ಮಾರ್ಕ 6:1-56

  • ಸ್ವಂತ ಊರಲ್ಲಿ ಯೇಸುಗೆ ಮರ್ಯಾದೆ ಕೊಡಲಿಲ್ಲ (1-6)

  • ಹೇಗೆ ಸೇವೆ ಮಾಡಬೇಕಂತ 12 ಶಿಷ್ಯರಿಗೆ ಸಲಹೆ-ಸೂಚನೆ (7-13)

  • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ತೀರಿಹೋದ (14-29)

  • ಯೇಸು 5,000 ಜನ್ರಿಗೆ ಊಟ ಕೊಟ್ಟನು (30-44)

  • ಯೇಸು ನೀರಿನ ಮೇಲೆ ನಡೆದನು (45-52)

  • ಗೆನೆಜರೇತಿನಲ್ಲಿ ರೋಗಿಗಳನ್ನ ವಾಸಿಮಾಡಿದನು (53-56)

6  ಯೇಸು ಅಲ್ಲಿಂದ ತನ್ನ ಸ್ವಂತ ಊರಿಗೆ ಬಂದನು.+ ಆತನ ಜೊತೆ ಶಿಷ್ಯರೂ ಇದ್ರು.  ಸಬ್ಬತ್‌ ದಿನ ಬಂದಾಗ ಸಭಾಮಂದಿರದಲ್ಲಿ ಕಲಿಸೋಕೆ ಶುರುಮಾಡಿದನು. ಅದನ್ನ ಕೇಳಿ ತುಂಬ ಜನ ಆಶ್ಚರ್ಯದಿಂದ “ಇವನು ಈ ವಿಷ್ಯಗಳನ್ನ ಎಲ್ಲಿಂದ ಕಲಿತ?+ ಇವನಿಗೆ ಇಷ್ಟೊಂದು ವಿವೇಕ, ಅದ್ಭುತಗಳನ್ನ ಮಾಡೋ ಶಕ್ತಿ ಎಲ್ಲಿಂದ ಸಿಕ್ತು?+  ಇವನು ಬಡಗಿ+ ಅಲ್ವಾ? ಮರಿಯಳ+ ಮಗ ಅಲ್ವಾ? ಇವನು ಯಾಕೋಬ,+ ಯೋಸೇಫ, ಯೂದ ಮತ್ತು ಸೀಮೋನನ+ ಅಣ್ಣ ಅಲ್ವಾ? ಇವನ ತಂಗಿಯರು ನಮ್ಮ ಜೊತೆ ಇಲ್ಲೇ ಇದ್ದಾರೆ ತಾನೇ?” ಅಂತ ಹೇಳಿ ಆತನ ಮೇಲೆ ನಂಬಿಕೆ ಇಡ್ಲಿಲ್ಲ.  ಆದ್ರೆ ಯೇಸು ಅವ್ರಿಗೆ “ಪ್ರವಾದಿಗೆ ಸ್ವಂತ ಊರಿನವರು, ಸಂಬಂಧಿಕರು, ಮನೆಯವರು ಬಿಟ್ಟು ಬೇರೆ ಎಲ್ರೂ ಮರ್ಯಾದೆ ಕೊಡ್ತಾರೆ”+ ಅಂದನು.  ಹಾಗಾಗಿ ಅಲ್ಲಿ ಆತನು ಕೆಲವೇ ರೋಗಿಗಳನ್ನ ವಾಸಿಮಾಡಿದನು.* ಅದನ್ನ ಬಿಟ್ಟು ಬೇರೆ ಯಾವ ಅದ್ಭುತವನ್ನೂ ಮಾಡಲಿಲ್ಲ.  ಅವ್ರಲ್ಲಿ ನಂಬಿಕೆ ಇಲ್ಲದೆ ಇರೋದನ್ನ ನೋಡಿ ಯೇಸುಗೆ ಆಶ್ಚರ್ಯ ಆಯ್ತು. ಆಮೇಲೆ ಯೇಸು ಸುತ್ತಮುತ್ತ ಇರೋ ಹಳ್ಳಿಗಳಿಗೆ ಹೋಗಿ ಕಲಿಸಿದನು.+  ಆತನು 12 ಅಪೊಸ್ತಲರನ್ನ ಕರೆದು ಅವ್ರನ್ನ ಇಬ್ಬಿಬ್ರಾಗಿ ಕಳಿಸಿದನು.+ ಅವ್ರಿಗೆ ಕೆಟ್ಟ ದೇವದೂತರನ್ನ ಬಿಡಿಸೋ ಅಧಿಕಾರ ಕೊಟ್ಟನು.+  ಈ ಆಜ್ಞೆನೂ ಕೊಟ್ಟನು “ಹೋಗುವಾಗ ಕೋಲನ್ನ ಮಾತ್ರ ತಗೊಂಡು ಹೋಗಿ. ರೊಟ್ಟಿ, ಆಹಾರದ ಚೀಲ, ಹಣದ ಚೀಲ* ಯಾವುದನ್ನೂ ತಗೊಂಡು ಹೋಗಬೇಡಿ.+  ಚಪ್ಪಲಿ ಹಾಕೊಳ್ಳಿ. ಆದ್ರೆ ಎರಡು ಜೊತೆ ಬಟ್ಟೆ ತಗೊಂಡು* ಹೋಗಬೇಡಿ. 10  ನೀವು ಒಂದು ಮನೆಗೆ ಹೋದಾಗ ಅವರು ಚೆನ್ನಾಗಿ ಕೇಳಿಸ್ಕೊಂಡ್ರೆ ಅಲ್ಲೇ ಉಳ್ಕೊಳ್ಳಿ. ಆ ಊರಲ್ಲಿ ಸಿಹಿಸುದ್ದಿ ಸಾರೋ ತನಕ ಆ ಮನೆಯಲ್ಲೇ ಇರಿ.+ 11  ಯಾವುದೇ ಊರಿನವರು ನಿಮ್ಮನ್ನ ಒಳಗೆ ಕರಿದೆ ಇದ್ರೆ, ನಿಮ್ಮ ಸಂದೇಶ ಕೇಳದಿದ್ರೆ ಅಲ್ಲಿಂದ ಹೋಗುವಾಗ ನಿಮ್ಮ ಕಾಲಿನ ಧೂಳನ್ನ ಝಾಡಿಸಿ. ಹೀಗೆ ಅವ್ರಿಗೆ ಎಚ್ಚರಿಕೆ ಕೊಟ್ಟಿದ್ದೀರ* ಅಂತ ತೋರಿಸ್ಕೊಡಿ.”+ 12  ಆಮೇಲೆ ಶಿಷ್ಯರು ಅಲ್ಲಿಂದ ಹೋಗಿ ಪಾಪಗಳಿಗೆ ಪಶ್ಚಾತ್ತಾಪ ಪಡಬೇಕು ಅಂತ ಜನ್ರಿಗೆ ಸಾರಿಹೇಳಿದ್ರು.+ 13  ತುಂಬ ಕೆಟ್ಟ ದೇವದೂತರನ್ನ+ ಬಿಡಿಸಿದ್ರು. ತುಂಬ ರೋಗಿಗಳಿಗೆ ಎಣ್ಣೆ ಹಚ್ಚಿ ವಾಸಿಮಾಡಿದ್ರು. 14  ಯೇಸು ಹೆಸ್ರು ಎಷ್ಟು ಪ್ರಸಿದ್ಧ ಆಯ್ತಂದ್ರೆ ಈ ವಿಷ್ಯ ರಾಜ ಹೆರೋದನ ಕಿವಿಗೆ ಬಿತ್ತು. ಜನ ಆತನ ಬಗ್ಗೆ “ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಮತ್ತೆ ಬದುಕಿ ಬಂದಿದ್ದಾನೆ. ಅದಕ್ಕೇ ಇಂಥ ಅದ್ಭುತಗಳನ್ನ ಮಾಡೋ ಶಕ್ತಿ ಅವನಿಗಿದೆ” ಅಂತ ಹೇಳ್ತಿದ್ರು.+ 15  ಆದ್ರೆ ಇನ್ನು ಕೆಲವರು “ಇವನು ಎಲೀಯ” ಅಂತಿದ್ರು. ಇನ್ನು ಕೆಲವರು “ಹಿಂದಿನ ಕಾಲದ ಪ್ರವಾದಿಗಳ ತರ ಇವನೂ ಒಬ್ಬ ಪ್ರವಾದಿ” ಅಂತಾನೂ ಹೇಳ್ತಾ ಇದ್ರು.+ 16  ಆದ್ರೆ ಹೆರೋದ ಯೇಸು ಬಗ್ಗೆ ಕೇಳಿಸ್ಕೊಂಡಾಗ “ನಾನು ತಲೆ ಕಡಿಸಿದ ಯೋಹಾನನೇ ಮತ್ತೆ ಬದುಕಿ ಬಂದಿದ್ದಾನೆ” ಅಂದ. 17  ಹೆರೋದ ತನ್ನ ಅಣ್ಣ ಫಿಲಿಪ್ಪನ ಹೆಂಡತಿಯಾಗಿದ್ದ ಹೆರೋದ್ಯಳ ಕಾರಣ ಯೋಹಾನನನ್ನ ಹಿಡಿದು ಸರಪಳಿಯಿಂದ ಕಟ್ಟಿ ಜೈಲಿಗೆ ಹಾಕಿಸಿದ್ದ.+ 18  ಯಾಕಂದ್ರೆ ಯೋಹಾನ ಹೆರೋದನಿಗೆ “ನಿನ್ನ ಅತ್ತಿಗೆಯನ್ನ ನೀನು ಮದುವೆ ಆಗಿರೋದು ತಪ್ಪು”+ ಅಂತ ತುಂಬ ಸಲ ಹೇಳಿದ್ದ. 19  ಹಾಗಾಗಿ ಹೆರೋದ್ಯ ಅವನ ಮೇಲೆ ದ್ವೇಷ ಕಟ್ಕೊಂಡಿದ್ದಳು. ಅವನನ್ನ ಸಾಯಿಸಬೇಕು ಅಂತ ಕಾಯ್ತಾ ಇದ್ದಳು. ಆದ್ರೆ ಅವಳಿಂದ ಏನೂ ಮಾಡೋಕೆ ಆಗಿರ್ಲಿಲ್ಲ. 20  ಯಾಕಂದ್ರೆ ಹೆರೋದ ಯೋಹಾನನನ್ನ ಕಾಪಾಡ್ತಾ ಬಂದಿದ್ದ. ಯೋಹಾನ ನೀತಿವಂತ, ಪವಿತ್ರ ಮನುಷ್ಯ+ ಅಂತ ಗೊತ್ತಿದ್ರಿಂದ ಅವನಿಗೆ ಭಯ ಇತ್ತು. ಅದಕ್ಕೇ ಯೋಹಾನನ ಮಾತುಗಳನ್ನ ಕೇಳಿಸ್ಕೊಂಡಾಗ ಏನು ಮಾಡಬೇಕು ಅಂತ ಅರ್ಥ ಆಗ್ತಿರ್ಲಿಲ್ಲ. ಆದ್ರೂ ಅವನು ಹೇಳೋದನ್ನ ಸಂತೋಷದಿಂದ ಕೇಳಿಸ್ಕೊಳ್ತಿದ್ದ. 21  ಕೊನೆಗೂ ಹೆರೋದ್ಯಳಿಗೆ ಅವಕಾಶ ಸಿಕ್ಕೇ ಬಿಡ್ತು. ಅವತ್ತು ಹೆರೋದನ ಹುಟ್ಟುಹಬ್ಬ.+ ಅವನು ಸಂಜೆ ದೊಡ್ಡದೊಡ್ಡ ಸರ್ಕಾರಿ ಅಧಿಕಾರಿಗಳನ್ನ, ಸೇನಾಪತಿಗಳನ್ನ ಮತ್ತು ಗಲಿಲಾಯದ ಪ್ರಮುಖ ವ್ಯಕ್ತಿಗಳನ್ನ ಕರೆದು ಒಂದು ಔತಣ ಏರ್ಪಡಿಸಿದ.+ 22  ಹೆರೋದ್ಯಳ ಮಗಳು ಬಂದು ನೃತ್ಯ ಮಾಡಿ ಹೆರೋದನನ್ನ, ಅವನ ಜೊತೆ ಊಟಕ್ಕೆ ಕೂತವ್ರನ್ನ ಖುಷಿಪಡಿಸಿದಳು. ರಾಜ ಆ ಹುಡುಗಿಗೆ “ನಿಂಗೇನು ಬೇಕೋ ಕೇಳು, ಕೊಡ್ತೀನಿ” ಅಂದ. 23  ಅಷ್ಟೇ ಅಲ್ಲ “ನೀನು ಏನೇ ಕೇಳಿದ್ರೂ ಕೊಡ್ತೀನಿ. ಅರ್ಧ ರಾಜ್ಯ ಕೇಳಿದ್ರೂ ಕೊಡ್ತೀನಿ” ಅಂತ ಮಾತುಕೊಟ್ಟ. 24  ಆಗ ಅವಳು ಹೊರಗೆ ಹೋಗಿ ಅವಳ ಅಮ್ಮನ ಹತ್ರ “ನಾನೇನು ಕೇಳಲಿ?” ಅಂದಳು. “ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನ ತಲೆ ಕೇಳು” ಅಂತ ಅಮ್ಮ ಅಂದಳು. 25  ಆ ಹುಡುಗಿ ಬೇಗಬೇಗ ರಾಜನ ಹತ್ರ ಹೋಗಿ “ಯೋಹಾನನ ತಲೆಯನ್ನ ಒಂದು ದೊಡ್ಡ ತಟ್ಟೆಯಲ್ಲಿಟ್ಟು ಈಗ್ಲೇ ನನಗೆ ಕೊಡು”+ ಅಂತ ಕೇಳಿದಳು. 26  ಇದನ್ನ ಕೇಳಿ ರಾಜನಿಗೆ ತುಂಬ ದುಃಖ ಆಯ್ತು. ಆದ್ರೂ ಊಟಕ್ಕೆ ಬಂದವ್ರ ಮುಂದೆ ಮಾತು ಕೊಟ್ಟಿದ್ರಿಂದ ಅವಳು ಕೇಳಿದ್ದನ್ನ ಕೊಡ್ತೀನಿ ಅಂದ. 27  ಹಾಗಾಗಿ ರಾಜ ತಕ್ಷಣ ತನ್ನ ಅಂಗರಕ್ಷಕರಲ್ಲಿ ಒಬ್ಬನನ್ನ ಕಳಿಸಿ ಯೋಹಾನನ ತಲೆ ತರೋಕೆ ಹೇಳಿದ. ಅವನು ಜೈಲಿಗೆ ಹೋಗಿ ತಲೆ ಕಡಿದು 28  ತಟ್ಟೆಯಲ್ಲಿ ತಂದ. ಅದನ್ನ ಆ ಹುಡುಗಿಗೆ ಕೊಟ್ಟ. ಅವಳು ಅದನ್ನ ತಾಯಿಗೆ ಕೊಟ್ಟಳು. 29  ಯೋಹಾನನ ಶಿಷ್ಯರಿಗೆ ಈ ವಿಷ್ಯ ಗೊತ್ತಾದಾಗ ಅವರು ಬಂದು ಅವನ ಶವ ತಗೊಂಡು ಹೋಗಿ ಸಮಾಧಿ ಮಾಡಿದ್ರು. 30  ಅಪೊಸ್ತಲರು ವಾಪಸ್‌ ಬಂದು ಯೇಸು ಸುತ್ತಲೂ ನಿಂತು ಅವರು ಏನೇನು ಮಾಡಿದ್ರೋ ಏನೇನು ಕಲಿಸಿದ್ರೋ ಎಲ್ಲಾನೂ ಆತನಿಗೆ ಹೇಳಿದ್ರು.+ 31  ಆಗ ಆತನು “ಬನ್ನಿ, ಯಾರೂ ಇಲ್ಲದೇ ಇರೋ ಜಾಗಕ್ಕೆ ಹೋಗೋಣ, ನೀವು ಸ್ವಲ್ಪ ವಿಶ್ರಾಂತಿ ತಗೊಳ್ಳಿ”+ ಅಂದನು. ಯಾಕಂದ್ರೆ ಅಲ್ಲಿ ತುಂಬ ಜನ ಬರ್ತಾ ಹೋಗ್ತಾ ಇದ್ರು. ಅವ್ರಿಗೆ ಊಟ ಮಾಡೋಕೂ ಸಮಯ ಸಿಕ್ಕಿರ್ಲಿಲ್ಲ. 32  ಅವರು ದೋಣಿ ಹತ್ತಿ ಯಾರೂ ಇಲ್ಲದೆ ಇರೋ ಜಾಗಕ್ಕೆ ಹೋಗ್ತಿದ್ರು.+ 33  ಆದ್ರೆ ಅವರು ಹೋಗ್ತಿರೋದನ್ನ ಜನ ನೋಡಿಬಿಟ್ರು. ಹಾಗಾಗಿ ತುಂಬ ಜನ್ರಿಗೆ ಈ ವಿಷ್ಯ ಗೊತ್ತಾಗಿ ಎಲ್ಲ ಊರುಗಳಿಂದ ಜನ ಅವ್ರಿಗಿಂತ ಮುಂಚೆನೇ ಅಲ್ಲಿಗೆ ಬಂದ್ರು. 34  ಯೇಸು ದೋಣಿಯಿಂದ ಇಳಿದಾಗ ಅಲ್ಲಿ ತುಂಬ ಜನ ಇರೋದನ್ನ ನೋಡಿದನು. ಅವರು ಕುರುಬನಿಲ್ಲದ ಕುರಿಗಳ ಹಾಗೆ ಇದ್ರು.+ ಹಾಗಾಗಿ ಯೇಸುಗೆ ಅವ್ರ ಮೇಲೆ ತುಂಬ ಕನಿಕರ ಹುಟ್ಟಿತು.+ ಅವ್ರಿಗೆ ತುಂಬ ವಿಷ್ಯ ಕಲಿಸೋಕೆ ಶುರುಮಾಡಿದನು.+ 35  ಸಂಜೆ ಆದಾಗ ಶಿಷ್ಯರು ಆತನ ಹತ್ರ ಬಂದು “ನಾವು ತುಂಬ ದೂರ ಬಂದುಬಿಟ್ಟಿದ್ದೀವಿ. ಈಗಾಗಲೇ ತುಂಬ ಹೊತ್ತಾಗಿದೆ.+ 36  ಈ ಜನ್ರನ್ನೆಲ್ಲ ಕಳಿಸಿಬಿಡು. ಅವರು ಅಕ್ಕಪಕ್ಕದ ಹಳ್ಳಿಗೆ ಹೋಗಿ ಏನಾದ್ರೂ ತಗೊಂಡು ತಿನ್ನಲಿ”+ ಅಂದ್ರು. 37  ಅದಕ್ಕೆ ಯೇಸು “ನೀವೇ ಅವ್ರಿಗೆ ಏನಾದ್ರೂ ತಿನ್ನೋಕೆ ಕೊಡಿ” ಅಂದನು. ಅದಕ್ಕವರು “ನಾವು ಹೋಗಿ 200 ದಿನಾರು* ಕೊಟ್ಟು ರೊಟ್ಟಿಗಳನ್ನ ತರಬೇಕಾ? ಅದನ್ನ ತಂದು ಈ ಜನ್ರಿಗೆ ಕೊಡಬೇಕಾ?”+ ಅಂತ ಕೇಳಿದ್ರು. 38  ಆತನು “ನಿಮ್ಮ ಹತ್ರ ಎಷ್ಟು ರೊಟ್ಟಿ ಇದೆ? ಹೋಗಿ ನೋಡಿ!” ಅಂದನು. ಅವರು “ಐದು ರೊಟ್ಟಿ, ಎರಡು ಮೀನಿದೆ”+ ಅಂದ್ರು. 39  ಆಗ ಆತನು ಎಲ್ರಿಗೂ ಹುಲ್ಲಿನ ಮೇಲೆ ಗುಂಪುಗುಂಪಾಗಿ ಕೂತ್ಕೊಳ್ಳಿ ಅಂತ ಆಜ್ಞೆ ಕೊಟ್ಟನು.+ 40  ಒಂದೊಂದು ಗುಂಪಲ್ಲಿ 50 ಜನ, 100 ಜನ ಇದ್ರು. 41  ಆಮೇಲೆ ಯೇಸು ಐದು ರೊಟ್ಟಿ, ಎರಡು ಮೀನು ತಗೊಂಡು ಆಕಾಶದ ಕಡೆ ನೋಡಿ ಪ್ರಾರ್ಥಿಸಿದನು.+ ರೊಟ್ಟಿ ಮುರಿದು ಶಿಷ್ಯರಿಗೆ ಕೊಟ್ಟು ಜನ್ರಿಗೆ ಹಂಚಿ ಅಂದನು. ಅದೇ ತರ ಎರಡು ಮೀನನ್ನ ಎಲ್ರಿಗೆ ಹಂಚಿದನು. 42  ಎಲ್ರೂ ಹೊಟ್ಟೆ ತುಂಬ ತಿಂದ್ರು. 43  ಉಳಿದ ರೊಟ್ಟಿ ಕೂಡಿಸಿದಾಗ 12 ಬುಟ್ಟಿ ತುಂಬ್ತು. ಮೀನು ಸಹ ಉಳಿದಿತ್ತು.+ 44  ಅವತ್ತು ಊಟ ಮಾಡಿದವ್ರಲ್ಲಿ ಗಂಡಸರೇ 5,000 ಇದ್ರು. 45  ಆಮೇಲೆ ತಕ್ಷಣ ಯೇಸು ಶಿಷ್ಯರಿಗೆ ದೋಣಿ ಹತ್ತಿ ಆಕಡೆ ದಡದಲ್ಲಿರೋ ಬೇತ್ಸಾಯಿದಕ್ಕೆ ಹೋಗಿ ಅಂದನು. ಅವರು ಹೋಗ್ತಾ ಇರುವಾಗ ಜನ್ರನ್ನೂ ಕಳಿಸಿಕೊಟ್ಟನು.+ 46  ಆಮೇಲೆ ಯೇಸು ಪ್ರಾರ್ಥನೆ ಮಾಡೋಕೆ ಬೆಟ್ಟಕ್ಕೆ ಹೋದನು.+ 47  ಕತ್ತಲಾಗ್ತಾ ಇರುವಾಗ ಶಿಷ್ಯರಿದ್ದ ದೋಣಿ ಸಮುದ್ರದ ಮಧ್ಯದಲ್ಲಿತ್ತು. ಆದ್ರೆ ಯೇಸು ಇನ್ನೂ ಬೆಟ್ಟದ ಮೇಲೆ ಇದ್ದನು.+ 48  ಜೋರಾಗಿ ಗಾಳಿ ಬೀಸ್ತಾ ಇದ್ದಿದ್ರಿಂದ ಶಿಷ್ಯರು ದೋಣಿ ನಡಿಸೋಕೆ ಒದ್ದಾಡ್ತಿದ್ರು. ಇದನ್ನ ನೋಡಿ ಯೇಸು ನಸುಕಲ್ಲಿ* ನೀರಿನ ಮೇಲೆ ನಡ್ಕೊಂಡು ಅವ್ರ ಕಡೆ ಬಂದನು. ಅವ್ರನ್ನ ದಾಟಿ ಹೋಗಬೇಕಂತ ಇದ್ದ. 49  ನೀರಿನ ಮೇಲೆ ಆತನು ನಡಿಯೋದನ್ನ ನೋಡಿ ಶಿಷ್ಯರು “ಅಯ್ಯೋ ಅಲ್ಲಿ ಏನೋ ಇದೆ” ಅಂತ ಕಿರಿಚಿದ್ರು. 50  ಅವ್ರೆಲ್ಲ ಆತನನ್ನ ನೋಡಿ ಭಯಪಟ್ರು. ತಕ್ಷಣ ಆತನು ಅವ್ರಿಗೆ “ನಾನೇ, ಭಯಪಡಬೇಡಿ”+ ಅಂದನು. 51  ಆಮೇಲೆ ಅವ್ರಿದ್ದ ದೋಣಿ ಹತ್ತಿದನು. ಆಗ ಬಿರುಗಾಳಿ ನಿಂತು ಹೋಯ್ತು. ಇದನ್ನ ನೋಡಿ ಅವ್ರಿಗೆ ತುಂಬ ಆಶ್ಚರ್ಯ ಆಯ್ತು. 52  ರೊಟ್ಟಿಯ ಅದ್ಭುತ ಮಾಡಿದ ಯೇಸುಗೆ ಇಂಥ ಅದ್ಭುತನೂ ಮಾಡೋಕಾಗುತ್ತೆ ಅಂತ ಅವರು ಅರ್ಥ ಮಾಡ್ಕೊಳ್ಳಲಿಲ್ಲ. ಅವ್ರ ಮನಸ್ಸು ಆಗಲೂ ಮಂಕಾಗಿತ್ತು. 53  ಅವರು ಸಮುದ್ರ ದಾಟಿ ಗೆನೆಜರೇತ್‌ ಊರಿಗೆ ಬಂದು ಅಲ್ಲಿ ಹತ್ರದಲ್ಲಿ ದೋಣಿಗೆ ಲಂಗರ ಹಾಕಿದ್ರು.+ 54  ಅವರು ದೋಣಿಯಿಂದ ಇಳಿದ ತಕ್ಷಣ ಜನ ಯೇಸುನ ಗುರುತು ಹಿಡಿದ್ರು. 55  ಅವರು ಓಡಿ ಹೋಗಿ ಆ ಸುತ್ತಮುತ್ತ ಪ್ರದೇಶಗಳಲ್ಲಿದ್ದ ರೋಗಿಗಳನ್ನ ಹಾಸಿಗೆ ಸಮೇತ ಹೊತ್ಕೊಂಡು ಆತನ ಹತ್ರ ಬಂದ್ರು. 56  ಯೇಸು ಯಾವುದೇ ಹಳ್ಳಿಗೆ, ಊರಿಗೆ, ಗ್ರಾಮಕ್ಕೆ ಹೋದ್ರೂ ಜನ ರೋಗಿಗಳನ್ನ ಸಾರ್ವಜನಿಕ ಸ್ಥಳಗಳಿಗೆ ಕರ್ಕೊಂಡು ಬರ್ತಿದ್ರು. “ನಿನ್ನ ಬಟ್ಟೆ ತುದಿಯನ್ನಾದ್ರೂ ಮುಟ್ಟೋಕೆ ಅವ್ರಿಗೆ ಅವಕಾಶ ಕೊಡು” ಅಂತ ಬೇಡ್ಕೊಳ್ತಾ ಇದ್ರು.+ ಆ ರೀತಿ ಮುಟ್ಟಿದವ್ರಿಗೆಲ್ಲ ವಾಸಿ ಆಯ್ತು.

ಪಾದಟಿಪ್ಪಣಿ

ಅಕ್ಷ. “ರೋಗಿಗಳ ಮೇಲೆ ಕೈಯಿಟ್ಟು.”
ಅಕ್ಷ. “ನಡುಪಟ್ಟಿಯ ಜೇಬಲ್ಲಿ ತಾಮ್ರದ ಕಾಸು.”
ಅಥವಾ “ಹಾಕೊಂಡು.”
ಅಕ್ಷ. “ಸಾಕ್ಷಿಯಾಗಿರಲಿ.”
ಅಕ್ಷ. “ನಾಲ್ಕನೇ ಜಾವ.” ಅಂದ್ರೆ ಬೆಳಿಗ್ಗೆ ಸುಮಾರು 3-6 ಗಂಟೆ.