ಮಾಹಿತಿ ಇರುವಲ್ಲಿ ಹೋಗಲು

ಹರ್ಮಗೆದೋನ್‌ ಯುದ್ಧ ಅಂದರೇನು?

ಹರ್ಮಗೆದೋನ್‌ ಯುದ್ಧ ಅಂದರೇನು?

ಬೈಬಲ್‌ ಕೊಡುವ ಉತ್ತರ

 ಮಾನವ ಸರ್ಕಾರಗಳ ಮತ್ತು ದೇವರ ಮಧ್ಯೆ ನಡೆಯುವ ಕೊನೆಯ ಯುದ್ಧನೇ ಹರ್ಮಗೆದೋನ್‌ ಯುದ್ಧ. ಈ ಸರ್ಕಾರಗಳು ಮತ್ತು ಅವನ್ನು ಬೆಂಬಲಿಸುವವರು ದೇವರ ಆಳ್ವಿಕೆಗೆ ಅಧೀನರಾಗಲು ಒಪ್ಪದೆ ಈಗಲೂ ದೇವರನ್ನು ವಿರೋಧಿಸುತ್ತಿವೆ. (ಕೀರ್ತನೆ 2:2) ಮಾನವ ಆಳ್ವಿಕೆಗೆಲ್ಲ ಕೊನೆ ಹರ್ಮಗೆದೋನ್‌ ಯುದ್ಧದಲ್ಲಿ ಬರಲಿದೆ.—ದಾನಿಯೇಲ 2:44.

 ಹರ್ಮಗೆದೋನ್‌ ಪದ ಬೈಬಲಲ್ಲಿ ಒಂದೇ ಒಂದು ಸಲ ಇದೆ. ಅದು ಪ್ರಕಟನೆ 16:16 ರಲ್ಲಿದೆ. ಹರ್ಮಗೆದೋನ್‌ ಅನ್ನೋದು ಹೀಬ್ರು ಭಾಷೆಯ ಒಂದು ಹೆಸರು. ಹರ್ಮಗೆದೋನ್‌ ಎಂಬ ಜಾಗದಲ್ಲಿ ಭೂಮಿಯಲ್ಲಿರುವ ಎಲ್ಲ ರಾಜರು ‘ಸರ್ವಶಕ್ತ ದೇವರ ಮಹಾ ದಿನದಲ್ಲಿ ಆಗೋ ಯುದ್ಧಕ್ಕಾಗಿ ಒಟ್ಟು ಸೇರುತ್ತಾರೆ’ ಎಂದು ಬೈಬಲ್‌ ಮುಂಚೆನೇ ಹೇಳಿದೆ.—ಪ್ರಕಟನೆ 16:14.

 ಹರ್ಮಗೆದೋನ್‌ ಯಾರು ಯಾರಿಗೆ ಆಗುವ ಯುದ್ಧ? ಯೇಸು ಕ್ರಿಸ್ತನು ಸ್ವರ್ಗದಲ್ಲಿರುವ ಸೈನ್ಯದ ಜೊತೆಯಲ್ಲಿ ದೇವರ ಶತ್ರುಗಳ ವಿರುದ್ಧ ಯುದ್ಧ ಮಾಡಿ ಜಯಿಸುತ್ತಾನೆ. (ಪ್ರಕಟನೆ 19:11-16, 19-21) ದೇವರನ್ನು ದ್ವೇಷಿಸಿ ಆತನ ಅಧಿಕಾರವನ್ನು ವಿರೋಧಿಸುವವರು ದೇವರ ಶತ್ರುಗಳಾಗಿದ್ದಾರೆ.—ಯೆಹೆಜ್ಕೇಲ 39:7.

 ಹರ್ಮಗೆದೋನ್‌ ನಿಜವಾಗಲೂ ಮಧ್ಯ ಪೂರ್ವ ದೇಶಗಳಲ್ಲಿ ನಡೆಯುತ್ತಾ? ಇಲ್ಲ. ಇದು ಒಂದು ಜಾಗದಲ್ಲಿ ಮಾತ್ರ ನಡೆಯುವ ಯುದ್ಧವಲ್ಲ, ಇಡೀ ಭೂಮಿಯಲ್ಲಿ ನಡೆಯುವ ಯುದ್ಧ.—ಯೆರೆಮೀಯ 25:32-34; ಯೆಹೆಜ್ಕೇಲ 39:17-20.

 ಹರ್ಮಗೆದೋನ್‌ (ಹೀಬ್ರುನಲ್ಲಿ ಹರ್‌ ಮೆಗಿದೋನ್‌) ಪದವನ್ನು “ಅರ್ಮಗೆದ್ದೋನ್‌” ಎಂದು ಸಹ ಭಾಷಾಂತರ ಮಾಡಲಾಗುತ್ತದೆ. ಅದರ ಅರ್ಥ “ಮೆಗಿದ್ದೋ ಬೆಟ್ಟ.” ಹಿಂದಿನ ಕಾಲದ ಇಸ್ರಾಯೇಲಿನಲ್ಲಿ ಮೆಗಿದ್ದೋ ಎಂಬ ಒಂದು ನಗರ ಇತ್ತು. ಅದರ ಸುತ್ತಮುತ್ತ ಯುದ್ಧಗಳು ನಡೆಯುತ್ತಿದ್ದವೆಂದು ಇತಿಹಾಸ ಹೇಳುತ್ತದೆ. ಅವುಗಳಲ್ಲಿ ಕೆಲವು ಯುದ್ಧಗಳ ಬಗ್ಗೆ ಬೈಬಲಲ್ಲಿದೆ. (ನ್ಯಾಯಸ್ಥಾಪಕರು 5:19, 20; 2 ಅರಸು 9:27; 23:29) ಆದರೆ ಹರ್ಮಗೆದೋನ್‌ ಹಳೇ ಕಾಲದ ಮೆಗಿದ್ದೋ ಹತ್ತಿರ ಇದ್ದ ಸ್ಥಳವನ್ನು ಸೂಚಿಸುವುದಿಲ್ಲ. ಏಕೆಂದರೆ ಅಲ್ಲಿ ದೊಡ್ಡ ಬೆಟ್ಟ ಇಲ್ಲ. ಅದರ ಜೊತೆಗೆ ಪಕ್ಕದಲ್ಲಿರುವ ಇಜ್ರೇಲ್‌ ತಗ್ಗು ಪ್ರದೇಶವನ್ನು ಸೇರಿಸಿದರೂ ದೇವರ ಎಲ್ಲ ಶತ್ರುಗಳು ಸೇರಿ ಬರುವಷ್ಟು ಜಾಗ ಅಲ್ಲಿಲ್ಲ. ಹಾಗಾಗಿ ಹರ್ಮಗೆದೋನ್‌ ಅನ್ನೋದು ಇಡೀ ಲೋಕದ ಜನಾಂಗಗಳೆಲ್ಲ ದೇವರ ಆಳ್ವಿಕೆ ವಿರುದ್ಧ ಕೊನೆಯದಾಗಿ ನಿಲ್ಲುವ ಸನ್ನಿವೇಶವಾಗಿದೆ.

 ಹರ್ಮಗೆದೋನ್‌ ಯುದ್ಧದಲ್ಲಿ ಪರಿಸ್ಥಿತಿ ಹೇಗಿರುತ್ತದೆ? ದೇವರು ತನ್ನ ಶಕ್ತಿಯನ್ನು ಹೇಗೆ ಉಪಯೋಗಿಸುತ್ತಾನೆ ಎಂದು ನಮಗೆ ಗೊತ್ತಿಲ್ಲ. ಹಿಂದಿನ ಕಾಲದಲ್ಲಿ ಆತನು ಆಲಿಕಲ್ಲು, ಭೂಕಂಪ, ಧಾರಾಕಾರ ಮಳೆ, ಬೆಂಕಿ, ಗಂಧಕ, ಮಿಂಚು, ರೋಗಗಳನ್ನು ಆಯುಧಗಳಾಗಿ ಉಪಯೋಗಿಸಿದನು. ಹರ್ಮಗೆದೋನ್‌ ಯುದ್ಧದಲ್ಲೂ ಈ ಆಯುಧಗಳನ್ನು ಆತನು ಉಪಯೋಗಿಸಬಹುದು. (ಯೋಬ 38:22, 23; ಯೆಹೆಜ್ಕೇಲ 38:19, 22; ಹಬಕ್ಕೂಕ 3:10, 11; ಜೆಕರ್ಯ 14:12) ದೇವರ ಕೆಲವು ಶತ್ರುಗಳು ಗಲಿಬಿಲಿಗೊಂಡು ಒಬ್ಬರು ಇನ್ನೊಬ್ಬರನ್ನು ಸಾಯಿಸಬಹುದು. ಆದರೂ ತಮ್ಮ ವಿರುದ್ಧ ದೇವರೇ ಯುದ್ಧ ಮಾಡುತ್ತಿದ್ದಾನೆ ಎಂದು ಅವರಿಗೆ ಕೊನೆಯಲ್ಲಿ ಅರ್ಥ ಆಗುತ್ತೆ.—ಯೆಹೆಜ್ಕೇಲ 38:21, 23; ಜೆಕರ್ಯ 14:13.

 ಹರ್ಮಗೆದೋನ್‌ ಯುದ್ಧದಲ್ಲಿ ಈ ಲೋಕ ಅಂತ್ಯ ಆಗುತ್ತಾ? ಹರ್ಮಗೆದೋನ್‌ ಯುದ್ಧದಲ್ಲಿ ಈ ಭೂಮಿ ನಾಶ ಆಗಲ್ಲ. ಏಕೆಂದ್ರೆ ಈ ಭೂಮಿ ಶಾಶ್ವತಕ್ಕೂ ನಮಗೆ ಮನೆ. (ಯೆಹೆಜ್ಕೇಲ 38:21, 23; ಜೆಕರ್ಯ 14:13) ಹರ್ಮಗೆದೋನ್‌ ಯುದ್ಧ ಮನುಷ್ಯರನ್ನು ಕಾಪಾಡುತ್ತದೆ, ನಾಶಮಾಡಲ್ಲ. ಏಕೆಂದ್ರೆ ದೇವರ ಸೇವಕರ “ಒಂದು ದೊಡ್ಡ ಗುಂಪು” ಬದುಕಿ ಉಳಿಯುತ್ತದೆ.—ಪ್ರಕಟನೆ 7:9, 14; ಕೀರ್ತನೆ 37:34.

 ಬೈಬಲಲ್ಲಿ “ಲೋಕ” ಎಂಬ ಪದ ಕೆಲವು ಸಲ ಭೂಮಿಯನ್ನು ಮಾತ್ರವಲ್ಲ ದೇವರ ವಿರುದ್ಧ ಇರುವ ದುಷ್ಟ ಜನರನ್ನು ಸಹ ಸೂಚಿಸುತ್ತದೆ. (1 ಯೋಹಾನ 2:15-17) ಹರ್ಮಗೆದೋನ್‌ ಯುದ್ಧದಲ್ಲಿ ದುಷ್ಟ ಜನರನ್ನು ನಾಶ ಮಾಡಲಾಗುತ್ತದೆ. ಹಾಗಾಗಿನೇ ಆ ಯುದ್ಧದಲ್ಲಿ “ಲೋಕದ ಅಂತ್ಯ” ಆಗುತ್ತದೆ ಎಂದು ಹೇಳುತ್ತಾರೆ.—ಮತ್ತಾಯ 24:3.

 ಹರ್ಮಗೆದೋನ್‌ ಯುದ್ಧ ಯಾವಾಗ ನಡೆಯುತ್ತೆ? ‘ಮಹಾ ಸಂಕಟದ’ ಕೊನೆಯಲ್ಲಿ ಹರ್ಮಗೆದೋನ್‌ ಯುದ್ಧ ನಡೆಯುತ್ತದೆ ಎಂದು ಹೇಳುವಾಗ ಯೇಸು “ಆ ದಿನ ಮತ್ತು ಸಮಯ ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ. ತಂದೆಗೆ ಮಾತ್ರ ಗೊತ್ತು. ಸ್ವರ್ಗದಲ್ಲಿರೋ ದೇವದೂತರಿಗೂ ಗೊತ್ತಿಲ್ಲ, ಮಗನಿಗೂ ಗೊತ್ತಿಲ್ಲ” ಅಂದನು. (ಮತ್ತಾಯ 24:21, 36) ಯೇಸು ಮತ್ತೆ ಬರುವ ಸಮಯದಲ್ಲಿ ಹರ್ಮಗೆದೋನ್‌ ಯುದ್ಧ ನಡೆಯುತ್ತದೆ ಎಂದು ಬೈಬಲ್‌ ಹೇಳುತ್ತದೆ. ಆ ಸಮಯ 1914 ರಲ್ಲಿ ಆರಂಭವಾಯಿತು.—ಮತ್ತಾಯ 24:37-39.