ಯೋಹಾನನಿಗೆ ಕೊಟ್ಟ ಪ್ರಕಟನೆ 11:1-19

  • ಇಬ್ಬರು ಸಾಕ್ಷಿಗಳು (1-13)

    • ಗೋಣಿತಟ್ಟು ಹಾಕೊಂಡು 1,260 ದಿನ ಭವಿಷ್ಯ ಹೇಳ್ತಾರೆ (3)

    • ಸಾಯ್ತಾರೆ ಆದ್ರೆ ಸಮಾಧಿ ಮಾಡೋಕೆ ಬಿಡಲ್ಲ (7-10)

    • ಮೂರುವರೆ ದಿನ ಆದ್ಮೇಲೆ ಮತ್ತೆ ಜೀವ ಬರುತ್ತೆ (11, 12)

  • ಎರಡನೇ ಕಷ್ಟ ಮುಗಿತು, ಮೂರನೇದು ಬರ್ತಾ ಇದೆ (14)

  • ಏಳನೇ ತುತ್ತೂರಿ (15-19)

    • ನಮ್ಮ ದೇವರ ಮತ್ತು ಆತನ ಕ್ರಿಸ್ತನ ಆಳ್ವಿಕೆ (15)

    • ಭೂಮಿಯನ್ನ ನಾಶಮಾಡುವವರು ನಾಶ ಆಗ್ತಾರೆ (18)

11  ಅಳತೆ ಕೋಲಿನ ತರ ಇರೋ ಒಂದು ಕೋಲನ್ನ+ ನನಗೆ ಕೊಟ್ಟು ಆ ಧ್ವನಿ ನನಗೆ ಹೀಗೆ ಹೇಳ್ತು: “ನೀನು ಹೋಗಿ ದೇವಾಲಯದ ಪವಿತ್ರ ಸ್ಥಳವನ್ನ, ಯಜ್ಞವೇದಿಯನ್ನ ಅದ್ರಲ್ಲಿ ಆರಾಧಿಸುವವ್ರನ್ನ ಅಳತೆಮಾಡು.  ಆದ್ರೆ ಆಲಯದ ಪವಿತ್ರ ಸ್ಥಳದ ಹೊರಗಿರೋ ಅಂಗಳನ ಅಳತೆ ಮಾಡಬೇಡ. ಯಾಕಂದ್ರೆ ದೇವರು ಅದನ್ನ ಬೇರೆ ಜನಾಂಗಗಳಿಗೆ ಕೊಟ್ಟಿದ್ದಾನೆ. ಅವರು ಆ ಪವಿತ್ರ ನಗರವನ್ನ+ 42 ತಿಂಗಳು ತುಳಿದಾಡ್ತಾರೆ.+  ನಾನು ನನ್ನ ಇಬ್ರು ಸಾಕ್ಷಿಗಳನ್ನ ಕಳಿಸ್ತೀನಿ. ಅವರು ಗೋಣಿ ಉಟ್ಕೊಂಡು 1,260 ದಿನ ಭವಿಷ್ಯ ಹೇಳ್ತಾರೆ” ಅಂದನು.  ಭೂಮಿಯ ಒಡೆಯನ ಮುಂದೆ ನಿಂತಿರೋ+ ಎರಡು ಆಲೀವ್‌ ಮರ,+ ಎರಡು ದೀಪಸ್ತಂಭ+ ಈ ಇಬ್ರು ಸಾಕ್ಷಿಗಳನ್ನ ಸೂಚಿಸುತ್ತೆ.  ಇವ್ರಿಗೆ ಯಾರಾದ್ರೂ ಹಾನಿ ಮಾಡೋಕೆ ಬಂದ್ರೆ ಇವ್ರ ಬಾಯಿಂದ ಬೆಂಕಿ ಬಂದು ಆ ಶತ್ರುಗಳನ್ನ ಸುಟ್ಟುಬಿಡುತ್ತೆ. ಇವ್ರಿಗೆ ಹಾನಿ ಮಾಡೋಕೆ ಬರುವವ್ರೆಲ್ಲ ಹೀಗೇ ಸಾಯಬೇಕು.  ಇವರು ಭವಿಷ್ಯ ಹೇಳೋ ಆ ದಿನಗಳಲ್ಲಿ ಮಳೆನೇ ಬರದ ಹಾಗೆ+ ಆಕಾಶ ಮುಚ್ಚೋ ಅಧಿಕಾರವನ್ನ+ ದೇವರು ಇವ್ರಿಗೆ ಕೊಟ್ಟಿದ್ದಾನೆ. ನೀರನ್ನ ರಕ್ತ ಮಾಡೋಕೆ,+ ಇಷ್ಟ ಬಂದಾಗೆಲ್ಲ ಭೂಮಿ ಮೇಲೆ ಎಲ್ಲ ತರದ ಕಾಯಿಲೆ ಬರಿಸೋಕೆ ಅವ್ರಿಗೆ ಅಧಿಕಾರ ಇದೆ.  ಇವರು ಭವಿಷ್ಯ ಹೇಳಿ ಮುಗಿಸಿದ ಮೇಲೆ ಅಗಾಧ ಸ್ಥಳದಿಂದ ಬರೋ ಕಾಡುಪ್ರಾಣಿ ಇವ್ರ ಜೊತೆ ಯುದ್ಧಮಾಡಿ ಸೋಲಿಸಿ ಕೊಂದುಬಿಡುತ್ತೆ.+  ಅವ್ರ ಶವಗಳು ಮಹಾ ಪಟ್ಟಣದ ಮುಖ್ಯ ಬೀದಿಯಲ್ಲಿ ಬಿದ್ದಿರುತ್ತೆ. ಅಲ್ಲೇ ಜನ್ರು ನಮ್ಮ ಪ್ರಭುವನ್ನ ಕಂಬಕ್ಕೆ ಏರಿಸಿದ್ರು. ಈ ಪಟ್ಟಣವನ್ನ ಸೊದೋಮ್‌ ಮತ್ತು ಈಜಿಪ್ಟ್‌ ಅಂತ ಕರಿತಾರೆ.  ಎಲ್ಲ ಕುಲ, ಭಾಷೆ, ದೇಶ ಮತ್ತು ಜಾತಿಯ ಜನ್ರು ಇವ್ರ ಶವವನ್ನ ಮೂರೂವರೆ ದಿನ ನೋಡ್ತಾರೆ.+ ಆ ಶವಗಳನ್ನ ಸಮಾಧಿ ಮಾಡೋಕೆ ಬಿಡಲ್ಲ. 10  ಭೂಮಿಯಲ್ಲಿ ಇರುವವರು ಇವ್ರಿಗಾದ ಸ್ಥಿತಿ ನೋಡಿ ಖುಷಿಪಡ್ತಾರೆ, ಮಜಾ ಮಾಡ್ತಾರೆ. ಒಬ್ಬರಿಗೊಬ್ರು ಉಡುಗೊರೆ ಕೊಡ್ತಾರೆ. ಯಾಕಂದ್ರೆ ಭವಿಷ್ಯ ಹೇಳೋ ಈ ಇಬ್ರಿಂದ ಅವ್ರಿಗೆ ತುಂಬ ಕಷ್ಟ ಆಗಿತ್ತು. 11  ಮೂರೂವರೆ ದಿನ ಆದ್ಮೇಲೆ ದೇವರು ಆ ಇಬ್ರಿಗೆ ಜೀವಶಕ್ತಿ ಕೊಟ್ಟನು.+ ಅವರು ಎದ್ದು ನಿಂತ್ರು. ಅವ್ರನ್ನ ನೋಡಿದವ್ರಿಗೆ ತುಂಬ ಭಯ ಆಯ್ತು. 12  ಆಮೇಲೆ ಅವ್ರಿಗೆ “ಮೇಲೆ ಬನ್ನಿ” ಅನ್ನೋ ಧ್ವನಿ ಸ್ವರ್ಗದಿಂದ ಜೋರಾಗಿ ಕೇಳಿಸ್ತು. ಅವರು ಮೋಡದಲ್ಲಿ ಆಕಾಶಕ್ಕೆ ಏರಿಹೋದ್ರು. ಅದನ್ನ ಅವ್ರ ಶತ್ರುಗಳು ನೋಡಿದ್ರು. 13  ಆಗ ಒಂದು ಭೀಕರ ಭೂಕಂಪ ಆಯ್ತು. ಆ ಪಟ್ಟಣದ ಹತ್ತನೇ ಒಂದು ಭಾಗ ಬಿದ್ದುಹೋಯ್ತು. 7,000 ಜನ ಸತ್ತುಹೋದ್ರು. ಉಳಿದ ಜನ ಹೆದರಿ ಸ್ವರ್ಗದಲ್ಲಿರೋ ದೇವರನ್ನ ಆರಾಧಿಸಿದ್ರು. 14  ಎರಡನೇ ಕಷ್ಟ ಮುಗಿತು.+ ಮೂರನೇ ಕಷ್ಟ ಬೇಗ ಬರುತ್ತೆ. 15  ಏಳನೇ ದೇವದೂತ ತುತ್ತೂರಿ ಊದಿದ.+ ಸ್ವರ್ಗದಲ್ಲಿ ಜೋರಾದ ಧ್ವನಿ ಕೇಳಿಸ್ತು. ಅದೇನಂದ್ರೆ “ನಮ್ಮ ದೇವರು+ ಮತ್ತು ಆತನ ಕ್ರಿಸ್ತ+ ಈ ಲೋಕವನ್ನ ಆಳ್ತಿದ್ದಾರೆ. ದೇವರು ರಾಜನಾಗಿ ಶಾಶ್ವತವಾಗಿ ಆಳ್ವಿಕೆ ಮಾಡ್ತಾನೆ.”+ 16  ದೇವರ ಮುಂದೆ ತಮ್ಮ ಸಿಂಹಾಸನದ ಮೇಲೆ ಕೂತಿದ್ದ 24 ಹಿರಿಯರು+ ಮಂಡಿಯೂರಿ ದೇವರನ್ನ ಆರಾಧಿಸಿದ್ರು. 17  ಅವರು ಹೀಗೆ ಹೇಳಿದ್ರು: “ಯೆಹೋವ* ದೇವರೇ, ಸರ್ವಶಕ್ತನೇ, ನೀನು ಈಗ ಇರುವವನು,+ ಈ ಮುಂಚೆನೂ ಇದ್ದವನು. ನಾವು ನಿನಗೆ ಧನ್ಯವಾದ ಹೇಳ್ತೀವಿ. ಯಾಕಂದ್ರೆ ನೀನು ನಿನ್ನ ಮಹಾ ಅಧಿಕಾರದಿಂದ ರಾಜನಾಗಿ ಆಳೋಕೆ ಶುರು ಮಾಡಿದ್ದೀಯ.+ 18  ಆದ್ರೆ ಲೋಕದಲ್ಲಿರೋ ದೇಶಗಳೆಲ್ಲ ಕೋಪದಿಂದ ಕುದಿತಾ ಇದ್ವು. ಆಮೇಲೆ ಅವ್ರ ಮೇಲೆ ನಿನ್ನ ಕೋಪ ಬಂತು. ಸತ್ತವ್ರಿಗೆ ತೀರ್ಪು ಮಾಡೋ ಸಮಯ ಬಂದಿದೆ. ನಿನ್ನ ದಾಸರಾದ ಪ್ರವಾದಿಗಳಿಗೆ,+ ಪವಿತ್ರ ಜನ್ರಿಗೆ, ಚಿಕ್ಕವ್ರಿಂದ ಹಿಡಿದು ದೊಡ್ಡವ್ರ ತನಕ ನಿನ್ನ ಹೆಸ್ರಿಗೆ ಭಯಪಡ್ತಿರೋ ಎಲ್ರಿಗೂ ಬಹುಮಾನ ಕೊಡೋ ಸಮಯ ಬಂದಿದೆ.+ ಭೂಮಿಯನ್ನ ನಾಶಮಾಡ್ತಿರೋ ಜನ್ರನ್ನ ನಾಶಮಾಡೋ ಸಮಯ ಬಂದಿದೆ.”+ 19  ಆಗ ಸ್ವರ್ಗದಲ್ಲಿರೋ ದೇವಾಲಯದ ಪವಿತ್ರಸ್ಥಳ ತೆರಿತು. ದೇವರ ಆಲಯದ ಪವಿತ್ರಸ್ಥಳದಲ್ಲಿ ಆತನ ಒಪ್ಪಂದದ ಮಂಜೂಷ ಕಾಣಿಸ್ತು.+ ಅಷ್ಟೇ ಅಲ್ಲ ಮಿಂಚು, ಗುಡುಗು ಬಂತು. ವಾಣಿ ಕೇಳಿಸ್ತು. ಭೂಕಂಪ, ದೊಡ್ಡದೊಡ್ಡ ಆಲಿಕಲ್ಲಿನ ಮಳೆ ಆಯ್ತು.

ಪಾದಟಿಪ್ಪಣಿ