಕುರುಬರು ಮನೆಗಳಿಂದ ಹೊರಗೆ ವಾಸಿಸುತ್ತಿದ್ದು ರಾತ್ರಿಯಲ್ಲಿ ತಮ್ಮ ಮಂದೆಯನ್ನು ಕಾಯುತ್ತಿದ್ದರು” ಎಂದು ಲೂಕನ ವೃತ್ತಾಂತದಲ್ಲಿರುವ ಮಾತು ದೃಢೀಕರಿಸುತ್ತದೆ. ಏಕೆಂದರೆ ಡಿಸೆಂಬರ್‌ ತಿಂಗಳಲ್ಲಿ ವಿಪರೀತ ಚಳಿಯಿರುವ ಕಾರಣ ಕುರಿಗಳನ್ನು ಹಟ್ಟಿಯೊಳಗೆ ಇಡಲಾಗುತ್ತಿತ್ತು. ಹೊರಗೆ ಗುಡ್ಡದ ಮಗ್ಗುಲಲ್ಲಿ ಅಲ್ಲ.