ಮಾಹಿತಿ ಇರುವಲ್ಲಿ ಹೋಗಲು

ದೀಕ್ಷಾಸ್ನಾನ ಅಂದ್ರೇನು?

ದೀಕ್ಷಾಸ್ನಾನ ಅಂದ್ರೇನು?

ಬೈಬಲ್‌ ಕೊಡೋ ಉತ್ತರ

 ಒಬ್ಬ ವ್ಯಕ್ತಿಯನ್ನ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸಿ ಮೇಲೆ ಎಬ್ಬಿಸೋದೇ ದೀಕ್ಷಾಸ್ನಾನ ಅಥವಾ ಬ್ಯಾಪ್ಟಿಸಮ್‌. a ತುಂಬ ದೀಕ್ಷಾಸ್ನಾನಗಳ ಬಗ್ಗೆ ಬೈಬಲ್‌ನಲ್ಲಿದೆ. (ಅಪೊಸ್ತಲರ ಕಾರ್ಯ 2:41) ಅದರಲ್ಲಿ ಯೇಸುವಿನ ದೀಕ್ಷಾಸ್ನಾನ ಕೂಡ ಒಂದು. ಅವನಿಗೆ ಯೋರ್ದನ್‌ ನದಿಯಲ್ಲಿ ದೀಕ್ಷಾಸ್ನಾನ ಆಯ್ತು. (ಮತ್ತಾಯ 3:13, 16) ಕೆಲವು ವರ್ಷಗಳಾದ ಮೇಲೆ ಇಥಿಯೋಪ್ಯದ ಅಧಿಕಾರಿ ಪ್ರಯಾಣ ಮಾಡ್ತಿದ್ದಾಗ ‘ನೀರಿದ್ದ ಒಂದು ಜಾಗದಲ್ಲಿ’ ದೀಕ್ಷಾಸ್ನಾನ ತಗೊಂಡ.—ಅಪೊಸ್ತಲರ ಕಾರ್ಯ 8:36-40.

 ತನ್ನ ಶಿಷ್ಯರಾಗಬೇಕಂದ್ರೆ ದೀಕ್ಷಾಸ್ನಾನ ತಗೋಬೇಕು ಅಂತ ಯೇಸು ಕಲಿಸಿದನು. (ಮತ್ತಾಯ 28:19, 20) ಅಪೊಸ್ತಲ ಪೇತ್ರನೂ ಅದನ್ನೇ ಕಲಿಸಿದ.—1 ಪೇತ್ರ 3:21.

ಈ ಲೇಖನದಲ್ಲಿ

 ದೀಕ್ಷಾಸ್ನಾನ ಅಂದರೇನು?

 ಒಬ್ಬ ವ್ಯಕ್ತಿ ತಾನು ಮಾಡಿರೋ ಪಾಪಕ್ಕೆ ಕ್ಷಮೆ ಕೇಳಿ, ಇನ್ನು ಮುಂದೆ ದೇವರ ಇಷ್ಟದ ಪ್ರಕಾರ ಜೀವನ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ ಅಂತ ತೋರಿಸೋಕೆ ಎಲ್ಲರ ಮುಂದೆ ಬಹಿರಂಗವಾಗಿ ಮಾಡೋ ಕ್ರಿಯೆನೇ ದೀಕ್ಷಾಸ್ನಾನ. ದೀಕ್ಷಾಸ್ನಾನ ಪಡ್ಕೊಂಡಿರುವವರು ಜೀವನ ಪೂರ್ತಿ ದೇವರು ಮತ್ತು ಯೇಸು ಹೇಳೋ ಮಾತುಗಳನ್ನ ಕೇಳಬೇಕು ಮತ್ತು ಶಾಶ್ವತವಾಗಿ ಜೀವಿಸಬೇಕಂದ್ರೆ ದೇವರು ಇಷ್ಟಪಡೋ ರೀತಿಯಲ್ಲಿ ಬದುಕಬೇಕು.

 ಒಬ್ಬ ವ್ಯಕ್ತಿ ದೀಕ್ಷಾಸ್ನಾನ ತಗೊಂಡಿದ್ದಾನೆ ಅಂದ್ರೆ ಅವನು ಬದಲಾಗಿದ್ದಾನೆ ಅಂತರ್ಥ. ಅದನ್ನ ಹೇಗೆ ಹೇಳಬಹುದು? ಬೈಬಲ್‌ ದೀಕ್ಷಾಸ್ನಾನವನ್ನ ಸಮಾಧಿಗೆ ಹೋಲಿಸುತ್ತೆ. (ರೋಮನ್ನರಿಗೆ 6:4; ಕೊಲೊಸ್ಸೆ 2:12) ಒಬ್ಬ ವ್ಯಕ್ತಿ ನೀರಲ್ಲಿ ಮುಳುಗುವಾಗ ಹಳೇ ವ್ಯಕ್ತಿತ್ವವನ್ನ ಸಾಯಿಸಿ ನೀರಿಂದ ಮೇಲೆ ಬರುವಾಗ ಹೊಸ ವ್ಯಕ್ತಿತ್ವವನ್ನ ಹಾಕೊಂಡು ಬರ್ತಾನೆ ಅಂತ ದೀಕ್ಷಾಸ್ನಾನ ಸೂಚಿಸುತ್ತೆ.

 ಜ್ಞಾನಸ್ನಾನ ಅಥವಾ ಶಿಶುಗಳ ದೀಕ್ಷಾಸ್ನಾನದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಜ್ಞಾನಸ್ನಾನ b ಅಥವಾ ಶಿಶುಗಳ ದೀಕ್ಷಾಸ್ನಾನ ಅನ್ನೋ ಪದನೇ ಬೈಬಲ್‌ನಲ್ಲಿಲ್ಲ. ಶಿಶುಗಳು ದೀಕ್ಷಾಸ್ನಾನ ತಗೋಬೇಕು ಅಂತನೂ ಬೈಬಲ್‌ ಕಲಿಸಲ್ಲ.

 ಒಬ್ಬ ವ್ಯಕ್ತಿ ದೀಕ್ಷಾಸ್ನಾನ ತಗೊಬೇಕಾದ್ರೆ ಕೆಲವೊಂದು ವಿಷಯಗಳನ್ನ ಅವನು ಮಾಡಬೇಕಾಗುತ್ತೆ. ಉದಾಹರಣೆಗೆ ದೇವರ ವಾಕ್ಯದಲ್ಲಿರೋ ಸರಳವಾದ ವಿಷಯಗಳನ್ನ ತಿಳ್ಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಜೀವನ ಮಾಡಬೇಕು. ಅಷ್ಟೇ ಅಲ್ಲ ಅವನು ಮಾಡಿರೋ ತಪ್ಪುಗಳಿಗೆ ಕ್ಷಮೆ ಕೇಳಿರಬೇಕು, ಪ್ರಾರ್ಥನೆಯಲ್ಲಿ ದೇವರಿಗೆ ತನ್ನ ಜೀವನವನ್ನ ಸಮರ್ಪಣೆ ಮಾಡಿರಬೇಕು. (ಅಪೊಸ್ತಲರ ಕಾರ್ಯ 2:38, 41; 8:12) ಚಿಕ್ಕ ಮಕ್ಕಳಿಗೆ ಅಥವಾ ಶಿಶುಗಳಿಗೆ ಇದ್ಯಾವುದನ್ನೂ ಮಾಡೋಕೆ ಆಗಲ್ಲ.

 ತಂದೆ, ಮಗ ಮತ್ತು ಪವಿತ್ರಶಕ್ತಿಯ ಹೆಸ್ರಲ್ಲಿ ದೀಕ್ಷಾಸ್ನಾನ ತಗೊಳ್ಳೋದ್ರ ಅರ್ಥವೇನು?

 ಯೇಸು ತನ್ನ ಹಿಂಬಾಲಕರಿಗೆ “ಜನ್ರಿಗೆ ನನ್ನ ಶಿಷ್ಯರಾಗೋದು ಹೇಗೆ ಅಂತ ಕಲಿಸಿ. ಅವ್ರಿಗೆ ತಂದೆ ಹೆಸ್ರಲ್ಲಿ, ಮಗನ ಹೆಸ್ರಲ್ಲಿ ಮತ್ತು ಪವಿತ್ರಶಕ್ತಿಯ ಹೆಸ್ರಲ್ಲಿ ದೀಕ್ಷಾಸ್ನಾನ ಮಾಡಿಸಿ. ನಾನು ನಿಮಗೆ ಹೇಳಿಕೊಟ್ಟ ಎಲ್ಲ ವಿಷ್ಯಗಳ ಪ್ರಕಾರ ನಡಿಯೋಕೆ ಅವ್ರಿಗೆ ಕಲಿಸಿ” ಅಂತ ಹೇಳಿದ. (ಮತ್ತಾಯ 28:19, 20) “ಹೆಸ್ರಲ್ಲಿ” ಅಂದ್ರೆ ದೀಕ್ಷಾಸ್ನಾನ ತಗೊಳ್ಳೋ ವ್ಯಕ್ತಿ ತಂದೆ ಮತ್ತು ಮಗನಿಗಿರೋ ಅಧಿಕಾರ ಏನು ಅಂತ ಅರ್ಥಮಾಡಿಕೊಳ್ತಾನೆ ಮತ್ತು ಪವಿತ್ರಶಕ್ತಿಯ ಕೆಲಸವೇನು ಅಂತನೂ ಅರ್ಥಮಾಡಿಕೊಳ್ತಾನೆ. ಉದಾಹರಣೆಗೆ ಅಪೊಸ್ತಲ ಪೇತ್ರ ಹುಟ್ಟಿದಾಗಿಂದನೇ ಕುಂಟನಾಗಿದ್ದ ಒಬ್ಬನಿಗೆ “ನಜರೇತಿನ ಯೇಸು ಕ್ರಿಸ್ತನ ಹೆಸ್ರಲ್ಲಿ ಹೇಳ್ತೀನಿ, ಎದ್ದು ನಡಿ!”ಅಂತ ಹೇಳ್ದ. (ಅಪೊಸ್ತಲರ ಕಾರ್ಯ 3:6) ಈ ರೀತಿಯಲ್ಲಿ ವಾಸಿಮಾಡೋ ಮೂಲಕ ಯೇಸುಗಿದ್ದ ಅಧಿಕಾರವನ್ನ ತಾನು ಅರ್ಥಮಾಡಿಕೊಂಡಿದ್ದೀನಿ ಅಂತ ಪೇತ್ರ ತೋರಿಸಿಕೊಟ್ಟ.

  •   “ತಂದೆ” ಅಂದ್ರೆ ಯೆಹೋವ c ದೇವರು. ಸೃಷ್ಟಿಕರ್ತನಾಗಿರೋ, ಜೀವಕೊಟ್ಟಿರೋ, ಸರ್ವಶಕ್ತ ದೇವರಾಗಿರೋ ಯೆಹೋವನಿಗೆ ಎಲ್ಲದರ ಮೇಲೆ ಪೂರ್ತಿ ಅಧಿಕಾರವಿದೆ.—ಆದಿಕಾಂಡ 17:1; ಪ್ರಕಟನೆ 4:11.

  •   “ಮಗ” ಅಂದ್ರೆ ನಮಗೋಸ್ಕರ ಜೀವಕೊಟ್ಟ ಯೇಸು ಕ್ರಿಸ್ತ. (ರೋಮನ್ನರಿಗೆ 6:23) ಮನುಷ್ಯರಿಗೋಸ್ಕರ ದೇವರ ಉದ್ದೇಶವೇನು ಮತ್ತು ಅದ್ರಲ್ಲಿ ಯೇಸುವಿನ ಪಾತ್ರ ಏನು ಅಂತ ತಿಳ್ಕೊಂಡು ಗಣ್ಯತೆ ತೋರಿಸಿದ್ರೆ ಮಾತ್ರ ನಮಗೆ ರಕ್ಷಣೆ ಸಿಗುತ್ತೆ.—ಯೋಹಾನ 14:6; 20:31; ಅಪೊಸ್ತಲರ ಕಾರ್ಯ 4:8-12.

  •   “ಪವಿತ್ರಶಕ್ತಿ” ಅನ್ನೋದು ದೇವರು ತನ್ನ ಕೆಲಸವನ್ನ ಮಾಡೋಕೆ ಬಳಸೋ ಶಕ್ತಿ. d ದೇವರು ಈ ಪವಿತ್ರಶಕ್ತಿಯನ್ನ ಸೃಷ್ಟಿ ಮಾಡೋಕೆ, ಜೀವ ಕೊಡೋಕೆ ಬಳಸಿದ್ದಾನೆ. ಅಷ್ಟೇ ಅಲ್ಲ ಪ್ರವಾದಿಗಳಿಗೆ ಮತ್ತು ಬೇರೆಯವರಿಗೆ ಸಂದೇಶ ಕಳಿಸೋಕೆ ಹಾಗೂ ತನ್ನ ಇಷ್ಟ ಮಾಡೋಕೆ ಅವರಿಗೆ ಬೇಕಾದ ಶಕ್ತಿ ಕೊಡೋಕೆ ಬಳಸಿದ್ದಾನೆ. (ಆದಿಕಾಂಡ 1:2; ಯೋಬ 33:4; ರೋಮನ್ನರಿಗೆ 15:18, 19) ಬೈಬಲ್‌ ಬರೆದವರಿಗೂ ಪವಿತ್ರಶಕ್ತಿ ಕೊಟ್ಟು ಸಹಾಯ ಮಾಡಿದ್ದಾನೆ.—2 ಪೇತ್ರ 1:21.

 ಪುನಃ ದೀಕ್ಷಾಸ್ನಾನ ತಗೊಳ್ಳೋದು ಪಾಪನಾ?

 ಅನೇಕರು ತಮ್ಮ ಧರ್ಮವನ್ನು ಬದಲಾಯಿಸ್ತಾರೆ. ಅವರು ಯಾವುದಾದರೂ ಚರ್ಚ್‌ನಲ್ಲಿ ಈಗಾಗಲೇ ದೀಕ್ಷಾಸ್ನಾನ ತಗೊಂಡಿರೋದಾದರೆ ಪುನಃ ದೀಕ್ಷಾಸ್ನಾನ ತಗೊಳ್ಳೋದು ಪಾಪನಾ? ಎಫೆಸ 4:5ರ ಪ್ರಕಾರ ಅದು ಪಾಪ ಅಂತ ಕೆಲವರು ಹೇಳ್ತಾರೆ. ಆ ವಚನದಲ್ಲಿ ಹೀಗಿದೆ: “ಒಬ್ಬನೇ ಪ್ರಭು, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ.” ಆದರೆ ಈ ವಚನದ ಅರ್ಥ ಒಬ್ಬ ವ್ಯಕ್ತಿ ಪುನಃ ದೀಕ್ಷಾಸ್ನಾನ ತಗೊಳ್ಳಬಾರದು ಅಂತಲ್ಲ. ಅದು ಹೇಗೆ?

 ಸಂದರ್ಭ. ನಿಜ ಕ್ರೈಸ್ತರಿಗೆ ಒಂದೇ ನಂಬಿಕೆ ಇರಬೇಕು ಅಂತ ಅಪೊಸ್ತಲ ಪೌಲ ಎಫೆಸ 4:5ರಲ್ಲಿ ಹೇಳ್ತಿದ್ದಾನೆ. (ಎಫೆಸ 4:1-3, 16) ಅವರು ಈ ತರ ಒಂದಾಗಿರಬೇಕಂದ್ರೆ ಒಬ್ಬನೇ ಪ್ರಭುವಾಗಿರೋ ಯೇಸುವನ್ನ ಹಿಂಬಾಲಿಸುವವರಾಗಿರಬೇಕು, ಅವರಿಗೆ ಒಂದೇ ನಂಬಿಕೆ ಇರಬೇಕು ಮತ್ತು ಅವರು ಬೈಬಲಲ್ಲಿರೋದನ್ನ ಒಂದೇ ತರ ಅರ್ಥಮಾಡ್ಕೊಂಡಿರಬೇಕು, ಅಷ್ಟೇ ಅಲ್ಲ ದೀಕ್ಷಾಸ್ನಾನ ತಗೊಳ್ಳೋಕೆ ಏನೆಲ್ಲ ಮಾಡಬೇಕು ಅಂತ ಬೈಬಲ್‌ ಹೇಳುತ್ತೋ ಅದನ್ನೆಲ್ಲ ಮಾಡಬೇಕು.

 ಈಗಾಗಲೇ ದೀಕ್ಷಾಸ್ನಾನ ಪಡ್ಕೊಂಡಿರೋರು ಮತ್ತೆ ದೀಕ್ಷಾಸ್ನಾನ ಪಡ್ಕೊಬೇಕು ಅಂತ ಅಪೊಸ್ತಲ ಪೌಲ ಹೇಳಿದ. ಯಾಕಂದ್ರೆ ಅವರು ಕ್ರೈಸ್ತ ಬೋಧನೆಗಳನ್ನ ಸರಿಯಾಗಿ ಅರ್ಥಮಾಡ್ಕೊಳ್ಳದೆ ದೀಕ್ಷಾಸ್ನಾನ ತಗೊಂಡಿದ್ರು.—ಅಪೊಸ್ತಲರ ಕಾರ್ಯ 19:1-5.

 ಸರಿಯಾದ ದೀಕ್ಷಾಸ್ನಾನಕ್ಕೆ ಆಧಾರ. ಬೈಬಲ್‌ ಸತ್ಯಗಳ ಬಗ್ಗೆ ಸರಿಯಾದ ಜ್ಞಾನ ಪಡ್ಕೊಂಡು ಅದರ ಆಧಾರದ ಮೇಲೆ ದೀಕ್ಷಾಸ್ನಾನ ತೆಗೊಂಡ್ರೆ ಮಾತ್ರ ದೇವರು ಮೆಚ್ತಾರೆ. (1 ತಿಮೊತಿ 2:3, 4) ಬೈಬಲಿಗೆ ವಿರದ್ಧವಾಗಿರೋ ಧಾರ್ಮಿಕ ಬೋಧನೆಗಳನ್ನ ಆಧರಿಸಿ ಒಬ್ಬ ವ್ಯಕ್ತಿ ದೀಕ್ಷಾಸ್ನಾನ ತಗೊಂಡ್ರೆ ದೇವರು ಮೆಚ್ಚಲ್ಲ. (ಯೋಹಾನ 4:23, 24) ಹೀಗೆ ಒಬ್ಬ ವ್ಯಕ್ತಿ ಒಳ್ಳೇ ಉದ್ದೇಶದಿಂದ ದೀಕ್ಷಾಸ್ನಾನ ಪಡ್ಕೊಂಡಿದ್ರು ಅವನು ‘ದೇವರ ಇಷ್ಟ ಏನಂತ ನಿಜವಾಗ್ಲೂ ಅರ್ಥ ಮಾಡ್ಕೊಂಡಿರಲ್ಲ.’ (ರೋಮನ್ನರಿಗೆ 10:2) ಅವನನ್ನ ದೇವರು ಮೆಚ್ಕೋಬೇಕಾದ್ರೆ ಮೊದ್ಲು ಅವ್ನು ಬೈಬಲ್‌ ಸತ್ಯಗಳನ್ನು ಕಲಿಬೇಕು, ಅದನ್ನ ಪಾಲಿಸಬೇಕು, ದೇವರಿಗೆ ತನ್ನನ್ನೇ ಸಮರ್ಪಿಸಿಕೊಳ್ಳಬೇಕು ಮತ್ತೆ ಪುನಃ ದೀಕ್ಷಾಸ್ನಾನ ತಗೋಬೇಕು. ಈ ತರ ದೀಕ್ಷಾಸ್ನಾನ ತೊಗೊಳೋದು ಪಾಪ ಆಗಿರಲ್ಲ ಆ ವ್ಯಕ್ತಿ ಸರಿಯಾಗಿರೋದನ್ನೇ ಮಾಡ್ತಿದ್ದಾನೆ. ದೇವರು ಅದನ್ನು ಮೆಚ್ಕೊಳ್ತಾನೆ.

 ಬೈಬಲ್‌ನಲ್ಲಿರೋ ಬೇರೆ ದೀಕ್ಷಾಸ್ನಾನಗಳು

 ಕ್ರಿಸ್ತನ ಹಿಂಬಾಲಕರು ಮಾಡ್ತಿದ್ದ ದೀಕ್ಷಾಸ್ನಾನಕ್ಕೆ ಭಿನ್ನವಾಗಿರೋ ಬೇರೆ ದೀಕ್ಷಾಸ್ನಾನಗಳ ಬಗ್ಗೆನೂ ಬೈಬಲ್‌ ಹೇಳುತ್ತೆ. ಅದಕ್ಕೆ ಕೆಲವು ಉದಾಹರಣೆಗಳನ್ನ ನೋಡೋಣ.

 ಸ್ನಾನಿಕ ಯೋಹಾನ e ಮಾಡಿದ ದೀಕ್ಷಾಸ್ನಾನ. ಯೆಹೂದ್ಯರು ಮತ್ತು ಯೆಹೂದಿ ಧರ್ಮಕ್ಕೆ ಸೇರಿಕೊಂಡವರು ಯೋಹಾನನಿಂದ ದೀಕ್ಷಾಸ್ನಾನ ಪಡ್ಕೊಂಡ್ರು. ಇದ್ರಿಂದ ಮೋಶೆ ನಿಯಮ ಪುಸ್ತಕದ ವಿರುದ್ಧ ಪಾಪ ಮಾಡಿದ್ರೆ ಕ್ಷಮೆ ಸಿಕ್ತಿತ್ತು. ಯೋಹಾನ ಮಾಡಿಸಿದ ದೀಕ್ಷಾಸ್ನಾನ ಮೆಸ್ಸಿಯನನ್ನ ಕಂಡುಹಿಡಿಯೋಕೆ ಮತ್ತು ಆತನನ್ನ ಸ್ವೀಕರಿಸೋಕೆ ಜನರಿಗೆ ಸಹಾಯ ಮಾಡ್ತು.—ಲೂಕ 1:13-17; 3:2, 3; ಅಪೊಸ್ತಲರ ಕಾರ್ಯ 19:4.

 ಯೇಸುವಿನ ದೀಕ್ಷಾಸ್ನಾನ. ಯೇಸುವಿನ ದೀಕ್ಷಾಸ್ನಾನ ಬೇರೆ ದೀಕ್ಷಾಸ್ನಾನಗಳಿಗಿಂತ ತುಂಬಾ ವಿಶೇಷವಾಗಿತ್ತು. ಯಾಕಂದ್ರೆ ಯೇಸು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿದ್ದ ಮತ್ತು ಅವನು ಯಾವ ತಪ್ಪು ಮಾಡಿರಲಿಲ್ಲ. (1 ಪೇತ್ರ 2:21, 22) ಇದ್ರಿಂದ ಅವನು ಪಾಪಗಳಿಗೆ ಕ್ಷಮೆ ಕೇಳೋ ಅವಶ್ಯಕತೆ ಇರ್ಲಿಲ್ಲ ಅಥವಾ ‘ಶುದ್ಧ ಮನಸಾಕ್ಷಿ ಕೊಡು ಅಂತ ದೇವರ ಹತ್ರ ಬೇಡ್ಕೊಳ್ಳೋದ್ರ’ ಅವಶ್ಯಕತೆನೂ ಇರ್ಲಿಲ್ಲ. (1 ಪೇತ್ರ 3:21) ಹಾಗಾದ್ರೆ ಆತನು ಯಾಕೆ ದೀಕ್ಷಾಸ್ನಾನ ತಗೊಂಡ? ದೇವರ ಇಷ್ಟಾನಾ ಸರಿಯಾಗಿ ಮಾಡೋಕೆ ಮತ್ತು ಕ್ರಿಸ್ತನಾಗಿ, ಮೆಸ್ಸೀಯನಾಗಿ ತನಗೆ ಸಿಕ್ಕಿರೋ ಜವಾಬ್ದಾರಿಯನ್ನ ಚೆನ್ನಾಗಿ ಮಾಡ್ತೀನಿ ಅಂತ ತೋರಿಸೋಕೆ ಯೇಸು ದೀಕ್ಷಾಸ್ನಾನ ತಗೊಂಡ. ಇದರಲ್ಲಿ ತನ್ನ ಜೀವವನ್ನ ಧಾರೆ ಎರೆಯೋದು ಸೇರಿತ್ತು.—ಇಬ್ರಿಯ 10:7-10.

 ಪ್ರವಿತ್ರಶಕ್ತಿಯಿಂದ ದೀಕ್ಷಾಸ್ನಾನ. ಸ್ನಾನಿಕ ಯೋಹಾನ ಮತ್ತು ಯೇಸು ಪ್ರವಿತ್ರಶಕ್ತಿಯಿಂದ ದೀಕ್ಷಾಸ್ನಾನ ತಗೊಳ್ಳೋದ್ರ ಬಗ್ಗೆ ಹೇಳಿದ್ದಾರೆ. (ಮತ್ತಾಯ 3:11; ಲೂಕ 3:16; ಅಪೊಸ್ತಲರ ಕಾರ್ಯ 1:1-5) ಆದರೆ ಅದು ಪವಿತ್ರಶಕ್ತಿಯ ಹೆಸ್ರಲ್ಲಿ ದೀಕ್ಷಾಸ್ನಾನ ತಗೊಳೋದ್ರ ಬಗ್ಗೆ ಹೇಳ್ತಾ ಇಲ್ಲ. (ಮತ್ತಾಯ 28:19) ಯಾಕೆ?

 ಯೇಸುವಿನ ಕೆಲವು ಹಿಂಬಾಲಕರು ಮಾತ್ರ ಪವಿತ್ರಶಕ್ತಿಯಿಂದ ದೀಕ್ಷಾಸ್ನಾನ ಪಡಕೊಂಡಿದ್ದಾರೆ. ಇವ್ರಿಗೆ ಪವಿತ್ರಶಕ್ತಿಯಿಂದ ಅಭಿಷೇಕವಾಗಿದೆ. ಯಾಕಂದ್ರೆ ಇವರನ್ನ ಕ್ರಿಸ್ತನ ಜೊತೆ ರಾಜರಾಗಿ ಮತ್ತು ಪುರೋಹಿತರಾಗಿ ಭೂಮಿ ಮೇಲೆ ಆಳ್ವಿಕೆ ಮಾಡೋಕೆ ಆಯ್ಕೆ ಮಾಡಲಾಗಿದೆ. f (1 ಪೇತ್ರ 1:3, 4; ಪ್ರಕಟನೆ 5:9, 10) ಇವ್ರು ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇರೋ ಲಕ್ಷಗಟ್ಟಲೆ ಯೇಸುವಿನ ಹಿಂಬಾಲಕರ ಮೇಲೆ ಆಳ್ವಿಕೆ ಮಾಡ್ತಾರೆ.—ಮತ್ತಾಯ 5:5; ಲೂಕ 23:43.

 ಯೇಸು ಜೊತೆ ಒಂದಾಗಿರೋಕೆ ಮತ್ತು ಆತನ ಸಾವಿನಲ್ಲಿ ಪಾಲುಗಾರರಾಗೋಕೆ ದೀಕ್ಷಾಸ್ನಾನ. ಪವಿತ್ರಶಕ್ತಿಯಿಂದ ದೀಕ್ಷಾಸ್ನಾನ ಪಡ್ಕೊಂಡಿರೋರು ‘ಯೇಸು ಜೊತೆ ಒಂದಾಗಿ ಇರೋಕೂ’ ದೀಕ್ಷಾಸ್ನಾನ ಪಡ್ಕೊಂಡಿದ್ದಾರೆ. (ರೋಮನ್ನರಿಗೆ 6:3) ಸ್ವರ್ಗದಲ್ಲಿ ಯೇಸು ಜೊತೆ ಆಳ್ವಿಕೆ ಮಾಡೋ ಅಭಿಷಿಕ್ತ ಕ್ರೈಸ್ತರು ಈ ದೀಕ್ಷಾಸ್ನಾನ ತಗೊಳ್ತಾರೆ. ಯೇಸು ಜೊತೆ ಒಂದಾಗಿರೋಕೆ ದೀಕ್ಷಸ್ನಾನ ಪಡ್ಕೊಂಡಾಗ ಅವರು ಅಭಿಷಿಕ್ತ ಸಭೆಯ ಸದಸ್ಯರಾಗ್ತಾರೆ. ಯೇಸು ಸಭೆಯ ತಲೆಯಾಗಿರುತ್ತಾನೆ ಇವರು ಅದರ ದೇಹವಾಗಿರುತ್ತಾರೆ.—1 ಕೊರಿಂಥ 12:12, 13, 27; ಕೊಲೊಸ್ಸೆ 1:18.

 ಅಭಿಷಿಕ್ತ ಕ್ರೈಸ್ತರು ಯೇಸುವಿನ ‘ಸಾವಿನಲ್ಲೂ ಪಾಲುಗಾರರು ಆಗೋಕೆ ದೀಕ್ಷಾಸ್ನಾನ’ ಪಡ್ಕೊಳ್ತಾರೆ. (ರೋಮನ್ನರಿಗೆ 6:3, 4) ಈ ಭೂಮಿಯಲ್ಲಿ ಅವರು ಶಾಶ್ವತವಾಗಿ ಜೀವಿಸಲ್ಲ ಅಂತ ಗೊತ್ತಿದ್ರೂ ಅವ್ರಿಗೆ ಇಷ್ಟ ಬಂದಂತೆ ಜೀವನ ಮಾಡ್ದೆ ಯೇಸು ತರ ಯೆಹೋವನಿಗೆ ಏನಿಷ್ಟ ಆಗುತ್ತೋ ಅದನ್ನೇ ಮಾಡ್ತಾರೆ. ಇವರು ಸತ್ತ ಮೇಲೆ ಇವರಿಗೆ ಅದೃಶ್ಯ ದೇಹವನ್ನು ಕೊಟ್ಟು ಮತ್ತೆ ಎಬ್ಬಿಸಲಾಗುತ್ತೆ. ಆಗ ಈ ದೀಕ್ಷಾಸ್ನಾನ ಸಾಂಕೇತಿಕವಾಗಿ ಪೂರ್ಣಗೊಳ್ಳುತ್ತೆ.—ರೋಮನ್ನರಿಗೆ 6:5; 1 ಕೊರಿಂಥ 15:42-44.

 ಬೆಂಕಿಯಿಂದ ದೀಕ್ಷಾಸ್ನಾನ. ಸ್ನಾನಿಕ ಯೋಹಾನ ಹೀಗೆ ಹೇಳಿದ: “ಆತನು ನಿಮಗೆ ಪವಿತ್ರಶಕ್ತಿ ಮತ್ತು ಬೆಂಕಿಯಿಂದ ದೀಕ್ಷಾಸ್ನಾನ ಮಾಡಿಸ್ತಾನೆ. ಆತನ ಕೈಯಲ್ಲಿ ಮೊರ ಇದೆ. ಆತನು ಧಾನ್ಯದ ರಾಶಿ ತೂರಿ ಕಣವನ್ನ ಪೂರ್ತಿ ಸ್ವಚ್ಛ ಮಾಡಿ ಗೋದಿನ ಕಣಜಕ್ಕೆ ತುಂಬ್ತಾನೆ. ಉಳಿದಿರೋ ಹೊಟ್ಟನ್ನ ಆರಿಸೋಕೆ ಆಗದ ಬೆಂಕಿಯಲ್ಲಿ ಹಾಕಿ ಸುಟ್ಟುಬಿಡ್ತಾನೆ ಅಂದ.” (ಮತ್ತಾಯ 3:11, 12) ಬೆಂಕಿಯಿಂದ ದೀಕ್ಷಾಸ್ನಾನಕ್ಕೂ ಪವಿತ್ರಶಕ್ತಿಯಿಂದ ದೀಕ್ಷಾಸ್ನಾನಕ್ಕೂ ವ್ಯತ್ಯಾಸ ಇದೆ. ಯೋಹಾನ ಹೇಳಿದ ಈ ಉದಾಹರಣೆಯ ಅರ್ಥ ಏನು?

 ಯೇಸುವಿನ ಮಾತು ಕೇಳಿ ಅದರ ಪ್ರಕಾರ ಜೀವನ ಮಾಡೋರು ಗೋಧಿಯನ್ನ ಸೂಚಿಸುತ್ತಾರೆ. ಇವರು ಪವಿತ್ರಶಕ್ತಿಯಿಂದ ದೀಕ್ಷಾಸ್ನಾನ ಪಡಕೊಳ್ಳುತ್ತಾರೆ ಯೇಸು ಮಾತನ್ನು ಕೇಳದೇ ಇರೋರು ಹೊಟ್ಟನ್ನ ಸೂಚಿಸುತ್ತಾರೆ. ಅವರಿಗೆ ಬೆಂಕಿಯಿಂದ ದೀಕ್ಷಾಸ್ನಾನ ಆಗುತ್ತೆ.—ಮತ್ತಾಯ 3:7-12; ಲೂಕ 3:16, 17.

a “ದೀಕ್ಷಾಸ್ನಾನ” ಅಂತ ಭಾಷಾಂತರ ಆಗಿರೋ ಗ್ರೀಕ್‌ ಪದದ ಅರ್ಥ “ನೀರಿನಲ್ಲಿ ಪೂರ್ತಿ ಮುಳುಗಿ ಮೇಲೆ ಎದ್ದೇಳೋದು” ಅಂತ ವೈನ್ಸ್‌ ಕಂಪ್ಲೀಟ್‌ ಎಕ್ಸ್ಪೋಸಿಟರಿ ಡಿಕ್ಷನರಿ ಆಫ್‌ ಓಲ್ಡ್‌ ಆ್ಯಂಡ್‌ ನ್ಯೂ ಟೆಸ್ಟ್‌ಮೆಂಟ್‌ ವರ್ಡ್ಸ್‌ ಹೇಳುತ್ತೆ.

b “ಜ್ಞಾನಸ್ನಾನ” ಅನ್ನೋದು ಚರ್ಚ್‌ಗಳಲ್ಲಿ ನಡೆಯೋ ಒಂದು ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲಿ ಶಿಶುಗಳಿಗೆ ಹೆಸರಿಟ್ಟು, ತಲೆ ಮೇಲೆ ನೀರು ಚಿಮುಕಿಸಿ ಅಥವಾ ಸುರಿದು “ದೀಕ್ಷಾಸ್ನಾನ” ಮಾಡಿಸ್ತಾರೆ.

c ಯೆಹೋವ ಅನ್ನೋದು ದೇವರ ಹೆಸರು. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನ ನೋಡಿ.

dಪವಿತ್ರಾತ್ಮ ಅಂದ್ರೇನು?” ಅನ್ನೋ ಲೇಖನ ನೋಡಿ.

g ಬೈಬಲ್‌ನಲ್ಲಿ “ದೀಕ್ಷಾಸ್ನಾನಗಳು” ಅನ್ನೋ ಪದವನ್ನ ನೀರಿನಲ್ಲಿ ಪಾತ್ರೆಗಳನ್ನು ನೆನೆಸಿ ಶುದ್ದ ಮಾಡೋದ್ರ ಬಗ್ಗೆ ಹೇಳೋಕು ಬಳಸಲಾಗಿದೆ. (ಮಾರ್ಕ 7:4; ಇಬ್ರಿಯ 9:10) ಆದ್ರೆ ಇದು ಯೇಸು ಮತ್ತು ಆತನ ಹಿಂಬಾಲಕರು ನೀರಿನಲ್ಲಿ ಪೂರ್ತಿ ಮುಳುಗಿ ತಗೊಂಡ ದೀಕ್ಷಾಸ್ನಾನಕ್ಕಿಂತ ತುಂಬ ಭಿನ್ನವಾಗಿದೆ.