ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದುಕನ್ನೇ ಬದಲಾಯಿಸಿತು ಬೈಬಲ್‌

ಬದುಕನ್ನೇ ಬದಲಾಯಿಸಿತು ಬೈಬಲ್‌

ಬದುಕನ್ನೇ ಬದಲಾಯಿಸಿತು ಬೈಬಲ್‌
  • ಜನನ: 1981

  • ದೇಶ: ಅಮೆರಿಕ

  • ಹಿಂದೆ: ಪೋಲಿಹೋದ ಮಗ

ಹಿನ್ನೆಲೆ:

ನಾನು ಯು.ಎಸ್‌.ಎ ದೇಶದ ವೆಸ್ಟ್‌ ವರ್ಜೀನಿಯದ ಒಹಾಯೊ ನದೀ ತೀರದ ಪ್ರಶಾಂತ ಪಟ್ಟಣ ಮೌಂಡ್ಸವಿಲ್‌ನಲ್ಲಿ ಹುಟ್ಟಿದ್ದು. ನಾನು ಎರಡನೆಯವನು. ನನಗೆ ಒಬ್ಬ ಅಣ್ಣ, ಒಬ್ಬ ತಮ್ಮ, ಒಬ್ಬಳು ತಂಗಿ. ನಾವು ನಾಲ್ಕು ಜನ ಮಕ್ಕಳು ಇದ್ದಿದ್ದರಿಂದ ನಮ್ಮ ಮನೆ ಯಾವತ್ತೂ ಖಾಲಿ ಅನಿಸುತ್ತಿರಲಿಲ್ಲ, ಯಾರಿಗೂ ಬೋರ್‌ ಹೊಡಿತಿರಲಿಲ್ಲ. ಯಾವಾಗ್ಲೂ ಸಡಗರ. ನನ್ನ ಅಪ್ಪ ಅಮ್ಮ ಶ್ರಮಜೀವಿಗಳು, ಪ್ರಾಮಾಣಿಕರು. ಬೇರೆಯವರ ಮೇಲೆ ತುಂಬ ಪ್ರೀತಿ ಅವರಿಗೆ. ನಾವೇನು ಶ್ರೀಮಂತರಲ್ಲ. ಆದರೂ ಮೂಲಭೂತ ಅವಶ್ಯಕತೆಗಳಿಗೆ ಪರದಾಡುವ ಸನ್ನಿವೇಶ ಯಾವತ್ತೂ ಉಂಟಾಗಿಲ್ಲ. ಯೆಹೋವನ ಸಾಕ್ಷಿಗಳಾಗಿರುವ ನಮ್ಮ ಅಪ್ಪಅಮ್ಮ ನಾವು ಚಿಕ್ಕವರಿದ್ದಾಗ ನಮ್ಮಲ್ಲಿ ಬೈಬಲ್‌ ತತ್ವಗಳನ್ನು ಬೇರೂರಿಸಲು ತುಂಬ ಪ್ರಯತ್ನಪಟ್ಟಿದ್ದರು.

ನಾನು ಹದಿವಯಸ್ಸಿಗೆ ಕಾಲಿಡುವಷ್ಟರಲ್ಲಿ ನನ್ನ ಮನಸ್ಸು ಅಪ್ಪಅಮ್ಮ ಹೇಳಿಕೊಟ್ಟ ವಿಷಯಗಳಿಂದ ದೂರ ತೇಲಿಹೋಗಿತ್ತು. ಬೈಬಲ್‌ ಹೇಳೋ ಪ್ರಕಾರ ಜೀವಿಸಿದರೆ ನಿಜವಾಗ್ಲೂ ಸಂತೋಷ ಸಂತೃಪ್ತಿ ಸಿಗುತ್ತಾ ಅನ್ನೋ ಸಂಶಯ ಹುಟ್ಟಿಕೊಂಡಿತು. ನಮಗೆ ಇಷ್ಟ ಬಂದಂತೆ ಬದುಕಿದರೆ ಮಾತ್ರ ನಿಜವಾಗ್ಲೂ ಸಂತೋಷವಾಗಿರಲು ಸಾಧ್ಯ ಅಂತ ಅನಿಸುತ್ತಿತ್ತು. ಹಾಗಾಗಿ ಕ್ರೈಸ್ತ ಕೂಟಗಳಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟೆ. ನನ್ನ ಅಣ್ಣ ಮತ್ತೆ ತಂಗಿ ಸಹ ನನ್ನ ದಾರಿಯನ್ನೇ ಹಿಡಿದರು. ನಮಗೆ ಬುದ್ಧಿ ಹೇಳಿ ತಿದ್ದುವುದಕ್ಕೆ ಅಪ್ಪಅಮ್ಮ ತುಂಬ ಪ್ರಯತ್ನಪಟ್ಟರು. ಆದರೆ ನಾವು ಮಾತ್ರ ಜಗ್ಗಲಿಲ್ಲ.

ಸ್ವಾತಂತ್ರ್ಯ ಸಿಗುತ್ತೆ ಅಂತ ನಾನು ಯಾವ ದಾರಿ ಹಿಡಿದನೋ ಆ ದಾರಿಯಲ್ಲಿ ನಿಜವಾದ ಸ್ವಾತಂತ್ರ್ಯ ಸಿಗಲ್ಲ ಬದಲಿಗೆ ಅದು ನನ್ನನ್ನು ದುಶ್ಚಟಕ್ಕೆ ನೂಕುತ್ತೆ ಅಂತ ನೆನಸಿರಲಿಲ್ಲ. ಒಂದು ದಿನ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ನನ್ನ ಸ್ನೇಹಿತ ಸಿಗರೇಟ್‌ ಸೇದು ಅಂತ ಕೊಟ್ಟ. ನಾನು ತಗೊಂಡೆ. ಅವತ್ತಿಂದ ಯಾವ ದುಶ್ಚಟಗಳಿಗೂ ಇಲ್ಲ ಅನ್ನಲಿಲ್ಲ. ಸಮಯಾನಂತರ ಮಾದಕವಸ್ತು ಸೇವಿಸೋದಕ್ಕೆ ಮತ್ತು ಕುಡಿಯೋಕೆ ಶುರುಮಾಡಿದೆ. ಅನೈತಿಕ ಬದುಕು ಬಾಳುತ್ತಿದ್ದೆ. ವರ್ಷಗಳು ಕಳೆದಂತೆ ಹೆಚ್ಚು ನಶೆಯೇರಿಸುವ ಮಾದಕವಸ್ತುಗಳನ್ನು ಸೇವಿಸಿ ಅವುಗಳ ಗುಲಾಮನಾದೆ. ದುಶ್ಚಟಗಳು ಇಲ್ಲದೆ ಬದುಕುವುದಕ್ಕೇ ಆಗಲ್ಲ ಅನ್ನುವಷ್ಟು ಮಟ್ಟಿಗೆ ಹೋಗಿತ್ತು. ಹಾಗಾಗಿ ದುಡ್ಡಿಗಾಗಿ ಅಮಲೌಷಧಗಳನ್ನು ಮಾರಲು ತೊಡಗಿದೆ.

ನಾನು ಮಾಡುತ್ತಿರೋದು ತಪ್ಪು ಅಂತ ನನ್ನ ಮನಸ್ಸಾಕ್ಷಿ ಹೇಳುತ್ತಾನೇ ಇದ್ದರೂ ನಾನು ಕ್ಯಾರೆ ಅನ್ನುತ್ತಿರಲಿಲ್ಲ. ಆ ಸಮಯದಲ್ಲೆಲ್ಲ ಕಾಲಮಿಂಚಿ ಹೋಗಿದೆ ಇನ್ನು ಬದಲಾಗಿ ಏನು ಪ್ರಯೋಜನ ಅಂತ ನೆನಸುತ್ತಿದ್ದೆ. ಪಾರ್ಟಿಗಳಲ್ಲಿ, ಗಾನಗೋಷ್ಠಿಗಳಲ್ಲಿ ಸುತ್ತಮುತ್ತ ಅಷ್ಟು ಜನರು ಇದ್ದರೂ ಒಂಟಿತನ ಕಾಡುತ್ತಿತ್ತು. ಖಿನ್ನತೆ ಆವರಿಸುತ್ತಿತ್ತು. ಅಪ್ಪಅಮ್ಮನ ನೆನಪಾಗುತ್ತಿತ್ತು. ಅವರೆಷ್ಟು ಒಳ್ಳೆಯವರು, ಸಭ್ಯರಾಗಿದ್ದರು. ಅವರಿಂದ ಅದ್ಹೇಗೆ ದೂರ ಬಂದೆ ಅಂತ ಯೋಚಿಸುತ್ತಿದ್ದೆ.

ನನ್ನ ಬದುಕನ್ನು ಬದಲಾಯಿಸಿತು ಬೈಬಲ್‌:

ನಾನು ಬದಲಾಗುತ್ತೀನಿ ಅನ್ನೋ ನಂಬಿಕೆ ನನಗೆ ಇರ್ಲಿಲ್ಲ. ಆದರೆ ಬೇರೆಯವರು ನಂಬಿಕೆ ಕಳಕೊಳ್ಳಲಿಲ್ಲ. ಇಸವಿ 2000ದಲ್ಲಿ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಕ್ಕೆ ಅಪ್ಪಅಮ್ಮ ನನ್ನನ್ನು ಕರೆದರು. ಇಷ್ಟವಿಲ್ಲದಿದ್ದರೂ ಹೋದೆ. ಆಶ್ಚರ್ಯ ಏನೆಂದರೆ ನನ್ನ ದಾರಿ ಹಿಡಿದಿದ್ದ ಅಣ್ಣ ಮತ್ತು ತಂಗಿ ಕೂಡ ಬಂದಿದ್ದರು.

ಅಧಿವೇಶನದಲ್ಲಿದ್ದಾಗ, ಅದೇ ಸ್ಥಳಕ್ಕೆ ಸುಮಾರು ಒಂದು ವರ್ಷದ ಹಿಂದೆ ರಾಕ್‌ ಗಾನಗೋಷ್ಠಿಗೆ ನಾನು ಬಂದಿದ್ದು ನೆನಪಾಯಿತು. ಈ ಎರಡು ಗುಂಪುಗಳ ಮಧ್ಯೆ ಇದ್ದ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತಿತ್ತು. ಗಾನಗೋಷ್ಠಿ ಸಮಯದಲ್ಲಿ ಆ ಸ್ಥಳ ಕಸ, ಸಿಗರೇಟ್‌ ಹೊಗೆಯಿಂದ ತುಂಬಿತ್ತು. ಯಾರೂ ನಗು ಮುಖದಿಂದ ಮಾತಾಡಿಸುತ್ತಿರಲಿಲ್ಲ. ಅವರ ಹಾಡುಗಳಲ್ಲಿರುವ ಪದಗಳನ್ನು ಕೇಳುವಾಗ ದುಃಖದಿಂದ ಮನ ಮುದುಡುತ್ತಿತ್ತು. ಆದರೆ ಈ ಅಧಿವೇಶನದಲ್ಲಿ ನನ್ನ ಸುತ್ತಮುತ್ತ ಇದ್ದ ಜನರು ತುಂಬ ಸಂತೋಷದಿಂದ ಇದ್ದರು. ವರ್ಷಗಳಿಂದ ನಾನವರನ್ನು ಭೇಟಿಯಾಗಿರದಿದ್ದರೂ ನನ್ನನ್ನು ಮನದಾಳದಿಂದ ಸ್ವಾಗತಿಸಿದರು. ಸ್ಥಳ ನೋಡುವುದಾದರೆ ತುಂಬ ಸ್ವಚ್ಛವಾಗಿತ್ತು, ಅಲ್ಲಿ ಹೇಳುತ್ತಿದ್ದಂತ ವಿಷಯಗಳು ಮನಸ್ಸಿಗೆ ನೆಮ್ಮದಿ ಕೊಡುತ್ತಿತ್ತು. ಇದನ್ನೆಲ್ಲ ನೋಡುವಾಗ ಯಾಕಪ್ಪಾ ಇಂಥ ಒಳ್ಳೇ ದಾರಿಯನ್ನು ಬಿಟ್ಟುಹೋದೆ ಅಂತ ಯೋಚಿಸತೊಡಗಿದೆ.—ಯೆಶಾಯ 48:17, 18.

ಅಧಿವೇಶನ ಮುಗಿದ ಮೇಲೆ ನಾನೊಂದು ನಿರ್ಣಯ ತೆಗೆದುಕೊಂಡೆ. ನಾನು ಬಿಟ್ಟುಬಂದಿದ್ದ ಕ್ರೈಸ್ತ ಸಭೆಗೆ ಹಿಂತಿರುಗಲು ನಿರ್ಧರಿಸಿದೆ. ನನ್ನ ಅಣ್ಣ ತಂಗಿ ಕೂಡ ಅಧಿವೇಶನದಿಂದ ಪ್ರಭಾವಿತರಾಗಿ ಸಭೆಗೆ ಹಿಂತಿರುಗಲು ನಿರ್ಣಯಿಸಿದರು. ನಾವು ಮೂವರೂ ಬೈಬಲ್‌ ಬಗ್ಗೆ ಕಲಿಯಲು ಆರಂಭಿಸಿದೆವು.

ನನ್ನ ಮನಮುಟ್ಟಿದ ಒಂದು ವಚನ ಯಾಕೋಬ 4:8. ಅದು ಹೇಳುತ್ತೆ: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” ನಾನು ದೇವರ ಸಮೀಪಕ್ಕೆ ಬರಬೇಕಾದರೆ ನನ್ನ ಬದುಕನ್ನು ಬದಲಾಯಿಸಬೇಕು ಅಂತ ಅರಿವಾಯಿತು. ತಂಬಾಕು, ಮಾದಕವಸ್ತು ಸೇವಿಸುವುದನ್ನು, ಕುಡಿಯೋದನ್ನು ನಾನು ನಿಲ್ಲಿಸಬೇಕಿತ್ತು.—2 ಕೊರಿಂಥ 7:1.

ನಾನು ಹಳೇ ಸ್ನೇಹಿತರ ಸಹವಾಸ ಬಿಟ್ಟು ಯೆಹೋವ ದೇವರನ್ನು ಆರಾಧಿಸುತ್ತಿರುವ ಜನರ ಜೊತೆ ಸ್ನೇಹ ಬೆಳೆಸಿದೆ. ನನಗೆ ಬೈಬಲ್‌ ಕಲಿಸಿಕೊಡುತ್ತಿದ್ದ ಸಭಾ ಹಿರಿಯ ನನಗೆ ತುಂಬ ನೆರವು ನೀಡಿದರು. ಯಾವಾಗ್ಲೂ ನನಗೆ ಫೋನ್‌ ಮಾಡುತ್ತಿದ್ದರು. ಆಗಾಗ ಬಂದು ಮಾತಾಡಿಸಿಕೊಂಡು ಹೋಗುತ್ತಿದ್ದರು. ಇವತ್ತಿಗೂ ಅವರು ನನ್ನ ಆಪ್ತ ಸ್ನೇಹಿತ.

ಇಸವಿ 2001ರಲ್ಲಿ ದೇವರಿಗೆ ನನ್ನನ್ನು ಅರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದೆ. ನನ್ನ ಅಣ್ಣ ತಂಗಿ ಸಹ ದೀಕ್ಷಾಸ್ನಾನ ತಗೊಂಡರು. ನಮ್ಮ ಕುಟುಂಬದವರೆಲ್ಲ ಒಟ್ಟಾಗಿ ಯೆಹೋವ ದೇವರನ್ನು ಆರಾಧಿಸಲು ಆರಂಭಿಸಿದೆವು. ಇದನ್ನೆಲ್ಲ ನೋಡುವಾಗ ನನ್ನ ಅಪ್ಪಅಮ್ಮ, ತಮ್ಮನಿಗೆ ಎಷ್ಟು ಸಂತೋಷ ಆಗಿರಬಹುದು ಅಂತ ನೀವೇ ಕಲ್ಪಿಸಿಕೊಂಡಿರಬಹುದು.

ಸಿಕ್ಕಿದ ಪ್ರಯೋಜನಗಳು:

ಬೈಬಲ್‌ ಹೇಳೋ ಪ್ರಕಾರ ಜೀವಿಸಿದರೆ ಕಟ್ಟಿಹಾಕಿದಂತೆ ಆಗುತ್ತೆ ಅಂತ ನೆನಸಿದ್ದೆ. ಆದರೆ ಕಟ್ಟಿಹಾಕಲ್ಲ ಸಂರಕ್ಷಿಸುತ್ತೆ ಅನ್ನುವುದನ್ನು ಸ್ವತಃ ಅನುಭವಿಸಿ ಹೇಳುತ್ತಿದ್ದೀನಿ. ಮಾದಕವಸ್ತುಗಳನ್ನು ಮಾರುವ ಸೇವಿಸುವ ಚಟಕ್ಕೆ ಗುಡ್‌ ಬೈ ಹೇಳಲು ನನಗೆ ಬೈಬಲ್‌ ಸಹಾಯಮಾಡಿತು. ನನ್ನನ್ನು ಒಳ್ಳೇ ವ್ಯಕ್ತಿಯನ್ನಾಗಿ ಮಾಡಿತು.

ಅಣ್ಣತಮ್ಮಂದಿರಂತೆ ಒಗ್ಗಟ್ಟಿನಿಂದ ಇರುವ ಯೆಹೋವ ದೇವರ ಭಕ್ತರಲ್ಲಿ ನಾನೂ ಒಬ್ಬ ಅನ್ನೋ ಹೆಗ್ಗಳಿಕೆ ನನ್ನದು. ಭೂವ್ಯಾಪಕವಾಗಿರುವ ಈ ಜನರು ನಿಜವಾಗ್ಲೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. (ಯೋಹಾನ 13:34, 35) ನನಗೆ ದೊರೆತ ವಿಶೇಷ ಆಶೀರ್ವಾದಗಳಲ್ಲೊಂದು ನನ್ನ ಅಚ್ಚುಮೆಚ್ಚಿನ ಪ್ರೀತಿಯ ಪತ್ನಿ ಐಡ್ರಿಯಾನ. ಸೃಷ್ಟಿಕರ್ತನನ್ನು ಜೊತೆಯಾಗಿ ಆರಾಧಿಸುವಾಗ ತುಂಬ ತುಂಬ ತುಂಬ ಸಂತೋಷವಾಗುತ್ತೆ.

ಸ್ವಾರ್ಥಪರ ಬದುಕನ್ನು ಬಾಳುವುದನ್ನು ಬಿಟ್ಟು ಪೂರ್ಣಕಾಲಿಕ ಸ್ವಯಂ ಸೇವೆ ಮಾಡುತ್ತಿದ್ದೀನಿ. ಬೈಬಲ್‌ನಿಂದ ಜನರು ಹೇಗೆ ಪ್ರಯೋಜನ ಪಡೆಯಬಹುದೆಂದು ಕಲಿಸುತ್ತಿದ್ದೀನಿ. ಈ ಕೆಲಸ ನನಗೆ ಹೇಳಲಾಗದಷ್ಟು ಸಂತೋಷ ತಂದಿದೆ. ಬೈಬಲ್‌ ನನ್ನ ಬದುಕನ್ನು ಬದಲಾಯಿಸಿತು ಅಂತ ಯಾವ ಸಂಶಯವಿಲ್ಲದೆ ಹೇಳಬಲ್ಲೆ. ಹೌದು ಅಂತೂ ಇಂತೂ ದೊರಕಿತು ನಿಜಸ್ವಾತಂತ್ರ್ಯ! ▪ (w13-E 01/01)

“ಮಾದಕವಸ್ತುಗಳನ್ನು ಮಾರುವ ಸೇವಿಸುವ ಚಟಕ್ಕೆ ಗುಡ್‌ ಬೈ ಹೇಳಲು ನನಗೆ ಬೈಬಲ್‌ ಸಹಾಯಮಾಡಿತು. ನನ್ನನ್ನು ಒಳ್ಳೇ ವ್ಯಕ್ತಿಯನ್ನಾಗಿ ಮಾಡಿತು.”