ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರತಿಭಟನೆಯಿಂದ ಪರಿಹಾರ ಸಿಗುತ್ತಾ?

ಪ್ರತಿಭಟನೆಯಿಂದ ಪರಿಹಾರ ಸಿಗುತ್ತಾ?

ಮುಖಪುಟ ಲೇಖನ

ಪ್ರತಿಭಟನೆಯಿಂದ ಪರಿಹಾರ ಸಿಗುತ್ತಾ?

ಈ ಪತ್ರಿಕೆಯ ಪ್ರಕಾಶಕರಾದ ಯೆಹೋವನ ಸಾಕ್ಷಿಗಳು ಯಾವ ರಾಜಕೀಯ ಪಕ್ಷವನ್ನೂ ಬೆಂಬಲಿಸುವುದಿಲ್ಲ. (ಯೋಹಾನ 17:16; 18:36) ಈ ಲೇಖನದಲ್ಲಿ ಆಂತರಿಕ ಗಲಭೆಯ ಉದಾಹರಣೆಗಳಿವೆ. ಇದರರ್ಥ ಒಂದು ದೇಶಕ್ಕಿಂತ ಇನ್ನೊಂದು ದೇಶವೇ ಮೇಲು ಎಂದು ಈ ಪತ್ರಿಕೆ ಹೇಳುತ್ತಿಲ್ಲ ಅಥವಾ ಯಾವುದೇ ರಾಜಕೀಯ ವಿಷಯಗಳಿಗೆ ಬೆಂಬಲ ನೀಡುತ್ತಿಲ್ಲ.

ಡಿಸೆಂಬರ್‌ 17, 2010. 26 ವರ್ಷದ ಮೊಹ್ಮದ್‌ ಬುವಾಜಿಜಿಯ ಸಹನೆಯ ಕಟ್ಟೆ ಒಡೆಯಿತು. ಟುನಿಸಿಯ ದೇಶದಲ್ಲಿ ರಸ್ತೆ ಬದಿಯಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದ. ಸರಿಯಾದ ಕೆಲಸ ಸಿಗದ ಜೀವನ, ಭ್ರಷ್ಟ ಅಧಿಕಾರಿಗಳ ಲಂಚದ ಕಡೆಗಿನ ವ್ಯಾಮೋಹದಿಂದಾಗಿ ಜಿಗುಪ್ಸೆಗೊಂಡಿದ್ದ. ಅಂದೊಂದು ದಿನ ಬೆಳಗ್ಗೆ ಪೊಲೀಸ್‌ ಅಧಿಕಾರಿಗಳು ಬಂದು ಅವನ ಹಣ್ಣಿನ ಸರಬರಾಜು ವಹಿವಾಟನ್ನು ಜಪ್ತಿ ಮಾಡಿದರು. ವ್ಯಾಪಾರಕ್ಕೆ ಬಳಸುತ್ತಿದ್ದ ತಕ್ಕಡಿಯನ್ನೂ ಕಸಿದುಕೊಳ್ಳಲು ಬಂದರು. ಬುವಾಜಿಜಿಗೆ ಇದನ್ನು ಸಹಿಸಲಾಗಲಿಲ್ಲ. ತಡೆದ. ಇದನ್ನೆಲ್ಲ ನೋಡುತ್ತಿದ್ದ ಕೆಲವರು ಹೇಳುವುದು ಒಬ್ಬಾಕೆ ಮಹಿಳಾ ಅಧಿಕಾರಿ ಅವನ ಕೆನ್ನೆಗೆ ಬಾರಿಸಿದಳು ಎಂದು.

ಅವಮಾನ ಕೋಪದಿಂದ ಬುವಾಜಿಜಿ ಹತ್ತಿರದ ಸರ್ಕಾರಿ ಕಛೇರಿಯಲ್ಲಿ ದೂರು ದಾಖಲಿಸಲು ಹೋದ. ಆದರೆ ಅಲ್ಲಿದ್ದವರು ಇವನ ಮಾತಿಗೆ ಉಪ್ಪೂ ಹಾಕಲಿಲ್ಲ. ಇದರಿಂದ ರೊಚ್ಚಿಗೆದ್ದ ಬುವಾಜಿಜಿ ಆ ಕಟ್ಟಡದ ಮುಂದೆ ಬಂದು “ನನ್ನ ಕುಟುಂಬವನ್ನು ನಾನು ಹೇಗೆ ನೋಡಿಕೊಳ್ಳಲಿ?” ಎಂದು ಕಿರುಚಿದ. ಕೆಲವೇ ನಿಮಿಷಗಳಲ್ಲಿ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಾಕಿಕೊಂಡ. ಅವನ ದೇಹವಿಡೀ ಸುಟ್ಟು ಬೆಂದುಹೋಗಿತ್ತು. ಮೂರು ವಾರಗಳ ನಂತರ ಅಸುನೀಗಿದ.

ಬುವಾಜಿಜಿಯ ಮನಕಲಕುವ ಕೃತ್ಯ ಟುನಿಸಿಯದಲ್ಲಿ ವ್ಯಾಪಕ ಪ್ರಭಾವಬೀರಿತು. ಅನೇಕರು ಹೇಳುವಂತೆ ಇದು ದೇಶದ ಆಡಳಿತಕ್ಕೆ ಹೊಡೆತ ಬಿದ್ದು ಪ್ರತಿಭಟನೆಗೆ ದಾರಿ ಮಾಡಿಕೊಟ್ಟಿತು ಮತ್ತು ಅನೇಕ ಅರಬ್‌ ದೇಶಗಳ ವರೆಗೂ ಹರಡಿತು. ಯುರೋಪಿನ ಸಂಸತ್ತು ಬುವಾಜಿಜಿಯನ್ನು ಸೇರಿಸಿ ಇನ್ನೂ ನಾಲ್ವರಿಗೆ ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯದ ಸಂಕೇತವಾಗಿ ಪ್ರತಿವರ್ಷ ನೀಡುವ ಸಾರ್ಕೊವ್‌ ಪ್ರಶಸ್ತಿ ನೀಡಿ ಗೌರವಿಸಿತು. ಲಂಡನ್‌ ಟೈಮ್ಸ್‌ ಪತ್ರಿಕೆ ಬುವಾಜಿಜಿಗೆ 2011ರ ವರ್ಷದ ಮನುಷ್ಯ ಎಂದು ಬಿರುದು ನೀಡಿತು.

ಈ ಉದಾಹರಣೆ ತೋರಿಸುವಂತೆ ಪ್ರತಿಭಟನೆಗಳಿಗೆ ತುಂಬ ಶಕ್ತಿಯಿದೆ. ಆದರೆ ಇತ್ತೀಚಿಗೆ ಎದ್ದಿರುವ ಪ್ರತಿಭಟನೆಯ ಅಲೆಗೆ ಕಾರಣವಾದರೂ ಏನು? ಇದಕ್ಕೆ ಬದಲಿ ವ್ಯವಸ್ಥೆ ಏನಾದರೂ ಇದೆಯಾ?

ದಿಢೀರನೆ ಯಾಕಿಷ್ಟು ಪ್ರತಿಭಟನೆ?

ಪ್ರತಿಭಟನೆಯ ಕಿಚ್ಚಿಗೆ ಕಾರಣಗಳು:

ಸಾಮಾಜಿಕ ವ್ಯವಸ್ಥೆ ತರುವ ಅತೃಪ್ತಿ. ಸರ್ಕಾರ ಮತ್ತು ಆರ್ಥಿಕ ವ್ಯವಸ್ಥೆ ಎಲ್ಲಿಯ ವರೆಗೆ ನ್ಯಾಯವಾಗಿ ಜನರ ಅಗತ್ಯಗಳನ್ನು ಪೂರೈಸುತ್ತೊ ಅಲ್ಲಿಯ ವರೆಗೂ ಜನರು ಸುಮ್ಮನಿರುತ್ತಾರೆ. ಏನಾದರೂ ಸಮಸ್ಯೆಯಾದರೆ ತಮ್ಮೊಳಗೇ ಅದನ್ನು ಹೇಳಿಕೊಂಡು ಪರಿಹಾರ ಹುಡುಕಲು ಪ್ರಯತ್ನಿಸುತ್ತಾರೆ. ಎಲ್ಲಾದರೂ ಅಧಿಕಾರ ನಿರ್ವಹಣೆಯಲ್ಲಿ ಭ್ರಷ್ಟತೆ, ಅನ್ಯಾಯ, ಮುಖ ನೋಡಿ ಮಣೆ ಹಾಕುವುದನ್ನು ಮಾಡಿದರೆ ಅಲ್ಲೇ ಹತ್ತೋದು ಪ್ರತಿಭಟನೆಯ ಕಿಚ್ಚು.

ಕಿಡಿ. ಕೆಲವು ಸಲ ಬಂದದ್ದನ್ನು ಅನುಭವಿಸೋಣ ಎನ್ನದೆ ಸಮಾಜದ ಒಳಿತಿಗೆ ಏನಾದರೂ ಮಾಡೋ ನಂಬಿಕೆಯಿಂದ ಕೆಲವರು ತಮ್ಮ ಕೆಲಸಗಳಿಂದ ನಿವೃತ್ತಿ ಹೊಂದುತ್ತಾರೆ. ಅದಕ್ಕೆ ತಕ್ಕಂತೆ, ಏನಾದರೊಂದು ನಡೆದರೆ ಸಾಕು. ಅದರಿಂದಲೇ ಪ್ರತಿಭಟನೆಗೆ ದಾರಿಯಾಗುತ್ತೆ. ಮೊಹ್ಮದ್‌ ಬುವಾಜಿಜಿ ವಿಷಯದಲ್ಲಿ ಸಹ ಹೀಗೆ ಆಗಿದ್ದು. ಅವನು ಮಾಡಿದ ಒಂದು ಕೆಲಸ ಇಡೀ ಟುನಿಸಿಯ ದೇಶಕ್ಕೇ ಚಳುವಳಿಯ ಕಿಡಿ ಹತ್ತಿಸಿತು. ಭಾರತದಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ನಿಂತು ಬುಗಿಲೆಬ್ಬಿಸಿದ ಉಪವಾಸ ಸತ್ಯಾಗ್ರಹದ ಆಂದೋಲನಕ್ಕೆ 450 ಊರು ಮತ್ತು ಪಟ್ಟಣಗಳ ಬೆಂಬಲ ಸಿಕ್ಕಿತು.

‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡುವನು’ ಎಂದು ಬೈಬಲ್‌ ಎಷ್ಟೋ ವರ್ಷಗಳ ಮುಂಚೆಯೇ ಹೇಳಿದೆ. (ಪ್ರಸಂಗಿ 8:9) ಅನ್ಯಾಯ ಮತ್ತು ಭ್ರಷ್ಟಾಚಾರ ಈಗ ಹೆಚ್ಚಾಗಿದೆ. ಮುಂಚೆಗಿಂತಲೂ ಈಗ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ ಜನರ ಬೇಡಿಕೆಗಳನ್ನು ಪೂರೈಸಲು ಹೇಗೆ ವಿಫಲವಾಗಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಸ್ಮಾರ್ಟ್‌ ಫೋನ್‌, ಅಂತರ್ಜಾಲ ಮತ್ತು ದಿನದ 24ಗಂಟೆಯೂ ಪ್ರಸಾರವಾಗುವ ವಾರ್ತೆಗಳಿಂದ ಸಮಾಜದಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ವಿಷಯಗಳು ಬಟ್ಟಬಯಲಾಗುತ್ತಿದೆ. ದೂರದೂರದ ಸ್ಥಳದಲ್ಲೂ ಇದು ಲಭ್ಯವಿರುವುದರಿಂದ ಪ್ರತಿಕ್ರಿಯೆಯ ಕಿಡಿ ಹಬ್ಬಲು ಹೆಚ್ಚು ಸಮಯ ಬೇಕಾಗಿಲ್ಲ.

ಪ್ರತಿಭಟನೆಗಳು ಸಾಧಿಸಿರುವುದಾದರೂ ಏನು?

ಆಂತರಿಕ ಗಲಭೆಯ ಪ್ರತಿಪಾದಕರು ಆಂದೋಲನಗಳಿಂದ ಇವನ್ನು ಸಾಧಿಸಲಾಗಿದೆ ಎಂದು ಹೇಳುತ್ತಾರೆ:

ಬಡವರಿಗೆ ಪರಿಹಾರ. 1931ರಲ್ಲಿ ಅಮೆರಿಕದ ಶಿಕಾಗೊ ನಗರದಲ್ಲಿ 7,50,000 ನಿರುದ್ಯೋಗಿಗಳಿದ್ದರು. ಅವರಿದ್ದ ಬಾಡಿಗೆ ಮನೆಗಳನ್ನು ಖಾಲಿಮಾಡಬೇಕೆಂದು ಮಾಲೀಕರು ನೋಟೀಸು ಕಳಿಸಿದಾಗ ಅನೇಕರು ಮನೆ ಖಾಲಿ ಮಾಡಲಿಲ್ಲ. ಆದ್ದರಿಂದ ಮಾಲೀಕರೆಲ್ಲ ಸೇರಿ ಪೊಲೀಸರ ಹತ್ತಿರ ಹೋಗಿ ಅವರನ್ನು ಮನೆಗಳಿಂದ ಓಡಿಸುವಂತೆ ಕೋರಿದರು. 1931 ಆಗಸ್ಟ್‌ ತಿಂಗಳಲ್ಲಿ ಹೆಚ್ಚುಕಡಿಮೆ 60,000 ಜನ ಈ ಒಕ್ಕಲೆಬ್ಬಿಸುವ ಕ್ರಮದ ವಿರುದ್ಧ ಪ್ರತಿಭಟನೆಗೆ ಇಳಿದರು. ಪೊಲೀಸ್‌ರು ಇವರ ಮೇಲೆ ದಾಳಿ ಮಾಡಿದರು. ಮೂವರ ಜೀವ ಹೋಯಿತು. ಈ ಪ್ರತಿಭಟನೆಯಿಂದಾಗಿ ನಿರುದ್ಯೋಗಿಗಳಿಗಾಗಿ ಸಲಹಾ ಕೇಂದ್ರಗಳು ಮತ್ತು ಕಾರ್ಮಿಕ ಸಂಘಗಳು ಶಿಕಾಗೊವಿನಲ್ಲಿ ಹಾಗೂ ಅಮೆರಿಕದ ಹಲವೆಡೆ ಶುರುವಾದವು.

ಬಯಲಾದ ಅನ್ಯಾಯಗಳು. ರೋಸಾ ಪಾರ್ಕ್ಸ್‌ ಎಂಬವರು ಕಪ್ಪುವರ್ಣದ ಅಮೆರಿಕದ ಪ್ರಜೆ. ಸಮಾಜ ಸೇವಕಿ. ಬಿಳಿವರ್ಣದ ಅಮೆರಿಕದ ಪ್ರಜೆಗೆ ಬಸ್‌ನಲ್ಲಿ ಸೀಟು ಬಿಟ್ಟುಕೊಡಲಿಲ್ಲ ಎಂದು ಇವರನ್ನು ಪೊಲೀಸರು ಬಂಧಿಸಿದರು. ಇದರಿಂದಾಗಿ ಜನ ಆ ಬಸ್‌ ಕಂಪನಿ ವಿರುದ್ಧ ಮುಷ್ಕರ ಆರಂಭಿಸಿದರು. ಡಿಸೆಂಬರ್‌ 5, 1955ರಲ್ಲಿ ಶುರುವಾದ ಮುಷ್ಕರ ಮುಗಿದದ್ದು ಡಿಸೆಂಬರ್‌ 20, 1956ರಲ್ಲಿ.

ಕಾಮಗಾರಿಗೆ ತಡೆ. ಡಿಸೆಂಬರ್‌ 2011ರಂದು ಹಾಂಗ್‌ಕಾಂಗ್‌ನಲ್ಲಿ ಕಲ್ಲಿದ್ದಲು ಶಕ್ತಿ ಸ್ಥಾವರದ ಕಾಮಗಾರಿಯನ್ನು ತಡೆಯಲಾಯಿತು. ಸ್ಥಾವರದಿಂದ ಮಾಲಿನ್ಯ ಹೆಚ್ಚುತ್ತದೆಂದು ಸಾವಿರಾರು ಜನ ಪ್ರತಿಭಟಿಸಿದ್ದರಿಂದ ಈ ನಿರ್ಣಯ ಕೈಗೊಳ್ಳಲಾಯಿತು.

ಪ್ರತಿಭಟನೆ ಮಾಡಿದ ಮಾತ್ರಕ್ಕೆ ಬೇಡಿಕೆಗಳ ಪೂರೈಕೆ ಆಗುತ್ತದೆಂದಲ್ಲ. ಅಧಿಕಾರಿಗಳು ಚಳುವಳಿ ಮಾಡುತ್ತಿರುವವರ ಬೇಡಿಕೆಯನ್ನು ಪೂರೈಸುವ ಬದಲು ಅವರನ್ನು ಶಿಕ್ಷಿಸಬೇಕಾಗಿ ಬರಬಹುದು. ಇತ್ತೀಚಿಗೆ ಒಂದು ದೇಶದ ಪ್ರಧಾನಿಯೊಬ್ಬರು ಅವರ ದೇಶದಲ್ಲಾದ ಪ್ರತಿಭಟನೆ ಕುರಿತಂತೆ ಹೇಳಿದ್ದು: “ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.” ಆ ಆಂದೋಲನದಲ್ಲಿ ಸಾವಿರಾರು ಜನ ಜೀವ ಕಳೆದುಕೊಂಡರು.

ಆಂದೋಲನದಿಂದ ತಮಗೆ ಬೇಕಾದದ್ದನ್ನು ಪಡೆದರೂ ಅದರಿಂದ ಹೊಸ ಸಮಸ್ಯೆ ತಲೆದೋರುತ್ತದೆ. ಆಫ್ರಿಕಾದ ದೇಶವೊಂದರ ಅಧಿಕಾರಿಯನ್ನು ಪದಚ್ಯುತಿಗೊಳಿಸಲು ಸಹಾಯಮಾಡಿದ ವ್ಯಕ್ತಿಯೊಬ್ಬ ಟೈಮ್ಸ್‌ ಪತ್ರಿಕೆಗೆ ಹೇಳಿದ್ದು: “ಎಲ್ಲವೂ ಚೆನ್ನಾಗೇ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಗಲಭೆ ಎದ್ದಿತು.”

ಪರಿಹಾರ ಏನಾದರೂ ಇದೆಯಾ?

ಜನರನ್ನು ಸರಿಯಾಗಿ ನೋಡಿಕೊಳ್ಳದ ಸಮಾಜದ ವಿರುದ್ಧ ದನಿ ಎತ್ತಲೇಬೇಕು ಎನ್ನುವುದೇ ಜನಪ್ರಿಯರ ಅಭಿಪ್ರಾಯ. ಚೆಕ್‌ ದೇಶದ ರಾಷ್ಟ್ರಪತಿಯಾಗಿದ್ದ ವಾಕ್ಲವ್‌ ಹಾವೆಲ್‌ ಮಾನವ ಹಕ್ಕುಗಳ ಪರ ಹೋರಾಟ ನಡೆಸಿ ಒಂದು ವರ್ಷ ಜೈಲ್‌ನಲ್ಲಿದ್ದರು. 1985ರಲ್ಲಿ ಅವರು ಬರೆದದ್ದು: “ಸರ್ಕಾರದ ವ್ಯವಸ್ಥೆಯ ವಿರುದ್ಧ ದನಿ ಎತ್ತುವವರು ಏನನ್ನೂ ತ್ಯಾಗ ಮಾಡಲು ಸಿದ್ಧರಿರಬೇಕು. ಅದು ಅವರ ಜೀವವಾದರೂ ಸರಿಯೇ. ಸತ್ಯವನ್ನು ರುಜುಮಾಡಬೇಕಾದರೆ ಇಂಥ ಹೆಜ್ಜೆ ಇಡಲೇಬೇಕು.”

ಹಾವೆಲ್‌ರ ಮಾತು ಮೊಹ್ಮದ್‌ ಬುವಾಜಿಜಿಯ ಕೃತ್ಯದ ಕಡೆಗೆ ಮತ್ತೊಮ್ಮೆ ಬೆರಳು ತೋರಿಸುತ್ತದೆ. ಏಷ್ಯಾದ ದೇಶವೊಂದರಲ್ಲಿ ಇತ್ತೀಚಿಗೆ ಡಜನ್‌ಗಟ್ಟಲೆ ಜನರು ಬೆಂಕಿ ಹಚ್ಚಿಕೊಂಡು ಪ್ರತಿಭಟಿಸಿದರು. ರಾಜಕೀಯ ಮತ್ತು ಧರ್ಮದ ದಬ್ಬಾಳಿಕೆಯನ್ನು ದ್ವೇಷಿಸಿ ಹೀಗೆ ಮಾಡಿದರು. ಇಂಥ ಪ್ರತಿಭಟನೆಗಳ ಹಿಂದಿರುವ ಹೇತುವಿನ ಬಗ್ಗೆ ಒಬ್ಬ ವ್ಯಕ್ತಿ ನ್ಯೂಸ್‌ವೀಕ್‌ ಪತ್ರಿಕೆಗೆ ಹೀಗೆ ಹೇಳಿದನು: “ನಮ್ಮ ಹತ್ತಿರ ಗನ್‌ ಇಲ್ಲ, ಅದೇ ಸಮಯದಲ್ಲಿ ಜನರಿಗೆ ಹಾನಿ ಮಾಡಲೂ ನಮಗಿಷ್ಟ ಇಲ್ಲ. ಹೀಗಿದ್ದ ಮೇಲೆ ಜನ ಬೇರೆ ಏನು ತಾನೆ ಮಾಡಲು ಸಾಧ್ಯ?”

ವಿಫಲಗೊಳ್ಳುತ್ತಿರುವ ಆರ್ಥಿಕ-ರಾಜಕೀಯ ವ್ಯವಸ್ಥೆ, ಅನ್ಯಾಯ, ಭ್ರಷ್ಟಾಚಾರ, ದಬ್ಬಾಳಿಕೆ ಇವಕ್ಕೆಲ್ಲ ಪರಿಹಾರ ಇದೆ ಅಂತ ಬೈಬಲ್‌ ಹೇಳುತ್ತದೆ. ಇವನ್ನೆಲ್ಲ ಕಿತ್ತು ಹಾಕಿ ದೇವರು ಇವುಗಳ ಜಾಗದಲ್ಲಿ ತನ್ನ ಸ್ವರ್ಗೀಯ ಆಡಳಿತವನ್ನು ಸ್ಥಾಪಿಸುತ್ತಾನೆ. ಆಡಳಿತ ಮಾಡುವ ರಾಜನ ಬಗ್ಗೆ ಇರುವ ಭವಿಷ್ಯವಾಣಿ ಹೀಗಿದೆ: “ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು . . . ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು.”—ಕೀರ್ತನೆ 72:12, 14.

ಲೋಕದಲ್ಲಿ ಶಾಂತಿ ಸ್ಥಾಪಿಸಬೇಕಾದರೆ ಅದು ದೇವರ ಆಡಳಿತದಿಂದ ಮಾತ್ರ ಸಾಧ್ಯ ಎಂದು ಯೆಹೋವನ ಸಾಕ್ಷಿಗಳು ನಂಬಿದ್ದಾರೆ. (ಮತ್ತಾಯ 6:9, 10) ಆದ್ದರಿಂದ ಅವರು ಯಾವುದೇ ಪ್ರತಿಭಟನೆಗೆ ಕೈ ಜೋಡಿಸುವುದಿಲ್ಲ. ಇಂದು ಪ್ರತಿಭಟನೆಗೆ ಕಾರಣವಾಗಿರುವಂಥ ವಿಷಯಗಳನ್ನು ದೇವರ ಆಡಳಿತ ನಿಜವಾಗಲೂ ತೆಗೆದು ಹಾಕುತ್ತಾ? ಹೌದು. ಆದ್ದರಿಂದಲೇ ಅನೇಕರು ಅದನ್ನು ನಂಬಿದ್ದಾರೆ. ನಿಮ್ಮ ಬಗ್ಗೆ ಏನು? ◼ (g13-E 07)

[ಪುಟ 6ರಲ್ಲಿರುವ ಚಿತ್ರ]

[ಪುಟ 7ರಲ್ಲಿರುವ ಚಿತ್ರ]

ಪ್ರತಿಭಟನೆಗೆ ಇಳಿದ ಕೆಲವರು ತಮ್ಮ ಗುರಿಯನ್ನು ಸ್ವಲ್ಪಮಟ್ಟಿಗೆ ಮುಟ್ಟುವುದಾದರೂ

ದೇವರ ಆಡಳಿತ ಒಂದೇ ಎಲ್ಲಾ ಸಮಸ್ಯೆಗೂ ಶಾಶ್ವತ ಪರಿಹಾರ

[ಕೃಪೆ]

© Bettmann/CORBIS