ಯೋಹಾನ 8:12-59

  • ಅಪ್ಪ ನನ್ನ ಬಗ್ಗೆ ಹೇಳ್ತಾನೆ (12-30)

    • ಯೇಸು “ಲೋಕಕ್ಕೆ ಬೆಳಕು” (12)

  • ಅಬ್ರಹಾಮನ ಮಕ್ಕಳು (31-41)

    • “ಸತ್ಯ ನಿಮ್ಮನ್ನ ಬಿಡುಗಡೆ ಮಾಡುತ್ತೆ” (32)

  • ಸೈತಾನನ ಮಕ್ಕಳು (42-47)

  • ಯೇಸು ಮತ್ತು ಅಬ್ರಹಾಮ (48-59)

8  12  ಯೇಸು “ನಾನು ಲೋಕಕ್ಕೆ ಬೆಳಕು.+ ನನ್ನ ಶಿಷ್ಯರಾಗೋರು ಕತ್ತಲೆಯಲ್ಲಿ ನಡಿಯೋದೇ ಇಲ್ಲ. ಅವ್ರ ಹತ್ರ ಜೀವಕ್ಕೆ ನಡಿಸೋ ಬೆಳಕು ಇರುತ್ತೆ”+ ಅಂದನು. 13  ಅದಕ್ಕೆ ಫರಿಸಾಯರು “ನಿನ್ನ ಬಗ್ಗೆ ನೀನೇ ಹೇಳ್ಕೊಳ್ತಿಯಲ್ಲಾ. ನೀನು ಹೇಳೋದೆಲ್ಲ ಸುಳ್ಳು” ಅಂದ್ರು. 14  ಅದಕ್ಕೆ ಯೇಸು “ನನ್ನ ಬಗ್ಗೆ ನಾನೇ ಹೇಳ್ಕೊಂಡ್ರೂ ನಾನು ಹೇಳೋದು ಸತ್ಯ. ಯಾಕಂದ್ರೆ ನಾನು ಎಲ್ಲಿಂದ ಬಂದೆ, ಎಲ್ಲಿಗೆ ಹೋಗ್ತೀನಿ ಅಂತ ನಂಗೊತ್ತು.+ ಆದ್ರೆ ನಿಮಗೆ ನಾನು ಎಲ್ಲಿಂದ ಬಂದೆ, ಎಲ್ಲಿಗೆ ಹೋಗ್ತೀನಿ ಅಂತ ಗೊತ್ತಿಲ್ಲ. 15  ನೀವು ಮನುಷ್ಯರ ಆಲೋಚನೆ ಪ್ರಕಾರ ತೀರ್ಪು ಮಾಡ್ತೀರ.+ ಆದ್ರೆ ನಾನು ಯಾರಿಗೂ ತೀರ್ಪು ಮಾಡಲ್ಲ. 16  ತೀರ್ಪು ಮಾಡಿದ್ರೂ ನ್ಯಾಯವಾಗೇ ಮಾಡ್ತೀನಿ. ಯಾಕಂದ್ರೆ ನಾನೊಬ್ಬನೇ ತೀರ್ಪು ಮಾಡಲ್ಲ. ನನ್ನನ್ನ ಕಳಿಸಿದ ಅಪ್ಪ ಮತ್ತೆ ನಾನು ಇಬ್ರೂ ಸೇರಿ ತೀರ್ಪು ಮಾಡ್ತೀವಿ.+ 17  ‘ಇಬ್ರು ಸಾಕ್ಷಿ ಹೇಳಿದ್ರೆ ಅದು ಸತ್ಯ’+ ಅಂತ ನಿಮ್ಮ ನಿಯಮ ಪುಸ್ತಕದಲ್ಲೇ ಇದೆ. 18  ಒಂದು, ನನ್ನ ಬಗ್ಗೆ ನಾನು ಹೇಳ್ತಾ ಇದ್ದೀನಿ. ಇನ್ನೊಂದು, ನನ್ನನ್ನ ಕಳಿಸಿದ ಅಪ್ಪನೂ ನನ್ನ ಬಗ್ಗೆ ಹೇಳ್ತಾ ಇದ್ದಾನೆ”+ ಅಂದನು. 19  ಆಗ ಅವರು “ನಿನ್ನ ಅಪ್ಪ ಎಲ್ಲಿದ್ದಾನೆ?” ಅಂತ ಕೇಳಿದ್ರು. ಅದಕ್ಕೆ ಯೇಸು “ನಿಮಗೆ ನನ್ನ ಬಗ್ಗೆ ಆಗಲಿ ನನ್ನ ಅಪ್ಪನ ಬಗ್ಗೆ ಆಗಲಿ ಗೊತ್ತಿಲ್ಲ.+ ನನ್ನ ಬಗ್ಗೆ ಗೊತ್ತಿದ್ರೆ ನನ್ನ ಅಪ್ಪನ ಬಗ್ಗೆನೂ ಗೊತ್ತಿರ್ತಿತ್ತು”+ ಅಂದನು. 20  ಆತನು ದೇವಾಲಯದಲ್ಲಿ ಕಲಿಸ್ತಿದ್ದಾಗ ಕಾಣಿಕೆ ಪೆಟ್ಟಿಗೆಗಳು ಇರೋ ಜಾಗದಲ್ಲಿ ನಿಂತು ಈ ಮಾತುಗಳನ್ನ ಹೇಳಿದನು.+ ಆದ್ರೂ ಆತನನ್ನ ಯಾರೂ ಹಿಡಿಲಿಲ್ಲ. ಯಾಕಂದ್ರೆ ಆತನ ಸಮಯ ಇನ್ನೂ ಬಂದಿರ್ಲಿಲ್ಲ.+ 21  ಆತನು ಮತ್ತೆ “ನಾನು ಹೋಗ್ತಿದ್ದೀನಿ. ನೀವು ನನ್ನನ್ನ ಹುಡುಕ್ತೀರ ಮತ್ತು ನಿಮ್ಮ ಪಾಪದಲ್ಲೇ ಸಾಯ್ತೀರ.+ ನಾನು ಹೋಗೋ ಜಾಗಕ್ಕೆ ನಿಮಗೆ ಬರೋಕಾಗಲ್ಲ”+ ಅಂದನು. 22  ಆಗ ಯೆಹೂದ್ಯರು “‘ನಾನು ಹೋಗೋ ಜಾಗಕ್ಕೆ ನಿಮಗೆ ಬರೋಕಾಗಲ್ಲ’ ಅಂತಿದ್ದಾನಲ್ಲಾ? ಇವನೇನಾದ್ರೂ ಆತ್ಮಹತ್ಯೆ ಮಾಡ್ಕೊಳ್ತಾನಾ?” ಅಂತ ಮಾತಾಡ್ಕೊಂಡ್ರು. 23  ಮತ್ತೆ ಯೇಸು “ನೀವು ಕೆಳಗಿಂದ ಬಂದಿದ್ದೀರ, ನಾನು ಮೇಲಿಂದ ಬಂದಿದ್ದೀನಿ.+ ನೀವು ಈ ಲೋಕದವರು, ನಾನು ಈ ಲೋಕದವನಲ್ಲ. 24  ಅದಕ್ಕೇ ನಿಮ್ಮ ಪಾಪದಲ್ಲೇ ಸಾಯ್ತೀರ ಅಂದೆ. ಯಾಕಂದ್ರೆ ಬರಬೇಕಾದವನು ನಾನೇ ಅಂತ ನೀವು ನಂಬಲಿಲ್ಲ” ಅಂದನು. 25  ಅದಕ್ಕೆ ಅವರು “ನೀನ್ಯಾರು?” ಅಂತ ಕೇಳಿದ್ರು. ಆಗ ಯೇಸು “ಅರ್ಥ ಮಾಡ್ಕೊಳ್ಳದಿರೋ ನಿಮ್ಮ ಹತ್ರ ಮಾತಾಡಿ ಏನು ಪ್ರಯೋಜನ? 26  ನಿಜ ಹೇಳಬೇಕಂದ್ರೆ ನಿಮ್ಮ ಹತ್ರ ತುಂಬ ವಿಷ್ಯ ಮಾತಾಡೋಕಿದೆ. ನೀವು ಮಾಡಿರೋ ತುಂಬ ವಿಷ್ಯಗಳ ಬಗ್ಗೆ ತೀರ್ಪು ಮಾಡೋಕಿದೆ. ನನ್ನನ್ನ ಈ ಲೋಕಕ್ಕೆ ಕಳಿಸಿದ ನನ್ನ ಅಪ್ಪನೇ ಅದನ್ನೆಲ್ಲ ನನಗೆ ಹೇಳಿದ್ದು. ಆತನು ಯಾವಾಗ್ಲೂ ನಿಜಾನೇ ಮಾತಾಡ್ತಾನೆ”+ ಅಂದನು. 27  ದೇವರ ಬಗ್ಗೆ ಯೇಸು ಮಾತಾಡ್ತಿದ್ದಾನೆ ಅಂತ ಅವರು ಅರ್ಥಮಾಡ್ಕೊಳ್ಳಲಿಲ್ಲ. 28  ಆಗ ಯೇಸು “ಮನುಷ್ಯಕುಮಾರನನ್ನ ಕಂಬಕ್ಕೆ ಜಡಿದ ಮೇಲೆನೇ+ ನಾನು ಯಾರು ಅಂತ ನಿಮಗೆ ಗೊತ್ತಾಗೋದು.+ ನನ್ನಷ್ಟಕ್ಕೆ ನಾನೇ ಏನೂ ಮಾಡಿಲ್ಲ,+ ಅಪ್ಪ ಕಲಿಸಿದ್ದನ್ನೇ ಮಾತಾಡಿದೆ ಅಂತ ನಿಮಗೆ ಅರ್ಥ ಆಗುತ್ತೆ. 29  ನನ್ನನ್ನ ಕಳಿಸಿದ ಅಪ್ಪ ನನ್ನ ಜೊತೆ ಇದ್ದಾನೆ. ಆತನು ಯಾವತ್ತೂ ನನ್ನ ಕೈಬಿಡಲ್ಲ. ಯಾಕಂದ್ರೆ ಆತನು ಇಷ್ಟ ಪಡೋದನ್ನೇ ನಾನು ಯಾವಾಗ್ಲೂ ಮಾಡ್ತೀನಿ”+ ಅಂದನು. 30  ಇದನ್ನ ಕೇಳಿ ತುಂಬ ಜನ ಯೇಸು ಮೇಲೆ ನಂಬಿಕೆ ಇಟ್ರು. 31  ನಂಬಿಕೆ ಇಟ್ಟ ಯೆಹೂದ್ಯರಿಗೆ ಯೇಸು “ನಾನು ಕಲಿಸಿದ್ದನ್ನ ಯಾವಾಗ್ಲೂ ಮಾಡ್ತಾ ಇದ್ರೆ ನೀವು ನನ್ನ ನಿಜ ಶಿಷ್ಯರಾಗ್ತೀರ. 32  ಸತ್ಯ ಏನಂತ ನಿಮಗೆ ಗೊತ್ತಾಗುತ್ತೆ.+ ಆ ಸತ್ಯ ನಿಮ್ಮನ್ನ ಬಿಡುಗಡೆ ಮಾಡುತ್ತೆ”+ ಅಂದನು. 33  ಆಗ ಉಳಿದ ಯೆಹೂದ್ಯರು “ನಾವು ಅಬ್ರಹಾಮನ ವಂಶದವರು. ನಾವು ಯಾವತ್ತೂ ಯಾರಿಗೂ ದಾಸರಾಗಿ ಇರ್ಲಿಲ್ಲ. ಅಂತದ್ರಲ್ಲಿ ‘ಬಿಡುಗಡೆ ಸಿಗುತ್ತೆ’ ಅಂತ ಯಾಕೆ ಹೇಳ್ತಿದ್ದೀಯಾ?” ಅಂತ ಕೇಳಿದ್ರು. 34  ಅದಕ್ಕೆ ಯೇಸು “ನಿಜ ಹೇಳ್ತೀನಿ, ಪಾಪ ಮಾಡೋರೆಲ್ಲ ಪಾಪಕ್ಕೆ ದಾಸರು.+ 35  ದಾಸ ಯಜಮಾನನ ಮನೆಯಲ್ಲೇ ಇದ್ದುಬಿಡಲ್ಲ. ಆದ್ರೆ ಮಗ ಶಾಶ್ವತವಾಗಿ ಇರ್ತಾನೆ. 36  ಹಾಗಾಗಿ ಮಗ ಬಿಡುಗಡೆ ಮಾಡಿದ್ರೆ ನಿಮಗೆ ನಿಜವಾಗ್ಲೂ ಬಿಡುಗಡೆ ಸಿಗುತ್ತೆ. 37  ನೀವು ಅಬ್ರಹಾಮನ ವಂಶದವರು ಅಂತ ನಂಗೊತ್ತು. ಆದ್ರೂ ನನ್ನನ್ನ ಕೊಲ್ಲೋಕೆ ನೋಡ್ತಾ ಇದ್ದೀರ. ಯಾಕಂದ್ರೆ ನಾನು ಕಲಿಸೋದನ್ನ ನಿಮ್ಮಿಂದ ಒಪ್ಕೊಳ್ಳೋಕಾಗ್ತಿಲ್ಲ. 38  ನಾನು ಅಪ್ಪನ ಹತ್ರ ಇದ್ದಾಗ ನೋಡಿದ ವಿಷ್ಯಗಳನ್ನೇ ಹೇಳ್ತಾ ಇದ್ದೀನಿ.+ ಆದ್ರೆ ನೀವು ನಿಮ್ಮ ಅಪ್ಪನಿಂದ ಕೇಳಿಸ್ಕೊಂಡ ವಿಷ್ಯಗಳನ್ನ ಮಾಡ್ತಿದ್ದೀರ” ಅಂದನು. 39  ಅದಕ್ಕವರು “ನಾವು ಅಬ್ರಹಾಮನ ಮಕ್ಕಳು”+ ಅಂದ್ರು. ಆಗ ಯೇಸು “ನೀವು ಅಬ್ರಹಾಮನ ಮಕ್ಕಳಾಗಿದ್ರೆ ಅಬ್ರಹಾಮ ಮಾಡಿದ ಕೆಲಸಗಳನ್ನೇ ಮಾಡ್ತಿದ್ರಿ. 40  ಆದ್ರೆ ನೀವೀಗ ನನ್ನನ್ನ ಕೊಲ್ಲೋಕೆ ನೋಡ್ತಿದ್ದೀರ. ಯಾಕಂದ್ರೆ ನಾನು ದೇವರಿಂದ ಕೇಳಿಸ್ಕೊಂಡ ಸತ್ಯ ಹೇಳ್ತಿದ್ದೀನಿ.+ ಅಬ್ರಹಾಮ ಇದ್ದಿದ್ರೆ ನಿಮ್ಮ ತರ ಮಾಡ್ತಾ ಇರ್ಲಿಲ್ಲ. 41  ನೀವು ನಿಮ್ಮ ಅಪ್ಪನ ತರಾನೇ ಮಾಡ್ತಿದ್ದೀರ” ಅಂದನು. ಆಗ ಅವರು “ನಾವು ಅಕ್ರಮ ಸಂಬಂಧದಿಂದ ಹುಟ್ಟಿಲ್ಲ. ನಮಗೆ ಒಬ್ಬನೇ ಅಪ್ಪ, ಆತನು ದೇವರೇ” ಅಂದ್ರು. 42  ಯೇಸು ಅವ್ರಿಗೆ “ದೇವರು ನಿಮ್ಮ ಅಪ್ಪ ಆಗಿದ್ರೆ ನನ್ನನ್ನ ಪ್ರೀತಿಸ್ತಿದ್ರಿ.+ ಯಾಕಂದ್ರೆ ನಾನು ಬಂದಿರೋದು ದೇವರಿಂದಾನೇ. ನಾನಿಲ್ಲಿ ಇರೋದು ದೇವರಿಂದಾನೇ. ನಾನೇ ಬರ್ಲಿಲ್ಲ, ಆತನೇ ನನ್ನನ್ನ ಕಳಿಸಿದನು.+ 43  ನಾನು ಕಲಿಸೋದನ್ನ ಒಪ್ಕೊಳ್ಳೋಕೆ ನಿಮಗಿಷ್ಟ ಇಲ್ಲ. ಅದಕ್ಕೇ ನನ್ನ ಮಾತು ನಿಮಗೆ ಅರ್ಥ ಆಗ್ತಿಲ್ಲ. 44  ನೀವು ಸೈತಾನನ ಮಕ್ಕಳು. ನಿಮ್ಮ ಅಪ್ಪನ ಇಷ್ಟಾನೇ ಮಾಡಬೇಕಂತ ಇದ್ದೀರ.+ ಮೊದಲಿನಿಂದಾನೇ ಅವನೊಬ್ಬ ಕೊಲೆಗಾರ.+ ಅವನು ಸತ್ಯ ಬಿಟ್ಟು ಹೋದ. ಯಾಕಂದ್ರೆ ಸತ್ಯ ಅವನಿಗಿಷ್ಟ ಇಲ್ಲ. ಅವನು ಸುಳ್ಳು ಹೇಳ್ತಾನೆ. ಯಾಕಂದ್ರೆ ಅವನ ಮನಸ್ಸು ತುಂಬ ಅದೇ ತುಂಬಿದೆ. ಅವನು ಸುಳ್ಳುಬುರುಕ. ಸುಳ್ಳನ್ನ ಹುಟ್ಟಿಸಿದವನೇ ಅವನು.+ 45  ಆದ್ರೆ ನಾನು ಸತ್ಯಾನೇ ಹೇಳ್ತೀನಿ. ಅದಕ್ಕೇ ನೀವು ನಂಬ್ತಿಲ್ಲ. 46  ನಾನು ಪಾಪ ಮಾಡಿದ್ದೀನಿ ಅಂತ ನಿಮ್ಮಿಂದ ಯಾರಿಗಾದ್ರೂ ತೋರಿಸ್ಕೊಡೋಕಾಗುತ್ತಾ? ಸತ್ಯ ಹೇಳ್ತಿದ್ರೂ ಯಾಕೆ ನನ್ನನ್ನ ನಂಬ್ತಿಲ್ಲ? 47  ದೇವರ ಕಡೆಯವರು ದೇವರ ಮಾತು ಕೇಳ್ತಾರೆ.+ ನೀವು ದೇವರ ಕಡೆಯವ್ರಲ್ಲ, ಅದಕ್ಕೇ ನನ್ನ ಮಾತು ಕೇಳ್ತಿಲ್ಲ”+ ಅಂದನು. 48  ಅದಕ್ಕೆ ಯೆಹೂದ್ಯರು “ನೀನು ಸಮಾರ್ಯದವನು,+ ನಿನಗೆ ಕೆಟ್ಟ ದೇವದೂತ ಹಿಡಿದಿದ್ದಾನೆ ಅಂತ ನಾವು ಹೇಳಿದ್ದು ಸರಿ ತಾನೇ?”+ ಅಂದ್ರು. 49  ಆಗ ಯೇಸು “ನಂಗೆ ಕೆಟ್ಟ ದೇವದೂತ ಹಿಡಿದಿಲ್ಲ, ನಾನು ನನ್ನ ಅಪ್ಪನಿಗೆ ಒಳ್ಳೇ ಹೆಸ್ರು ತರ್ತಿನಿ. ಆದ್ರೆ ನೀವು ನನ್ನನ್ನ ಅವಮಾನ ಮಾಡ್ತೀರ. 50  ಹೊಗಳಿಕೆ ಸಿಗಬೇಕಂತ ನಾನು ಆಸೆ ಪಡ್ತಾ ಇಲ್ಲ.+ ಆದ್ರೆ ನನಗೆ ಹೊಗಳಿಕೆ ಸಿಗಬೇಕು ಅನ್ನೋದು ದೇವರಾಸೆ. ಆತನೇ ನ್ಯಾಯತೀರ್ಪು ಮಾಡ್ತಾನೆ. 51  ನಿಜ ಹೇಳ್ತೀನಿ, ಯಾರಾದ್ರೂ ನನ್ನ ಮಾತಿನ ಪ್ರಕಾರ ನಡೆದ್ರೆ ಅವ್ರಿಗೆ ಸಾವೇ ಇರಲ್ಲ”+ ಅಂದನು. 52  ಅದಕ್ಕೆ ಯೆಹೂದ್ಯರು “ನಿನಗೆ ಕೆಟ್ಟ ದೇವದೂತ ಹಿಡಿದಿದ್ದಾನೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಬ್ರಹಾಮ ತೀರಿಹೋದ, ಪ್ರವಾದಿಗಳೂ ಸತ್ತುಹೋದ್ರು. ಆದ್ರೆ ‘ಯಾರಾದ್ರೂ ನನ್ನ ಮಾತಿನ ಪ್ರಕಾರ ನಡೆದ್ರೆ ಅವ್ರಿಗೆ ಸಾವೇ ಇರಲ್ಲ’ ಅಂತ ನೀನು ಹೇಳ್ತಿದ್ದೀಯ. 53  ನೀನು ನಮ್ಮ ಪೂರ್ವಜನಾದ ಅಬ್ರಹಾಮನಿಗಿಂತ ದೊಡ್ಡವನಾ? ಅಬ್ರಹಾಮ ತೀರಿಹೋದ. ಪ್ರವಾದಿಗಳೂ ಸತ್ತುಹೋದ್ರು. ಇಷ್ಟಕ್ಕೂ ನೀನ್ಯಾರು?” ಅಂತ ಕೇಳಿದ್ರು. 54  ಆಗ ಯೇಸು “ನನ್ನನ್ನ ನಾನೇ ಹೊಗಳ್ಕೊಂಡ್ರೆ ಅದಕ್ಕೆ ಅರ್ಥ ಇಲ್ಲ. ನನ್ನ ಅಪ್ಪ ನನ್ನನ್ನ ಹೊಗಳ್ತಾನೆ.+ ಆತನನ್ನೇ ನಿಮ್ಮ ದೇವರಂತ ಹೇಳ್ಕೊಳ್ತೀರ. 55  ಆದ್ರೆ ನಿಮಗೆ ಆತನ ಬಗ್ಗೆ ಗೊತ್ತೇ ಇಲ್ಲ.+ ಆದ್ರೆ ನಂಗೊತ್ತು.+ ಆತನ ಬಗ್ಗೆ ಗೊತ್ತಿಲ್ಲ ಅಂತ ನಾನೂ ಹೇಳಿದ್ರೆ ನಿಮ್ಮ ತರ ಸುಳ್ಳುಬುರುಕ ಆಗ್ತೀನಿ. ಆತನ ಬಗ್ಗೆ ನನಗೆ ಚೆನ್ನಾಗಿ ಗೊತ್ತು ಮತ್ತು ಆತನು ಹೇಳಿದ ಪ್ರಕಾರ ನಡಿತೀನಿ. 56  ನಿಮ್ಮ ಪೂರ್ವಜನಾದ ನಾನು ಯಾವಾಗ ಬರ್ತಿನಿ ಅಂತ ನೋಡೋಕೆ ಅಬ್ರಹಾಮ ಕಾಯ್ತಾ ಇದ್ದ ಮತ್ತು ನೋಡಿ ಖುಷಿಪಟ್ಟ”+ ಅಂದನು. 57  ಅದಕ್ಕೆ ಯೆಹೂದ್ಯರು “ನಿನಗಿನ್ನೂ 50 ವರ್ಷನೂ ಆಗಿಲ್ಲ. ನೀನು ಅಬ್ರಹಾಮನನ್ನ ನೋಡಿದ್ದೀಯಾ?” ಅಂತ ಕೇಳಿದ್ರು. 58  ಆಗ ಯೇಸು “ನಿಜ ಹೇಳ್ತೀನಿ, ಅಬ್ರಹಾಮ ಹುಟ್ಟೋದಕ್ಕಿಂತ ಮುಂಚೆನೇ ನಾನಿದ್ದೆ”+ ಅಂದನು. 59  ಆಗ ಅವರು ಆತನಿಗೆ ಹೊಡೆಯೋಕೆ ಕಲ್ಲುಗಳನ್ನ ಎತ್ಕೊಂಡ್ರು. ಆದ್ರೆ ಯೇಸು ಅಡಗಿಕೊಂಡು ದೇವಾಲಯದಿಂದ ಹೊರಗೆ ಹೋದನು.

ಪಾದಟಿಪ್ಪಣಿ