ಮಾಹಿತಿ ಇರುವಲ್ಲಿ ಹೋಗಲು

ಸಭೆಯಲ್ಲಿರೋ ಯುವಜನರ ಜೊತೆ, ಚಿಕ್ಕ ಮಕ್ಕಳ ಜೊತೆ ಸಮಯ ಕಳಿಯೋದಂದ್ರೆ ನನಗೆ ತುಂಬಾ ಇಷ್ಟ

ಬದುಕು ಬದಲಾದ ವಿಧ

ಬೇಸ್‌ಬಾಲೇ ನಂಗೆ ಸರ್ವಸ್ವ ಆಗಿತ್ತು

ಬೇಸ್‌ಬಾಲೇ ನಂಗೆ ಸರ್ವಸ್ವ ಆಗಿತ್ತು
  • ಜನನ: 1928

  • ದೇಶ: ಕೋಸ್ಟಾ ರಿಕಾ

  • ಹಿನ್ನೆಲೆ: ನನಗೆ ಬೇಸ್‌ಬಾಲ್‌ ಮತ್ತು ಜೂಜಾಡೊ ಹುಚ್ಚಿತ್ತು

ಹಿಂದೆ

ನಾನು ಹುಟ್ಟಿ ಬೆಳೆದಿದ್ದು ಫೋಟೋ ಲಿಮಾನ್‌ ಅನ್ನೊ ಪಟ್ಟಣದಲ್ಲಿ. ಅಲ್ಲಿ ಹಡಗುಗಳನ್ನ ನಿಲ್ಲಿಸೋ ಬಂದರು ಇದೆ. ಇದು ಇರೋದು ಪೂರ್ವ ಕೋಸ್ಟಾ ರಿಕಾದ ಕರಾವಳಿಯ ಪ್ರದೇಶದಲ್ಲಿ. ನಮ್ಮ ಅಪ್ಪ-ಅಮ್ಮಗೆ ನಾವು ಒಟ್ಟು ಎಂಟು ಜನ ಮಕ್ಕಳು. ಅದರಲ್ಲಿ ನಾನು ಏಳನೆಯವನು. ನಾನು ಎಂಟನೇ ವಯಸ್ಸಿನಲ್ಲಿದ್ದಾಗ ನನ್ನ ಅಪ್ಪ ತೀರಿಹೋದ್ರು. ಆಗ ನಮ್ಮೆಲ್ಲರನ್ನ ನೋಡ್ಕೊಂಡು, ಬೆಳೆಸಿದ್ದು ನಮ್ಮ ಅಮ್ಮನೇ.

ಚಿಕ್ಕ ವಯಸ್ಸಿನಿಂದಾನೆ ಬೇಸ್‌ ಬಾಲ್‌ ಅಂದ್ರೆ ನನಗೆ ಪಂಚಪ್ರಾಣ, ಯಾವಾಗಲೂ ಅದನ್ನ ಆಡ್ತಾನೆ ಇದೆ. ನನಗೆ 18-19 ವರ್ಷ ಇದ್ದಾಗ ಒಂದು ಚಿಕ್ಕ ಟೀಮ್‌ ಜೊತೆ ಸೇರಿ ಆಡುತ್ತಿದ್ದೆ. ನನಗೆ 20 ವಯಸ್ಸಿದ್ದಾಗ ನಮ್ಮ ಆಟಾನ ನೋಡೋಕೆ ಬಂದ ಒಬ್ಬ ಸ್ಕೌಟ್‌ (ಹೊಸ ಆಟಗಾರರನ್ನ ಹುಡುಕುತ್ತಾ ಇದ್ದ ವ್ಯಕ್ತಿ) ನನ್ನನ್ನ ಗಮನಿಸಿ, ‘ನೀನು ಯಾಕೆ ನಿಕಾರಾಗೊದಲ್ಲಿ ಇರುವ ಒಂದು ದೊಡ್ಡ ಟೀಮ್‌ ಜೊತೆ ಸೇರಿ ಆಟ ಆಡಬಾರದು?’ ಅಂತ ಕೇಳಿದ. ಆ ಸಮಯದಲ್ಲಿ ನನ್ನ ಅಮ್ಮನಿಗೆ ಹುಷಾರ್‌ ಇರಲಿಲ್ಲ. ಅಂತ ಟೈಮಲ್ಲಿ, ಅವರನ್ನ ಒಬ್ರನ್ನೇ ಬಿಟ್ಟು ಹೋಗೋಕೆ ನನಗೆ ಇಷ್ಟ ಇರಲಿಲ್ಲ. ಅದಕ್ಕೆ ಅವರು ಕೊಟ್ಟ ಆಫರ್‌ ಬೇಡ ಅಂದೆ. ಸ್ವಲ್ಪ ಸಮಯ ಕಳೆದ ಮೇಲೆ, ಇನ್ನೊಬ್ಬ ಸ್ಕೌಟ್‌ ಕೋಸ್ಟಾ ರಿಕಾದ ರಾಷ್ಟ್ರೀಯ ಬೇಸ್‌ಬಾಲ್‌ ಟೀಮ್‌ ಜೊತೆ ಆಟ ಆಡೋ ಅವಕಾಶ ಕೊಟ್ಟರು. ಈ ಸಲ ಆ ಆಫರ್‌ನ ನಾನು ಒಪ್ಕೊಂಡೆ. ಈ ರಾಷ್ಟ್ರೀಯ ಟೀಮ್‌ ಜೊತೆ ನಾನು 1949 ರಿಂದ 1952ರ ತನಕ ಆಟ ಆಡಿದೆ.‏ ಕ್ಯೂಬಾ, ಮೆಕ್ಸಿಕೊ ಮತ್ತು ನಿಕಾರಾಗೊ ಅಂತ ಸ್ಥಳಗಳಲ್ಲಿ ತುಂಬಾ ಆಟಗಳನ್ನ ಆಡಿದ್ದೀನಿ.‏ ನಾನು ಟೀಮ್‌ನಾ ಬೇಸ್‌ಮ್ಯಾನ್‌ ಆಗಿದ್ದೆ. ನಾನು ಎಷ್ಟು ಚೆನ್ನಾಗಿ ಆಟ ಆಡ್ತಿದ್ದೆ ಅಂದ್ರೆ 17 ಆಟಗಳನ್ನ ಒಂದೇ ಸಮ, ಯಾವ ತಪ್ಪೂ ಇಲ್ಲದೆ ಆಡ್ತಿದ್ದೆ. ನಾನು ಆಟ ಆಡುವಾಗ ಜನರು ನನ್ನ ಹೆಸರನ್ನ ಕೂಗುತ್ತಾ ಇದ್ರು. ಅದು ನನಗೆ ತುಂಬಾ ಖುಷಿ ಕೊಡ್ತಿತ್ತು.

ನನ್ನ ಜೀವನ ಶೈಲಿ ಒಂದುಚೂರು ಸರಿಯಿರಲಿಲ್ಲ. ನನಗೆ ಇದ್ದಿದ್ದು ಒಂದು ಗರ್ಲ್‌ಫ್ರೆಂಡ್‌. ಆದ್ರೆ ತುಂಬಾ ಜನ ಹೆಂಗಸರ ಜೊತೆ ಸಂಬಂಧ ಇಟ್ಕೊಂಡಿದ್ದೆ. ಕಂಠ ಪೂರ್ತಿ ಕುಡಿತಿದ್ದೆ. ಒಂದಿನ ನಾನು ಎಷ್ಟು ಕುಡಿದಿದ್ದೆ ಅಂದ್ರೆ, ಬೆಳಿಗ್ಗೆ ಎದ್ದಾಗ ನಾನು ಮನೆಗೆ ಹೇಗೆ ಬಂದೆ, ಯಾವಾಗ ಬಂದೆ ಅನ್ನೋದೇ ನನಗೆ ಗೊತ್ತಾಗಲಿಲ್ಲ. ಜೂಜಾಡೊ, ಲಾಟರಿ ಖರೀದಿಸುವ ಚಟ ಕೂಡ ನನಗೆ ಇತ್ತು.

ಈ ತರ ನಾನು ಜೀವನ ಮಾಡುತ್ತಿದ್ದಾಗ, ಒಂದಿನ ನನ್ನ ಅಮ್ಮ ಯೆಹೋವನ ಸಾಕ್ಷಿಯಾದಳು. ಅಮ್ಮ ಕಲಿತ ವಿಷಯಗಳನ್ನ ನನ್ನ ಹತ್ರ ಹಂಚ್ಕೊಳ್ತಿದ್ದಳು. ಆದರೆ ಅದರ ಮೇಲೆ ನನಗೆ ಅಷ್ಟು ಇಂಟರೆಸ್ಟ್‌ ಇರಲಿಲ್ಲ. ನಾನು ಆಟದಲ್ಲಿ ಎಷ್ಟು ಮುಳುಗಿ ಹೋಗ್ತಿದ್ದೆ ಅಂದ್ರೆ ಊಟ ಮಾಡೋದನ್ನ ಕೂಡ ಮರೆತು ಹೋಗ್ತಿದ್ದೆ. ನನ್ನ ಗಮನ ಪೂರ್ತಿ ಆಟದ ಮೇಲೆನೇ ಇರುತ್ತಿತ್ತು. ಎಷ್ಟ್‌ ಅಂದ್ರೆ ನನಗೆ ಬೇಸ್‌ಬಾಲ್‌ ಆಟದ ಹುಚ್ಚೇ ಹಿಡಿದಿತ್ತು.

29 ವಯಸ್ಸಿನಲ್ಲಿ ನಾನು ಬೇಸ್‌ಬಾಲ್‌ ಆಟ ಆಡುತ್ತಿರುವಾಗ, ನನಗೆ ತೀವ್ರವಾಗಿ ಗಾಯ ಆಯ್ತು. ಈ ಅಪಘಾತದಿಂದ ನಾನು ಚೇತರಿಸಿಕೊಂಡ ಮೇಲೆ ಆಟ ಆಡುವುದನ್ನ ನಿಲ್ಲಿಸಿಬಿಟ್ಟೆ. ಆದ್ರೆ ಬೇಸ್‌ಬಾಲ್‌ ಆಡೋದನ್ನ ನಾನು ಸಂಪೂರ್ಣವಾಗಿ ಬಿಟ್ಟಿಲ್ಲ. ಮನೆ ಹತ್ತಿರ ಇದ್ದ ಒಂದು ಟೀಮ್‌ಗೆ ಬೇಸ್‌ಬಾಲ್‌ ಆಟದ ಬಗ್ಗೆ ಟ್ರೈನಿಂಗ್‌ ಕೊಡ್ತಿದ್ದೆ.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌

1957ರಲ್ಲಿ ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ನಾನು ಹೋದೆ.‏ ಈ ಹಿಂದೆ ಅಧಿವೇಶನ ನಡೆಯುತ್ತಿದ್ದ, ಅದೇ ಸ್ಟೇಡಿಯಂನಲ್ಲಿ ನಾನು ಬೇಸ್‌ಬಾಲ್‌ ಆಡಿದ್ದೆ. ನಾನು ಆ ಸ್ಟೇಡಿಯಂನಲ್ಲಿ ಕೂತಿದ್ದಾಗ, ಯೆಹೋವನ ಸಾಕ್ಷಿಗಳಿಗೂ ಮತ್ತು ನಾನಲ್ಲಿ ಬೇಸ್‌ಬಾಲ್‌ ಆಡುತ್ತಿದ್ದಾಗ ಅಲ್ಲಿ ಸೇರಿ ಬಂದ ಜನರಿಗೂ ಇದ್ದ ವ್ಯತ್ಯಾಸನ ನಾನು ನೋಡಿದೆ. ಈ ದೊಡ್ಡ ವ್ಯತ್ಯಾಸನ ನಾನು ಗಮನಿಸಿದ ಮೇಲೆ, ಬೈಬಲ್‌ ಸ್ಟಡಿ ತಗೊಳ್ಳೋಕೆ ಮತ್ತು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹೋಗೋಕೆ ಶುರುಮಾಡಿದೆ.

ನಾನು ಬೈಬಲಿಂದ ಕಲಿತಿದ್ದ ವಿಷಯಗಳೆಲ್ಲಾ ನನಗೆ ತುಂಬಾ ಇಷ್ಟ ಆಗ್ತಿತ್ತು. ಉದಾಹರಣೆಗೆ, ಕೊನೇ ದಿನಗಳಲ್ಲಿ, ದೇವರ ಆಳ್ವಿಕೆಯ ಸಿಹಿಸುದ್ದಿ ಲೋಕದಲ್ಲಿರುವ ಎಲ್ಲ ಜನಾಂಗಗಳಿಗೆ ತನ್ನ ಶಿಷ್ಯರು ಸಾಕ್ಷಿಗಾಗಿ ಸಾರುತ್ತಾರೆ ಅಂತ ಯೇಸು ಹೇಳಿದ್ದ. (ಮತ್ತಾಯ 24:14) ಆದರೆ ಈ ಸಾರುವ ಕೆಲಸನಾ ನಿಜ ಕ್ರೈಸ್ತರು ದುಡ್ಡಿನ ಆಸೆಗೆ ಮಾಡಲ್ಲ ಅಂತ ನಾನು ಕಲಿತೆ. ಯೇಸು ಹೀಗಂದನು: “ನಿಮಗೆ ಉಚಿತವಾಗಿ ಸಿಕ್ಕಿದೆ, ಉಚಿತವಾಗಿ ಕೊಡಿ.”—ಮತ್ತಾಯ 10:8.

ಬೈಬಲ್‌ ಸ್ಟಡಿ ಮಾಡ್ತಾ-ಮಾಡ್ತಾ ಬೈಬಲ್‌ನಲ್ಲಿ ಇರೋ ತರ ಯೆಹೋವನ ಸಾಕ್ಷಿಗಳು ನಡ್ಕೊಳ್ತಿದ್ದಾರಾ, ಇಲ್ವಾ ಅಂತ ನಾನು ಆಗಾಗ ಹೋಲಿಕೆ ಮಾಡಿ ನೋಡ್ತಿದ್ದೆ. ಲೋಕವ್ಯಾಪಕವಾಗಿ ಸುವಾರ್ತೆ ಸಾರಲು ಅವರು ಮಾಡ್ತಿರೋ ಪ್ರಯತ್ನ, ಪಡ್ತಿರೋ ಶ್ರಮ ನೋಡಿ ನನಗೆ ತುಂಬಾ ಇಷ್ಟ ಆಯ್ತು. ಯೇಸು ತನ್ನ ಶಿಷ್ಯರಿಗೆ ಹೇಳಿಕೊಟ್ಟ ಹಾಗೆ, ಇವರು ಯಾವುದೇ ಸ್ವಾರ್ಥ ಇಲ್ಲದೆ ಬೇರೆಯವರಿಗೆ ಸಹಾಯ ಮಾಡೋದನ್ನ ನಾನು ನೋಡಿದೆ. “ಬಂದು ನನ್ನ ಶಿಷ್ಯನಾಗು” ಅಂತ ಯೇಸು ಕೊಟ್ಟಿರೋ ಆಮಂತ್ರಣನ ನಾನು ಮಾರ್ಕ 10:21 ರಲ್ಲಿ ಓದೋವಾಗ ನಾನೂ ಒಬ್ಬ ಯೆಹೋವನ ಸಾಕ್ಷಿಯಾಗಬೇಕು ಅಂತ ಅನಿಸಿತು.

ಆದರೆ ಸಾಕ್ಷಿ ಆಗೋಕೆ ನಾನು ಮಾಡಬೇಕಾದ ಬದಲಾವಣೆಗಳನ್ನ ಮಾಡೋಕೆ ಸ್ವಲ್ಪ ಟೈಮ್‌ ತಗೊಳ್ತು. ನನಗೆ ತುಂಬಾ ವರ್ಷಗಳಿಂದ ಲಾಟರಿ ಆಡೋ ಚಟ ಇತ್ತು. ನನಗೊಂದು ಲಕ್ಕಿ ನಂಬರ್‌ ಇತ್ತು. ಆ ಲಕ್ಕಿ ನಂಬರ್‌ ಮೇಲೆ ಪ್ರತಿವಾರ ಲಾಟರಿ ಆಡುತ್ತಿದ್ದೆ. ಆದರೆ ಅತಿಯಾಸೆ ಪಡೋರು ಮತ್ತು ‘ಅದೃಷ್ಟ ದೇವರನ್ನ’ ನಂಬೋರನ್ನ ಯೆಹೋವ ದೇವರು ದ್ವೇಷಿಸುತ್ತಾನೆ ಅಂತ ಬೈಬಲಿಂದ ನಾನು ಕಲಿತೆ. (ಯೆಶಾಯ 65:11; ಕೊಲೊಸ್ಸೆ 3:5) ಅದಕ್ಕೆ ನಾನು ಜೂಜಾಡೋದನ್ನ ನಿಲ್ಲಿಸಬೇಕು ಅಂತ ನಿರ್ಧಾರ ಮಾಡಿದೆ. ನಾನು ಯಾವ ವಾರ ಲಾಟರಿ ಆಡೋದನ್ನ ನಿಲ್ಲಿಸಿದ್ನೋ ಅದೇ ವಾರ ನನ್ನ ಲಕ್ಕಿ ನಂಬರ್‌ ಗೆಲ್ತು. ಆ ವಾರ ಲಾಟರಿ ಆಡದೇ ಇದ್ದದಕ್ಕೆ ಜನರು ನನ್ನ ಗೇಲಿ ಮಾಡಿದ್ರು. ನಾನು ಮತ್ತೆ ಲಾಟರಿ ಆಡೋದನ್ನ ಶುರು ಮಾಡಬೇಕು ಅಂತ ಒತ್ತಾಯ ಮಾಡಿದರು. ಆದ್ರೆ ನಾನು ಅವರ ಮಾತು ಕೇಳಿಲ್ಲ, ಮತ್ತೆ ಯಾವತ್ತು ಜೂಜಾಟದ ಕಡೆ ತಲೆ ಹಾಕಿಲ್ಲ.

ಅಷ್ಟೇ ಅಲ್ಲ, ನಾನು ದೀಕ್ಷಾಸ್ನಾನ ತಗೊಂಡ ದಿನಾನೇ ನನ್ನ “ಹೊಸ ವ್ಯಕ್ತಿತ್ವವನ್ನ” ಪರೀಕ್ಷೆ ಮಾಡೋ ಒಂದು ಘಟನೆ ನಡಿತು. (ಎಫೆಸ 4:24) ಅಧಿವೇಶನ ಮುಗಿಸಿಕೊಂಡು ಹೋಟೆಲಿಗೆ ವಾಪಸ್‌ ಹೋದಾಗ, ನನ್‌ ರೂಮ್‌ ಹೊರಗಡೆ ನನ್‌ ಹಳೇ ಗರ್ಲ್‌ಫ್ರೆಂಡ್‌ ಕಾಯ್ತಾ ಇದ್ದಳು. ಅವಳು ನನಗೆ “ಬಾ ಮಜಾ ಮಾಡೋಣ, ಸ್ವಲ್ಪ ಹೊತ್ತು ಖುಷಿಯಾಗಿ ಇರೋಣ” ಅಂತ ಕರೆದಳು. ಅದಕ್ಕೆ ನಾನು, “ಇಲ್ಲ, ನಾನು ಬರಲ್ಲ, ನಾನೀಗ ಬೈಬಲ್‌ ಹೇಳೋ ಪ್ರಕಾರ ಜೀವಿಸ್ತಿದ್ದೇನೆ” ಅಂತ ಅವಳಿಗೆ ಹೇಳಿದೆ. (1 ಕೊರಿಂಥ 6:18) “ಏನು? ನಿನಗೇನಾದ್ರೂ ತಲೆಕೆಟ್ಟಿದೆಯಾ?” ಅಂತ ಕೇಳಿದಳು. “ಬೈಬಲ್‌ನಲ್ಲಿ ಲೈಂಗಿಕ ಅನೈತಿಕತೆ ಬಗ್ಗೆ ಹೇಳೋದೆಲ್ಲ ಸೀರಿಯಸ್ಸಾಗಿ ತಗೊಳ್ಳಬಾರದು. ನಾವು ಮೊದಲು ಹೇಗಿದ್ವೊ ಅದೇ ತರ ಒಟ್ಟಿಗೆ ಇರೋಣ” ಅಂತ ಒತ್ತಾಯ ಮಾಡಿದಳು. ಆಗ ನಾನು “ಇನ್ನೂ ಇಲ್ಲೇ ನಿಂತ್ಕೊಂಡಿದ್ರೆ ಸರಿ ಇರಲ್ಲ” ಅಂತ ಅಂದ್ಕೊಂಡು ಏನು ಮಾತಾಡದೆ ರೂಮ್‌ ಒಳಗೆ ಹೋಗಿ ಬಾಗ್ಲು ಹಾಕೊಂಡೆ. 1958 ರಲ್ಲಿ ಬ್ಯಾಪ್ಟಿಸಮ್‌ ಆದಾಗಿಂದ ಇವತ್ತಿನ ತನಕ, ನಾನು ನನ್ನ ಜೀವನದಲ್ಲಿ ಬದಲಾವಣೆ ಮಾಡ್ಕೊಂಡು ನಂಬಿಗಸ್ತಿಕೆಯಿಂದ ಯೆಹೋವನ ಸೇವೆ ಮಾಡ್ತಿದ್ದೇನೆ ಅಂತ ಹೇಳಿಕೊಳ್ಳೋಕೆ ನನಗೆ ತುಂಬಾ ಖುಷಿಯಾಗುತ್ತೆ.

ಸಿಕ್ಕಿದ ಪ್ರಯೋಜನಗಳು

ಬೈಬಲಿಂದ ನನಗೆ ಎಷ್ಟು ಪ್ರಯೋಜನ ಆಯ್ತು ಅಂದ್ರೆ, ಅದ್ರ ಬಗ್ಗೆ ನಾನು ಒಂದು ಪುಸ್ತಕನೇ ಬರೆಯಬಹುದು. ಈಗ ನನಗೆ ನಿಜವಾದ ಫ್ರೆಂಡ್ಸ್‌ ಇದ್ದಾರೆ. ಜೀವನದಲ್ಲಿ ನಾನು ಸರಿಯಾದ ದಾರಿಯಲ್ಲಿ ನಡಿತಿದ್ದೀನಿ ಅನ್ನೋ ತೃಪ್ತಿ ಇದೆ ಮತ್ತು ನಿಜವಾಗ್ಲೂ ಸಂತೋಷವಾಗಿದ್ದೀನಿ.

ಈಗಲೂ ಬೇಸ್‌ಬಾಲ್‌ ಅಂದ್ರೆ ನನಗೆ ತುಂಬಾ ಇಷ್ಟ. ಆದ್ರೆ ಅದನ್ನ ಯಾವ ಜಾಗದಲ್ಲಿ ಇಡಬೇಕೋ ಆ ಜಾಗದಲ್ಲಿ ಇಟ್ಟಿದ್ದೀನಿ. ನಿಜ, ಬೇಸ್‌ಬಾಲ್‌ ಆಡೋವಾಗ ನನಗೆ ಹೆಸರು, ಹಣ, ಕೀರ್ತಿ ಇವೆಲ್ಲ ಸಿಕ್ತು. ಇದೆಲ್ಲಾ ಜಾಸ್ತಿ ದಿನ ಇರಲಿಲ್ಲ. ಆದ್ರೆ ಯೆಹೋವನ ಜೊತೆ ನನಗಿರೋ ಸಂಬಂಧ ಮತ್ತು ಸಹೋದರ-ಸಹೋದರಿಯ ಜೊತೆ ಇರೋ ಸ್ನೇಹ ಇದು ಶಾಶ್ವತವಾಗಿ ಉಳಿಯುತ್ತೆ. ಯಾಕಂದ್ರೆ ಬೈಬಲ್‌ ಹೀಗೆ ಹೇಳುತ್ತೆ: “ಲೋಕ ಮತ್ತು ಅದ್ರ ಆಸೆ ನಾಶ ಆಗುತ್ತೆ. ಆದ್ರೆ ದೇವರ ಇಷ್ಟವನ್ನ ಮಾಡೋ ವ್ಯಕ್ತಿ ಯಾವಾಗ್ಲೂ ಇರ್ತಾನೆ.” (1 ಯೋಹಾನ 2:17) ಈಗ ನಾನು ಎಲ್ಲದಕ್ಕಿಂತ ಯೆಹೋವನನ್ನ ಮತ್ತು ಆತನ ಜನರನ್ನ ತುಂಬಾ-ತುಂಬಾ ಪ್ರೀತಿಸ್ತೀನಿ!