ಮಾಹಿತಿ ಇರುವಲ್ಲಿ ಹೋಗಲು

ಸಾರ್ವಜನಿಕ ಸೇವೆಯಲ್ಲಿ ನನ್ನ ಹೆಂಡತಿ ತಬಿಥ ಜೊತೆ

ಬದುಕು ಬದಲಾದ ವಿಧ

ದೇವರೇ ಇಲ್ಲ ಅಂತ ನಂಬಿದ್ದೆ

ದೇವರೇ ಇಲ್ಲ ಅಂತ ನಂಬಿದ್ದೆ
  • ಜನನ: 1974

  • ದೇಶ: ಜರ್ಮನ್‌ ಡೆಮಾಕ್ರಟಿಕ್‌ ರಿಪಬ್ಲಿಕ್‌

  • ಹಿನ್ನೆಲೆ: ನಾಸ್ತಿಕ

ಹಿಂದೆ

ಸಾಕ್ಸೋನಿಯದಲ್ಲಿ ಇರುವ ಒಂದು ಹಳ್ಳಿಯಲ್ಲಿ ನಾನು ಹುಟ್ಟಿದೆ. ಮೊದಲು ಸಾಕ್ಸೋನಿಯಕ್ಕಿದ್ದ ಹೆಸರು ಜರ್ಮನ್‌ ಡೆಮಾಕ್ರಟಿಕ್‌ ರಿಪಬ್ಲಿಕ್‌ (ಜಿಡಿಆರ್‌). ನಮ್ಮ ಮನೆ ಒಂದು ಪ್ರೀತಿಯ ಗೂಡು. ಅಪ್ಪಅಮ್ಮ ನನಗೆ ಒಳ್ಳೇ ಬುದ್ಧಿ ಹೇಳಿಕೊಟ್ಟು ಬೆಳೆಸಿದರು. ಜರ್ಮನ್‌ ಡೆಮಾಕ್ರಟಿಕ್‌ ರಿಪಬ್ಲಿಕ್‌ ಒಂದು ಸಮತಾವಾದ ರಾಜ್ಯ. ಹಾಗಾಗಿ ಹೆಚ್ಚಿನವರಿಗೆ ಧರ್ಮ ಅಂದ್ರೆ ಅಷ್ಟಕ್ಕಷ್ಟೇ. ನಾನು ದೇವರೇ ಇಲ್ಲ ಅಂತ ನಂಬಿದ್ದೆ. 18 ವಯಸ್ಸುವರೆಗೂ ನನ್ನ ನರನಾಡಿಗಳಲ್ಲಿ ಹರಿಯುತ್ತಿದ್ದದ್ದು ಎರಡೇ ವಿಷಯ, ಒಂದು ನಾಸ್ತಿಕತೆ ಇನ್ನೊಂದು ಸಮತಾವಾದ (ಕಮ್ಯುನಿಸಮ್‌).

ಸಮತಾವಾದದಲ್ಲಿ ‘ಎಲ್ಲರೂ ಸಮಾನರು’ ಅನ್ನೋ ಅಭಿಪ್ರಾಯ ಇತ್ತು. ಹಾಗಾಗಿ ಅದು ನನಗೆ ತುಂಬ ಇಷ್ಟ ಆಯ್ತು. ಒಂದು ಕಡೆ ಕೆಲವರು ತುಂಬ ಶ್ರೀಮಂತರಾದರೆ ಇನ್ನೊಂದು ಕಡೆ ಕೆಲವರು ಕಡು ಬಡತನದಲ್ಲಿದ್ದರು. ಇದನ್ನು ಸರಿ ಮಾಡಬೇಕಾದರೆ ಎಲ್ಲ ಸ್ವತ್ತನ್ನು ಸಮವಾಗಿ ಹಂಚಬೇಕು ಎಂದು ನಾನು ನಂಬಿದ್ದೆ. ಹಾಗಾಗಿ ಕಮ್ಯುನಿಸ್ಟ್‌ ಯುವ ಸಂಘದಲ್ಲಿ ಹಗಲುರಾತ್ರಿ ದುಡಿದೆ. ಪರಿಸರ ಯೋಜನೆಯಲ್ಲಿ ವೇಸ್ಟ್‌ ಪೇಪರ್‌ಗಳ ಮರುಬಳಕೆ ಮಾಡಲು ಗಂಟೆಗಟ್ಟಲೆ ಕೆಲಸ ಮಾಡಿದೆ. ನನಗಾಗ ಬರೀ 14 ವಯಸ್ಸು. ನನ್ನ ಊರಾದ ಔವ ಅಧಿಕಾರಿಗಳು ನನ್ನ ಶ್ರಮವನ್ನು ಮೆಚ್ಚಿ ಅವಾರ್ಡ್‌ ಕೊಟ್ಟರು. ಅಷ್ಟು ಚಿಕ್ಕ ವಯಸ್ಸಲ್ಲೇ ಜಿಡಿಆರ್‌ನ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯ ಆಯಿತು. ನಾನಿಟ್ಟಿರುವ ಗುರಿಗಳು ಸರಿಯಾಗಿವೆ, ನನ್ನ ಭವಿಷ್ಯನೂ ಚೆನ್ನಾಗಿರುತ್ತದೆ ಎಂದು ನೆನಸಿದೆ.

ಆದರೆ ನನ್ನ ಕನಸಿನ ಗೋಪುರ ಇದ್ದಕ್ಕಿದ್ದಂತೆ ನುಚ್ಚು ನೂರಾಯಿತು. 1989 ರಲ್ಲಿ ಬರ್ಲಿನ್‌ ಗೋಡೆಯನ್ನು ಕೆಡವಿದ್ದು ನನಗಾದ ದೊಡ್ಡ ಶಾಕ್‌. ಅದರಿಂದ ಸುಧಾರಿಸುವುದಕ್ಕೆ ಮುಂಚೆನೇ ಇನ್ನೊಂದು ಶಾಕ್‌. ಅದೇನೆಂದ್ರೆ ಪೂರ್ವ ಯುರೋಪ್‌ ಕಮ್ಯುನಿಸ್ಟ್‌ ಮೈತ್ರಿಗಳು ಮುರಿದು ಬಿದ್ದವು. ಕಮ್ಯುನಿಸಮ್‌ನಲ್ಲೂ ಅನ್ಯಾಯ ಸರ್ವೇಸಾಮಾನ್ಯ ಎಂದು ಗೊತ್ತಾದದ್ದು ಆಗಲೇ. ಕಮ್ಯುನಿಸಮ್‌ಗೆ ಬೆಂಬಲ ಕೊಡದೇ ಇದ್ದ ಜನರನ್ನು ಕೀಳಾಗಿ ನೋಡುತ್ತಿದ್ರು. ಎಲ್ಲರೂ ಸಮಾನರು ಅಂತ ಕಲಿಸುತ್ತಿದ್ದವರೇ ಹೀಗೆ ನಡೆದುಕೊಳ್ತಿದ್ದಾರಾ? ಹಾಗಾದ್ರೆ ಅವರು ಹೇಳುತ್ತಿದ್ದದ್ದು ಬರೀ ಬೊಗಳೆನಾ? ಇದನ್ನೆಲ್ಲ ನೋಡಿ ನೋಡಿ ತಲೆ ಕೆಟ್ಟುಹೋಯಿತು.

ಅದಕ್ಕೇ ಅದನ್ನೆಲ್ಲ ಬಿಟ್ಟುಬಿಟ್ಟೆ. ಸಂಗೀತ ಮತ್ತು ಚಿತ್ರಕಲೆಗೆ ಗಮನಕೊಟ್ಟೆ. ಮ್ಯುಸಿಕ್‌ ಕಾಲೇಜ್‌ಗೆ ಸೇರಿಕೊಂಡು ಸಂಗೀತ ಕಲಿಯಲು ಶುರು ಮಾಡಿದೆ. ಯೂನಿವರ್ಸಿಟಿಗೆ ಹೋಗಿ ಒಳ್ಳೇ ಮ್ಯುಸಿಶಿಯನ್‌ ಮತ್ತು ಆರ್ಟಿಸ್ಟ್‌ ಆಗಬೇಕೆಂದು ಕನಸು ಕಂಡೆ. ಅಪ್ಪಅಮ್ಮ ಹೇಳಿಕೊಟ್ಟ ಒಳ್ಳೇ ಬುದ್ಧಿಯನ್ನೆಲ್ಲ ಮೂಲೆಗೆಸೆದು ಬಿಟ್ಟೆ. ಆಗ ನನ್ನ ಮನಸ್ಸಲ್ಲಿ ಇದ್ದದ್ದು ಒಂದೇ, ಲೈಫ್‌ ಎಂಜಾಯ್‌ ಮಾಡಬೇಕು! ತುಂಬ ಹುಡುಗಿಯರ ಜೊತೆ ಚೆಲ್ಲಾಟ ಆಡ್ತಿದ್ದೆ. ಆದ್ರೆ ಇದ್ಯಾವುದೂ ನನ್ನ ಮನಸ್ಸಿಗೆ ಸಮಾಧಾನ ಕೊಡಲಿಲ್ಲ. ನಾನು ಬಿಡಿಸಿದ ಚಿತ್ರಗಳಲ್ಲೂ ಭಯಂಕರ ಭಯ ಎದ್ದುಕಾಣುತ್ತಿತ್ತು. ಭವಿಷ್ಯ ಹೇಗಿರುತ್ತೋ? ನಾನು ಯಾಕೆ ಬದುಕಿದ್ದೀನೋ? ಎಂಬ ಪ್ರಶ್ನೆಗಳು ಕಾಡುತ್ತಿದ್ದವು.

ಒಂದು ದಿನ ಸಾಯಂಕಾಲ ಕಾಲೇಜಲ್ಲಿ ಬೇರೆ ಸ್ಟೂಡೆಂಟ್ಸ್‌ ಜೊತೆ ಕೂತುಕೊಂಡು ಭವಿಷ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದೆ. ಆಗ ಮಾನ್‌ಡಿ * ಅನ್ನೋ ಹುಡುಗಿ ನನಗೊಂದು ಒಳ್ಳೇ ಸಲಹೆ ಕೊಟ್ಟಳು. “ಜೀವದ ಬಗ್ಗೆ, ಭವಿಷ್ಯದ ಬಗ್ಗೆ ನಿನಗಿರುವ ಪ್ರಶ್ನೆಗಳಿಗೆ ಉತ್ತರ ಬೇಕಾದ್ರೆ ಬೈಬಲಲ್ಲಿ ಹುಡುಕು” ಅಂತ ಹೇಳಿದಳು. ಯೆಹೋವನ ಸಾಕ್ಷಿಯಾಗಿದ್ದ ಇವಳು ಅದೇ ಕಾಲೇಜಲ್ಲಿ ಓದುತ್ತಿದ್ದಳು. ಕೊನೆಗೂ ನನ್ನ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದಾಗ ತುಂಬ ಆಶ್ಚರ್ಯ ಆಯಿತು.

ನಂಬಲಿಕ್ಕೂ ಕಷ್ಟ ಆಯಿತು. ಕುತೂಹಲದಿಂದ ಬೈಬಲಲ್ಲಿ ಏನಿದೆ ಅಂತ ಹುಡುಕಲಿಕ್ಕೆ ಶುರುಮಾಡಿದೆ. ದಾನಿಯೇಲ 2 ನೇ ಅಧ್ಯಾಯ ಓದು ಅಂತ ಮಾನ್‌ಡಿ ಹೇಳಿದಳು. ಅದನ್ನು ಓದಿ ಶಾಕ್‌ ಆಯಿತು. ಆ ಅಧ್ಯಾಯದಲ್ಲಿರುವ ಭವಿಷ್ಯವಾಣಿ ಅವತ್ತಿಂದ ಇವತ್ತಿನ ತನಕ ಇರುವ ಸರ್ಕಾರಗಳ ಬಗ್ಗೆ ವಿವರಿಸುತ್ತದೆ. ಅವುಗಳ ಪ್ರಭಾವ ಎಷ್ಟಿದೆ ಎಂದು ಅವಳು ಹೇಳಿದಳು. ಭವಿಷ್ಯದ ಬಗ್ಗೆ ತಿಳಿಸುವ ಬೇರೆ ಭವಿಷ್ಯವಾಣಿಗಳನ್ನೂ ತೋರಿಸಿದಳು. ಹಂ, ನನ್ನ ಪ್ರಶ್ನೆಗಳಿಗೆ ಉತ್ತರ ಸಿಕ್ಕೇ ಬಿಟ್ಟಿತು. ಆಗ ಮನಸ್ಸಿಗೆ ಬಂದ ಬೇರೆ ಪ್ರಶ್ನೆಗಳು—ಆ ಭವಿಷ್ಯವಾಣಿಗಳನ್ನು ಬರೆದದ್ದು ಯಾರು? ಭವಿಷ್ಯದ ಬಗ್ಗೆ ಇಷ್ಟು ನಿಖರವಾಗಿ ಯಾರಿಂದ ಹೇಳಲಿಕ್ಕೆ ಆಗುತ್ತೆ? ಹಾಗಾದ್ರೆ ನಿಜವಾಗಲೂ ದೇವರು ಇದ್ದಾನಾ?

ಬದುಕನ್ನೇ ಬದಲಾಯಿಸಿತು ಬೈಬಲ್‌

ಮಾನ್‌ಡಿ ನನಗೆ ಹಾರ್ಸ್ಟ್‌ ಮತ್ತು ಅವನ ಹೆಂಡತಿ ಆನ್‌ಜಲಿಕರ ಪರಿಚಯ ಮಾಡಿಕೊಟ್ಟಳು. ಯೆಹೋವನ ಸಾಕ್ಷಿಯಾಗಿದ್ದ ಅವರು ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದರು. ದೇವರ ಹೆಸರು ಯೆಹೋವ ಎಂದು ಜನರಿಗೆ ಹೇಳೋದು, ಆ ಹೆಸರನ್ನು ಹೆಚ್ಚಾಗಿ ಉಪಯೋಗಿಸೋದು ಯೆಹೋವನ ಸಾಕ್ಷಿಗಳು ಮಾತ್ರ ಅಂತ ಕೆಲವೇ ದಿನಗಳಲ್ಲಿ ಗೊತ್ತಾಯ್ತು. (ಕೀರ್ತನೆ 83:18; ಮತ್ತಾಯ 6:9) ಇಡೀ ಭೂಮಿ ಪರದೈಸಾಗುತ್ತೆ, ಅಲ್ಲಿ ಶಾಶ್ವತವಾಗಿ ಬದುಕುವ ಅವಕಾಶವನ್ನು ಯೆಹೋವ ದೇವರು ಎಲ್ಲ ಜನರಿಗೆ ಕೊಟ್ಟಿದ್ದಾನೆ ಎಂದು ಕಲಿತೆ. ಕೀರ್ತನೆ 37:9 ಹೀಗೆ ಹೇಳ್ತದೆ, “ಯೆಹೋವನ ಮೇಲೆ ಭರವಸೆ ಇಡೋರು ಭೂಮಿನ ಆಸ್ತಿಯಾಗಿ ಪಡ್ಕೊತಾರೆ.” ಬೈಬಲ್‌ ಹೇಳುವ ಪ್ರಕಾರ ದೇವರಿಗೆ ಇಷ್ಟ ಆಗುವ ತರ ನಡೆದರೆ ಯಾರಿಗೆ ಬೇಕಾದ್ರೂ ಆತನು ಈ ಆಶೀರ್ವಾದ ಕೊಡುತ್ತಾನೆ ಅಂತ ಗೊತ್ತಾದಾಗ ತುಂಬ ಖುಷಿ ಆಯ್ತು.

ಆದ್ರೆ ಬೈಬಲ್‌ ಹೇಳುವ ಪ್ರಕಾರ ನನ್ನ ಜೀವನದಲ್ಲಿ ಬದಲಾವಣೆ ಮಾಡ್ಕೊಳ್ಳಲು ತುಂಬ ಕಷ್ಟ ಆಯ್ತು. ಸಂಗೀತ, ಚಿತ್ರಕಲೆಯಲ್ಲಿ ನಾನು ತುಂಬ ಹೆಸರು ಮಾಡಿದ್ದೆ. ಅದ್ರಿಂದ ತುಂಬ ಅಹಂಕಾರ ಇತ್ತು. ಹಾಗಾಗಿ ಮೊದಲು ನಾನು ದೀನನಾಗಿ ಇರಲು ಕಲಿಯಬೇಕಿತ್ತು. ಹುಡುಗಿಯರನ್ನು ಬಿಡೋದಂತೂ ಇನ್ನೂ ಕಷ್ಟ ಆಯ್ತು. ಆದ್ರೂ ನಾನು ಪ್ರಯತ್ನ ಬಿಡಲಿಲ್ಲ. ಯೆಹೋವನು ನನಗೆ ತುಂಬ ತಾಳ್ಮೆ, ಕರುಣೆ ತೋರಿಸಿ ನನ್ನನ್ನು ಅರ್ಥಮಾಡಿಕೊಂಡನು. ನಾನದಕ್ಕೆ ತುಂಬ ಆಭಾರಿ!

18 ವಯಸ್ಸುವರೆಗೂ ನನ್ನ ಜೀವನವನ್ನು ರೂಪಿಸಿದ್ದು ನಾಸ್ತಿಕತೆ ಮತ್ತು ಸಮತಾವಾದ. ಈಗ ನನ್ನ ಜೀವನವನ್ನು ಬದಲಾಯಿಸುತ್ತಾ ಇರೋದು ಬೈಬಲ್‌. ಅದರಿಂದ ಕಲಿತ ವಿಷಯಗಳು ಭವಿಷ್ಯದ ಬಗ್ಗೆ ನನಗಿದ್ದ ಭಯ ಗೊಂದಲ ಚಿಂತೆಯನ್ನು ಕಡಿಮೆ ಮಾಡಿತು. ಜೀವನಕ್ಕೊಂದು ಅರ್ಥ ಕೊಟ್ಟಿತು. 1993 ರಲ್ಲಿ ನಾನು ದೀಕ್ಷಾಸ್ನಾನ ಪಡ್ಕೊಂಡು ಯೆಹೋವನ ಸಾಕ್ಷಿಯಾದೆ. ದೇವರ ಸೇವೆಯನ್ನು ಹುರುಪಿನಿಂದ ಮಾಡ್ತಿದ್ದ ತಬಿಥಳನ್ನು 2000ದಲ್ಲಿ ಮದುವೆಯಾದೆ. ನಮ್ಮಿಂದ ಆದಷ್ಟು ಹೆಚ್ಚು ಸಮಯವನ್ನು ಬೇರೆಯವರಿಗೆ ಬೈಬಲ್‌ ಕಲಿಸಲು ಕೊಡ್ತೇವೆ. ನನ್ನ ಹಾಗೆ ನಾಸ್ತಿಕತೆ ಮತ್ತು ಸಮತಾವಾದದಿಂದ ಪ್ರಭಾವಿತರಾದ ಎಷ್ಟೋ ಜನರನ್ನು ಭೇಟಿಯಾಗುತ್ತೇವೆ. ಯೆಹೋವನನ್ನು ತಿಳಿದುಕೊಳ್ಳೋದು ಹೇಗೆ ಅಂತ ಅವರಿಗೆ ಹೇಳಿಕೊಟ್ಟಾಗ ತುಂಬ ತೃಪ್ತಿಯಾಗುತ್ತದೆ.

ಸಿಕ್ಕಿದ ಪ್ರಯೋಜನಗಳು

ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯಲಿಕ್ಕೆ ಶುರುಮಾಡಿದ ಹೊಸದರಲ್ಲಿ ಅಪ್ಪಅಮ್ಮಗೆ ತುಂಬ ಗಾಬರಿಯಾಯಿತು. ಆದ್ರೆ ನನ್ನಲ್ಲಿ, ನನ್ನ ಗುಣಗಳಲ್ಲಿ ಆದ ಬದಲಾವಣೆಗಳನ್ನು ಅವರು ಕಣ್ಣಾರೆ ನೋಡಿದರು. ಸಂತೋಷದ ವಿಷಯ ಏನೆಂದ್ರೆ ಈಗ ಅವರು ಬೈಬಲ್‌ ಓದುತ್ತಿದ್ದಾರೆ, ಕೂಟಗಳಿಗೂ ಹೋಗುತ್ತಿದ್ದಾರೆ.

ನಾನು ನನ್ನ ಹೆಂಡತಿ ತಬಿಥ ತುಂಬ ಸಂತೋಷವಾಗಿ ಇದ್ದೇವೆ. ಗಂಡಹೆಂಡತಿಗೆ ಬೈಬಲ್‌ ಕೊಡುವ ಬುದ್ಧಿಮಾತನ್ನು ನಮ್ಮಿಂದ ಆದಷ್ಟು ಪಾಲಿಸುತ್ತೇವೆ. ಗಂಡಹೆಂಡತಿ ಒಬ್ಬರಿಗೊಬ್ಬರು ನಿಷ್ಠೆಯಿಂದ ಇರಬೇಕು ಅನ್ನೋ ಸಲಹೆಯನ್ನು ಪಾಲಿಸುವುದರಿಂದ ನಾವಿಬ್ಬರೂ ತುಂಬ ಹತ್ತಿರ ಆಗಿದ್ದೇವೆ.—ಇಬ್ರಿಯ 13:4.

ನಾಳೆ ಏನಾಗುತ್ತೋ, ಹೇಗಿರುತ್ತೋ ಅನ್ನೋ ಭಯ ಈಗ ನನಗಿಲ್ಲ. ಶಾಂತಿ ಒಗ್ಗಟ್ಟು ಇರುವ ಲೋಕವ್ಯಾಪಕ ಕುಟುಂಬಕ್ಕೆ ನಾವು ಸೇರಿರುವುದರಿಂದ ಖುಷಿಯಾಗಿದ್ದೇನೆ. ಈ ಕುಟುಂಬದಲ್ಲಿ ಮೇಲು-ಕೀಳು ಎಂಬ ಭಾವನೆ ಯಾರಲ್ಲೂ ಇಲ್ಲ. ನನ್ನ ಜೀವನದಲ್ಲಿ ಬೇಕು ಅಂತ ಅಂದುಕೊಂಡಿದ್ದು ಅದನ್ನೇ. ಯಾವುದನ್ನು ಹುಡುಕುತ್ತಿದ್ದೆನೋ ಅದೀಗ ಸಿಕ್ಕಿದೆ.

^ ಪ್ಯಾರ. 12 ಹೆಸರು ಬದಲಾಗಿದೆ.