ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದುಕು ಬದಲಾದ ವಿಧ

ನನ್ನನ್ನು ಮತ್ತು ಇತರರನ್ನು ಗೌರವಿಸಲು ಕಲಿತೆ

ನನ್ನನ್ನು ಮತ್ತು ಇತರರನ್ನು ಗೌರವಿಸಲು ಕಲಿತೆ
  • ಜನನ: 1960

  • ದೇಶ: ಫ್ರಾನ್ಸ್‌

  • ಹಿಂದೆ: ಕ್ರೂರಿ, ಅಮಲೌಷಧ ವ್ಯಸನಿ, ಹೆಂಗಸರನ್ನು ಕೀಳಾಗಿ ನೋಡುತ್ತಿದ್ದವನು

ಹಿನ್ನೆಲೆ:

ನಾನು ಹುಟ್ಟಿದ್ದು ಈಶಾನ್ಯ ಫ್ರಾನ್ಸ್‌ನ ಮಲ್‌ಹೌಸ್‌ ಎಂಬಲ್ಲಿ. ಮಧ್ಯಮವರ್ಗದ ಜನರೇ ಇದ್ದ ಆ ಪ್ರದೇಶ ಹಿಂಸೆ ಮತ್ತು ಜಗಳಕ್ಕೆ ತುಂಬಾ ಹೆಸರುವಾಸಿಯಾಗಿತ್ತು. ನನ್ನ ಬಾಲ್ಯ ಅಂದಾಕ್ಷಣ ನನಗೆ ನೆನಪಾಗೋದು ಕುಟುಂಬಗಳ ಮಧ್ಯೆ ಆಗುತ್ತಿದ್ದ ಜಗಳ, ಹೊಡೆಯುವ ದೃಶ್ಯಗಳೇ. ನಾನು ಬೆಳೆದು ಬಂದ ಕುಟುಂಬದಲ್ಲಿ ಹೆಂಗಸರಿಗೆ ಗೌರವನೇ ಕೊಡುತ್ತಿರಲಿಲ್ಲ, ಇನ್ನೂ ಅವರ ಮಾತಿಗೆ ಬೆಲೆ ಕೊಡೋದು ದೂರದ ಮಾತಾಗಿತ್ತು. ಅಡುಗೆ ಮನೆಯೇ ಅವರ ಪ್ರಪಂಚ, ಗಂಡ ಮಕ್ಕಳನ್ನು ನೋಡಿಕೊಳ್ಳುವುದೇ ಅವರ ಜೀವನ ಅನ್ನೋದು ಅಲ್ಲಿನವರ ಮನೋಭಾವ. ನನ್ನ ತಲೆಯಲ್ಲೂ ಅದೇ ತುಂಬಿತ್ತು.

ನನ್ನ ಬಾಲ್ಯ ಭಯಾನಕವಾಗಿತ್ತು ಅಂತ ಹೇಳಿದ್ರೂ ತಪ್ಪಾಗಲ್ಲ. ಏಕೆಂದರೆ, ಕುಡಿದು ಕುಡಿದು ನನ್ನ ಅಪ್ಪ ಸತ್ತು ಹೋದರು. ಆಗ ನನಗೆ ಕೇವಲ ಹತ್ತು ವರ್ಷ. ಇದಾಗಿ ಐದು ವರ್ಷ ಅಷ್ಟೇ ಅಷ್ಟರಲ್ಲಿ ನನ್ನ ಅಣ್ಣ ಆತ್ಮಹತ್ಯೆ ಮಾಡಿಕೊಂಡ. ಅದೇ ವರ್ಷ ನಮ್ಮ ಕುಟುಂಬದಲ್ಲಿ ನಡೆದ ಜಗಳವೊಂದರಲ್ಲಿ ನನ್ನ ಕಣ್ಮುಂದೆನೇ ಒಬ್ಬರನ್ನ ಕೊಲೆ ಮಾಡಲಾಯಿತು. ಇದನ್ನ ನೋಡಿ ನಾನು ಬೆಚ್ಚಿಬಿದ್ದೆ. ನನ್ನ ಕುಟುಂಬದವರು ಕತ್ತಿ ಮತ್ತು ಗನ್ನುಗಳನ್ನು ಉಪಯೋಗಿಸೋದನ್ನು ನನಗೆ ಹೇಳಿಕೊಟ್ಟರು. ಸಮಯ ಬಂದಾಗ ಇದನ್ನ ಉಪಯೋಗಿಸಬೇಕಾಗುತ್ತೆ ಅಂತ ಇದನ್ನೆಲ್ಲಾ ನನಗೆ ಕಲಿಸಿಕೊಟ್ಟಿದ್ದರು. ನನ್ನ ಮನಸ್ಸಿನ ಮೇಲೆ ಸ್ಥಿಮಿತವನ್ನು ಕಳೆದುಕೊಂಡುಬಿಟ್ಟೆ. ನನ್ನ ಮೈ ತುಂಬಾ ಬರೀ ಟ್ಯಾಟುಗಳೇ ಇದ್ದವು. ಕುಡಿಯೋದನ್ನೂ ಕಲಿತೆ.

ಎಷ್ಟರ ಮಟ್ಟಿಗೆ ನಾನು ಕುಡಿತಿದ್ದೆ ಅಂದರೆ ಒಂದು ದಿನಕ್ಕೆ 10 ರಿಂದ 15 ಬಿಯರ್‌ ಬಾಟಲ್‌ಗಳನ್ನು ಖಾಲಿ ಮಾಡುತ್ತಿದ್ದೆ. ಆಗ ನನಗೆ ವಯಸ್ಸೆಷ್ಟು ಗೊತ್ತಾ? ಬರೀ ಹದಿನಾರು. ಆಮೇಲೆ ಡ್ರಗ್ಸ್‌ ತೆಗೆದುಕೊಳ್ಳೋಕೆ ಶುರು ಮಾಡಿದೆ. ಇದಕ್ಕೆಲ್ಲಾ ದುಡ್ಡು ಬೇಕಾಗಿದ್ದರಿಂದ ಗುಜರಿಗೆ ಕಬ್ಬಿಣದ ವಸ್ತುಗಳನ್ನು ಮಾರುತ್ತಿದೆ. ಅದರಿಂದ ಬರುತ್ತಿದ್ದ ದುಡ್ಡು ಸಾಕಾಗುತ್ತಿರಲಿಲ್ಲ. ಹಾಗಾಗಿ ಕಳ್ಳತನಕ್ಕೂ ಕೈ ಹಾಕಿದೆ. 17 ನೇ ವಯಸ್ಸಿಗೆ ಜೈಲಿಗೂ ಹೋಗಿ ಬಂದೆ. ನಾನು ಮಾಡಿದ ಅಪರಾಧಗಳಿಗೆ ಮೂರು ಸಾರಿ ಜೈಲುವಾಸ ಅನುಭವಿಸಿದೆ, ಹದಿನೈದು ಸಾರಿ ನನಗೆ ಎಚ್ಚರಿಕೆ ಕೊಟ್ಟು ಊರು ಬಿಟ್ಟು ಹೋಗಬಾರದು ಅನ್ನೋ ನಿರ್ಬಂಧ ಹಾಕಿದರು.

ಇಪ್ಪತ್ತನೇ ವಯಸ್ಸಿನಷ್ಟೊತ್ತಿಗೆ ನನ್ನ ಜೀವನ ಇನ್ನೂ ಹದಗೆಟ್ಟು ಹೋಯಿತು. ಒಂದು ದಿನಕ್ಕೆ 20 ಮಾರಿವಾನವನ್ನು ಸೇದುತ್ತಿದ್ದೆ. ಆಮೇಲೆ ಹೆರೊಯಿನ್‌, ಬೇರೆ ಅಮಲೌಷಧಗಳನ್ನೂ ತೆಗೆದುಕೊಳ್ಳುತ್ತಿದ್ದೆ. ಎಷ್ಟೋ ಸಲ ಓವರ್‌ಡೋಸ್‌ ತಗೊಂಡು ಸತ್ತು ಹೋಗೋ ಪರಿಸ್ಥಿತಿ ತಲುಪಿದ್ದೆ. ಅಮಲೌಷಧಗಳನ್ನು ಮಾರುತ್ತಿದ್ದರಿಂದ ಕತ್ತಿ, ಪಿಸ್ತೂಲು ಯಾವಾಗಲೂ ನನ್ನ ಹತ್ತಿರ ಇರುತ್ತಿದ್ದವು. ಒಂದು ಸಲ ಏನಾಯ್ತು ಅಂದ್ರೆ, ನಾನು ಪಿಸ್ತೂಲಿನಿಂದ ಒಬ್ಬ ವ್ಯಕ್ತಿನಾ ಶೂಟ್‌ ಮಾಡಿದೆ. ಗುಂಡು ಅವನ ಬೆಲ್ಟ್‌ ಬಕಲ್‌ಗೆ ತಾಗಿದ್ದರಿಂದ ಅವನ ಜೀವ ಉಳಿತು. ನನ್ನ 24 ನೇ ವಯಸ್ಸಿನಲ್ಲಿ ಅಮ್ಮ ತೀರಿ ಹೋದರು. ನನ್ನ ಕೋಪ ಇನ್ನೂ ಜಾಸ್ತಿ ಆಯಿತು. ನಾನು ಎಷ್ಟು ಕೋಪಿಷ್ಠನಾಗಿಬಿಟ್ಟೆ ಅಂದ್ರೆ ರಸ್ತೆಯಲ್ಲಿ ನಾನು ಒಂದು ಪಕ್ಕ ಹೋಗುತ್ತಿದ್ದರೆ ಜನ ನನ್ನನ್ನ ನೋಡಿ ಭಯಪಟ್ಟು ರಸ್ತೆ ದಾಟಿ ಇನ್ನೊಂದು ಪಕ್ಕ ಹೋಗುತ್ತಿದ್ದರು. ಹೊಡೆದಾಟ ಬಡಿದಾಟದಲ್ಲೇ ಮುಳುಗಿರುತ್ತಿದ್ದ ನಾನು ನನ್ನ ವಾರಾಂತ್ಯಗಳನ್ನು ಒಂದೊ ಪೊಲೀಸ್‌ ಸ್ಟೇಷನಿನಲ್ಲಿ, ಇಲ್ಲ ಅಂದ್ರೆ ನನ್ನ ಗಾಯಗಳಿಗೆ ಹೊಲಿಗೆ ಹಾಕಿಕೊಂಡು ಆಸ್ಪತ್ರೆಯಲ್ಲಿ ಇರುತ್ತಿದ್ದೆ.

28ನೇ ವಯಸ್ಸಿಗೆ ನನಗೆ ಮದುವೆ ಆಯಿತು. ಹೆಂಗಸರು ಏನಿದ್ರೂ ಅಡುಗೆ ಮನೆಗೆ ಸೀಮಿತ ಅಂತ ನನ್ನ ತಲೆಲಿ ತುಂಬಿದ್ದರಿಂದ ನನ್ನ ಹೆಂಡತಿಗೆ ಅಷ್ಟೇನು ಗೌರವ ಕೊಡುತ್ತಿರಲಿಲ್ಲ. ಅವಳನ್ನು ಬಯ್ಯುತ್ತಿದ್ದೆ, ಹೊಡೆಯುತ್ತಿದ್ದೆ. ಯಾವ ಕೆಲಸನೂ ನಾವು ಜೊತೆಯಾಗಿ ಮಾಡಲಿಲ್ಲ. ಕಳ್ಳತನ ಮಾಡಿದ ಒಡವೆಗಳನ್ನು ತಂದು ಅವಳಿಗೆ ಕೊಟ್ಟರೆ ಸಾಕು ಅಂತ ಅಂದುಕೊಂಡಿದ್ದೆ. ಆದ್ರೆ ಒಂದು ದಿನ ನನಗೆ ಆಶ್ಚರ್ಯ ಕಾದಿತ್ತು. ನನ್ನ ಹೆಂಡತಿ ಯೆಹೋವನ ಸಾಕ್ಷಿಗಳೊಟ್ಟಿಗೆ ಬೈಬಲ್‌ ಕಲಿಯೋದಕ್ಕೆ ಶುರು ಮಾಡಿದಳು. ಆಕೆ ಅವರೊಟ್ಟಿಗೆ ಅಧ್ಯಯನ ಮಾಡಿದ ಮೊದಲನೇ ದಿನದಿಂದಲೇ ಧೂಮಪಾನ ಮಾಡೋದನ್ನ ಬಿಟ್ಟುಬಿಟ್ಟಳು. ಅಲ್ಲದೇ ನಾನು ಕದ್ದು ತಂದು ಕೊಡುತ್ತಿದ್ದ ದುಡ್ಡನ್ನ ಸಹ ತೆಗೆದುಕೊಳ್ಳುತ್ತಿರಲಿಲ್ಲ. ಇದನ್ನ ನೋಡಿ ನನ್ನ ಸಿಟ್ಟು ನೆತ್ತಿಗೇರಿತು. ಆಕೆ ಬೈಬಲ್‌ ಕಲಿಯುವುದನ್ನು ಇನ್ನೂ ವಿರೋಧಿಸಿದೆ. ಸಿಗರೇಟ್‌ ಸೇದಿ, ಬೇಕು ಬೇಕಂತ ಅವಳ ಮುಖಕ್ಕೆ ಹೊಗೆ ಬಿಡುತ್ತಿದ್ದೆ. ಸಾಲದು ಅಂತ ಅಕ್ಕಪಕ್ಕದವರ ಮುಂದೆ ಅವಳನ್ನ ಅವಮಾನ ಮಾಡುತ್ತಿದ್ದೆ.

ಒಂದಿನ ರಾತ್ರಿ ಕುಡಿದ ಅಮಲಿನಲ್ಲಿ ನಾನಿದ್ದ ಅಪಾರ್ಟ್‌ಮೆಂಟ್‌ಗೆ ಬೆಂಕಿ ಇಟ್ಟೆ. ಆ ಬೆಂಕಿಯ ಬಾಯಿಂದ ನನ್ನನ್ನ ಮತ್ತು ನನ್ನ ಐದು ವರ್ಷದ ಮಗಳನ್ನು ನನ್ನ ಹೆಂಡತಿ ಕಾಪಾಡಿದಳು. ಅಮಲು ಇಳಿದ ನಂತರ ‘ಛೇ! ಎಂಥಾ ಕೆಲ್ಸ ಮಾಡಿಬಿಟ್ಟೆ’ ಅಂತ ಮನಸ್ಸಾಕ್ಷಿ ನನ್ನನ್ನ ಚುಚ್ಚುತ್ತಿತ್ತು. ದೇವರು ಯಾವತ್ತಿಗೂ ನನ್ನನ್ನ ಕ್ಷಮಿಸೋದಿಲ್ಲ ಅಂತ ಅನಿಸುತ್ತಿತ್ತು. ಒಂದೊಮ್ಮೆ ಪಾದ್ರಿಯೊಬ್ಬ ‘ಕೆಟ್ಟ ಜನರೆಲ್ಲಾ ನರಕಕ್ಕೆ ಹೋಗ್ತಾರೆ’ ಅಂತ ಹೇಳಿದ ಮಾತು ನನ್ನ ಕಿವಿಲಿ ಗುಂಯ್‌ಗುಟ್ಟುತ್ತಿತ್ತು. ಮನೋರೋಗ ತಜ್ಞ ಕೂಡ “ನಿನ್ನ ಬದಲಾಯಿಸಲು ಸಾಧ್ಯನೇ ಇಲ್ಲ” ಅಂತ ಕೈಬಿಟ್ಟರು.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌:

ಈ ದುರಂತ ಆದ ಮೇಲೆ ನಾವೆಲ್ಲ ನನ್ನ ಹೆಂಡತಿಯ ಅಪ್ಪಮ್ಮನ ಮನೆಗೆ ಹೋದೆವು. ಯೆಹೋವನ ಸಾಕ್ಷಿಗಳು ನನ್ನ ಹೆಂಡತಿಯನ್ನ ಭೇಟಿ ಮಾಡುವುದಕ್ಕೆ ಬಂದಾಗ ನಾನು ಅವರ ಹತ್ತಿರ “ನನ್ನ ಪಾಪಗಳನ್ನ ದೇವರು ಕ್ಷಮಿಸ್ತಾನಾ?” ಅಂತ ಕೇಳಿದೆ. ಆಗ ಅವರು ನನಗೆ ಬೈಬಲಿನಿಂದ 1 ಕೊರಿಂಥ 6:9-11 ನ್ನು ತೋರಿಸಿದರು. ಅದರಲ್ಲಿ ದೇವರು ಇಷ್ಟಪಡದ ವಿಷಯಗಳನ್ನು ತಿಳಿಸ್ತಾ “ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ” ಅಂತ ತಿಳಿಸಲಾಗಿತ್ತು. ಆ ಮಾತುಗಳು ನಾನು ಕೂಡ ಬದಲಾಗಬಹುದು ಅನ್ನೋ ಆಶಾಕಿರಣವನ್ನು ಮೂಡಿಸಿತು. ಅಲ್ಲದೇ 1 ಯೋಹಾನ 4:8 ನ್ನು ತೋರಿಸಿ ದೇವರು ನನ್ನನ್ನೂ ಪ್ರೀತಿಸುತ್ತಾರೆ ಅಂತ ತಿಳಿಸಿದರು. ಇದನ್ನ ಕೇಳಿದ ಮೇಲೆ ಸಾಕ್ಷಿಗಳ ಹತ್ತಿರ ವಾರಕ್ಕೆ ಎರಡು ಸಲ ಬೈಬಲ್‌ ಕಲಿಸುವಂತೆ ಕೇಳಿಕೊಂಡೆ. ಕೂಟಗಳಿಗೆ ಹಾಜರಾಗಲು ಶುರು ಮಾಡಿದೆ. ಪಟ್ಟುಹಿಡಿದು ಯೆಹೋವ ದೇವರ ಹತ್ತಿರ ಪ್ರಾರ್ಥನೆ ಮಾಡಿದೆ.

ಬೈಬಲ್‌ ಕಲಿತ ಒಂದೇ ತಿಂಗಳಲ್ಲಿ, ನಾನು ಕುಡಿಯೋದನ್ನು, ಅಮಲೌಷದ ಸೇವನೆಯನ್ನು ಬಿಟ್ಟುಬಿಡಲು ನಿರ್ಧರಿಸಿದೆ. ಆಮೇಲೆ ನನ್ನ ದೇಹದೊಳಗೆ ಒಂದು ಮಹಾಯುದ್ಧ ನಡೆಯೋಕೆ ಶುರು ಆಯ್ತು. ತಲೆನೋವು, ದೇಹದಲ್ಲೆಲ್ಲಾ ಏನೋ ಒಂಥರ ನೋವು-ಸಂಕಟ, ದುಃಸ್ವಪ್ನಗಳಂಥ ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಯಿತು. ಆದರೆ ಅದೇ ಸಮಯದಲ್ಲಿ ಯೆಹೋವನು ನನ್ನ ಕೈಗಳನ್ನು ಹಿಡಿದು ನಡೆಸಿದ. ದೇವರು ಅಪೊಸ್ತಲ ಪೌಲನಿಗೆ ಸಹಾಯ ಮಾಡಿದಾಗ ಅವನು ಹೇಳಿದ್ದು: “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.” (ಫಿಲಿಪ್ಪಿ 4:13) ಇದೇ ಅನಿಸಿಕೆ ನನಗೂ ಆಯಿತು. ಕ್ರಮೇಣ ಧೂಮಪಾನವನ್ನು ಬಿಟ್ಟುಬಿಟ್ಟೆ.—2 ಕೊರಿಂಥ 7:1.

ಬೈಬಲ್‌ ಕಲಿತಿದ್ದರಿಂದ ನನ್ನ ಜೀವನದಲ್ಲಿ ಮತ್ತು ನನ್ನ ಕುಟುಂಬದಲ್ಲಿ ಸುಧಾರಣೆ ಆಯಿತು. ನನ್ನ ಹೆಂಡತಿಯನ್ನು ಗೌರವಿಸುವುದನ್ನು ಕಲಿತೆ. ಅವಳ ಹತ್ತಿರ ಮಾತಾಡುವಾಗ “ದಯವಿಟ್ಟು” “ಧನ್ಯವಾದ” ಅನ್ನೊ ಪದಗಳನ್ನು ಬಳಸಿ ಅವಳಿಗೆ ಮರ್ಯಾದೆ ಕೊಡಲು ಶುರು ಮಾಡಿದೆ. ಮಗಳಿಗೆ ಒಬ್ಬ ಒಳ್ಳೇ ಅಪ್ಪನಾದೆ. ನನ್ನ ಹೆಂಡತಿಯ ಒಳ್ಳೇ ಮಾದರಿಯನ್ನು ಅನುಸರಿಸಿದೆ. ಬೈಬಲ್‌ ಕಲಿತ ಒಂದೇ ವರ್ಷಕ್ಕೆ ದೀಕ್ಷಾಸ್ನಾನ ಪಡೆದು ಯೆಹೋವ ದೇವರಿಗೆ ಸಮರ್ಪಣೆ ಮಾಡಿಕೊಂಡೆ.

ಸಿಕ್ಕಿದ ಪ್ರಯೋಜನಗಳು:

ಇವತ್ತು ನಾನು ಜೀವಂತವಾಗಿ ಇದ್ದೇನೆ ಅಂದರೆ ಅದಕ್ಕೆ ಕಾರಣ ಬೈಬಲ್‌. ಒಂದುವೇಳೆ ನಾನು ಬೈಬಲ್‌ ಕಲಿಯದೆ ಹೋಗಿದ್ದರೆ ಅಮಲೌಷಧದಿಂದಲೋ ಅಥವಾ ಜಗಳದಲ್ಲೋ ಸತ್ತು ಹೋಗಿರುತ್ತಿದ್ದೆ ಅಂತ ಸಾಕ್ಷಿಗಳಲ್ಲದ ನನ್ನ ಸಂಬಂಧಿಕರೇ ಹೇಳುತ್ತಾರೆ.

ಬೈಬಲ್‌ ನನ್ನ ಬದುಕನ್ನೇ ಬದಲಾಯಿಸಿತು. ಒಬ್ಬ ಗಂಡನಾಗಿ ಮತ್ತು ತಂದೆಯಾಗಿ ನನ್ನ ಕರ್ತವ್ಯಗಳೇನು ಅಂತ ಅದು ತೋರಿಸಿಕೊಟ್ಟಿತು. (ಎಫೆಸ 5:25; 6:4) ಈಗ ನಾವು ಏನೇ ಕೆಲಸ ಮಾಡಿದರೂ ಕುಟುಂಬವಾಗಿ ಮಾಡುತ್ತೇವೆ. ನನ್ನ ಹೆಂಡತಿ ಅಡುಗೆ ಮನೆಗೆ ಮಾತ್ರ ಸೀಮಿತವಾಗದೆ ದೇವರ ಕೆಲಸ ಮಾಡುವಂತೆ ನಾನು ಅವಳಿಗೆ ಸಂತೋಷದಿಂದ ಸಹಾಯ ಮಾಡುತ್ತೇನೆ. ಸಭೆಯ ಹಿರಿಯನಾಗಿರುವ ನನಗೂ ಅವಳು ಸಂಪೂರ್ಣ ಬೆಂಬಲ ಕೊಡುತ್ತಾಳೆ.

ಯೆಹೋವ ದೇವರ ಪ್ರೀತಿ ಮತ್ತು ಕರುಣೆಯ ಗುಣಗಳೇ ನನ್ನ ಮನಮುಟ್ಟಿದ್ದು. ಒಂದು ಕಾಲದಲ್ಲಿ ನಾನು ಬದಲಾಗೋದೆ ಇಲ್ಲ ಅಂತ ಅನೇಕರು ನೆನಸಿದರು. ಇವತ್ತಿಗೂ ನನ್ನ ಥರ ಎಷ್ಟೋ ಜನರು ಇದ್ದಾರೆ. ಅಂಥವರಿಗೆ ಯೆಹೋವ ದೇವರ ಗುಣಗಳ ಬಗ್ಗೆ ಹೇಳಲು ನನಗೆ ತುಂಬಾ ಇಷ್ಟ. ಏಕೆಂದರೆ ಸುಂದರ ಬದುಕನ್ನು ಪಡೆದು ಸಂತೋಷವಾಗಿರಲು ಯಾರಿಗೆ ಬೇಕಾದರೂ ಬೈಬಲ್‌ ಸಹಾಯ ಮಾಡುತ್ತೆ ಅನ್ನೋ ದೃಢನಂಬಿಕೆ ನನಗಿದೆ. ಬೈಬಲ್‌ ಕಲಿತಿದ್ದರಿಂದ ಎಲ್ಲರನ್ನು ಹೆಂಗಸರನ್ನು, ಗಂಡಸರನ್ನು ಮುಖ್ಯವಾಗಿ ನನ್ನನ್ನ ನಾನು ಗೌರವಿಸಲು ಕಲಿತೆ. ▪ (w16-E No. 3)