ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ದೃಷ್ಟಿಕೋನ

ಸಹನೆ

ಸಹನೆ

ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡರೆ, ಕ್ಷಮಿಸಿದರೆ ಮತ್ತು ಸಹನೆ ತೋರಿಸಿದರೆ ಸಂಬಂಧಗಳಲ್ಲಿ ಶಾಂತಿ ಸಮಾಧಾನವಿರುತ್ತದೆ. ಆದರೆ ನಮ್ಮ ಸಹನೆಗೂ ಒಂದು ಮಿತಿ ಇರಬೇಕಾ?

ಸಹನೆ ತೋರಿಸಲು ಸಾಧ್ಯನಾ?

ಜನರ ಮನೋಭಾವ ಹೇಗಿದೆ?

ಎಲ್ಲೆಲ್ಲೂ ನಮ್ಮ ಜಾತಿ, ನಮ್ಮ ಮತ, ನಮ್ಮ ಕುಲ, ನಮ್ಮ ದೇಶ ಎಂಬ ಭೇದಭಾವ ಇದೆ. ಆದ್ದರಿಂದ ಜನರು ಒಬ್ಬರನ್ನೊಬ್ಬರು ಸಹಿಸುತ್ತಿಲ್ಲ.

ದೇವರು ಏನು ಹೇಳುತ್ತಾನೆ?

ಯೇಸು ಸುವಾರ್ತೆ ಸಾರುತ್ತಿದ್ದ ಸಮಯದಲ್ಲಿ ಪ್ರೀತಿ, ಸಮಾಧಾನ ಮತ್ತು ಸಹನೆ ಇಲ್ಲದ ಜನರೇ ತುಂಬಿದ್ದರು. ಯೆಹೂದಿಗಳೂ ಸಮಾರ್ಯದವರೂ ಹಾವು-ಮುಂಗುಸಿ ಥರ ದ್ವೇಷಿಸುತ್ತಿದ್ದರು. (ಯೋಹಾನ 4:9) ಪುರುಷರು ಸ್ತ್ರೀಯರನ್ನು ತುಂಬ ಹೀನವಾಗಿ ನೋಡುತ್ತಿದ್ದರು. ಸಾಮಾನ್ಯ ಜನರನ್ನು ಯೆಹೂದಿ ಧಾರ್ಮಿಕ ಮುಖಂಡರು ತುಚ್ಛವಾಗಿ ಕಾಣುತ್ತಿದ್ದರು. (ಯೋಹಾನ 7:49) ಆದರೆ ಯೇಸು, ಇವರೆಲ್ಲರಿಗಿಂತ ತುಂಬ ಭಿನ್ನನಾಗಿದ್ದನು. ಆತನ ವೈರಿಗಳೇ “ಇವನು ಪಾಪಿಗಳೊಂದಿಗೂ ಕೂತು ಊಟಮಾಡುತ್ತಾನೆ” ಎಂದು ಹೇಳಿದ್ದರು. (ಲೂಕ 15:2) ಯೇಸು ತನ್ನ ಜೀವಿತದುದ್ದಕ್ಕೂ ದಯೆ, ತಾಳ್ಮೆ ಮತ್ತು ಸಹನೆಯನ್ನು ತೋರಿಸಿದನು. ಕಾರಣ ‘ಇವರು ಮೇಲು, ಇವರು ಕೀಳು’ ಎಂದು ಜನರನ್ನು ತೀರ್ಪುಮಾಡಲು ಆತನು ಬಂದಿರಲಿಲ್ಲ, ಬದಲಿಗೆ ಅವರಿಗೆ ಆಧ್ಯಾತ್ಮಿಕ ಸಹಾಯ ನೀಡಲು ಬಂದಿದ್ದನು. ಯೇಸುವಿಗೆ ಜನರ ಮೇಲೆ ತುಂಬ ಪ್ರೀತಿಯಿದ್ದದರಿಂದ ಅವರ ಕಡೆಗೆ ಸಹನೆ ತೋರಿಸಿದನು.—ಯೋಹಾನ 3:17; 13:34.

ಸಹನೆ ತೋರಿಸುವುದರಲ್ಲಿ ಮಾದರಿಯಾಗಿರುವ ಯೇಸು, ‘ಇವರು ಮೇಲು, ಇವರು ಕೀಳು’ ಎಂದು ಜನರನ್ನು ತೀರ್ಪುಮಾಡಲು ಬರಲಿಲ್ಲ, ಬದಲಿಗೆ ಅವರಿಗೆ ಆಧ್ಯಾತ್ಮಿಕ ಸಹಾಯ ನೀಡಲು ಬಂದನು

ನಮ್ಮಲ್ಲಿ ಪ್ರೀತಿ ಇದ್ದರೆ ಜನರು ಏನೇ ಮಾಡಲಿ, ಅವರು ಹೇಗೇ ಇರಲಿ, ಅವರೊಂದಿಗೆ ಸಹನೆಯಿಂದಿರಲು ಮತ್ತು ಬೆರೆಯಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಕೊಲೊಸ್ಸೆ 3:13ರಲ್ಲಿ “ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ” ಎಂಬ ಸಲಹೆಯನ್ನು ಕೊಡಲಾಗಿದೆ.

“ಎಲ್ಲಕ್ಕಿಂತಲೂ ಮಿಗಿಲಾಗಿ ಒಬ್ಬರಿಗೊಬ್ಬರು ಗಾಢವಾದ ಪ್ರೀತಿಯುಳ್ಳವರಾಗಿರಿ; ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.”1 ಪೇತ್ರ 4:8.

ಸಹನೆಗೂ ಒಂದು ಮಿತಿ ಇರಬೇಕು! ಯಾಕೆ?

ಇಂದಿನ ಪರಿಸ್ಥಿತಿ ಹೇಗಿದೆ?

ಕಾನೂನು ಮತ್ತು ಶಿಸ್ತನ್ನು ಕಾಪಾಡಲು ಸರಕಾರಗಳು ಪ್ರಯತ್ನಿಸುತ್ತಿವೆ. ಆದ್ದರಿಂದ ಜನರು ಹೇಗೆ ನಡೆದುಕೊಳ್ಳಬೇಕು, ಹೇಗೆ ನಡೆದುಕೊಳ್ಳಬಾರದು ಎಂದು ತಕ್ಕ ಮಟ್ಟಿಗೆ ನಿಯಮಗಳನ್ನು ಹಾಕಿವೆ.

ದೇವರು ಏನು ಹೇಳುತ್ತಾನೆ?

ಪ್ರೀತಿಯು “ಅಸಭ್ಯವಾಗಿ ವರ್ತಿಸುವುದಿಲ್ಲ” ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂಥ 13:5) ಯೇಸು ಸಹನೆ ತೋರಿಸಿದ್ದು ನಿಜ, ಹಾಗಂತ ಜನರ ಅಸಭ್ಯ ನಡತೆಯನ್ನು, ಕಪಟತನವನ್ನು ಮತ್ತು ಅನ್ಯಾಯದ ಕೆಲಸಗಳನ್ನು ನೋಡಿಯೂ ನೋಡದಂತೆ ಇರಲಿಲ್ಲ. ಅಂತಹ ನಡತೆಯನ್ನು ಧೈರ್ಯವಾಗಿ ಖಂಡಿಸಿದನು. (ಮತ್ತಾಯ 23:13) “ದುಷ್ಟ ವಿಷಯಗಳನ್ನು ಮಾಡುತ್ತಾ ಇರುವವನು ಬೆಳಕನ್ನು [ಸತ್ಯವನ್ನು] ದ್ವೇಷಿಸುತ್ತಾನೆ” ಎಂದು ಎಚ್ಚರಿಸಿದ್ದನು.—ಯೋಹಾನ 3:20.

ಅಪೊಸ್ತಲ ಪೌಲನು, “ಕೆಟ್ಟದ್ದನ್ನು ಹೇಸಿರಿ, ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ” ಎಂದು ಹೇಳಿದ್ದನು. (ರೋಮನ್ನರಿಗೆ 12:9) ತನ್ನ ಮಾತಿನಂತೆ ಪೌಲ ನಡೆದು ತೋರಿಸಿದನು. ಉದಾಹರಣೆಗೆ, ಕೆಲವು ಯೆಹೂದಿ ಕ್ರೈಸ್ತರು ಯೆಹೂದಿಗಳಲ್ಲದ ಕ್ರೈಸ್ತರ ಜೊತೆ ಸೇರದೆ ಇದ್ದಾಗ, ಪೌಲ ದೃಢವಾಗಿ ಆದರೆ ದಯೆಯಿಂದ ಆ ತಪ್ಪನ್ನು ತಿಳಿಸಿದನು. (ಗಲಾತ್ಯ 2:11-14) ಭೇದಭಾವ ಮಾಡದ ಯೆಹೋವ ದೇವರು ಯಾವುದೇ ಕಾರಣಕ್ಕೂ ತನ್ನ ಜನರು ಭೇದಭಾವ ಮಾಡುವುದನ್ನು ಇಷ್ಟಪಡುವುದಿಲ್ಲವೆಂದು ಅವನಿಗೆ ತಿಳಿದಿತ್ತು.—ಅಪೊಸ್ತಲರ ಕಾರ್ಯಗಳು 10:34.

ಯೆಹೋವನ ಸಾಕ್ಷಿಗಳು ಯಾವಾಗಲೂ ಬೈಬಲಿನಿಂದ ಮಾರ್ಗದರ್ಶನೆಯನ್ನು ಪಡೆದುಕೊಳ್ಳುತ್ತಾರೆ. (ಯೆಶಾಯ 33:22) ಆದ್ದರಿಂದ ತಮ್ಮ ಮಧ್ಯೆ ಸಹ ಯಾವುದೇ ಅನ್ಯಾಯ ಮತ್ತು ಮೋಸವನ್ನು ಅವರು ಸಹಿಸುವುದಿಲ್ಲ. ದೇವರ ಆಜ್ಞೆಗಳಿಗೆ ಗೌರವ ಕೊಡದ ಜನರಿಂದ ಕ್ರೈಸ್ತ ಸಭೆ ಮಲಿನವಾಗದಂತೆ ನೋಡಿಕೊಳ್ಳುತ್ತಾರೆ. ಹಾಗಾಗಿಯೇ, “ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಿರಿ” ಎಂಬ ಬೈಬಲಿನ ನಿರ್ದೇಶನವನ್ನು ಪಾಲಿಸುತ್ತಾರೆ.—1 ಕೊರಿಂಥ 5:11-13.

“ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ.”ಕೀರ್ತನೆ 97:10.

ಅನ್ಯಾಯ, ಅಕ್ರಮಗಳನ್ನು ದೇವರು ಸದಾಕಾಲಕ್ಕೂ ಸಹಿಸಿಕೊಳ್ಳುತ್ತಲೇ ಇರುವನೋ?

ಜನರು ಏನು ಹೇಳುತ್ತಾರೆ?

ಅನ್ಯಾಯ ಅಕ್ರಮ ಮನುಷ್ಯನ ರಕ್ತದ ಕಣ ಕಣದಲ್ಲೂ ಇದೆ, ಆದ್ದರಿಂದ ಇದು ಯಾವಾಗಲೂ ಇರುತ್ತೆ.

ದೇವರು ಏನು ಹೇಳುತ್ತಾನೆ?

ದೇವರ ಸೇವಕ ಹಬಕ್ಕೂಕ ಯೆಹೋವ ದೇವರಿಗೆ, “ಕೇಡನ್ನು ನನ್ನ ಕಣ್ಣಿಗೆ ಏಕೆ ಬೀಳಿಸುತ್ತಿದ್ದೀ? ಕಷ್ಟವನ್ನೇಕೆ ನನಗೆ ತೋರಿಸುತ್ತಿದ್ದೀ? ಹಿಂಸೆಬಾಧೆಗಳು ನನ್ನ ಕಣ್ಣೆದುರಿಗೆ ಇದ್ದೇ ಇವೆ” ಎಂದು ಪ್ರಾರ್ಥಿಸಿದನು. (ಹಬಕ್ಕೂಕ 1:3) ಆಗ ಯೆಹೋವ ದೇವರು ಬೇಸತ್ತು ಹೋಗಿದ್ದ ಹಬಕ್ಕೂಕನಿಗೆ, ‘ಬಲು ಬೇಗನೆ ಕೆಟ್ಟವರಿಗೆಲ್ಲ ನ್ಯಾಯ ತೀರಿಸುವ ಸಮಯ ಬಂದೇ ಬರುವದು, ತಡವಾಗದು’ ಎಂದು ಈ ವಿಷಯದ ಬಗ್ಗೆ ಆಶ್ವಾಸನೆ ಕೊಟ್ಟನು.—ಹಬಕ್ಕೂಕ 2:3.

ಆ ಸಮಯ ಬರುವಷ್ಟರೊಳಗೆ, ತಪ್ಪಿತಸ್ಥರಿಗೆ ತಮ್ಮನ್ನು ಬದಲಾಯಿಸಿಕೊಳ್ಳಲು ಕಾಲಾವಕಾಶವಿದೆ. “ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವುಂಟೋ? ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ” ಎಂದು ಸರ್ವಶಕ್ತ ಯೆಹೋವ ದೇವರು ಹೇಳಿದನು. (ಯೆಹೆಜ್ಕೇಲ 18:23) ದೇವರ ಮೇಲಿನ ಪ್ರೀತಿಯಿಂದಾಗಿ ಯಾರು ತಮ್ಮ ಕೆಟ್ಟ ಮಾರ್ಗವನ್ನು ಬಿಟ್ಟು ಆತನ ಇಷ್ಟದಂತೆ ನಡೆಯುತ್ತಾರೋ ಅಂಥವರು ಭವಿಷ್ಯದ ಬಗ್ಗೆ ಭಯಪಡಬೇಕಾಗಿಲ್ಲ. “ನನ್ನ ಮಾತಿಗೆ ಕಿವಿಗೊಡುವವನಾದರೋ ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು” ಎಂದು ಜ್ಞಾನೋಕ್ತಿ 1:33ರಲ್ಲಿ ಹೇಳಲಾಗಿದೆ. ▪ (g15-E 08)

“ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”ಕೀರ್ತನೆ 37:10, 11.