ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮದ್ಯ

ಮದ್ಯ

ಬೈಬಲಿನ ದೃಷ್ಟಿಕೋನ

ಮದ್ಯಪಾನ ಮ ದ್ಯ ಪಾ ನ

ಮದ್ಯಪಾನ ತಪ್ಪಾ?

“ದ್ರಾಕ್ಷಾರಸವು ಮನುಷ್ಯ ಹೃದಯವನ್ನು ಸಂತೋಷಪಡಿಸುತ್ತದೆ; ಎಣ್ಣೆಯು ಅವನ ಮುಖವು ಪ್ರಕಾಶಿಸುವಂತೆ ಮಾಡುತ್ತದೆ; ರೊಟ್ಟಿಯು ಮನುಷ್ಯನ ಪ್ರಾಣಕ್ಕೆ ಆಧಾರವಾಗುತ್ತದೆ.”—ಕೀರ್ತನೆ 104:15, ಪವಿತ್ರ ಗ್ರಂಥ ಬೈಬಲ್‌.

ಜನರು ಏನು ಹೇಳುತ್ತಾರೆ? ಅನೇಕರ ಮನೆಯಲ್ಲಿ ಊಟ ಮಾಡುವಾಗ ಮದ್ಯಪಾನ ಮಾಡುವುದು ಸಾಮಾನ್ಯ. ಆದರೆ ಕೆಲವು ಮನೆಗಳಲ್ಲಿ ಮದ್ಯಪಾನವನ್ನು ಸುತರಾಂ ಒಪ್ಪುವುದಿಲ್ಲ. ಜನರ ಅಭಿಪ್ರಾಯದಲ್ಲಿ ಇಂಥ ಅಜಗಜಾಂತರ ಯಾಕೆ? ಅವರ ಸಂಸ್ಕೃತಿ, ಆರೋಗ್ಯ, ಧರ್ಮ ಇದಕ್ಕೆ ಕಾರಣವಾಗಿರಬಹುದು.

ಬೈಬಲ್‌ ಏನು ಹೇಳುತ್ತೆ? ಮಿತವಾದ ಮದ್ಯಸೇವನೆಯನ್ನು ಬೈಬಲ್‌ ಖಂಡಿಸುವುದಿಲ್ಲ. ಆದರೆ ಕುಡುಕರನ್ನು ಮತ್ತು ಯಾವುದೇ ವಿಷಯದಲ್ಲಿ ಅತಿರೇಕಕ್ಕೆ ಹೋಗುವವರನ್ನು ಬೈಬಲ್‌ ಖಂಡಿಸುತ್ತೆ. (1 ಕೊರಿಂಥ 6:9, 10) ಹಳೇ ಕಾಲದಲ್ಲಿ ದೇವರನ್ನು ಆರಾಧಿಸಿದ ಅನೇಕ ಸ್ತ್ರೀ ಪುರುಷರು ದ್ರಾಕ್ಷಾರಸವನ್ನು * ಕುಡಿದರು. ಈ ದ್ರಾಕ್ಷಾರಸದ ಬಗ್ಗೆ ಬೈಬಲ್‌ನಲ್ಲಿ ಸುಮಾರು 200 ಸಲ ಪ್ರಸ್ತಾಪಿಸಲಾಗಿದೆ. (ಆದಿಕಾಂಡ 27:25) ಪ್ರಸಂಗಿ 9:7ರಲ್ಲಿ ಹೇಳುತ್ತೆ “ನಿನ್ನ ಅನ್ನವನ್ನು ಸಂತೋಷದಿಂದ ಉಣ್ಣು; ನಿನ್ನ ದ್ರಾಕ್ಷಾರಸವನ್ನು ಒಳ್ಳೆಯ ಮನಸ್ಸಿನಿಂದ ಕುಡಿ.” ಮದ್ಯ ಕುಡಿಯುವುದರಿಂದ ಸಂತೋಷ ಸಿಗುತ್ತೆ. ಹಾಗಾಗಿ ಮದುವೆ ಔತಣದಂಥ ಸಮಾರಂಭಗಳಲ್ಲಿ ಇದನ್ನು ಕೊಡಲಾಗುತ್ತೆ. ಯೇಸು ಸಹ ಒಂದು ಮದುವೆ ಔತಣದಲ್ಲಿ ನೀರನ್ನು “ದ್ರಾಕ್ಷಾಮದ್ಯ” ಮಾಡಿ ತನ್ನ ಮೊದಲ ಪವಾಡವನ್ನು ಮಾಡಿದನು. (ಯೋಹಾನ 2:1-11) ದ್ರಾಕ್ಷಾಮದ್ಯವನ್ನು ವೈದ್ಯಕೀಯವಾಗಿಯೂ ಕೆಲವೊಮ್ಮೆ ಬಳಸುವುದುಂಟು.—ಲೂಕ 10:34; 1 ತಿಮೊಥೆಯ 5:23.

ಇಷ್ಟೇ ಕುಡಿಯಬೇಕೆಂದು ಬೈಬಲ್‌ ಮಿತಿ ಇಡುತ್ತಾ?

‘ದ್ರಾಕ್ಷಾಮದ್ಯಕ್ಕೆ ದಾಸರಾಗಬೇಡಿ.’—ತೀತ 2:3.

ಇದು ನಿಮಗೆ ಮಹತ್ವದ್ದೇಕೆ? ಪ್ರತಿ ವರ್ಷ ಲೆಕ್ಕವಿಲ್ಲದಷ್ಟು ಕುಟುಂಬಗಳಲ್ಲಿ ಅಪ್ಪ ಇಲ್ಲವೆ ಅಮ್ಮ ಮದ್ಯಪಾನ ಚಟಕ್ಕೆ ಒಳಗಾಗಿ ತಮ್ಮ ಕುಟುಂಬಕ್ಕೆ ತಮ್ಮಿಂದಲೇ ಕುತ್ತು ತಂದುಕೊಳ್ಳುತ್ತಾರೆ. ಮಿತಿ ಇಲ್ಲದೆ ಕುಡಿದರೆ ರಸ್ತೆಯಲ್ಲಿ ಬೀಳುವುದು, ರಸ್ತೆ ಅಪಘಾತಗಳು ಸಂಭವಿಸುತ್ತವೆ. ಹೀಗೆ ಕುಡಿದು ಕುಡಿದು ಮುಂದೊಂದು ದಿನ ಹೃದಯಾಘಾತ, ಮಿದುಳಿನ ಸಮಸ್ಯೆ, ಹೊಟ್ಟೆ ಮತ್ತು ಲಿವರ್‌ನ ಕಾಯಿಲೆಗಳು ತಲೆದೋರುತ್ತವೆ.

ಬೈಬಲ್‌ ಏನು ಹೇಳುತ್ತೆ? ತಿನ್ನುವುದರಲ್ಲಿ ಮದ್ಯಪಾನ ಮಾಡುವುದರಲ್ಲಿ ಮಿತಿ ಇರಬೇಕು ಅಂತ ದೇವರು ನಮ್ಮಿಂದ ಬಯಸುತ್ತಾನೆ. (ಜ್ಞಾನೋಕ್ತಿ 23:20; 1 ತಿಮೊಥೆಯ 3:2, 3, 8) ಎಲ್ಲಾದರೂ ನಮ್ಮಲ್ಲಿ ಸ್ವನಿಯಂತ್ರಣದ ಕೊರತೆ ಇದ್ದರೆ ದೇವರಿಂದ ತಿರಸ್ಕೃತರಾಗುವುದು ಖಂಡಿತ. ಬೈಬಲ್‌ ಹೇಳುವುದು: “ದ್ರಾಕ್ಷಾರಸವು ಪರಿಹಾಸ್ಯ ಮದ್ಯವು ಕೂಗಾಟ; ಇವುಗಳಿಂದ ಓಲಾಡುವವನು ಜ್ಞಾನಿಯಲ್ಲ.”—ಜ್ಞಾನೋಕ್ತಿ 20:1.

ಮದ್ಯಪಾನ ಒಬ್ಬ ವ್ಯಕ್ತಿ ತನ್ನಲ್ಲಿರುವ ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಹೋಶೇಯ 4:11 ತಿಳಿಸುತ್ತೆ “ದ್ರಾಕ್ಷಾರಸಮದ್ಯಗಳು ಬುದ್ಧಿಯನ್ನು ಕೆಡಿಸುತ್ತವೆ.” ಇದರ ಕಹಿನೆರಳಿಗೆ ಸಿಲುಕಿದ ಜಾನ್‌ * ಒಂದು ಪಾಠ ಕಲಿಯುತ್ತಾನೆ. ತನ್ನ ಹೆಂಡತಿಯೊಂದಿಗೆ ಜಗಳವಾಡಿದ ನಂತರ ಹೋಟೆಲ್‌ ಒಂದಕ್ಕೆ ಹೋಗಿ ಚೆನ್ನಾಗಿ ಕುಡಿಯುತ್ತಾನೆ. ನಂತರ ವ್ಯಭಿಚಾರ ಮಾಡುತ್ತಾನೆ. ತನ್ನ ಹೀನವಾದ ಈ ಕೃತ್ಯದ ಬಗ್ಗೆ ಅವನು ಮನನೊಂದು, ಇನ್ನೆಂದಿಗೂ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ದೃಢತೀರ್ಮಾನ ಮಾಡುತ್ತಾನೆ. ಮಿತಿಮೀರಿ ಮದ್ಯಪಾನ ಮಾಡುವುದು ನಮ್ಮನ್ನು ದೈಹಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಕತ್ತಲೆಗೆ ತಳ್ಳುತ್ತದೆ. ಬೈಬಲ್‌ ಹೇಳುವುದು ಕುಡುಕರಿಗೆ ಅನಂತ ಜೀವನ ಇಲ್ಲ ಎಂದು.—1 ಕೊರಿಂಥ 6:9, 10.

ಯಾವಾಗ ಮದ್ಯಪಾನ ಮಾಡಬಾರದು?

“ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”—ಜ್ಞಾನೋಕ್ತಿ 22:3.

ಇದು ನಿಮಗೆ ಮಹತ್ವದ್ದೇಕೆ? ವಿಶ್ವಕೋಶ ಹೇಳುವುದು: “ಮದ್ಯಪಾನ ಬಹಳ ಶಕ್ತಿ ಇರುವ ಅಮಲೌಷಧ.” ಆದ್ದರಿಂದ ಕೆಲವೊಮ್ಮೆ ಸ್ವಲ್ಪ ಮದ್ಯಪಾನ ಸಹ ಒಳಿತಲ್ಲ.

ಬೈಬಲ್‌ ಏನು ಹೇಳುತ್ತೆ? ಅನೇಕ ಸಲ ಜನ ಹಾನಿಯನ್ನು ತಾವಾಗೇ ಆಮಂತ್ರಿಸೋದು ಯಾವಾಗೆಂದರೆ, ಸೂಕ್ತವಲ್ಲದ ಸಮಯ-ಸಂದರ್ಭದಲ್ಲಿ ಕುಡಿಯುವುದರ ಮೂಲಕ. “ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು” ಎನ್ನುತ್ತೆ ಬೈಬಲ್‌. (ಪ್ರಸಂಗಿ 3:1) ಅಂದರೆ ಮದ್ಯಪಾನ ಮಾಡುವುದಕ್ಕೂ ಮಾಡದೆ ಇರುವುದಕ್ಕೂ ಸಮಯ-ಸಂದರ್ಭ ಇದೆ. ಉದಾಹರಣೆಗೆ ಕೆಲವು ದೇಶಗಳಲ್ಲಿ ಮದ್ಯಪಾನ ಮಾಡುವುದಕ್ಕೆ ವಯೋಮಿತಿ ನಿಗದಿಯಾಗಿರುವುದಾದರೆ ಆ ವಯಸ್ಸಿಗಿನ್ನೂ ಬಾರದಿರುವವರು ಮದ್ಯಪಾನ ಮಾಡಬಾರದು. ಮದ್ಯಪಾನ ಚಟದಿಂದ ಹೊರಬರಲು ಪ್ರಯತ್ನಿಸುತ್ತಾ ಇರುವವರು ಅಥವಾ ಅನಾರೋಗ್ಯ ಸಮಸ್ಯೆಯಿಂದಾಗಿ ಔಷಧ ತೆಗೆದುಕೊಳ್ಳುತ್ತಿರುವವರು ಮದ್ಯಪಾನ ಮಾಡಬಾರದು. ಕೆಲಸಕ್ಕೆ ಹೋಗುವ ಮುಂಚೆ ಅಥವಾ ಕೆಲಸ ಮಾಡುತ್ತಿರುವಾಗ ಅದರಲ್ಲೂ ದೊಡ್ಡ ದೊಡ್ಡ ಯಂತ್ರಗಳನ್ನು ಉಪಯೋಗಿಸಿ ಕೆಲಸ ಮಾಡುತ್ತಿರುವಾಗ ಮದ್ಯಪಾನ ಮಾಡದಿರುವುದು ಒಳ್ಳೇದು. ವಿವೇಚನೆಯುಳ್ಳವರು ಜೀವ ಮತ್ತು ಆರೋಗ್ಯವನ್ನು ಅಮೂಲ್ಯವೆಂದೆಣಿಸಿ ದೇವರಿಂದ ಬಂದ ಸುದಾನ ಎಂದು ಪರಿಗಣಿಸುತ್ತಾರೆ. (ಕೀರ್ತನೆ 36:9) ಮದ್ಯಪಾನದ ಬಗ್ಗೆ ಬೈಬಲ್‌ ಕೊಡುವ ಮಾರ್ಗದರ್ಶನವನ್ನು ಪಾಲಿಸುತ್ತಾ ನಾವು ಜೀವವೆಂಬ ಸುದಾನಕ್ಕೆ ಗೌರವ ತೋರಿಸುತ್ತೇವೆ. ◼ (g13-E 08)

[ಪಾದಟಿಪ್ಪಣಿಗಳು]

^ ಈ ಲೇಖನದಲ್ಲಿ ದ್ರಾಕ್ಷಾರಸ ಅಥವಾ ದ್ರಾಕ್ಷಾಮದ್ಯ ಎನ್ನುವುದು ಎಲ್ಲ ತರಹದ ಮದ್ಯಸಾರವನ್ನು ಸೂಚಿಸುತ್ತೆ.

^ ಹೆಸರು ಬದಲಿಸಲಾಗಿದೆ.

[ಪುಟ 14ರಲ್ಲಿರುವ ಚಿತ್ರ]