ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಹಿಳೆಯರ ಸುರಕ್ಷತೆ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಮಹಿಳೆಯರ ಸುರಕ್ಷತೆ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಇವತ್ತು ಕೋಟ್ಯಾಂತರ ಹೆಂಗಸರ ಮತ್ತು ಪುಟ್ಟ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆಗ್ತಿದೆ. ನಿಮಗೂ ಹೀಗಾಗಿದೆಯಾ? ಹಾಗಾದ್ರೆ ನಿಮಗೆ ನೆಮ್ಮದಿ ಕೊಡೋ ವಿಷ್ಯ ಇಲ್ಲಿದೆ. ನೀವು ಸುರಕ್ಷಿತವಾಗಿರಬೇಕು ಅನ್ನೋದೇ ದೇವರ ಇಷ್ಟ. ಈಗ ನಡೀತಿರೋ ಎಲ್ಲಾ ದೌರ್ಜನ್ಯನ ದೇವರು ತುಂಬಾ ಬೇಗ ತೆಗೆದುಹಾಕ್ತಾನೆ. ಅದು ಹೇಗೆ ಅಂತ ತಿಳ್ಕೊಳ್ಳೋಣ.

 “ಚಿಕ್ಕವಳಿದ್ದಾಗ ನನ್ನ ಅಣ್ಣ ನನ್ನನ್ನ ಪ್ರತಿದಿನ ಬಾಯಿಗೆ ಬಂದ ಹಾಗೆ ಬೈತಿದ್ದ, ಹೊಡೀತಿದ್ದ. ಮದುವೆ ಆದಮೇಲೆ ಅತ್ತೆ ಕಾಟ ಶುರುವಾಯ್ತು. ಅತ್ತೆ-ಮಾವ ನನ್ನನ್ನ ಮನೆ ಕೆಲಸದವಳ ತರ ನೋಡ್ತಿದ್ರು. ಇದನ್ನೆಲ್ಲಾ ನೋಡಿದಾಗ ಎಷ್ಟೋ ಸಲ ಸತ್ತೋಗಬೇಕು ಅಂತ ಅನಿಸ್ತಿತ್ತು.”—ಮಧು, a ಭಾರತ.

 “ಹೆಣ್ಮಕ್ಕಳ ಮೇಲೆ ದೌರ್ಜನ್ಯ ದಿನದಿಂದ ದಿನಕ್ಕೆ ಎಲ್ಲಾ ಕಡೆ ಜಾಸ್ತಿ ಆಗ್ತಿದೆ” ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಪ್ರತಿ ಮೂವರು ಸ್ತ್ರೀಯರಲ್ಲಿ ಒಬ್ಬರ ಮೇಲೆ ದೈಹಿಕ ಅಥವಾ ಲೈಂಗಿಕ ದೌರ್ಜನ್ಯ ಆಗ್ತಿದೆ ಅಂತ ವರದಿಗಳು ಹೇಳುತ್ತೆ.

 ಈಗಾಗಲೇ ನಿಮ್ಮ ಮೇಲೆ ದೌರ್ಜನ್ಯ ಆಗಿದ್ರೆ ಮತ್ತೆ ಇದೇ ತರ ಆಗುತ್ತೇನೋ ಅನ್ನೋ ಭಯ ನಿಮ್ಮನ್ನ ಕಾಡ್ತಾ ಇರಬಹುದು. ಇಡೀ ಲೋಕ ಹೆಂಗಸರನ್ನ ಕೀಳಾಗಿ ನೋಡುತ್ತೆ. ಹೆಂಗಸರು ಅನ್ನೋ ಕಾರಣಕ್ಕೆ ಜನ ಅವರ ಮೇಲೆ ದೌರ್ಜನ್ಯ ಮಾಡ್ತಾರೆ. ಇದ್ರ ಬಗ್ಗೆ ಹೆಚ್ಚಿನವರು ತಲೆಕೆಡಿಸಿಕೊಳ್ಳಲ್ಲ. ಆದ್ರೆ ದೇವರಿಗೆ ಹೇಗೆ ಅನಿಸುತ್ತೆ?

ಸ್ತ್ರೀಯರು ಸುರಕ್ಷಿತವಾಗಿರಬೇಕು ಅನ್ನೋದು ದೇವರ ಇಷ್ಟ ಅಂತ ಬೈಬಲ್‌ನಿಂದ ಗೊತ್ತಾಗುತ್ತೆ.

ಮಹಿಳೆಯರ ಬಗ್ಗೆ ದೇವರಿಗೆ ಹೇಗನಿಸುತ್ತೆ?

 ವಚನ: “[ದೇವರು] ಗಂಡು ಮತ್ತು ಹೆಣ್ಣನ್ನ ಸೃಷ್ಟಿ ಮಾಡಿದನು.”—ಆದಿಕಾಂಡ 1:27.

 ಇದ್ರ ಅರ್ಥ: ದೇವರು ಗಂಡಸರನ್ನ ಮಾತ್ರ ಅಲ್ಲ, ಹೆಂಗಸರನ್ನೂ ಸೃಷ್ಟಿಮಾಡಿದನು. ದೇವರ ದೃಷ್ಟಿಲಿ ಅವರಿಬ್ಬರೂ ಒಂದೇ. ಗಂಡಸರಿಗೆ ಹೇಗೆ ಗೌರವ ಕೊಡಬೇಕೋ ಹಾಗೇ ಹೆಂಗಸರಿಗೂ ಗೌರವ ಕೊಡಬೇಕು. ಅದೂ ಅಲ್ಲದೇ, ಗಂಡ “ತನ್ನನ್ನ ಪ್ರೀತಿಸೋ ತರಾನೇ ತನ್ನ ಹೆಂಡತಿಯನ್ನ ಪ್ರೀತಿಸಬೇಕು” ಅಂತ ದೇವರು ಇಷ್ಟಪಡ್ತಾನೆ. ತಾನು ಹೇಳಿದ ಹಾಗೇ ಅವಳು ಕೇಳಬೇಕು ಅಂತ ಒತ್ತಾಯ ಮಾಡೋದಾಗಲಿ ಅಥವಾ ಅವಳನ್ನ ಬೈಯೋದು, ಹೊಡೆಯೋದಾಗಲಿ ದೇವರಿಗೆ ಒಂಚೂರೂ ಇಷ್ಟ ಆಗಲ್ಲ. (ಎಫೆಸ 5:33; ಕೊಲೊಸ್ಸೆ 3:19) ಇದ್ರಿಂದ ಮಹಿಳೆಯರ ಸುರಕ್ಷತೆ ದೇವರಿಗೆ ತುಂಬಾ ಮುಖ್ಯ ಅಂತ ಗೊತ್ತಾಗುತ್ತೆ.

 “ಚಿಕ್ಕವಳಿದ್ದಾಗ ನನ್ನ ಸ್ವಂತ ಸಂಬಂಧಿಕರೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ರು. ನನಗೆ 17 ವಯಸ್ಸಿದ್ದಾಗ ನನ್ನ ಬಾಸ್‌, ಅವರ ಜೊತೆ ಸೆಕ್ಸ್‌ ಮಾಡ್ಲಿಲ್ಲ ಅಂದ್ರೆ ಕೆಲಸದಿಂದ ತೆಗೆದುಹಾಕ್ತೀನಿ ಅಂತ ಹೆದರಿಸಿದ್ರು. ದೊಡ್ಡವಳಾದ ಮೇಲೆ ನನ್ನ ಗಂಡ, ಅಪ್ಪ-ಅಮ್ಮ, ಅಕ್ಕಪಕ್ಕದವರೆಲ್ಲ ನನ್ನನ್ನ ಕಾಲಿನ ಕಸದ ತರ ನೋಡ್ತಿದ್ರು. ಆದ್ರೆ ಆಮೇಲೆ ನಂಗೆ ಸೃಷ್ಟಿಕರ್ತ ಯೆಹೋವನ b ಬಗ್ಗೆ ಗೊತ್ತಾಯ್ತು. ಆತನು ಹೆಂಗಸರಿಗೆ ತುಂಬಾ ಗೌರವ ಕೊಡ್ತಾನೆ ಅಂತ ಗೊತ್ತಾದಾಗ ಆತನು ನನ್ನನ್ನೂ ಪ್ರೀತಿಸ್ತಾನೆ, ತುಂಬಾ ಅಮೂಲ್ಯವಾಗಿ ನೋಡ್ತಾನೆ ಅಂತ ಅರ್ಥಮಾಡ್ಕೊಂಡೆ.”—ಮರಿಯಾ, ಅರ್ಜೆಂಟೀನಾ.

ಈ ನೋವಿಂದ ಹೊರಗೆ ಬರೋಕೆ ಏನು ಮಾಡಬಹುದು?

 ವಚನ: “ಒಡಹುಟ್ಟಿದವನಿಗಿಂತ ಜಾಸ್ತಿ ಪ್ರೀತಿಸೋ ಸ್ನೇಹಿತನೂ ಇರ್ತಾನೆ.”—ಜ್ಞಾನೋಕ್ತಿ 18:24.

 ಇದ್ರ ಅರ್ಥ: ಈ ನೋವಿಂದ ಹೊರಗೆ ಬರೋಕೆ ಒಬ್ಬ ಒಳ್ಳೇ ಫ್ರೆಂಡ್‌ ನಿಮಗೆ ಸಹಾಯ ಮಾಡಬಹುದು. ಹಾಗಾಗಿ ನೀವು ನಂಬೋ ಒಬ್ಬ ಫ್ರೆಂಡ್‌ ಹತ್ರ ನಿಮ್ಮ ಭಾವನೆನ ಹೇಳೋಕ್ಕಾಗುತ್ತಾ ಅಂತ ನೋಡಿ. ಹೀಗೆ ನಿಮ್ಮ ಮನಸ್ಸಿನ ಭಾರವನ್ನ ಇಳಿಸ್ಕೊಬಹುದು.

 ನನ್ನ ಮೇಲೆ ಲೈಂಗಿಕ ದೌರ್ಜನ್ಯ ಆಗಿತ್ತು ಅಂತ ಸುಮಾರು 20 ವರ್ಷಗಳ ತನಕ ನಾನು ಯಾರಿಗೂ ಹೇಳಿರಲಿಲ್ಲ. ಆ ನೋವನ್ನ ಮನಸ್ಸಲ್ಲೇ ಅದುಮಿಟ್ಕೊಂಡಿದ್ದೆ. ಇದ್ರಿಂದ ನನ್ನ ಜೀವನದಲ್ಲಿ ಸಂತೋಷ ಕಣ್ಮರೆಯಾಗಿತ್ತು, ಕುಗ್ಗಿಹೋಗಿದ್ದೆ. ಕೊನೆಗೂ ಒಂದಿನ ನನ್ನ ಮನಸ್ಸಲ್ಲಿ ಇರೋದನ್ನೆಲ್ಲಾ ಒಬ್ಬರ ಹತ್ರ ಹೇಳ್ಕೊಂಡೆ. ಆಗ ನನ್ನ ಮನಸ್ಸು ತುಂಬಾ ಹಗುರ ಆಯ್ತು.”—ಎಲಿಫ್‌, ಟರ್ಕಿ.

 ವಚನ: “ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ. ಯಾಕಂದ್ರೆ ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ.”—1 ಪೇತ್ರ 5:7.

 ಇದ್ರ ಅರ್ಥ: ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲಾ ದೇವರ ಹತ್ರ ಹೇಳ್ಕೊಳ್ಳಿ, ನೀವು ಪ್ರಾರ್ಥನೆ ಮಾಡಿದಾಗ ಆತನು ಖಂಡಿತ ಕೇಳಿಸಿಕೊಳ್ತಾನೆ. (ಕೀರ್ತನೆ 55:22; 65:2) ದೇವರಿಗೆ ನಿಮ್ಮ ಮೇಲೆ ಕಾಳಜಿ ಇರೋದ್ರಿಂದಾನೇ ಆತನು ನಿಮ್ಮ ಬಗ್ಗೆ ತುಂಬಾ ಚಿಂತಿಸ್ತಾನೆ, ನಿಮ್ಮನ್ನ ಅಮೂಲ್ಯವಾಗಿ ನೋಡ್ತಾನೆ.

 “ಯೆಹೋವನ ಬಗ್ಗೆ ಕಲಿತಾ ಕಲಿತಾ ನನ್ನ ಮನಸ್ಸಿನ ಮೇಲೆ ಆಗಿದ್ದ ಗಾಯ ವಾಸಿಯಾಗೋಕೆ ಶುರುವಾಯ್ತು. ಈಗ ನಾನು ಆತನ ಹತ್ರ ಮನಸ್ಸು ಬಿಚ್ಚಿ ಮಾತಾಡ್ತೀನಿ. ಆತನು ನನ್ನನ್ನ ಚೆನ್ನಾಗಿ ಅರ್ಥಮಾಡ್ಕೊಳ್ಳೋ ಬೆಸ್ಟ್‌ ಫ್ರೆಂಡ್‌ ಆಗಿದ್ದಾನೆ.”—ಆ್ಯನಾ, ಬೆಲೀಜ್‌.

ಮಹಿಳೆಯರ ಮೇಲೆ ಆಗ್ತಿರೋ ದೌರ್ಜನ್ಯಕ್ಕೆ ಕೊನೆ ಇದ್ಯಾ?

 ವಚನ: “ಯೆಹೋವನೇ, ನೀನು . . . ಅನಾಥರಿಗೂ ಜಜ್ಜಿಹೋದವರಿಗೂ ನ್ಯಾಯ ಕೊಡ್ತೀಯ. ಆಗ ಮಣ್ಣಿಂದ ಆದ ಮಾಮೂಲಿ ಮನುಷ್ಯ ಅವ್ರನ್ನ ಹೆದರಿಸೋಕೆ ಆಗಲ್ಲ.”—ಕೀರ್ತನೆ 10:17, 18.

 ಇದ್ರ ಅರ್ಥ: ಮಹಿಳೆಯರ ಮೇಲೆ ಆಗ್ತಿರೋ ದೌರ್ಜನ್ಯ ಮತ್ತು ಎಲ್ಲಾ ರೀತಿಯ ಹಿಂಸೆ, ಅನ್ಯಾಯಕ್ಕೆ ದೇವರು ಕೊನೆ ತರ್ತಾನೆ.

 “ಹೆಂಗಸರ ಮತ್ತು ಹೆಣ್ಣು ಮಕ್ಕಳ ಮೇಲೆ ಆಗ್ತಿರೋ ದೌರ್ಜನ್ಯನ ಯೆಹೋವ ದೇವರು ತುಂಬಾ ಬೇಗ ತೆಗೆದುಹಾಕ್ತಾನೆ ಅಂತ ಗೊತ್ತಾದಾಗ ನನ್ನ ಮನಸ್ಸು ನಿರಾಳ ಆಯ್ತು. ಈಗ ನಾನು ತುಂಬಾ ನೆಮ್ಮದಿಯಾಗಿ ಇದ್ದೀನಿ.”—ರಾಬರ್ಟ, ಮೆಕ್ಸಿಕೋ.

 ಮನಸ್ಸಿಗೆ ನೆಮ್ಮದಿ ಕೊಡೋ ಇನ್ನೂ ಎಷ್ಟೋ ವಿಷಯಗಳು ಬೈಬಲಲ್ಲಿದೆ. ಅವುಗಳನ್ನ ನಾವು ಯಾಕೆ ನಂಬಬೇಕು ಮತ್ತು ಯೆಹೋವನ ಸಾಕ್ಷಿಗಳು ಬೈಬಲಿಂದ ಜನರಿಗೆ ಹೇಗೆ ಸಹಾಯ ಮಾಡ್ತಿದ್ದಾರೆ ಅಂತ ತಿಳ್ಕೊಳ್ಳೋಕೆ ಈ ಕರಪತ್ರ ಕೊಟ್ಟವರ ಹತ್ರ ಮಾತಾಡಿ ಅಥವಾ ನಿಮ್ಮನ್ನ ಭೇಟಿಮಾಡಲು ವಿನಂತಿಸಿ.

 ಈ ಲೇಖನದ ಮುದ್ರಣ ಆವೃತ್ತಿಯನ್ನ ಡೌನ್‌ಲೋಡ್‌ ಮಾಡ್ಕೊಳ್ಳಿ.

a ಹೆಸ್ರು ಬದಲಾಗಿದೆ.

b ದೇವರ ಹೆಸರು ಯೆಹೋವ. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನ ನೋಡಿ