ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೂತ್ರಪಿಂಡ ತಜ್ಞೆ ತಮ್ಮ ನಂಬಿಕೆ ಬಗ್ಗೆ ಮಾತಾಡುತ್ತಿದ್ದಾರೆ

ಮೂತ್ರಪಿಂಡ ತಜ್ಞೆ ತಮ್ಮ ನಂಬಿಕೆ ಬಗ್ಗೆ ಮಾತಾಡುತ್ತಿದ್ದಾರೆ

ಸಂದರ್ಶನ

ಸೆಲೀನ್‌ ಗ್ರಾನೋಲೆರಾಸ್‌

ಮೂತ್ರಪಿಂಡ ತಜ್ಞೆ ತಮ್ಮ ನಂಬಿಕೆ ಬಗ್ಗೆ ಮಾತಾಡುತ್ತಾರೆ

ಸೆಲೀನ್‌ ಗ್ರಾನೋಲೆರಾಸ್‌ ಫ್ರಾನ್ಸ್‌ನಲ್ಲಿ ವೈದ್ಯೆ. ಮೂತ್ರಪಿಂಡ ರೋಗ ತಜ್ಞೆ. ನಮ್ಮ ಮೇಲೆ ಕಾಳಜಿ ಇರುವ ದೇವರಿದ್ದಾನೆ ಅಂತ ಅವರಿಗೆ ನಂಬಿಕೆ ಬಂದಿದ್ದು ವೈದ್ಯೆಯಾಗಿ 20 ವರ್ಷಗಳು ಸಂದಮೇಲೆ. ಅವರ ಕೆಲಸ ಮತ್ತು ನಂಬಿಕೆ ಬಗ್ಗೆ ಎಚ್ಚರ! ಪತ್ರಿಕೆ ಕೇಳಿದಾಗ ಮಾತಾಡಿದ್ದು ಹೀಗೆ. . .

ನಿಮ್ಮ ಬಾಲ್ಯದ ಬಗ್ಗೆ ಸ್ವಲ್ಪ ಹೇಳ್ತಿರಾ?

ನಾವಿದ್ದದ್ದು ಸ್ಪೇನ್‌ನಲ್ಲಿ. ನನಗೆ ಒಂಭತ್ತು ವರ್ಷ ಆದಾಗ ಫ್ರಾನ್ಸ್‌ಗೆ ಬಂದು ನೆಲೆಸಿದೆವು. ನನ್ನ ಹೆತ್ತವರು ಕ್ಯಾಥೋಲಿಕರು. ಆದ್ರೆ ನನಗೆ 16 ವರ್ಷ ಆಗುತ್ತಿದ್ದ ಹಾಗೆ ದೇವರೇ ಇಲ್ಲ ಅಂತ ನಂಬೋದಿಕ್ಕೆ ಶುರುಮಾಡಿದೆ. ನನ್ನ ಪ್ರಕಾರ ಧರ್ಮಕ್ಕೆ ಬೆಲೆನೇ ಇರಲಿಲ್ಲ. ಯಾರಾದರೂ ‘ದೇವರಿಲ್ಲ ಅಂತಿಯಲ್ಲಾ, ಮತ್ತೆ ಹೇಗೆ ಜೀವಿಗಳ ಸೃಷ್ಟಿ ಆಯ್ತು’ ಅಂತ ನನ್ನನ್ನು ಕೇಳಿದರೆ “ಇವತ್ತು ವಿಜ್ಞಾನಿಗಳ ಹತ್ರ ಇದಕ್ಕೆ ಉತ್ತರ ಇಲ್ಲದೇ ಇರಬಹುದು ಆದ್ರೆ ಮುಂದೊಂದು ದಿನ ಅವರು ಕಂಡುಹಿಡಿದೇ ಹಿಡಿತಾರೆ” ಎನ್ನುತ್ತಿದ್ದೆ.

ಮೂತ್ರಪಿಂಡ ಕಾಯಿಲೆಗಳ ಬಗ್ಗೆ ಅಧ್ಯಯನ ಮಾಡೋಕೆ ನಿಮ್ಮನ್ನು ಯಾವುದು ಪ್ರೇರಿಸಿತು?

ನಾನು ಫ್ರಾನ್ಸ್‌ನ ಮಾನ್‌ಪೆಲ್ಯಾ ವೈದ್ಯಕೀಯ ಶಾಲೆಯಲ್ಲಿ ಕಲಿತೆ. ಅಲ್ಲಿನ ಪ್ರೊಫೆಸರ್‌ ಒಬ್ಬರು ಮೂತ್ರಪಿಂಡಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡ್ತಿಯಾ ಅಂತ ಕೇಳಿದ್ರು. ಆ ಕೆಲಸದಲ್ಲಿ ರೋಗಿಗಳನ್ನು ನೋಡಿಕೊಳ್ಳೋದರ ಜತೆಗೆ ಸಂಶೋಧನೆನೂ ನಡೆಸಬೇಕಿತ್ತು. ನನಗೆ ಬೇಕಾಗಿದ್ದೂ ಅಂಥ ಕೆಲಸನೇ. 1990ರಿಂದ ನಾನು ರಿಕಾಂಬಿನೆಂಟ್‌ ಎರಿತ್ರೋಪಾಯಿಟಿನ್‌ ಔಷಧವನ್ನು (EPO) ಚಿಕಿತ್ಸೆಯಲ್ಲಿ ಬಳಸೋದರ ಬಗ್ಗೆ ನಡೆಯುತ್ತಿದ್ದ ಸಂಶೋಧನೆಯಲ್ಲಿ ಸೇರಿಕೊಂಡೆ. ಮೂಳೆಯಲ್ಲಿ ಉತ್ಪಾದನೆ ಆಗುವ ಕೆಂಪು ರಕ್ತಕಣಗಳನ್ನು EPO ಬಳಕೆಯಿಂದ ನಿಯಂತ್ರಿಸಬಹುದು. ಆ ದಶಕಗಳಲ್ಲಿ ಈ ಸಂಶೋಧನೆ ತುಂಬ ಹೊಸತು.

ದೇವರ ಬಗ್ಗೆ ಯೋಚಿಸುವಂತೆ ಮಾಡಿದ್ದು ಯಾವುದು?

ನನ್ನ ಪತಿ 1979ರಲ್ಲಿ ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲ್‌ ಕಲಿಯೋಕೆ ಶುರುಮಾಡಿದ್ರು. ಆದ್ರೆ ನನಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ಚಿಕ್ಕಂದಿನಿಂದಲೇ ನನಗೆ ಧರ್ಮ ಅಂದ್ರೆ ಇಷ್ಟವಿರಲಿಲ್ಲ. ನನ್ನ ಪತಿ ಮತ್ತು ಮಕ್ಕಳು ಯೆಹೋವನ ಸಾಕ್ಷಿಗಳಾದರು. ಸ್ವಲ್ಪ ಸಮಯದಲ್ಲೇ ಹೆಚ್ಚುಕಮ್ಮಿ ನಮ್ಮ ಎಲ್ಲಾ ಮಿತ್ರರು ಕೂಡ ಯೆಹೋವನ ಸಾಕ್ಷಿಗಳಾದರು. ಅದರಲ್ಲಿ ಒಬ್ಬಳು ಪ್ಯಾಟ್ರಿಸ್ಯಾ ಅಂತ ನನ್ನ ಸ್ನೇಹಿತೆ, ಒಮ್ಮೆ ಪ್ರಾರ್ಥನೆ ಮಾಡಿ ನೋಡು ಅಂತ ಹೇಳಿದಳು. “ಮೇಲೆ ಸ್ವರ್ಗದಲ್ಲಿ ಯಾರೂ ಕೇಳೋರಿಲ್ಲ ಅಂದ್ರೆ ನಿನಗೇನೂ ಆಗೋದಿಲ್ಲ ಬಿಡು. ಆದ್ರೆ ಯಾರಾದ್ರೂ ಇದ್ದರೆ ಏನಾದ್ರೂ ನಡೆಯುತ್ತೆ, ನೀನೇ ನೋಡ್ತೀಯ” ಅಂತ ಹೇಳಿದಳು. ಹಾಗೇ ಒಂದು ವರ್ಷ ಕಳೀತು. ನನ್ನ ಮನಸ್ಸಲ್ಲಿ ಬದುಕಿನ ಉದ್ದೇಶ ಏನು ಅನ್ನೋ ಪ್ರಶ್ನೆ ಬಂತು. ಆಗ ಪ್ಯಾಟ್ರಿಸ್ಯಾ ಹೇಳಿದ್ದು ನೆನಪಾಯ್ತು. ಬದುಕಿನ ಉದ್ದೇಶ ಗೊತ್ತಾಗಬೇಕು ಅಂತ ದೇವರ ಹತ್ರ ಪ್ರಾರ್ಥನೆ ಮಾಡೋಕೆ ಶುರುಮಾಡಿದೆ.

ಬದುಕಿನ ಉದ್ದೇಶ ತಿಳಿದುಕೋಬೇಕು ಅಂತ ಯಾಕೆ ಅನಿಸಿತು ನಿಮಗೆ?

ನ್ಯೂ ಯಾರ್ಕ್‌ನ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ಯಾಕಿಷ್ಟು ಕೆಟ್ಟದು ನಡಿತಾ ಇದೆ ಲೋಕದಲ್ಲಿ ಅಂತ ಯೋಚಿಸ್ತಾ ಇದ್ದೆ. ಧರ್ಮದಲ್ಲೇ ಅತಿಯಾಗಿ ಮುಳುಗಿ ಹೋಗುವುದರಿಂದಲೇ ಪ್ರಾಣಕ್ಕೆ ಹಾನಿಯಾಗೋ ಕೆಲಸಗಳನ್ನು ಮಾಡುವುದು ಅಂತ ನನಗೆ ಅನಿಸಿತು. ಆದರೆ ನನ್ನ ಸುತ್ತಮುತ್ತ ಇದ್ದಿದ್ದು ಯೆಹೋವನ ಸಾಕ್ಷಿಗಳು. ಅವರೆಲ್ಲ ಶಾಂತಿಪ್ರಿಯ ಜನರು. ಭಯೋತ್ಪಾದಕರಲ್ಲs. ಬೈಬಲ್‌ ಹೇಳೋದನ್ನ ಪಾಲಿಸುತ್ತಾ ಇದ್ದರು. ನನಗೂ ಬೈಬಲಲ್ಲಿ ಏನಿದೆ ಅಂತ ತಿಳಿದುಕೋ ಬೇಕು ಅಂತ ಅನಿಸಿತು. ನಾನೇ ಬೈಬಲ್‌ ಓದೋಕೆ ಶುರುಮಾಡಿದೆ.

ನೀವೊಬ್ಬ ವೈದ್ಯೆ ಆಗಿರೋದರಿಂದ ನಿಮಗೆ ದೇವರಿದ್ದಾನೆ ಅಂತ ನಂಬೋಕೆ ಕಷ್ಟವಾಯಿತಾ?

ಇಲ್ಲ, ಇಲ್ಲ. ನಮ್ಮ ಶರೀರ ಬಹಳ ಅದ್ಭುತವಾಗಿ ರಚನೆ ಆಗಿರೋದನ್ನ ನೋಡಿ ತುಂಬ ಗೌರವ ಇತ್ತು ನನಗೆ. ಉದಾಹರಣೆಗೆ, ನಮ್ಮ ದೇಹದಲ್ಲಿರೋ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ನಮ್ಮ ಮೂತ್ರಪಿಂಡ ನಿಯಂತ್ರಿಸುವ ರೀತಿ ನೋಡಿದರೆ ಅಬ್ಬಾ ಭಯ ಆಶ್ಚರ್ಯ ಎಲ್ಲ ಒಟ್ಟಿಗೆ ಆಗುತ್ತೆ.

ಯಾಕೆ ಅಂತ ಸ್ವಲ್ಪ ಹೇಳ್ತಿರಾ?

ನಿಮಗೆ ಗೊತ್ತಿರಬಹುದು, ಕೆಂಪುರಕ್ತಕಣಗಳು ಆಮ್ಲಜನಕವನ್ನು ಸಾಗಿಸುವ ಕೆಲಸ ಮಾಡುತ್ತೆ. ನಾವು ತುಂಬ ಎತ್ತರ ಪ್ರದೇಶಕ್ಕೆ ಹೋದರೆ ಅಥವಾ ದೇಹದಿಂದ ತುಂಬ ರಕ್ತಸ್ರಾವ ಆದರೆ ದೇಹದಲ್ಲಿ ಆಮ್ಲಜನಕದ ಕೊರತೆ ಆಗುತ್ತೆ. ನಮ್ಮ ಮೂತ್ರಪಿಂಡಗಳಲ್ಲಿ ಆಮ್ಲಜನಕವನ್ನು ಗುರುತಿಸುವ ಸೆನ್ಸಾರ್‌ಗಳಿವೆ. ಹೀಗೆ ಆಮ್ಲಜನಕದ ಕೊರತೆ ಇದೆ ಅಂತ ಅವು ಗುರುತಿಸಿದ ತಕ್ಷಣ EPO ಉತ್ಪಾದನೆಯನ್ನು ಶುರುಮಾಡುತ್ತೆ. EPO ಉತ್ಪಾದನೆ ಎಷ್ಟಾಗುತ್ತೆ ಅಂದ್ರೆ ಒಂದು ಇದ್ದದ್ದು ಸಾವಿರಕ್ಕೆ ಏರುತ್ತೆ. ಈ EPO ಕೀಲುಮಜ್ಜೆಯನ್ನು ಉದ್ದೀಪನ ಮಾಡಿ ಕೆಂಪುರಕ್ತಕಣ ಜಾಸ್ತಿ ಉತ್ಪಾದನೆ ಆಗುವ ಥರ ಮಾಡುತ್ತೆ. ಆಗ ಕೆಂಪು ರಕ್ತಕಣಗಳು ಹೆಚ್ಚೆಚ್ಚು ಆಮ್ಲಜನಕವನ್ನು ಸಾಗಿಸುತ್ತೆ. ಇದೇ ಅದ್ಭುತ! ಇಂಥ ನಯನಾಜೂಕಿನ ವ್ಯವಸ್ಥೆಯನ್ನು ದೇವರಿಂದ ಸೃಷ್ಟಿಸೋಕೆ ಮಾತ್ರ ಸಾಧ್ಯ. ಆದ್ರೆ 10 ವರ್ಷ ಅಧ್ಯಯನ ಮಾಡಿದ ಮೇಲೆನೇ ಈ ವಿಷಯ ನನ್ನ ತಲೆಗೆ ಹೊಳೆದಿದ್ದು.

ಬೈಬಲ್‌ ಬಗ್ಗೆ ನಿಮಗೆ ಯಾವ ಅಭಿಪ್ರಾಯ ಇತ್ತು?

ನಾನು ತುಂಬ ಚರಿತ್ರೆ ಪುಸ್ತಕಗಳನ್ನು, ಪ್ರಸಿದ್ಧ ಕಾದಂಬರಿಗಳನ್ನು ಓದಿದ್ದೆ. ಆದ್ರೆ ಬೈಬಲ್‌ ತುಂಬ ಭಿನ್ನವಾಗಿತ್ತು. ಅದರಲ್ಲಿರುವ ಸಲಹೆಗಳು ಜೀವನಕ್ಕೆ ತುಂಬ ತಕ್ಕದ್ದಾಗಿತ್ತು. ಅಂಥ ಸಲಹೆಗಳನ್ನು ಮನುಷ್ಯ ಕೊಡೋದಿಕ್ಕೆ ಸಾಧ್ಯನೇ ಇಲ್ಲ. ಇನ್ನು ನನ್ನ ಮೇಲೆ ತುಂಬ ಪ್ರಭಾವ ಬೀರಿದಂಥ ವ್ಯಕ್ತಿ ಯೇಸು. ಬೈಬಲ್‌ ಓದಿದ್ದರಿಂದ ಯೇಸುವಿನ ನಿಜವಾದ ವ್ಯಕ್ತಿತ್ವ ನನ್ನ ಕಣ್ಣಮುಂದೆ ಬಂದ ಹಾಗೆ ಇತ್ತು. ಆತನಿಗೆ ಭಾವನೆಗಳಿದ್ದವು, ಸ್ನೇಹಿತರಿದ್ದರು. ಯೆಹೋವನ ಸಾಕ್ಷಿಗಳ ಪುಸ್ತಕಗಳನ್ನು ಓದೋದಿಕ್ಕೆ ನನಗೆ ಇಷ್ಟವಿರಲಿಲ್ಲ. ಹಾಗಾಗಿ ಸಂದೇಹ ಬಂದಾಗೆಲ್ಲ ಎನ್‌ಸೈಕ್ಲಪಿಡೀಯಗಳಲ್ಲಿ ಇತರ ವಿಶ್ವಕೋಶಗಳಲ್ಲಿ ಉತ್ತರ ಹುಡುಕುತ್ತಿದ್ದೆ.

ಯಾವೆಲ್ಲ ವಿಷಯಗಳ ಮೇಲೆ ಸಂಶೋಧನೆ ನಡೆಸಿದ್ದೀರಾ?

ತುಂಬ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿದೆ. ಅದರಲ್ಲಿ ನನಗೆ ತುಂಬ ಕುತೂಹಲ ತಂದ ವಿಷಯ ಯೇಸುವಿನ ದೀಕ್ಷಾಸ್ನಾನದ ಬಗ್ಗೆ ಬೈಬಲ್‌ನಲ್ಲಿದ್ದ ಭವಿಷ್ಯನುಡಿ. ಆ ಭವಿಷ್ಯನುಡಿಯಲ್ಲಿ ಪರ್ಷಿಯ ರಾಜ ಅರ್ತಶಸ್ತನ ಆಳ್ವಿಕೆಯ 20ನೇ ವರ್ಷದಿಂದ ಯೇಸುವಿನ ದೀಕ್ಷಾಸ್ನಾನಕ್ಕೆ ಎಷ್ಟು ವರ್ಷಗಳು ಹಿಡಿಯುತ್ತೆ ಅಂತ ನಿಖರವಾಗಿ ಬೈಬಲ್‌ ಹೇಳಿತ್ತು. * ಹೇಗೂ ನನ್ನ ಕೆಲಸದಲ್ಲಿ ಸಂಶೋಧನೆ ಮಾಡಿ ಮಾಡಿ ರೂಢಿಯಾಗಿಬಿಟ್ಟಿತ್ತು. ಇತಿಹಾಸದ ಪುಸ್ತಕಗಳನ್ನು ಕೆದಕಿದೆ. ಅರ್ತಶಸ್ತ ಆಳಿದ ಸಮಯವನ್ನು ಮತ್ತು ಯೇಸು ಭೂಮಿಯಲ್ಲಿದ್ದ ಸಮಯದ ಬಗ್ಗೆ ತಿಳಿದುಕೊಂಡೆ. ಕೊನೆಗೂ ಬೈಬಲ್‌ ಹೇಳಿದ ಹಾಗೇ ನಡೆದಿದೆ ಅಂತ ಅರಿತೆ. ಹಾಗಾಗಿ ಬೈಬಲ್‌ ದೇವರ ಪ್ರೇರಣೆಯಿಂದಲೇ ಬರೆಯಲಾಗಿದೆ ಅಂತ ಒಪ್ಪಿಕೊಂಡೆ. ◼ (g13-E 09)

[ಪಾದಟಿಪ್ಪಣಿ]

^ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 197-199 ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 12ರಲ್ಲಿರುವ ಚಿತ್ರ]

[ಪುಟ 12ರಲ್ಲಿರುವ ಚಿತ್ರ]

[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]

ಇತಿಹಾಸದ ಪುಸ್ತಕಗಳನ್ನು ಕೆದಕಿದೆ. . . ಕೊನೆಗೂ ಬೈಬಲ್‌ ಹೇಳಿದ ಹಾಗೇ ನಡೆದಿದೆ ಅಂತ ಅರಿತುಕೊಂಡೆ

[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]

ಇಂಥ ನಯನಾಜೂಕಿನ ವ್ಯವಸ್ಥೆಯನ್ನು ದೇವರಿಂದ ಸೃಷ್ಟಿಸೋಕೆ ಮಾತ್ರ ಸಾಧ್ಯ