ಯೋಹಾನ 18:1-40

  • ಯೂದ ಯೇಸುಗೆ ಮೋಸಮಾಡಿದ (1-9)

  • ಪೇತ್ರ ಕತ್ತಿ ಬೀಸಿದ (10, 11)

  • ಅನ್ನನ ಹತ್ರ ಯೇಸುವನ್ನ ಕರ್ಕೊಂಡು ಹೋದ್ರು (12-14)

  • ಯೇಸುವನ್ನ ಪೇತ್ರ ಗೊತ್ತಿಲ್ಲ ಅಂತ ಮೊದಲನೇ ಸಲ ಹೇಳಿದ (15-18)

  • ಅನ್ನನ ಮುಂದೆ ಯೇಸುಗೆ ವಿಚಾರಣೆ (19-24)

  • ಯೇಸುವನ್ನ ಪೇತ್ರ ಗೊತ್ತಿಲ್ಲ ಅಂತ ಇನ್ನೆರಡು ಸಾರಿ ಹೇಳಿದ (25-27)

  • ಪಿಲಾತನ ಮುಂದೆ ಯೇಸುಗೆ ವಿಚಾರಣೆ (28-40)

    • “ನನ್ನ ಆಳ್ವಿಕೆ ಈ ಲೋಕದ ಸರಕಾರಗಳ ತರ ಅಲ್ಲ” (36)

18  ಯೇಸು ಇದನ್ನ ಹೇಳಿದ ಮೇಲೆ ಶಿಷ್ಯರನ್ನ ಕರ್ಕೊಂಡು ಕಿದ್ರೋನ್‌ ಕಣಿವೆ+ ದಾಟಿ ಒಂದು ತೋಟ ಇದ್ದ ಜಾಗಕ್ಕೆ ಹೋದನು. ಆತನೂ ಶಿಷ್ಯರೂ ಅದರೊಳಗೆ ಹೋದ್ರು.+  ಆ ಮೋಸಗಾರ ಯೂದನಿಗೆ ಈ ಸ್ಥಳ ಗೊತ್ತಿತ್ತು. ಯಾಕಂದ್ರೆ ಯೇಸು ಅಲ್ಲಿಗೆ ಶಿಷ್ಯರ ಜೊತೆ ತುಂಬ ಸಲ ಬಂದಿದ್ದನು.  ಹಾಗಾಗಿ ಯೂದ ತುಂಬ ಸೈನಿಕರನ್ನ, ಮುಖ್ಯ ಪುರೋಹಿತರ ಮತ್ತು ಫರಿಸಾಯರ ಕಾವಲುಗಾರರನ್ನ ಕರ್ಕೊಂಡು ಅಲ್ಲಿಗೆ ಬಂದ. ಅವ್ರ ಕೈಯಲ್ಲಿ ಪಂಜು, ದೀಪ, ಆಯುಧ ಇತ್ತು.+  ಮುಂದೆ ತನಗೆ ಏನೇನು ಆಗುತ್ತೆ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಯೇಸು ಮುಂದೆ ಹೋಗಿ “ಯಾರನ್ನ ಹುಡುಕ್ತಾ ಇದ್ದೀರಾ?” ಅಂತ ಕೇಳಿದನು.  ಅದಕ್ಕೆ “ನಜರೇತಿನ ಯೇಸುವನ್ನ”+ ಅಂದ್ರು. ಆತನು “ನಾನೇ ಅವನು” ಅಂದನು. ಆಗ ಆ ಮೋಸಗಾರ ಯೂದ ಅವ್ರ ಜೊತೆನೇ ನಿಂತಿದ್ದ.+  “ನಾನೇ ಅವನು” ಅಂತ ಯೇಸು ಹೇಳಿದಾಗ ಅವರು ಹಿಂದೆ ಸರಿದು ನೆಲಕ್ಕೆ ಬಿದ್ರು.+  ಹಾಗಾಗಿ ಆತನು ಇನ್ನೊಮ್ಮೆ “ನಿಮಗ್ಯಾರು ಬೇಕು?” ಅಂತ ಕೇಳಿದಾಗ “ನಜರೇತಿನ ಯೇಸು” ಅಂದ್ರು.  ಅದಕ್ಕೆ “ನಾನೇ ಯೇಸು ಅಂತ ಹೇಳಿದನಲ್ಲಾ? ನೀವು ನನ್ನನ್ನ ಹುಡುಕ್ತಾ ಇದ್ರೆ ಇವರು ಹೋಗಲಿ, ಬಿಡಿ” ಅಂದನು.  “ನೀನು ನನಗೆ ಕೊಟ್ಟಿರೋ ಶಿಷ್ಯರಲ್ಲಿ ಒಬ್ಬನನ್ನೂ ಕಳ್ಕೊಳ್ಳಲಿಲ್ಲ”+ ಅನ್ನೋ ಮಾತು ನಿಜ ಆಗೋಕೆ ಯೇಸು ಹೀಗೆ ಮಾಡಿದನು. 10  ಸೀಮೋನ ಪೇತ್ರನ ಹತ್ರ ಒಂದು ಕತ್ತಿ ಇತ್ತು. ಅವನು ಅದನ್ನ ತೆಗೆದು ಮಹಾ ಪುರೋಹಿತನ ಸೇವಕನ ಕಡೆ ಬೀಸಿ ಅವನ ಬಲಕಿವಿ ಕತ್ತರಿಸಿಬಿಟ್ಟ.+ ಆ ಸೇವಕನ ಹೆಸ್ರು ಮಲ್ಕ. 11  ಆಗ ಯೇಸು ಪೇತ್ರನಿಗೆ “ಕತ್ತಿಯನ್ನ ಒಳಗೆ ಇಡು.+ ಅಪ್ಪ ನನಗೆ ಕೊಟ್ಟಿರೋ ಬಟ್ಟಲಿಂದ ನಾನು ಕುಡಿಬಾರದಾ?”+ ಅಂದನು. 12  ಸೈನಿಕರು, ಸೇನಾಧಿಪತಿ ಮತ್ತು ಯೆಹೂದ್ಯರು ಕಳಿಸಿದ್ದ ಕಾವಲುಗಾರರು ಯೇಸುವನ್ನ ಹಿಡಿದು ಕಟ್ಟಿದ್ರು. 13  ಮೊದಲು ಅನ್ನನ ಹತ್ರ ಕರ್ಕೊಂಡು ಹೋದ್ರು. ಇವನು ಆ ವರ್ಷದ ಮಹಾ ಪುರೋಹಿತನಾಗಿದ್ದ+ ಕಾಯಫನ ಮಾವನಾಗಿದ್ದ.+ 14  ಎಲ್ರೂ ನಾಶ ಆಗೋದಕ್ಕಿಂತ ಒಬ್ಬ ಮನುಷ್ಯ ಸಾಯೋದು ಒಳ್ಳೇದು ಅಂತ ಯೆಹೂದ್ಯರಿಗೆ ಸಲಹೆ ಕೊಟ್ಟಿದ್ದು ಈ ಕಾಯಫನೇ.+ 15  ಸೀಮೋನ ಪೇತ್ರ ಮತ್ತು ಇನ್ನೊಬ್ಬ ಶಿಷ್ಯ ಯೇಸುವಿನ ಹಿಂದೆನೇ ಹೋದ್ರು.+ ಆ ಶಿಷ್ಯನಿಗೆ ಮಹಾ ಪುರೋಹಿತನ ಪರಿಚಯ ಇತ್ತು. ಹಾಗಾಗಿ ಅವನು ಯೇಸು ಜೊತೆ ಮಹಾ ಪುರೋಹಿತನ ಮನೆ ಅಂಗಳದ ಒಳಗೆ ಹೋದ. 16  ಆದ್ರೆ ಪೇತ್ರ ಬಾಗಿಲ ಹತ್ರ ನಿಂತಿದ್ದ. ಆಗ ಮಹಾ ಪುರೋಹಿತನ ಪರಿಚಯ ಇದ್ದ ಆ ಇನ್ನೊಬ್ಬ ಶಿಷ್ಯ ಹೊರಗೆ ಹೋದ. ಬಾಗಿಲು ಕಾಯೋ ಸೇವಕಿ ಹತ್ರ ಮಾತಾಡಿ ಪೇತ್ರನನ್ನ ಒಳಗೆ ಕರ್ಕೊಂಡು ಬಂದ. 17  ಆಗ ಬಾಗಿಲು ಕಾಯೋ ಸೇವಕಿ ಪೇತ್ರನಿಗೆ “ನೀನೂ ಆ ಮನುಷ್ಯನ ಶಿಷ್ಯರಲ್ಲಿ ಒಬ್ಬನಲ್ವಾ?” ಅಂತ ಕೇಳಿದಳು. ಅದಕ್ಕೆ ಪೇತ್ರ “ಇಲ್ಲ” ಅಂದ.+ 18  ತುಂಬ ಚಳಿ ಇದ್ದಿದ್ರಿಂದ ಸೇವಕರು, ಕಾವಲುಗಾರರು ಬೆಂಕಿ ಹಚ್ಚಿ ಸುತ್ತ ನಿಂತು ಚಳಿಕಾಯಿಸ್ತಾ ಇದ್ರು. ಪೇತ್ರ ಸಹ ಅವ್ರ ಜೊತೆ ಚಳಿಕಾಯಿಸ್ತಾ ಇದ್ದ. 19  ಮುಖ್ಯ ಪುರೋಹಿತ ಯೇಸು ಹತ್ರ ಶಿಷ್ಯರ ಬಗ್ಗೆ, ಆತನು ಕಲಿಸ್ತಿದ್ದ ವಿಷ್ಯಗಳ ಬಗ್ಗೆ ಪ್ರಶ್ನೆ ಕೇಳಿದ. 20  ಅದಕ್ಕೆ ಯೇಸು “ನಾನು ಜನ್ರ ಮುಂದೆನೇ ಮಾತಾಡ್ತಾ ಇದ್ದೆ. ಯಾವಾಗ್ಲೂ ಯೆಹೂದ್ಯರೆಲ್ಲ ಸೇರಿಬರೋ ಸಭಾಮಂದಿರದಲ್ಲಿ, ದೇವಾಲಯದಲ್ಲಿ+ ಕಲಿಸ್ತಾ ಇದ್ದೆ. ಕದ್ದುಮುಚ್ಚಿ ನಾನೇನೂ ಮಾತಾಡಿಲ್ಲ. 21  ಹಾಗಿರುವಾಗ ನನ್ನ ಹತ್ರ ಯಾಕೆ ಪ್ರಶ್ನೆ ಕೇಳ್ತಿಯಾ? ನನ್ನ ಮಾತು ಕೇಳಿಸ್ಕೊಂಡಿರೋ ಜನ್ರನ್ನ ಕೇಳು. ನಾನು ಹೇಳಿದ್ದು ಅವ್ರಿಗೆ ಚೆನ್ನಾಗಿ ಗೊತ್ತು” ಅಂತ ಉತ್ತರ ಕೊಟ್ಟನು. 22  ಆಗ ಪಕ್ಕದಲ್ಲಿ ನಿಂತಿದ್ದ ಕಾವಲುಗಾರ ಯೇಸು ಕೆನ್ನೆಗೆ ಹೊಡೆದು+ “ಮುಖ್ಯ ಪುರೋಹಿತನ ಹತ್ರ ಹೀಗಾ ಮಾತಾಡೋದು?” ಅಂದ. 23  ಯೇಸು “ನಾನು ತಪ್ಪಾಗಿ ಮಾತಾಡಿದ್ರೆ ಆ ತಪ್ಪು ಏನಂತ ಹೇಳು. ನಾನು ಮಾತಾಡಿದ್ದು ಸರಿಯಾಗಿದ್ರೆ ಯಾಕೆ ಹೊಡೆದೆ?” ಅಂದನು. 24  ಆಗ ಅನ್ನನು ಯೇಸು ಕೈಕಟ್ಟಿಸಿ ಮಹಾ ಪುರೋಹಿತ ಕಾಯಫನ ಹತ್ರ ಕಳಿಸಿದ.+ 25  ಸೀಮೋನ ಪೇತ್ರ ಚಳಿಕಾಯಿಸ್ತಾ ಇದ್ದ. ಆಗ ಅಲ್ಲಿದ್ದವರು “ನೀನೂ ಅವನ ಶಿಷ್ಯನಲ್ವಾ?” ಅಂತ ಕೇಳಿದ್ರು. ಅದನ್ನ ಒಪ್ಪದೆ “ಇಲ್ಲ” ಅಂದ.+ 26  ಪೇತ್ರ ಕಿವಿ ಕತ್ತರಿಸಿದ ಆ ಮಹಾ ಪುರೋಹಿತನ ಸೇವಕನ ಸಂಬಂಧಿಕ ಅಲ್ಲಿದ್ದ.+ ಅವನು ಪೇತ್ರನಿಗೆ “ಅವನ ಜೊತೆ ತೋಟದಲ್ಲಿ ನಿನ್ನನ್ನೂ ನೋಡಿದೆ ಅಲ್ಲಾ?” ಅಂದ. 27  ಆಗ್ಲೂ ಪೇತ್ರ ಒಪ್ಪಿಕೊಳ್ಳಲಿಲ್ಲ. ತಕ್ಷಣ ಒಂದು ಕೋಳಿ ಕೂಗಿತು.+ 28  ಆಮೇಲೆ ಯೇಸುವನ್ನ ಕಾಯಫನ ಹತ್ರದಿಂದ ರಾಜ್ಯಪಾಲನ ಮನೆಗೆ ಕರ್ಕೊಂಡು ಹೋದ್ರು.+ ಅಷ್ಟು ಹೊತ್ತಿಗಾಗಲೇ ಮುಂಜಾನೆ ಆಗಿತ್ತು. ಅವರು ರಾಜ್ಯಪಾಲನ ಮನೆ ಒಳಗೆ ಹೋಗಲಿಲ್ಲ. ಯಾಕಂದ್ರೆ ಹೋದ್ರೆ ಅಪವಿತ್ರ ಆಗಿಬಿಡ್ತೀವಿ,+ ಪಸ್ಕದ ಊಟ ಮಾಡಕ್ಕಾಗಲ್ಲ ಅಂತ ಅವರು ಅಂದ್ಕೊಂಡ್ರು. 29  ಹಾಗಾಗಿ ರಾಜ್ಯಪಾಲ ಪಿಲಾತನೇ ಹೊರಗೆ ಅವ್ರ ಹತ್ರ ಬಂದು “ನಿಮ್ಮ ಪ್ರಕಾರ ಈ ಮನುಷ್ಯ ಏನು ತಪ್ಪು ಮಾಡಿದ್ದಾನೆ?” ಅಂತ ಕೇಳಿದ. 30  ಅದಕ್ಕೆ ಅವರು “ಈ ಮನುಷ್ಯ ತಪ್ಪು ಮಾಡಿಲ್ಲಾಂದ್ರೆ ನಾವು ನಿನ್ನ ಹತ್ರ ಕರ್ಕೊಂಡು ಬರ್ತಾ ಇರಲಿಲ್ಲ” ಅಂದ್ರು. 31  ಆಗ ಪಿಲಾತ “ಇವನನ್ನ ಕರ್ಕೊಂಡು ಹೋಗಿ ನಿಮ್ಮ ಕಾನೂನು ಪ್ರಕಾರ ತೀರ್ಪು ಮಾಡಿ” ಅಂದ.+ ಅದಕ್ಕೆ ಯೆಹೂದ್ಯರು “ಕಾನೂನು ಪ್ರಕಾರ ಯಾರಿಗೂ ಮರಣಶಿಕ್ಷೆ ಕೊಡೋ ಅಧಿಕಾರ ನಮಗಿಲ್ಲ” ಅಂದ್ರು.+ 32  ಯೇಸು ಮುಂಚೆನೇ ತಾನು ಯಾವ ರೀತಿ ಸಾಯ್ತಿನಿ ಅಂತ ಹೇಳಿದ್ದನು.+ ಆ ಮಾತು ನಿಜ ಆಗೋಕೆ ಹೀಗಾಯ್ತು. 33  ಆಗ ಪಿಲಾತ ಮತ್ತೆ ಮನೆಯೊಳಗೆ ಹೋಗಿ ಯೇಸುವನ್ನ ಕರೆದು “ನೀನು ಯೆಹೂದ್ಯರ ರಾಜನಾ?”+ ಅಂತ ಕೇಳಿದ. 34  ಅದಕ್ಕೆ ಯೇಸು “ನನ್ನ ಬಗ್ಗೆ ತಿಳ್ಕೊಬೇಕಂತ ಇದ್ಯಾ? ಅಥವಾ ಬೇರೆಯವರು ನನ್ನ ಬಗ್ಗೆ ಹೇಳಿದ್ದಕ್ಕೆ ಹೀಗೆ ಕೇಳ್ತಾ ಇದ್ಯಾ?” ಅಂತ ಕೇಳಿದನು. 35  ಅದಕ್ಕೆ ಪಿಲಾತ “ನಾನು ಯೆಹೂದ್ಯನಲ್ಲ ಅಂತ ನಿಂಗೊತ್ತು. ನಿನ್ನ ಸ್ವಂತ ಜನ, ಮುಖ್ಯ ಪುರೋಹಿತರು ನಿನ್ನನ್ನ ನನ್ನ ಕೈಗೆ ಒಪ್ಪಿಸಿದ್ರು. ಯಾಕೆ? ಅಂಥದ್ದು ನೀನೇನು ಮಾಡಿದೆ?” ಅಂತ ಕೇಳಿದ. 36  ಅದಕ್ಕೆ ಯೇಸು+ “ನನ್ನ ಆಳ್ವಿಕೆ ಈ ಲೋಕದ ಸರಕಾರಗಳ ತರ ಅಲ್ಲ.+ ಆ ತರ ಇದ್ದಿದ್ರೆ ನಾನು ಯೆಹೂದ್ಯರ ಕೈಗೆ ಸಿಗದ ಹಾಗೆ ನನ್ನ ಸೇವಕರು ಯುದ್ಧ ಮಾಡ್ತಿದ್ರು.+ ಆದ್ರೆ ನನ್ನ ಆಳ್ವಿಕೆ ಈ ಲೋಕದ್ದಲ್ಲ” ಅಂತ ಉತ್ತರ ಕೊಟ್ಟನು. 37  ಆಗ ಪಿಲಾತ “ಹಾಗಾದ್ರೆ ನೀನು ರಾಜನಾ?” ಅಂತ ಕೇಳಿದ. ಅದಕ್ಕೆ ಯೇಸು “ನಾನು ರಾಜ ಅಂತ ನೀನೇ ಹೇಳ್ತಾ ಇದ್ದೀಯ.+ ನಾನು ಹುಟ್ಟಿದ್ದು, ಈ ಲೋಕಕ್ಕೆ ಬಂದಿದ್ದು ಎಲ್ರಿಗೆ ಸತ್ಯ ಗೊತ್ತಾಗಲಿ ಅಂತಾನೇ.+ ಸತ್ಯವನ್ನ ನಂಬುವವ್ರೆಲ್ಲ ನಾನು ಹೇಳೋ ಪ್ರಕಾರ ನಡಿತಾರೆ” ಅಂದನು. 38  ಆಗ ಪಿಲಾತ “ಸತ್ಯ ಅಂದ್ರೇನು?” ಅಂದ. ಆಮೇಲೆ ಪಿಲಾತ ಮತ್ತೆ ಹೊರಗೆ ನಿಂತಿದ್ದ ಯೆಹೂದ್ಯರ ಹತ್ರ “ನನಗೆ ಅವನಲ್ಲಿ ಯಾವ ತಪ್ಪೂ ಕಾಣ್ತಿಲ್ಲ.+ 39  ಅಷ್ಟೇ ಅಲ್ಲ ಪಸ್ಕ ಹಬ್ಬದ ದಿನ ನಾನು ನಿಮಗೆ ಒಬ್ಬ ಕೈದಿಯನ್ನ ಬಿಡುಗಡೆ ಮಾಡೋ ಪದ್ಧತಿ ಇದೆಯಲ್ವಾ?+ ನಾನು ಈ ಯೆಹೂದ್ಯರ ರಾಜನನ್ನ ನಿಮಗೋಸ್ಕರ ಬಿಡುಗಡೆ ಮಾಡ್ಲಾ?” ಅಂತ ಕೇಳಿದ. 40  ಆಗ ಅವರು “ಬೇಡ, ಬೇಡ. ಇವನನ್ನಲ್ಲ, ಬರಬ್ಬನನ್ನು ಬಿಡುಗಡೆ ಮಾಡು” ಅಂತ ಮತ್ತೆ ಜೋರಾಗಿ ಕೂಗಿದ್ರು. ಈ ಬರಬ್ಬ ಒಬ್ಬ ದರೋಡೆಕೋರ.+

ಪಾದಟಿಪ್ಪಣಿ