ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆರೋಗ್ಯವಂತ ತಾಯಿ ಆರೋಗ್ಯವಂತ ಮಗು

ಆರೋಗ್ಯವಂತ ತಾಯಿ ಆರೋಗ್ಯವಂತ ಮಗು

ಆರೋಗ್ಯವಂತ ತಾಯಿ ಆರೋಗ್ಯವಂತ ಮಗು

ಆಗಷ್ಟೇ ಹುಟ್ಟಿದ ತನ್ನ ಆರೋಗ್ಯವಂತ ಶಿಶುವನ್ನು ಕೈಗಳಲ್ಲಿ ಎತ್ತಿಕೊಂಡ ತಾಯಿಯ ಮುಖ ಆನಂದದಿಂದ ಅರಳುತ್ತದೆ. ಕೂಸನ್ನು ಕಂಡ ತಂದೆಯು ಸಂತೋಷದಿಂದ ಉಬ್ಬುತ್ತಾನೆ. ಈ ಹರ್ಷಾನಂದದ ದೃಶ್ಯವು ಜಗತ್ತಿನಲ್ಲಿ ಪ್ರತಿ ವರ್ಷ ಮಿಲ್ಯಾಂತರ ಮಕ್ಕಳು ಹುಟ್ಟುವಾಗ ಪುನರಾವರ್ತಿಸುತ್ತದೆ. ಮಗುವಿನ ಜನನವು ಒಂದು ಸಹಜ ಪ್ರಕ್ರಿಯೆಯಾದ ಕಾರಣ ಹೆರಿಗೆ ಹೇಗೋ ನಡೆಯುತ್ತದೆ, ಅದರ ಬಗ್ಗೆ ಏಕೆ ಚಿಂತಿಸಬೇಕೆಂದು ನೆನಸುವ ಸಾಧ್ಯತೆ ಇದೆ.

ಹೆಚ್ಚಿನ ಹೆರಿಗೆಗಳು ಯಾವುದೇ ತೊಡಕಿಲ್ಲದೆ ನಡೆಯುತ್ತವೆ ನಿಜ. ಆದರೆ ಯಾವಾಗಲೂ ಹೀಗಾಗುವುದಿಲ್ಲ. ಆದಕಾರಣ ಜಾಣ್ಮೆಯುಳ್ಳ ಭಾವೀ ಹೆತ್ತವರು ತೊಂದರೆಗಳನ್ನು ತಡೆಯಲು ತಮ್ಮಿಂದಾದಷ್ಟು ಮಟ್ಟಿಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ, ಹೆರಿಗೆ ಸಮಸ್ಯೆಗಳಿಗೆ ಕಾರಣಗಳನ್ನು ತಿಳಿದುಕೊಳ್ಳುತ್ತಾರೆ, ಗರ್ಭಾವಸ್ಥೆಯ ಅವಧಿಯಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯುತ್ತಾರೆ, ಹೆರಿಗೆ ನೋವು ಕಾಣಿಸಿಕೊಳ್ಳುವಾಗ ಮತ್ತು ಹೆರಿಗೆಯಾಗುವಾಗ ಬರುವ ಅಪಾಯಗಳನ್ನು ಕಡಿಮೆಗೊಳಿಸಲು ಕೆಲವು ಸರಳ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾರೆ. ಈ ಅಂಶಗಳನ್ನು ನಾವೀಗ ವಿವರವಾಗಿ ಚರ್ಚಿಸೋಣ.

ಹೆರಿಗೆ ಸಮಸ್ಯೆಗಳಿಗೆ ಕಾರಣಗಳು

ಹೆರಿಗೆ ಸಮಯದಲ್ಲಿ ತಾಯಿ-ಮಗುವಿಗಾಗುವ ತೊಂದರೆಗೆ ಒಂದು ಕಾರಣವೇನೆಂದರೆ, ಗರ್ಭಾವಸ್ಥೆಯ ಅವಧಿಯಲ್ಲಿ ಸರಿಯಾದ ಆರೈಕೆಯ ಕೊರತೆಯೇ. ಹಾಂಗ್‌ಕಾಂಗ್‌ನ ‘ಪ್ರಿನ್ಸ್‌ ಆಫ್‌ ವೇಲ್ಸ್‌ ಹಾಸ್ಪಿಟಲ್‌’ನಲ್ಲಿ ನವಜಾತ ಶಿಶುಗಳ ಆರೈಕೆ ಘಟಕದಲ್ಲಿ ಮಕ್ಕಳ-ತಜ್ಞ ಸಮಾಲೋಚಕರಾದ ಡಾಕ್ಟರ್‌ ಚುಂಗ್‌ ಕಮ್‌-ಲಾವ್‌ ಹೀಗಂದರು: “ಗರ್ಭಾವಸ್ಥೆಯಲ್ಲಿ ಆರೈಕೆ ಮಾಡದಿದ್ದರೆ ಹೊಟ್ಟೆಯಲ್ಲಿರುವ ಮಗುವಿಗೆ ತುಂಬ ಅಪಾಯವಾಗಬಲ್ಲದು.” ಅವರು ಮತ್ತೂ ಹೇಳಿದ್ದು: “ಆರೈಕೆ ಮಾಡದ ಹೆಚ್ಚಿನ ತಾಯಂದಿರು ಗುಂಡುಗುಂಡಾದ ಆರೋಗ್ಯವಂತ ಮಗುವನ್ನು ನಿರೀಕ್ಷಿಸುತ್ತಾರೆ. ಆದರೆ ಇದೆಲ್ಲಾ ತನ್ನಿಂದತಾನೇ ಆಗುವುದಿಲ್ಲ.”

ಅಮೆರಿಕದ ವೈದ್ಯಕೀಯ ಮಹಿಳಾ ಸಂಘ ಪತ್ರಿಕೆ (ಇಂಗ್ಲಿಷ್‌) ತಾಯಂದಿರನ್ನು ಬಾಧಿಸುವ ಸಮಸ್ಯೆಗಳ ಕುರಿತು ಹೇಳುತ್ತಾ ತೀವ್ರ ರಕ್ತಸ್ರಾವ, ಮಗು ಹೊರಬರಲು ತೊಡಕು, ಸೋಂಕು, ವಿಪರೀತ ಏರಿದ ರಕ್ತದೊತ್ತಡ ಇತ್ಯಾದಿ “ಹೆರಿಗೆಯ ಸಮಯದಲ್ಲಿ ತಾಯಿಯ ಸಾವಿಗೆ ಮುಖ್ಯ ಕಾರಣಗಳು” ಎಂದು ತಿಳಿಸುತ್ತದೆ. ಆದರೆ ಇಂದು ಪರಿಣಾಮಕಾರಿ ಚಿಕಿತ್ಸೆಗಳು ಪ್ರಖ್ಯಾತವಾಗಿವೆ ಮಾತ್ರವಲ್ಲ ಹೆಚ್ಚಿನ ಸಂದರ್ಭಗಳಲ್ಲಿ “ಆಧುನಿಕ ವೈದ್ಯಕೀಯ ಆರೈಕೆಯಲ್ಲಿ . . . ಜಟಿಲ ವೈದ್ಯಕೀಯ ಉಪಕರಣಗಳ ಅವಶ್ಯವಿಲ್ಲ” ಎನ್ನುತ್ತದೆ ಆ ಪತ್ರಿಕೆ.

ವೈದ್ಯಕೀಯ ಆರೈಕೆಯನ್ನು ಶಿಶುಗಳಿಗೂ ಲಭ್ಯಗೊಳಿಸುವುದರಿಂದ ಅನೇಕ ಹಸುಳೆಗಳ ಜೀವ ಉಳಿಸಬಹುದು. “ಎಲ್ಲ ತಾಯಂದಿರು ಮತ್ತು ನವಜಾತ ಶಿಶುಗಳಿಗೆ, ಜಟಿಲ ವೈದ್ಯಕೀಯ ಉಪಕರಣಗಳಿಲ್ಲದೆಯೂ ಕೊಡಬಹುದಾದ ಸುಪರಿಚಿತ” ವೈದ್ಯಕೀಯ ಚಿಕಿತ್ಸೆ “ಸಿಗುವಲ್ಲಿ ಸುಮಾರು 67% ನವಜನಿತ ಕೂಸುಗಳ ಮರಣವನ್ನು ತಡೆಗಟ್ಟಬಹುದು” ಎಂದು ಯು.ಎನ್‌. ಕ್ರಾನಿಕಲ್‌ ವರದಿಸಿತು. ಆದರೆ ದುಃಖಕರ ಸಂಗತಿಯೇನೆಂದರೆ ಗರ್ಭಾವಸ್ಥೆಯ ಸಮಯದಲ್ಲಿ ಬೇಕಾದ ಆರೈಕೆಯ ಕುರಿತು ಸಾಮಾನ್ಯವಾಗಿ ಗರ್ಭಿಣಿಯರಿಗೆ ತಿಳಿದಿರುವುದಿಲ್ಲ ಇಲ್ಲವೆ ತಿಳಿದರೂ ಅದನ್ನು ನಿರ್ಲಕ್ಷಿಸುತ್ತಾರೆ ಎಂದು ಫಿಲಿಫೈನ್ಸ್‌ ನ್ಯೂಸ್‌ ಏಜೆನ್ಸಿ ವರದಿಸಿತು.

ಗರ್ಭಾವಸ್ಥೆಯಲ್ಲಿ ತಾಯಿ-ಮಗುವಿಗೆ ಉತ್ತಮ ಗುಣಮಟ್ಟದ ಆರೈಕೆ

“ಆರೋಗ್ಯವಂತ ತಾಯಂದಿರಿಗೆ ಆರೋಗ್ಯವಂತ ಮಕ್ಕಳು ಹುಟ್ಟುತ್ತವೆ” ಎನ್ನುತ್ತದೆ ಯು.ಎನ್‌. ಕ್ರಾನಿಕಲ್‌. ಅದು ಹೇಳಿದ ಇನ್ನೊಂದು ವಿಷಯವೇನೆಂದರೆ ಗರ್ಭಾವಸ್ಥೆ, ಹೆರಿಗೆ ಮತ್ತು ಬಾಣಂತನದ ಸಮಯದಲ್ಲಿ ಸ್ತ್ರೀಯೊಬ್ಬಳಿಗೆ ಸ್ವಲ್ಪವೇ ವೈದ್ಯಕೀಯ ಆರೈಕೆ ಸಿಗುವಲ್ಲಿ ಅಥವಾ ಏನೂ ಸಿಗದಿದ್ದಲ್ಲಿ ಆಕೆಯ ಮಗುವಿಗೂ ಸಿಗುವ ಆರೈಕೆ ತೀರಾ ಕಡಿಮೆ ಅಥವಾ ಏನೂ ಸಿಗುವುದಿಲ್ಲ.

ಕೆಲವು ದೇಶಗಳಲ್ಲಿ ಗರ್ಭಿಣಿಯರಿಗೆ ಸಾಕಷ್ಟು ಆರೈಕೆ ಸಿಗುವುದು ಕಷ್ಟವಾದೀತು. ಪ್ರಾಯಶಃ ಆಸ್ಪತ್ರೆ ಬಹಳ ದೂರ ಇರಬಹುದು ಅಥವಾ ವೈದ್ಯಕೀಯ ಖರ್ಚುವೆಚ್ಚಗಳನ್ನು ಭರಿಸಲು ಅವರಿಗೆ ಆಗದಿರಬಹುದು. ಏನೇ ಆದರೂ ಭಾವೀ ತಾಯಿಯು ಸ್ವಲ್ಪಮಟ್ಟಿಗಿನ ವೈದ್ಯಕೀಯ ಚಿಕಿತ್ಸೆಯನ್ನಾದರೂ ಪಡಕೊಳ್ಳಲೇಬೇಕು. ಪವಿತ್ರ ಬೈಬಲಿಗನುಸಾರ ಜೀವಿಸುವ ಸ್ತ್ರೀಯರು ಇದನ್ನು ಮಾಡುವುದು ವಿಶೇಷವಾಗಿ ಮಹತ್ತ್ವದ್ದು. ಏಕೆಂದರೆ ಮಾನವ ಜೀವವು ಪವಿತ್ರವೆಂದು ಬೈಬಲ್‌ ತಿಳಿಸುತ್ತದೆ. ಇದರಲ್ಲಿ ಗರ್ಭಸ್ಥ ಶಿಶುವೂ ಸೇರಿದೆ.—ವಿಮೋಚನಕಾಂಡ 21:22, 23; * ಧರ್ಮೋಪದೇಶಕಾಂಡ 22:8.

ಉತ್ತಮ ವೈದ್ಯಕೀಯ ಆರೈಕೆಯನ್ನು ಪಡಕೊಳ್ಳುವುದರ ಅರ್ಥ ಪ್ರತಿ ವಾರವೂ ವೈದ್ಯರನ್ನು ಕಾಣಬೇಕೆಂದೋ? ಹಾಗೇನಿಲ್ಲ. ಗರ್ಭಾವಸ್ಥೆ ಮತ್ತು ಹೆರಿಗೆಯ ಸಮಯದಲ್ಲಿ ಸಾಮಾನ್ಯವಾಗಿ ಏಳುವ ಸಮಸ್ಯೆಗಳ ಬಗ್ಗೆ ‘ವಿಶ್ವ ಆರೋಗ್ಯ ಸಂಸ್ಥೆ’ (ಡಬ್ಲ್ಯು.ಎಚ್‌.ಓ) ಕಂಡುಕೊಂಡದ್ದೇನೆಂದರೆ “ಗರ್ಭಾವಸ್ಥೆಯ ಅವಧಿಯಲ್ಲಿ ಕೇವಲ ನಾಲ್ಕು ಬಾರಿ ವೈದ್ಯರನ್ನು ಕಂಡ ಮಹಿಳೆಯರ ಹೆರಿಗೆಯು 12 ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ವೈದ್ಯರನ್ನು ಕಂಡ ಮಹಿಳೆಯರ ಹೆರಿಗೆಯಷ್ಟೇ ಒಳ್ಳೇ ರೀತಿಯಲ್ಲಿ ಆಯಿತು.”

ಡಾಕ್ಟರರು ಹೇಗೆ ಸಹಾಯಮಾಡುತ್ತಾರೆ?

ತಾಯಿ ಮತ್ತು ಗರ್ಭಸ್ಥ ಮಗುವಿಗೆ ಉಂಟಾಗಬಹುದಾದ ಅಪಾಯವನ್ನು ಆದಷ್ಟು ಕಡಿಮೆಗೊಳಿಸಲು ಡಾಕ್ಟರರು ಅದರಲ್ಲೂ ವಿಶೇಷವಾಗಿ ಪ್ರಸೂತಿ ತಜ್ಞರು ಕೆಳಗಿನ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾರೆ:

◼ ಇವರು ಗರ್ಭಿಣಿಯ ವೈದ್ಯಕೀಯ ದಾಖಲೆಯನ್ನು ಪರಿಶೀಲಿಸಿ, ಆಕೆಗೂ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೂ ಯಾವುದೇ ಅಪಾಯವಿದೆಯೋ ಎಂದು ತಿಳುಕೊಳ್ಳಲು ಮತ್ತು ತೊಂದರೆಗಳನ್ನು ತಡೆಗಟ್ಟಲು ತಪಾಸಣೆ ಮಾಡುತ್ತಾರೆ.

◼ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿ ರಕ್ತಹೀನತೆ, ಸೋಂಕು, ಆರ್‌.ಎಚ್‌. ಹೊಂದಿಕೆಯಿಲ್ಲದಿರುವಿಕೆ (Rh incompatibility) ಇತ್ಯಾದಿ ಸಮಸ್ಯೆಗಳಿವೆಯೋ ಎಂದು ಪತ್ತೆಹಚ್ಚುತ್ತಾರೆ. ಮಾತ್ರವಲ್ಲ ಮಧುಮೇಹ, ದಡಾರ, ರತಿರವಾನಿತ ರೋಗಗಳು, ರಕ್ತದೊತ್ತಡ ಏರಿಸುವ ಮೂತ್ರಪಿಂಡದ ರೋಗ ಇದೆಯೋ ಎಂದೂ ಪರೀಕ್ಷಿಸುತ್ತಾರೆ.

◼ ರೋಗಿಗೆ ಸೂಕ್ತವಾಗಿರುವಲ್ಲಿ ಮತ್ತು ಸ್ವೀಕರಣೀಯವಾಗಿರುವಲ್ಲಿ ಫ್ಲೂ, ಟೆಟನಸ್‌ ಮತ್ತು ಆರ್‌.ಎಚ್‌. ಹೊಂದಿಕೆಯಿಲ್ಲದಿರುವಿಕೆಗೆ ಲಸಿಕೆಗಳನ್ನು ಶಿಫಾರಸು ಮಾಡುತ್ತಾರೆ.

◼ ವಿಟಮಿನ್‌ ಪೂರಕಗಳನ್ನೂ, ವಿಶೇಷವಾಗಿ ಫಾಲಿಕ್‌ ಆಮ್ಲವನ್ನು ಶಿಫಾರಸು ಮಾಡುತ್ತಾರೆ.

ಹೀಗೆ ಡಾಕ್ಟರರು ಮಹಿಳೆಯೊಬ್ಬಳ ಪ್ರತಿಯೊಂದು ಗರ್ಭಾವಸ್ಥೆಯಲ್ಲಿ ಎದುರಾಗುವ ಅಪಾಯಗಳನ್ನು ಗುರುತಿಸುತ್ತಾರೆ. ಅಗತ್ಯವಿರುವಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಇಲ್ಲವೆ ಆ ಬಗ್ಗೆ ಸಲಹೆ ಕೊಡುತ್ತಾರೆ. ಈ ರೀತಿಯಲ್ಲಿ, ತಾಯಿಗೂ ಹುಟ್ಟಲಿರುವ ಮಗುವಿಗೂ ಅಪಾಯಸಂಭವವನ್ನು ಕಡಿಮೆಗೊಳಿಸುತ್ತಾರೆ.

ಹೆರಿಗೆ ಅಪಾಯಗಳನ್ನು ಕಡಿಮೆಗೊಳಿಸುವುದು

ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕುಟುಂಬ ಹಾಗೂ ಸಮುದಾಯ ಆರೋಗ್ಯ ವಿಭಾಗದ ಮಾಜಿ ಸಹಾಯಕ ಡೈರೆಕ್ಟರ್‌ ಜನರಲ್‌ ಜಾಯ್‌ ಫುಮಾಫೀ ಹೀಗನ್ನುತ್ತಾರೆ: “ಹೆರಿಗೆ ನೋವಿನ ಆರಂಭದಿಂದ ಹಿಡಿದು ಹೆರಿಗೆಯಾಗುವ ತನಕದ ಅವಧಿಯಲ್ಲೇ ಗರ್ಭಿಣಿ ಸ್ತ್ರೀಗೆ ಅತ್ಯಂತ ಹೆಚ್ಚಿನ ಅಪಾಯವಿದೆ.” ಇಂಥ ಕಠಿನ ಸಮಯದಲ್ಲಿ ಗಂಭೀರವಾದ ಮತ್ತು ಜೀವಕ್ಕೆ ಅಪಾಯ ತರುವ ಸಮಸ್ಯೆಗಳನ್ನು ಹೇಗೆ ತಡೆಯಬಹುದು? ಅದಕ್ಕಾಗಿ ತೆಗೆದುಕೊಳ್ಳಬೇಕಾದ ಹೆಜ್ಜೆಗಳು ತೀರ ಸರಳ. ಆದರೆ ಅವುಗಳನ್ನು ಮುಂದಾಗಿಯೇ ತೆಗೆದುಕೊಳ್ಳಬೇಕು. * ವಿಶೇಷವಾಗಿ, ಬೈಬಲಾಧರಿತ ಕಾರಣಗಳಿಗಾಗಿ ಇಲ್ಲವೆ ವೈದ್ಯಕೀಯ ಅಪಾಯಗಳಿವೆ ಎಂಬ ಕಾರಣಕ್ಕಾಗಿ ರಕ್ತ ತೆಗೆದುಕೊಳ್ಳಲು ನಿರಾಕರಿಸುವವರು ಇದನ್ನು ಮಾಡುವುದು ಪ್ರಾಮುಖ್ಯ.—ಅ. ಕಾರ್ಯಗಳು 15:20, 28, 29.

ಇಂಥ ಗರ್ಭಿಣಿಯರು ತಮ್ಮ ಡಾಕ್ಟರರು ರಕ್ತಪೂರಣಗಳಿಗೆ ಬದಲಿ ಔಷಧೋಪಚಾರ ಕೊಡಲು ದಕ್ಷರೂ ಅನುಭವಿಗಳೂ ಆಗಿದ್ದಾರೆಂದು ಖಚಿತಪಡಿಸಲು ತಮ್ಮಿಂದಾದುದ್ದನ್ನು ಮಾಡಬೇಕು. ರಕ್ತಪೂರಣಗಳಿಲ್ಲದ ಔಷಧೋಪಚಾರ ನೀಡಲು ಆಸ್ಪತ್ರೆ ಅಥವಾ ನರ್ಸಿಂಗ್‌ ಹೋಮ್‌ನವರು ಸಹ ಸಹಕರಿಸಲು ಸಿದ್ಧರಿದ್ದಾರೊ ಎಂದು ಭಾವೀ ಹೆತ್ತವರು ತಿಳಿದುಕೊಳ್ಳುವುದು ವಿವೇಕಯುತ. * ಡಾಕ್ಟರರಿಗೆ ಈ ಎರಡು ಪ್ರಶ್ನೆಗಳನ್ನು ಕೇಳುವುದು ಉತ್ತಮ: 1. ತಾಯಿ ಇಲ್ಲವೆ ಮಗುವಿಗೆ ತುಂಬ ರಕ್ತನಷ್ಟ ಆಗುವಲ್ಲಿ ಅಥವಾ ಬೇರಾವುದೇ ತೊಡಕುಗಳು ಏಳುವಲ್ಲಿ ನೀವೇನು ಮಾಡುವಿರಿ? 2. ಹೆರಿಗೆಯಾಗುವಾಗ ನೀವಿರದಿದ್ದಲ್ಲಿ ರಕ್ತರಹಿತ ಔಷಧೋಪಚಾರ ಕೊಡಲು ಬೇರಾವ ಏರ್ಪಾಡು ಮಾಡುವಿರಿ?

ಜಾಣ್ಮೆಯುಳ್ಳ ಮಹಿಳೆ ತನ್ನ ಹೆರಿಗೆಯ ದಿನಗಳು ಹತ್ತಿರವಾಗುತ್ತಿರುವಾಗ ತನ್ನ ರಕ್ತಕಣಗಳ ಸಂಖ್ಯೆ ‘ನಾರ್ಮಲ್‌ ರೇಂಜ್‌’ನಲ್ಲಿ ಅತ್ಯುಚ್ಚ ಮಟ್ಟದಲ್ಲಿದೆಯೋ ಎಂದು ಡಾಕ್ಟರರಿಂದ ಖಚಿತಪಡಿಸುವಳು. ಒಂದುವೇಳೆ ಆಕೆಯ ರಕ್ತಕಣಗಳ ಸಂಖ್ಯೆ ಕಡಿಮೆಯಾಗಿದ್ದಲ್ಲಿ ಅದನ್ನು ಏರಿಸಲು ಫಾಲಿಕ್‌ ಆಮ್ಲ ಮತ್ತು ಇತರ ಬಿ-ಗ್ರೂಪ್‌ ವಿಟಮಿನ್‌ಗಳನ್ನೂ ಕಬ್ಬಿನಾಂಶವುಳ್ಳ ಔಷಧಗಳನ್ನೂ ಡಾಕ್ಟರ್‌ ಶಿಫಾರಸು ಮಾಡಬಹುದು.

ಡಾಕ್ಟರ್‌ ಇನ್ನಿತರ ಹಲವಾರು ವಿಷಯಗಳ ಕಡೆಗೂ ಗಮನಕೊಡುವರು. ಉದಾಹರಣೆಗೆ, ಪ್ರತಿಸಲ ಗರ್ಭಿಣಿಯ ತಪಾಸಣೆ ಮಾಡುವಾಗ ಆಕೆಗೆ ಯಾವುದಾದರೂ ಆರೋಗ್ಯ ಸಮಸ್ಯೆಗಳಿರುವುದು ಕಂಡುಬರುತ್ತಿವೆಯೋ? ಹೆಚ್ಚು ಸಮಯ ನಿಂತುಕೊಳ್ಳದಂತೆ ಆಕೆ ನೋಡಿಕೊಳ್ಳಬೇಕೋ? ಹೆಚ್ಚು ವಿಶ್ರಾಂತಿ ಪಡೆಯಬೇಕೋ? ತೂಕ ಹೆಚ್ಚಿಸಿಕೊಳ್ಳಬೇಕೋ ಕಡಿಮೆಮಾಡಬೇಕೋ? ವ್ಯಾಯಾಮ ಮಾಡಬೇಕೋ? ಆಕೆ ದೈಹಿಕ ನೈರ್ಮಲ್ಯಕ್ಕೆ ಮತ್ತು ಬಾಯಿಯ ಸ್ವಚ್ಛತೆಗೆ ಹೆಚ್ಚು ಗಮನಕೊಡಬೇಕೋ? ಎಂಬದನ್ನು ಪರಿಗಣಿಸುವರು.

ಗರ್ಭಿಣಿ ಮಹಿಳೆಯರಿಗೆ ವಸಡುಗಳ ರೋಗವಿರುವಲ್ಲಿ ಅದು ಪ್ರಸವಪೂರ್ವ ಅಪಸ್ಮಾರಕ್ಕೆ ನಡೆಸುವ (ಪ್ರೀಇಕ್ಲ್ಯಾಂಪ್ಸಿಅ) ಅಪಾಯ ಹೆಚ್ಚಿದೆಯೆಂದು ಅಧ್ಯಯನಗಳು ತೋರಿಸುತ್ತವೆ. ಇದೊಂದು ಗಂಭೀರ ಸಮಸ್ಯೆ. ಇದರ ಕೆಲವು ಲಕ್ಷಣಗಳೆಂದರೆ ರಕ್ತದೊತ್ತಡದಲ್ಲಿ ಥಟ್ಟನೆ ಏರಿಕೆ, ತೀವ್ರ ತಲೆನೋವು ಮತ್ತು ಎಡೀಮ (ಅಂಗಾಂಶಗಳಲ್ಲಿ ನೀರಿನಂಥ ದ್ರವ ವಿಪರೀತವಾಗಿ ತುಂಬಿಕೊಳ್ಳುವ ಸ್ಥಿತಿ) ಆಗಿವೆ. * ಈ ಸ್ಥಿತಿ ಮಗುವಿನ ಅಕಾಲ ಜನನಕ್ಕೆ ಕಾರಣವಾಗಬಹುದು. ಮಾತ್ರವಲ್ಲ ಇದು ಮಗು ಗರ್ಭದಲ್ಲೇ ಸಾಯುವುದಕ್ಕೆ ಅಥವಾ ತಾಯಿಯ ಸಾವಿಗೆ ಒಂದು ಪ್ರಧಾನ ಕಾರಣವಾಗಿರುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಹೀಗಾಗುವುದು ಹೆಚ್ಚು.

ಗರ್ಭಿಣಿ ಸ್ತ್ರೀಯಲ್ಲಿ ಸೋಂಕಿನ ಯಾವುದೇ ಸೂಚನೆ ಕಂಡುಬಂದರೆ ಜೋಕೆ ವಹಿಸುವ ವೈದ್ಯರು ಅದನ್ನು ನಿರ್ಲಕ್ಷಿಸುವುದಿಲ್ಲ. ಸಮಯಕ್ಕೆ ಮುಂಚೆಯೇ ಹೆರಿಗೆ ನೋವು ಶುರುವಾಗುವಲ್ಲಿ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ಹೇಳುವರು. ಇದು ಜೀವರಕ್ಷಿಸಬಲ್ಲದು.

“ಸ್ತ್ರೀಯರು ಒಂದು ಮಗುವನ್ನು ಹಡೆಯಲು ಸಾವಿನಂಚಿಗೆ ಹೋಗಿ ಬರುತ್ತಾರೆ” ಎಂದು ಡಾಕ್ಟರ್‌ ಕಾಝೀ ಮೊನಿರುಲ್‌ ಇಸ್ಲಾಮ್‌ ಹೇಳುತ್ತಾರೆ. ಇವರು, ಸುರಕ್ಷಿತ ಗರ್ಭಾವಸ್ಥೆಯ ವಿಭಾಗದ (ವಿಶ್ವ ಆರೋಗ್ಯ ಸಂಸ್ಥೆ) ಡೈರೆಕ್ಟರ್‌. ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಮತ್ತು ಹೆರಿಗೆಯಾದ ತಕ್ಷಣ ಒಳ್ಳೇ ವೈದ್ಯಕೀಯ ಆರೈಕೆ ಸಿಗುವಲ್ಲಿ ಅನೇಕ ತೊಡಕುಗಳನ್ನು, ಸಾವನ್ನೂ ತಪ್ಪಿಸಲು ಸಾಧ್ಯವಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಒಳ್ಳೇ ಆರೋಗ್ಯ ಕಾಪಾಡಿಕೊಳ್ಳಿ. ಏಕೆಂದರೆ ಒಂದು ಆರೋಗ್ಯವಂತ ಮಗು ನಿಮ್ಮ ಮಡಿಲು ತುಂಬಬೇಕಾದರೆ ಆರೋಗ್ಯವಂತ ತಾಯಿಯಾಗಿರಲು ನಿಮ್ಮ ಕೈಲಾದದ್ದೆಲ್ಲವನ್ನೂ ಮಾಡಲೇಬೇಕು. (g09-E 11)

[ಪಾದಟಿಪ್ಪಣಿಗಳು]

^ ಮೂಲ ಹೀಬ್ರು ಬರಹವು, ತಾಯಿಯ ಅಥವಾ ಗರ್ಭದಲ್ಲಿರುವ ಮಗುವಿನ ಸಾವಿಗೆ ಕಾರಣವಾಗುವ ಅಪಘಾತಕ್ಕೆ ಸೂಚಿಸುತ್ತದೆ.

^ “ಗರ್ಭಿಣಿಯರು ಮಾಡಬೇಕಾದ ತಯಾರಿ” ಚೌಕ ನೋಡಿ.

^ ಯೆಹೋವನ ಸಾಕ್ಷಿಗಳಾಗಿರುವ ದಂಪತಿಗಳು ಮಗು ಹುಟ್ಟುವ ಮುಂಚೆಯೇ ಸ್ಥಳೀಯ ‘ಹಾಸ್ಪಿಟಲ್‌ ಲಿಏಸಾನ್‌ ಕಮಿಟಿ’ (ಏಚ್‌.ಎಲ್‌.ಸಿ.) ಅನ್ನು ಸಂಪರ್ಕಿಸಬೇಕು. ಇದು ಯೆಹೋವನ ಸಾಕ್ಷಿಗಳಿಗಾಗಿರುವ ಒಂದು ಏರ್ಪಾಡು. ಈ ಕಮಿಟಿಯ ಸದಸ್ಯರು ಆಸ್ಪತ್ರೆಗಳನ್ನೂ ಡಾಕ್ಟರರನ್ನೂ ಭೇಟಿಯಾಗಿ ತಮ್ಮವರಿಗೆ ಕೊಡಬೇಕಾದ ರಕ್ತರಹಿತ ಔಷಧೋಪಚಾರದ ಬಗ್ಗೆ ವೈದ್ಯಕೀಯ ಮಾಹಿತಿಯನ್ನು ಒದಗಿಸುತ್ತಾರೆ. ಮಾತ್ರವಲ್ಲ, ರೋಗಿಯ ನಂಬಿಕೆಗಳನ್ನು ಮಾನ್ಯಮಾಡಿ ರಕ್ತರಹಿತ ಔಷಧೋಪಚಾರವನ್ನು ಕೊಡುವುದರಲ್ಲಿ ಅನುಭವೀ ವೈದ್ಯರನ್ನು ಕಂಡುಹಿಡಿಯಲು ನೆರವಾಗುತ್ತಾರೆ.

^ ವಸಡುಗಳ ರೋಗವು ಪ್ರಸವಪೂರ್ವ ಅಪಸ್ಮಾರಕ್ಕೆ ನಡೆಸುವ (ಪ್ರೀಇಕ್ಲ್ಯಾಂಪ್ಸಿಅ) ಅಪಾಯ ಹೆಚ್ಚಿದೆಯೋ ಎಂಬುದನ್ನು ಇನ್ನಷ್ಟು ಅಧ್ಯಯನಗಳ ಬಳಿಕವೇ ಖಡಾಖಂಡಿತವಾಗಿ ಹೇಳಸಾಧ್ಯ. ಆದರೂ ವಸಡು ಮತ್ತು ಹಲ್ಲುಗಳ ಉತ್ತಮ ಆರೈಕೆ ಮಾಡುವುದು ಯಾವಾಗಲೂ ಒಳ್ಳೇದೇ.

[ಪುಟ 27ರಲ್ಲಿರುವ ಸಂಕ್ಷಿಪ್ತ ವಿವರಣೆ]

ಅಕ್ಟೋಬರ್‌ 2007ರಲ್ಲಿ ಪ್ರಕಟಿಸಲಾದ ಅಂಕಿಅಂಶಗಳಿಗನುಸಾರ, ಗರ್ಭಾವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿಂದ ವರ್ಷಕ್ಕೆ 5,36,000 ಸ್ತ್ರೀಯರು ಸಾಯುತ್ತಾರೆ. ಅಂದರೆ ಒಂದು ನಿಮಿಷಕ್ಕೆ ಒಬ್ಬಳು ಸ್ತ್ರೀ ಸಾವನ್ನಪ್ಪುತ್ತಿದ್ದಾಳೆ. —ಯುನೈಟೆಡ್‌ ನೇಷನ್ಸ್‌ ಪಾಪ್ಯುಲೇಷನ್‌ ಫಂಡ್‌

[ಪುಟ 28ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಹುಟ್ಟುವಾಗಲೇ ಸತ್ತಿರುವ ಕೂಸುಗಳ ಸಂಖ್ಯೆ ವರ್ಷವೊಂದಕ್ಕೆ 33 ಲಕ್ಷ, ಹುಟ್ಟಿ 28 ದಿನಗಳೊಳಗೆ ಸಾಯುವ ಶಿಶುಗಳ ಸಂಖ್ಯೆ 40 ಲಕ್ಷ.” —ಯು.ಎನ್‌. ಕ್ರಾನಿಕಲ್‌

[ಪುಟ 29ರಲ್ಲಿರುವ ಚೌಕ]

ಗರ್ಭಿಣಿಯರು ಮಾಡಬೇಕಾದ ತಯಾರಿ

1. ಮೊದಲೇ ಮಾಹಿತಿ ಸಂಗ್ರಹಿಸಿ ನಿಮ್ಮ ಆಸ್ಪತ್ರೆ ಮತ್ತು ಡಾಕ್ಟರ್‌ ಅನ್ನು ವಿವೇಕಯುತವಾಗಿ ಆಯ್ಕೆಮಾಡಿ.

2. ನಿಮ್ಮ ಡಾಕ್ಟರ್‌ ಬಳಿ ಕ್ರಮವಾಗಿ ಹೋಗಿ. ಅವರೊಂದಿಗೆ ಭರವಸೆಯ, ಸ್ನೇಹಪರ ಸಂಬಂಧ ಬೆಸೆಯಿರಿ.

3. ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಸೂಕ್ತವಾದ ವಿಟಮಿನ್‌ಗಳು ನಿಮಗೆ ಸಿಗುತ್ತಿವೆಯೆಂದು ಖಚಿತಪಡಿಸಿಕೊಳ್ಳಿ. ಆದರೆ ನಿಮ್ಮ ಡಾಕ್ಟರನ ಸಲಹೆಯಿಲ್ಲದೆ ಯಾವುದೇ ಔಷಧ ತೆಗೆದುಕೊಳ್ಳಬೇಡಿ. ಡಾಕ್ಟರರ ಚೀಟಿಯಿಲ್ಲದೆ ಖರೀದಿಸಬಹುದಾದ ಔಷಧಗಳನ್ನೂ ಸೇವಿಸಬೇಡಿ. ಮದ್ಯ ಸೇವಿಸಬೇಡಿ. “ಗರ್ಭಿಣಿ ಸ್ತ್ರೀ ವಿಪರೀತ ಮದ್ಯಸೇವನೆ ಮಾಡಿದರೆ ಅತಿ ಹೆಚ್ಚಿನ ಅಪಾಯವಿರುವುದು ಶಿಶುವಿಗೇ ಎಂದು ನಮಗೆ ತಿಳಿದಿದೆ. ಆದರೆ ಸ್ವಲ್ಪ ಮದ್ಯಸೇವನೆ ಸಹ ಸುರಕ್ಷಿತವೋ ಎಂಬ ಸಂಗತಿ ಸ್ಪಷ್ಟವಾಗಿ ತಿಳಿದಿಲ್ಲ” ಎನ್ನುತ್ತದೆ ಮದ್ಯದ ದುರುಪಯೋಗ ಹಾಗೂ ಮದ್ಯವ್ಯಸನದ ಕುರಿತ ರಾಷ್ಟ್ರೀಯ ಸಂಸ್ಥೆ (ಯು.ಎಸ್‌.).

4. ದಿನ ತುಂಬುವ ಮುಂಚೆಯೇ (37ನೇ ವಾರಕ್ಕೆ ಮುಂಚೆಯೇ) ನಿಮಗೆ ಹೆರಿಗೆ ನೋವು ಶುರುವಾಗುವಲ್ಲಿ ನಿಮ್ಮ ಡಾಕ್ಟರನನ್ನು ಇಲ್ಲವೆ ಹೆರಿಗೆ ವಿಭಾಗವನ್ನು ತಕ್ಷಣ ಸಂಪರ್ಕಿಸಿ. ತಡಮಾಡದೆ ಚಿಕಿತ್ಸೆ ಕೊಡುವ ಮೂಲಕ ಮಗುವಿನ ಅಕಾಲಿಕ ಜನನವನ್ನೂ ಇದರಿಂದಾಗುವ ತೊಡಕುಗಳನ್ನೂ ತಡೆಗಟ್ಟಬಹುದು. *

5. ವೈದ್ಯಕೀಯ ಆರೈಕೆಗೆ ಸಂಬಂಧಿಸಿದ ನಿಮ್ಮ ವೈಯಕ್ತಿಕ ನಿರ್ಣಯಗಳನ್ನು ಬರವಣಿಗೆಯಲ್ಲಿ ದಾಖಲಿಸಿಡಿ. ಉದಾಹರಣೆಗೆ, ಡ್ಯೂರಬಲ್‌ ಪವರ್‌ ಆಫ್‌ ಅಟರ್ನಿ (DPA) ಕಾರ್ಡನ್ನು ಸಾಕಷ್ಟು ಮುಂಚೆಯೇ ತುಂಬಿಸಿರುವುದರಿಂದ ಅನೇಕರಿಗೆ ಸಹಾಯವಾಗಿದೆ. ನಿಮ್ಮ ದೇಶದಲ್ಲಿ ಯಾವ ಕಾರ್ಡನ್ನು ಬಳಸಲಾಗುತ್ತಿದೆ ಮತ್ತು ಕಾನೂನುಬದ್ಧವಾಗಿದೆ ಎಂಬುದನ್ನು ತಿಳಿದುಕೊಳ್ಳಿ.

6. ಮಗು ಹುಟ್ಟಿದ ಬಳಿಕ ನಿಮ್ಮ ಮತ್ತು ಮಗುವಿನ ಆರೋಗ್ಯದ ಬಗ್ಗೆ ಜೋಕೆ ವಹಿಸಿ. ಮಗು ಅಕಾಲಿಕವಾಗಿ ಹುಟ್ಟಿದ್ದರಂತೂ ಇನ್ನಷ್ಟು ಜೋಕೆ ಅಗತ್ಯ. ಏನಾದರೂ ಸಮಸ್ಯೆಯಿದ್ದರೆ ಕೂಡಲೇ ಮಕ್ಕಳ ತಜ್ಞರನ್ನು ಸಂಪರ್ಕಿಸಿ.

[ಪಾದಟಿಪ್ಪಣಿ]

^ ಅಕಾಲಿಕವಾಗಿ ಹುಟ್ಟುವ ಶಿಶುಗಳಿಗೆ ರಕ್ತಹೀನತೆ ಇರುವಲ್ಲಿ ಅಂದರೆ ಅವುಗಳ ದೇಹದಲ್ಲಿ ಸಾಕಷ್ಟು ಪ್ರಮಾಣದ ಕೆಂಪು ರಕ್ತಕಣಗಳು ಉತ್ಪತ್ತಿಯಾಗದಿರುವಲ್ಲಿ ಸಾಮಾನ್ಯವಾಗಿ ಶಿಶುಗಳಿಗೆ ರಕ್ತ ಕೊಡಲಾಗುತ್ತದೆ.