ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಹದಗೆಡ್ತಾ ಇದ್ದ ನನ್ನ ಜೀವನ

ಹದಗೆಡ್ತಾ ಇದ್ದ ನನ್ನ ಜೀವನ
  • ಜನನ: 1952

  • ದೇಶ: ಅಮೆರಿಕ

  • ಹಿಂದೆ: ವಿಪರೀತ ಕೋಪ

ಹಿನ್ನೆಲೆ:

ನಾನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಲಾಸ್‌ ಏಂಜಲೀಸ್‌ನಲ್ಲಿ ಬೆಳೆದೆ. ನಮ್ಮ ಸುತ್ತಮುತ್ತ ಇದ್ದ ತುಂಬ ಜನ ಡ್ರಗ್ಸ್‌ ತಗೊಳ್ತಾ ಇದ್ದರು, ರೌಡಿಗಳಾಗಿದ್ರು. ನಮ್ಮ ಅಪ್ಪಅಮ್ಮಂಗೆ ನಾವು ಆರು ಮಕ್ಕಳು, ನಾನು ಎರಡನೇಯವನು.

ಅಮ್ಮ, ನಮ್ಮನ್ನ ಇವ್ಯಾಂಜಲಿಕಲ್‌ ಚರ್ಚಿಗೆ ಕರೆದುಕೊಂಡು ಹೋಗುತ್ತಿದ್ದರು. ನಾನು ಹದಿಪ್ರಾಯದಲ್ಲಿದ್ದಾಗ ಚರ್ಚ್‌ ಒಳಗೆ ಒಂಥರ, ಹೊರಗೆ ಇನ್ನೊಂದು ಥರ ಇರುತ್ತಿದ್ದೆ. ಭಾನುವಾರ ಚರ್ಚ್‌ ಕ್ವಾಯೆರ್‌ನಲ್ಲಿ ಹಾಡು ಹೇಳುತ್ತಿದ್ದೆ. ಉಳಿದಿದ್ದ ದಿನ ಪಾರ್ಟಿಗೆ ಹೋಗುತ್ತಿದ್ದೆ, ಡ್ರಗ್ಸ್‌ ತಗೊಳ್ತಿದ್ದೆ ಮತ್ತು ಅನೈತಿಕ ಜೀವನ ನಡೆಸ್ತಿದ್ದೆ.

ನಂಗೆ ತುಂಬ ಕೋಪ ಬರುತ್ತಿತ್ತು. ಎಷ್ಟೆಂದರೆ ನನ್ನ ಕೈಯಲ್ಲಿ ಏನು ಸಿಗುತ್ತಿತ್ತೋ ಅದರಲ್ಲೇ ಹೊಡೆದು ಬಿಡುತ್ತಿದ್ದೆ. ಚರ್ಚಿಗೆ ಹೋಗೋದ್ರಿಂದ ನನಗೇನೂ ಪ್ರಯೋಜನ ಆಗಲಿಲ್ಲ. “ದೇವರು ನ್ಯಾಯತೀರಿಸುತ್ತಾನೆ, ಆದರೆ ಅದಕ್ಕೆ ಆತನು ಬಳಸೋ ಆಯುಧ ನಾನು!” ಅಂತ ಹೇಳುತ್ತಿದ್ದೆ. 1960ರ ದಶಕದಲ್ಲಿ ನಾನು ಹೈಸ್ಕೂಲ್‌ನಲ್ಲಿ ಇರುವಾಗ ಜನರ ಹಕ್ಕುಗಳಿಗಾಗಿ ಹೋರಾಡುವ ರಾಜಕೀಯ ಪಕ್ಷಕ್ಕೆ ಸೇರಿಕೊಂಡೆ. ಇಂಥ ಹಕ್ಕುಗಳಿಗಾಗಿ ಹೋರಾಡುವ ವಿದ್ಯಾರ್ಥಿ ಸಂಘಟನೆಗೂ ಸೇರಿಕೊಂಡೆ. ಕೆಲವೊಂದು ಸಲ ನಾವು ಪ್ರತಿಭಟನೆಗಳನ್ನ ನಡೆಸಕ್ಕಾಗಿ ಸ್ಕೂಲ್‌ಗಳನ್ನೂ ತಾತ್ಕಾಲಿಕವಾಗಿ ಮುಚ್ಚಿಸುತ್ತಿದ್ವಿ.

ಪ್ರತಿಭಟನೆಗಳನ್ನ ಮಾಡಿದ್ರೂ ನನ್ನ ಕೋಪ ಕಡಿಮೆಯಾಗಲಿಲ್ಲ. ಅದಕ್ಕೆ ನಾನು ನಂಗೆ ಇಷ್ಟ ಇಲ್ಲದಿರುವ ಜನರನ್ನ ಹಿಂಸಿಸಕ್ಕೆ ಶುರುಮಾಡಿದೆ. ಉದಾಹರಣೆಗೆ, ಅಮೆರಿಕದವರು ಗುಲಾಮರನ್ನಾಗಿ ಹಿಡಿದು ತಂದಿದ್ದ ಕಪ್ಪು ಜನರ ಜೊತೆ ತುಂಬ ಕ್ರೂರವಾಗಿ ನಡೆದುಕೊಳ್ಳುತ್ತಿರೋ ಸಿನಿಮಾಗಳನ್ನ ನೋಡಿದ್ವಿ. ಅದನ್ನ ನೋಡಿದಾಗ ನಮಗೆಲ್ಲಾ ಎಷ್ಟು ಕೋಪ ಬಂತು ಅಂದರೆ ಅದೇ ಥಿಯೆಟರಿನಲ್ಲಿದ್ದ ಬಿಳಿ ಜನರನ್ನ ಹೊಡೆದ್ವಿ. ಅಷ್ಟಕ್ಕೇ ಸುಮ್ಮನಾಗದೆ ಎಲ್ಲೆಲ್ಲಿ ಬಿಳಿಯರು ಸಿಗುತ್ತಾರೆ ಅಂತ ಹುಡುಕಿಕೊಂಡು ಹೋಗಿ ಅವರನ್ನ ಸಿಕ್ಕಾಪಟ್ಟೆ ಹೊಡೆದ್ವಿ.

ಹದಿಪ್ರಾಯದಲ್ಲಿದ್ದಾಗಲೇ ನಾನು, ನನ್ನ ಅಣ್ಣ ತಮ್ಮಂದಿರು ರೌಡಿಗಳಾಗಿದ್ವಿ. ಆಗಾಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ವಿ. ನನ್ನ ತಮ್ಮ ಈಗಾಗ್ಲೇ ಒಂದು ದೊಡ್ಡ ರೌಡಿ ಗ್ಯಾಂಗ್‌ನಲ್ಲಿದ್ದ. ಆ ಗ್ಯಾಂಗಿಗೆ ನಾನು ಸೇರಿಕೊಂಡೆ. ಹೀಗೆ ನನ್ನ ಜೀವನ ಹದಗೆಡ್ತಾ ಹೋಯಿತು.

ಬದುಕನ್ನೇ ಬದಲಾಯಿಸಿತು ಬೈಬಲ್‌:

ನನ್ನ ಸ್ನೇಹಿತನ ಅಪ್ಪ ಅಮ್ಮ ಯೆಹೋವನ ಸಾಕ್ಷಿಗಳಾಗಿದ್ರು. ಅವರು ಒಂದಿನ ನನ್ನನ್ನ ಮೀಟಿಂಗಿಗೆ ಕರೆದ್ರು, ನಾನು ಅವರ ಜೊತೆ ಹೋದೆ. ‘ಸಾಕ್ಷಿಗಳು ಎಷ್ಟು ಭಿನ್ನರಾಗಿದ್ದಾರಲ್ಲಾ’ ಅಂತ ನಂಗೆ ಅಲ್ಲಿ ಹೋದಾಗ ಗೊತ್ತಾಯಿತು. ಎಲ್ಲರ ಕೈಯಲ್ಲೂ ಬೈಬಲ್‌ ಇತ್ತು ಮತ್ತು ಅವರು ವಚನಗಳನ್ನ ತೆರೆದು ನೋಡುತ್ತಿದ್ದರು. ಯುವಕರು ಸ್ಟೇಜ್‌ ಮೇಲೆ ಹೋಗಿ ಭಾಷಣ ಕೊಡ್ತಿದ್ದರು. ದೇವರ ಹೆಸರು ಯೆಹೋವ ಅಂತ ಗೊತ್ತಾದಾಗ ತುಂಬ ಖುಷಿಯಾಯಿತು. ಅಲ್ಲಿರೋರು ಅದನ್ನ ಬಳಸ್ತಿರೋದನ್ನ ನೋಡಿ ತುಂಬ ಸಂತೋಷ ಆಯಿತು. (ಕೀರ್ತನೆ 83:18) ಸಭೆಯಲ್ಲಿ ಬೇರೆ ಬೇರೆ ಭಾಷೆಯ ಜನರಿದ್ರೂ ಅವರ ಮಧ್ಯದಲ್ಲಿ ಯಾವುದೇ ಭೇದ ಭಾವ ಇರಲಿಲ್ಲ.

ನಾನು ಮೀಟಿಂಗಿಗೆ ಹೋಗುತ್ತಿದ್ದೆ. ಆದರೆ ಬೈಬಲ್‌ ಸ್ಟಡಿ ತಗೊಳಕ್ಕೆ ಇಷ್ಟ ಇರಲಿಲ್ಲ. ಒಂದಿನ ನಾನು ಮೀಟಿಂಗ್‌ನಲ್ಲಿ ಇದ್ದಾಗ ನನ್ನ ಫ್ರೆಂಡ್ಸು ಒಂದು ಪ್ರೋಗ್ರಾಮಿಗೆ ಹೋಗಿದ್ರು. ಅಲ್ಲಿ ಒಬ್ಬ ಹುಡುಗ ತನ್ನ ಲೆದರ್‌ ಜಾಕೆಟನ್ನ ಅವರಿಗೆ ಕೊಟ್ಟಿಲ್ಲ ಅಂತ ಅವನನ್ನ ಹೊಡೆದು ಸಾಯಿಸಿಬಿಟ್ಟರು. ಮಾರನೇ ದಿನ ಅವರು ಮಾಡಿದ ಕೊಲೆ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರು. ಅವರನ್ನ ಕೋರ್ಟಲ್ಲಿ ವಿಚಾರಣೆ ಮಾಡುತ್ತಾ ಇದ್ದಾಗಲೂ ನಗುತ್ತಾ ಇದ್ದರು. ಅವರಲ್ಲಿ ಕೆಲವರಿಗೆ ಜೀವಾವಧಿ ಶಿಕ್ಷೆ ಆಯಿತು. ಆ ರಾತ್ರಿ ನಾನು ಅವರ ಜೊತೆ ಇಲ್ಲದೇ ಇದ್ದಿದ್ದು ಒಳ್ಳೇದೇ ಆಯಿತು. ನಾನು ಬದಲಾಗಬೇಕು ಅಂತ ತೀರ್ಮಾನ ಮಾಡಿದೆ ಮತ್ತು ಬೈಬಲ್‌ ಸ್ಟಡಿನೂ ಶುರುಮಾಡಿದೆ.

ಲೋಕದಲ್ಲಿ ಇಷ್ಟೊಂದು ಭೇದಭಾವ ಇದ್ದರೂ ಯೆಹೋವನ ಸಾಕ್ಷಿಗಳ ಮಧ್ಯೆ ಇರೋ ಪ್ರೀತಿ ನೋಡಿ ನಂಗೆ ತುಂಬ ಆಶ್ಚರ್ಯ ಆಯಿತು. ಉದಾಹರಣೆಗೆ, ಒಬ್ಬ ಬಿಳಿ ಸಹೋದರನಿಗೆ ಬೇರೆ ಊರಿಗೆ ಹೋಗಬೇಕಾಗಿ ಬಂದಾಗ ತನ್ನ ಮಕ್ಕಳನ್ನ ಕಪ್ಪು ಸಹೋದರನ ಮನೆಯಲ್ಲಿ ಬಿಟ್ಟು ಹೋದರು. ಇನ್ನೊಂದು ಸನ್ನಿವೇಶದಲ್ಲಿ, ಒಬ್ಬ ಕಪ್ಪು ಯುವಕನಿಗೆ ಉಳಿದುಕೊಳ್ಳೋಕೆ ಜಾಗ ಬೇಕಾದಾಗ ಒಬ್ಬ ಬಿಳಿ ಸಹೋದರ ತನ್ನ ಮನೆಯಲ್ಲಿ ಉಳಿಸಿಕೊಂಡರು. ಯೋಹಾನ 13:35ರಲ್ಲಿ ಯೇಸು ಹೀಗೆ ಹೇಳಿದನು: “ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ.” ಈ ಮಾತನ್ನ ಯೆಹೋವನ ಸಾಕ್ಷಿಗಳು ಪಾಲಿಸ್ತಿರೋದನ್ನ ನಾನು ಕಣ್ಣಾರೆ ನೋಡಿದೆ.

ಕೊನೆಗೂ ನಿಜ ಸ್ನೇಹಿತರು ನಂಗೆ ಸಿಕ್ಕಿದರು. ನಾನು ಬೈಬಲ್‌ ಸ್ಟಡಿ ಮಾಡುತ್ತಾ ಹೋದ ಹಾಗೆ ನನ್ನ ಯೋಚನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು, ಹಿಂಸಾಕೃತ್ಯ ಎಲ್ಲಾ ಬಿಟ್ಟು ಜನರ ಜೊತೆ ಶಾಂತಿಯಿಂದ ಇರಬೇಕು ಅಂತ ಕಲಿತೆ. ಈ ರೀತಿ ಜೀವನ ಮಾಡಿದ್ರೆ ಮಾತ್ರ ನಂಗೆ ಖುಷಿಯಾಗಿ ಇರಕ್ಕಾಗುತ್ತೆ ಅಂತ ಅರ್ಥ ಮಾಡಿಕೊಂಡೆ. (ರೋಮನ್ನರಿಗೆ 12:2) ನನ್ನ ಜೀವನದಲ್ಲಿ ಸ್ವಲ್ಪ ಸ್ವಲ್ಪ ಬದಲಾವಣೆ ಮಾಡ್ತಾ ಮಾಡ್ತಾ ಕೊನೆಗೆ 1974ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ.

ನಾನು ಬದಲಾವಣೆ ಮಾಡಿಕೊಂಡ್ರೆ ಶಾಂತಿಯಿಂದ, ಖುಷಿಯಾಗಿ ಇರಕ್ಕಾಗುತ್ತೆ ಅಂತ ಅರ್ಥಮಾಡಿಕೊಂಡೆ

ನನಗೆ ದೀಕ್ಷಾಸ್ನಾನ ಆಗಿದ್ರೂ ಕೋಪ ಇನ್ನೂ ಕಡಿಮೆಯಾಗಿರಲಿಲ್ಲ. ಉದಾಹರಣೆಗೆ ಒಂದು ಸಲ ನಾನು ಮನೆ ಮನೆ ಸೇವೆ ಮಾಡುತ್ತಿರುವಾಗ ಒಬ್ಬ ಕಳ್ಳ ನನ್ನ ಕಾರಿಂದ ರೇಡಿಯೋ ಕದ್ದುಕೊಂಡು ಓಡಿಹೋದ. ಅವನನ್ನ ಅಟ್ಟಿಸಿಕೊಂಡು ಅವನ ಹಿಂದೆನೇ ನಾನೂ ಓಡಿದೆ. ಇನ್ನೇನು ಅವನನ್ನ ಹಿಡಿಯಬೇಕು ಅನ್ನೋಷ್ಟರಲ್ಲಿ ಅವನು ರೇಡಿಯೋ ಬಿಸಾಕಿ ಓಡಿಹೋದ. ಈ ವಿಷಯವನ್ನ ನಾನು ಸಹೋದರರಿಗೆ ಹೇಳಿದಾಗ ಒಬ್ಬ ಹಿರಿಯ ನಂಗೆ, “ಸ್ಟೀವನ್‌, ಆ ಕಳ್ಳ ಏನಾದ್ರೂ ನಿನ್ನ ಕೈಗೆ ಸಿಕ್ಕಿಹಾಕಿಕೊಂಡಿದ್ರೆ ನೀನು ಏನು ಮಾಡ್ತಿದ್ದೆ?” ಅಂತ ಕೇಳಿದ್ರು. ಆ ಪ್ರಶ್ನೆ ನಾನಿನ್ನೂ ಬದಲಾವಣೆ ಮಾಡಿಕೊಳ್ಳಬೇಕು ಅಂತ ಯೋಚಿಸೋ ತರ ಮಾಡ್ತು.

1974 ಅಕ್ಟೋಬರ್‌ನಲ್ಲಿ ನಾನು ಪಯನೀಯರ್‌ ಸೇವೆ ಶುರುಮಾಡಿದೆ. ಬೇರೆಯವರಿಗೆ ಬೈಬಲ್‌ ಕಲಿಸಕ್ಕೆ ಪ್ರತಿ ತಿಂಗಳು 100 ತಾಸು ಕಳೆಯುತ್ತಿದ್ದೆ. ಆಮೇಲೆ ನ್ಯೂಯಾರ್ಕ್‌ನಲ್ಲಿರುವ ಬೆತೆಲಿನಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುವ ಅವಕಾಶ ಸಿಕ್ತು. ನಂತರ ನನ್ನ ಅಮ್ಮನಿಗೆ ಹುಷಾರಿಲ್ಲದೇ ಇದ್ದಿದ್ದರಿಂದ 1978ರಲ್ಲಿ ನಾನು ಲಾಸ್‌ ಏಂಜಲೀಸ್‌ಗೆ ವಾಪಸ್‌ ಬರಬೇಕಾಯಿತು. ಎರಡು ವರ್ಷ ಆದಮೇಲೆ ನಾನು ಅರಾಂಡಳನ್ನ ಮದುವೆಯಾದೆ. ನಮ್ಮಮ್ಮ ಇರೋವರೆಗೂ ನಾವು ಅವರನ್ನ ಚೆನ್ನಾಗಿ ನೋಡಿಕೊಂಡ್ವಿ. ಆಮೇಲೆ ನಾವಿಬ್ರೂ ಗಿಲ್ಯಡ್‌ ಶಾಲೆಗೆ ಹೋದ್ವಿ. ನಮಗೆ ಪನಾಮದಲ್ಲಿ ಮಿಷನರಿಗಳಾಗಿ ಸೇವೆ ಮಾಡುವ ನೇಮಕ ಸಿಕ್ತು.

ದೀಕ್ಷಾಸ್ನಾನ ಆದಮೇಲಿಂದ ನಂಗೆ ಕೋಪ ಬರಿಸುವ ಅನೇಕ ಸನ್ನಿವೇಶಗಳು ಬಂದ್ವು. ಅಂಥ ಸಮಯದಲ್ಲಿ ಒಂದೋ ನಾನು ಅಲ್ಲಿಂದ ಜಾಗ ಖಾಲಿ ಮಾಡ್ತಿದ್ದೆ ಇಲ್ಲಾ ಕೋಪಮಾಡಿಕೊಳ್ಳದೆ ಅದನ್ನ ಬಗೆಹರಿಸುತ್ತಿದ್ದೆ. ಅಂಥ ಸನ್ನಿವೇಶವನ್ನ ನಾನು ಶಾಂತಿ, ಸಮಾಧಾನದಿಂದ ಎದುರಿಸಿದ್ದನ್ನ ನೋಡಿ ನನ್ನ ಹೆಂಡ್ತಿ, ಫ್ರೆಂಡ್ಸು ಹೊಗಳುತ್ತಿದ್ದರು. ‘ನನ್ನ ಕೈಯಲ್ಲಿ ಇದೆಲ್ಲಾ ಹೇಗೆ ಮಾಡಕ್ಕಾಗ್ತಿದೆ’ ಅಂತ ನಂಗೇ ಆಶ್ಚರ್ಯ ಆಗುತ್ತಿತ್ತು. ನಾನು ಇಷ್ಟೊಂದು ಬದಲಾಗಕ್ಕೆ ಕಾರಣ ಬೈಬಲೇ!—ಇಬ್ರಿಯ 4:12.

ಸಿಕ್ಕ ಪ್ರಯೋಜನಗಳು:

ನನ್ನ ಜೀವನಕ್ಕೆ ಒಂದು ಅರ್ಥ ಇದೆ ಅಂತ ಬೈಬಲ್‌ ಕಲಿತ ಮೇಲೇನೇ ಗೊತ್ತಾಯ್ತು. ನಾನೀಗ ಶಾಂತವಾಗಿರಕ್ಕೆ ಕಲಿತಿದ್ದೀನಿ. ನಾನೀಗ ಜನರನ್ನ ಹೊಡೆಯೋದು ಬಡಿಯೋದು ಮಾಡಲ್ಲ. ಬದಲಿಗೆ ದೇವರ ಬಗ್ಗೆ ಕಲಿಸ್ತೀನಿ. ನಾನು ಹೈಸ್ಕೂಲಿನಲ್ಲಿದ್ದಾಗ ನಂಗೆ ಒಬ್ಬನನ್ನ ಕಂಡ್ರೆ ಆಗ್ತಿರಲಿಲ್ಲ. ಆದರೆ ಆಮೇಲೆ ನಾನು ಅವನ ಜೊತೆ ಬೈಬಲ್‌ ಸ್ಟಡಿ ಮಾಡಿದೆ, ದೀಕ್ಷಾಸ್ನಾನ ಪಡೆದುಕೊಳ್ಳೋಕೆ ಸಹಾಯ ಮಾಡಿದೆ. ಆಮೇಲೆ ಸ್ವಲ್ಪ ದಿನ ನಾವಿಬ್ರೂ ರೂಮ್‌ಮೇಟ್ಸ್‌ ಆಗಿದ್ವಿ. ಈಗ ನಾವಿಬ್ರೂ ಬೆಸ್ಟ್‌ ಫ್ರೆಂಡ್ಸ್‌ ಆಗಿದ್ದೀವಿ. ಇಲ್ಲಿವರೆಗೂ ನಾನು ನನ್ನ ಹೆಂಡತಿ 80ಕ್ಕಿಂತ ಹೆಚ್ಚು ಜನರಿಗೆ ಸತ್ಯ ಕಲಿಯಕ್ಕೆ ಸಹಾಯ ಮಾಡಿದ್ವಿ.

ನನ್ನ ಜೀವನಕ್ಕೆ ಒಂದು ಅರ್ಥ ಕೊಟ್ಟಿದ್ದಕ್ಕೆ, ಒಳ್ಳೇ ಸ್ನೇಹಿತರನ್ನ ಕೊಟ್ಟಿದ್ದಕ್ಕೆ ನಾನು ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ.