ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

“ನನಗೆ ಮೂಗಿನ ಮೇಲೆ ಕೋಪ ಇತ್ತು”

“ನನಗೆ ಮೂಗಿನ ಮೇಲೆ ಕೋಪ ಇತ್ತು”
  • ಜನನ: 1975

  • ದೇಶ: ಮೆಕ್ಸಿಕೋ

  • ಹಿಂದೆ: ಕೋಪಿಷ್ಠ, ಕ್ರೂರಿ, ಕೈದಿ

ಹಿನ್ನೆಲೆ

 ಮೆಕ್ಸಿಕೋವಿನ ಚಿಯಪಸ್‌ ರಾಜ್ಯದ, ಸಾನ್‌ ವಾನ್‌ ಚಂಕಲೈಟೋ ಎಂಬ ಒಂದು ಸಣ್ಣ ನಗರದಲ್ಲಿ ನಾನು ಹುಟ್ಟಿದೆ. ನನ್ನ ಕುಟುಂಬವು ಮಾಯಾ ವಂಶದ ಚೋಲ್‌ ಗುಂಪಿಗೆ ಸೇರಿದ್ದು. ನನ್ನ ಹೆತ್ತವರಿಗೆ 12 ಮಕ್ಕಳು. ಅದರಲ್ಲಿ ನಾನು ಐದನೆಯವನು. ನಾನಿನ್ನೂ ಸಣ್ಣವನಾಗಿದ್ದಾಗ, ನಾನು ಮತ್ತು ನನ್ನ ಒಡಹುಟ್ಟಿದವರು ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಬಗ್ಗೆ ಕಲಿಯುತ್ತಿದ್ವಿ. ಆದರೆ ದುಃಖಕರವಾಗಿ, ನಾನು ಯುವಕನಾಗಿದ್ದಾಗ ಬೈಬಲಿನ ಸಲಹೆಗಳನ್ನು ಪಾಲಿಸಲಿಲ್ಲ.

 13 ವಯಸ್ಸಿನಲ್ಲಿ ನಾನು ಡ್ರಗ್ಸ್‌ ತಗೊಳ್ಳುತ್ತಿದ್ದೆ ಮತ್ತು ಕದಿಯುತ್ತಿದ್ದೆ. ಆ ವಯಸ್ಸಿನಲ್ಲಿ ನಾನು ಮನೆ ಬಿಟ್ಟು ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆದಾಡುತ್ತಿದ್ದೆ. 16ನೇ ವಯಸ್ಸಿನಲ್ಲಿ, ಗಾಂಜಾ ಬೆಳೆಯುವ ಒಂದು ಸ್ಥಳದಲ್ಲಿ ಕೆಲಸ ಮಾಡಲು ಶುರು ಮಾಡಿದೆ. ಅಲ್ಲಿ ಸುಮಾರು ಒಂದು ವರ್ಷ ಕೆಲಸ ಮಾಡಿದೆ. ಒಂದು ರಾತ್ರಿ, ನಾವು ಒಂದು ದೊಡ್ಡ ಗಾಂಜಾ ಮಾಲನ್ನು ದೋಣಿಯಲ್ಲಿ ಸಾಗಿಸುವಾಗ, ವಿರೋಧಿ ಡ್ರಗ್ಸ್‌ ಸಂಘದವರು ನಮ್ಮ ಮೇಲೆ ದಾಳಿ ಮಾಡಿದರು. ಅವರ ಹತ್ತಿರ ತುಂಬ ಆಯುಧಗಳಿದ್ದವು. ಆಗ ನಾನು ಅವರ ಗುಂಡೇಟಿನಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿ, ಸುಮಾರು ದೂರದಲ್ಲಿ ನೀರಿನಿಂದ ಮೇಲೆ ಬಂದೆ. ಅದಾದ ಮೇಲೆ ನಾನು ಅಮೆರಿಕಕ್ಕೆ ಓಡಿಹೋದೆ.

 ಅಮೆರಿಕದಲ್ಲಿ ನಾನು ಡ್ರಗ್ಸ್‌ ದಂಧೆ ಮಾಡುತ್ತಿದ್ದರಿಂದ ಇನ್ನಷ್ಟು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡೆ. 19ನೇ ವಯಸ್ಸಿನಲ್ಲಿ ನನ್ನನ್ನು ಕಳ್ಳತನ ಮತ್ತು ಕೊಲೆ ಪ್ರಯತ್ನದ ಆರೋಪದ ಮೇಲೆ ಬಂಧಿಸಿ, ಸೆರೆಗೆ ಹಾಕಲಾಯಿತು. ಸೆರೆಯಲ್ಲಿ ನಾನು ಒಂದು ರೌಡಿಗಳ ಗ್ಯಾಂಗಿಗೆ ಸೇರಿದೆ ಮತ್ತು ಹಿಂಸೆಯನ್ನು ಇನ್ನೂ ಹೆಚ್ಚಿಸಿದೆ. ಪರಿಣಾಮವಾಗಿ, ಅಧಿಕಾರಿಗಳು ನನ್ನನ್ನು ಪೆನ್ಸಿಲ್ವೇನಿಯದ ಲೂಯಿಸ್ಬರ್ಗ್‌ನಲ್ಲಿರುವ ಬಿಗಿ ಬಂದೋಬಸ್ತಿನ ಒಂದು ಸೆರೆಮನೆಗೆ ವರ್ಗಾಯಿಸಿದರು.

 ಲೂಯಿಸ್ಬರ್ಗಿನ ಸೆರೆಯಲ್ಲಿ ನನ್ನ ನಡತೆ ಇನ್ನೂ ಹೆಚ್ಚು ಕೆಟ್ಟದಾಯಿತು. ನಾನೀಗಾಗಲೇ ನನ್ನ ರೌಡಿ ಗ್ಯಾಂಗಿನ ಹಚ್ಚೆಯನ್ನು (ಟ್ಯಾಟೂ) ಹಾಕಿಸಿಕೊಂಡಿದ್ದರಿಂದ ಅಲ್ಲಿ ನಾನು ಅದೇ ಗ್ಯಾಂಗಿಗೆ ಸುಲಭವಾಗಿ ಸೇರಿಕೊಂಡೆ. ನಾನು ಹಿಂಸೆಯನ್ನ ಇನ್ನೂ ಜಾಸ್ತಿ ಮಾಡಿದೆ. ಒಂದರ ನಂತರ ಮತ್ತೊಂದು ಹೊಡೆದಾಟದಲ್ಲಿ ಇರುತ್ತಿದ್ದೆ. ಒಂದು ಸಲ, ಸೆರೆ ಅಂಗಳದಲ್ಲಿ ನಡೆದ ರೌಡಿ ಗ್ಯಾಂಗ್‌ಗಳ ಹೊಡೆದಾಟದಲ್ಲಿ ನಾನಿದ್ದೆ. ನಾವು ತುಂಬಾ ಹೊಡೆದಾಡಿದ್ವಿ. ಅದರಲ್ಲಿ, ಬ್ಯಾಟಗಳನ್ನೂ ವ್ಯಾಯಾಮ ಮಾಡುವುದಕ್ಕೆ ಉಪಯೋಗಿಸುವ ತೂಕದ ಕಲ್ಲುಗಳನ್ನೂ ಉಪಯೋಗಿಸಿದ್ವಿ. ನಮ್ಮ ಹೊಡೆದಾಟವನ್ನು ನಿಲ್ಲಿಸಲು, ಸೆರೆಯ ಕಾವಲುಗಾರರು ಕಣ್ಣೀರು ಬರಿಸುವ ಅನಿಲವನ್ನು ಉಪಯೋಗಿಸಿದರು. ಇದಾದ ಮೇಲೆ, ಸೆರೆಮನೆಯ ಅಧಿಕಾರಿಗಳು ನನ್ನನ್ನು ಅಪಾಯಕಾರಿ ಕೈದಿಗಳಿಗಾಗಿರುವ ವಿಶೇಷ ವಿಭಾಗಕ್ಕೆ ವರ್ಗಾಯಿಸಿದರು. ನನಗೆ ಮೂಗಿನ ಮೇಲೆ ಕೋಪ ಇತ್ತು ಮತ್ತು ಬಾಯಿಗೆ ಬಂದ ಹಾಗೆ ಮಾತಾಡ್ತಿದ್ದೆ. ಇನ್ನೊಬ್ಬರನ್ನು ಬಡಿದು ಹಾಕೋದು ನನಗೆ ತುಂಬ ಸುಲಭ ಅನಿಸುತ್ತಿತ್ತು. ನಿಜ ಹೇಳಬೇಕೆಂದರೆ, ನನಗೆ ಅದು ಇಷ್ಟ ಆಗುತ್ತಿತ್ತು. ನಾನು ನಡೆದುಕೊಳ್ಳುತ್ತಿದ್ದ ರೀತಿ ಬಗ್ಗೆ ನನಗೆ ಒಂಚೂರೂ ಬೇಸರ ಆಗುತ್ತಿರಲಿಲ್ಲ.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌

 ವಿಶೇಷ ವಿಭಾಗದಲ್ಲಿ ಹೆಚ್ಚಿನ ಸಮಯ ನನ್ನನ್ನು ಕೋಣೆಯಿಂದ ಹೊರಗೆ ಬಿಡುತ್ತಿರಲಿಲ್ಲ. ಹಾಗಾಗಿ ಸಮಯ ಕಳೆಯಲಿಕ್ಕೆ ಬೈಬಲನ್ನು ಓದಲು ಶುರು ಮಾಡಿದೆ. ನಂತರ, ಒಬ್ಬ ಕಾವಲುಗಾರರು ನನಗೆ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ a ಎಂಬ ಪುಸ್ತಕವನ್ನು ಕೊಟ್ಟರು. ಈ ಪುಸ್ತಕವನ್ನು ಓದುವಾಗ, ನಾನು ಸಣ್ಣ ವಯಸ್ಸಿನಲ್ಲಿ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯುವಾಗ ತಿಳಿದುಕೊಂಡ ವಿಷಯಗಳು ನೆನಪಾದವು. ಅದಾದ ಮೇಲೆ, ‘ನನ್ನ ಹಿಂಸಾತ್ಮಕ ಪ್ರವೃತ್ತಿಯಿಂದ ನಾನೆಷ್ಟು ಹದಗೆಟ್ಟು ಹೋಗಿದ್ದೀನಿ’ ಅಂತ ಯೋಚಿಸಿದೆ. ನಾನು ನನ್ನ ಕುಟುಂಬದ ಬಗ್ಗೆನೂ ಯೋಚಿಸಿದೆ. ನನ್ನ ಅಕ್ಕ ಮತ್ತು ತಂಗಿ ಯೆಹೋವನ ಸಾಕ್ಷಿಗಳಾಗಿದ್ದರಿಂದ, ‘ಅವರು ಸದಾ ಕಾಲ ಬದುಕುತ್ತಾರೆ’ ಎಂಬ ಯೋಚನೆ ಬಂತು. ಆಗ ‘ನಾನೂ ಯಾಕೆ ಬದುಕಲಿಕ್ಕೆ ಆಗಲ್ಲ?’ ಅಂತ ಪ್ರಶ್ನಿಸಿಕೊಂಡೆ. ನಾನು ಬದಲಾಗಲೇಬೇಕು ಅಂತ ಆವಾಗ ದೃಢತೀರ್ಮಾನ ಮಾಡಿದೆ.

 ಬದಲಾಗಬೇಕೆಂದರೆ ನನಗೆ ಸಹಾಯ ಬೇಕಿದೆ ಅಂತ ಗೊತ್ತಿತ್ತು. ಹಾಗಾಗಿ, ಮೊದಲನೇದಾಗಿ, ಯೆಹೋವ ದೇವರಿಗೆ ಪ್ರಾರ್ಥಿಸಿದೆ ಮತ್ತು ನನಗೆ ಸಹಾಯ ಮಾಡುವಂತೆ ಬೇಡಿಕೊಂಡೆ. ನಂತರ, ನಾನು ಅಮೆರಿಕದಲ್ಲಿದ್ದ ಯೆಹೋವನ ಸಾಕ್ಷಿಗಳ ಶಾಖಾ ಕಛೇರಿಗೆ ಪತ್ರ ಬರೆದು ಬೈಬಲ್‌ ಕಲಿಯಲು ಸಹಾಯಕ್ಕಾಗಿ ವಿನಂತಿಸಿದೆ. ಆಗ ಅವರು, ಹತ್ತಿರದಲ್ಲಿರುವ ಸಭೆಯವರು ನನ್ನನ್ನು ಭೇಟಿ ಮಾಡುವಂತೆ ಏರ್ಪಡಿಸಿದರು. ಆದರೆ, ಆ ಸಮಯದಲ್ಲಿ ನನ್ನ ಕುಟುಂಬದವರು ಬಿಟ್ಟು ಬೇರೆ ಯಾರಿಗೂ ನನ್ನನ್ನು ಭೇಟಿ ಮಾಡಲು ಅನುಮತಿಯಿರಲಿಲ್ಲ. ಹಾಗಾಗಿ ಆ ಸಭೆಯವರಲ್ಲಿ ಒಬ್ಬರು ನನಗೆ ಪ್ರೋತ್ಸಾಹಕರ ಪತ್ರಗಳನ್ನು ಮತ್ತು ಬೈಬಲ್‌ ಸಾಹಿತ್ಯವನ್ನು ಕಳಿಸಲು ಶುರು ಮಾಡಿದರು. ಇದರಿಂದ ನಾನು ಬದಲಾಗಬೇಕು ಅನ್ನುವ ಆಸೆ ಇನ್ನೂ ಜಾಸ್ತಿಯಾಯಿತು.

 ನಾನು ಹಲವಾರು ವರ್ಷಗಳಿಂದ ಇದ್ದ ರೌಡಿ ಗ್ಯಾಂಗನ್ನು ಬಿಡಬೇಕು ಎಂದು ತೀರ್ಮಾನಿಸಿದೆ. ಹೀಗೆ ಒಂದು ದೊಡ್ಡ ಹೆಜ್ಜೆ ಇಟ್ಟು ಮುಂದೆ ಬಂದೆ. ಗ್ಯಾಂಗಿನ ನಾಯಕನು ಸಹ ವಿಶೇಷ ವಿಭಾಗದಲ್ಲಿದ್ದನು. ಅವನ ಜೊತೆ ಮಾತಾಡುವ ಅವಕಾಶ ಸಿಕ್ಕಾಗ, ‘ನನಗೆ ಯೆಹೋವನ ಸಾಕ್ಷಿಯಾಗುವ ಆಸೆಯಿದೆ‘ ಎಂದು ಹೇಳಿದೆ. ಅವನ ಪ್ರತ್ಯುತ್ತರ ಕೇಳಿ ನಾನು ಆಶ್ಚರ್ಯಪಟ್ಟೆ. “ನಿನಗೆ ನಿಜವಾಗಲೂ ಆಸೆ ಇದ್ದರೆ ಸಾಕ್ಷಿಯಾಗು. ನಿನ್ನ ಮತ್ತು ದೇವರ ಮಧ್ಯದಲ್ಲಿ ನಾನು ಬರಲಿಕ್ಕಾಗಲ್ಲ. ಆದರೆ ನೀನು ಬರೀ ಗ್ಯಾಂಗಿನಿಂದ ಹೊರಗೆ ಹೋಗಬೇಕು ಅಂತ ಇದ್ದರೆ ಏನಾಗುತ್ತೆ ಅಂತ ನಿನಗೇ ಗೊತ್ತು” ಅಂತ ಹೇಳಿದ.

 ಮುಂದಿನ 2 ವರ್ಷಗಳಲ್ಲಿ ಸೆರೆಮನೆಯ ಕೆಲಸದವರು ನಾನು ಬದಲಾಗಿದ್ದೀನಂತ ಗಮನಿಸಿದರು. ಪರಿಣಾಮವಾಗಿ, ಅವರು ನನ್ನ ಜೊತೆ ದಯೆಯಿಂದ ನಡಕೊಳ್ಳುತ್ತಿದ್ದರು. ಉದಾಹರಣೆಗೆ ಅವರು ನನ್ನನ್ನ ಕೋಣೆಯಿಂದ ಸ್ನಾನಕ್ಕೆ ಕರಕೊಂಡು ಹೋಗುವಾಗ ನನ್ನ ಕೈಗೆ ಬೇಡಿ ಹಾಕುವುದನ್ನು ನಿಲ್ಲಿಸಿದರು. ಒಬ್ಬ ಕಾವಲುಗಾರನಂತೂ ನನ್ನ ಹತ್ತಿರ ಬಂದು, ಬದಲಾವಣೆ ಮಾಡಿಕೊಳ್ಳೋದನ್ನು ಮುಂದುವರಿಸುವಂತೆ ಪ್ರೋತ್ಸಾಹಿಸಿದನು. ನಿಜ ಹೇಳಬೇಕಂದರೆ, ನನ್ನ ಸೆರೆವಾಸದ ಕೊನೆಯ ವರ್ಷ ಸೆರೆಮನೆಯ ಅಧಿಕಾರಿಗಳು ನನ್ನನ್ನು ಮುಖ್ಯ ಸೆರೆಮನೆಯಿಂದ ಕಡಿಮೆ ಭದ್ರತೆಯಿರುವ ಉಪಶಿಬಿರಕ್ಕೆ ವರ್ಗಾಯಿಸಿದರು. 2004ರಲ್ಲಿ, ಅಂದರೆ 10 ವರ್ಷಗಳು ಸೆರೆಯಲ್ಲಿದ್ದ ನಂತರ ನನ್ನನ್ನು ಬಿಡುಗಡೆ ಮಾಡಿದರು ಮತ್ತು ಸೆರೆಮನೆಯ ಬಸ್ಸಿನಲ್ಲಿ ಮೆಕ್ಸಿಕೋಗೆ ಗಡಿಪಾರು ಮಾಡಿದರು.

 ಮೆಕ್ಸಿಕೋಗೆ ಬಂದ ಕೂಡಲೇ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವನ್ನು ಹುಡುಕಿಕೊಂಡೆ. ನಾನು ಮೊದಲನೇ ಕೂಟಕ್ಕೆ ನನ್ನ ಸೆರೆಮನೆಯ ಯುನಿಫಾರ್ಮಿನಲ್ಲೇ ಹೋದೆ. ಅದನ್ನು ಬಿಟ್ಟರೆ ನನ್ನ ಹತ್ತಿರ ಬೇರೆ ಯಾವ ಸಭ್ಯ ಬಟ್ಟೆನೂ ಇರಲಿಲ್ಲ. ನಾನು ಯಾವ ರೀತಿ ಕಾಣಿಸಿದರೂ, ಸಾಕ್ಷಿಗಳು ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದರು. ಅವರ ಪ್ರೀತಿ, ದಯೆಯನ್ನು ನೋಡಿದಾಗ ನಾನು ನಿಜ ಕ್ರೈಸ್ತರ ಮಧ್ಯದಲ್ಲಿದ್ದೀನಿ ಅಂತ ಅನಿಸಿತು. (ಯೋಹಾನ 13:35) ಆ ಕೂಟದಲ್ಲಿ, ಸಭೆಯ ಹಿರಿಯರು ನಾನು ಬೈಬಲ್‌ ಕಲಿಯುವಂತೆ ಏರ್ಪಾಡು ಮಾಡಿದರು. ಒಂದು ವರ್ಷದ ನಂತರ, 2005ರ ಸೆಪ್ಟೆಂಬರ್‌ 3ರಂದು ನಾನು ದೀಕ್ಷಾಸ್ನಾನ ಪಡೆದು ಒಬ್ಬ ಯೆಹೋವನ ಸಾಕ್ಷಿಯಾದೆ.

 2007ರ ಜನವರಿಯಿಂದ, ನಾನು ಬೇರೆಯವರಿಗೆ ಬೈಬಲಿನ ಬಗ್ಗೆ ಕಲಿಸುವುದರಲ್ಲಿ ತಿಂಗಳಿಗೆ 70 ಗಂಟೆ ಕಳೆಯಲು ಶುರು ಮಾಡಿದೆ. 2011ರಲ್ಲಿ, ಅವಿವಾಹಿತ ಸಹೋದರರಿಗಾಗಿ ಬೈಬಲ್‌ ಶಾಲೆಯ (ಈಗ ರಾಜ್ಯ ಪ್ರಚಾರಕರ ಶಾಲೆ ಎಂದು ಕರೆಯಲಾಗುತ್ತದೆ) ಪದವಿ ಪಡೆದೆ. ಸಭೆಯಲ್ಲಿ ನನ್ನ ಜವಾಬ್ದಾರಿಗಳನ್ನು ಚೆನ್ನಾಗಿ ಪೂರೈಸಲು ಈ ಶಾಲೆ ನನಗೆ ತುಂಬ ಸಹಾಯಮಾಡಿತು.

ಶಾಂತಿಯಿಂದ ಇರುವುದರ ಬಗ್ಗೆ ಬೇರೆಯವರಿಗೆ ಕಲಿಸುತ್ತಾ ಖುಷಿಯಾಗಿದ್ದೀನಿ

 2013ರಲ್ಲಿ ನನ್ನ ಪ್ರೀತಿಯ ಪಿಲಾರಳನ್ನು ಮದುವೆಯಾದೆ. ನಾನು ನನ್ನ ಹಿಂದಿನ ಜೀವನದ ಬಗ್ಗೆ ಹೇಳಿದಾಗ ಅವಳು ‘ನಂಬಲಿಕ್ಕೆ ಕಷ್ಟ ಅನಿಸುತ್ತೆ’ ಅಂತ ನಗುನಗುತ್ತಾ ಹೇಳುತ್ತಾಳೆ. ನಾನು ನನ್ನ ಹಳೆಯ ರೀತಿಗಳಿಗೆ ಎಂದೂ ವಾಪಸ್ಸು ಹೋಗಿಲ್ಲ. ಬೈಬಲಿಗೆ ಒಬ್ಬರನ್ನು ಬದಲಾಯಿಸುವ ಶಕ್ತಿಯಿದೆ ಅನ್ನೋದಕ್ಕೆ ನಾನು ಇವತ್ತು ಹೀಗಿರೋದೇ ಸಾಕ್ಷಿ ಅಂತ ನಾನು ಮತ್ತು ನನ್ನ ಹೆಂಡತಿ ನಂಬುತ್ತೇವೆ.—ರೋಮನ್ನರಿಗೆ 12:2.

ಸಿಕ್ಕಿದ ಪ್ರಯೋಜನಗಳು

 ಲೂಕ 19:10ರಲ್ಲಿ ಯೇಸು ನನ್ನ ಬಗ್ಗೆನೇ ಹೇಳುತ್ತಾ ಇದ್ದಾನೆ ಅಂತ ಅನಿಸುತ್ತೆ. ಅಲ್ಲಿ ಅವನು ಹೇಳಿದ್ದು: ‘[ನಾನು] ಕಳೆದುಹೋದದ್ದನ್ನು ಹುಡುಕಿ ರಕ್ಷಿಸಲು ಬಂದೆನು.’ ಈಗ, ನನ್ನ ಜೀವನಕ್ಕೆ ಅರ್ಥ ಇಲ್ಲ ಅಂತ ಅನಿಸೋದೂ ಇಲ್ಲ ಮತ್ತು ನಾನು ಜನರನ್ನು ಹೊಡೆಯೋದೂ ಇಲ್ಲ. ನನ್ನ ಜೀವನಕ್ಕೆ ತುಂಬ ಗೌರವಾರ್ಹ ಉದ್ದೇಶವಿದೆ, ಇತರರ ಜೊತೆ ಸಮಾಧಾನದಿಂದ ಇದ್ದೀನಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಸೃಷ್ಟಿಕರ್ತನಾದ ಯೆಹೋವನೊಂದಿಗೆ ನನಗೆ ಒಂದು ಒಳ್ಳೇ ಸಂಬಂಧವಿದೆ. ಇದೆಲ್ಲದಕ್ಕೂ ಕಾರಣ—ಬೈಬಲ್‌.

[ಪಾದಟಿಪ್ಪಣಿ]

a ಈ ಪುಸ್ತಕವು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲಾಗಿತ್ತು ಆದರೆ ಈಗ ಮುದ್ರಿಸಲ್ಪಡುತ್ತಿಲ್ಲ. ಈಗ ಬೈಬಲನ್ನು ಕಲಿಸಲು ಅವರು ಉಪಯೋಗಿಸುವ ಮುಖ್ಯ ಸಾಧನ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕ.