ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

“ನನ್ನ ಹಳ್ಳಾನ ನಾನೇ ತೋಡ್ಕೊಳ್ಳುತ್ತಿದ್ದೆ”

“ನನ್ನ ಹಳ್ಳಾನ ನಾನೇ ತೋಡ್ಕೊಳ್ಳುತ್ತಿದ್ದೆ”
  • ಜನನ: 1978

  • ದೇಶ: ಎಲ್‌ ಸಾಲ್ವಡಾರ್‌

  • ಹಿಂದೆ: ರೌಡಿ

ಹಿನ್ನೆಲೆ

 “ನಿಂಗೆ ನಿಜವಾಗ್ಲೂ ದೇವರ ಬಗ್ಗೆ ಕಲೀಬೇಕಿದ್ರೆ, ಯೆಹೋವನ ಸಾಕ್ಷಿಗಳ ಜೊತೆನೇ ಇರು.” ಈ ಮಾತು ಕೇಳಿ ನಂಗೆ ಆಶ್ಚರ್ಯ ಆಯ್ತು. ಆಗ ನಾನು ಸ್ವಲ್ಪ ದಿನದಿಂದ ಸಾಕ್ಷಿಗಳ ಹತ್ರ ಬೈಬಲ್‌ ಕಲೀತ್ತಿದ್ದೆ. ಮತ್ತೆ ನಂಗ್ಯಾಕೆ ಆಶ್ಚರ್ಯ ಆಯ್ತು ಅಂತ ತಿಳ್ಕೊಳ್ಳೋಕೆ ನನ್ನ ಕಥೆ ಹೇಳ್ತಿನಿ ಕೇಳಿ.

 ನಾನು ಹುಟ್ಟಿದ್ದು ಎಲ್‌ ಸಾಲ್ವಡಾರ್‌ನಲ್ಲಿರೋ ಕೆಜಲ್‌ಟೆಪೆಕ್‌ ಅನ್ನೋ ಊರಲ್ಲಿ. ಇರೋ 15 ಮಕ್ಕಳಲ್ಲಿ ನಾನು 6ನೇಯವನು. ನಿಯತ್ತಾಗಿರಬೇಕು ಅಂತ, ನಿಯಮಗಳನ್ನ ಪಾಲಿಸಬೇಕು ಅಂತ ನಮ್ಮಪ್ಪ ಅಮ್ಮ ತುಂಬ ಕಷ್ಟಪಟ್ಟು ನನ್ನ ಬೆಳೆಸಿದ್ರು. ಮತ್ತೆ, ಬೈಬಲ್‌ ಕಲಿಸೋಕೆ ಲಿಯೋನಾರ್ದೋ ಜೊತೆ ಬೇರೆ ಸಾಕ್ಷಿಗಳೂ ನಮ್ಮನೆಗೆ ಬರ್ತಿದ್ರು. ಆದ್ರೆ ನಾನು, ಕಲೀತಿದ್ದ ಒಂದನ್ನೂ ತಲೆಗೆ ಹಾಕೋಳ್ತಿರ್ಲಿಲ್ಲ. ಒಂದಾದ ಮೇಲೊಂದು ತಪ್ಪೇ ಮಾಡ್ತಿದ್ದೆ. 14 ವರ್ಷಕ್ಕೆಲ್ಲ ಕುಡಿಯೋಕೆ ಕಲ್ತೆ, ಫ್ರೆಂಡ್ಸ್‌ ಜೊತೆ ಡ್ರಗ್ಸ್‌ ತಗೊಳೋಕೆ ಶುರು ಮಾಡ್ದೆ. ಅವರೆಲ್ಲ ಒಬ್ಬರ ಹಿಂದೆ ಒಬ್ಬರು ಸ್ಕೂಲ್‌ ಬಿಟ್ಟು ರೌಡಿಸಂ ಮಾಡೋಕೆ ಶುರು ಮಾಡಿದ್ರು. ನಾನೂ ಅವರನ್ನು ನೋಡಿ ಅದನ್ನೇ ಕಲ್ತೆ. ನಾವೆಲ್ಲ ಬೀದಿಲೇ ಸಮಯ ಕಳೀತಿದ್ವಿ, ಹೋಗೋ ಬರೋವ್ರತ್ರ ನಮ್‌ ಖರ್ಚಿಗೆ ದುಡ್ಡು ವಸೂಲಿ ಮಾಡೋದು ಕದಿಯೋದು ಮಾಡ್ತಿದ್ವಿ.

 ರೌಡಿ ಗ್ಯಾಂಗೇ ನನ್ನ ಕುಟುಂಬ ಆಗೋಯ್ತು. ನಾನು ಯಾವತ್ತೂ ಇವರನ್ನ ಬಿಟ್ಟಿರಬಾರ್ದು ಅಂದ್ಕೊಂಡೆ. ಒಂದ್ಸಲ, ಡ್ರಗ್ಸ್‌ ತಗೊಂಡು ತುಂಬ ಮತ್ತಿನಲ್ಲಿದ್ದ ನನ್ನ ಫ್ರೆಂಡ್‌ ನಮ್‌ ಪಕ್ಕದ ಮನೆಯವ್ನ ಮೇಲೆ ಜಗಳಕ್ಕೆ ಹೋದ. ಆ ಜಗಳದಲ್ಲಿ ಪಕ್ಕದ ಮನೆಯವ್ನು ನನ್ನ ಫ್ರೆಂಡನ್ನ ಹೊಡ್ದು ಪೊಲೀಸರಿಗೆ ಫೋನ್‌ ಮಾಡ್ದ. ಇದನ್ನೆಲ್ಲ ನೋಡಿ, ನಂಗೆ ಸಿಕ್ಕಾಪಟ್ಟೆ ಕೋಪ ಬಂತು, ಅದಕ್ಕೆ ಅವನ ಕಾರನ್ನ ಪುಡಿ ಪುಡಿ ಮಾಡಿಯಾದ್ರೂ ನನ್ನ ಫ್ರೆಂಡ್ನ ಅಲ್ಲಿಂದ ಕರ್ಕೊಂಡು ಹೋಗ್ಬೇಕು ಅಂತ ಅಂದ್ಕೊಂಡೆ. ಕಾರನ್ನ ಪೀಸ್‌ ಪೀಸ್‌ ಮಾಡ್ತಿದ್ದನ್ನ ನೋಡಿ ಪಕ್ಕದ ಮನೆಯವ್ನು ನನ್ನ ಹತ್ರ ‘ನಿಲ್ಸು‘ ಅಂತ ತುಂಬ ಬೇಡ್ಕೊಂಡ. ಆದ್ರೆ ನಾನು ಯಾವದನ್ನೂ ತಲೆಗೆ ಹಾಕೊಳ್ದೆ, ಗಾಜನ್ನ, ಕಿಟಕಿನ ಎಲ್ಲಾನೂ ಪುಡಿ ಪುಡಿ ಮಾಡ್ಬಿಟ್ಟೆ.

 18 ವರ್ಷ ಇದ್ದಾಗ ನನ್ನ ಗ್ಯಾಂಗ್‌ ಪೊಲೀಸರ ಜೊತೆನೇ ಜಗಳಕ್ಕೆ ಇಳಿದುಬಿಟ್ತು! ನನ್ನತ್ರ ಮನೇಲೇ ಮಾಡಿದ ಬಾಂಬಿತ್ತು. ಅದನ್ನು ಅವರ ಮೇಲೆ ಹಾಕೋಣ ಅಂತ ಎಸೆದೆ, ಆದ್ರೆ ಅದು ನನ್ನ ಕೈಲೇ ಬ್ಲಾಸ್ಟ್‌ ಆಗೋಯ್ತು. ಅದೇಗಾಯ್ತೋ ಗೊತ್ತಿಲ್ಲ, ನನ್ನ ಕೈ ಪೂರ್ತಿ ರಕ್ತ ರಕ್ತ, ನೋಡಿ ತಲೆ ಸುತ್ತಿ ಬಿದ್ದೆ. ಪ್ರಜ್ಞೆ ಬಂದಾಗ ನೋಡ್ತೀನಿ ನಾನು ಆಸ್ಪತ್ರೆಲಿದ್ದೀನಿ, ನನ್ನ ಬಲಗೈ ಕಳ್ಕೊಂಡೆ, ಬಲ ಕಿವಿ ಕೂಡ ಕೆಲ್ಸ ಮಾಡ್ತಿರ್ಲಿಲ್ಲ. ಮತ್ತೆ, ನನ್ನ ಬಲಗಣ್ಣು ಕೂಡ ಅಷ್ಟು ಚೆನ್ನಾಗಿ ಕಾಣ್ತಿರ್ಲಿಲ್ಲ.

 ಇಷ್ಟೆಲ್ಲ ಆದ್ರೂ ಆಸ್ಪತ್ರೆಯಿಂದ ಹೊರಗೆ ಬಂದ ತಕ್ಷಣ ನಾನು ಮತ್ತೆ ಆ ಗ್ಯಾಂಗಿಗೆ ಹೋದೆ. ಆದ್ರೆ ಬೇಗ ಪೊಲೀಸ್ರು ನನ್ನ ಅರೆಸ್ಟ್‌ ಮಾಡಿದ್ರು. ಅಲ್ಲಿ, ರೌಡಿಗಳ ಜೊತೆ ಇನ್ನೂ ಜಾಸ್ತಿ ಬೆರತೆ. ಪ್ರತಿದಿನ ನಾಷ್ಟ ಮಾಡೋದ್ರಿಂದ ಹಿಡಿದೂ ಡ್ರಗ್ಸ್‌ ತಗೊಳೋದು, ಮಲಗೋದು ಎಲ್ಲಾನೂ ಜೊತೆಯಲ್ಲೇ ಮಾಡ್ತಿದ್ವಿ.

ಬೈಬಲ್‌ ಬದಲಾಯಿಸಿದ ವಿಧ

 ನಾನು ಜೈಲಲ್ಲಿದ್ದಾಗ ಲಿಯೋನಾರ್ದೋ ನನ್ನ ನೋಡೋಕೆ ಬಂದ್ರು. ಮಾತಾಡ್ತಾ ಮಾತಾಡ್ತಾ ಅವ್ರು ನನ್ನ ಬಲ ಭುಜದ ಮೇಲಿದ್ದ ಅಚ್ಚೆ ನೋಡಿ, “ಈ ಅಚ್ಚೆಯಲ್ಲಿರೋ ಈ ಮೂರು ಚುಕ್ಕೆಗಳ ಅರ್ಥ ಏನು ಗೊತ್ತಾ?” ಅಂತ ಕೇಳಿದ್ರು. “ಹಾ, ಗೊತ್ತು,” “ಸೆಕ್ಸ್‌, ಡ್ರಗ್ಸ್‌, ಮೋಜು ಮಸ್ತಿ” ಅಂದೆ. ಆದ್ರೆ ಲಿಯೋನಾರ್ದೋ ನಂಗೆ, “ಅವು ಆಸ್ಪತ್ರೆ, ಜೈಲು ಮತ್ತೆ ಸಾವು ಅಂತ ನಂಗನಿಸುತ್ತೆ” ಅಂದ್ರು. ನೀನು ಮೊದ್ಲು ಆಸ್ಪತ್ರೆಗೋದೆ, ಈಗ ಜೈಲಲ್ಲಿದ್ದೀಯ, ಮುಂದೆ ಏನಾಗುತ್ತೆ ಗೊತ್ತಾಯ್ತಾ? ಅಂತ ಕೇಳಿದ್ರು.

 ಅವರು ಹೇಳಿದ್ದು ಕೇಳಿ ನಾನು ದಂಗಾದೆ. ಅವರು ಹೇಳಿದ್ದು ಸರಿನೇ. ನಾನು ಮಾಡ್ತಿದ್ದ ಕೆಲ್ಸದಿಂದ ನನ್ನ ಸಮಾಧಿ ನಾನೇ ತೋಡಿಕೊಳ್ತಿದ್ದೆ. ಅವ್ರು, ಬೈಬಲ್‌ ಕಲಿಯೋಕೆ ಶುರು ಮಾಡು ಅಂದ್ರು, ನಾನು ಒಪ್ಕೊಂಡೆ. ಬೈಬಲಿಂದ ನಾನು ಕಲಿತದ್ದೆಲ್ಲ ನಾನು ಬದಲಾಗೋ ಥರ ಮಾಡ್ತು. ಬೈಬಲ್‌ ಹೇಳುತ್ತೆ, ‘ದುಸ್ಸಹವಾಸ ಸದಾಚಾರ ಕೆಡಿಸುತ್ತೆ’ ಅಂತ. (1 ಕೊರಿಂಥ 15:33) ಅದಕ್ಕೆ, ನಾನು ಮಾಡ್ಬೇಕಿದ್ದ ಮೊದಲ ಕೆಲ್ಸ, ಒಳ್ಳೇ ಫ್ರೆಂಡ್ಸ್‌ನ ಹುಡುಕಿಕೊಳ್ಳೋದು. ಅದಕ್ಕೆ ನನ್ನ ಹಳೇ ಗ್ಯಾಂಗ್‌ಗೆ ಹೋಗೋ ಬದ್ಲು ಜೈಲಲ್ಲಿ ನಡೆಯೋ ಮೀಟಿಂಗ್ಸ್‌ಗೆ ಹೋದೆ. ಅಲ್ಲಿ ನಾನು, ಜೈಲಲ್ಲೇ ದೀಕ್ಷಾಸ್ನಾನ ತಗೊಂಡಿದ್ದ ಆಂಡ್ರೆಸ್‌ ಅನ್ನೋವ್ರನ್ನ ನೋಡ್ದೆ. ಅವರು ನನ್ನ ಅವರ ಜೊತೆ ನಾಷ್ಟ ಮಾಡೋಕೆ ಕರೆದ್ರು. ಅವತ್ತಿಂದ ನಾನು ಮತ್ತೆ ಡ್ರಗ್ಸ್‌ ತಗೊಳೋಕೆ ಹೋಗ್ಲಿಲ್ಲ. ಪ್ರತಿದಿನ ನಾನು ಮತ್ತೆ ಆಂಡ್ರೆಸ್‌, ಬೈಬಲ್‌ ಬಗ್ಗೆ ಮಾತಾಡೋ ಅಭ್ಯಾಸ ಮಾಡ್ಕೊಂಡ್ವಿ.

 ನಾನು ಬದ್ಲಾಗ್ತಿರೋದನ್ನ ಆ ಗ್ಯಾಂಗ್‌ ನೋಡ್ತು. ಅದಕ್ಕೆ, ಆ ಗ್ಯಾಂಗ್‌ ಲೀಡರ್‌, ಅವನ ಜೊತೆ ಮಾತಾಡೋಕೆ ನನ್ನ ಕರೆದ. ನಂಗೆ ಭಯ ಆಯ್ತು. ಒಂದ್ಸಲ ಗ್ಯಾಂಗ್‌ಗೆ ಸೇರ್ಕೊಂಡ ಮೇಲೆ ಅದನ್ನ ಬಿಡೋದು ಅಷ್ಟು ಸುಲಭ ಅಲ್ಲ. ಅದಕ್ಕೆ, ಅವನು ನಂಗೇನು ಮಾಡ್ತಾನೋ ಏನೋ ಅಂತ ಹೆದರಿದ್ದೆ. ಅವನು, “ನೀನ್‌ ನಮ್‌ ಜೊತೆ ಸೇರೋದು ಬಿಟ್ಟು, ಸಾಕ್ಷಿಗಳ ಮೀಟಿಂಗ್‌ಗೆ ಹೋಗ್ತಿದ್ದೀಯ, ಏನು ಮಾಡ್ಬೇಕಂತಿದ್ದೀಯ?” ಅಂತ ಕೇಳ್ದ. ‘ಬೈಬಲ್‌ ಕಲಿತು ಬದಲಾಗ್ಬೇಕಂತಿದ್ದೀನಿ‘ ಅಂದೆ. ಆದ್ರೆ ಅವನು, ‘ನೀನು ನಿಜವಾಗ್ಲೂ ಯೆಹೋವನ ಸಾಕ್ಷಿ ಆಗ್ತೀನಿ ಅಂದ್ರೆ ನಮ್ಗೇನು ಬೇಜಾರಿಲ್ಲ‘ ಅಂದ. ಆಮೇಲೆ ಅವ್ನು, “ನಿಂಗೆ ನಿಜವಾಗ್ಲೂ ದೇವರ ಬಗ್ಗೆ ಕಲೀಬೇಕಿದ್ರೆ, ಯೆಹೋವನ ಸಾಕ್ಷಿಗಳ ಜೊತೆನೇ ಇರು. ನೀನು ಕೆಟ್ಟದ್ದನ್ನೆಲ್ಲ ಬಿಡ್ತೀಯ ಅಂತ ನಾವು ನಂಬ್ತೇವೆ. ನೀನು ಸರಿಯಾಗಿರೋ ದಾರಿಲೇ ಹೋಗ್ತಿದ್ದೀಯ. ಸಾಕ್ಷಿಗಳು ಗ್ಯಾರಂಟಿ ನಿಂಗೆ ಸಹಾಯ ಮಾಡ್ತಾರೆ. ಅಮೆರಿಕದಲ್ಲಿದ್ದಾಗ ನಾನೂ ಸಾಕ್ಷಿಗಳಿಂದ ಬೈಬಲ್‌ ಕಲೀತ್ತಿದ್ದೆ. ನನ್‌ ಕುಟುಂಬದವ್ರೂ ಸಾಕ್ಷಿಗಳೇ. ಏನು ಭಯ ಪಡ್ಬೇಡ, ಹೀಗೇ ಬದಲಾವಣೆ ಮಾಡ್ಕೋ” ಅಂದ. ನಂಗಿನ್ನೂ ಭಯ ಇತ್ತು, ಆದ್ರೆ ಇದನ್ನೆಲ್ಲ ಕೇಳಿ ಸಖತ್‌ ಖುಷಿ ಆಯ್ತು. ಮನಸ್ಸಲ್ಲೇ ಯೆಹೋವ ದೇವರಿಗೆ ಥ್ಯಾಂಕ್ಸ್‌ ಹೇಳ್ದೆ. ಪಂಜರದಿಂದ ಪಕ್ಷಿ ಹೊರಗೆ ಬಂದಂತೆ ನಂಗನಿಸ್ತು. ಆಗ ನಂಗೆ ’ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು’ ಅನ್ನೋ ಯೇಸುವಿನ ಮಾತು ಎಷ್ಟು ನಿಜ ಅಂತ ಅನಿಸ್ತು. —ಯೋಹಾನ 8:32.

 ನನ್ನ ಹಳೇ ದೋಸ್ತ್‌ಗಳು ಮತ್ತೆ ನಂಗೆ ಡ್ರಗ್ಸ್‌ ಕೊಟ್ಟು ಪರೀಕ್ಷೆ ಮಾಡಿದ್ರು. ನಿಜ ಹೇಳ್ತೀನಿ, ಒಂದೊಂದು ಸಲ ನಾನು ಅದನ್ನ ತಗೊಂಡು ಬಿಟ್ಟೆ. ಆದ್ರೆ, ಹೋಗ್ತಾ ಹೋಗ್ತಾ ತುಂಬ ಪ್ರಾರ್ಥನೆ ಮಾಡಿ ನನ್ನ ಆ ದುರಭ್ಯಾಸನ ಬಿಟ್ಟು ಬಿಟ್ಟೆ.—ಕೀರ್ತನೆ 51:10, 11.

 ಜೈಲಿಂದ ವಾಪಸ್‌ ಬಂದ್ಮೇಲೆ ತುಂಬ ಜನ ನಾನು ಮತ್ತೆ ರೌಡಿ ಆಗ್ತೀನಿ ಅಂತ ಅಂದ್ಕೊಂಡ್ರು. ಆದ್ರೆ ನಾನಂತೂ ಆ ಗ್ಯಾಂಗ್‌ ಕಡೆ ಸುಳೀಲೇ ಇಲ್ಲ. ಆದ್ರೆ, ಜೈಲಿಗೆ ಮಾತ್ರ ಆಗಾಗ ಹೋಗ್ತಿದ್ದೆ. ತಪ್ಪು ಮಾಡಿಯಲ್ಲ, ಸುವಾರ್ತೆ ಹೇಳೋಕೆ ಹೋಗ್ತಿದ್ದೆ. ಕೊನೆಗೆ, ಜೈಲಲ್ಲಿದ್ದ ನನ್ನ ಹಳೇ ಫ್ರೆಂಡ್ಸ್‌ ನಾನು ಬದಲಾಗಿಬಿಟ್ಟೆ ಅಂತ ಅರ್ಥ ಮಾಡಿಕೊಂಡ್ರು. ಆದ್ರೆ, ನನ್ನ ಚಿಕ್ಕ ವಯಸ್ಸಿನ ಫ್ರೆಂಡ್ಸ್‌ ಮಾತ್ರ ಅದನ್ನ ನಂಬಲಿಲ್ಲ.

 ಒಂದಿನ ನಾನು ಸುವಾರ್ತೆ ಸಾರೋಕೆ ಹೋಗಿದ್ದಾಗ, ನನ್ನನ್ನ ಮತ್ತೆ ನನ್ನ ಜೊತೆ ಸಾರೋಕೆ ಬಂದಿದ್ದ ಸಹೋದರನನ್ನ ಒಂದು ರೌಡಿ ಗ್ಯಾಂಗ್‌ ಬಂದು ಸುತ್ತಾಕೊಂಡು ಬಿಡ್ತು. ಅವ್ರು ನನ್ನ ಕೊಲ್ಬೇಕಂತಿದ್ರು. ನನ್ನ ಜೊತೆಯಲ್ಲಿದ್ದ ಆ ಸಹೋದರ ಧೈರ್ಯವಾಗಿ, ನಿಧಾನವಾಗಿ ‘ಇವ್ರು ಈಗ ಬದಲಾಗಿದ್ದಾರೆ‘ ಅಂತ ಹೇಳ್ದ. ನಾನು ನನ್ನ ಪಾಡಿಗೆ ಸುಮ್ನಿದ್ದೆ. ನನ್ನ ಚೆನ್ನಾಗಿ ಹೊಡೆದು, ಬೆದರಿಕೆ ಹಾಕಿ, ಇದೇ ಕೊನೆ ಈ ಕಡೆ ಮತ್ತೆ ಕಾಣಿಸ್ಕೋಬಾರ್ದು ಅಂತ ಹೇಳಿ ಬಿಟ್ಟುಬಿಟ್ಟರು. ಬೈಬಲ್‌ ನಿಜವಾಗ್ಲೂ ನನ್ನ ಬದುಕನ್ನ ಬದಲಾಯಿಸಿಬಿಟ್ತು. ಮೊದಲೆಲ್ಲ ಆಗಿದ್ರೆ, ನಾನು ಗ್ಯಾರಂಟಿ ಸೇಡು ತೀರಿಸ್ಕೊಳ್ಳೋಕೆ ಹೋಗ್ತಿದ್ದೆ. ಆದ್ರೆ ಈಗ 1 ಥೆಸಲೋನಿಕ 5:15ರ ಪ್ರಕಾರ ನಡ್ಕೋತಿದ್ದೀನಿ. ಅಲ್ಲಿ ಹೇಳುತ್ತೆ, “ಯಾರೂ ಬೇರೆ ಯಾರಿಗೂ ಹಾನಿಗೆ ಪ್ರತಿಯಾಗಿ ಹಾನಿಯನ್ನು ಮಾಡದಂತೆ ನೋಡಿಕೊಳ್ಳಿರಿ; ಯಾವಾಗಲೂ ಒಬ್ಬರು ಇನ್ನೊಬ್ಬರಿಗೆ ಮಾತ್ರವಲ್ಲದೆ ಇತರ ಎಲ್ಲರಿಗೆ ಒಳ್ಳೇದನ್ನೇ ಮಾಡುವವರಾಗಿರಿ.”

 ನಾನು ಯೆಹೋವನ ಸಾಕ್ಷಿಯಾದಾಗಿನಿಂದ ನಿಯತ್ತಾಗಿದ್ದೇನೆ. ಆದ್ರೆ ಇದು ಅಷ್ಟು ಸುಲಭ ಅಲ್ಲ. ಆದರೂ ಯೆಹೋವ ದೇವರ ಸಹಾಯದಿಂದ, ಬೈಬಲ್‌ ಸಲಹೆಯಿಂದ, ಮತ್ತೆ ನನ್ನ ಹೊಸ ಫ್ರೆಂಡ್ಸ್‌ ಬೆಂಬಲದಿಂದ ನಾನೀಗ ಒಳ್ಳೇ ಮನುಷ್ಯ ಆಗಿದ್ದೀನಿ. ನನ್ನ ಹಳೇ ಜೀವನಕ್ಕೆ ವಾಪಾಸ್‌ ಹೋಗೋಕೆ ನಂಗೆ ಒಂಚೂರು ಮನಸ್ಸಿಲ್ಲ.—2 ಪೇತ್ರ 2:22.

ನಾನು ಪಡೆದ ಪ್ರಯೋಜನ

 ಮೊದಲು ನಾನು ತುಂಬ ಕೋಪಿಷ್ಟನಾಗಿದ್ದೆ. ಆ ಕೆಟ್ಟ ದಾರೀಲೇ ಇದ್ದಿದ್ದರೆ ಖಂಡಿತ ನಾನು ಇವತ್ತು ಬದುಕಿರುತ್ತಿರಲಿಲ್ಲ. ಬೈಬಲಿಂದ ನಾನು ಕಲಿತಿದ್ದು ನನ್ನ ಬದಲಾಯಿಸ್ತು. ನನ್ನ ಕೆಟ್ಟ ಚಾಳಿಗಳನ್ನೆಲ್ಲ ಬಿಟ್ಟುಬಿಟ್ಟೆ. ಹಿಂದೆ ನಂಗೆ ಶತ್ರುಗಳಾಗಿದ್ದವರೆಲ್ಲರ ಹತ್ರ ಈಗ ನಾನು ಸಮಾಧಾನದಿಂದ ಇದ್ದೀನಿ. (ಲೂಕ 6:27) ಈಗ ಒಳ್ಳೇ ಗುಣಗಳನ್ನು ಕಲಿಯೋಕೆ ಸಹಾಯ ಮಾಡೋ ಸ್ನೇಹಿತರಿದ್ದಾರೆ. (ಜ್ಞಾನೋಕ್ತಿ 13:20) ಈಗ ನನ್ನ ಜೀವನಕ್ಕೆ ಒಂದರ್ಥ ಇದೆ, ನಾನು ಖುಷಿ ಖುಷಿಯಾಗಿದ್ದೀನಿ. ನನ್ನ ಹಿಂದಿನ ತಪ್ಪನ್ನೆಲ್ಲ ಕ್ಷಮಿಸಿ ನನ್ನನ್ನ ಮನುಷ್ಯನನ್ನಾಗಿ ಮಾಡಿರೋ ದೇವರ ಸೇವೆ ಮಾಡ್ತಿದ್ದೀನಿ.—ಯೆಶಾಯ 1:18.

 2006ರಲ್ಲಿ, ಅವಿವಾಹಿತ ಸಹೋದರರ ಬೈಬಲ್‌ ಶಾಲೆಗೆ ಹೋದೆ. ಸ್ವಲ್ಪ ವರ್ಷ ಆದ್ಮೇಲೆ ನಾನು ಮದುವೆ ಆದೆ. ಈಗ ನಾವು ನಮ್ಮ ಮಗಳನ್ನ ಚೆನ್ನಾಗಿ ಬೆಳೆಸ್ತಿದ್ದೀವಿ. ನಂಗೆ ಸಹಾಯ ಮಾಡಿದ ಆ ಬೈಬಲ್‌ ತತ್ವಗಳನ್ನು ಈಗ ಬೇರೆ ಜನರಿಗೆ ಹೇಳೋದ್ರಲ್ಲಿ ನಾನು ಹೆಚ್ಚು ಸಮಯ ಕಳೀತಿದ್ದೀನಿ. ಕ್ರೈಸ್ತ ಸಭೆಯಲ್ಲಿ ಹಿರಿಯನಾಗಿ ಸೇವೆ ಮಾಡ್ತಾ, ನಾನು ಚಿಕ್ಕವನಿದ್ದಾಗ ಮಾಡಿದ ತಪ್ಪುಗಳನ್ನ ಈಗಿರೋ ಮಕ್ಕಳು ಮಾಡದೆ ಇರೋಕೆ ಸಹಾಯ ಮಾಡ್ತಿದ್ದೇನೆ. ಈಗ ನಾನು ನನ್ನ ಸಮಾಧಿನ ತೋಡಿಕೊಳ್ಳೋದನ್ನ ಬಿಟ್ಟು, ದೇವರು ಮಾತುಕೊಟ್ಟಿರೋ ಆ ಶಾಶ್ವತ ಜೀವನಕ್ಕಾಗಿ ಒಳ್ಳೇ ಗುಣಗಳನ್ನು ಬೆಳೆಸಿಕೊಳ್ತಿದ್ದೀನಿ.