ಮಾಹಿತಿ ಇರುವಲ್ಲಿ ಹೋಗಲು

ಯೇಸು ನೋಡೋಕೆ ಹೇಗಿದ್ದನು?

ಯೇಸು ನೋಡೋಕೆ ಹೇಗಿದ್ದನು?

ಬೈಬಲ್‌ ಕೊಡೋ ಉತ್ತರ

 ಯೇಸು ನೋಡಕ್ಕೆ ಹೇಗಿದ್ದ ಅಂತ ಯಾರಿಗೂ ಗೊತ್ತಿಲ್ಲ ಯಾಕಂದ್ರೆ ಇದರ ಬಗ್ಗೆ ಬೈಬಲ್‌ ಏನೂ ಹೇಳಲ್ಲ. ಇದರಿಂದ ನಮಗೆ ಏನು ಗೊತ್ತಾಗುತ್ತೆ? ಯೇಸು ನೋಡಕ್ಕೆ ಹೇಗೆ ಕಾಣ್ತಿದ್ದ ಅಂತ ತಿಳ್ಕೊಳ್ಳೋದು ಅಷ್ಟು ಪ್ರಾಮುಖ್ಯ ಅಲ್ಲ. ಆದ್ರೆ ಯೇಸು ಕ್ರಿಸ್ತನು ಸುಮಾರಾಗಿ ಹೇಗೆ ಕಾಣಿಸಿರಬಹುದು ಅಂತ ನಾವು ಊಹಿಸಿಕೊಳ್ಳೋಕೆ ಕೆಲವು ವಿವರಗಳನ್ನ ಬೈಬಲ್‌ ಕೊಡುತ್ತೆ.

  •   ಲಕ್ಷಣಗಳು: ಯೇಸು ಒಬ್ಬ ಯೆಹೂದಿ ಆಗಿದ್ದ. ತನ್ನ ತಾಯಿ ತರಾನೇ ಕೆಲವೊಂದು ಲಕ್ಷಣಗಳು ಆತನಿಗೆ ಇದ್ದಿರಬಹುದು. (ಇಬ್ರಿಯ 7:14) ಯೇಸು ಎಲ್ಲರಿಗಿಂತ ಬೇರೆ ತರ ಕಾಣ್ತಿದ್ರು ಅಂತ ನಾವು ಹೇಳಕ್ಕಾಗಲ್ಲ. ಯಾಕಂದ್ರೆ ಯೇಸು ಒಂದು ಸಲ ಗುಟ್ಟಾಗಿ ಗಲಿಲಾಯದಿಂದ ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿದ್ದಾಗ ಆತನನ್ನ ಯಾರು ಗುರುತಿಸಲಿಲ್ಲ. (ಯೋಹಾನ 7:10, 11) ಯೇಸು ತನ್ನ ಶಿಷ್ಯರ ಜೊತೆ ಇದ್ದಾಗ್ಲೂ ನೋಡಕ್ಕೆ ಬೇರೆ ತರ ಕಾಣ್ತಾ ಇರಲಿಲ್ಲ. ಅದಕ್ಕೆ ಸೈನಿಕರು ಯೇಸು ಕ್ರಿಸ್ತನನ್ನ ಬಂಧಿಸುವುದಕ್ಕೆ ಬಂದಾಗ ಆತನನ್ನ ಗುರುತು ಹಿಡಿಯೋಕೆ ಇಸ್ಕರಿಯೂತ ಯೂದನ ಸಹಾಯ ತಗೋಬೇಕಿತ್ತು.—ಮತ್ತಾಯ 26:47-49.

  •   ಕೂದಲು: ಯೇಸು ಕ್ರಿಸ್ತನಿಗೆ ಉದ್ದ ಕೂದಲಿತ್ತು ಅಂತ ನಾವು ಹೇಳಕ್ಕಾಗಲ್ಲ. ಯಾಕೆಂದರೆ “ಪುರುಷನಿಗೆ ಉದ್ದ ಕೂದಲಿರೋದು ಅವಮಾನ” ಅಂತ ಬೈಬಲ್‌ ಹೇಳುತ್ತೆ.—1 ಕೊರಿಂಥ 11:14.

  •   ಗಡ್ಡ: ಯೇಸುವಿಗೆ ದಾಡಿ ಇತ್ತು. ಯಾಕಂದ್ರೆ ಯೆಹೂದ್ಯರ ನಿಯಮದ ಪ್ರಕಾರ, ಪುರುಷರು “ಗಡ್ಡವನ್ನ ವಿಚಿತ್ರವಾಗಿ ಕತ್ತರಿಸಬಾರದು” ಅನ್ನೋ ನಿಯಮ ಇತ್ತು. ಅದಕ್ಕೆ ಯೇಸು ಈ ನಿಯಮವನ್ನ ಪಾಲಿಸ್ತಿದ್ದನು. (ಯಾಜಕಕಾಂಡ 19:27; ಗಲಾತ್ಯ 4:4) ಅಷ್ಟೇ ಅಲ್ಲ, ಯೇಸು ಮುಂದೆ ಅನುಭವಿಸುವ ಕಷ್ಟದ ಬಗ್ಗೆ ಇರುವ ಪ್ರವಾದನೆಯಲ್ಲಿ ಆತನ ಗಡ್ಡದ ಬಗ್ಗೆ ಬೈಬಲ್‌ ಮಾತಾಡುತ್ತೆ.—ಯೆಶಾಯ 50:6.

  •   ದೇಹ: ಯೇಸುಗೆ ಗಟ್ಟಿಮುಟ್ಟಾದ ಮೈ ಕಟ್ಟು ಇತ್ತು ಅಂತ ನಾವು ಬೈಬಲ್‌ನಿಂದ ತಿಳ್ಕೋಬಹುದು. ಯೇಸು ಸುವಾರ್ತೆ ಸಾರುತ್ತಾ ಊರಿಂದ ಊರಿಗೆ ಮೈಲುಗಟ್ಟಲೆ ನಡಿತಾ ಪ್ರಯಾಣ ಮಾಡಿರಬಹುದು. (ಮತ್ತಾಯ 9:35) ಒಂದು ಸಂದರ್ಭದಲ್ಲಿ, ಯೇಸು ಆಲಯವನ್ನ ಶುದ್ಧೀಕರಿಸಿದ. ದೇವಾಲಯದಲ್ಲಿ ನಾಣ್ಯಗಳನ್ನ ಬದಲಾಯಿಸ್ತಿದ್ದವರ ಮೇಜುಗಳನ್ನ ಬೀಳಿಸಿ, ಹಗ್ಗದಿಂದ ಚಾಟಿ ಬೀಸಿ ಕುರಿ ಪಶುಗಳನ್ನ ಸೇರಿಸಿ ಜನರನ್ನೆಲ್ಲ ದೇವಾಲಯದಿಂದ ಓಡಿಸಿದನು ಅಂತ ಬೈಬಲ್‌ ಹೇಳುತ್ತೆ. (ಲೂಕ 19:45, 46; ಯೋಹಾನ 2:14, 15) ಮೆಕ್ಲಿಂಟಕ್‌ ಮತ್ತು ಸ್ಟ್ರಾಂಗ್‌ ಸೈಕ್ಲೋಪೀಡಿಯ ಹೀಗೆ ಹೇಳುತ್ತೆ: “ಸುವಾರ್ತೆ ಪುಸ್ತಕಗಳನ್ನ ನಾವು ಓದುವಾಗ ಎಲ್ಲಾ ಸಂದರ್ಭದಲ್ಲೂ [ಯೇಸುಗೆ] ಆರೋಗ್ಯವಾದ ಮತ್ತು ಗಟ್ಟಿಮುಟ್ಟಾದ ದೇಹ ಇತ್ತು.”—ಸಂಪುಟ IV, ಪುಟ 884.

  •   ಮುಖಭಾವ: ಯೇಸು ತುಂಬಾ ಮೃದು ಸ್ವಭಾವದವನಾಗಿದ್ದ. ಅವನಲ್ಲಿ ಕನಿಕರ ಇತ್ತು. ಈ ಎಲ್ಲಾ ಗುಣಗಳು ಅವನ ಮುಖದಲ್ಲಿ ಎದ್ದು ಕಾಣ್ತಿತ್ತು. (ಮತ್ತಾಯ 11:28, 29) ಅದಕ್ಕೆ ಎಲ್ಲ ತರದ ಜನರು ಯೇಸುವಿನ ಹತ್ತಿರ ಯಾವುದೇ ಸಂಕೋಚ ಇಲ್ಲದೆ ಸಹಾಯನ ಕೇಳುತ್ತಿದ್ದರು. ಇದ್ರಿಂದ ಅವರಿಗೆ ಸಮಾಧಾನ ಸಿಗುತ್ತಿತ್ತು. (ಲೂಕ 5:12, 13; 7:37, 38) ಮಕ್ಕಳು ಕೂಡ ಯೇಸು ಹತ್ತಿರ ಹೋಗೋಕೆ ಮುಜುಗರ ಪಡ್ತಾಯಿರಲಿಲ್ಲ.—ಮತ್ತಾಯ 19:13-15; ಮಾರ್ಕ 9:35-37.

ಯೇಸು ಹೇಗೆ ಕಾಣ್ತಿದ್ದ ಅನ್ನೋದ್ರ ಬಗ್ಗೆ ಇರುವ ತಪ್ಪಾಭಿಪ್ರಾಯಗಳು

 ತಪ್ಪಾಭಿಪ್ರಾಯ: ಯೇಸುವಿನ “ತಲೆಕೂದಲು ಉಣ್ಣೆ ತರ ಮತ್ತು ಆತನ ಕಾಲುಗಳು ದೊಡ್ಡ ಬೆಂಕಿಯಲ್ಲಿ ಕಾಯಿಸಿದ ತಾಮ್ರದ ತರ” ಇದೆ ಅಂತ ಬೈಬಲ್‌ ಹೇಳುತ್ತೆ. ಈ ಕಾರಣ ಕೊಟ್ಟು ಕೆಲವರು ಯೇಸು ಆಫ್ರಿಕಾ ಮೂಲದವನು ಅಂತ ವಾದ ಮಾಡ್ತಾರೆ.—ಪ್ರಕಟನೆ 1:14, 15.

 ನಿಜ: ಪ್ರಕಟನೆ ಪುಸ್ತಕದಲ್ಲಿ ಹೆಚ್ಚಿನ ವಿಷಯಗಳು ಸಾಂಕೇತಿಕವಾಗಿದೆ. (ಪ್ರಕಟನೆ 1:1) ಪ್ರಕಟನೆ ಪುಸ್ತಕದಲ್ಲಿ ಯೇಸುವಿಗೆ ಇರುವ ಕೂದಲು, ಕಾಲುಗಳ ಬಗ್ಗೆ ಮಾತಾಡುವಾಗ ಅಲ್ಲಿ ಸಾಂಕೇತಿಕ ಭಾಷೆಯನ್ನ ಬಳಸಲಾಗಿದೆ. ಆದರೆ ಈ ವಚನ ಯೇಸು ಭೂಮಿಯಲ್ಲಿದ್ದಾಗ ಈ ತರ ಕಾಣ್ತಿದ್ದ ಅಂತ ಹೇಳಲ್ಲ. ಬದಲಿಗೆ ಆತನು ಪುನರುತ್ಥಾನ ಆದ್ಮೇಲೆ ಆತನಿಗಿದ್ದ ಗುಣಗಳ ಬಗ್ಗೆ ಹೇಳ್ತಿದೆ. ಯೇಸುವಿನ “ತಲೆಕೂದಲು ಉಣ್ಣೆ ತರ, ಹಿಮದ ತರ ಬೆಳ್ಳಗೆ ಇತ್ತು” ಅಂತ ಪ್ರಕಟನೆ 1:14 ಹೇಳುತ್ತೆ. ಈ ವಚನ ಯೇಸುವಿನ ಕೂದಲಿಗಿರುವ ಬಣ್ಣದ ಬಗ್ಗೆ ಹೇಳ್ತಿದೆ, ಅದರ ರಚನೆ ಬಗ್ಗೆ ಅಲ್ಲ. ಬಿಳಿಕೂದಲು ಯೇಸುವಿಗೆ ಅನೇಕ ವರ್ಷಗಳ ಅನುಭವದಿಂದ ಸಿಕ್ಕಿರುವ ವಿವೇಕದ ಸಂಕೇತವಾಗಿದೆ. (ಪ್ರಕಟನೆ 3:14) ಈ ವಚನದ ಪ್ರಕಾರ ಯೇಸುವಿನ ಕೂದಲಿನ ರಚನೆ ಉಣ್ಣೆ ತರ ಗುಂಗುರು ಕೂದಲು ಇರುವುದಾದರೆ, ಹಿಮದ ತರ ಕೂಡ ಇರಬೇಕು. ಇದರಿಂದ ಗೊತ್ತಾಗುತ್ತೆ ಈ ವಚನ ಕೂದಲಿನ ರಚನೆ ಬಗ್ಗೆ ಮಾತಾಡ್ತಿಲ್ಲ ಅಂತ.

 ಯೇಸುವಿನ “ಕಾಲುಗಳು ದೊಡ್ಡ ಬೆಂಕಿಯಲ್ಲಿ ಕಾಯಿಸಿದ ತಾಮ್ರದ ತರ ಇದ್ವು.” (ಪ್ರಕಟನೆ 1:15) ಅಷ್ಟೇ ಅಲ್ಲ “ಆತನ ಮುಖ ಎಷ್ಟು ಹೊಳೀತಾ ಇತ್ತಂದ್ರೆ ಸೂರ್ಯನ ತರ ಕಾಣ್ತಿತ್ತು.” (ಪ್ರಕಟನೆ 1:16) ಈ ವಚನ ಹೇಳೋ ಹಾಗೆ ಯಾವ ಜನಾಂಗಕ್ಕೂ ಈ ತರ ಮೈಬಣ್ಣ ಇಲ್ಲ. ಇದರಿಂದ ನಮಗೆ ಏನು ಗೊತ್ತಾಗುತ್ತೆ? ಈ ದರ್ಶನ ಸಾಂಕೇತಿಕ, ಇಲ್ಲಿ ಉಪಯೋಗಿಸಿರುವ ಭಾಷೆ ಸಾಂಕೇತಿಕ. ಹಾಗಿದ್ರೆ ಈ ವಚನದ ನಿಜ ಅರ್ಥ ಏನು? ಯೇಸುವಿಗೆ ಪುನರುತ್ಥಾನ ಆಗಿ ಸ್ವರ್ಗಕ್ಕೆ ಹೋದ ಮೇಲೆ “ಹೊಳೆಯೋ ಬೆಳಕಿರೋ ಜಾಗದಲ್ಲಿ ಆತನು ವಾಸ ಮಾಡ್ತಾನೆ” ಅನ್ನೋದೇ ಆಗಿದೆ.—1 ತಿಮೊತಿ 6:16.

 ತಪ್ಪಾಭಿಪ್ರಾಯ: ಯೇಸುವಿಗೆ ಧೈರ್ಯ, ಶಕ್ತಿ ಇರಲಿಲ್ಲ.

 ನಿಜ: ಯೇಸುವಿಗೆ ತುಂಬಾ ಧೈರ್ಯ ಇತ್ತು. ಒಂದು ಸಲ, ಸೈನಿಕರು ಆತನನ್ನ ಬಂಧಿಸೋಕೆ ಬಂದಾಗ, ‘ನಾನೇ ಯೇಸು’ ಅಂತ ಧೈರ್ಯವಾಗಿ ಗುರುತಿಸಿಕೊಂಡ. (ಯೋಹಾನ 18:4-8) ಯೇಸು ಬಡಗಿ (ಕಾರ್ಪೆಂಟರ್‌) ಆಗಿ ಕೆಲಸ ಮಾಡುತ್ತಿದ್ದ. ಒಬ್ಬ ಕಾರ್ಪೆಂಟರ್‌ ಆಗಿ ಕೆಲಸ ಮಾಡೋಕೆ ತುಂಬಾ ಶಕ್ತಿ ಬೇಕು.—ಮಾರ್ಕ 6:3.

 ಹೀಗಿರುವಾಗ ಹಿಂಸಾ ಕಂಬನಾ ಹೊರಕ್ಕೆ ಬೇರೆಯವರ ಸಹಾಯ ಯಾಕೆ ಪಡೆದ? ಮತ್ತು ತನ್ನ ಅಕ್ಕಪಕ್ಕದಲ್ಲಿ ತೂಗಿ ಹಾಕಿದ್ದ ಬೇರೆ ಕೈದಿಗಳಿಗಿಂತ ಮೊದಲೇ ಯೇಸು ಯಾಕೆ ಸತ್ತ? (ಲೂಕ 23:26; ಯೋಹಾನ 19:31-33) ಯೇಸುವನ್ನ ಹಿಂಸಾ ಕಂಬಕ್ಕೆ ಹಾಕಿ ಸಾಯಿಸೋ ಮುಂಚೆನೇ ಆತನ ದೇಹದಲ್ಲಿ ಶಕ್ತಿ ಇಲ್ಲದೆ ತುಂಬಾ ದುರ್ಬಲವಾಗಿತ್ತು. ಯಾಕಂದ್ರೆ ದುಃಖ ಮತ್ತು ಮಾನಸಿಕ ಚಿಂತೆಯಿಂದ ಯೇಸು ಇಡೀ ರಾತ್ರಿ ನಿದ್ರೆ ಮಾಡಿರಲಿಲ್ಲ. (ಲೂಕ 22:42-44) ಅದೇ ರಾತ್ರಿ ಯೆಹೂದ್ಯರು ಆತನ ಮುಖಕ್ಕೆ ಉಗುಳಿದರು, ಗುದ್ದಿದ್ರೂ ಮತ್ತು ಅವಮಾನ ಮಾಡಿದರು. ಮಾರನೇ ದಿನ ರೋಮನ್ನರು ಯೇಸುವಿಗೆ ತುಂಬಾ ಹಿಂಸೆ ಕೊಟ್ಟರು. (ಮತ್ತಾಯ 26:67, 68; ಯೋಹಾನ 19:1-3) ಈ ಎಲ್ಲಾ ಕಾರಣಗಳಿಂದ ಯೇಸು ಜಲ್ದಿ ತೀರಿ ಹೋದ.

 ತಪ್ಪಾಭಿಪ್ರಾಯ: ಯೇಸು ಯಾವಾಗ್ಲೂ ಮಂಕಾಗಿ, ಬೇಜಾರಲ್ಲೇ ಇರುತ್ತಿದ್ದ.

 ನಿಜ: ಯೆಹೋವನನ್ನ “ಖುಷಿಯಾಗಿರೋ ದೇವರು” ಅಂತ ಬೈಬಲ್‌ ಕರೆಯುತ್ತೆ. ಯೇಸು ಕೂಡ ಯಾವಾಗಲೂ ತನ್ನ ತಂದೆ ತರನೇ ಖುಷಿಯಾಗಿ ಇದ್ದನು ಅನ್ನೋದರಲ್ಲಿ ಯಾವುದೇ ಸಂಶಯವಿಲ್ಲ. (1 ತಿಮೊತಿ 1:11; ಯೋಹಾನ 14:9) ಅಷ್ಟೇ ಅಲ್ಲ, ಬೇರೆ ಜನರು ಕೂಡ ಹೇಗೆ ಖುಷಿಯಾಗಿರಬಹುದು ಅಂತ ಯೇಸು ಅವರಿಗೆ ಹೇಳಿಕೊಟ್ಟ. (ಮತ್ತಾಯ 5:3-9; ಲೂಕ 11:28) ಇದರಿಂದ ನಮಗೆ ಏನು ಗೊತ್ತಾಗುತ್ತೆ? ಯೇಸು ಯಾವಾಗಲೂ ಖುಷಿ ಖುಷಿಯಿಂದ ಇರ್ತಿದ್ದ.