ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದುಕು ಬದಲಾದ ವಿಧ

ಅನೇಕ ಸಾರಿ ಸೋತು ಕೊನೆಗೂ ಗೆದ್ದೆ

ಅನೇಕ ಸಾರಿ ಸೋತು ಕೊನೆಗೂ ಗೆದ್ದೆ
  • ಜನನ: 1953

  • ದೇಶ: ಆಸ್ಟ್ರೇಲಿಯಾ

  • ಹಿಂದೆ: ಅಶ್ಲೀಲ ಚಿತ್ರ ನೋಡುವ ದುಶ್ಚಟಕ್ಕೆ ಬಲಿಯಾಗಿದ್ದರು

ಹಿನ್ನೆಲೆ:

ನನ್ನ ತಂದೆ 1949⁠ರಲ್ಲಿ ಜರ್ಮನಿಯಿಂದ ಆಸ್ಟ್ರೇಲಿಯಾಗೆ ಬಂದರು. ಗಣಿ ಮತ್ತು ವಿದ್ಯುತ್‌ ಉತ್ಪಾದನಾ ಕಾರ್ಖಾನೆಗಳಲ್ಲಿ ಕೆಲಸ ಹುಡುಕಿಕೊಂಡು ಬಂದು ಆಸ್ಟ್ರೇಲಿಯಾದ ವಿಕ್ಟೋರಿಯಾ ಎಂಬ ಹಳ್ಳಿಯಲ್ಲಿ ನೆಲೆನಿಂತರು. ಅಲ್ಲೇ ಅವರಿಗೆ ಮದುವೆ ಆಯಿತು. 1953⁠ರಲ್ಲಿ ನಾನು ಹುಟ್ಟಿದೆ.

ಸ್ವಲ್ಪ ವರ್ಷಗಳ ನಂತರ ನನ್ನ ತಾಯಿ ಯೆಹೋವನ ಸಾಕ್ಷಿಗಳೊಟ್ಟಿಗೆ ಬೈಬಲ್‌ ಕಲಿಯಲು ಶುರು ಮಾಡಿದರು. ಹಾಗಾಗಿ, ನನ್ನ ಬಾಲ್ಯದ ನೆನಪುಗಳಲ್ಲಿ ಬೈಬಲ್‌ ಬೋಧನೆಗಳು ಸಹ ಒಳಗೂಡಿದ್ದವು. ಆದರೆ ನನ್ನ ಅಪ್ಪನಿಗೆ ಧರ್ಮ ಅಂದ್ರೆ ಆಗ್ತಿರಲಿಲ್ಲ. ಹಾಗಾಗಿ ನಮ್ಮನ್ನ ತುಂಬಾ ಹೊಡಿತ್ತಿದ್ದರು. ಅದಕ್ಕೆ ಅಮ್ಮ ಅವರನ್ನು ನೋಡಿದ್ರೆ ಗಡಗಡ ನಡುಗುತ್ತಿದ್ದರು. ಆದ್ರೂ ಅಮ್ಮ ಕದ್ದುಮುಚ್ಚಿ ಬೈಬಲ್‌ ಕಲಿಯುತ್ತಿದ್ದರು. ಕಲಿತ ವಿಷ್ಯ ಅವ್ರಿಗೆ ತುಂಬಾ ಇಷ್ಟ ಆಯಿತು. ಅಪ್ಪ ಮನೆಲಿ ಇಲ್ಲದಿದ್ದಾಗ ನನಗೆ ಮತ್ತು ತಂಗಿಗೆ ಅಮ್ಮ ಬೈಬಲ್‌ ಬಗ್ಗೆ ಹೇಳಿ ಕೊಡುತ್ತಿದ್ದರು. ಬೈಬಲ್‌ ಹೇಳಿದ ಥರ ನಡೆದುಕೊಂಡರೆ ಮುಂದೆ ನಾವು ಇದೇ ಭೂಮಿ ಸುಂದರ ತೋಟವಾದಾಗ ಅದರಲ್ಲಿ ಸಂತೋಷದಿಂದ ಇರಬಹುದು ಅಂತ ಹೇಳುತ್ತಿದ್ದದ್ದು ನನಗೆ ಇನ್ನೂ ನೆನಪಿದೆ.—ಕೀರ್ತನೆ 37:10, 29; ಯೆಶಾಯ 48:17.

ಅಪ್ಪ ಕೊಡುತ್ತಿದ್ದ ಕಾಟ ತಡೆದುಕೊಳ್ಳಲಾಗದೆ 18⁠ನೇ ವಯಸ್ಸಿನಲ್ಲಿ ನಾನು ಮನೆ ಬಿಟ್ಟು ಹೋದೆ. ಅಮ್ಮ ಬೈಬಲಿನಿಂದ ಹೇಳಿಕೊಟ್ಟಿದ್ದನ್ನ ನಾನು ನಂಬುತ್ತಿದ್ದೆ, ಆದರೆ ಅದರ ಬೆಲೆ ನನಗೆ ಗೊತ್ತಿರಲಿಲ್ಲ. ಹಾಗಾಗಿ ಅದರಂತೆ ನಡೆದುಕೊಳ್ಳೋ ಯೋಚ್ನೆನೂ ಮಾಡಲಿಲ್ಲ. ಕಲ್ಲಿದ್ದಲು ಗಣಿಯಲ್ಲಿ ನಾನು ಎಲೆಕ್ಟ್ರಿಷನ್‌ ಕೆಲಸ ಮಾಡುತ್ತಿದ್ದೆ. 20⁠ನೇ ವಯಸ್ಸಿಗೆ ಮದುವೆ ಮಾಡಿಕೊಂಡೆ. ಮೂರು ವರ್ಷದ ನಂತರ ನಮಗೆ ಮಗಳು ಹುಟ್ಟಿದಳು. ಆಗ ನಾನು, ಜೀವನದಲ್ಲಿ ಯಾವುದು ತುಂಬಾ ಪ್ರಾಮುಖ್ಯ ಅನ್ನೋದ್ರ ಬಗ್ಗೆ ಯೋಚಿಸಿದೆ. ನನ್ನ ಸಂಸಾರ ಸಂತೋಷವಾಗಿರಲು ಬೈಬಲ್‌ ಸಹಾಯ ಮಾಡುತ್ತೆ ಅನ್ನೋದು ನನಗೆ ಗೊತ್ತಿತ್ತು. ಅದಕ್ಕೆ ಯೆಹೋವನ ಸಾಕ್ಷಿಗಳೊಟ್ಟಿಗೆ ಬೈಬಲ್‌ ಕಲಿಯೋಕೆ ಶುರುಮಾಡಿದೆ. ಆದ್ರೆ ನನ್ನ ಹೆಂಡ್ತಿಗೆ ಸಾಕ್ಷಿಗಳನ್ನು ಕಂಡರೆ ಆಗುತ್ತಿರಲಿಲ್ಲ. ನಾನು ಒಂದ್ಸಲ ಕೂಟಕ್ಕೆ ಹೋಗಿದಕ್ಕೆ ಅವಳು ನನಗೆ ‘ನೀವು ಬೈಬಲ್‌ ಕಲಿಯೋದನ್ನ ನಿಲ್ಸಿ, ಇಲ್ಲ ಅಂದ್ರೆ ಮನೆ ಬಿಟ್ಟು ಹೋಗಿ’ ಅಂತ ಬೆದರಿಸಿದಳು. ಬೇರೆ ದಾರಿ ಇಲ್ಲದೆ ಅವಳು ಹೇಳಿದಂತೆ ಕೇಳಬೇಕಾಯಿತು. ಸರಿಯಾದ ದಾರಿ ಯಾವುದು ಅಂತ ಗೊತ್ತಿದ್ದರೂ ಅದನ್ನ ಮಾಡಲಿಲ್ಲವಲ್ಲಾ ಅಂತ ಆಮೇಲೆ ಅನಿಸಿತು.

ಒಂದುದಿನ ನನ್ನ ಜೊತೆ ಕೆಲಸ ಮಾಡುವವರು ಅಶ್ಲೀಲ ಸಾಹಿತ್ಯವನ್ನ ಕೊಟ್ಟರು. ಅದನ್ನ ನೋಡಿದ ಮೇಲೆ ಒಂದು ಕಡೆ ಚೆನ್ನಾಗಿದೆ ಅಂತ ಅನಿಸಿತು ಮತ್ತೊಂದು ಕಡೆ ಅಸಹ್ಯ ಅಂತನೂ ಅನಿಸಿತು. ಆಮೇಲೆ ನಾನು ಮಾಡಿದ್ದು ತಪ್ಪು ಅಂತ ಮನಸ್ಸು ಚುಚ್ಚುತ್ತಾ ಇತ್ತು. ಬೈಬಲಿನಿಂದ ಕಲಿತ ವಿಷಯಗಳು ನನಗೆ ನೆನಪಿದ್ದಿದ್ದರಿಂದ ನಾನು ಮಾಡಿದ ತಪ್ಪಿಗೆ ದೇವರು ಖಂಡಿತ ಶಿಕ್ಷೆ ಕೊಡ್ತಾನೆ ಅಂತ ಅನಿಸಿತು. ಆದರೆ ಅಶ್ಲೀಲ ಸಾಹಿತ್ಯ ನೋಡ್ತಾ ನೋಡ್ತಾ ಅದು ತಪ್ಪು ಅಂತ ಅನಿಸಲೇ ಇಲ್ಲ. ಕೊನೆಗೆ ಅದಕ್ಕೆ ದಾಸನಾಗಿಬಿಟ್ಟೆ.

ಹೀಗೆ 20 ವರ್ಷ ಕಳೆದು ಹೋಯಿತು. ಅಮ್ಮ ಹೇಳಿಕೊಟ್ಟ ಬೈಬಲ್‌ ತತ್ವಗಳಿಂದ ನಾನು ತುಂಬಾ ತುಂಬಾ ದೂರ ಹೋಗಿಬಿಟ್ಟಿದ್ದೆ. ನಾನು ಮನಸ್ಸಿನಲ್ಲಿ ಯಾವ ವಿಷ್ಯ ತುಂಬಿಸುತ್ತಿದ್ದೆನೋ ಅದೇ ನನ್ನ ಕೆಲ್ಸದಲ್ಲಿ ಕಂಡುಬರುತ್ತಿತ್ತು. ಕೆಟ್ಟ ಮಾತುಗಳನ್ನು ಆಡುತ್ತಿದ್ದೆ, ಕೆಟ್ಟ ಕೆಟ್ಟ ಜೋಕ್‌ಗಳನ್ನು ಮಾಡುತ್ತಿದ್ದೆ. ಲೈಂಗಿಕತೆ ಬಗ್ಗೆ ವಿಕೃತ ಮನೋಭಾವ ಬೆಳೆಸಿಕೊಂಡೆ. ನನ್ನ ಹೆಂಡತಿ ಜೊತೆ ಇದ್ದರೂ ಬೇರೊಬ್ಬ ಹೆಂಗಸಿನೊಟ್ಟಿಗೆ ಸಂಬಂಧ ಇಟ್ಟುಕೊಂಡಿದ್ದೆ. ಒಂದಿನ ಕನ್ನಡಿ ಮುಂದೆ ನಿಂತು ‘ನೀನಂದ್ರೆ ನನಗೆ ಇಷ್ಟ ಇಲ್ಲ’ ಅಂತ ನನಗೆ ನಾನೇ ಅಂದುಕೊಂಡೆ. ನನ್ನಲ್ಲಿ ಆತ್ಮವಿಶ್ವಾಸ ಮರೆಯಾಗಿ ನನ್ನ ಬಗ್ಗೆ ನನಗೇ ಅಸಹ್ಯ ಅನಿಸಿತು.

ನನ್ನ ಮದುವೆನೂ ಮುರಿದು ಬಿತ್ತು. ಜೀವನ ಛಿದ್ರಛಿದ್ರವಾಯಿತು. ನಂತರ ಮನಸ್ಸು ಬಿಚ್ಚಿ ಯೆಹೋವ ದೇವರ ಹತ್ರ ಪ್ರಾರ್ಥಿಸಿದೆ. ಬೈಬಲ್‌ ಮುಟ್ಟಿ 20 ವರ್ಷಗಳಾಗಿತ್ತು. ಮತ್ತೆ ಬೈಬಲ್‌ ಕಲಿಯೋಕೆ ಶುರು ಮಾಡಿದೆ. ಅಷ್ಟೊತ್ತಿಗಾಗಲೇ ನಮ್ಮ ಅಪ್ಪ ತೀರಿ ಹೋಗಿದ್ದರು. ಅಮ್ಮ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದರು.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌:

ಬೈಬಲಿನ ತತ್ವಗಳಿಗೂ ನನ್ನ ಜೀವನಕ್ಕೂ ಅಜಗಜಾಂತರವಿತ್ತು. ಆದ್ರೆ ಈ ಸಾರಿ ಮಾತ್ರ ನಾನು ಬೈಬಲ್‌ ನಿಯಮಗಳನ್ನ ಪಾಲಿಸಿ ಜೀವನದಲ್ಲಿ ನೆಮ್ಮದಿ ಪಡೆದುಕೊಳ್ಳಬೇಕು ಅಂತ ದೃಢಮನಸ್ಸು ಮಾಡಿದೆ. ಮೊದಲಿಗೆ, ಕೋಪ ಕಡಿಮೆ ಮಾಡಿಕೊಂಡು ಕೆಟ್ಟ ಮಾತುಗಳನ್ನ ಆಡೋದನ್ನ ಬಿಡಲು ಪ್ರಯತ್ನಿಸಿದೆ. ಅನೈತಿಕ ಜೀವನ, ಜೂಜಾಟ, ವಿಪರೀತ ಕುಡಿತ, ಕೆಲಸದಲ್ಲಿ ಕದಿಯೋದನ್ನು ಬಿಟ್ಟುಬಿಡಲು ನಿರ್ಧರಿಸಿದೆ.

ಈ ರೀತಿ ನಾನು ಬದಲಾವಣೆ ಮಾಡಿಕೊಳ್ಳೋದಕ್ಕೆ ಏನ್‌ ಕಾರಣ ಅಂತ ನನ್ನ ಜೊತೆ ಕೆಲಸ ಮಾಡುತ್ತಿದ್ದವರಿಗೆ ಅರ್ಥ ಆಗಲಿಲ್ಲ. ಹಳೇ ಜೀವನಕ್ಕೆ ಮತ್ತೆ ಮರಳುವಂತೆ ಸತತವಾಗಿ ಮೂರು ವರ್ಷ ಅವರು ನನ್ನ ಮೇಲೆ ಒತ್ತಡ ಹಾಕಿದರು. ನಾನು ಏನಾದ್ರೂ ಅಪ್ಪಿತಪ್ಪಿ ಕೋಪ ಮಾಡಿಕೊಂಡರೆ, ಕೆಟ್ಟ ಮಾತನ್ನ ಹೇಳಿದ್ರೆ ಅವರು ಜೋರಾಗಿ, “ಓ! ನಮ್ಮ ಹಳೇ ಯೋಸೆಫ್‌” ಅಂತ ಹೀಯ್ಯಾಳಿಸುತ್ತಿದ್ದರು. ಅವರ ಮಾತುಗಳಿಂದ ನನಗೆ ತುಂಬಾ ನೋವಾಗುತ್ತಿತ್ತು. ಹೀಗೆ ಸೋಲಿನ ಸರಮಾಲೆಗಳನ್ನೇ ಅನುಭವಿಸಿದೆ.

ಕೆಲಸ ಮಾಡುತ್ತಿದ್ದ ಜಾಗದಲ್ಲಿ ಅಶ್ಲೀಲ ವಿಡಿಯೋಗಳು ಮತ್ತು ಪುಸ್ತಕಗಳು ತುಂಬಿ ತುಳುಕುತ್ತಿದ್ದವು. ಅವರ ಕಂಪ್ಯೂಟರ್‌ಗಳಲ್ಲಿ ಅಸಭ್ಯ ಚಿತ್ರಗಳೇ ಹರಿದಾಡುತ್ತಿದ್ದವು. ಮೊದಲು ನಾನು ಕೂಡ ಅವರಂತೆ ಇದ್ದೆ. ನಾನು ಹೇಗಾದ್ರೂ ಮಾಡಿ ಈ ಕೆಟ್ಟ ಚಟದಿಂದ ಹೊರಬರಬೇಕು ಅಂತ ಪ್ರಯತ್ನ ಪಡುತ್ತಿದ್ದರೆ ನನ್ನ ಜೊತೆ ಕೆಲಸ ಮಾಡುವವರು ನನ್ನನ್ನ ಹೇಗಾದ್ರೂ ಮಾಡಿ ಬೀಳಿಸಬೇಕು ಅಂತ ಶತಪ್ರಯತ್ನ ಮಾಡುತ್ತಿದ್ದರು. ಆಗ ನಾನು ನನಗೆ ಬೈಬಲ್‌ ಅಧ್ಯಯನ ಮಾಡುತ್ತಿದ್ದ ಸಹೋದರನ ಬಳಿ ಹೋಗಿ ಸಹಾಯ ಮತ್ತು ಪ್ರೋತ್ಸಾಹಕ್ಕಾಗಿ ಕೇಳಿಕೊಂಡೆ. ನನ್ನ ಕಷ್ಟನೆಲ್ಲಾ ಅವರ ಹತ್ರ ಹೇಳಿಕೊಂಡೆ. ಅವರು ತಾಳ್ಮೆಯಿಂದ ಕೇಳಿಸಿಕೊಂಡರು. ಕೆಲವೊಂದು ಬೈಬಲ್‌ ವಚನಗಳನ್ನು ತೋರಿಸಿ ದುಶ್ಚಟಗಳ ಬಂಧನದಿಂದ ಹೇಗೆ ಹೊರಗೆ ಬರೋದು ಅಂತ ಹೇಳಿದರು. ಅಲ್ಲದೆ ಸಹಾಯಕ್ಕಾಗಿ ಪಟ್ಟು ಹಿಡಿದು ಯೆಹೋವ ದೇವರ ಹತ್ರ ಪ್ರಾರ್ಥಿಸುವಂತೆ ಪ್ರೋತ್ಸಾಹಿಸಿದರು.ಕೀರ್ತನೆ 119:37.

ಒಂದಿನ ನಾನು ನನ್ನ ಕೆಲಸಗಾರರನ್ನೆಲ್ಲಾ ಕರೆದು, ಕುಡಿಯೋ ಚಟ ಇದ್ದ ಇಬ್ಬರಿಗೆ ಬಿಯರ್‌ ಕೊಡೋದಕ್ಕೆ ಹೇಳಿದೆ. ಇದನ್ನ ಕೇಳಿದಾಗ ಕೆಲಸಗಾರರೆಲ್ಲಾ ಜೋರಾಗಿ ಕಿರುಚುತ್ತಾ “ಕುಡಿಯೋ ಚಟ ಬಿಡೋದಕ್ಕೆ ಕಷ್ಟಪಡುತ್ತಿರೋವರಿಗೆ ಬಿಯರ್‌ ಕೊಡೋದು ಸರಿಯಲ್ಲ” ಅಂತ ಹೇಳಿದರು. ಆಗ ನಾನು ಅವರಿಗೆ “ನಾನೂ ಇಂಥದ್ದೇ ಪರಿಸ್ಥಿತಿಯಲ್ಲಿ ಇದ್ದೀನಿ” ಅಂತ ಅಂದೆ. ಆಗ, ಅಶ್ಲೀಲ ಚಿತ್ರಗಳನ್ನ ನೋಡದೇ ಇರಲಿಕ್ಕೆ ನಾನು ಎಷ್ಟು ಕಷ್ಟ ಪಡುತ್ತಿದ್ದೀನಿ ಅಂತ ಅವರಿಗೆ ಅರ್ಥ ಆಯಿತು. ಆವತ್ತಿನಿಂದ ಅವರು ನನ್ನ ಮೇಲೆ ಒತ್ತಡ ಹಾಕೋದನ್ನ ನಿಲ್ಲಿಸಿದ್ರು.

ಹೀಗೆ ಸಮಯ ಕಳೆದಂತೆ ಯೆಹೋವ ದೇವರ ಸಹಾಯದಿಂದ ಆ ದುಶ್ಚಟ ಬಿಟ್ಟುಬಿಟ್ಟೆ. 1999⁠ರಲ್ಲಿ ದೀಕ್ಷಾಸ್ನಾನ ಪಡೆದು ಯೆಹೋವ ಸಾಕ್ಷಿಗಳಲ್ಲಿ ಒಬ್ಬನಾದೆ. ಸಭ್ಯವಾಗಿ, ಸಂತೋಷದಿಂದ ಜೀವನ ಮಾಡೋದಕ್ಕೆ ನನಗೆ ಎರಡನೇ ಅವಕಾಶ ಕೊಟ್ಟಿದ್ದಕ್ಕೆ ನಾನು ದೇವರಿಗೆ ಕೃತಜ್ಞನಾಗಿದ್ದೇನೆ.

ನಾನು ಮಾಡುತ್ತಿದ್ದ ಕೆಟ್ಟ ವಿಷ್ಯಗಳನ್ನು ಯೆಹೋವ ದೇವರು ದ್ವೇಷ ಮಾಡೋದಕ್ಕೆ ಕಾರಣ ಏನು ಅಂತ ನನಗೆ ಈಗ ಅರ್ಥ ಆಗಿದೆ. ಅಶ್ಲೀಲ ಚಿತ್ರಗಳು ಮಾಡೋ ಹಾನಿಯಿಂದ ನನ್ನನ್ನ ಕಾಪಾಡಬೇಕು ಅಂತ ಪ್ರೀತಿಯ ತಂದೆಯಾದ ಯೆಹೋವನು ಬಯಸುತ್ತಾನೆ. ಬೈಬಲಿನ ಜ್ಞಾನೋಕ್ತಿ 3:5, 6⁠ರಲ್ಲಿರುವ ಮಾತುಗಳು ನೂರಕ್ಕೆ ನೂರು ಸತ್ಯ. ಅದು ಹೇಳುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ಬೈಬಲ್‌ ನಿಯಮಗಳು ನಮಗೆ ಸಂರಕ್ಷಣೆ ಕೊಡುತ್ತವೆ. ಅಷ್ಟೇ ಅಲ್ಲದೇ, ಅವುಗಳಿಂದ ಯಶಸ್ಸು ಸಿಗೋದಂತೂ ಗ್ಯಾರಂಟಿ.—ಕೀರ್ತನೆ 1:1-3.

ಸಿಕ್ಕಿದ ಪ್ರಯೋಜನಗಳು:

ಈ ಹಿಂದೆ, ನನ್ನ ಜೀವನ ನೋಡಿದ್ರೆ ನನಗೇ ಅಸಹ್ಯ ಆಗುತ್ತಿತ್ತು. ಆದ್ರೆ ಈಗ ನನ್ನ ಮೇಲೆ ನನಗೆ ಗೌರವ ಇದೆ, ಮನಸ್ಸಿಗೆ ನೆಮ್ಮದಿ ಇದೆ. ಈಗ ಶುದ್ಧವಾದ ಜೀವನ ನಡೆಸುತ್ತಿದ್ದೀನಿ. ಯೆಹೋವ ದೇವರ ಸಹಾಯ ಮತ್ತು ಕ್ಷಮೆ ನನಗೆ ಸಿಕ್ಕಿದೆ. ಇಸವಿ 2000ದಲ್ಲಿ ಕಾರೋಲಿನ್‌ ಅನ್ನು ಮದುವೆ ಆದೆ. ಅವಳಿಗೂ ದೇವರ ಮೇಲೆ ನನ್ನಷ್ಟೇ ಪ್ರೀತಿ ಇದೆ. ಈಗ ನಮ್ಮ ಸಂಸಾರ ಆನಂದ ಸಾಗರವಾಗಿದೆ. ಪ್ರೀತಿ ತುಂಬಿರುವ ಸಹೋದರ ಸಹೋದರಿಯರ ಲೋಕವ್ಯಾಪಕ ಕುಟುಂಬದ ಭಾಗವಾಗಿರುವುದು ಎಂಥಾ ಸುಯೋಗ! ▪ (wp16-E No. 4)