ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಡೆಂಗೀ—ಹೆಚ್ಚಾಗುತ್ತಿರುವ ಪೀಡೆ

ಡೆಂಗೀ—ಹೆಚ್ಚಾಗುತ್ತಿರುವ ಪೀಡೆ

ಡೆಂಗೀ—ಹೆಚ್ಚಾಗುತ್ತಿರುವ ಪೀಡೆ

“ಮೊರ್‌ಲೊಸ್‌ ರಾಜ್ಯದ ಆರೋಗ್ಯ ಸೇವಾಸಂಸ್ಥೆ . . . ಎಮಿಲಿಯಾನ ಸಪಾಟ ಪುರಸಭಾ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಈ ಸರ್ಟಿಫಿಕೇಟನ್ನು ಪ್ರದಾನ ಮಾಡುತ್ತದೆ. . . . ಏಕೆಂದರೆ [ಸಾಕ್ಷಿಗಳು] ತಮ್ಮ ರಾಜ್ಯ ಸಭಾಗೃಹದ ಸುತ್ತಮುತ್ತಲಿನ ವಠಾರವನ್ನು ಸ್ವಚ್ಛಗೊಳಿಸಿ, ಅದನ್ನು ಡೆಂಗೀ ವಾಹಕ ಸೊಳ್ಳೆಗಳಿಂದ ಮುಕ್ತವಾದ ಪ್ರದೇಶವನ್ನಾಗಿ ಇಟ್ಟಿದ್ದಾರೆ.”

ರೋಗವಾಹಕ ಸೊಳ್ಳೆಗಳು ಮೆಕ್ಸಿಕೊದ ಆರೋಗ್ಯ ಅಧಿಕಾರಿಗಳ ನಿದ್ದೆಗೆಡಿಸಿವೆ. ಈ ಉಪದ್ರವಕಾರಿ ಕೀಟಗಳು ಪುಟ್ಟದಾಗಿದ್ದರೂ ಡೆಂಗೀ ಜ್ವರಕ್ಕೆ ಕಾರಣವಾದ ಅಪಾಯಕಾರಿ ವೈರಸನ್ನು ಹೊತ್ತು ಸಾಗುತ್ತವೆ. ರೋಗಿಯನ್ನು ಸಾವಿನ ದವಡೆಗೆ ದೂಡುವ ಈ ಡೆಂಗೀ 2010ರಲ್ಲಿ ಮೆಕ್ಸಿಕೊದ 57,000ಕ್ಕೂ ಹೆಚ್ಚು ಜನರನ್ನು ಕಾಡಿತ್ತು. ಮೆಕ್ಸಿಕೊ ಸೇರಿ ನೂರಕ್ಕೂ ಅಧಿಕ ರಾಷ್ಟ್ರಗಳಲ್ಲಿ ಇದು ಹರಡಿದೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಗನುಸಾರ, ಪ್ರತಿವರ್ಷ ಜಗತ್ತಿನ 5 ಕೋಟಿ ಜನರು ಡೆಂಗೀಗೆ ತುತ್ತಾಗುತ್ತಿದ್ದಾರೆ. ಅಲ್ಲದೆ ಶೇ. 40ರಷ್ಟು ಜನರಿಗೆ ಈ ಜ್ವರ ತಗಲುವ ಸಾಧ್ಯತೆಯಿದೆ. ಈ ಜ್ವರಕ್ಕೆ ಕಾರಣವಾದ ವೈರಸನ್ನು ಹೊತ್ತುತಿರುಗುವ ಬಿಳಿಚುಕ್ಕೆಗಳುಳ್ಳ ಸೊಳ್ಳೆಯ ಹೆಸರು ಈಡೀಸ್‌ ಈಜಿಪ್ಟೈ. * ಈ ಸೊಳ್ಳೆಗಳ ಸುಳಿವಿಲ್ಲದಂತೆ ಮಾಡಲು ಆರೋಗ್ಯ ಸಂಸ್ಥೆಗಳು ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ಡೆಂಗೀ ಜ್ವರ ಉಷ್ಣವಲಯ, ಸಮಶೀತೋಷ್ಣವಲಯಗಳಲ್ಲಿ ಹೆಚ್ಚು. ಅದರಲ್ಲೂ ಮಳೆಗಾಲದಲ್ಲಿ ಮತ್ತು ಚಂಡಮಾರುತ, ನೆರೆಯಂಥ ನೈಸರ್ಗಿಕ ಪ್ರಕೋಪಗಳು ಸಂಭವಿಸಿದಾಗ ಅದರ ಹಾವಳಿ ಜಾಸ್ತಿ. ಏಕೆಂದರೆ ಈಡೀಸ್‌ ಹೆಣ್ಣು ಸೊಳ್ಳೆಗಳು ಮೊಟ್ಟೆ ಇಡುವುದು ನಿಂತ ನೀರಲ್ಲಿ. * ಲ್ಯಾಟಿನ್‌ ಅಮೆರಿಕ, ಕೆರೀಬಿಯನ್‌ ದ್ವೀಪಗಳಲ್ಲಿರುವ ಜನರು ಸಿಮೆಂಟ್‌ ತೊಟ್ಟಿಗಳಲ್ಲಿ ಮನೆ-ಬಳಕೆಗಾಗಿ ನೀರು ಸಂಗ್ರಹಿಸಿಡುತ್ತಾರೆ. ಇಂಥ ತೊಟ್ಟಿಗಳನ್ನು ಮುಚ್ಚಿಡುವಂತೆ ಆರೋಗ್ಯ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಹೀಗೆ ಮುಚ್ಚಿಡುವ ಮೂಲಕ ಸೊಳ್ಳೆಗಳ ವಂಶಾಭಿವೃದ್ಧಿಗೆ ಕಡಿವಾಣ ಹಾಕಬಹುದು. ಜನರು ತಮ್ಮತಮ್ಮ ವಠಾರವನ್ನು ಶುಚಿಯಾಗಿ ಇಟ್ಟುಕೊಳ್ಳುವುದೂ ಸಹಾಯಕಾರಿ. ನೀರು ಸಂಗ್ರಹವಾಗುವಂಥ ಹಳೇ ಟೈರು, ಕ್ಯಾನು, ಹೂಕುಂಡಗಳು, ಪ್ಲಾಸ್ಟಿಕ್‌ ಡಬ್ಬ ಮುಂತಾದವುಗಳ ಸೂಕ್ತ ವಿಲೇವಾರಿ ಮಾಡಬೇಕು.

ಪತ್ತೆ-ಪರಿಹಾರ ಹೇಗೆ?

ಡೆಂಗೀ ಜ್ವರದ ಲಕ್ಷಣಗಳು ಫ್ಲೂ ಜ್ವರದ ಲಕ್ಷಣಗಳಂತೆ ಇರುತ್ತವೆ. ಹಾಗಾಗಿ ಅದನ್ನು ಫ್ಲೂ ಎಂದೇ ತಪ್ಪಾಗಿ ತಿಳಿಯಲಾಗುತ್ತದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ಮುಂದಿನ ಲಕ್ಷಣಗಳು ಕಾಣಿಸಿಕೊಂಡರೆ ಅದು ಡೆಂಗೀ ಆಗಿರಬಹುದು: ಜ್ವರದೊಂದಿಗೆ ಮೈಮೇಲೆ ಕೆಂಬಣ್ಣದ ಗುಳ್ಳೆ ಏಳುವುದು, ಕಣ್ಣಿನ ಹಿಂಭಾಗದಲ್ಲಿ ತೀವ್ರತರ ನೋವು, ಮೈಕೈ ನೋವು, ಕೀಲುಗಳಲ್ಲಿ ತೀವ್ರ ನೋವು. ಜ್ವರ ಐದರಿಂದ ಏಳು ದಿನ ಇರುತ್ತೆ.

ಡೆಂಗೀಗೆ ಈ ವರೆಗೆ ನಿರ್ದಿಷ್ಟ ಚಿಕಿತ್ಸೆ ಕಂಡುಹಿಡಿಯಲಾಗಿಲ್ಲ. ಆದರೆ ಮನೆಯಲ್ಲೇ ಸಾಕಷ್ಟು ವಿಶ್ರಾಂತಿ ಪಡೆದು, ಹೆಚ್ಚು ದ್ರವಪದಾರ್ಥ ಸೇವಿಸಿದರೆ ಅದೇ ಉತ್ತಮ ಚಿಕಿತ್ಸೆ. ಆದರೆ ರೋಗಿಗಳ ಬಗ್ಗೆ ನಿಗಾ ವಹಿಸುವುದು ಅಗತ್ಯ. ಏಕೆಂದರೆ ಈ ಡೆಂಗೀ ಜ್ವರ ತೀವ್ರಸ್ವರೂಪಕ್ಕೆ ತಿರುಗಿ ರೋಗಿಯ ಪ್ರಾಣಕ್ಕೆ ಅಪಾಯ ತರುವ ಸಾಧ್ಯತೆಗಳಿವೆ. ರೋಗ ತೀವ್ರಗೊಳ್ಳುವ ಮುಂಚೆ ಜ್ವರ ಇಳಿದು ರೋಗಿ ಚೇತರಿಸಿಕೊಳ್ಳುತ್ತಿರುವಂತೆ ತೋರಬಹುದು. ಹಾಗಾದರೆ ರೋಗ ಉಲ್ಬಣವಾಗಿದೆ ಎಂದು ಗೊತ್ತಾಗುವುದು ಹೇಗೆ? ತೀವ್ರ ಹೊಟ್ಟೆ ನೋವು, ನಿಲ್ಲದ ವಾಂತಿ, ಮೂಗು ಮತ್ತು ವಸಡಿನಿಂದ ರಕ್ತ ಒಸರುವಿಕೆ, ಮಲ ಕಪ್ಪಾಗಿ ಹೋಗುವುದು, ಮೈಮೇಲೆ ಕೆನ್ನೀಲಿ ಬಣ್ಣದ ನೋವುಭರಿತ ಗುಳ್ಳೆಗಳು. ಅಲ್ಲದೆ ಚಡಪಡಿಕೆ, ಅತಿಯಾದ ಬಾಯಾರಿಕೆ, ಚರ್ಮ ಕಳೆಗುಂದುವುದು, ಮೈ ತಣ್ಣಗಾಗುವುದು, ರಕ್ತದೊತ್ತಡ ಕುಸಿತ ಇತ್ಯಾದಿ ಕಾಣಿಸಿಕೊಳ್ಳಬಹುದು.

ಡೆಂಗೀಗೆ ಆ್ಯಂಟಿಬಯೋಟಿಕ್‌ಗಳು ಫಲಕಾರಿಯಲ್ಲ. ಏಕೆಂದರೆ ಡೆಂಗೀ ಸೋಂಕಿಗೆ ಬ್ಯಾಕ್ಟೀರಿಯ ಕಾರಣವಲ್ಲ. ಅದು ವೈರಸ್‌ನಿಂದ ಬರುತ್ತೆ. ರೋಗಿ ಆಸ್ಪಿರಿನ್‌ ಮತ್ತು ಐಬುಪ್ರೊಫೆನ್‌ನಂಥ ಉರಿಯೂತ ತಗ್ಗಿಸುವ ಔಷಧಗಳನ್ನು ಸೇವಿಸುವುದು ಉಚಿತವಲ್ಲ. ರಕ್ತಸ್ರಾವವಾಗುವ ಅಪಾಯವನ್ನು ಇವು ಹೆಚ್ಚಿಸುತ್ತವೆ. ಡೆಂಗೀ ವೈರಸ್‌ನಲ್ಲಿ ನಾಲ್ಕು ಪ್ರಭೇದಗಳಿದ್ದು ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬಾರಿ ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ.

ಡೆಂಗೀ ತಗಲಿತೇ? ಸಾಕಷ್ಟು ವಿಶ್ರಾಂತಿ ಪಡೆಯಿರಿ. ತುಂಬ ದ್ರವಪದಾರ್ಥ ಸೇವಿಸಿ. ಸೊಳ್ಳೆ ಪರದೆ ಬಳಸಿ. ಹೀಗೆ ಮಾಡಿದರೆ, ಸೊಳ್ಳೆಗಳು ನಿಮ್ಮನ್ನು ಕಚ್ಚಿ ಬೇರೆಯವರಿಗೆ ಆ ಕಾಯಿಲೆ ಹರಡಿಸುವುದನ್ನು ತಡೆಗಟ್ಟಬಲ್ಲಿರಿ.

ಆದರೆ ಸೊಳ್ಳೆ ಕಡಿತವನ್ನು ತಪ್ಪಿಸಿ, ಡೆಂಗೀ ತಗಲದಂತೆ ನೋಡಿಕೊಳ್ಳಲು ಯಾವ ಉಪಾಯಗಳಿವೆ? ಉದ್ದ ಕೈಯ ಬಟ್ಟೆ, ಉದ್ದ ಪ್ಯಾಂಟು/ಅಂಗಿ ಧರಿಸಿ. ಸೊಳ್ಳೆ ನಿರೋಧಕ ಬಳಸಿ. ಸೊಳ್ಳೆ ಯಾವಾಗ ಬೇಕಾದರೂ ಕಚ್ಚಬಹುದು. ಆದರೆ ಸೂರ್ಯೋದಯ ನಂತರದ ಹಾಗೂ ಸೂರ್ಯಾಸ್ತದ ಮುಂಚಿನ ಎರಡು ತಾಸು ಅವುಗಳ ಕಾಟ ಜಾಸ್ತಿ. ಸೊಳ್ಳೆ ಪರದೆಯ ಮೇಲೆ ಸೊಳ್ಳೆ ನಿರೋಧಕ ಸಿಂಪಡಿಸಿದರೆ ಒಳ್ಳೇದು. ಇದರಿಂದ ನಿಮಗೆ ಸುರಕ್ಷೆ ಸಿಗುವುದು.

ಡೆಂಗೀ ಜ್ವರಕ್ಕೆ ಲಸಿಕೆ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ. ಆದರೆ ಈ ಜ್ವರ ಹಾಗೂ ಬೇರೆಲ್ಲ ರೋಗರುಜಿನಗಳನ್ನು ನಿರ್ಮೂಲನ ಮಾಡುವ ಸಾಮರ್ಥ್ಯ ದೇವರ ರಾಜ್ಯ ಅಥವಾ ಸರ್ಕಾರಕ್ಕೆ ಮಾತ್ರ ಇದೆ. ದೇವರು ನಮ್ಮ ‘ಕಣ್ಣೀರನ್ನೆಲ್ಲಾ ಒರಸಿಬಿಡುವನು; ಮರಣವಿರುವುದಿಲ್ಲ, ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗುವವು.’ ಆ ಕಾಲ ಬಂದೇ ಬರುವುದು!—ಪ್ರಕಟನೆ 21:3, 4. (g11-E 11)

[ಪಾದಟಿಪ್ಪಣಿಗಳು]

^ ಕೆಲವು ದೇಶಗಳಲ್ಲಿ ಈಡೀಸ್‌ ಅಲ್ಬೊಪಿಕ್ಟಸ್‌ ಎಂಬ ಸೊಳ್ಳೆಗಳೂ ಡೆಂಗೀ ವೈರಸನ್ನು ಹೊತ್ತಿರುತ್ತವೆ.

^ ಈಡೀಸ್‌ ಸೊಳ್ಳೆಗಳು ಮೊಟ್ಟೆಯಿಟ್ಟ ಸ್ಥಳದಿಂದ ಕೆಲವು ನೂರು ಮೀಟರುಗಳ ವ್ಯಾಪ್ತಿಯೊಳಗೇ ಸುತ್ತುತ್ತಿರುತ್ತವೆ.

[ಪುಟ 27ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸೊಳ್ಳೆ ಉತ್ಪತ್ತಿ ತಾಣಗಳು

1. ಹಳೇ/ಒಡೆದ ಟೈರು

2. ಸೂರುಬಾನೆ

3. ಹೂಕುಂಡಗಳು

4. ಪ್ಲಾಸ್ಟಿಕ್‌ ಡಬ್ಬ

5. ಬಿಸಾಡಿದ ಕ್ಯಾನು/ಬ್ಯಾರಲ್‌ಗಳು

ಸೊಳ್ಳೆ ಕಡಿತದಿಂದ ಪಾರಾಗಲು

ಕ. ಉದ್ದ ಕೈಯ ಬಟ್ಟೆ, ಉದ್ದ ಪ್ಯಾಂಟು/ಅಂಗಿ ಧರಿಸಿ. ಸೊಳ್ಳೆ ನಿರೋಧಕ ಬಳಸಿ

ಖ. ಸೊಳ್ಳೆ ಪರದೆ ಬಳಸಿ

[ಪುಟ 26ರಲ್ಲಿರುವ ಚಿತ್ರ ಕೃಪೆ]

ಚಿತ್ರಕೃಪೆ: Courtesy Marcos Teixeira de Freitas