ಮಾಹಿತಿ ಇರುವಲ್ಲಿ ಹೋಗಲು

ರಾಷ್ಟ್ರೀಯ ಹಬ್ಬ ಮತ್ತು ಆಚರಣೆಗಳಲ್ಲಿ ಯೆಹೋವನ ಸಾಕ್ಷಿಗಳು ಯಾಕೆ ಭಾಗವಹಿಸುವುದಿಲ್ಲ?

ರಾಷ್ಟ್ರೀಯ ಹಬ್ಬ ಮತ್ತು ಆಚರಣೆಗಳಲ್ಲಿ ಯೆಹೋವನ ಸಾಕ್ಷಿಗಳು ಯಾಕೆ ಭಾಗವಹಿಸುವುದಿಲ್ಲ?

 ಯೆಹೋವನ ಸಾಕ್ಷಿಗಳು ಸರ್ಕಾರಗಳನ್ನು ಮತ್ತು ಅದರ ಲಾಂಛನಗಳನ್ನು ಗೌರವಿಸುತ್ತಾರೆ. ಜನರು ದೇಶಕ್ಕೋಸ್ಕರ ನಿಷ್ಠೆಯ ಪ್ರತಿಜ್ಞೆ ಮಾಡೋದು, ಧ್ವಜಗಳಿಗೆ ವಂದಿಸೋದು ಅಥವಾ ರಾಷ್ಟ್ರೀಯ ಗೀತೆಗಳನ್ನ ಹಾಡೋದು ಅವರ ವೈಯಕ್ತಿಕ ವಿಚಾರ ಆಗಿರೋದರಿಂದ ಅದನ್ನು ಗೌರವಿಸುತ್ತಾರೆ.

 ಆದರೆ ಯೆಹೋವನ ಸಾಕ್ಷಿಗಳಾದ ನಾವು ಅಂಥ ಹಬ್ಬ ಆಚರಣೆಗಳಲ್ಲಿ ಭಾಗವಹಿಸುವುದಿಲ್ಲ. ಯಾಕೆಂದರೆ ಅವು ಬೈಬಲ್‌ ನಿಯಮಗಳಿಗೆ ವಿರುದ್ಧವಾಗಿವೆ ಅಂತ ನಂಬುತ್ತೀವಿ. ನಾವು ಹೇಗೆ ಬೇರೆಯವರ ಆಯ್ಕೆಗಳನ್ನು ಗೌರವಿಸುತ್ತೇವೋ, ಅದೇ ತರ ಬೇರೆಯವರೂ ನಮ್ಮ ಆಯ್ಕೆಗಳನ್ನು ಗೌರವಿಸಬೇಕೆಂದು ಬಯಸುತ್ತೀವಿ.

ಈ ಲೇಖನದಲ್ಲಿ ಮುಂದಿನ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಬಹುದು.

 ಯಾವ ಬೈಬಲ್‌ ಬೋಧನೆಗಳ ಆಧಾರದ ಮೇಲೆ ನಾವು ಈ ನಿರ್ಧಾರ ಮಾಡ್ತೀವಿ?

 ನಾವು ಮಾಡೋ ನಿರ್ಧಾರಗಳು ಈ ಎರಡು ಮುಖ್ಯ ಬೈಬಲ್‌ ಬೋಧನೆಗಳ ಮೇಲೆ ಆಧಾರಿತವಾಗಿದೆ:

  •   ನಮ್ಮ ಆರಾಧನೆ ಪಡ್ಕೊಳ್ಳೋ ಅರ್ಹತೆ ದೇವರಿಗೆ ಮಾತ್ರ ಇದೆ. ಬೈಬಲ್‌ ಹೇಳೋದು: “ನಿನ್ನ ದೇವರಾಗಿರೋ ಯೆಹೋವನನ್ನೇ ನೀನು ಆರಾಧಿಸಬೇಕು, ಆತನೊಬ್ಬನಿಗೇ ನೀನು ಪವಿತ್ರ ಸೇವೆ ಸಲ್ಲಿಸಬೇಕು.” (ಲೂಕ 4:8) ದೇಶಕ್ಕೋಸ್ಕರ ಮಾಡೋ ಪ್ರತಿಜ್ಞೆ ಮತ್ತು ರಾಷ್ಟ್ರೀಯ ಗೀತೆಗಳಲ್ಲಿರೋ ಕೆಲವು ಪದಗಳು, ಒಬ್ಬ ವ್ಯಕ್ತಿ ಬೇರೆ ಎಲ್ಲದಕ್ಕಿಂತ ದೇಶಕ್ಕೆ ಸಂಪೂರ್ಣ ಭಕ್ತಿ ತೋರಿಸಬೇಕು ಅನ್ನೋ ತರ ಇರುತ್ತೆ. ಅದಕ್ಕೆ ಇಂಥಾ ರಾಷ್ಟ್ರೀಯ ಆಚರಣೆಗಳಲ್ಲಿ ಭಾಗವಹಿಸೋಕೆ ನಮ್ಮ ಮನಸಾಕ್ಷಿ ಒಪ್ಪಲ್ಲ.

     ಮೂರ್ತಿಪೂಜೆ ಮಾಡೋದು ತಪ್ಪು ಅಂತ ಬೈಬಲ್‌ ಹೇಳುತ್ತೆ. (1 ಕೊರಿಂಥ 10:14) ರಾಷ್ಟ್ರಧ್ವಜಕ್ಕೆ ವಂದಿಸೋದು, ಅದನ್ನ ಆರಾಧನೆ ಮಾಡಿದಂತೆ ಅಥವಾ ಮೂರ್ತಿಪೂಜೆ ಮಾಡಿದಂತಾಗುತ್ತೆ. ಅದಕ್ಕೆ ನಾವು ಇದರಲ್ಲಿ ಭಾಗವಹಿಸೋದಿಲ್ಲ. ರಾಷ್ಟ್ರೀಯ ಧ್ವಜಗಳು ನಿಜವಾಗಲೂ ಧಾರ್ಮಿಕ ಸಂಕೇತಗಳಾಗಿವೆ ಅನ್ನೋದನ್ನ ಕೆಲವು ಇತಿಹಾಸಗಾರರು ಒಪ್ಪಿಕೊಳ್ಳುತ್ತಾರೆ. ಉದಾಹರಣೆಗೆ, ಇತಿಹಾಸಗಾರ ಕಾರ್ಲ್‌ಟನ್‌ ಜೆ. ಎಚ್‌. ಹ್ಯಾಸ್‌ a ಹೀಗೆ ಬರೆದಿದ್ದಾರೆ: “ರಾಷ್ಟ್ರೀಯತೆಯ ನಂಬಿಕೆಯ ಮುಖ್ಯ ಸಂಕೇತ ಮತ್ತು ಆರಾಧನೆಯ ಮುಖ್ಯ ವಸ್ತು ಧ್ವಜವಾಗಿದೆ.” ಆರಂಭದ ಕ್ರೈಸ್ತರ ಬಗ್ಗೆ ಲೇಖಕ ಡ್ಯಾನಿಯೇಲ್‌ ಪಿ. ಮನಿಕ್ಸ್‌ ಹೇಳಿದ್ದು: ‘ಕ್ರೈಸ್ತರು ರೋಮನ್‌ ಸಾಮ್ರಾಟನ ರಕ್ಷಕ ದೇವತೆಗೆ ಬಲಿ ಅರ್ಪಿಸಲು ನಿರಾಕರಿಸಿದರು, ಅವರು ಈ ರೀತಿ ಮಾಡಿದ್ದು ಇವತ್ತು ಧ್ವಜವಂದನೆ ಮಾಡೋದನ್ನ ನಿರಾಕರಿಸುವುದಕ್ಕೆ ಸಮಾನವಾಗಿದೆ.’ b

    ಯೆಹೋವನ ಸಾಕ್ಷಿಗಳು ಧ್ವಜಕ್ಕೆ ನಮಸ್ಕರಿಸದಿದ್ದರೂ, ಅದನ್ನು ನಾಶ ಮಾಡೋದಾಗಲಿ, ಸುಡೋದಾಗಲಿ ಮಾಡಲ್ಲ. ಧ್ವಜಕ್ಕಾಗಲಿ ಅಥವಾ ಇನ್ನಾವುದೇ ರಾಷ್ಟ್ರೀಯ ಚಿಹ್ನೆಗಾಗಲಿ ಅಗೌರವ ತೋರಿಸೋದಿಲ್ಲ.

  •   ದೇವರ ಮುಂದೆ ಎಲ್ಲಾ ಮನುಷ್ಯರು ಸಮಾನ. (ಅಪೊಸ್ತಲರ ಕಾರ್ಯ 10:34, 35) “ದೇವರು ಒಬ್ಬ ಮನುಷ್ಯನಿಂದಾನೇ ಎಲ್ಲಾ ದೇಶದ ಜನ್ರನ್ನ ಸೃಷ್ಟಿ ಮಾಡಿದ್ದಾನೆ” ಅಂತ ಬೈಬಲ್‌ ಹೇಳುತ್ತೆ. (ಅಪೊಸ್ತಲರ ಕಾರ್ಯ 17:26) ಅದಕ್ಕೆ ಯಾವುದೋ ಒಂದು ಜನಾಂಗ ಅಥವಾ ಒಂದು ದೇಶ, ಬೇರೆಯವರಿಗಿಂತ ಮೇಲು ಅಂತ ನೆನೆಸೋದು ತಪ್ಪು ಅನ್ನೋದು ಯೆಹೋವನ ಸಾಕ್ಷಿಗಳ ನಂಬಿಕೆ. ಹಾಗಾಗಿ ನಾವು ಎಲ್ಲ ದೇಶ, ಭಾಷೆ, ಬಣ್ಣ, ಸಂಸ್ಕೃತಿಯ ಜನರನ್ನು ಗೌರವಿಸುತ್ತೇವೆ.—1 ಪೇತ್ರ 2:17.

 ಇಂಥಾ ಆಚರಣೆಗಳಲ್ಲಿ ಭಾಗವಹಿಸಬೇಕು ಅಂತ ಸರ್ಕಾರದ ನಿಯಮ ಇರೋದಾದರೆ ಏನು?

 ಯೆಹೋವನ ಸಾಕ್ಷಿಗಳು ಸರ್ಕಾರಗಳನ್ನು ವಿರೋಧಿಸಲ್ಲ. ಯಾಕಂದ್ರೆ ಸರ್ಕಾರಗಳು ‘ದೇವರು ಮಾಡಿರುವ ಏರ್ಪಾಡಿನ’ ಒಂದು ಭಾಗ ಅಂತ ನಾವು ನಂಬುತ್ತೀವಿ. (ರೋಮನ್ನರಿಗೆ 13:1-7) ಅಲ್ಲದೇ ಕ್ರೈಸ್ತರು ಅಧಿಕಾರಿಗಳಿಗೆ ವಿಧೇಯತೆ ತೋರಿಸಬೇಕು ಅಂತನೂ ನಂಬುತ್ತೀವಿ.—ಲೂಕ 20:25.

 ದೇವರ ನಿಯಮಗಳಿಗೆ ವಿರುದ್ಧವಾದ ಸರ್ಕಾರದ ನಿಯಮಗಳಿದ್ದರೆ ಏನು ಮಾಡೋದು? ಅಂಥ ಸಂದರ್ಭಗಳಲ್ಲಿ ನಾವು ಗೌರವದಿಂದ ಸರ್ಕಾರ ಮಾಡಿರೋ ನಿಯಮಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ವಿನಂತಿಸುತ್ತೇವೆ. c ಒಂದುವೇಳೆ ಸರ್ಕಾರ ಒಪ್ಪಲಿಲ್ಲ ಅಂದ್ರೆ ಯೆಹೋವನ ಸಾಕ್ಷಿಗಳಾದ ನಾವು “ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು” ಅನ್ನೋ ಬೈಬಲ್‌ ಸಲಹೆಯನ್ನು ಪಾಲಿಸುತ್ತೇವೆ.—ಅಪೊಸ್ತಲರ ಕಾರ್ಯ 5:29.

 ಯೆಹೋವನ ಸಾಕ್ಷಿಗಳು ಸಾಮಾಜಿಕ ಅಥವಾ ರಾಜಕೀಯ ವಿಷಯಗಳಲ್ಲಿ ಪಕ್ಷ ವಹಿಸ್ತಾರಾ?

 ಇಲ್ಲ. ನಾವು ದೇಶಕ್ಕೋಸ್ಕರ ನಿಷ್ಠೆಯ ಪ್ರತಿಜ್ಞೆ ಮಾಡಲ್ಲ, ಧ್ವಜಗಳಿಗೆ ವಂದಿಸಲ್ಲ ಅಥವಾ ರಾಷ್ಟ್ರೀಯ ಗೀತೆಗಳನ್ನ ಹಾಡಲ್ಲ. ಹಾಗಂದ ಮಾತ್ರಕ್ಕೆ ನಾವು ಯಾವುದೋ ಒಂದು ರಾಜಕೀಯ ಅಥವಾ ಸಾಮಾಜಿಕ ಪಕ್ಷವಹಿಸ್ತಾ ಇದ್ದೀವಿ ಅಂತ ಅದರರ್ಥ ಅಲ್ಲ. ಬದಲಿಗೆ ಆ ಆಚರಣೆಗಳ ಬಗ್ಗೆ ಬೈಬಲಾಧಾರಿತವಾದ ನಮ್ಮ ನಂಬಿಕೆಗಳಿಗೆ ವಿಧೇಯರಾಗ್ತಿದ್ದೀವಿ ಅಂತರ್ಥ.

a ಎಸ್ಸೇಸ್‌ ಆನ್‌ ನ್ಯಾಷನಲಿಸಮ್‌, ಪುಟ 107-108.

b ದ ವೇ ಆಫ್‌ ದ ಗ್ಲಾಡಿಯೇಟರ್‌, ಪುಟ 212.

c ಉದಾಹರಣೆಗೆ, “ಧೈರ್ಯದ ನಿಲುವಿಗೆ ಸಿಕ್ಕ ಗೆಲುವು” ಅನ್ನೋ ಲೇಖನ ನೋಡಿ.