ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದುಕನ್ನೇ ಬದಲಾಯಿಸಿತು ಬೈಬಲ್‌

“ನಾನು ಜೀವನದ ಬಗ್ಗೆ ಗಂಭೀರವಾಗಿ ಯೋಚಿಸಲು ಶುರುಮಾಡಿದೆ”

“ನಾನು ಜೀವನದ ಬಗ್ಗೆ ಗಂಭೀರವಾಗಿ ಯೋಚಿಸಲು ಶುರುಮಾಡಿದೆ”
  • ಜನನ: 1941

  • ದೇಶ: ಆಸ್ಟ್ರೇಲಿಯ

  • ಹಿಂದೆ: ಧೂಮಪಾನ ಮತ್ತು ಕುಡಿತದ ಚಟ

ಹಿನ್ನೆಲೆ:

ಆಸ್ಟ್ರೇಲಿಯದ ವಾರಿಯಾಲ್ಡಾ ಎಂಬ ಸಣ್ಣ ಪಟ್ಟಣದಲ್ಲಿ ನಾನು ಬೆಳೆದೆ. ಚೊಕ್ಕವಾದ ಪಟ್ಟಣ. ಅಪರಾಧಗಳು ಜಾಸ್ತಿ ನಡೆಯುತ್ತಿರಲಿಲ್ಲ. ಅಲ್ಲಿನ ಜನರು ಪಶುಪಾಲನೆ, ವ್ಯವಸಾಯದಂಥ ಕೆಲಸ ಮಾಡುವವರು.

ಹತ್ತು ಜನ ಮಕ್ಕಳಲ್ಲಿ ನಾನೇ ಮೊದಲನೆಯವ. ಕುಟುಂಬದ ಜವಾಬ್ದಾರಿ ಇದ್ದಿದರಿಂದ 13ನೇ ವಯಸ್ಸಿಗೇ ಕೆಲಸಕ್ಕೆ ಹೋಗಬೇಕಾಗಿ ಬಂತು. ವಿದ್ಯಾಭ್ಯಾಸ ಕಡಿಮೆ ಇದ್ದಿದರಿಂದ ನಾನೂ ಗದ್ದೆಕೆಲಸಕ್ಕೆ ಹೋಗುತ್ತಿದ್ದೆ. 15 ವರ್ಷದವನಾದಾಗ ಕುದುರೆಗಳನ್ನು ಪಳಗಿಸುವ ಕೆಲಸಮಾಡುತ್ತಿದ್ದೆ.

ಗದ್ದೆಕೆಲಸದಲ್ಲಿ ಅದರದ್ದೇ ಸವಾಲುಗಳಿದ್ದರೂ ಆ ಕೆಲಸ ಒಂಥರಾ ಚೆನ್ನಾಗಿರುತ್ತಿತ್ತು. ಕೆಲಸದ ವಾತಾವರಣ ನನಗೆ ತುಂಬ ಹಿಡಿಸುತ್ತಿತ್ತು. ರಾತ್ರಿ ಚಳಿಕಾಯಿಸುವುದಕ್ಕೆ ಬೆಂಕಿ ಹಾಕಿ, ಪಕ್ಕದಲ್ಲಿ ಕೂತು ಚಂದ್ರ ನಕ್ಷತ್ರಗಳಿಂದ ತುಂಬಿರುವ ಆಕಾಶವನ್ನು ನೋಡುತ್ತಿದ್ದೆ, ಮುಸ್ಸಂಜೆಯ ತಂಗಾಳಿ ಗಿಡಗಳ ಪರಿಮಳವನ್ನು ಹರಡಿಸುತ್ತಿತ್ತು. ಇದನ್ನೆಲ್ಲಾ ಯಾರೊ ಒಬ್ಬರು ಸೃಷ್ಟಿ ಮಾಡಿದ್ದಾರೆ ಅಂತ ಯೋಚಿಸುತ್ತಿದ್ದದ್ದು ನನ್ನ ಮನಸ್ಸಲ್ಲಿನ್ನೂ ಹಸಿರಾಗಿದೆ. ಇದು ನನ್ನ ಬದುಕಿನ ಒಂದು ಬದಿಯಾದರೆ ಇನ್ನೊಂದು ಕಡೆ ನಾನು ಕೆಟ್ಟ ಅಭ್ಯಾಸಗಳಿಗೆ ಕೈ ಹಾಕಿದೆ. ಕೆಟ್ಟ ಭಾಷೆ ಮಾತಾಡುವುದು ಸಿಗರೇಟ್‌ ಸೇದುವುದು ನನ್ನನ್ನು ಸುಲಭವಾಗಿ ಆವರಿಸಿತು. ಇವೆರಡು ಕೆಟ್ಟ ಚಟ ನನ್ನ ಜೀವನದಲ್ಲಿ ಆಳವಾಗಿ ಬೇರೂರಿತು.

ಹದಿನೆಂಟು ವಯಸ್ಸಾದಾಗ ನಾನು ಸಿಡ್ನಿಗೆ ನೆಲೆಸಲು ಹೋದೆ. ಸೇನೆ ಸೇರಿಕೊಳ್ಳೋಣ ಅಂತ ನೋಡಿದೆ ಆದರೆ ವಿದ್ಯಾಭ್ಯಾಸ ಕಮ್ಮಿ ಇದ್ದಿದರಿಂದ ಸಾಧ್ಯವಾಗಲಿಲ್ಲ. ಬೇರೊಂದು ಕೆಲಸ ನೋಡಿಕೊಂಡು ಸಿಡ್ನಿಯಲ್ಲೇ ಒಂದು ವರ್ಷ ಇದ್ದೆ. ಆಗಲೇ ನನಗೆ ಯೆಹೋವನ ಸಾಕ್ಷಿಗಳ ಪರಿಚಯವಾಗಿದ್ದು. ಅವರ ಸಭೆಗೆ ಹಾಜರಾದೆ. ಅಲ್ಲಿನ ಬೋಧನೆ ಕೇಳಿ ನನಗೆ ಇವರಲ್ಲಿ ಸತ್ಯ ಇದೆ ಅಂತ ಒಪ್ಪಿಕೊಳ್ಳಲು ತುಂಬ ಹೊತ್ತು ಹಿಡಿಯಲಿಲ್ಲ.

ಕೆಲವು ಸಮಯ ಕಳೆದ ಮೇಲೆ ನಮ್ಮೂರಿಗೆ ವಾಪಸ್‌ ಹೋಗೋಣ ಅಂತ ಹೊರಟೆ. ಆದರೆ ತಲುಪಿದ್ದು ಕ್ವೀನ್ಸ್‌ಲ್ಯಾಂಡ್‌ನ ಗೂಂಡಿವಿಂಡಿಗೆ. ಅಲ್ಲೇ ಒಂದು ಕೆಲಸ ಹುಡುಕಿಕೊಂಡು ಮದುವೆ ಸಹ ಆದೆ. ಆದರೆ ಕುಡಿತದ ಚಟ ಅಂಟಿಕೊಂಡಿತು.

ನಮಗೆ ಇಬ್ಬರು ಗಂಡು ಮಕ್ಕಳು. ಮಕ್ಕಳಾದ ಮೇಲೆ ಜವಾಬ್ದಾರಿ ಜಾಸ್ತಿ ಆಯಿತು. ಆವಾಗಿನಿಂದ ನಾನು ಜೀವನದ ಬಗ್ಗೆ ಗಂಭೀರವಾಗಿ ಯೋಚಿಸಲು ಶುರುಮಾಡಿದೆ. ಸಿಡ್ನಿಯಲ್ಲಿದ್ದಾಗ ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಕೇಳಿದ ವಿಷಯಗಳು ನೆನಪಾದವು. ಇನ್ನು ಸುಮ್ಮನೆ ಹೀಗೆ ಇರಬಾರದೆನಿಸಿತು.

ಒಂದು ಹಳೇ ಕಾವಲಿನಬುರುಜು ಸಿಕ್ಕಿತು. ಅದರಲ್ಲಿ ಆಸ್ಟ್ರೇಲಿಯದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ವಿಳಾಸ ಇತ್ತು. ನನಗೆ ಸಹಾಯ ಬೇಕು ಅಂತ ಕೇಳಿ ಪತ್ರ ಬರೆದೆ. ಉತ್ತರವಾಗಿ ಕೋಮಲ ಸ್ವಭಾವದ ತುಂಬ ಪ್ರೀತಿಸುವ ಸಾಕ್ಷಿಯೊಬ್ಬರು ನನ್ನನ್ನು ಭೇಟಿ ಮಾಡಿದರು. ನನಗೆ ಬೈಬಲ್‌ ಕಲಿಸಲು ಆರಂಭಿಸಿದರು.

ನನ್ನ ಬದುಕನ್ನು ಬದಲಾಯಿಸಿತು ಬೈಬಲ್‌:

ಬೈಬಲ್‌ ಕಲಿಯುತ್ತಾ ಹೋದಂತೆ ನನ್ನ ಬದುಕಲ್ಲಿ ತುಂಬ ದೊಡ್ಡ ಬದಲಾವಣೆಗಳನ್ನು ಮಾಡಬೇಕಂತ ಅರಿತೆ. ಒಂದು ಬೈಬಲ್‌ ವಚನ ನನ್ನ ಮನಸ್ಸಲ್ಲಿ ನಾಟಿತು. ಅದು 2 ಕೊರಿಂಥ 7:1 ‘ಶರೀರದ ಪ್ರತಿಯೊಂದು ಕಲ್ಮಶದಿಂದ ನಿಮ್ಮನ್ನು ಶುಚಿಮಾಡಿಕೊಳ್ಳಿರಿ.’

ಧೂಮಪಾನ, ಕುಡಿಕತನ ಬಿಡಬೇಕೆಂದು ತೀರ್ಮಾನ ಮಾಡಿದೆ. ಆ ಬದಲಾವಣೆಗಳನ್ನು ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಬಹಳ ಸಮಯದಿಂದ ನನ್ನ ಬದುಕಲ್ಲಿ ಅವು ಬೆರೆತುಹೋಗಿದ್ದವು. ಏನಾದರೂ ಪರವಾಗಿಲ್ಲ ಇನ್ನು ಮುಂದೆ ದೇವರಿಗೆ ಇಷ್ಟವಾಗುವ ರೀತಿಯಲ್ಲೇ ಇರಬೇಕೆಂದು ತೀರ್ಮಾನಿಸಿದೆ. ನನಗೆ ಸಹಾಯ ಮಾಡಿದ ವಚನ: “ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು ಬಿಟ್ಟು . . . ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ.” (ರೋಮನ್ನರಿಗೆ 12:2) ನನ್ನ ಚಟವನ್ನು ಬಿಡಬೇಕಿದ್ದರೆ ನಾನು ಯೋಚಿಸುವ ರೀತಿಯನ್ನು ಬದಲಾಯಿಸಬೇಕು ಮತ್ತು ದೇವರದನ್ನು ಹೇಗೆ ವೀಕ್ಷಿಸುತ್ತಾನೋ ಹಾಗೇ ನಾನೂ ವೀಕ್ಷಿಸಬೇಕು ಎಂದು ಕಲಿತೆ. ಆತನ ಸಹಾಯದಿಂದ ನನಗಿದ್ದ ಚಟವನ್ನು ಹೊಡೆದೋಡಿಸಲು ಸಹಾಯವಾಯಿತು.

“ನನ್ನ ಚಟವನ್ನು ಬಿಡಬೇಕಿದ್ದರೆ ನಾನು ಯೋಚಿಸುವ ರೀತಿಯನ್ನು ಬದಲಾಯಿಸಬೇಕು”

ಆದರೆ ಕೆಟ್ಟ ಭಾಷೆಯನ್ನು ಬಿಡುವುದು ತುಂಬ ಕಷ್ಟವಾಗಿತ್ತು. “ನಿಮ್ಮ ಬಾಯಿಂದ ಯಾವ ಹೊಲಸು ಮಾತೂ ಹೊರಡದಿರಲಿ” ಅಂತ ಬೈಬಲ್‌ ಎಫೆಸ 4:29ರಲ್ಲಿ ಕೊಡುವ ಕಟ್ಟೆಚ್ಚರ ನನಗೆ ಚೆನ್ನಾಗಿ ನೆನಪಿತ್ತು. ಹಾಗಿದ್ದರೂ ನಾನು ಆಡುವ ಹೊಲಸು ಭಾಷೆ ಮೇಲೆ ಹಿಡಿತ ಬರಲಿಲ್ಲ. ಯೆಶಾಯ 40:26ರಲ್ಲಿರುವ ಮಾತನ್ನು ಮನನ ಮಾಡಿದಾಗ ತುಂಬ ಉಪಕಾರವಾಯಿತು. ತಾರೆಗಳಿಂದ ತುಂಬಿರುವ ಆಕಾಶದ ಕುರಿತು ಆ ವಚನದಲ್ಲಿದೆ: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.” ದೇವರಿಗೆ ವಿಶಾಲವಾದ ವಿಶ್ವವನ್ನು ಸೃಷ್ಟಿಸುವ ಶಕ್ತಿಯಿದೆ ಅಂದ ಮೇಲೆ ಖಂಡಿತ ನನ್ನ ಈ ದುರಭ್ಯಾಸವನ್ನು ಬಿಡಲು ಸಹಾಯ ಮಾಡುತ್ತಾನೆಂದು ನಂಬಿದೆ. ಪಟ್ಟುಬಿಡದ ಪ್ರಾರ್ಥನೆ ಮತ್ತು ಪ್ರಯತ್ನದಿಂದ ನನ್ನ ಮಾತಿನ ಮೇಲೆ ಹಿಡಿತ ಸಾಧಿಸಿದೆ.

ಸಿಕ್ಕಿದ ಪ್ರಯೋಜನಗಳು:

ನಾನು ಪ್ರಾಣಿಗಳನ್ನು ಪಳಗಿಸುವ ಕೆಲಸ ಮಾಡುತ್ತಿದ್ದರಿಂದ ಜನರ ಜತೆ ಮಾತಾಡಲು ನನಗೆ ಅವಕಾಶ ಸಿಗುತ್ತಿರಲಿಲ್ಲ. ನನ್ನ ಸುತ್ತಮುತ್ತಲು ಒಂದೆರಡು ಜನ ಇರುತ್ತಿದ್ದರು ಅಷ್ಟೆ. ನನ್ನ ಅನಿಸಿಕೆಗಳನ್ನು ಹೇಗೆ ಹೇಳಿಕೊಳ್ಳಬಹುದು ಅಂತ ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಕಲಿತೆ. ಈ ತರಬೇತಿ ನನಗೆ ದೇವರ ರಾಜ್ಯದ ಬಗ್ಗೆ ಬೇರೆಯವರ ಜತೆ ಮಾತಾಡಲು ಸಹ ಸಹಾಯ ಮಾಡಿತು.—ಮತ್ತಾಯ 6:9, 10; 24:14.

ಹಲವಾರು ವರ್ಷಗಳಿಂದ ನಾನು ಸಭೆಯಲ್ಲಿ ಹಿರಿಯನಾಗಿ ಸೇವೆ ಮಾಡುತ್ತಿದ್ದೇನೆ. ಸಹಆರಾಧಕರಿಗೆ ನನ್ನಿಂದ ಆದಷ್ಟು ಸಹಾಯ ಮಾಡುವುದನ್ನು ನಾನು ಸುಯೋಗ ಅಂತ ನೆನಸುತ್ತೇನೆ.

ನನ್ನಂಥ ಕಡಿಮೆ ವಿದ್ಯಾಭ್ಯಾಸ ಇರುವ ವ್ಯಕ್ತಿಗೆ ಯೆಹೋವನು ತನ್ನ ಬಗ್ಗೆ ತಿಳಿದುಕೊಳ್ಳುವ ಹಾಗೆ ಮಾಡಿದಕ್ಕೆ ನಾನು ಎಷ್ಟು ಕೃತಜ್ಞತೆ ಹೇಳಿದರೂ ಅದು ಸಾಲದು. (ಯೆಶಾಯ 54:13) ಜ್ಞಾನೋಕ್ತಿ 10:22ರಲ್ಲಿರುವ ಮಾತನ್ನು ನಾನು ಮನದಾಳದಿಂದ ಒಪ್ಪುತ್ತೇನೆ: “ಯೆಹೋವನ ಆಶೀರ್ವಾದವು ಭಾಗ್ಯದಾಯಕ.” (w13-E 08/01)