ಮಾಹಿತಿ ಇರುವಲ್ಲಿ ಹೋಗಲು

ಯಾರು ಸ್ವರ್ಗಕ್ಕೆ ಹೋಗುತ್ತಾರೆ?

ಯಾರು ಸ್ವರ್ಗಕ್ಕೆ ಹೋಗುತ್ತಾರೆ?

ಬೈಬಲ್‌ ಕೊಡುವ ಉತ್ತರ

 ಒಂದು ನಿರ್ದಿಷ್ಟ ಸಂಖ್ಯೆಯ ನಂಬಿಗಸ್ತ ಕ್ರೈಸ್ತರನ್ನ ದೇವರು ಆರಿಸಿಕೊಂಡಿದ್ದಾನೆ. ಅವರ ಸಾವಿನ ನಂತರ ಸ್ವರ್ಗದಲ್ಲಿ ಬದುಕೋಕೆ ಅವರನ್ನ ಮತ್ತೆ ಜೀವಂತವಾಗಿ ದೇವರು ಎಬ್ಬಿಸುತ್ತಾನೆ. (1 ಪೇತ್ರ 1:3, 4) ದೇವರು ಆರಿಸಿಕೊಂಡಿರುವ ಈ ವ್ಯಕ್ತಿಗಳು ದೇವರ ಮಾತನ್ನ ಕೇಳುತ್ತಾ ಇರಬೇಕು. ಅವರ ನಂಬಿಕೆಯನ್ನ ಬಲಪಡಿಸಿಕೊಳ್ಳುತ್ತಾ ಇರಬೇಕು. ಅವಾಗ್ಲೇ ಅವರಿಗೆ ಸ್ವರ್ಗಕ್ಕೆ ಹೋಗುವ ಅವಕಾಶ ಸಿಗೋದು.—ಎಫೆಸ 5:5; ಫಿಲಿಪ್ಪಿ 3:12-14.

ಸ್ವರ್ಗಕ್ಕೆ ಹೋಗುವವರು ಅಲ್ಲೇನು ಮಾಡುತ್ತಾರೆ?

 ಅವರು ಯೇಸುವಿನ ಜೊತೆ ರಾಜರಾಗಿ, ಪುರೋಹಿತರಾಗಿ ಸಾವಿರ ವರ್ಷ ಆಳ್ವಿಕೆ ಮಾಡುತ್ತಾರೆ. (ಪ್ರಕಟನೆ 5:9, 10; 20:6) ಈಗಿರುವ ಆಕಾಶ ಮತ್ತು ಭೂಮಿಯ ಸ್ಥಾನದಲ್ಲಿ “ಹೊಸ ಆಕಾಶ” ಅಥವಾ ಕ್ರಿಸ್ತನ ಆಳ್ವಿಕೆ ಮತ್ತು “ಹೊಸ ಭೂಮಿ” ಬರುತ್ತೆ. ಅವರು ಸ್ವರ್ಗದಿಂದ ಭೂಮಿಯನ್ನ ಆಳುತ್ತಾರೆ. ಮೊದಲು ದೇವರ ಉದ್ದೇಶ ಏನಿತ್ತೋ ಅದು ನೆರವೇರೋಕೆ ಮತ್ತು ಮನುಷ್ಯರೆಲ್ಲರೂ ಖುಷಿಯಾಗಿರಲಿಕ್ಕೆ ಅವರು ಸಹಾಯ ಮಾಡುತ್ತಾರೆ.—ಯೆಶಾಯ 65:17; 2 ಪೇತ್ರ 3:13.

ಎಷ್ಟು ಜನ ಸ್ವರ್ಗಕ್ಕೆ ಹೋಗುತ್ತಾರೆ?

 ಬೈಬಲ್‌ ಹೇಳುವ ಪ್ರಕಾರ 1,44,000 ಮಂದಿ ಸ್ವರ್ಗಕ್ಕೆ ಹೋಗುತ್ತಾರೆ. (ಪ್ರಕಟನೆ 7:4) ಪ್ರಕಟನೆ 14:1-3ರಲ್ಲಿ ಅಪೊಸ್ತಲ ಯೋಹಾನ ನೋಡಿದ ದರ್ಶನದಲ್ಲಿ, “ಕುರಿಮರಿ ಚೀಯೋನ್‌ ಬೆಟ್ಟದ ಮೇಲೆ ನಿಂತಿತ್ತು. ಅದ್ರ ಜೊತೆ 1,44,000 ಜನ ಇದ್ರು.” ಈ ದರ್ಶನದಲ್ಲಿರುವ “ಕುರಿಮರಿ” ಯೇಸು. (ಯೋಹಾನ 1:29; 1 ಪೇತ್ರ 1:19) ಯೇಸು ಮತ್ತು ಅವನ ಜೊತೆ ಆಳ್ವಿಕೆ ಮಾಡುವ 1,44,000 ಜನರು ನಿಂತಿರೋ ಉನ್ನತ ಸ್ಥಾನವೇ “ಚೀಯೋನ್‌ ಬೆಟ್ಟ.”—ಕೀರ್ತನೆ 2:6; ಇಬ್ರಿಯ 12:22.

 ಕ್ರಿಸ್ತನ ಜೊತೆ ಆಳ್ವಿಕೆ ಮಾಡಕ್ಕೆ “ದೇವರು ಯಾರನ್ನ ಕರೆದಿದ್ದಾನೋ ಯಾರನ್ನ ಆರಿಸ್ಕೊಂಡಿದ್ದಾನೋ” ಅವರನ್ನ ‘ಚಿಕ್ಕ ಹಿಂಡು’ ಅಂತ ಕರೆಯುತ್ತಾರೆ. (ಪ್ರಕಟನೆ 17:14; ಲೂಕ 12:32) ಯೇಸುವಿನ ಇಡೀ ಮಂದೆಗೆ ಹೋಲಿಸಿದ್ರೆ ಈ ಗುಂಪು ತುಂಬ ಚಿಕ್ಕದು ಅಂತ ಗೊತ್ತಾಗುತ್ತೆ.—ಯೋಹಾನ 10:16.

ಸ್ವರ್ಗಕ್ಕೆ ಯಾರು ಹೋಗುತ್ತಾರೆ ಅನ್ನೋದರ ಬಗ್ಗೆ ಇರೋ ತಪ್ಪು ಕಲ್ಪನೆಗಳು

 ತಪ್ಪು: ಒಳ್ಳೆಯವರೆಲ್ಲ ಸ್ವರ್ಗಕ್ಕೆ ಹೋಗುತ್ತಾರೆ.

 ಸರಿ: ಹೆಚ್ಚಿನ ಒಳ್ಳೇ ವ್ಯಕ್ತಿಗಳಿಗೆ ಇದೇ ಭೂಮಿಯಲ್ಲಿ ಶಾಶ್ವತವಾಗಿ ಬದುಕುವ ಅವಕಾಶವನ್ನ ದೇವರು ಕೊಟ್ಟಿದ್ದಾನೆ.—ಕೀರ್ತನೆ 37:11, 29, 34.

  •   “ಯಾವ ಮನುಷ್ಯನೂ ಸ್ವರ್ಗಕ್ಕೆ ಹೋಗಿಲ್ಲ” ಅಂತ ಯೇಸು ಹೇಳಿದನು. (ಯೋಹಾನ 3:13) ಆತನಿಗಿಂತ ಮುಂಚೆ ತೀರಿಹೋದ ಒಳ್ಳೇ ವ್ಯಕ್ತಿಗಳು ಅಂದರೆ ಅಬ್ರಹಾಮ, ಮೋಶೆ, ಯೋಬ ಮತ್ತು ದಾವೀದ ಅವರು ಕೂಡ ಸ್ವರ್ಗಕ್ಕೆ ಹೋಗಲಿಲ್ಲ. (ಅಪೊಸ್ತಲರ ಕಾರ್ಯ 2:29, 34) ಅವರಿಗೆ, ‘ನಾವು ಮತ್ತೆ ಇದೇ ಭೂಮಿ ಮೇಲೆ ಎದ್ದು ಬರುತ್ತೀವಿ’ ಅನ್ನೋ ನಿರೀಕ್ಷೆ ಇತ್ತು.—ಯೋಬ 14:13-15.

  •   ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಇರೋರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ಇವ್ರೇ ಮೊದಲ್ನೇ ಸಲ ಮತ್ತೆ ಜೀವ ಪಡ್ಕೊಂಡವರು.” (ಪ್ರಕಟನೆ 20:5) ಇದರಿಂದ, ಇನ್ನೊಂದು ಗುಂಪಿನ ಜನರಿಗೆ ಭೂಮಿಯಲ್ಲಿ ಮತ್ತೆ ಜೀವಂತವಾಗಿ ಎದ್ದು ಬರುವ ಅವಕಾಶ ಸಿಗುತ್ತೆ ಅಂತನೂ ಗೊತ್ತಾಗುತ್ತೆ.

  •   ದೇವರ ಆಳ್ವಿಕೆಯಲ್ಲಿ “ಇನ್ಮುಂದೆ ಸಾವೇ ಇರಲ್ಲ” ಅಂತ ಬೈಬಲ್‌ ಕಲಿಸುತ್ತೆ. (ಪ್ರಕಟನೆ 21:3, 4) ಈ ಮಾತು ಭೂಮಿಯಲ್ಲಿ ನಡೆಯುವ ವಿಷಯಗಳಿಗೆ ಹೇಳಲಾಗಿದೆ. ಯಾಕೆಂದ್ರೆ ಸ್ವರ್ಗದಲ್ಲಿ ಸಾವಿಲ್ಲ.

 ತಪ್ಪು: ಸ್ವರ್ಗಕ್ಕೆ ಹೋಗಬೇಕಾ ಬೇಡ್ವಾ ಅನ್ನೋದು ಅವರವರ ಆಯ್ಕೆ ಆಗಿದೆ.

 ಸರಿ: ಯಾರಿಗೆ “ಸ್ವರ್ಗದ ಜೀವನ”ವನ್ನ ಬಹುಮಾನವಾಗಿ ಕೊಡಬೇಕು, ಅಂದ್ರೆ ಯಾವ ನಂಬಿಗಸ್ತ ಕ್ರೈಸ್ತರು ಸ್ವರ್ಗಕ್ಕೆ ಹೋಗಬೇಕು ಅಂತ ತೀರ್ಮಾನ ಮಾಡೋದು ದೇವರು. (ಫಿಲಿಪ್ಪಿ 3:14) ಹಾಗಾಗಿ ನಮಗೆ ಸ್ವರ್ಗಕ್ಕೆ ಹೋಗೋಕೆ ಇಷ್ಟ ಇದೆ ಅಂದಮಾತ್ರಕ್ಕೆ ನಾವಲ್ಲಿಗೆ ಹೋಗಲ್ಲ.—ಮತ್ತಾಯ 20:20-23.

 ತಪ್ಪು: ಸ್ವರ್ಗಕ್ಕೆ ಹೋಗೋ ಅರ್ಹತೆನೇ ಇಲ್ಲದಿರೋ ಸಾಧಾರಣ ಜನರಿಗೆ ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋ ಅವಕಾಶ ಸಿಗುತ್ತೆ.

 ಸರಿ: ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋ ಜನರನ್ನ ದೇವರು ‘ನನ್ನ ಜನ್ರು,’ “ನಾನು ಆರಿಸ್ಕೊಂಡಿರೋ ಜನ್ರು,” ‘ಯೆಹೋವನ ಆಶೀರ್ವಾದಕ್ಕೆ ಪಾತ್ರರಾಗಿರುವವರು’ ಅಂತ ಕರಿತಾನೆ. (ಯೆಶಾಯ 65:21-23) ಅವರು ಭೂಮಿಯಲ್ಲಿ ಶಾಶ್ವತವಾಗಿ ಬದುಕುತ್ತಾರೆ. ಈ ಭೂಮಿಯನ್ನ ಸುಂದರ ತೋಟವನ್ನಾಗಿ ಮಾಡ್ತಾರೆ. ಇದೇ ದೇವರ ಮೊದಲ ಉದ್ದೇಶ ಆಗಿತ್ತು.—ಆದಿಕಾಂಡ 1:28; ಕೀರ್ತನೆ 115:16; ಯೆಶಾಯ 45:18.

 ತಪ್ಪು: ಪ್ರಕಟನೆಯಲ್ಲಿ ಹೇಳಿರುವ 1,44,000 ಈ ಸಂಖ್ಯೆ ಸಾಂಕೇತಿಕವಾಗಿದೆ, ಅಕ್ಷರಾರ್ಥಕವಾಗಿಲ್ಲ.

 ಸರಿ: ಪ್ರಕಟನೆ ಪುಸ್ತಕದಲ್ಲಿ ಸಾಂಕೇತಿಕ ಸಂಖ್ಯೆಗಳು ಇವೆ. ಕೆಲವು ಅಕ್ಷರಾರ್ಥಕ ಸಂಖ್ಯೆಗಳು ಇವೆ. ಉದಾಹರಣೆಗೆ “ಕುರಿಮರಿಯ 12 ಅಪೊಸ್ತಲರ ಹೆಸ್ರು” ಬರೆಯಲಾಗಿದೆ. (ಪ್ರಕಟನೆ 21:14) ಪ್ರಕಟನೆ ಪುಸ್ತಕದಲ್ಲಿ 1,44,000 ಈ ಸಂಖ್ಯೆಯನ್ನ ಅಕ್ಷರಾರ್ಥಕವಾಗಿ ಬಳಸಲಾಗಿದೆ. ಅದಕ್ಕಿರುವ ಕಾರಣಗಳನ್ನ ನಾವೀಗ ನೋಡೋಣ.

 ಪ್ರಕಟನೆ 7:4ರಲ್ಲಿ “ಮುದ್ರೆ ಒತ್ತಿಸ್ಕೊಂಡವ್ರ ಸಂಖ್ಯೆ” 1,44,000 ಅಂತ ಇದೆ. ಇವರು ಸ್ವರ್ಗಕ್ಕೆ ಹೋಗಲು ಆಯ್ಕೆಯಾದವರು. ಮುಂದಿನ ವಚನಗಳಲ್ಲಿ ಇನ್ನೊಂದು ಗುಂಪಿನ ಬಗ್ಗೆ ಹೇಳ್ತಾ “ಯಾರಿಂದಾನೂ ಲೆಕ್ಕಮಾಡೋಕೆ ಆಗದಷ್ಟು ಜನ್ರ ಒಂದು ದೊಡ್ಡ ಗುಂಪು ಕಾಣಿಸ್ತು” ಅಂತ ಇದೆ. “ದೊಡ್ಡ ಗುಂಪು” ಕೂಡ ದೇವರಿಂದ ರಕ್ಷಣೆ ಪಡೆಯುತ್ತೆ. (ಪ್ರಕಟನೆ 7:9, 10) ಒಂದುವೇಳೆ 1,44,000 ಸಂಖ್ಯೆ ಸಾಂಕೇತಿಕವಾಗಿದ್ದರೆ ಮತ್ತು ಒಂದು ನಿರ್ದಿಷ್ಟ ಸಂಖ್ಯೆ ಇಲ್ಲದ ಗುಂಪಿಗೆ ಸೂಚಿಸಿದ್ರೆ ಈ ಗುಂಪಿಗೂ ದೊಡ್ಡ ಗುಂಪಿಗೂ ಯಾವ ವ್ಯತ್ಯಾಸನೂ ಇರುತ್ತಿರಲಿಲ್ಲ. a

 ಅಷ್ಟೇ ಅಲ್ಲ 1,44,000 ಮಂದಿಯನ್ನ “ಮನುಷ್ಯರಿಂದ ಮೊದಲ ಬೆಳೆಯಾಗಿ ಕೊಂಡ್ಕೊಂಡ್ರು” ಅಂತ ಬೈಬಲ್‌ ಹೇಳುತ್ತೆ. (ಪ್ರಕಟನೆ 14:4) “ಮೊದಲ ಬೆಳೆ” ಅನ್ನೋ ಪದನೇ ಒಂದು ಚಿಕ್ಕ ಗುಂಪನ್ನ ಪ್ರತಿನಿಧಿಯಾಗಿ ಆರಿಸಿಕೊಂಡಿದ್ದಾರೆ ಅಂತ ಸೂಚಿಸುತ್ತೆ. ಇವರು ಯೇಸು ಕ್ರಿಸ್ತನ ಜೊತೆ ಸ್ವರ್ಗದಿಂದ ಭೂಮಿ ಮೇಲಿರೋ ಅಸಂಖ್ಯಾತ ಜನರ ಮೇಲೆ ಆಳ್ವಿಕೆ ಮಾಡ್ತಾರೆ. ಯೆಹೋವನ ಆ ಉದ್ದೇಶವನ್ನ ನೆರವೇರಿಸೋ ಅವಕಾಶ ಇವರಿಗಿದೆ.—ಪ್ರಕಟನೆ 5:10.

a ಪ್ರಕಟನೆ 7:4ರಲ್ಲಿರೋ 1,44,000 ಸಂಖ್ಯೆ ಬಗ್ಗೆ ಪ್ರೋಫೆಸರ್‌ ರಾಬರ್ಟ್‌ ಎಲ್‌. ಥಾಮಸ್‌ ಹೀಗೆ ಹೇಳ್ತಾರೆ: “ಇದು ಒಂದು ನಿರ್ದಿಷ್ಟ ಸಂಖ್ಯೆಯಾಗಿದೆ. ಪ್ರಕಟನೆ 7:9ರಲ್ಲಿ ದೊಡ್ಡ ಗುಂಪಿನ ಬಗ್ಗೆ ಯಾರಿಂದಲೂ ಎಣಿಸೋಕ್ಕಾಗದ ಸಂಖ್ಯೆ ಬಗ್ಗೆ ಹೇಳಲಾಗಿದೆ. ಒಂದುವೇಳೆ ಈ ಸಂಖ್ಯೆ ಅಕ್ಷರಾರ್ಥಕವಾಗಿಲ್ಲ ಅಂದ್ರೆ ಬೈಬಲಿನಲ್ಲಿರೋ ಯಾವ ಸಂಖ್ಯೆಯನ್ನು ನಾವು ಅಕ್ಷರಾರ್ಥಕವಾಗಿ ತೊಗೊಳಕ್ಕಾಗಲ್ಲ.”ಪ್ರಕಟನೆ 1–7: ಆ್ಯನ್‌ ಎಕ್ಸೆಜೆಟಿಕಲ್‌ ಕಾಮೆಂಟ್ರಿ, ಪುಟ 474.