ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

‘ಮೃಗವಾಗಿದ್ದೆ, ಮನುಷ್ಯನಾದೆ’

‘ಮೃಗವಾಗಿದ್ದೆ, ಮನುಷ್ಯನಾದೆ’
  • ಜನನ: 1973

  • ದೇಶ: ಉಗಾಂಡ

  • ಹಿಂದೆ: ಹಿಂಸೆ, ಅನೈತಿಕತೆ, ಕುಡಿಕತನ ಇದೇ ನನ್ನ ಜೀವನ

ಹಿನ್ನೆಲೆ

 ನಾನು ಉಗಾಂಡದ ಗೊಂಬ ಜಿಲ್ಲೆಯಲ್ಲಿ ಹುಟ್ಟಿದೆ. ಅಲ್ಲಿ ಹೆಚ್ಚಿನ ಜನ ತುಂಬ ಬಡವರು. ನಮ್ಮೂರಲ್ಲಿ ಕರೆಂಟ್‌ ಇರ್ಲಿಲ್ಲ. ರಾತ್ರಿ ಹೊತ್ತು ನಾವು ದೀಪಗಳನ್ನ ಹಚ್ಚುತ್ತಿದ್ವಿ.

 ನನ್ನ ಅಪ್ಪಅಮ್ಮ ರೈತರು. ಅವರು ರುವಾಂಡದಿಂದ ಉಗಾಂಡಕ್ಕೆ ಬಂದು ಉಳುಕೊಂಡ್ರು. ಅವರು ಕಾಫಿ ಮತ್ತು ಬಾಳೆ ಬೆಳೆಸ್ತಿದ್ರು. ಬಾಳೆಹಣ್ಣಿಂದ ಅವರು ’ವರಾಗಿ‘ ಅನ್ನೋ ಮದ್ಯ ತಯಾರಿಸ್ತಿದ್ರು. ನಮ್ಮೂರಲ್ಲಿ ಇದು ತುಂಬ ಫೇಮಸ್‌. ಕೊಳಿ, ಆಡು, ಹಂದಿ ಮತ್ತು ಹಸುಗಳನ್ನ ಕೂಡ ಸಾಕುತ್ತಿದ್ರು. ನನ್ನ ಸಂಸ್ಕೃತಿ, ಬೆಳೆದು ಬಂದ ರೀತಿಯಿಂದ ಹೆಂಡತಿ ಯಾವಾಗಲೂ ಗಂಡ ಹೇಳಿದ ಹಾಗೆ ಕೇಳಬೇಕು, ಬಾಯಿ ಬಿಡಬಾರದು ಅಂತ ನಾನು ನಂಬಿದ್ದೆ.

 23 ವಯಸ್ಸಲ್ಲಿ ನಾನು ರುವಾಂಡಕ್ಕೆ ಹೋದೆ. ಅಲ್ಲಿ ನನ್ನ ವಯಸ್ಸಿನವ್ರ ಜೊತೆ ಡ್ಯಾನ್ಸ್‌ ಕ್ಲಬ್‌ಗೆ ಹೋದೆ. ಒಂದು ಕ್ಲಬ್‌ಗಂತೂ ಯಾವಾಗಲೂ ಹೋಗ್ತಿದ್ದೆ. ಇದನ್ನ ನೋಡಿ ಅಲ್ಲಿನವರು ನನಗೆ ಫ್ರೀ ಎಂಟ್ರಿಗೆ ಒಂದು ಕಾರ್ಡ್‌ ಕೊಟ್ರು. ಹೊಡೆದಾಟ ಬಡಿದಾಟ ಹಿಂಸೆ ಇರೋ ಮೂವಿಸ್‌ ಅಂದ್ರೆ ನನಗೆ ತುಂಬ ಇಷ್ಟ ಆಗಿತ್ತು. ಇದ್ರಿಂದ ಮತ್ತು ಕೆಟ್ಟ ಸಹವಾಸದಿಂದ ಹಿಂಸೆ ಅನೈತಿಕತೆ ಕುಡಿಯೋದೇ ನನ್ನ ಜೀವನ ಆಗಿಬಿಡ್ತು.

 ಇಸವಿ 2000ದಲ್ಲಿ ನಾನು ಸ್ಕೊಲಾಸ್ಟಿಕ್‌ ಕಬಾಗ್ವೀರಳ ಜೊತೆ ಸಂಸಾರ ಮಾಡಲಿಕ್ಕೆ ಶುರುಮಾಡಿದೆ. ನಮಗೆ 3 ಮಕ್ಕಳಾದ್ರು. ನಾನು ಮನೆಗೆ ಬಂದಾಗ ಅಥವಾ ನನ್ನ ಹತ್ರ ಏನಾದ್ರೂ ಕೇಳಬೇಕು ಅಂತಿದ್ದಾಗ ಅವಳು ಮೊಣಕಾಲು ಹಾಕಿ ಕೇಳಬೇಕು ಅಂತ ನೆನಸಿದ್ದೆ. ಏಕೆಂದ್ರೆ ಹೆಂಗಸು ಹೀಗೆ ಮಾಡಬೇಕು ಅಂತ ನಂಬಿದ್ದೆ. ಮನೇಲಿ ಇರೋದೆಲ್ಲ ನನಗೆ ಮಾತ್ರ ಸೇರಿದ್ದು, ನನಗೆ ಇಷ್ಟ ಬಂದ ಹಾಗೆ ಏನು ಬೇಕಾದ್ರೂ ಮಾಡಬಹುದು ಅನ್ನೋ ಯೋಚನೆನೂ ಇತ್ತು. ನಾನು ರಾತ್ರಿ ಹೊರಗೆ ಹೋದ್ರೆ ಚೆನ್ನಾಗಿ ಕುಡಿದು ಬೆಳಿಗ್ಗೆ 3 ಗಂಟೆಗೆ ವಾಪಸ್‌ ಬರ್ತಿದ್ದೆ. ಬಾಗಿಲು ತಟ್ಟಿದಾಗ ಅವಳು ಬೇಗ ತೆರಿಲಿಲ್ಲ ಅಂದ್ರೆ ಸಾಕು ಅವಳಿಗೆ ಸರೀ ಬಾರಿಸ್ತಿದ್ದೆ.

 ನಾನಾಗ ಒಂದು ಪ್ರೈವೇಟ್‌ ಸೆಕ್ಯುರಿಟಿ ಕಂಪನಿಯಲ್ಲಿ ಸೂಪರ್‌ವೈಸರ್‌ ಆಗಿ ಕೆಲಸ ಮಾಡ್ತಿದ್ದೆ. ಕೈ ತುಂಬ ಸಂಬಳ ಸಿಗ್ತಿತ್ತು. ಪೆಂತಕೊಸ್ಟ್‌ ಚರ್ಚಿಗೆ ಬಾ ಅಂತ ನನ್ನ ಹೆಂಡತಿ ಸ್ಕೊಲಾಸ್ಟಿಕ್‌ ಯಾವಾಗಲೂ ಕರೀತಿದ್ದಳು. ಆಗಲಾದ್ರೂ ನಾನು ಒಳ್ಳೇವನಾಗಬಹುದು ಅಂತ ಅವಳು ಅಂದ್ಕೊಂಡಿರಬೇಕು. ನನಗೆ ಅವೆಲ್ಲ ಇಷ್ಟ ಆಗ್ಲಿಲ್ಲ. ಅಷ್ಟೊತ್ತಿಗಾಗ್ಲೇ ನಾನು ಇನ್ನೊಬ್ಬಳ ಹಿಂದೆ ಬಿದ್ದಿದ್ದೆ. ನಾನು ಒಂಚೂರೂ ಬದಲಾಗದೇ ಇರೋದನ್ನ ನೋಡಿ ಸ್ಕೊಲಾಸ್ಟಿಕ್‌ 3 ಮಕ್ಕಳನ್ನ ಕರಕೊಂಡು ತವರುಮನೆಗೆ ಹೋಗಿಬಿಟ್ಟಳು.

 ನಮ್ಮ ಫ್ರೆಂಡ್‌ ಒಬ್ಬರು ನನ್ನ ಹತ್ರ ಬಂದು ಮಾತಾಡಿ ‘ನೀನು ಮಾಡೋದು ಸರಿಯಿಲ್ಲ’ ಅಂದ್ರು. ವಯಸ್ಸಲ್ಲಿ ದೊಡ್ಡವರಾಗಿದ್ದ ಅವರು ಸ್ಕೊಲಾಸ್ಟಿಕಳನ್ನ ಮನೆಗೆ ಕರಕೊಂಡು ಬಾ, ಅಷ್ಟು ಮುದ್ದಾಗಿರೋ ಮಕ್ಕಳನ್ನ ಬಿಟ್ಟು ನಿನಗೆ ಹೇಗೆ ಇರಕ್ಕೆ ಆಗುತ್ತೆ ಅಂತ ಕೇಳಿದ್ರು. ಅದಕ್ಕೆ 2005 ರಲ್ಲಿ ನಾನು ಕುಡಿಯೋದನ್ನ ಬಿಟ್ಟುಬಿಟ್ಟೆ. ಇಟ್ಟೊಂಡಿದ್ದವಳನ್ನೂ ಬಿಟ್ಟುಬಿಟ್ಟೆ. ಮತ್ತೆ ಸ್ಕೊಲಾಸ್ಟಿಕ್‌ ಜೊತೆ ಜೀವನ ಮಾಡಕ್ಕೆ ಶುರುಮಾಡ್ದೆ. 2006 ರಲ್ಲಿ ನಾವಿಬ್ರು ಮದುವೆ ಆದ್ವಿ. ಆದ್ರೆ ಹೆಂಡತಿಗೆ ಹೊಡೆಯೋದು ಬಡಿಯೋದನ್ನ ಮಾತ್ರ ಬಿಟ್ಟಿರಲಿಲ್ಲ.

ಬದುಕನ್ನೇ ಬದಲಾಯಿಸಿತು ಬೈಬಲ್‌

 2008 ರಲ್ಲಿ ಜೊಯೆಲ್‌ ಅನ್ನೋ ಯೆಹೋವನ ಸಾಕ್ಷಿ ಒಬ್ಬರು ನಮ್ಮ ಮನೆಗೆ ಬಂದ್ರು. ಅವರು ಹೇಳಿದ್ದನ್ನೆಲ್ಲ ನಾನು ಕೇಳ್ದೆ. ನಂತ್ರ ಅನೇಕ ತಿಂಗಳ ವರೆಗೆ ಜೊಯೆಲ್‌ ಮತ್ತು ಬೊಣವೆನ್ಚರ್‌ ಅನ್ನೋರು ನಮ್ಮ ಮನೆಗೆ ಬರ್ತಿದ್ರು. ಬೈಬಲಲ್ಲಿರೋ ಆಳವಾದ ವಿಷ್ಯಗಳ ಬಗ್ಗೆ ಚರ್ಚೆ ಮಾಡ್ತಿದ್ವಿ. ನಾನು ತುಂಬ ಪ್ರಶ್ನೆ ಕೇಳ್ತಿದ್ದೆ, ಅದರಲ್ಲೂ ಪ್ರಕಟಣೆ ಪುಸ್ತಕದ ಬಗ್ಗೆ. ನನ್ನ ಉದ್ದೇಶ ಸಾಕ್ಷಿಗಳು ಹೇಳೋದು ತಪ್ಪು ಅಂತ ತೋರಿಸಬೇಕು ಅನ್ನೋದೇ. ಉದಾಹರಣೆಗೆ ಪ್ರಕಟನೆ 7:9 ರಲ್ಲಿ ಹೇಳಿರೋ “ಮಹಾ ಸಮೂಹ” ಭೂಮಿಯಲ್ಲಿ ಜೀವಿಸ್ತಾರೆ ಅಂತ ಹೇಗೆ ಹೇಳ್ತೀರಾ? ವಚನದಲ್ಲಿ ಅವರು ‘[ದೇವರ] ಸಿಂಹಾಸನದ ಮುಂದೆಯೂ ಕುರಿಮರಿಯ [ಯೇಸು ಕ್ರಿಸ್ತನ] ಮುಂದೆಯೂ ನಿಂತಿದ್ದಾರೆ’ ಅಂತ ಹೇಳುತ್ತಲ್ಲಾ? ಎಂದು ಕೇಳಿದೆ. ಅದಕ್ಕೆ ಜೊಯೆಲ್‌ ಯೆಶಾಯ 66:1 ನ್ನು ತೋರಿಸಿದ್ರು. ಆ ವಚನದಲ್ಲಿ ದೇವರು ಭೂಮಿಯನ್ನ ಪಾದ ಪೀಠ ಅಂತ ಕರಿತಿದ್ದಾನೆ. ಹಾಗಾಗಿ ಮಹಾ ಸಮೂಹ ದೇವರ ಸಿಂಹಾಸನದ ಮುಂದೆ ನಿಂತಿದ್ದಾರೆ ಅಂದ್ರೆ ಅವರು ಭೂಮಿಯಲ್ಲೇ ನಿಂತಿದ್ದಾರೆ ಎಂದರ್ಥ. ಅಲ್ಲದೆ ನಾನು ಕೀರ್ತನೆ 37:29 ರಲ್ಲಿ ನೀತಿವಂತರು ಭೂಮಿಯಲ್ಲಿ ಎಂದೆಂದಿಗೂ ವಾಸಿಸುವರು ಅಂತ ಓದಿದೆ. ಹೀಗೆ ನಾನು ಏನೇ ಕೇಳಿದ್ರು ಜೊಯೆಲ್‌ ತುಂಬ ತಾಳ್ಮೆಯಿಂದ ಉತ್ತರ ಕೊಡ್ತಿದ್ರು.

 ಕೊನೆಗೆ ನಾನು ಬೈಬಲ್‌ ಕಲಿಯಕ್ಕೆ ಒಪ್ಪಿಕೊಂಡೆ. ಬೊಣವೆನ್ಚರ್‌ ನನಗೆ ಮತ್ತು ನನ್ನ ಹೆಂಡತಿಗೆ ಬೈಬಲ್‌ ಕಲಿಸಕ್ಕೆ ಶುರುಮಾಡಿದ್ರು. ಕಲಿತಾ ಹೋದ ಹಾಗೆ ನಾನು ಬದಲಾಗಬೇಕು ಅನ್ನೋ ಆಸೆ ಹುಟ್ಟಿತು. ಹೆಂಡತಿಗೆ ಗೌರವ ಕೊಡಲಿಕ್ಕೆ ಕಲಿತೆ. ನಾನು ಮನೆಗೆ ಬಂದಾಗ, ನನ್ನ ಹತ್ರ ಏನಾದ್ರೂ ಕೇಳಬೇಕು ಅಂತಿದ್ದಾಗ ಅವಳು ಮೊಣಕಾಲು ಹಾಕಿ ಕೇಳೋದೆಲ್ಲ ಬೇಡ ಅಂತ ಹೇಳ್ದೆ. ಮನೆಲಿ ಇರೋದೆಲ್ಲ ನನಗೆ ಮಾತ್ರ ಸೇರಿದ್ದು ಅಂತ ಹೇಳೋದನ್ನೂ ಬಿಟ್ಟುಬಿಟ್ಟೆ. ಹೊಡೆದಾಟ ಬಡಿದಾಟ ಇರೋ ಮೂವಿಸ್‌ ಅನ್ನೂ ನೋಡ್ತಿರಲಿಲ್ಲ. ಇಷ್ಟೆಲ್ಲ ಬದಲಾಗಕ್ಕೆ ನಾನು ತುಂಬ ಕಷ್ಟಪಟ್ಟೆ. ಕೆಟ್ಟ ಯೋಚನೆ, ಆಸನೆಗಳನ್ನ ನಿಯಂತ್ರಿಸಬೇಕಿತ್ತು, ದೀನತೆ ತೋರಿಸಬೇಕಿತ್ತು.

ಒಳ್ಳೇ ಗಂಡನಾಗಲಿಕ್ಕೆ ಬೈಬಲ್‌ ನನಗೆ ಸಹಾಯ ಮಾಡ್ತು

 ಕೆಲವು ವರ್ಷಗಳ ಹಿಂದೆ ನನ್ನ ದೊಡ್ಡ ಮಗ ಕ್ರಿಸ್ಟಿಯನ್‌ನನ್ನ ಉಗಾಂಡದಲ್ಲಿರೋ ನನ್ನ ಸಂಬಂಧಿಕರ ಹತ್ರ ಬಿಟ್ಟಿದ್ದೆ. ಆದ್ರೆ ಧರ್ಮೋಪದೇಶಕಾಂಡ 6:4-7 ಓದಿದ ಮೇಲೆ ಮಕ್ಕಳನ್ನ ನೋಡಿಕೊಳ್ಳೋ, ಅವರಿಗೆ ಬೈಬಲನ್ನು ಕಲಿಸೋ ಜವಾಬ್ದಾರಿ ನನಗೂ ನನ್ನ ಹೆಂಡತಿಗೂ ಇರೋದು ಅಂತ ಅರ್ಥಮಾಡ್ಕೊಂಡೆ. ಅವನನ್ನ ಮನೆಗೆ ಕರಕೊಂಡು ಬಂದಾಗ ಅವನಿಗೂ ನಮಗೂ ತುಂಬ ಖುಷಿ ಆಯ್ತು.

ಸಿಕ್ಕಿದ ಪ್ರಯೋಜನಗಳು

 ಯೆಹೋವನು ಕರುಣಾಮಯಿ ದೇವರು ಅಂತ ನನಗೆ ಗೊತ್ತಾಯ್ತು. ಹಿಂದೆ ನಾನು ಮಾಡಿದ್ದನ್ನೆಲ್ಲ ಆತನು ಕ್ಷಮಿಸಿದ್ದಾನೆ ಅಂತ ನನಗೆ ನಂಬಿಕೆ ಇದೆ. ಸಂತೋಷದ ವಿಷ್ಯ ಏನಂದ್ರೆ ನನ್ನ ಹೆಂಡತಿನೂ ನನ್ನ ಜೊತೆ ಬೈಬಲ್‌ ಕಲಿತಳು. ನಾವಿಬ್ರೂ ಯೆಹೋವನಿಗೆ ನಮ್ಮ ಜೀವನನ ಸಮರ್ಪಿಸಿ 2010 ರ ಡಿಸೆಂಬರ್‌ 4 ರಂದು ದೀಕ್ಷಾಸ್ನಾನ ಪಡಕೊಂಡ್ವಿ. ಈಗ ನಮಗೆ ಒಬ್ಬರ ಮೇಲೆ ಇನ್ನೊಬ್ಬರಿಗೆ ನಂಬಿಕೆ ಇದೆ. ಬೈಬಲ್‌ ಹೇಳೋ ಹಾಗೆ ನಡೆಯೋದ್ರಿಂದ ನಮ್ಮ ಕುಟುಂಬದಲ್ಲಿ ಸಂತೋಷ ಇದೆ. ನಾನೀಗ ಕೆಲಸ ಮುಗಿಸಿ ಸೀದಾ ಮನೆಗೆ ಬರ್ತಿನಿ. ಮೊದಲು ನಾನು ಮೃಗವಾಗಿದ್ದೆ, ಈಗ ಮನುಷ್ಯನಾದೆ. ಅವಳ ಜೊತೆ ದಯೆಯಿಂದ ನಡ್ಕೊಳ್ತಿನಿ, ಅವಳಿಗೆ ಗೌರವ ಕೊಡ್ತೀನಿ. ಅಲ್ಲದೆ ಕುಡಿಲೇಬಾರದು ಅಂತ ತೀರ್ಮಾನ ಮಾಡಿದ್ದೀನಿ. ಇದೆಲ್ಲ ನೋಡಿ ಅವಳಿಗೆ ತುಂಬ ಖುಷಿ. 2015 ರಲ್ಲಿ ನಮ್ಮ ಸಭೆಯನ್ನು ನೋಡಿಕೊಳ್ಳಲು ಸಹಾಯ ಮಾಡೋಕೆ ನನ್ನನ್ನ ಹಿರಿಯನಾಗಿ ನೇಮಿಸಲಾಯಿತು. ನಮ್ಮ ಐದು ಮಕ್ಕಳಲ್ಲಿ ಮೂವರು ದೀಕ್ಷಾಸ್ನಾನ ಪಡಕೊಂಡಿದ್ದಾರೆ.

 ಯೆಹೋವನ ಸಾಕ್ಷಿಗಳ ಜೊತೆ ಬೈಬಲನ್ನು ಕಲಿಯೋಕೆ ಶುರುಮಾಡಿದಾಗ ಅವರು ಹೇಳಿದ್ದನ್ನೆಲ್ಲ ನಾನು ಕಣ್ಮುಚ್ಚಿ ನಂಬಲಿಲ್ಲ. ಆದ್ರೆ ನನಗೆ ತುಂಬ ಇಷ್ಟ ಆದ ಒಂದು ವಿಷ್ಯ ಏನಂದ್ರೆ ನಾನು ಕೇಳಿದ ಎಲ್ಲ ಪ್ರಶ್ನೆಗಳಿಗೆ ಅವರು ಬೈಬಲಿಂದನೇ ಉತ್ತರ ಕೊಟ್ರು. ಅವರು ಸತ್ಯ ದೇವರನ್ನು ಆರಾಧಿಸುತ್ತೇವೆ ಅಂತ ಹೇಳ್ಕೊಳ್ಳೋದು ಮಾತ್ರ ಅಲ್ಲ ಆತನು ಹೇಳೋದನ್ನೆಲ್ಲ ಪಾಲಿಸುತ್ತಾರೆ, ಬರೀ ತಮಗೆ ಇಷ್ಟ ಆಗಿರೋದನ್ನ ಮಾತ್ರ ಹಿಡ್ಕೊಂಡು ಬೇರೆದನ್ನೆಲ್ಲ ಬಿಟ್ಟುಬಿಡಲ್ಲ. ಇದನ್ನ ನಾವು ತುಂಬ ಮೆಚ್ಚುತ್ತೀವಿ. ಯೆಹೋವನು ನನ್ನನ್ನ ಆತನ ಕಡೆ ಸೆಳೆದದ್ದಕ್ಕೆ, ಆತನ ಆರಾಧಕರಲ್ಲಿ ನಾನೂ ಒಬ್ಬನಾಗಿ ಇರೋದಕ್ಕೆ ನಾನು ಋಣಿ. ನನ್ನ ಜೀವನದಿಂದ ನಾನು ಕಲಿತಿರೋ ಪಾಠ ಏನೆಂದ್ರೆ, ದೇವರ ಸಹಾಯ ಒಂದಿದ್ರೆ ಸಾಕು ಒಳ್ಳೇ ಮನಸ್ಸಿರೋ ಯಾರು ಬೇಕಾದ್ರೂ ಬದಲಾಗೋಕೆ ಆಗುತ್ತೆ, ಆತನಿಗೆ ಇಷ್ಟ ಆಗೋ ಹಾಗೆ ಬದುಕಲಿಕ್ಕೆ ಆಗುತ್ತೆ.