ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ರಾಜಕೀಯ ವಿಷಯಗಳಲ್ಲಿ ಯಾಕೆ ಕೈಹಾಕಲ್ಲ?

ಯೆಹೋವನ ಸಾಕ್ಷಿಗಳು ರಾಜಕೀಯ ವಿಷಯಗಳಲ್ಲಿ ಯಾಕೆ ಕೈಹಾಕಲ್ಲ?

 ಇದಕ್ಕೆ ಕೆಲವೊಂದು ಧಾರ್ಮಿಕ ಕಾರಣಗಳಿವೆ. ಯೆಹೋವನ ಸಾಕ್ಷಿಗಳಾದ ನಾವು ಬೈಬಲ್‌ ಹೇಳುವುದನ್ನು ಪಾಲಿಸುತ್ತೇವೆ. ನಾವು ಯಾವ ಪಕ್ಷಕ್ಕೇ ಆಗಲಿ ಯಾವ ಅಭ್ಯರ್ಥಿಗೇ ಆಗಲಿ ಮತ ಹಾಕಲ್ಲ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಈ ಪಕ್ಷಕ್ಕೆ ಬೆಂಬಲಿಸಿ ಆ ಪಕ್ಷಕ್ಕೆ ಬೆಂಬಲಿಸಿ ಎಂದು ಬೇರೆಯವರಿಗೆ ಹೇಳಲ್ಲ, ಸರ್ಕಾರದ ಬದಲಾವಣೆಗಾಗಿ ನಡೆಯುವ ಯಾವ ಕೆಲಸದಲ್ಲೂ ಕೈಹಾಕಲ್ಲ. ಹೀಗೆ ಮಾಡಲು ಬೈಬಲಿನ ಬಲವಾದ ಆಧಾರ ನಮಗಿದೆ. ಅವು ಇಲ್ಲಿವೆ:

  •   ನಾವು ಯೇಸುವನ್ನು ಅನುಕರಿಸುತ್ತೇವೆ. ಜನರು ಯೇಸುವನ್ನು ರಾಜನನ್ನಾಗಿ ಮಾಡಬೇಕೆಂದು ಬಯಸಿದಾಗ ಅವನು ಅದನ್ನು ನಿರಾಕರಿಸಿದನು. (ಯೋಹಾನ 6:15) ಅಷ್ಟೇ ಅಲ್ಲ ತನ್ನ ಶಿಷ್ಯರಿಗೆ “ಈ ಲೋಕದ ಭಾಗವಾಗಿ ಇರದಂತೆ” ಪ್ರೋತ್ಸಾಹಿಸಿದನು. ಯಾವುದೇ ರಾಜಕೀಯ ವಿಷಯಗಳಲ್ಲಿ ಕೈಹಾಕದಂತೆ ಸ್ಪಷ್ಟವಾಗಿ ಎಚ್ಚರಿಸಿದನು.​—ಯೋಹಾನ 17:14, 16; 18:36; ಮಾರ್ಕ 12:13-17.

  •   ನಾವು ದೇವರ ರಾಜ್ಯಕ್ಕೆ ನಿಷ್ಠೆ ತೋರಿಸುತ್ತೇವೆ. ದೇವರ ರಾಜ್ಯದ ಬಗ್ಗೆ ಯೇಸು ಹೀಗಂದನು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು.” (ಮತ್ತಾಯ 24:14) ದೇವರ ರಾಜ್ಯದ ಬಗ್ಗೆ ಜನರಿಗೆ ತಿಳಿಸಬೇಕೆಂಬ ಆಜ್ಞೆಯನ್ನು ಯೇಸು ಕೊಟ್ಟಿದ್ದಾನೆ. ಹಾಗಾಗಿ ದೇವರ ರಾಜ್ಯದ ಪ್ರತಿನಿಧಿಗಳಾದ ನಾವು ರಾಜಕೀಯ ವಿಷಯಗಳಲ್ಲಿ ಕೈಹಾಕಲ್ಲ. ನಾವಿರುವ ದೇಶ ಅಥವಾ ವಿದೇಶದ ರಾಜಕೀಯ ವಿಷಯಗಳಲ್ಲಿ ನಾವು ತಲೆ ಹಾಕಲ್ಲ.​—2 ಕೊರಿಂಥ 5:20; ಎಫೆಸ 6:20.

  •   ನಾವು ರಾಜಕೀಯದಲ್ಲಿ ಒಳಗೂಡದೆ ಇರುವುದರಿಂದ ಧೈರ್ಯವಾಗಿ ಜನರಿಗೆ ದೇವರ ರಾಜ್ಯದ ಸುವಾರ್ತೆ ಸಾರಲು ಆಗುತ್ತಿದೆ. ಎಲ್ಲ ಕಷ್ಟಗಳಿಗೆ ದೇವರ ರಾಜ್ಯವೊಂದೇ ಪರಿಹಾರ ನೀಡುತ್ತದೆ ಎಂದು ನಾವು ನಂಬುತ್ತೇವೆ. ಆ ನಂಬಿಕೆಯನ್ನು ನಮ್ಮ ನಡೆನುಡಿಯಲ್ಲಿ ತೋರಿಸುತ್ತೇವೆ.​—ಕೀರ್ತನೆ 56:11.

  •   ನಾವೆಲ್ಲರೂ ರಾಜಕೀಯ ಮೇರೆಗಳನ್ನು ಮೆಟ್ಟಿ ನಿಂತಿರುವುದರಿಂದ ಅಂತಾರಾಷ್ಟ್ರೀಯವಾಗಿ ಅನ್ಯೋನ್ಯವಾಗಿ ಅಣ್ಣತಮ್ಮಂದಿರಂತೆ ಇದ್ದೇವೆ. (ಕೊಲೊಸ್ಸೆ 3:14; 1 ಪೇತ್ರ 2:17) ಅದೇ ಬೇರೆ ಧರ್ಮಗಳನ್ನು ತೆಗೆದುಕೊಂಡರೆ ರಾಜಕೀಯದಲ್ಲಿ ಕೈಹಾಕಿ ತಮ್ಮ ಜನರ ಒಳಗೇ ಒಡಕು ಹುಟ್ಟಿಸಿದ್ದಾರೆ.—1 ಕೊರಿಂಥ 1:10.

 ಸರ್ಕಾರಗಳಿಗೆ ಗೌರವ: ರಾಜಕೀಯದಲ್ಲಿ ನಾವು ತಲೆಹಾಕದಿದ್ದರೂ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸುತ್ತೇವೆ. ಇದು ಬೈಬಲಿನ ಈ ಆಜ್ಞೆಗೆ ಹೊಂದಿಕೆಯಲ್ಲಿದೆ: “ಪ್ರತಿಯೊಬ್ಬನು ಮೇಲಧಿಕಾರಿಗಳಿಗೆ ಅಧೀನನಾಗಿರಲಿ.” (ರೋಮನ್ನರಿಗೆ 13:1) ನಾವು ನಿಯಮಗಳನ್ನು ಪಾಲಿಸುತ್ತೇವೆ. ತೆರಿಗೆ ಕಟ್ಟುತ್ತೇವೆ. ಪ್ರಜೆಗಳ ಸುಕ್ಷೇಮಕ್ಕೋಸ್ಕರ ಮಾಡುವ ಎಲ್ಲ ಏರ್ಪಾಡುಗಳಿಗೆ ಸಹಕಾರ ನೀಡುತ್ತೇವೆ. ಸರ್ಕಾರವನ್ನು ಉರುಳಿಸುವ ಪ್ರಯತ್ನಕ್ಕೆ ಕೈಹಾಕಲ್ಲ. ಅದರ ಬದಲು ಬೈಬಲ್‌ ಹೇಳುವಂತೆ “ಅರಸರುಗಳಿಗಾಗಿಯೂ ಉನ್ನತ ಸ್ಥಾನದಲ್ಲಿರುವ ಎಲ್ಲ ರೀತಿಯ ಜನರಿಗಾಗಿಯೂ” ಪ್ರಾರ್ಥಿಸುತ್ತೇವೆ. ಅದರಲ್ಲೂ ಮುಖ್ಯವಾಗಿ ನಮ್ಮ ಆರಾಧನಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಅವರು ಮಾಡುವಾಗಲಂತೂ ಇನ್ನೂ ಹೆಚ್ಚು ಪ್ರಾರ್ಥಿಸುತ್ತೇವೆ.—1 ತಿಮೊಥೆಯ 2:1, 2.

 ಇತರರ ಹಕ್ಕನ್ನು ಸಹ ನಾವು ಗೌರವಿಸುತ್ತೇವೆ. ರಾಜಕೀಯ ವಿಷಯದಲ್ಲಿ ಸ್ವಂತ ನಿರ್ಣಯ ಮಾಡುವಂತೆ ಬಿಡುತ್ತೇವೆ. ಉದಾಹರಣೆಗೆ, ಎಲೆಕ್ಷನ್‌ ನಡೆಯುವಾಗ ಅದನ್ನು ವಿರೋಧಿಸುವುದಾಗಲಿ, ಮತ ಚಲಾಯಿಸುವವರನ್ನು ತಡೆಯುವುದಾಗಲಿ ನಾವು ಮಾಡಲ್ಲ.

 ನಮ್ಮ ಈ ನಿರ್ಧಾರ ಇತ್ತೀಚಿಗಷ್ಟೇ ತೆಗೆದುಕೊಂಡದ್ದಾ? ಇಲ್ಲ, ಒಂದನೇ ಶತಮಾನದ ಕ್ರೈಸ್ತರಲ್ಲಿ ಮತ್ತು ಅಪೊಸ್ತಲರಲ್ಲಿ ಅಂದರೆ ಯೇಸುವಿನ ಶಿಷ್ಯರಲ್ಲಿ ಸರ್ಕಾರ, ಅಧಿಕಾರಿಗಳ ಬಗ್ಗೆ ಇದೇ ನಿಲುವಿತ್ತು. ಬಿಯಾಂಡ್‌ ಗುಡ್‌ ಇಂಟೆನ್ಶನ್ಸ್‌ ಎಂಬ ಪುಸ್ತಕ ಹೀಗೆ ಹೇಳಿತು: “ಒಂದನೇ ಶತಮಾನದ ಕ್ರೈಸ್ತರು ಸರ್ಕಾರಿ ಅಧಿಕಾರಿಗಳಿಗೆ ಗೌರವ ತೋರಿಸಬೇಕು ಎನ್ನುವುದನ್ನು ನಂಬುತ್ತಿದ್ದರಾದರೂ ಅವರು ರಾಜಕೀಯ ವಿಷಯದಲ್ಲಿ ಒಳಗೂಡಬಾರದು ಎಂದು ನಂಬಿದರು.” ಅದೇ ರೀತಿ ಆನ್‌ ದ ರೋಡ್‌ ಟು ಸಿವಿಲೈಜೆಶನ್‌ ಎಂಬ ಪುಸ್ತಕ ಹೀಗೆ ಹೇಳಿತು: ಒಂದನೇ ಶತಮಾನದ ಕ್ರೈಸ್ತರು “ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.”

 ನಾವು ಈ ರೀತಿ ರಾಜಕೀಯ ವಿಷಯದಲ್ಲಿ ಒಳಗೂಡದಿರುವುದರಿಂದ ದೇಶಕ್ಕೆ ಏನಾದರೂ ಅಪಾಯ ಇದೆಯಾ? ಖಂಡಿತ ಇಲ್ಲ. ನಾವು ಶಾಂತಿಯನ್ನು ಪ್ರೀತಿಸುವ ಜನರು. ಅಧಿಕಾರಿಗಳು ನಮ್ಮ ಬಗ್ಗೆ ಭಯಪಡಬೇಕಾದ ಅವಶ್ಯಕತೆ ಇಲ್ಲ. 2001ರಲ್ಲಿ ಯುಕ್ರೇನಿನ ಒಂದು ವರದಿ ಗಮನಿಸಿ. ರಾಜಕೀಯದಲ್ಲಿ ಒಳಗೂಡದೇ ಇರುವುದರಿಂದ “ಇಂದು ಕೆಲವರು ಯೆಹೋವನ ಸಾಕ್ಷಿಗಳನ್ನು ವಿರೋಧಿಸುತ್ತಾರೆ. ಹಿಂದೆ ಇದೇ ಕಾರಣದಿಂದಾಗಿ ನಾಝಿ ಸರ್ವಾಧಿಕಾರ ಮತ್ತು ಕಮ್ಯೂನಿಸ್ಟ್‌ ಆಡಳಿತ ಯೆಹೋವನ ಸಾಕ್ಷಿಗಳ ಮೇಲೆ ಆರೋಪ ಹೊರಿಸಿದವು.” ಆದರೂ ಯೆಹೋವನ ಸಾಕ್ಷಿಗಳು “ನಿಯಮಪಾಲಿಸುವ ಪ್ರಜೆಗಳಾಗಿದ್ದರು. ಪ್ರಾಮಾಣಿಕವಾಗಿ, ನಿಸ್ವಾರ್ಥದಿಂದ ಹೊಲಗಳಲ್ಲಿ ಫ್ಯಾಕ್ಟರಿಗಳಲ್ಲಿ ಕೆಲಸಮಾಡಿದರು. ಆಗಿನ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆಯನ್ನು ತಂದೊಡ್ಡಲಿಲ್ಲ.” ಇಂದು ಸಹ ಯೆಹೋವನ ಸಾಕ್ಷಿಗಳ ನಂಬಿಕೆಗಳು, ಆಚಾರಗಳು “ದೇಶದ ಶಾಂತಿ ಭದ್ರತೆಗೆ ಮತ್ತು ದೇಶದ ಏಕತೆಗೆ ಕುತ್ತು ತರಲ್ಲ.”