ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಎಂಟು

ನಿರಾಶೆಗಳ ಮಧ್ಯೆಯೂ ತಾಳಿಕೊಂಡಾತನು

ನಿರಾಶೆಗಳ ಮಧ್ಯೆಯೂ ತಾಳಿಕೊಂಡಾತನು

1. ಶೀಲೋವಿನಲ್ಲಿದ್ದ ಜನರೆಲ್ಲರು ಯಾಕೆ ರೋದಿಸುತ್ತಿದ್ದರು?

ಸಮುವೇಲನಿಗೆ ಶೀಲೋವಿನಲ್ಲಿ ಎಲ್ಲೆಲ್ಲೂ ಕೇಳಿಬರುತ್ತಿದ್ದದ್ದು ಜನರ ರೋದನ, ಆಕ್ರಂದನ. ಗಂಡಂದಿರನ್ನು ಕಳಕೊಂಡು ರೋದಿಸುತ್ತಿದ್ದ ವಿಧವೆಯರು, ಅಪ್ಪನಿಗಾಗಿ ಅಳುವ ಮಕ್ಕಳು, ಗಂಡುಮಕ್ಕಳ ಮುಖ ಇನ್ನೆಂದೂ ನೋಡಸಿಗದೆಂದು ಗೋಳಿಡುತ್ತಿದ್ದ ಹೆತ್ತವರು, ಅಣ್ಣತಮ್ಮಂದಿರನ್ನು ಕಳಕೊಂಡು ಶೋಕಿಸುತ್ತಿದ್ದ ಒಡಹುಟ್ಟಿದವರು. ಹೀಗೆ ಊರಿಗೆ ಊರೇ ದುಃಖದಲ್ಲಿ ಮುಳುಗಿತ್ತು. ಏಕೆಂದರೆ ಫಿಲಿಷ್ಟಿಯರೊಂದಿಗೆ ನಡೆದ ಯುದ್ಧದಲ್ಲಿ 4,000 ಇಸ್ರಾಯೇಲ್ಯ ಯೋಧರು ಸಂಹಾರಗೊಂಡಿದ್ದರು. ಇದರ ಬೆನ್ನಿಗೆ ನಡೆದ ಮತ್ತೊಂದು ಯುದ್ಧದಲ್ಲಿ 30,000 ಇಸ್ರಾಯೇಲ್ಯ ಸೈನಿಕರು ಮಡಿದಿದ್ದರು.—1 ಸಮು. 4:1, 2, 10.

2, 3. ಯಾವೆಲ್ಲ ದುರಂತಗಳಿಂದ ಶೀಲೋವಿಗೆ ಅವಮಾನ ಉಂಟಾಯಿತು?

2 ಇದಕ್ಕಿಂತ ಮುಂಚೆ ಇನ್ನೂ ಅನೇಕ ದುರಂತಗಳು ನಡೆದಿದ್ದವು. ಶೀಲೋವಿನಲ್ಲಿದ್ದ ದೇವದರ್ಶನ ಗುಡಾರದ ಪವಿತ್ರ ಸ್ಥಳದಲ್ಲಿ ಪೆಟ್ಟಿಗೆಯಾಕಾರದ ಬಹುಮೂಲ್ಯವಾದ ಒಡಂಬಡಿಕೆಯ ಮಂಜೂಷ ಇತ್ತು. ಇದು ದೇವರ ಸಾನ್ನಿಧ್ಯದ ಸಂಕೇತವಾಗಿತ್ತು. ಈ ಮಂಜೂಷ ತಮ್ಮೊಂದಿಗಿದ್ದರೆ ಯುದ್ಧದಲ್ಲಿ ಜಯ ಖಚಿತ, ಅದೊಂದು ತಾಯಿತದಂತೆ ಎಂಬ ಮೂಢ ಯೋಚನೆ ಜನರಿಗೆ. ಆದ್ದರಿಂದ ಅದನ್ನು ರಣರಂಗಕ್ಕೆ ತಕ್ಕೊಂಡುಹೋದರು. ಅದರ ಜತೆಯಲ್ಲೇ ಮಹಾ ಯಾಜಕ ಏಲಿಯ ದುಷ್ಟ ಪುತ್ರರಾದ ಹೊಫ್ನಿ, ಫೀನೆಹಾಸರೂ ಇದ್ದರು. ಆದರೆ ಫಿಲಿಷ್ಟಿಯರು ಮಂಜೂಷವನ್ನು ವಶಪಡಿಸಿಕೊಂಡು ಹೊಫ್ನಿ, ಫೀನೆಹಾಸರನ್ನು ಹತಿಸಿಬಿಟ್ಟರು.—1 ಸಮು. 4:3-11.

3 ಶೀಲೋವಿನಲ್ಲಿದ್ದ ದೇವದರ್ಶನ ಗುಡಾರಕ್ಕೆ ಶತಮಾನಗಳಿಂದ ಮಂಜೂಷವು ಗೌರವದ ಮೆರಗು ಕೊಟ್ಟಿತ್ತು. ಆದರೆ ಈಗ ಆ ಮಂಜೂಷವೇ ಇಲ್ಲ. ಅದು ಫಿಲಿಷ್ಟಿಯರ ವಶವಾದ ಸುದ್ದಿ ಕೇಳಿದೊಡನೆ 98 ವರ್ಷ ಪ್ರಾಯದ ಏಲಿ ಅವನು ಕೂತಿದ್ದ ಪೀಠದಿಂದ ಹಿಂದಕ್ಕೆ ಬಿದ್ದು ಮೃತಪಟ್ಟನು. ತುಂಬು ಗರ್ಭಿಣಿಯಾಗಿದ್ದ ಅವನ ಸೊಸೆ ಅದೇ ದಿನ ವಿಧವೆಯಾದಳು ಮಾತ್ರವಲ್ಲ ಮಗುವನ್ನು ಹೆರುವಾಗ ತೀರಿಹೋದಳು. ಕೊನೆಯುಸಿರೆಳೆಯುವಾಗ ಅವಳು ಹೇಳಿದ್ದು: ‘ಇಸ್ರಾಯೇಲ್ಯರ ಮಹಿಮೆ ಹೋಯಿತು.’ ಹೌದು, ಶೀಲೋ ಇನ್ನೆಂದಿಗೂ ಮುಂಚಿನಂತಿರದು.—1 ಸಮು. 4:12-22.

4. ಈ ಅಧ್ಯಾಯದಲ್ಲಿ ಏನು ಚರ್ಚಿಸಲಿದ್ದೇವೆ?

4 ಇಂಥೆಲ್ಲಾ ನಿರಾಶಾಜನಕ ಸಂಗತಿಗಳಿಗೆ ಸಮುವೇಲನು ಹೇಗೆ ಪ್ರತಿಕ್ರಿಯಿಸಿದನು? ಯೆಹೋವನ ಮೆಚ್ಚಿಗೆ, ರಕ್ಷಣೆಯನ್ನು ಕಳಕೊಂಡ ಆ ಜನರಿಗೆ ಸಹಾಯ ಮಾಡುವಷ್ಟು ಬಲವಾದ ನಂಬಿಕೆ ಅವನಲ್ಲಿತ್ತೇ? ಇಂದು ಕೂಡ ನಮ್ಮ ನಂಬಿಕೆಯನ್ನು ಪರೀಕ್ಷಿಸುವ ಕಷ್ಟಗಳನ್ನೂ ನಿರಾಶಾಜನಕ ಸನ್ನಿವೇಶಗಳನ್ನೂ ನಾವೆಲ್ಲರೂ ಕೆಲವೊಮ್ಮೆ ಎದುರಿಸುತ್ತೇವೆ. ಆದುದರಿಂದ ಸಮುವೇಲನಿಂದ ಇನ್ನೇನು ಕಲಿಯಬಹುದೆಂದು ನೋಡೋಣ.

‘ನೀತಿಯನ್ನು ಸ್ಥಾಪಿಸಿದನು’

5, 6. (1) ಬೈಬಲಿನ ದಾಖಲೆ 20 ವರ್ಷಗಳ ಅವಧಿಯ ಕುರಿತು ಏನು ಹೇಳುತ್ತದೆ? (2) ಆ ಅವಧಿಯಲ್ಲಿ ಸಮುವೇಲ ಏನು ಮಾಡುತ್ತಿದ್ದನು?

5 ಬೈಬಲಿನ ದಾಖಲೆ ಈಗ ಸಮುವೇಲನ ವಿಷಯವನ್ನು ಬಿಟ್ಟು ಪವಿತ್ರ ಮಂಜೂಷದ ಜಾಡನ್ನು ಹಿಡಿಯುತ್ತಾ ಹೋಗುತ್ತದೆ. ಅಂದರೆ ಮಂಜೂಷವನ್ನು ವಶಪಡಿಸಿಕೊಂಡ ಫಿಲಿಷ್ಟಿಯರು ಯಾವೆಲ್ಲ ಕಷ್ಟ ಅನುಭವಿಸಿದರು, ಅವರದನ್ನು ಹೇಗೆ ಹಿಂದಿರುಗಿಸಲೇ ಬೇಕಾಯಿತು ಎಂಬುದನ್ನು ಅದು ತಿಳಿಸುತ್ತದೆ. ಸಮುವೇಲನು ಮತ್ತೆ ದಾಖಲೆಯಲ್ಲಿ ಕಾಣಿಸಿಕೊಳ್ಳುವುದು ಸುಮಾರು 20 ವರ್ಷಗಳಾದ ಬಳಿಕವೇ. (1 ಸಮು. 7:2) ಆ ವರ್ಷಗಳಲ್ಲಿ ಸಮುವೇಲ ಏನು ಮಾಡುತ್ತಿದ್ದನು? ಅದನ್ನು ಬೈಬಲೇ ಹೇಳುತ್ತದೆ.

ಭೀಕರ ನಷ್ಟ, ನಿರಾಶೆಯನ್ನು ನಿಭಾಯಿಸುವಂತೆ ಸಮುವೇಲ ತನ್ನ ಜನರಿಗೆ ಹೇಗೆ ಸಹಾಯಮಾಡಲಿದ್ದನು?

6 ಆ 20 ವರ್ಷಗಳ ಅವಧಿಯ ಮುಂಚೆ ಸಮುವೇಲನ ಕುರಿತು ವೃತ್ತಾಂತ ಹೇಳುವ ಕೊನೆ ವಿಷಯವೇನೆಂದರೆ ಅವನು “ಇಸ್ರಾಯೇಲ್ಯರೆಲ್ಲರಿಗೆ ದೈವೋತ್ತರಗಳನ್ನು ತಿಳಿಸುತ್ತಿದ್ದನು.” (1 ಸಮು. 4:1) ಆ ಅವಧಿಯ ನಂತರ ವೃತ್ತಾಂತ ಹೇಳುವುದೇನೆಂದರೆ ಸಮುವೇಲನು ಪ್ರತಿವರ್ಷ ಇಸ್ರಾಯೇಲಿನ ಮೂರು ಪಟ್ಟಣಗಳಿಗೆ ಭೇಟಿನೀಡುತ್ತಿದ್ದನು, ಜನರ ವ್ಯಾಜ್ಯಗಳನ್ನು ತೀರಿಸಿ, ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ತನ್ನ ಊರಾದ ರಾಮಕ್ಕೆ ಹಿಂದಿರುಗುತ್ತಿದ್ದನು. (1 ಸಮು. 7:15-17) ಸಮುವೇಲನು ಸದಾ ಕಾರ್ಯನಿರತನಾಗಿದ್ದನೆಂಬ ಸಂಗತಿ ಇದರಿಂದ ವ್ಯಕ್ತ. ಆ 20 ವರ್ಷಗಳ ಅವಧಿಯಲ್ಲೂ ಅವನು ಅದನ್ನೇ ಮಾಡಿದ್ದಿರಬೇಕು.

20 ವರ್ಷಗಳ ಅವಧಿಯ ದಾಖಲೆಯಲ್ಲಿ ಸಮುವೇಲನ ಬಗ್ಗೆ ಬೈಬಲ್‌ ಏನೂ ಹೇಳದಿದ್ದರೂ ಅವನು ಯೆಹೋವನ ಸೇವೆಯಲ್ಲಿ ಕಾರ್ಯನಿರತನಾಗಿದ್ದನು ಎಂಬುದು ನಿಶ್ಚಿತ

7, 8. (1) ಸಮುವೇಲನು 20 ವರ್ಷ ಶ್ರಮಪಟ್ಟ ನಂತರ ಜನರಿಗೆ ಯಾವ ಸಂದೇಶ ಕೊಟ್ಟನು? (2) ಇದಕ್ಕೆ ಜನರು ಹೇಗೆ ಪ್ರತಿಕ್ರಿಯಿಸಿದರು?

7 ಏಲಿಯ ಪುತ್ರರ ಅನೈತಿಕತೆ, ಭ್ರಷ್ಟಾಚಾರಗಳು ಜನರಿಗೆ ಯೆಹೋವನ ಮೇಲಿದ್ದ ನಂಬಿಕೆಯನ್ನು ಕುಂದಿಸಿತ್ತು. ಇದರ ಪರಿಣಾಮವಾಗಿಯೊ ಏನೋ ಅನೇಕರು ವಿಗ್ರಹಾರಾಧಕರಾಗಿದ್ದರು. ಸಮುವೇಲನು ಜನರಿಗಾಗಿ ಆ 20 ವರ್ಷ ಶ್ರಮಪಟ್ಟ ನಂತರ ಅವರಿಗೆ ಈ ಸಂದೇಶ ಕೊಟ್ಟನು: “ನೀವು ಪೂರ್ಣಮನಸ್ಸಿನಿಂದ ಯೆಹೋವನ ಕಡೆಗೆ ತಿರುಗಿಕೊಂಡಿರುವದಾದರೆ ನಿಮ್ಮ ಮಧ್ಯದಲ್ಲಿರುವ ಅಷ್ಟೋರೆತ್‌ ಮೊದಲಾದ ಅನ್ಯದೇವತೆಗಳನ್ನು ತೆಗೆದುಹಾಕಿ ಯೆಹೋವನ ಮೇಲೆಯೇ ಮನಸ್ಸಿಟ್ಟು ಆತನೊಬ್ಬನನ್ನೇ ಸೇವಿಸಿರಿ; ಆಗ ಆತನು ನಿಮ್ಮನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವನು.”—1 ಸಮು. 7:3.

8 ಫಿಲಿಷ್ಟಿಯರ ಕೈಕೆಳಗೆ ಇಸ್ರಾಯೇಲ್ಯರು ಬಹಳ ಕಷ್ಟವನ್ನು ಅನುಭವಿಸುತ್ತಿದ್ದರು. ಇಸ್ರಾಯೇಲ್ಯ ಸೈನ್ಯವನ್ನು ಸೋಲಿಸಿದಂದಿನಿಂದ ಫಿಲಿಷ್ಟಿಯರು ಯಾವುದೇ ಭಯವಿಲ್ಲದೆ ದೇವಜನರ ಮೇಲೆ ದಬ್ಬಾಳಿಕೆ ಮಾಡಬಹುದೆಂದು ನೆನಸಿದ್ದರು. ಆದರೆ ಇಸ್ರಾಯೇಲ್ಯರು ಇಂಥ ಕಷ್ಟಗಳಿಂದ ಪಾರಾಗಲು ಸಾಧ್ಯವೆಂದೂ ಅದಕ್ಕಾಗಿ ಅವರು ಯೆಹೋವನೆಡೆಗೆ ತಿರುಗಿಕೊಳ್ಳಲೇಬೇಕೆಂದೂ ಸಮುವೇಲನು ಹೇಳಿದನು. ಇದನ್ನು ಮಾಡಲು ಇಸ್ರಾಯೇಲ್ಯರು ಸಿದ್ಧರಿದ್ದರೋ? ಹೌದು, ಅವರು ತಮ್ಮಲ್ಲಿದ್ದ ವಿಗ್ರಹಗಳನ್ನೆಲ್ಲ ತೆಗೆದುಹಾಕಿ “ಯೆಹೋವನೊಬ್ಬನನ್ನೇ ಸೇವಿಸತೊಡಗಿದರು.” ಇದರಿಂದ ಸಮುವೇಲನು ಸಂತೋಷಗೊಂಡನು. ಅವನು ಯೆರೂಸಲೇಮಿನ ಉತ್ತರಕ್ಕಿದ್ದ ಪರ್ವತ ಪ್ರದೇಶದ ಮಿಚ್ಪೆ ಎಂಬ ಪಟ್ಟಣದಲ್ಲಿ ಸೇರಿಬರುವಂತೆ ಜನರಿಗೆ ಕರೆಕೊಟ್ಟನು. ಜನರು ಸೇರಿಬಂದು ಉಪವಾಸ ಮಾಡಿ, ವಿಗ್ರಹಾರಾಧನೆಗೆ ಸಂಬಂಧಿಸಿದಂತೆ ತಾವು ಮಾಡಿದ ಅನೇಕ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟರು.—1 ಸಮುವೇಲ 7:4-6 ಓದಿ.

ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರು ಮಿಚ್ಪೆಯಲ್ಲಿ ಜಮಾಯಿಸಿದಾಗ ಅವರನ್ನು ಮುಗಿಸಲು ಇದೇ ಒಳ್ಳೇ ಅವಕಾಶವೆಂದು ಫಿಲಿಷ್ಟಿಯರು ನೆನಸಿದರು

9. (1) ಯಾವ ಅವಕಾಶ ಸಿಕ್ಕಿತೆಂದು ಫಿಲಿಷ್ಟಿಯರು ಎಣಿಸಿದರು? (2) ದೇವಜನರ ಪ್ರತಿಕ್ರಿಯೆ ಏನಾಗಿತ್ತು?

9 ಇಸ್ರಾಯೇಲ್ಯರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರ ಬಗ್ಗೆ ಫಿಲಿಷ್ಟಿಯರಿಗೆ ಗೊತ್ತಾಯಿತು. ಯೆಹೋವನ ಈ ಆರಾಧಕರ ಹುಟ್ಟಡಗಿಸಲು ಇದೇ ಸುವರ್ಣಾವಕಾಶವೆಂದು ನೆನಸಿ ಮಿಚ್ಪೆಗೆ ತಮ್ಮ ಸೈನ್ಯ ಕಳುಹಿಸಿದರು. ಇಸ್ರಾಯೇಲ್ಯರಿಗೆ ತಮ್ಮ ಮೇಲೆರಗಲಿರುವ ಈ ಅಪಾಯದ ಬಗ್ಗೆ ಸುದ್ದಿ ಸಿಕ್ಕಿದಾಗ ಅವರು ಭಯಭೀತರಾದರು. ತಮಗಾಗಿ ಪ್ರಾರ್ಥಿಸುವಂತೆ ಸಮುವೇಲನ ಬಳಿ ಕೇಳಿಕೊಂಡರು. ಸಮುವೇಲನು ಪ್ರಾರ್ಥಿಸಿದನು, ಒಂದು ಯಜ್ಞವನ್ನೂ ಅರ್ಪಿಸಿದನು. ಈ ಪವಿತ್ರ ಕಾರ್ಯ ನಡೆಯುತ್ತಿದ್ದ ಸಮಯದಲ್ಲಿ ಫಿಲಿಷ್ಟಿಯರ ಸೈನ್ಯ ಮಿಚ್ಪೆಯನ್ನು ಸಮೀಪಿಸಿತು. ಆಗ ಯೆಹೋವನು ಸಮುವೇಲನ ಪ್ರಾರ್ಥನೆಗೆ ಉತ್ತರಕೊಟ್ಟನು. ‘ದೊಡ್ಡ ಗುಡುಗಿನ’ ಮೂಲಕ ಫಿಲಿಷ್ಟಿಯರ ವಿರುದ್ಧ ತನ್ನ ಕ್ರೋಧವನ್ನು ವ್ಯಕ್ತಪಡಿಸಿದನು.—1 ಸಮು. 7:7-10.

10, 11. (1) ಫಿಲಿಷ್ಟಿಯ ಸೈನ್ಯದ ವಿರುದ್ಧ ಯೆಹೋವನು ಬರಮಾಡಿದ ಗುಡುಗು ಅಸಾಮಾನ್ಯವಾಗಿತ್ತೆಂದು ಏಕೆ ಹೇಳಬಹುದು? (2) ಮಿಚ್ಪೆಯಲ್ಲಾದ ಯುದ್ಧದ ಫಲಿತಾಂಶ ಏನಾಗಿತ್ತು?

10 ಆ ಗಟ್ಟಿಗುಂಡಿಗೆಯ ಫಿಲಿಷ್ಟಿಯ ಸೈನಿಕರು ಕಳವಳಗೊಂಡರು. ಅವರೇನು ಗುಡುಗಿನ ಆರ್ಭಟಕ್ಕೆ ಬೆಚ್ಚಿಬಿದ್ದು ಅಮ್ಮನ ಹಿಂದೆ ಅಡಗಿಕೊಳ್ಳುವ ಪುಟ್ಟ ಮಕ್ಕಳಂತಿರಲಿಲ್ಲ. ಆದರೆ ಅಂಥ ಗಟ್ಟಿಗರೇ ಕಳವಳಗೊಂಡರೆಂದರೆ ಆ ಗುಡುಗು ಹೇಗಿದ್ದಿರಬೇಕೆಂದು ಊಹಿಸಿ! ಜೀವಮಾನದಲ್ಲೇ ಅಂಥ ಗುಡುಗನ್ನು ಅವರು ಕೇಳಿರಲಿಕ್ಕಿಲ್ಲ. ಅದರ ಶಬ್ದ ಅಷ್ಟೊಂದು ಜೋರಾಗಿದ್ದಿರಬಹುದಾ? ಮೋಡಗಳಿಲ್ಲದ ನೀಲಿ ಆಕಾಶದಿಂದ ಬಂದಿದ್ದಿರಬಹುದಾ? ಅಥವಾ ಪರ್ವತಗಳೆಡೆಯಿಂದ ಮಾರ್ದನಿಸಿದ್ದಿರಬಹುದಾ? ಏನೇ ಇರಲಿ ಫಿಲಿಷ್ಟಿಯರ ಜಂಘಾಬಲವೇ ಉಡುಗಿಹೋದದ್ದಂತೂ ನಿಜ. ಎಷ್ಟು ಗಲಿಬಿಲಿಗೊಂಡರೆಂದರೆ ಆಕ್ರಮಣ ಮಾಡಲೆಂದು ಬಂದ ಇವರೇ ಆಕ್ರಮಣಕ್ಕೆ ಒಳಗಾದರು!! ಮಿಚ್ಪೆಯಲ್ಲಿದ್ದ ಇಸ್ರಾಯೇಲ್ಯ ಪುರುಷರು ಹೊರಟುಬಂದು ಅವರನ್ನು ಸೋಲಿಸಿದರು. ಅನಂತರ ಅವರನ್ನು ಯೆರೂಸಲೇಮಿನ ನೈಋತ್ಯಕ್ಕಿದ್ದ ಒಂದು ಸ್ಥಳದ ತನಕ ಮೈಲುಗಟ್ಟಲೆ ದೂರ ಅಟ್ಟಿಸಿಕೊಂಡು ಹೋದರು.—1 ಸಮು. 7:11.

11 ಈ ಯುದ್ಧ ದೇವಜನರಿಗೆ ಒಂದು ಮಹತ್ವದ ತಿರುಗುಬಿಂದು. ಅಂದಿನಿಂದ ಹಿಡಿದು ಸಮುವೇಲನು ನ್ಯಾಯಾಧಿಪತಿಯಾಗಿದ್ದಷ್ಟು ಕಾಲ ಫಿಲಿಷ್ಟಿಯರು ಹಿಮ್ಮೆಟ್ಟುತ್ತಾ ಹೋದರು. ಅವರು ವಶಪಡಿಸಿಕೊಂಡಿದ್ದ ಪಟ್ಟಣಗಳು ಒಂದರ ನಂತರ ಒಂದರಂತೆ ಪುನಃ ದೇವಜನರ ವಶವಾದವು.—1 ಸಮು. 7:13, 14.

12. (1) ಸಮುವೇಲನು ‘ನೀತಿಯನ್ನು ಸ್ಥಾಪಿಸಿದನು’ ಎಂಬುದರ ಅರ್ಥವೇನು? (2) ನೀತಿಯನ್ನು ಸ್ಥಾಪಿಸಲು ಅವನಿಗೆ ಸಹಾಯಮಾಡಿದ ಗುಣಗಳಾವುವು?

12 ಅಪೊಸ್ತಲ ಪೌಲನು ಅನೇಕ ಶತಕಗಳ ನಂತರ “ನೀತಿಯನ್ನು ಸ್ಥಾಪಿಸಿದ” ನಂಬಿಗಸ್ತ ಇಸ್ರಾಯೇಲ್ಯ ನ್ಯಾಯಾಧಿಪತಿಗಳ, ಪ್ರವಾದಿಗಳ ಪಟ್ಟಿಯಲ್ಲಿ ಸಮುವೇಲನ ಹೆಸರನ್ನೂ ಸೇರಿಸಿದನು. (ಇಬ್ರಿ. 11:32, 33) ಸಮುವೇಲ ‘ನೀತಿಯನ್ನು ಸ್ಥಾಪಿಸಿದ್ದು’ ಅಂದರೆ ಜಾರಿಗೆತಂದದ್ದು ಹೇಗೆ? ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು, ಒಳ್ಳೇದನ್ನು ಮಾಡುವ ಮೂಲಕ ಹಾಗೂ ಇತರರಿಗೂ ಅದನ್ನೇ ಮಾಡಲು ಪ್ರೋತ್ಸಾಹಿಸುವ ಮೂಲಕ. ತಾಳ್ಮೆಯಿಂದ ಯೆಹೋವನ ಮೇಲೆ ಆತುಕೊಂಡ ಕಾರಣ ಇದನ್ನು ಮಾಡಲು ಶಕ್ತನಾದನು. ನಿರಾಶಾಜನಕ ಸನ್ನಿವೇಶಗಳು ಎದುರಾದರೂ ತನ್ನ ಕೆಲಸವನ್ನು ನಂಬಿಗಸ್ತಿಕೆಯಿಂದ ಮಾಡುತ್ತಾ ಹೋದನು. ಮಿಚ್ಪೆಯಲ್ಲಿ ಯೆಹೋವನು ಮಾಡಿದ ಸಹಾಯದ ನೆನಪಿಗಾಗಿ ಜಯ ದೊರಕಿದ ನಂತರ ಒಂದು ಸ್ಮಾರಕ ಸ್ತಂಭವನ್ನು ನಿಲ್ಲಿಸಿದನು. ಹೀಗೆ ದೇವರಿಗೆ ಕೃತಜ್ಞತೆಯನ್ನೂ ತೋರಿಸಿದನು.—1 ಸಮು. 7:12.

13. (1) ಯಾವ ಗುಣಗಳನ್ನು ಬೆಳೆಸಿಕೊಳ್ಳುವಾಗ ನಾವು ಸಮುವೇಲನನ್ನು ಅನುಕರಿಸುತ್ತೇವೆ? (2) ಸಮುವೇಲನಲ್ಲಿದ್ದ ಗುಣಗಳನ್ನು ಬೆಳೆಸಿಕೊಳ್ಳುವ ಅತ್ಯುತ್ತಮ ಸಮಯ ಯಾವುದೆಂದು ನೆನಸುತ್ತೀರಿ?

13 ನೀವೂ ‘ನೀತಿಯನ್ನು ಸ್ಥಾಪಿಸಲು’ ಬಯಸುತ್ತೀರೋ? ಹೌದಾದರೆ ಸಮುವೇಲನಲ್ಲಿದ್ದಂಥ ತಾಳ್ಮೆ, ದೀನತೆ, ಕೃತಜ್ಞತಾಭಾವವನ್ನು ನೀವೂ ಬೆಳೆಸಿಕೊಳ್ಳಬೇಕು. (1 ಪೇತ್ರ 5:6 ಓದಿ.) ಈ ಗುಣಗಳು ಪ್ರತಿಯೊಬ್ಬರಿಗೂ ಅಗತ್ಯ ಅಲ್ಲವೇ? ಸಮುವೇಲನು ಚಿಕ್ಕ ಪ್ರಾಯದಲ್ಲೇ ಈ ಗುಣಗಳನ್ನು ಬೆಳೆಸಿಕೊಂಡದ್ದು ಒಳ್ಳೇದಾಯಿತು. ಅವು ಅವನ ಇಳಿವಯಸ್ಸಿನಲ್ಲಿ ಎದುರಾದ ನಿರಾಶಾಜನಕ ಸನ್ನಿವೇಶಗಳನ್ನು ನಿಭಾಯಿಸಲು ನೆರವಾದವು.

“ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುವದಿಲ್ಲ”

14, 15. (1) ಸಮುವೇಲನು “ಮುದುಕನಾದ ಮೇಲೆ” ಎದುರಿಸಿದ ಅತಿ ನಿರಾಶಾಜನಕ ಸನ್ನಿವೇಶ ಯಾವುದು? (2) ಸಮುವೇಲ ಏಲಿಯಂತೆ ಬೇಜವಾಬ್ದಾರಿ ತಂದೆ ಆಗಿದ್ದನೊ? ವಿವರಿಸಿ.

14 ಬೈಬಲ್‌ ನಂತರ ಹೇಳುವುದು ಸಮುವೇಲನು “ಮುದುಕನಾದ ಮೇಲೆ” ನಡೆದ ಘಟನೆಗಳನ್ನು. ಅಷ್ಟರೊಳಗೆ ಅವನಿಗೆ ಯೋವೇಲ್‌ ಮತ್ತು ಅಬೀಯ ಎಂಬ ವಯಸ್ಕ ಪುತ್ರರಿದ್ದರು. ನ್ಯಾಯತೀರಿಸುವ ಕೆಲಸದಲ್ಲಿ ತನಗೆ ನೆರವಾಗುವ ಜವಾಬ್ದಾರಿಯನ್ನು ಸಮುವೇಲ ಅವರಿಗೆ ಕೊಟ್ಟಿದ್ದನು. ದುಃಖದ ಸಂಗತಿಯೆಂದರೆ ಅವನು ತನ್ನ ಪುತ್ರರ ಮೇಲಿಟ್ಟಿದ್ದ ನಂಬಿಕೆಯನ್ನು ಅವರು ಹುಸಿಗೊಳಿಸಿದರು. ಸಮುವೇಲ ಪ್ರಾಮಾಣಿಕನು, ನೀತಿವಂತನು ಆಗಿದ್ದರೂ ಪುತ್ರರು ಹಾಗಿರಲಿಲ್ಲ. ಅವರು ನ್ಯಾಯವನ್ನು ತಿರುಚುತ್ತಾ, ಲಂಚ ತೆಗೆದುಕೊಳ್ಳುತ್ತಾ ತಮಗಿದ್ದ ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡರು.—1 ಸಮು. 8:1-3.

15 ಒಂದು ದಿನ ಇಸ್ರಾಯೇಲಿನ ಹಿರೀಪುರುಷರು ವೃದ್ಧ ಪ್ರವಾದಿ ಸಮುವೇಲನ ಬಳಿ ಬಂದು, “ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುವದಿಲ್ಲ” ಎಂದು ದೂರಿಟ್ಟರು. (1 ಸಮು. 8:4, 5) ಸಮುವೇಲನಿಗೆ ಇದು ಮುಂಚೆಯೇ ಗೊತ್ತಿತ್ತಾ? ಬೈಬಲ್‌ ಹೇಳುವುದಿಲ್ಲ. ಆದರೆ ಖಂಡಿತವಾಗಿಯೂ ಆತನು ಏಲಿಯಂತೆ ಬೇಜವಾಬ್ದಾರಿ ತಂದೆಯಾಗಿರಲಿಲ್ಲ. ಏಲಿಯನ್ನು ಯೆಹೋವನು ಖಂಡಿಸಿ ಶಿಕ್ಷಿಸಿದ್ದನು. ಏಕೆಂದರೆ ಏಲಿ ತನ್ನ ಪುತ್ರರನ್ನು ತಿದ್ದಲಿಲ್ಲ, ದೇವರಿಗಿಂತ ಅವರನ್ನೇ ಹೆಚ್ಚು ಗೌರವಿಸಿದ್ದನು. (1 ಸಮು. 2:27-29) ಆದರೆ ಸಮುವೇಲನಲ್ಲಿ ಯೆಹೋವನಿಗೆ ಇಂಥ ತಪ್ಪು ಯಾವತ್ತೂ ಸಿಗಲಿಲ್ಲ.

ತನ್ನ ಪುತ್ರರು ದಾರಿತಪ್ಪಿದಾಗ ಉಂಟಾದ ನಿರಾಶೆಯನ್ನು ಸಮುವೇಲ ಹೇಗೆ ಸಹಿಸಿಕೊಂಡನು?

16. (1) ಮಕ್ಕಳು ದಂಗೆಕೋರರಾದಾಗ ಹೆತ್ತವರಿಗೆ ಹೇಗನಿಸುತ್ತದೆ? (2) ಸಮುವೇಲನ ಉದಾಹರಣೆ ಹೆತ್ತವರಿಗೆ ಹೇಗೆ ಸಾಂತ್ವನ, ಮಾರ್ಗದರ್ಶನ ಕೊಡಬಲ್ಲದು?

16 ತನ್ನ ಪುತ್ರರ ದುಷ್ಟ ನಡತೆಯ ಬಗ್ಗೆ ತಿಳಿದು ಬಂದಾಗ ಸಮುವೇಲನಿಗಾದ ಅಪಾರ ನೋವು, ನಾಚಿಕೆ, ನಿರಾಶೆಯ ಬಗ್ಗೆ ಬೈಬಲ್‌ ತಿಳಿಸುವುದಿಲ್ಲ. ಆದರೆ ಅವನಿಗೆ ಹೇಗನಿಸಿದ್ದಿರಬೇಕು ಎನ್ನುವುದನ್ನು ಇಂದು ಅನೇಕ ಹೆತ್ತವರು ಊಹಿಸಿಕೊಳ್ಳಬಹುದು. ಏಕೆಂದರೆ ಇಂದಿನ ಕಠಿನಕಾಲದಲ್ಲಿ ಮಕ್ಕಳು ಹೆತ್ತವರ ಅಧಿಕಾರ, ಶಿಸ್ತನ್ನು ಧಿಕ್ಕರಿಸಿ ನಡೆಯುವುದು ಸರ್ವಸಾಮಾನ್ಯ. (2 ತಿಮೊಥೆಯ 3:1-5 ಓದಿ.) ಇಂಥ ನೋವನ್ನು ಅನುಭವಿಸುತ್ತಿರುವ ಹೆತ್ತವರು ಸಮುವೇಲನ ಉದಾಹರಣೆಯಿಂದ ಸಾಂತ್ವನ, ಮಾರ್ಗದರ್ಶನ ಪಡೆಯಬಲ್ಲರು. ಮಕ್ಕಳು ಅಪನಂಬಿಗಸ್ತರಾದರೂ ಸಮುವೇಲನು ತನ್ನ ನಂಬಿಗಸ್ತ ಜೀವನಪಥದಿಂದ ಸ್ವಲ್ಪವೂ ವಿಚಲಿತನಾಗಲಿಲ್ಲ. ಹೆತ್ತವರ ಮಾತು, ಶಿಸ್ತು ದಂಗೆಕೋರ ಮಕ್ಕಳ ಹೃದಯವನ್ನು ಕೆಲವೊಮ್ಮೆ ಮುಟ್ಟಲಿಕ್ಕಿಲ್ಲ. ಆದರೆ ತಂದೆತಾಯಿಯ ಉತ್ತಮ ಮಾದರಿ ಅವರ ಹೃದಯ ಗೆಲ್ಲಬಹುದೆಂದು ನೆನಪಿಡಿ. ಅಲ್ಲದೆ, ಸಮುವೇಲನಂತೆ ಇಂಥ ಹೆತ್ತವರಿಗೆ ತಮ್ಮ ಪಿತನಾದ ಯೆಹೋವನು ಹೆಮ್ಮೆಪಡುವಂಥ ರೀತಿಯಲ್ಲಿ ನಡೆದುಕೊಳ್ಳುವ ಸದವಕಾಶವಿದೆ.

“ನಮಗೂ ಒಬ್ಬ ಅರಸನನ್ನು ನೇಮಿಸು”

17. (1) ಇಸ್ರಾಯೇಲಿನ ಹಿರೀಪುರುಷರು ಸಮುವೇಲನ ಮುಂದೆ ಯಾವ ಬೇಡಿಕೆಯನ್ನಿಟ್ಟರು? (2) ಇದರ ಬಗ್ಗೆ ಸಮುವೇಲನಿಗೆ ಹೇಗನಿಸಿತು?

17 ಸಮುವೇಲನ ಪುತ್ರರ ಸ್ವಾರ್ಥ, ದುರಾಶೆಯು ಜನರ ಮೇಲೆ ದುಷ್ಪರಿಣಾಮ ಬೀರಿತು. ಎಷ್ಟರ ಮಟ್ಟಿಗೆಂದರೆ ಇಸ್ರಾಯೇಲಿನ ಹಿರೀಪುರುಷರು ಸಮುವೇಲನ ಬಳಿ ಬಂದು, “ಬೇರೆ ಎಲ್ಲಾ ಜನಾಂಗಗಳಿಗಿರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸು; ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ” ಎಂದು ಕೇಳಿಕೊಂಡರು. ಈ ಬೇಡಿಕೆಯನ್ನು ಮಾಡುವ ಮೂಲಕ ಜನರು ತನ್ನನ್ನು ತಿರಸ್ಕರಿಸುತ್ತಿದ್ದಾರೆಂದು ಸಮುವೇಲನಿಗೆ ಅನಿಸಿತೇ? ಎಷ್ಟೆಂದರೂ ದಶಕಗಳಿಂದ ಯೆಹೋವನ ಪರವಾಗಿ ಆ ಜನರಿಗೆ ನ್ಯಾಯತೀರಿಸುತ್ತಿದ್ದವನು ಅವನೇ ಅಲ್ಲವೇ? ಆದರೆ ಈಗ ಅವರಿಗೆ ನ್ಯಾಯತೀರಿಸಲು ಬರೇ ಸಮುವೇಲನಂಥ ಪ್ರವಾದಿ ಅಲ್ಲ, ಒಬ್ಬ ಅರಸ ಬೇಕಾಗಿದ್ದ. ಸುತ್ತಮುತ್ತಲಿದ್ದ ಜನಾಂಗಗಳಿಗೆ ರಾಜರಿದ್ದರಲ್ಲಾ, ಹಾಗಾಗಿ ಇಸ್ರಾಯೇಲ್ಯರಿಗೂ ರಾಜ ಬೇಕಿತ್ತಂತೆ! ಸಮುವೇಲನ ಪ್ರತಿಕ್ರಿಯೆ ಏನಾಗಿತ್ತು? ಅದು ಅವನಿಗೆ “ಕೆಟ್ಟದ್ದಾಗಿ ಕಾಣಿಸಿತು” (ಪವಿತ್ರ ಗ್ರಂಥ ಭಾಷಾಂತರ) ಎನ್ನುತ್ತದೆ ವೃತ್ತಾಂತ.—1 ಸಮು. 8:5, 6.

18. ಯೆಹೋವನು ಸಮುವೇಲನನ್ನು ಸಂತೈಸಿ ಅದೇ ಸಮಯದಲ್ಲಿ ಇಸ್ರಾಯೇಲ್ಯರ ಪಾಪದ ಗಂಭೀರತೆಯನ್ನೂ ತೋರಿಸಿದ್ದು ಹೇಗೆ?

18 ಈ ವಿಷಯವನ್ನು ಸಮುವೇಲನು ಪ್ರಾರ್ಥನೆಯ ಮೂಲಕ ಯೆಹೋವನ ಮುಂದಿಟ್ಟಾಗ ಆತನ ಉತ್ತರ ಏನಾಗಿತ್ತೆಂದು ಗಮನಿಸಿ: “ಜನರು ಹೇಳಿದಂತೆಯೇ ಮಾಡು; ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳಿಕೆಗೆ ಬೇಡವೆನ್ನುತ್ತಾರೆ.” ಈ ಮಾತುಗಳು ಸಮುವೇಲನಿಗೆ ಸಾಂತ್ವನ ತಂದಿರಬೇಕು. ಆದರೆ ಅದೇ ಸಮಯದಲ್ಲಿ ಜನರು ಸರ್ವಶಕ್ತ ದೇವರನ್ನು ಎಷ್ಟೊಂದು ಅವಮಾನಿಸಿದ್ದರೆಂದೂ ತೋರಿಸಿದವು. ಒಬ್ಬ ಮಾನವ ಅರಸನಿದ್ದರೆ ಬರುವ ಕಷ್ಟಗಳ ಬಗ್ಗೆ ಇಸ್ರಾಯೇಲ್ಯರನ್ನು ಎಚ್ಚರಿಸುವಂತೆ ಯೆಹೋವನು ಸಮುವೇಲನಿಗೆ ಹೇಳಿದನು. ಸಮುವೇಲನು ಜನರನ್ನು ಎಚ್ಚರಿಸಿದರೂ “ಅದಿರಲಿ; ನಮಗೆ ಅರಸನನ್ನು ಕೊಡು” ಎಂದು ಹಠಹಿಡಿದರು. ಆಗ ಸಮುವೇಲನು ಎಂದಿನಂತೆ ದೇವರ ಮಾತನ್ನು ಪಾಲಿಸುತ್ತಾ ಯೆಹೋವನೇ ಆಯ್ದುಕೊಂಡವನನ್ನು ರಾಜನನ್ನಾಗಿ ಅಭಿಷೇಕಿಸಿದನು.—1 ಸಮು. 8:7-19.

19, 20. (1) ಸೌಲನನ್ನು ಇಸ್ರಾಯೇಲಿನ ರಾಜನಾಗಿ ಅಭಿಷೇಕಿಸಬೇಕೆಂಬ ಯೆಹೋವನ ನಿರ್ದೇಶನವನ್ನು ಸಮುವೇಲನು ಪಾಲಿಸಿದ್ದು ಹೇಗೆ? (2) ಸಮುವೇಲನು ಯೆಹೋವನ ಜನರಿಗೆ ಹೇಗೆ ಸಹಾಯ ಮಾಡುತ್ತಾ ಇದ್ದನು?

19 ಸಮುವೇಲನು ಸಿಟ್ಟಿನಿಂದ ಅಥವಾ ಕಾಟಾಚಾರದಿಂದ ಯೆಹೋವನ ಮಾತು ಪಾಲಿಸಿದನೇ? ನಿರಾಶೆ ತನ್ನ ಮನಸ್ಸಲ್ಲಿ ಕ್ರೋಧದ ಬೀಜ ಬಿತ್ತಿ ಹೆಮ್ಮರವಾಗುವಂತೆ ಬಿಟ್ಟುಕೊಟ್ಟನೇ? ಇನ್ಯಾರಾದರೂ ಅವನ ಸ್ಥಾನದಲ್ಲಿ ಇದ್ದಿದ್ದರೆ ಹಾಗೆ ಮಾಡುತ್ತಿದ್ದರೊ ಏನೋ. ಆದರೆ ಸಮುವೇಲ ಹಾಗೆ ಮಾಡಲಿಲ್ಲ. ಸೌಲನನ್ನು ರಾಜನನ್ನಾಗಿ ಅಭಿಷೇಕಿಸಿದನು. ಅವನನ್ನು ಆಯ್ಕೆ ಮಾಡಿದವನು ಯೆಹೋವನೇ ಎಂದು ಅಂಗೀಕರಿಸಿದನು. ಅವನು ಸೌಲನಿಗೆ ಮುದ್ದಿಟ್ಟನು. ಇದು ಅವನು ಹೊಸ ಅರಸನನ್ನು ಸ್ವಾಗತಿಸಿದನು, ಅವನಿಗೆ ಅಧೀನನಾದನು ಎಂಬದನ್ನು ತೋರಿಸಿತು. ತದನಂತರ ಜನರಿಗೆ “ನೋಡಿದಿರಾ, ಯೆಹೋವನಿಂದ ಆರಿಸಲ್ಪಟ್ಟವನು ಇವನೇ; ಸರ್ವಜನರಲ್ಲಿ ಇವನಿಗೆ ಸಮಾನರು ಇಲ್ಲವೇ ಇಲ್ಲ” ಎಂದನು.—1 ಸಮು. 10:1, 24.

20 ಯೆಹೋವನು ಆಯ್ಕೆ ಮಾಡಿದ ಸೌಲನಲ್ಲಿದ್ದ ಒಳ್ಳೇ ಅಂಶಗಳಿಗೆ ಸಮುವೇಲನು ಗಮನಕೊಟ್ಟನೇ ವಿನಃ ಅವನ ಕುಂದುಕೊರತೆಗಳಿಗಲ್ಲ. ಅಲ್ಲದೆ, ಸಮುವೇಲನು ಚಂಚಲಮನಸ್ಸಿನ ಮನುಷ್ಯರ ಮೆಚ್ಚುಗೆ ಪಡೆಯಲು ಮಹತ್ವ ಕೊಡುವ ಬದಲು ದೇವರಿಗೆ ಸಮಗ್ರತೆ ತೋರಿಸುವುದಕ್ಕೆ ಹೆಚ್ಚು ಮಹತ್ವ ಕೊಟ್ಟನು. (1 ಸಮು. 12:1-4) ತನ್ನ ನೇಮಕವನ್ನೂ ನಂಬಿಗಸ್ತಿಕೆಯಿಂದ ಪೂರೈಸಿದನು. ಅಂದರೆ ದೇವಜನರಿಗೆ ಎದುರಾಗುವಂಥ ಆಧ್ಯಾತ್ಮಿಕ ಅಪಾಯಗಳ ಬಗ್ಗೆ ಬುದ್ಧಿವಾದ ನೀಡುತ್ತಾ ಇದ್ದನು. ಯೆಹೋವನಿಗೆ ನಂಬಿಗಸ್ತರಾಗಿ ಇರುವಂತೆ ಪ್ರೋತ್ಸಾಹಿಸುತ್ತಾ ಇದ್ದನು. ಅವನ ಬುದ್ಧಿವಾದ ಜನರ ಹೃದಯ ತಲಪಿತು. ತಮ್ಮ ಪರವಾಗಿ ದೇವರನ್ನು ಪ್ರಾರ್ಥಿಸುವಂತೆ ಅವನಲ್ಲಿ ಬೇಡಿಕೊಂಡರು. ಆಗ ಸಮುವೇಲನು “ನಾನಾದರೋ ನಿಮಗೋಸ್ಕರವಾಗಿ ಯೆಹೋವನನ್ನು ಪ್ರಾರ್ಥಿಸುತ್ತಾ ಆತನ ಉತ್ತಮ ನೀತಿಮಾರ್ಗವನ್ನು ನಿಮಗೆ ತೋರಿಸಿಕೊಡುವದನ್ನು ಬಿಡುವದೇ ಇಲ್ಲ; ಬಿಟ್ಟರೆ ಆತನ ದೃಷ್ಟಿಯಲ್ಲಿ ಪಾಪಿಯಾಗಿರುವೆನು” ಎಂಬ ಮನಮುಟ್ಟುವ ಉತ್ತರ ಕೊಟ್ಟನು.—1 ಸಮು. 12:21-24.

ಹೊಟ್ಟೆಕಿಚ್ಚು, ಕ್ರೋಧ ಹೃದಯದಲ್ಲಿ ಬೇರೂರುವಂತೆ ನಾವೆಂದಿಗೂ ಬಿಡಬಾರದೆಂದು ಸಮುವೇಲನ ಮಾದರಿ ಕಲಿಸುತ್ತದೆ

21. ಬೇರಾರಿಗೊ ಒಂದು ಸ್ಥಾನ ಇಲ್ಲವೆ ಸುಯೋಗ ಸಿಕ್ಕಿದಾಗ ನೀವು ನಿರಾಶೆಗೊಂಡರೆ ಸಮುವೇಲನ ಮಾದರಿ ಹೇಗೆ ಸಹಾಯ ಮಾಡಬಲ್ಲದು?

21 ಒಂದು ಸ್ಥಾನ ಅಥವಾ ಸುಯೋಗಕ್ಕೆ ನಿಮ್ಮ ಬದಲು ಬೇರೊಬ್ಬರು ಆಯ್ಕೆಯಾದಾಗ ನಿಮಗೆ ನಿರಾಶೆಯಾಗಿದೆಯೇ? ಹೊಟ್ಟೆಕಿಚ್ಚು ಮತ್ತು ಕ್ರೋಧ ಹೃದಯದಲ್ಲಿ ಬೇರೂರುವಂತೆ ನಾವೆಂದಿಗೂ ಬಿಡಬಾರದೆಂದು ಸಮುವೇಲನ ಮಾದರಿ ಕಲಿಸುತ್ತದೆ. (ಜ್ಞಾನೋಕ್ತಿ 14:30 ಓದಿ.) ಏಕೆಂದರೆ ಪ್ರತಿಯೊಬ್ಬ ನಂಬಿಗಸ್ತ ಸೇವಕನಿಗೂ ದೇವರ ಸೇವೆಯಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ. ಅದು ಪ್ರತಿಫಲದಾಯಕ ಹಾಗೂ ತೃಪ್ತಿದಾಯಕ.

‘ನೀನು ಸೌಲನಿಗೋಸ್ಕರ ಎಷ್ಟರ ವರೆಗೆ ದುಃಖಿಸುತ್ತಿರುವಿ?’

22. ಸೌಲನಲ್ಲಿ ಆರಂಭದಲ್ಲಿದ್ದ ಯಾವ ಒಳ್ಳೇ ಅಂಶಗಳನ್ನು ಸಮುವೇಲ ಗಮನಿಸಿದನು?

22 ಸಮುವೇಲನು ಸೌಲನಲ್ಲಿದ್ದ ಒಳ್ಳೇ ಅಂಶಗಳನ್ನು ನೋಡಿದನು. ಸೌಲ ಅಸಾಧಾರಣ ವ್ಯಕ್ತಿಯಾಗಿದ್ದ. ಸುಂದರ, ನೀಳಕಾಯ ಆಗಿದ್ದ. ಧೈರ್ಯಶಾಲಿ, ಜಾಣ ಕೂಡ. ಆರಂಭದಲ್ಲಿ ವಿನಮ್ರನು, ನಿರಹಂಕಾರಿಯೂ ಆಗಿದ್ದ. (1 ಸಮು. 10:22, 23, 27) ಇಂಥ ಗುಣಗಳ ಜೊತೆಗೆ ಅವನಿಗಿದ್ದ ಇನ್ನೊಂದು ಅಮೂಲ್ಯ ವರವೇ ಇಚ್ಛಾಸ್ವಾತಂತ್ರ್ಯ. ಅಂದರೆ ತನ್ನ ಜೀವನಮಾರ್ಗವನ್ನು ತಾನೇ ಆರಿಸಿಕೊಂಡು, ಸ್ವತಃ ನಿರ್ಣಯಗಳನ್ನು ಮಾಡುವ ಸಾಮರ್ಥ್ಯ. (ಧರ್ಮೋ. 30:19) ಈ ವರವನ್ನು ಅವನು ಸರಿಯಾಗಿ ಬಳಸಿದನೇ?

23. (1) ಸೌಲನು ಮೊದಲು ಕಳೆದುಕೊಂಡ ಅಮೂಲ್ಯ ಗುಣ ಯಾವುದು? (2) ಅವನಲ್ಲಿ ಹೆಚ್ಚುತ್ತಿದ್ದ ಅಹಂಕಾರ ಹೇಗೆ ತೋರಿಬಂತು?

23 ಹೊಸದಾಗಿ ಅಧಿಕಾರಕ್ಕೆ ಬಂದಾಗ ಹೆಚ್ಚಿನವರು ಅಧಿಕಾರದ ಮದದಿಂದ ಕಳೆದುಕೊಳ್ಳುವ ಮೊದಲ ಗುಣ ನಮ್ರತೆ. ಸೌಲನ ವಿಷಯದಲ್ಲೂ ಹೀಗೇ ಆಯಿತು. ಸ್ವಲ್ಪ ಸಮಯದಲ್ಲೇ ಅಹಂಕಾರಿಯಾದ. ಯೆಹೋವನು ಸಮುವೇಲನ ಮೂಲಕ ಕೊಟ್ಟ ಆದೇಶಗಳನ್ನು ಪಾಲಿಸಲಿಲ್ಲ. ಅವಿಧೇಯತೆಯ ಮಾರ್ಗ ಆರಿಸಿಕೊಂಡ. ಒಮ್ಮೆಯಂತೂ ಸೌಲ ತಾಳ್ಮೆ ಕಳೆದುಕೊಂಡು ಸಮುವೇಲ ಅರ್ಪಿಸಬೇಕಾಗಿದ್ದ ಯಜ್ಞವನ್ನು ತಾನೇ ಅರ್ಪಿಸಿದ. ಅದಕ್ಕಾಗಿ ಸಮುವೇಲ ಅವನನ್ನು ಖಂಡಿಸಿದನು. ಅಷ್ಟೇ ಅಲ್ಲ, ಅರಸುತನ ಸೌಲನ ಮನೆತನದಲ್ಲಿ ಉಳಿಯುವುದಿಲ್ಲವೆಂದೂ ಮುಂತಿಳಿಸಿದನು. ಸಮುವೇಲ ಕೊಟ್ಟ ಶಿಸ್ತನ್ನು ಸ್ವೀಕರಿಸಿ ತನ್ನನ್ನು ತಿದ್ದಿಕೊಳ್ಳುವ ಬದಲು ಸೌಲ ಇನ್ನಷ್ಟು ಅವಿಧೇಯತೆಯ ಕೃತ್ಯಗಳನ್ನು ಮಾಡಿದ.—1 ಸಮು. 13:8, 9, 13, 14.

24. (1) ಅಮಾಲೇಕ್ಯರ ವಿರುದ್ಧದ ಯುದ್ಧದಲ್ಲಿ ಸೌಲ ಯೆಹೋವನಿಗೆ ಅವಿಧೇಯತೆ ತೋರಿಸಿದ್ದು ಹೇಗೆ? (2) ಸಮುವೇಲನು ತಿದ್ದುಪಾಟು ಕೊಟ್ಟಾಗ ಸೌಲ ಹೇಗೆ ಪ್ರತಿಕ್ರಿಯಿಸಿದನು? (3) ಯೆಹೋವನ ತೀರ್ಮಾನ ಏನಾಗಿತ್ತು?

24 ಸೌಲನು ಅಮಾಲೇಕ್ಯರ ವಿರುದ್ಧ ಯುದ್ಧ ಮಾಡಬೇಕೆಂದು ಯೆಹೋವನು ಸಮುವೇಲನ ಮೂಲಕ ತಿಳಿಸಿದನು. ಅಮಾಲೇಕ್ಯರ ದುಷ್ಟ ಅರಸ ಅಗಾಗನನ್ನು ಹತಿಸಬೇಕು, ಕೊಳ್ಳೆಯನ್ನೂ ನಾಶಮಾಡಬೇಕೆಂದು ದೇವರು ಸೂಚನೆಗಳನ್ನು ಕೊಟ್ಟನು. ಆದರೆ ಸೌಲ ಅಗಾಗನನ್ನು ಕೊಲ್ಲಲಿಲ್ಲ, ಕೊಳ್ಳೆಯಲ್ಲಿದ್ದ ಒಳ್ಳೊಳ್ಳೆ ವಸ್ತುಗಳನ್ನೂ ನಾಶಮಾಡಲಿಲ್ಲ. ಅವನ ಈ ತಪ್ಪಿನ ಬಗ್ಗೆ ಸಮುವೇಲನು ಮನಗಾಣಿಸಲು ಬಂದಾಗ ಸೌಲನು ಎಷ್ಟು ಬದಲಾಗಿದ್ದನೆಂಬುದು ಬಯಲಾಯಿತು. ನಮ್ರತೆಯಿಂದ ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು ಅದನ್ನು ತೇಲಿಸಿಬಿಟ್ಟನು, ನೆಪಗಳನ್ನು ಕೊಟ್ಟನು, ತಾನು ಮಾಡಿದ್ದನ್ನು ಸಮರ್ಥಿಸಿಕೊಂಡನು, ನುಣುಚಿಕೊಳ್ಳಲು ಪ್ರಯತ್ನಿಸಿದನು, ಆದಂಥ ತಪ್ಪಿಗೆ ಜನರೇ ಕಾರಣರೆಂದು ಹೇಳಿದನು. ಕೊಳ್ಳೆಯಲ್ಲಿ ಕೆಲವೊಂದನ್ನು ಯೆಹೋವನಿಗೆ ಯಜ್ಞಾರ್ಪಿಸಲಿಕ್ಕೆ ತಂದಿದ್ದೇನೆಂದು ಹೇಳುವ ಮೂಲಕ ಸಮುವೇಲ ಕೊಟ್ಟ ಶಿಸ್ತನ್ನು ಧಿಕ್ಕರಿಸಲು ಪ್ರಯತ್ನಿಸಿದನು. “ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ” ಎಂಬ ಸುಪ್ರಸಿದ್ಧ ಮಾತುಗಳನ್ನು ಸಮುವೇಲ ಹೇಳಿದ್ದು ಆಗಲೇ. ಅಲ್ಲದೆ ಧೈರ್ಯದಿಂದ ಸೌಲನನ್ನು ಖಂಡಿಸಿ, ಅರಸುತನ ಅವನಿಂದ ಕೀಳಲ್ಪಟ್ಟು ಇನ್ನೊಬ್ಬ ಸಮರ್ಥ ವ್ಯಕ್ತಿಗೆ ನೀಡಲಾಗುವುದೆಂಬ ಯೆಹೋವನ ತೀರ್ಮಾನವನ್ನು ತಿಳಿಸಿದನು. *1 ಸಮು. 15:1-33.

25, 26. (1) ಸಮುವೇಲ ಸೌಲನಿಗಾಗಿ ದುಃಖಿಸಿದ್ದು ಏಕೆ? (2) ಯೆಹೋವನು ಸಮುವೇಲನನ್ನು ಸೌಮ್ಯವಾಗಿ ತಿದ್ದಿದ್ದು ಹೇಗೆ? (3) ಸಮುವೇಲ ಇಷಯನ ಮನೆಗೆ ಹೋದಾಗ ಕಲಿತ ಪಾಠವೇನು?

25 ಸೌಲನು ಮಾಡಿದ ತಪ್ಪುಗಳನ್ನು ನೋಡಿ ಸಮುವೇಲ ತುಂಬ ನೊಂದುಕೊಂಡನು. ಇಡೀ ರಾತ್ರಿ ಯೆಹೋವನ ಮುಂದೆ ತನ್ನ ಅಳಲನ್ನು ತೋಡಿಕೊಂಡನು. ಸೌಲನಿಗಾಗಿ ದುಃಖಿಸಿದನು ಸಹ. ಸಮುವೇಲನು ಸೌಲನಲ್ಲಿ ಬಹಳಷ್ಟು ಒಳ್ಳೇ ಗುಣಗಳನ್ನು ನೋಡಿದ್ದನು. ಮುಂದಕ್ಕೆ ತುಂಬ ಒಳಿತನ್ನು ಸಾಧಿಸುವ ಸಾಮರ್ಥ್ಯ ಅವನಲ್ಲಿರುವುದನ್ನು ಕಂಡಿದ್ದನು. ಆದರೆ ಈಗ ಆ ನಿರೀಕ್ಷೆ ನುಚ್ಚುನೂರಾಯಿತು. ಸೌಲನು ಮುಂಚಿನಂತಿರಲಿಲ್ಲ, ಬದಲಾಗಿದ್ದನು. ಅತ್ಯುತ್ತಮ ಗುಣಗಳನ್ನು ಕಳೆದುಕೊಂಡಿದ್ದನು. ಯೆಹೋವನಿಗೆ ತಿರುಗಿಬಿದ್ದಿದ್ದನು. ಆದ್ದರಿಂದ ಸಮುವೇಲನು ಮುಂದೆಂದೂ ಸೌಲನನ್ನು ನೋಡಲು ಹೋಗಲಿಲ್ಲ. ಸ್ವಲ್ಪ ಸಮಯದ ಬಳಿಕ ಯೆಹೋವನು ಸಮುವೇಲನ ದೃಷ್ಟಿಕೋನವನ್ನು ಸೌಮ್ಯವಾಗಿ ತಿದ್ದುತ್ತಾ ಅಂದದ್ದು: “ನಾನು ಸೌಲನನ್ನು ಇಸ್ರಾಯೇಲ್ಯರ ಅರಸನಾಗಿರುವದಕ್ಕೆ ಅಯೋಗ್ಯನೆಂದು ತಳ್ಳಿಬಿಟ್ಟೆನಲ್ಲಾ; ನೀನು ಅವನಿಗೋಸ್ಕರ ಎಷ್ಟರ ವರೆಗೆ ದುಃಖಿಸುತ್ತಿರುವಿ? ಕೊಂಬನ್ನು ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೇತ್ಲೆಹೇಮಿನವನಾದ ಇಷಯನ ಬಳಿಗೆ ಕಳುಹಿಸುತ್ತೇನೆ; ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ.”—1 ಸಮು. 15:34, 35; 16:1.

26 ನಿಷ್ಠೆ ತೋರಿಸಲು ತಪ್ಪುವಂಥ ಅಪರಿಪೂರ್ಣ ಮಾನವರ ಮೇಲೆ ಯೆಹೋವನ ಉದ್ದೇಶ ಹೊಂದಿಕೊಂಡಿಲ್ಲ. ಒಬ್ಬನು ಅಪನಂಬಿಗಸ್ತನಾದರೆ ಯೆಹೋವನು ತನ್ನ ಉದ್ದೇಶವನ್ನು ಪೂರೈಸಲು ಇನ್ನೊಬ್ಬನನ್ನು ಆರಿಸಿಕೊಳ್ಳುವನು. ಆದ್ದರಿಂದ ವೃದ್ಧ ಸಮುವೇಲನು ಸೌಲನಿಗಾಗಿ ದುಃಖಿಸುವುದನ್ನು ನಿಲ್ಲಿಸಿದನು. ಯೆಹೋವನ ನಿರ್ದೇಶನದ ಮೇರೆಗೆ ಸಮುವೇಲನು ಬೇತ್ಲೆಹೇಮಿನಲ್ಲಿದ್ದ ಇಷಯನ ಮನೆಗೆ ಹೋದನು. ಅಲ್ಲಿ ಇಷಯನ ಹಲವು ಸ್ಫುರದ್ರೂಪಿ ಪುತ್ರರನ್ನು ಸಂಧಿಸಿದನು. ಆದರೆ ಬರೀ ಮೈಕಟ್ಟು, ರೂಪ ನೋಡದಂತೆ ಆರಂಭದಲ್ಲೇ ಯೆಹೋವನು ಸಮುವೇಲನಿಗೆ ತಿಳಿಸಿದನು. (1 ಸಮುವೇಲ 16:7 ಓದಿ.) ಕೊನೆಗೆ ಸಮುವೇಲನಿಗೆ ಇಷಯನ ಕಿರೀಮಗನಾದ ದಾವೀದನ ಭೇಟಿ ಆಗುತ್ತದೆ. ಯೆಹೋವನು ಆಯ್ಕೆಮಾಡಿದ್ದು ಇವನನ್ನೇ!

ನಿರಾಶೆಯನ್ನು ಉಂಟುಮಾಡುವ ಯಾವುದೇ ಸನ್ನಿವೇಶ ಇಲ್ಲವೆ ಸಮಸ್ಯೆಯು ಯೆಹೋವನಿಗೆ ಪರಿಹರಿಸಲು ಅಸಾಧ್ಯವಲ್ಲ, ಬೇಕಾದರೆ ಅದನ್ನು ಒಂದು ಆಶೀರ್ವಾದವಾಗಿಯೂ ಪರಿವರ್ತಿಸಬಲ್ಲನೆಂದು ಸಮುವೇಲ ತಿಳಿದುಕೊಂಡನು

27. (1) ಸಮುವೇಲನ ನಂಬಿಕೆ ಹೆಚ್ಚೆಚ್ಚು ಬಲವಾಗುತ್ತಾ ಹೋಗುವಂತೆ ಯಾವುದು ಸಹಾಯಮಾಡಿತು? (2) ಸಮುವೇಲನಿಟ್ಟ ಮಾದರಿಯ ಬಗ್ಗೆ ನಿಮಗೇನು ಅನಿಸುತ್ತದೆ?

27 ಸೌಲನ ಸ್ಥಾನಕ್ಕೆ ಯೆಹೋವನು ದಾವೀದನನ್ನು ಆಯ್ಕೆಮಾಡಿದ್ದು ಎಷ್ಟು ಸೂಕ್ತವಾಗಿತ್ತೆಂಬುದು ಸಮುವೇಲನಿಗೆ ಹೆಚ್ಚು ಸ್ಪಷ್ಟವಾದದ್ದು ತನ್ನ ಬದುಕಿನ ಕೊನೇ ವರ್ಷಗಳಲ್ಲಿ. ಹೊಟ್ಟೆಕಿಚ್ಚಿನಿಂದ ಉರಿಯುತ್ತಿದ್ದ ಸೌಲನು ದಾವೀದನನ್ನು ಕೊಲ್ಲಲೂ ಯತ್ನಿಸಿದ. ಧರ್ಮಭ್ರಷ್ಟನೂ ಆದ. ದಾವೀದನಲ್ಲಾದರೋ ಧೈರ್ಯ, ಸಮಗ್ರತೆ, ನಂಬಿಕೆ, ನಿಷ್ಠೆಯಂಥ ಸೊಗಸಾದ ಗುಣಗಳಿದ್ದವು. ಹಾಗಾಗಿ, ತನ್ನ ಕೊನೆಗಾಲ ಸಮೀಪಿಸುತ್ತಿದ್ದಂತೆ ಸಮುವೇಲನ ನಂಬಿಕೆ ಇನ್ನಷ್ಟು ಬಲವಾಯಿತು. ನಿರಾಶೆಯನ್ನುಂಟುಮಾಡುವ ಯಾವುದೇ ಸನ್ನಿವೇಶ ಇಲ್ಲವೆ ಸಮಸ್ಯೆಯು ಯೆಹೋವನಿಗೆ ಪರಿಹರಿಸಲು ಅಸಾಧ್ಯವಲ್ಲ, ಬೇಕಾದರೆ ಅದನ್ನು ಒಂದು ಆಶೀರ್ವಾದವಾಗಿಯೂ ಪರಿವರ್ತಿಸಬಲ್ಲನೆಂದು ಸಮುವೇಲ ತಿಳಿದುಕೊಂಡನು. ಕೊನೆಯಲ್ಲಿ ಅವನು ತೀರಿಹೋದಾಗ ಹೆಚ್ಚುಕಡಿಮೆ 100 ವರ್ಷಗಳ ನಂಬಿಗಸ್ತ ಸೇವೆ ಮಾಡಿದ ಉತ್ತಮ ದಾಖಲೆ ಅವನಿಗಿತ್ತು. ಅವನ ಸಾವಿಗಾಗಿ ಇಡೀ ಇಸ್ರಾಯೇಲ್‌ ಜನಾಂಗವೇ ಶೋಕಿಸಿತು! ಇಂದು ಯೆಹೋವನ ಸೇವಕರು ಹೀಗೆ ಕೇಳಿಕೊಳ್ಳುವುದು ಒಳ್ಳೇದು: ‘ಸಮುವೇಲನ ನಂಬಿಕೆಯನ್ನು ನಾನು ಅನುಕರಿಸುವೆನೋ?’

^ ಪ್ಯಾರ. 24 ಸ್ವತಃ ಸಮುವೇಲನೇ ಅಗಾಗನನ್ನು ಹತಿಸಿದನು. ಆ ದುಷ್ಟ ರಾಜನಾಗಲಿ ಅವನ ಕುಟುಂಬದವರಾಗಲಿ ಕರುಣೆಗೆ ಅರ್ಹರಾಗಿರಲಿಲ್ಲ. ಶತಮಾನಗಳ ನಂತರ ದೇವಜನರೆಲ್ಲರನ್ನು ಅಳಿಸಿಹಾಕಲು ಪ್ರಯತ್ನಿಸಿದ ಹಾಮಾನನು ಕೂಡ ಅಗಾಗನ ವಂಶದವನು.—ಎಸ್ತೇ. 8:3; ಈ ಪುಸ್ತಕದ 15 ಮತ್ತು 16ನೇ ಅಧ್ಯಾಯಗಳನ್ನು ನೋಡಿ.