ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಲೇರಿಯಾ—ಇದರ ಬಗ್ಗೆ ನಿಮಗೆ ತಿಳಿದಿದೆಯಾ?

ಮಲೇರಿಯಾ—ಇದರ ಬಗ್ಗೆ ನಿಮಗೆ ತಿಳಿದಿದೆಯಾ?

2013ರಲ್ಲಿ ಸರಿಸುಮಾರು 19 ಕೋಟಿ 80 ಲಕ್ಷ ಜನರಿಗೆ ಮಲೇರಿಯಾ ಕಾಯಿಲೆ ಬಂದು, ಸುಮಾರು 5 ಲಕ್ಷ 84 ಸಾವಿರ ಜನ ತೀರಿ ಹೋದರೆಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ. ಹೀಗೆ ಸತ್ತವರಲ್ಲಿ ಶೇಕಡ 83ರಷ್ಟು ರೋಗಿಗಳು 5 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದರು. ಈ ಕಾಯಿಲೆ ನೂರಾರು ದೇಶಗಳಿಗೆ ಈಗಾಗಲೇ ಹರಡಿದ್ದು ಸುಮಾರು 320 ಕೋಟಿ ಜನರ ಪ್ರಾಣಗಳು ಅಪಾಯದಲ್ಲಿವೆ.

1 ಏನಿದು ಮಲೇರಿಯಾ?

ಮಲೇರಿಯಾ, ಪರಾವಲಂಬಿ ಸೂಕ್ಷ್ಮಾಣು ಜೀವಿಗಳ ಮೂಲಕ ಹರಡುವ ಕಾಯಿಲೆ. ಮಲೇರಿಯಾ ಬಂದಿರುವ ವ್ಯಕ್ತಿಯಲ್ಲಿ ಚಳಿ, ಜ್ವರ, ಬೆವರು, ತಲೆ ನೋವು, ಮೈ-ಕೈ ನೋವು, ವಾಕರಿಕೆ ಮತ್ತು ವಾಂತಿ ಸಾಮಾನ್ಯವಾಗಿರುತ್ತದೆ. ಯಾವ ವಿಧದ ಸೂಕ್ಷ್ಮ ಜೀವಿಯಿಂದ ಮಲೇರಿಯಾ ಬಂದಿದೆ ಮತ್ತು ಈ ಕಾಯಿಲೆ, ವ್ಯಕ್ತಿಯಲ್ಲಿ ಎಷ್ಟು ದಿವಸಗಳಿಂದ ಇದೆ ಎನ್ನುವುದನ್ನು ಆಧರಿಸಿ ಮೇಲಿನ ರೋಗಲಕ್ಷಣಗಳು ಎರಡು ಅಥವಾ ಮೂರು ದಿವಸಗಳಿಗೊಮ್ಮೆ ಆಗಾಗ ಕಾಣಿಸಿಕೊಳ್ಳುತ್ತಿರುತ್ತದೆ.

2 ಈ ಕಾಯಿಲೆ ಹರಡುವ ವಿಧ

  1. ಅನಾಫಿಲಿಸ್‌ ಎಂಬ ಹೆಣ್ಣು ಸೊಳ್ಳೆ ಮೂಲಕ ಮನುಷ್ಯನ ರಕ್ತನಾಳಕ್ಕೆ ಪ್ಲಾಸ್ಮೋಡಿಯಂ ಎಂಬ ಸೂಕ್ಷ್ಮಜೀವಿ ಸೇರುತ್ತದೆ.

  2. ನಂತರ ಈ ಸೂಕ್ಷ್ಮಜೀವಿ, ಆ ವ್ಯಕ್ತಿಯ ಪಿತ್ತಜನಕಾಂಗದ (ಲಿವರ್‌) ಜೀವಕೋಶಗಳಿಗೆ ಹೋಗುತ್ತದೆ. ಅಲ್ಲಿ ಇವುಗಳ ಸಂಖ್ಯೆ ಹೆಚ್ಚಾಗುತ್ತದೆ.

  3. ಸೂಕ್ಷ್ಮಜೀವಿಗಳು ಹೆಚ್ಚಾದಂತೆ ಲಿವರ್‌ನ ಜೀವಕೋಶ ಒಡೆದುಹೋಗಿ ಆ ಸೂಕ್ಷ್ಮಜೀವಿಗಳು ಕೆಂಪು ರಕ್ತಕಣಕ್ಕೆ ಸೇರುತ್ತವೆ. ಅಲ್ಲಿ ಮತ್ತೆ ಅವುಗಳ ಸಂಖ್ಯೆ ಹೆಚ್ಚುತ್ತದೆ.

  4. ಕೆಂಪು ರಕ್ತಕಣ ಒಡೆದುಹೋದಾಗ ಸೂಕ್ಷ್ಮಜೀವಿಗಳು ಇತರ ಕೆಂಪು ರಕ್ತಕಣಗಳಿಗೆ ಸೇರುತ್ತವೆ.

  5. ಸೂಕ್ಷ್ಮಜೀವಿಗಳು ರಕ್ತಕಣಗಳಿಗೆ ಹೋಗಿ ಅಲ್ಲಿ ತಮ್ಮ ಸಂಖ್ಯೆ ಹೆಚ್ಚಿಸಿಕೊಂಡು ಒಡೆದುಹೋಗುವ ಈ ಕ್ರಿಯೆ ಹೀಗೇ ಮುಂದುವರಿಯುತ್ತದೆ. ಪ್ರತಿ ಬಾರಿ ರಕ್ತಕಣಗಳು ಒಡೆದುಹೋದಾಗ ಮಲೇರಿಯಾದ ಲಕ್ಷಣಗಳು ಸೋಂಕಿತ ವ್ಯಕ್ತಿಯಲ್ಲಿ ಕಂಡುಬರುತ್ತವೆ.

3 ಮಲೇರಿಯಾ ತಡೆಗಟ್ಟಲು ಸಾಧ್ಯವಿದೆಯಾ?

ನೀವು ಜೀವಿಸುವ ಪ್ರದೇಶದಲ್ಲಿ ಮಲೇರಿಯಾ ಕಾಯಿಲೆ ಸಾಮಾನ್ಯವಾಗಿರುವುದಾದರೆ . . .

  • ಸೊಳ್ಳೆ ಪರದೆಯನ್ನು ಉಪಯೋಗಿಸಿ.

    • ಆ ಸೊಳ್ಳೆ ಪರದೆಗೆ ಕೀಟನಾಶಕವನ್ನು ಸಿಂಪಡಿಸಿರಬೇಕು.

    • ಅದು ಹರಿದು ಹೋಗಿರಬಾರದು.

    • ಅದನ್ನು ಹಾಸಿಗೆಯ ಕೆಳಗೆ ಚೆನ್ನಾಗಿ ಸೇರಿಸಿರಬೇಕು.

  • ಮನೆಯಲ್ಲಿ ಸೊಳ್ಳೆಗಳ ಸ್ಪ್ರೇಯನ್ನು ಉಪಯೋಗಿಸಿ.

  • ಬಾಗಿಲು ಮತ್ತು ಕಿಟಕಿಗಳಿಗೆ ಸಾಧ್ಯವಿದ್ದರೆ ಜಾಲರಿಗಳನ್ನು ಹಾಕಿ. ಎ.ಸಿ. ಮತ್ತು ಫ್ಯಾನ್‌ಗಳನ್ನು ಉಪಯೋಗಿಸಿ ಸೊಳ್ಳೆಗಳು ನಿಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳಿ.

  • ತಿಳಿ ಬಣ್ಣದ ಬಟ್ಟೆಗಳನ್ನು ಮೈ ತುಂಬ ಧರಿಸಿ.

  • ಸೊಳ್ಳೆಗಳು ಹೆಚ್ಚಾಗಿ ಇರುವ ಬಳ್ಳಿ, ಗಿಡ, ಪೊದೆಗಳ ಬಳಿ ಹೋಗಬೇಡಿ, ನಿಂತ ನೀರಿನಲ್ಲಿ ಸೊಳ್ಳೆಗಳು ಹುಟ್ಟಿಕೊಳ್ಳುವುದರಿಂದ ಅಂಥ ಪ್ರದೇಶದಿಂದ ದೂರವಿರಿ.

  • ನಿಮಗೆ ಒಂದುವೇಳೆ, ಮಲೇರಿಯಾ ಕಾಯಿಲೆ ಸೋಂಕಿದ್ದರೆ ದಯವಿಟ್ಟು ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ.

ನೀವು ಹೋಗಬೇಕೆಂದಿರುವ ಪ್ರದೇಶದಲ್ಲಿ ಮಲೇರಿಯಾ ಕಾಯಿಲೆ ಸಾಮಾನ್ಯವಾಗಿದ್ದರೆ . . .

  • ಮೊದಲೇ ಅಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಿ. ಮಲೇರಿಯಾ ಬರಲು ಕಾರಣವಾಗಿರುವ ಸೂಕ್ಷ್ಮ ಜೀವಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಹಾಗಾಗಿ ಔಷಧಿಗಳು ಕೂಡ ಭಿನ್ನವಾಗಿರುತ್ತವೆ. ಆದ್ದರಿಂದ ಅಲ್ಲಿಗೆ ಹೋಗುವ ಮೊದಲೇ ನಿಮ್ಮ ಕುಟುಂಬ ವೈದ್ಯರನ್ನು ಭೇಟಿಯಾಗಿ ನಿಮ್ಮ ಆರೋಗ್ಯದ ಬಗ್ಗೆ ತಿಳಿದುಕೊಳ್ಳಿ.

  • ನೀವು ಆ ಸ್ಥಳದಲ್ಲಿ ಇರುವಷ್ಟು ದಿನ ಈ ಲೇಖನದಲ್ಲಿ ಮಲೇರಿಯಾ ಇರುವ ಪ್ರದೇಶದಲ್ಲಿ ಜೀವಿಸುವವರಿಗಾಗಿ ಕೊಡಲಾದ ಸಲಹೆಗಳನ್ನು ಅನ್ವಯಿಸಿ.

  • ಒಂದುವೇಳೆ ಈ ಕಾಯಿಲೆ ಸೋಂಕಿದರೆ ತಪ್ಪದೇ ಸರಿಯಾದ ಚಿಕಿತ್ಸೆ ಪಡೆಯಿರಿ. ಈ ಕಾಯಿಲೆ ಸೋಂಕಿದರೆ ಒಂದರಿಂದ 4 ವಾರಗಳೊಳಗೆ ಅದರ ಲಕ್ಷಣಗಳು ನಿಮಗೆ ತಿಳಿದುಬರುತ್ತವೆ.