ಯೋಹಾನ 6:1-71

  • 5,000 ಜನ್ರಿಗೆ ಊಟ ಕೊಟ್ಟನು (1-15)

  • ಯೇಸು ನೀರಿನ ಮೇಲೆ ನಡೆದನು (16-21)

  • ಯೇಸು “ಜೀವ ಕೊಡೋ ರೊಟ್ಟಿ” (22-59)

  • ಯೇಸುವಿನ ಮಾತು ತುಂಬ ಜನ್ರಿಗೆ ಇಷ್ಟ ಆಗಲಿಲ್ಲ (60-71)

6  ಆಮೇಲೆ ಯೇಸು ಗಲಿಲಾಯ ಅಥವಾ ತಿಬೇರಿಯ ಸಮುದ್ರದ ಆಕಡೆ ದಡಕ್ಕೆ ಹೋದನು.+  ತುಂಬ ಜನ ಆತನ ಹಿಂದೆನೇ ಹೋದ್ರು.+ ಯಾಕಂದ್ರೆ ಆತನು ಅದ್ಭುತ ಮಾಡಿ ಜನ್ರನ್ನ ವಾಸಿ ಮಾಡೋದನ್ನ+ ಅವರು ನೋಡಿದ್ರು.  ಯೇಸು ಶಿಷ್ಯರ ಜೊತೆ ಒಂದು ಬೆಟ್ಟ ಹತ್ತಿ ಕೂತನು.  ಯೆಹೂದ್ಯರ ಪಸ್ಕ+ ಹಬ್ಬ ಹತ್ರ ಇತ್ತು.  ಯೇಸು ತುಂಬ ಜನ ಬರ್ತಿರೋದನ್ನ ನೋಡಿ ಫಿಲಿಪ್ಪನಿಗೆ “ಇವ್ರಿಗೆಲ್ಲ ತಿನ್ನೋಕೆ ರೊಟ್ಟಿಗಳನ್ನ ನಾವು ಎಲ್ಲಿಂದ ತರೋಣ?”+ ಅಂತ ಕೇಳಿದನು.  ಫಿಲಿಪ್ಪ ಏನು ಯೋಚಿಸ್ತಾ ಇದ್ದಾನೆ ಅಂತ ತಿಳ್ಕೊಳ್ಳೋಕೆ ಯೇಸು ಹೀಗೆ ಕೇಳಿದನು. ಯಾಕಂದ್ರೆ ಮುಂದೆ ತಾನು ಏನು ಮಾಡ್ತೀನಂತ ಯೇಸುಗೆ ಗೊತ್ತಿತ್ತು.  ಅದಕ್ಕೆ ಫಿಲಿಪ್ಪ “ಇನ್ನೂರು ದಿನಾರಿಗೆ* ರೊಟ್ಟಿಗಳನ್ನ ತಂದು ಸ್ವಲ್ಪಸ್ವಲ್ಪ ಕೊಟ್ರೂ ಎಲ್ರಿಗೂ ಸಾಕಾಗಲ್ಲ” ಅಂದ.  ಆಗ ಇನ್ನೊಬ್ಬ ಶಿಷ್ಯನಾದ ಅಂದ್ರೆಯ (ಸೀಮೋನ ಪೇತ್ರನ ತಮ್ಮ) ಹೀಗಂದ  “ಇಲ್ಲಿ ಒಬ್ಬ ಚಿಕ್ಕ ಹುಡುಗನ ಹತ್ರ ಐದು ಬಾರ್ಲಿ ರೊಟ್ಟಿ, ಎರಡು ಚಿಕ್ಕ ಮೀನು ಇದೆ. ಆದ್ರೆ ಇಷ್ಟು ಜನ್ರಿಗೆ ಅದು ಸಾಕಾಗುತ್ತಾ?”+ 10  ಯೇಸು ಶಿಷ್ಯರಿಗೆ “ಜನ್ರನ್ನ ಕೂರಿಸಿ” ಅಂದನು. ಅಲ್ಲಿ ತುಂಬ ಹುಲ್ಲಿತ್ತು. ಜನ್ರು ಆರಾಮಾಗಿ ಕೂತ್ರು. ಅವ್ರಲ್ಲಿ ಗಂಡಸರೇ ಸುಮಾರು 5,000 ಇದ್ರು.+ 11  ಯೇಸು ಆ ರೊಟ್ಟಿ ತಗೊಂಡು ದೇವರಿಗೆ ಧನ್ಯವಾದ ಹೇಳಿ ಕೂತಿದ್ದವ್ರಿಗೆ ಹಂಚಿದನು. ಅದೇ ತರ ಮೀನನ್ನೂ ಹಂಚಿದನು. ಜನ ಎಷ್ಟು ಬೇಕೋ ಅಷ್ಟು ತಿಂದ್ರು. 12  ಅವ್ರೆಲ್ಲ ಹೊಟ್ಟೆ ತುಂಬ ತಿಂದ ಮೇಲೆ ಯೇಸು ಶಿಷ್ಯರಿಗೆ “ಉಳಿದ ರೊಟ್ಟಿ ತುಂಡುಗಳನ್ನ ಬಿಸಾಕದೆ ಕೂಡಿಸಿಡಿ” ಅಂದನು. 13  ಹಾಗಾಗಿ ಐದು ರೊಟ್ಟಿಗಳಿಂದ ಜನ ಊಟಮಾಡಿದ ಮೇಲೆ ಉಳಿದ ರೊಟ್ಟಿ ತುಂಡುಗಳನ್ನ ಶಿಷ್ಯರು ಕೂಡಿಸಿದ್ರು. 12 ಬುಟ್ಟಿ ತುಂಬ್ತು. 14  ಯೇಸು ಮಾಡಿದ ಈ ಅದ್ಭುತ ನೋಡಿ ಜನ “ನಿಜವಾಗ್ಲೂ ಇವನೇ ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿ”+ ಅಂತ ಹೇಳೋಕೆ ಶುರುಮಾಡಿದ್ರು. 15  ತನ್ನನ್ನ ಜನ್ರು ರಾಜ+ ಮಾಡಬೇಕಂತ ಇದ್ದಾರೆ ಅನ್ನೋದು ಯೇಸುಗೆ ಗೊತ್ತಾಗಿ ಪುನಃ ಒಬ್ಬನೇ ಬೆಟ್ಟಕ್ಕೆ ಹೋದನು.+ 16  ಸಂಜೆ ಆದಾಗ ಶಿಷ್ಯರು ಸಮುದ್ರದ ಹತ್ರ ಹೋಗಿ+ 17  ದೋಣಿ ಹತ್ತಿ ಸಮುದ್ರದ ಆಕಡೆ ಇರೋ ಕಪೆರ್ನೌಮಿಗೆ ಹೊರಟ್ರು. ಅಷ್ಟರಲ್ಲಿ ಕತ್ತಲಾಗಿತ್ತು. ಯೇಸು ಇನ್ನೂ ಬಂದಿರಲಿಲ್ಲ.+ 18  ಅಷ್ಟೇ ಅಲ್ಲ ಜೋರಾಗಿ ಗಾಳಿ ಬೀಸ್ತಾ ಇತ್ತು. ದೊಡ್ಡದೊಡ್ಡ ಅಲೆಗಳು ಬರ್ತಾ ಇತ್ತು.+ 19  ಶಿಷ್ಯರು ಐದಾರು ಕಿಲೋಮೀಟರ್‌* ದೂರ ಬಂದ ಮೇಲೆ ಯೇಸು ಸಮುದ್ರದ ಮೇಲೆ ನಡಿತಾ ಅವ್ರ ಹತ್ರ ಬಂದನು. ಅದನ್ನ ನೋಡಿ ಅವ್ರಿಗೆ ತುಂಬ ಭಯ ಆಯ್ತು. 20  ಆದ್ರೆ ಯೇಸು “ಭಯಪಡಬೇಡಿ, ನಾನೇ” ಅಂದನು.+ 21  ಆಗ ಅವರು ಯೇಸುವನ್ನ ಸಂತೋಷದಿಂದ ದೋಣಿಗೆ ಹತ್ತಿಸ್ಕೊಂಡ್ರು. ಅಷ್ಟರಲ್ಲಿ ಅವರು ಹೋಗಬೇಕಂತಿದ್ದ ಊರು ಬಂತು.+ 22  ಸಮುದ್ರದ ಆಕಡೆ ಉಳ್ಕೊಂಡಿದ್ದ ಜನ ಮಾರನೇ ದಿನ ನೋಡಿದಾಗ ತೀರದಲ್ಲಿದ್ದ ಚಿಕ್ಕ ದೋಣಿ ಇರಲಿಲ್ಲ. ಶಿಷ್ಯರು ಮಾತ್ರ ಆ ದೋಣಿ ಹತ್ತಿ ಹೋಗಿದ್ದಾರೆ, ಯೇಸು ಅವ್ರ ಜೊತೆ ಹೋಗಿಲ್ಲ ಅಂತ ಜನ್ರಿಗೆ ಗೊತ್ತಾಯ್ತು. 23  ಅಷ್ಟರಲ್ಲಿ ತಿಬೇರಿಯದಿಂದ ಕೆಲವು ದೋಣಿಗಳು ಯೇಸು ಧನ್ಯವಾದ ಹೇಳಿ ರೊಟ್ಟಿಯ ಅದ್ಭುತ ಮಾಡಿದ್ದ ಜಾಗದ ಹತ್ರ ಬಂದವು. 24  ಆ ದೋಣಿಯಲ್ಲಿ ಯೇಸು ಆಗಲಿ ಶಿಷ್ಯರಾಗಲಿ ಇರಲಿಲ್ಲ. ಆಗ ಜನ ದೋಣಿಗಳನ್ನ ಹತ್ತಿ ಯೇಸುವನ್ನ ಹುಡುಕ್ತಾ ಕಪೆರ್ನೌಮಿಗೆ ಬಂದ್ರು. 25  ಸಮುದ್ರದ ಆಕಡೆ ಅವರು ಯೇಸುವನ್ನ ನೋಡಿದಾಗ “ರಬ್ಬೀ,+ ಇಲ್ಲಿಗೆ ಯಾವಾಗ ಬಂದೆ?” ಅಂತ ಕೇಳಿದ್ರು. 26  ಯೇಸು “ನೀವು ನಾನು ಮಾಡಿದ ಅದ್ಭುತ ನೋಡಿ ನನ್ನನ್ನ ಹುಡುಕ್ತಾ ಇಲ್ಲ, ಹೊಟ್ಟೆ ತುಂಬ ರೊಟ್ಟಿ ತಿಂದಿದ್ದಕ್ಕೇ ಹುಡುಕ್ತಾ ಇದ್ದೀರ.+ 27  ಹಾಳಾಗಿ ಹೋಗೋ ಆಹಾರಕ್ಕಾಗಿ ದುಡಿಬೇಡಿ, ಶಾಶ್ವತ ಜೀವ ಕೊಡೋ ಹಾಳಾಗದ ಆಹಾರಕ್ಕಾಗಿ ದುಡಿರಿ.+ ಮನುಷ್ಯಕುಮಾರ ಅದನ್ನ ನಿಮಗೆ ಕೊಡ್ತಾನೆ. ಯಾಕಂದ್ರೆ ತಂದೆಯಾದ ದೇವರೇ ಆತನಿಗೆ ಅಂಥ ಅಧಿಕಾರ ಕೊಟ್ಟಿದ್ದಾನೆ”*+ ಅಂದನು. 28  ಅದಕ್ಕೆ ಅವರು “ದೇವರಿಗೆ ಇಷ್ಟ ಆಗೋ ತರ ನಾವೇನು ಕೆಲಸ ಮಾಡಬೇಕು?” ಅಂತ ಕೇಳಿದ್ರು. 29  ಅದಕ್ಕೆ ಯೇಸು“ದೇವರಿಗೆ ಇಷ್ಟ ಆಗಬೇಕಂದ್ರೆ ನೀವು ಆತನು ಕಳಿಸಿರೋ ವ್ಯಕ್ತಿಯನ್ನ ನಂಬಬೇಕು”+ ಅಂದನು. 30  ಅವರು “ಹಾಗಾದ್ರೆ ನಾವು ನೋಡಿ ನಂಬೋ ತರ ನೀನು ಯಾವ ಅದ್ಭುತ+ ಮಾಡ್ತಿಯಾ? ನೀನೇನು ಮಾಡ್ತಿಯಾ? 31  ನಮ್ಮ ಪೂರ್ವಜರು ಕಾಡಲ್ಲಿ ದೇವರು ಕೊಟ್ಟ ಮನ್ನಾ ತಿಂದ್ರು.+ ಯಾಕಂದ್ರೆ ‘ಆತನು ಅವ್ರಿಗೆ ತಿನ್ನೋಕೆ ಸ್ವರ್ಗದಿಂದ ರೊಟ್ಟಿ ಕೊಟ್ಟ’+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ” ಅಂದ್ರು. 32  ಆಗ ಯೇಸು “ನಿಜ ಹೇಳ್ತೀನಿ, ಮೋಶೆ ನಿಮಗೆ ಸ್ವರ್ಗದಿಂದ ರೊಟ್ಟಿ ಕೊಡಲಿಲ್ಲ. ನನ್ನ ಅಪ್ಪ ಸ್ವರ್ಗದಿಂದ ನಿಮಗೆ ನಿಜವಾದ ರೊಟ್ಟಿ ಕೊಡ್ತಿದ್ದಾನೆ. 33  ದೇವರು ಕೊಡೋ ಆ ರೊಟ್ಟಿ ಸ್ವರ್ಗದಿಂದ ಬರುತ್ತೆ. ಲೋಕಕ್ಕೆ ಜೀವ ಕೊಡುತ್ತೆ” ಅಂದನು. 34  ಆಗ ಅವರು “ಸ್ವಾಮಿ, ನಮಗೆ ಆ ರೊಟ್ಟಿಯನ್ನ ಯಾವಾಗ್ಲೂ ಕೊಡ್ತಾ ಇರು” ಅಂದ್ರು. 35  ಯೇಸು ಹೀಗಂದನು “ಶಾಶ್ವತ ಜೀವ ಕೊಡೋ ರೊಟ್ಟಿ ನಾನೇ. ನನ್ನ ಹತ್ರ ಬರುವವನಿಗೆ ಹಸಿವೇ ಆಗಲ್ಲ. ನನ್ನ ಮೇಲೆ ನಂಬಿಕೆ ಇಡುವವನಿಗೆ ಯಾವತ್ತೂ ಬಾಯಾರಿಕೆ ಆಗಲ್ಲ.+ 36  ಆದ್ರೆ ನಾನು ಆಗಲೇ ಹೇಳಿದ ಹಾಗೆ, ನಾನು ಮಾಡಿದ ಅದ್ಭುತಗಳನ್ನ ನೀವು ನೋಡಿದ್ರೂ ನನ್ನನ್ನ ನಂಬ್ತಿಲ್ಲ.+ 37  ಯಾರನ್ನೆಲ್ಲ ಅಪ್ಪ ನನಗೆ ಕೊಡ್ತಾನೋ ಅವ್ರೆಲ್ಲ ನನ್ನ ಹತ್ರ ಬರ್ತಾರೆ. ನನ್ನ ಹತ್ರ ಬರೋರನ್ನ ನಾನು ಯಾವತ್ತೂ ದೂರ ಮಾಡಲ್ಲ.+ 38  ಯಾಕಂದ್ರೆ ನಾನು ಸ್ವರ್ಗದಿಂದ+ ನನ್ನ ಇಷ್ಟ ಮಾಡಕ್ಕೆ ಬರಲಿಲ್ಲ, ನನ್ನನ್ನ ಕಳಿಸಿದವನ ಇಷ್ಟ ಮಾಡಕ್ಕೆ ಬಂದೆ.+ 39  ಆತನು ನನಗೆ ಯಾರನ್ನೆಲ್ಲ ಕೊಟ್ಟಿದ್ದಾನೋ ಅವ್ರಲ್ಲಿ ಒಬ್ಬರನ್ನೂ ಕಳ್ಕೊಳ್ಳಬಾರದು ಅನ್ನೋದೇ ನನ್ನ ಅಪ್ಪನ ಆಸೆ. ಕೊನೇ ದಿನದಲ್ಲಿ ನಾನು ಅವ್ರನ್ನ ಬದುಕಿಸಬೇಕು+ ಅನ್ನೋದೇ ಆತನ ಆಸೆ. 40  ಮಗನನ್ನ ಒಪ್ಕೊಂಡು ಆತನಲ್ಲಿ ನಂಬಿಕೆ ಇಡೋ ಪ್ರತಿಯೊಬ್ಬರೂ ಶಾಶ್ವತ ಜೀವ+ ಪಡಿಬೇಕು ಅನ್ನೋದೇ ನನ್ನ ಅಪ್ಪನ ಇಷ್ಟ. ಕೊನೇ ದಿನದಲ್ಲಿ ನಾನು ಅವ್ರನ್ನ ಮತ್ತೆ ಬದುಕಿಸ್ತೀನಿ.”+ 41  “ಸ್ವರ್ಗದಿಂದ ಬಂದಿರೋ ರೊಟ್ಟಿ ನಾನೇ”+ ಅಂತ ಯೇಸು ಹೇಳಿದ್ದರಿಂದ ಯೆಹೂದ್ಯರು ಆತನ ಬಗ್ಗೆ ಗುಸುಗುಸು ಅಂತ ಮಾತಾಡ್ಕೊಳ್ತಾ ಇದ್ರು. 42  “ಇವನು ಯೋಸೇಫನ ಮಗ ಯೇಸು ಅಲ್ವಾ? ಇವನ ಅಪ್ಪಅಮ್ಮ ನಮಗೆ ಪರಿಚಯ ಇರೋರು ತಾನೇ?+ ಮತ್ತೆ ಅದೇಗೆ ‘ನಾನು ಸ್ವರ್ಗದಿಂದ ಬಂದಿದ್ದೀನಿ’ ಅಂತ ಹೇಳ್ತಾನೆ?” ಅಂದ್ರು. 43  ಅದಕ್ಕೆ ಯೇಸು ಹೀಗಂದನು “ಗುಸುಗುಸು ಅಂತ ಮಾತಾಡೋದು ನಿಲ್ಲಿಸಿ. 44  ನನ್ನನ್ನ ಕಳಿಸಿದ ಅಪ್ಪ ಕರೆಯದೆ ಯಾರೂ ನನ್ನ ಹತ್ರ ಬರಲ್ಲ.+ ನನ್ನ ಹತ್ರ ಬರೋರನ್ನ ಕೊನೇ ದಿನದಲ್ಲಿ ಮತ್ತೆ ಬದುಕಿಸ್ತೀನಿ.+ 45  ‘ಯೆಹೋವನೇ* ಅವ್ರಿಗೆಲ್ಲ ಕಲಿಸ್ತಾನೆ’+ ಅಂತ ಪ್ರವಾದಿಗಳು ಬರೆದಿದ್ದಾರೆ. ಅಪ್ಪ ಹೇಳೋದನ್ನ ಕೇಳಿ, ಆತನು ಕಲಿಸೋದನ್ನ ಒಪ್ಕೊಳ್ಳೋ ಪ್ರತಿಯೊಬ್ಬರು ನನ್ನ ಹತ್ರ ಬರ್ತಾರೆ. 46  ದೇವರಿಂದ ಬಂದ ನನ್ನನ್ನ ಬಿಟ್ಟು ಬೇರೆ ಯಾವ ಮನುಷ್ಯ ಕೂಡ ನನ್ನ ಅಪ್ಪನನ್ನ ನೋಡಿಲ್ಲ.+ ನಾನು ಮಾತ್ರ ನೋಡಿದ್ದೀನಿ.+ 47  ನಿಜ ಹೇಳ್ತೀನಿ, ನಂಬುವವರಿಗೆ ಶಾಶ್ವತ ಜೀವ ಸಿಗುತ್ತೆ.+ 48  ಶಾಶ್ವತ ಜೀವ ಕೊಡೋ ರೊಟ್ಟಿ ನಾನೇ.+ 49  ಪೂರ್ವಜರು ಅರಣ್ಯದಲ್ಲಿ ಮನ್ನಾ ತಿಂದ್ರೂ ಸತ್ತುಹೋದ್ರು.+ 50  ಆದ್ರೆ ಸ್ವರ್ಗದಿಂದ ಬಂದಿರೋ ಈ ರೊಟ್ಟಿಯನ್ನ ತಿನ್ನುವವರಿಗೆ ಸಾವೇ ಇರಲ್ಲ. 51  ಸ್ವರ್ಗದಿಂದ ಬಂದಿರೋ ಜೀವ ಕೊಡೋ ರೊಟ್ಟಿ ನಾನೇ. ಆ ರೊಟ್ಟಿ ತಿನ್ನುವವರು ಸದಾಕಾಲ ಬದುಕ್ತಾರೆ. ನಾನು ಕೊಡೋ ರೊಟ್ಟಿ ನನ್ನ ದೇಹಾನೇ. ಅದ್ರಿಂದ ಜನ್ರಿಗೆ ಶಾಶ್ವತ ಜೀವ ಸಿಗುತ್ತೆ.”+ 52  ಆಗ ಯೆಹೂದ್ಯರು ಒಬ್ಬರಿಗೊಬ್ರು “ಇವನು ತನ್ನ ದೇಹವನ್ನ ನಮಗೆ ತಿನ್ನೋಕೆ ಹೇಗೆ ಕೊಡೋಕಾಗುತ್ತೆ?” ಅಂತ ಜಗಳ ಮಾಡೋಕೆ ಶುರುಮಾಡಿದ್ರು. 53  ಅದಕ್ಕೆ ಯೇಸು “ನಿಜ ಹೇಳ್ತೀನಿ, ನೀವು ಮನುಷ್ಯಕುಮಾರನ ಮಾಂಸ ತಿಂದು, ಆತನ ರಕ್ತ ಕುಡಿದ್ರೆ ಮಾತ್ರ ನಿಮ್ಮಲ್ಲಿ ಜೀವ ಇರುತ್ತೆ.+ 54  ನನ್ನ ಮಾಂಸ ತಿಂದು ನನ್ನ ರಕ್ತ ಕುಡಿಯೋ ಪ್ರತಿಯೊಬ್ಬನಿಗೂ ಶಾಶ್ವತ ಜೀವ ಸಿಗುತ್ತೆ. ಕೊನೇ ದಿನದಲ್ಲಿ ಅವ್ರನ್ನೆಲ್ಲ ಮತ್ತೆ ಬದುಕಿಸ್ತೀನಿ.+ 55  ಯಾಕಂದ್ರೆ ನೀವು ತಿನ್ನೋ ಕುಡಿಯೋ ವಸ್ತುಗಳಿಗಿಂತ ನನ್ನ ದೇಹ, ರಕ್ತ ನಿಮಗೆ ತುಂಬ ಪ್ರಯೋಜನ ತರುತ್ತೆ. 56  ನನ್ನ ಮಾಂಸ ತಿಂದು ನನ್ನ ರಕ್ತ ಕುಡಿಯೋ ವ್ಯಕ್ತಿ ನನ್ನ ಹತ್ರ ಆಪ್ತನಾಗಿ ಇರ್ತಾನೆ, ನಾನೂ ಅವನ ಹತ್ರ ಆಪ್ತವಾಗಿ ಇರ್ತಿನಿ.+ 57  ಜೀವ ಇರೋ ನನ್ನ ಅಪ್ಪ ನನ್ನನ್ನ ಕಳಿಸಿದ್ದಾನೆ. ಅಪ್ಪನಿಂದಾಗಿ ನಾನು ಜೀವಿಸ್ತಾ ಇದ್ದೀನಿ. ಅದೇ ರೀತಿ ನನ್ನನ್ನ ತಿನ್ನುವವರು ಸಹ ನನ್ನಿಂದಾಗಿ ಜೀವಿಸ್ತಾರೆ.+ 58  ಸ್ವರ್ಗದಿಂದ ಬಂದಿರೋ ರೊಟ್ಟಿ ಹೀಗಿರಬೇಕು. ಇದು ಪೂರ್ವಜರು ತಿಂದ ರೊಟ್ಟಿ ತರ ಅಲ್ಲ. ಇದನ್ನ ತಿಂದ್ರೆ ಸಾಯಲ್ಲ, ಶಾಶ್ವತವಾಗಿ ಜೀವಿಸ್ತಾರೆ”+ ಅಂದನು. 59  ಯೇಸು ಕಪೆರ್ನೌಮಿನ ಸಭಾಮಂದಿರದಲ್ಲಿ ಕಲಿಸ್ತಿದ್ದಾಗ ಇದನ್ನೆಲ್ಲ ಹೇಳಿದನು. 60  ಆ ಮಾತುಗಳನ್ನ ಕೇಳಿದಾಗ ಶಿಷ್ಯರಲ್ಲಿ ಅನೇಕರು “ಏನು ಹೇಳ್ತಿದ್ದಾನೆ ಇವನು! ಇಂಥ ಮಾತುಗಳನ್ನ ಯಾರು ಕೇಳಿಸ್ಕೊಳ್ತಾರೆ?” ಅಂದ್ರು. 61  ಶಿಷ್ಯರು ಗುಸುಗುಸು ಅಂತಿದ್ದಾರೆ ಅಂತ ಯೇಸುಗೆ ಗೊತ್ತಾಗಿ “ನಾನು ಹೇಳಿದ್ದನ್ನ ಕೇಳಿಸ್ಕೊಂಡು ಕಷ್ಟ ಆಗ್ತಿದ್ಯಾ? 62  ಹಾಗಾದ್ರೆ ಮನುಷ್ಯಕುಮಾರ ಮೇಲಕ್ಕೆ ಹೋಗೋದನ್ನ ನೋಡಿದ್ರೆ ಏನು ಹೇಳ್ತೀರಾ?+ 63  ಜೀವ ಕೊಡೋದು ಪವಿತ್ರಶಕ್ತಿನೇ.+ ದೇಹ-ಮಾಂಸದಿಂದ ಏನೂ ಪ್ರಯೋಜನ ಇಲ್ಲ. ನಾನು ಪವಿತ್ರಶಕ್ತಿಯ ಸಹಾಯದಿಂದಾನೇ ಆ ಮಾತು ಹೇಳಿದೆ. ಆ ಮಾತುಗಳು ನಿಮಗೆ ಜೀವ ಕೊಡುತ್ತೆ.+ 64  ಆದ್ರೆ ನಿಮ್ಮಲ್ಲಿ ಸ್ವಲ್ಪ ಜನ ನಂಬ್ತಿಲ್ಲ” ಅಂದನು. ಯಾಕಂದ್ರೆ ಯಾರು ತನ್ನನ್ನ ನಂಬ್ತಾರೆ, ಯಾರು ತನಗೆ ನಂಬಿಕೆದ್ರೋಹ ಮಾಡ್ತಾರೆ ಅಂತ ಯೇಸುಗೆ ಮುಂಚೆನೇ ಗೊತ್ತಿತ್ತು.+ 65  ಹಾಗಾಗಿ “ನನ್ನ ಅಪ್ಪ ಅನುಮತಿಸದೆ ಇದ್ರೆ ಯಾರಿಗೂ ನನ್ನ ಹತ್ರ ಬರೋಕಾಗಲ್ಲ ಅಂತ ಅದಕ್ಕೇ ಹೇಳ್ದೆ” ಅಂದನು.+ 66  ಇದ್ರಿಂದಾಗಿ ತುಂಬ ಶಿಷ್ಯರು ಆತನನ್ನ ಬಿಟ್ಟು ಮುಂಚೆ ಮಾಡ್ತಿದ್ದ ಕೆಲಸಕ್ಕೆ ವಾಪಸ್‌ ಹೋದ್ರು.+ 67  ಆಗ ಯೇಸು 12 ಅಪೊಸ್ತಲರಿಗೆ “ನೀವೂ ನನ್ನನ್ನ ಬಿಟ್ಟುಹೋಗ್ತೀರಾ?” ಅಂತ ಕೇಳಿದನು. 68  ಅದಕ್ಕೆ ಸೀಮೋನ ಪೇತ್ರ “ಸ್ವಾಮಿ, ನಿನ್ನನ್ನ ಬಿಟ್ರೆ ನಮಗೆ ಯಾರಿದ್ದಾರೆ?+ ಶಾಶ್ವತ ಜೀವ ಕೊಡೋ ಮಾತು ನಿನ್ನ ಹತ್ರ ಇದೆ.+ 69  ನಮಗೆ ಪೂರ್ತಿ ನಂಬಿಕೆ ಇದೆ. ನೀನೇ ದೇವರ ಪವಿತ್ರ ಮಗ ಅಂತ ನಮಗೆ ಗೊತ್ತು”+ ಅಂದ. 70  ಆಗ ಯೇಸು “ನಿಮ್‌ 12 ಜನ್ರನ್ನೂ ಆರಿಸ್ಕೊಂಡಿರೋದು ನಾನೇ ತಾನೇ?+ ಆದ್ರೂ ನಿಮ್ಮಲ್ಲಿ ನನ್ನ ಹೆಸ್ರನ್ನ ಹಾಳುಮಾಡೋನು* ಒಬ್ಬನಿದ್ದಾನೆ”+ ಅಂದನು. 71  ಯೇಸು, ಸೀಮೋನನ ಮಗನಾದ ಇಸ್ಕರಿಯೂತ ಯೂದನ ಬಗ್ಗೆ ಮಾತಾಡ್ತಿದ್ದನು. ಯಾಕಂದ್ರೆ ಯೂದ 12 ಶಿಷ್ಯರಲ್ಲಿ ಒಬ್ಬನಾಗಿದ್ರೂ ಯೇಸುಗೆ ದ್ರೋಹ ಮಾಡ್ತಾನೆ.+

ಪಾದಟಿಪ್ಪಣಿ

ಅಕ್ಷ. “ತನ್ನ ಒಪ್ಪಿಗೆಯ ಮುದ್ರೆ ಒತ್ತಿದ್ದಾನೆ.”
ಅಥವಾ “ಹಾಳುಮಾಡೋ ಸೈತಾನ.”