ಪ್ರಸಂಗಿ 8:1-17

  • ಅಪರಿಪೂರ್ಣ ಮನುಷ್ಯರ ಆಳ್ವಿಕೆಯ ಕೆಳಗೆ (1-17)

    • ರಾಜನ ಅಪ್ಪಣೆಗಳಿಗೆ ವಿಧೇಯನಾಗು (2-4)

    • ಮನುಷ್ಯ ಅಧಿಕಾರ ನಡಿಸೋದು ಹಾನಿಕರ (9)

    • ತಕ್ಷಣ ಶಿಕ್ಷೆ ಸಿಗದಿದ್ದಾಗ (11)

    • ತಿಂದು ಕುಡಿದು ಸಂತೋಷವಾಗಿರು (15)

8  ವಿವೇಕಿ ತರ ಯಾರಿದ್ದಾರೆ? ಒಂದು ಸಮಸ್ಯೆಗೆ ಪರಿಹಾರ* ಏನಂತ ವಿವೇಕಿಯನ್ನ ಬಿಟ್ಟು ಬೇರೆ ಯಾರಿಗೆ ಗೊತ್ತು? ಒಬ್ಬನಲ್ಲಿ ವಿವೇಕ ಇದ್ರೆ ಅದು ಅವನ ಮುಖಕ್ಕೆ ಕಳೆ ತರುತ್ತೆ, ಒರಟು ಮುಖವನ್ನ ನಗುವಿಂದ ಅರಳಿಸುತ್ತೆ.  ನಾನು ಹೇಳೋದು ಏನಂದ್ರೆ “ದೇವರಿಗೆ ಮಾಡಿದ ಆಣೆನ+ ಮನಸ್ಸಲ್ಲಿಟ್ಟು ರಾಜನ ಅಪ್ಪಣೆಗಳಿಗೆ ವಿಧೇಯನಾಗು.+  ನೀನು ರಾಜನ ಸನ್ನಿಧಿಯಲ್ಲಿ ಇರುವಾಗ ಅವಸರಪಟ್ಟು ಅಲ್ಲಿಂದ ಹೋಗಬೇಡ.+ ಕೆಟ್ಟದ್ದು ಯಾವುದೇ ಇದ್ರೂ ಅದ್ರ ಪಕ್ಷವಹಿಸಬೇಡ.+ ಯಾಕಂದ್ರೆ ರಾಜ ತಾನು ನೆನಸಿದ್ದನ್ನ ಮಾಡಿಬಿಡ್ತಾನೆ.  ರಾಜ ಹೇಳಿದ್ದೇ ನಡಿಯೋದ್ರಿಂದ+ ‘ನೀನು ಯಾಕೆ ಹೀಗೆ ಮಾಡ್ತಿದ್ದೀಯ’ ಅಂತ ಅವನನ್ನ ಕೇಳೋಕೆ ಯಾರಿಂದಾದ್ರೂ ಆಗುತ್ತಾ?”  ಆಜ್ಞೆಗನುಸಾರ ನಡೆಯುವವನಿಗೆ ಹಾನಿ ಆಗಲ್ಲ.+ ಪ್ರತಿಯೊಂದು ವಿಷ್ಯವನ್ನ ಯಾವ ಸಮಯದಲ್ಲಿ, ಯಾವ ತರ ಮಾಡಬೇಕಂತ ವಿವೇಕಿಗೆ ಗೊತ್ತಿರುತ್ತೆ.+  ಮನುಷ್ಯರ ಸಮಸ್ಯೆಗಳು ಲೆಕ್ಕ ಇಲ್ಲದಷ್ಟು ಇರೋದ್ರಿಂದ ಪ್ರತಿಯೊಂದು ವಿಷ್ಯವನ್ನ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಮಾಡಬೇಕು.+  ನಾಳೆ ಏನಾಗುತ್ತೆ ಅಂತ ಯಾರಿಗೂ ಗೊತ್ತಿಲ್ಲ ಅಂದ್ಮೇಲೆ ಅದು ಹೇಗೆ ಆಗುತ್ತೆ ಅಂತ ಹೇಳೋಕೆ ಯಾರಿಗಾದ್ರೂ ಆಗುತ್ತಾ?  ಒಬ್ಬನಿಗೆ ತನ್ನ ಜೀವಶಕ್ತಿ* ಮೇಲೆ ಹೇಗೆ ಹಿಡಿತ ಇಲ್ವೋ ಹಾಗೇ ತನ್ನ ಸಾವಿನ ದಿನದ ಮೇಲೂ ಹಿಡಿತ ಇಲ್ಲ.+ ಯುದ್ಧ ನಡಿತಿರೋವಾಗ ಹೇಗೆ ಒಬ್ಬ ಸೈನಿಕ ಅದನ್ನ ಬಿಟ್ಟುಬರೋಕೆ ಆಗಲ್ವೋ ಹಾಗೇ ಕೆಟ್ಟದ್ದನ್ನ ಮಾಡುವವನು ಅದ್ರ ಪರಿಣಾಮಗಳಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ.*  ನಾನು ಇದೆಲ್ಲವನ್ನ ತಿಳ್ಕೊಂಡಿದ್ದು ಭೂಮಿ ಮೇಲೆ* ನಡಿತಿರೋ ಎಲ್ಲದಕ್ಕೂ ಗಮನಕೊಟ್ಟಾಗಲೇ. ಆ ಸಮಯದಲ್ಲೆಲ್ಲ ಮನುಷ್ಯ ಮನುಷ್ಯನ ಮೇಲೆ ಅಧಿಕಾರ ನಡೆಸಿ ಹಾನಿ ಮಾಡಿದ್ದಾನೆ ಅನ್ನೋದನ್ನ ನೋಡಿದೆ.+ 10  ಪವಿತ್ರ ಸ್ಥಳಕ್ಕೆ ಹೋಗ್ತಾ ಬರ್ತಾ ಇದ್ದ ಕೆಟ್ಟವ್ರನ್ನ ಸಮಾಧಿ ಮಾಡಿದ್ದನ್ನ ನೋಡಿದೆ. ಆದ್ರೆ ಅವರು ಯಾವ ಪಟ್ಟಣದಲ್ಲಿ ಕೆಟ್ಟ ಕೆಲಸಗಳನ್ನ ಮಾಡಿದ್ರೋ ಆ ಪಟ್ಟಣದ ಜನ್ರು ಅವ್ರನ್ನ ಬೇಗ ಮರೆತುಬಿಟ್ರು.+ ಇದೂ ವ್ಯರ್ಥ. 11  ಕೆಟ್ಟದ್ದನ್ನ ಮಾಡಿದಾಗ ತಕ್ಷಣ ಶಿಕ್ಷೆ ಸಿಗದ ಕಾರಣ+ ಮನುಷ್ಯರು ಕೆಟ್ಟದ್ದನ್ನ ಮಾಡೋಕೆ ಇನ್ನೂ ಧೈರ್ಯ ಮಾಡ್ತಾರೆ.+ 12  ಪಾಪಿ ನೂರು ಕೆಟ್ಟ ಕೆಲಸ ಮಾಡಿ ತುಂಬ ಕಾಲ ಬದುಕಬಹುದು. ಆದ್ರೆ ಒಳ್ಳೇದಾಗೋದು ಸತ್ಯ ದೇವರಿಗೆ ಭಯ ಪಡುವವ್ರಿಗೇ ಅಂತ ನನಗೆ ಗೊತ್ತು. ಯಾಕಂದ್ರೆ ಅವರು ಆತನಿಗೆ ನಿಜವಾಗ್ಲೂ ಭಯಪಡ್ತಾರೆ.+ 13  ಆದ್ರೆ ಕೆಟ್ಟವನಿಗೆ ಒಳ್ಳೇದಾಗಲ್ಲ.+ ನೆರಳಿನ ತರ ಕಣ್ಮರೆಯಾಗೋ ಅವನ ಜೀವನವನ್ನ ಜಾಸ್ತಿ ಮಾಡೋಕೆ ಸಹ ಅವನಿಂದ ಆಗಲ್ಲ.+ ಯಾಕಂದ್ರೆ ಅವನು ದೇವರಿಗೆ ಭಯಪಡಲ್ಲ. 14  ಭೂಮಿ ಮೇಲೆ ನಡಿಯೋ ವ್ಯರ್ಥ* ವಿಷ್ಯ ಒಂದಿದೆ. ಅದೇನಂದ್ರೆ ನೀತಿವಂತರನ್ನ ಕೆಟ್ಟ ಕೆಲಸ ಮಾಡಿದವ್ರ ತರ ನೋಡ್ತಾರೆ,+ ಕೆಟ್ಟವರನ್ನ ನೀತಿಯಿಂದ ನಡ್ಕೊಂಡವ್ರ ತರ ನೋಡ್ತಾರೆ.+ ಇದೂ ವ್ಯರ್ಥ ಅಂತ ನನ್ನ ಅನಿಸಿಕೆ. 15  ಹಾಗಾಗಿ ಮನುಷ್ಯ ಸಂತೋಷದಿಂದ ಇರಬೇಕನ್ನೋದೇ ನನ್ನ ಕಿವಿಮಾತು.+ ಅವನಿಗೆ ಸತ್ಯ ದೇವರು ಈ ಭೂಮಿ ಮೇಲೆ ಕೊಟ್ಟಿರೋ ಜೀವಮಾನದಲ್ಲೆಲ್ಲ ಕಷ್ಟಪಟ್ಟು ಕೆಲಸ ಮಾಡ್ತಾ ತಿಂದು, ಕುಡಿದು, ಸಂತೋಷವಾಗಿ ಇರಬೇಕು.+ ಇದಕ್ಕಿಂತ ಉತ್ತಮವಾದದ್ದು ಬೇರೊಂದಿಲ್ಲ. 16  ನಾನು ಹಗಲೂರಾತ್ರಿ ನಿದ್ದೆ ಮಾಡದೆ* ವಿವೇಕ ಪಡ್ಕೊಬೇಕಂತ ಮತ್ತು ಭೂಮಿ ಮೇಲೆ ನಡಿಯೋ ಎಲ್ಲ ಕೆಲಸಗಳಿಗೆ ಗಮನಕೊಡಬೇಕಂತ ತೀರ್ಮಾನ ಮಾಡ್ದೆ.+ 17  ಸತ್ಯ ದೇವರ ಎಲ್ಲ ಕೆಲಸಗಳಿಗೆ ಗಮನಕೊಟ್ಟೆ, ಆಮೇಲೆ ನಾನು ತಿಳ್ಕೊಂಡಿದ್ದು ಏನಂದ್ರೆ ಆಕಾಶದ ಕೆಳಗೆ ನಡಿಯೋ ವಿಷ್ಯಗಳನ್ನ ಮನುಷ್ಯರಿಂದ ಅರ್ಥ ಮಾಡ್ಕೊಳ್ಳೋಕೆ ಆಗಲ್ಲ.+ ಅವರು ಎಷ್ಟೇ ಪ್ರಯತ್ನಪಟ್ರೂ ಅದು ಅವ್ರಿಂದ ಆಗಲ್ಲ. ಅವುಗಳನ್ನ ತಿಳ್ಕೊಳ್ಳುವಷ್ಟು ವಿವೇಕ ತಮ್ಮಲ್ಲಿದೆ ಅಂತ ಹೇಳ್ಕೊಂಡ್ರೂ ಅವುಗಳನ್ನ ನಿಜವಾಗ್ಲೂ ಅರ್ಥ ಮಾಡ್ಕೊಳ್ಳೋಕೆ ಅವ್ರಿಂದಾಗಲ್ಲ!+

ಪಾದಟಿಪ್ಪಣಿ

ಅಥವಾ “ಒಂದು ವಿಷ್ಯದ ಅರ್ಥವಿವರಣೆ.”
ಅಥವಾ “ಉಸಿರು; ಗಾಳಿ.”
ಬಹುಶಃ, “ಕೆಟ್ಟವನನ್ನ ಅವನ ಕೆಟ್ಟ ಕೆಲಸಗಳು ರಕ್ಷಿಸಲ್ಲ.”
ಅಕ್ಷ. “ಸೂರ್ಯನ ಕೆಳಗೆ.”
ಅಥವಾ “ನಿರಾಶೆಗೊಳಿಸೋ.”
ಬಹುಶಃ, “ಜನ ಹಗಲೂರಾತ್ರಿ ನಿದ್ದೆಗೆಟ್ಟು.”