ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 9

ನಾನು ವಿಕಾಸವಾದವನ್ನು ನಂಬಬೇಕಾ?

ನಾನು ವಿಕಾಸವಾದವನ್ನು ನಂಬಬೇಕಾ?

ಪ್ರಾಮುಖ್ಯವೇಕೆ?

ವಿಕಾಸವಾದ ನಿಜವಾದರೆ ನಮ್ಮ ಜೀವನಕ್ಕೆ ಉದ್ದೇಶನೇ ಇರಲ್ಲ. ಸೃಷ್ಟಿವಾದ ನಿಜವಾದರೆ ನಮ್ಮ ಜೀವನದಲ್ಲಿ ಏಳುವ ಪ್ರತಿಯೊಂದು ಪ್ರಶ್ನೆಗೆ ಉತ್ತರ ಸಿಗುತ್ತೆ.

ನೀವು ಈ ಜಾಗದಲ್ಲಿ ಇದ್ದಿದ್ದರೆ . . .

ಇದನ್ನು ಚಿತ್ರಿಸಿಕೊಳ್ಳಿ: ಅಲೆಕ್ಸ್‌, ಎಲ್ಲವನ್ನು ದೇವರೇ ಸೃಷ್ಟಿಮಾಡಿದ್ದು ಅಂತ ನಂಬುತ್ತಿದ್ದ. ಆದರೆ ಅವನ ಬಯೋಲಜಿ ಟೀಟರ್‌, ವಿಕಾಸವಾದನೇ ಸತ್ಯ, ಅದಕ್ಕೆ ವಿಜ್ಞಾನಿಗಳ ಹತ್ತಿರ ಸಾಕ್ಷಿಗಳೂ ಇವೆ ಅಂತ ಹೇಳಿದರು. ಈಗ ಅಲೆಕ್ಸ್‌ಗೆ ಸಂಶಯ ಬರಲು ಶುರುವಾಯಿತು. ಆದರೂ ಎಲ್ಲರ ಮುಂದೆ ದಡ್ಡ ಅನಿಸಿಕೊಳ್ಳೋಕೆ ಅವನಿಗೆ ಇಷ್ಟ ಇಲ್ಲ. ಅವನು ತನ್ನ ಮನಸ್ಸೊಳಗೇ ‘ವಿಕಾಸವಾದ ಸರಿ ಅಂತ ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ ಅಂದಮೇಲೆ ಅದು ನಿಜ ಅಲ್ಲ ಅಂತ ಹೇಳೋಕೆ ನಾನ್ಯಾರು?’ ಅಂತ ಅಂದುಕೊಳ್ಳುತ್ತಾನೆ.

ಅಲೆಕ್ಸ್‌ನ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದಿರಿ? ಟೀಚರ್‌ ವಿಕಾಸವಾದನೇ ಸರಿ ಅಂತ ಹೇಳುತ್ತಾರೆ ಅನ್ನೋ ಕಾರಣಕ್ಕೆ ನೀವೂ ಅದೇ ಸರಿ ಅಂತ ಒಪ್ಪಿಕೊಳ್ಳುತ್ತಿದ್ರಾ?

ಸ್ವಲ್ಪ ಯೋಚಿಸಿ!

ವಿಕಾಸ ಮತ್ತು ಸೃಷ್ಟಿಯನ್ನು ನಂಬುವವರ ಮಧ್ಯೆ ಚರ್ಚೆ ನಡೆದರೆ ಎರಡು ಗುಂಪಿನವರೂ ತಾವೇನು ನಂಬುತ್ತಾರೋ ಅದನ್ನ ತಕ್ಷಣ ಹೇಳಿಬಿಡುತ್ತಾರೆ. ಅದು ನಿಜನಾ, ಅದಕ್ಕೆ ಆಧಾರ ಇದ್ಯಾ ಅಂತ ಯೋಚನೆನೇ ಮಾಡಲ್ಲ.

  • ತಮ್ಮ ಧರ್ಮ ಕಲಿಸಿದೆ ಅನ್ನೋ ಕಾರಣಕ್ಕೆ ದೇವರೇ ಎಲ್ಲ ಸೃಷ್ಟಿಮಾಡಿರೋದು ಅಂತ ಕೆಲವರು ನಂಬುತ್ತಾರೆ.

  • ಕೆಲವರು ತಮ್ಮ ಸ್ಕೂಲಲ್ಲಿ ಕಲಿಸಿದ್ದಾರೆ ಅನ್ನೋ ಕಾರಣಕ್ಕೆ ವಿಕಾಸವಾದವನ್ನು ನಂಬುತ್ತಾರೆ.

ಯೋಚಿಸಬೇಕಾದ ಆರು ಪ್ರಶ್ನೆಗಳು

“ಪ್ರತಿಯೊಂದು ಮನೆಯು ಯಾರೋ ಒಬ್ಬನಿಂದ ಕಟ್ಟಲ್ಪಟ್ಟಿದೆ, ಆದರೆ ಎಲ್ಲವನ್ನೂ ಕಟ್ಟಿದಾತನು ದೇವರೇ” ಅಂತ ಬೈಬಲ್‌ ಹೇಳುತ್ತೆ. (ಇಬ್ರಿಯ 3:4) ಇದನ್ನು ನಂಬಬಹುದಾ?

ಯಾರೂ ಕಟ್ಟದೆ ಈ ಮನೆ ಅದಾಗ್‌ ಅದೇ ಬಂತು ಅನ್ನೋದು ಹೇಗೆ ಮೂರ್ಖತನವೋ, ದೇವರು ನಮ್ಮನ್ನು ಸೃಷ್ಟಿ ಮಾಡದೆ ನಾವು ಬಂದೆವು ಅನ್ನೋದೂ ಮೂರ್ಖತನನೇ

ಜನರ ವಾದ: ಒಂದು ದೊಡ್ಡ ಸ್ಫೋಟ ಆಗಿ ಈ ವಿಶ್ವದಲ್ಲಿ ಇರೋದೆಲ್ಲ ಬಂತು.

1 ಸ್ಫೋಟ ಹೇಗಾಯಿತು? ಯಾರಿಂದಾಯಿತು?

2 ವಿಶ್ವದಲ್ಲಿ ಏನೂ ಇಲ್ಲದೆ ಇದ್ದಾಗ ಒಂದು ಸ್ಫೋಟದಿಂದ ಎಲ್ಲ ಬಂತು ಅನ್ನೋದರಲ್ಲಿ ಅರ್ಥ ಇದೆಯಾ? ಅಥವಾ ಯಾರೋ ಸೃಷ್ಟಿ ಮಾಡಿದರು ಅನ್ನೋದರಲ್ಲಿ ಅರ್ಥ ಇದೆಯಾ?

ಜನರ ವಾದ: ಪ್ರಾಣಿಗಳಿಂದ ಮನುಷ್ಯ ವಿಕಾಸವಾಗಿ ಬಂದ.

3 ಪ್ರಾಣಿಗಳಿಂದ, ಉದಾಹರಣೆಗೆ ಮಂಗನಿಂದ ಮಾನವ ಅನ್ನೋದು ನಿಜವಾದರೆ ಆ ಪ್ರಾಣಿಗಳ ಬುದ್ಧಿಶಕ್ತಿಗೂ ಮನುಷ್ಯನ ಬುದ್ಧಿಶಕ್ತಿಗೂ ಇಷ್ಟೊಂದು ವ್ಯತ್ಯಾಸ ಯಾಕಿದೆ?

4 ಪ್ರಾಣಿಗಳ ಮತ್ತು ಮನುಷ್ಯರ ಜೀವಕೋಶಗಳಲ್ಲಿ ದೊಡ್ಡ ವ್ಯತ್ಯಾಸ ಯಾಕಿದೆ?

ಜನರ ವಾದ: ವಿಕಾಸವಾದಕ್ಕೆ ಸಾಕ್ಷಿಗಳಿವೆ.

5 ವಿಕಾಸವಾದವನ್ನು ನಂಬುವವರು ಅದಕ್ಕಿರುವ ಸಾಕ್ಷಿಗಳನ್ನು ತಾವೇ ಪರೀಕ್ಷಿಸಿ ನೋಡಿದ್ದಾರಾ?

6 ಎಷ್ಟು ಜನ ವಿಕಾಸವಾದವನ್ನು, ವಿಜ್ಞಾನಿಗಳು ನಂಬುತ್ತಾರೆ ಅನ್ನೋ ಕಾರಣಕ್ಕೆ ನಂಬುತ್ತಿದ್ದಾರೆ?

“ನೀವು ಕಾಡಲ್ಲಿ ನಡೆದುಕೊಂಡು ಹೋಗುತ್ತಾ ಇದ್ದೀರ. ಒಂದು ಸುಂದರವಾದ ಮನೆ ಕಾಣಿಸುತ್ತೆ. ಆಗ ನೀವು ‘ವಾಹ್‌ ಸೂಪರಾಗಿದೆ! ಇಲ್ಲಿರೋ ಮರಗಳೇ ಒಂದಕ್ಕೊಂದು ಜೋಡಿಸಿಕೊಂಡು ಈ ಮನೆ ಆಗಿದೆ’ ಅಂತ ಯೋಚಿಸುತ್ತೀರಾ? ಇಲ್ಲ, ಅಲ್ವಾ! ನಮಗೆ ಇದನ್ನೇ ನಂಬಕ್ಕಾಗಲ್ಲ. ಹಾಗಿರುವಾಗ ಈ ಜಗತ್ತಲ್ಲಿ ಇರೋದೆಲ್ಲ ಸುಮ್ಮನೆ ಹಾಗೇ ಬಂದುಬಿಡ್ತು ಅಂತ ಯಾಕೆ ನಂಬಬೇಕು?”—ಜೂಲಿಯ.

“ನಿಮ್ಮ ಹತ್ತಿರ ಯಾರೋ ಒಬ್ಬರು ಹೀಗೆ ಹೇಳ್ತಾರೆ ಅಂತ ಅಂದುಕೊಳ್ಳಿ: ‘ಪುಸ್ತಕಗಳನ್ನು ಪ್ರಿಂಟ್‌ ಮಾಡುವ ಕಟ್ಟಡದ ಒಳಗೆ ಸ್ಫೋಟ ಆಗಿ, ಅಲ್ಲಿರೋ ಇಂಕ್‌ ಗೋಡೆಗಳ ಮೇಲೆಲ್ಲಾ ಬಿದ್ದು ಅಕ್ಷರಗಳಾಗಿ, ಒಂದು ದೊಡ್ಡ ಡಿಕ್ಷನರಿ ಆಯಿತು.’ ನೀವಿದನ್ನ ನಂಬುತ್ತೀರಾ?”—ಗ್ವೆನ್‌.

ನೀವು ಯಾಕೆ ದೇವರನ್ನು ನಂಬಬೇಕು?

ನೀವು “ವಿವೇಚನಾಶಕ್ತಿ”ಯನ್ನು ಬಳಸಬೇಕು ಅಂತ ಬೈಬಲ್‌ ಹೇಳುತ್ತೆ. (ರೋಮನ್ನರಿಗೆ 12:1) ನಿಮ್ಮ ನಂಬಿಕೆ ಇಲ್ಲಿ ಕೆಳಗೆ ಕೊಟ್ಟಿರೋ ವಿಷಯಗಳ ಮೇಲೆ ಆಧಾರವಾಗಿರಬಾರದು.

  • ಅನಿಸಿಕೆ (ಎಲ್ಲದಕ್ಕಿಂತ ಒಂದು ದೊಡ್ಡ ಶಕ್ತಿ ಇದೆ ಅನ್ನೋದು ನನ್ನ ಅನಿಸಿಕೆ)

  • ಪ್ರಭಾವ (ನಮ್ಮ ಧರ್ಮದಲ್ಲಿ ಎಲ್ಲರೂ ಇದನ್ನು ನಂಬುತ್ತಾರೆ)

  • ಒತ್ತಡ (ನನ್ನ ಅಪ್ಪ-ಅಮ್ಮ ದೇವರನ್ನು ನಂಬು ಅಂತಾರೆ, ನನಗೆ ಬೇರೆ ದಾರಿಯಿಲ್ಲ)

ಇವೆಲ್ಲ ನಿಜವಾದ ಕಾರಣಗಳಲ್ಲ. ಒಂದು ವಿಷಯವನ್ನು ನಂಬಲು ಸರಿಯಾದ ಕಾರಣಗಳು ಇರಬೇಕು.

“ನಮ್ಮ ಶರೀರ ಹೇಗೆ ಕೆಲಸಮಾಡುತ್ತೆ ಅಂತ ಟೀಚರ್‌ ವಿವರಿಸುವಾಗ ದೇವರಿದ್ದಾನೆ ಅನ್ನೋ ನಂಬಿಕೆ ಬಲವಾಗುತ್ತೆ. ನಮ್ಮ ಶರೀರದ ಪ್ರತಿಯೊಂದು ಅಂಗ, ಅದು ಚಿಕ್ಕದಾಗಿದ್ದರೂ ಅದಕ್ಕೊಂದು ಕೆಲಸ ಇದೆ. ಆ ಕೆಲಸಗಳು ನಡೆಯೋದೇ ನಮಗೆ ಗೊತ್ತಾಗಲ್ಲ. ನಿಜಕ್ಕೂ ನಮ್ಮ ದೇಹ ಒಂದು ಅದ್ಭುತ!”—ತೆರೆಸ್ಸಾ.

“ದೊಡ್ಡ ದೊಡ್ಡ ಕಟ್ಟಡಗಳನ್ನ, ಹಡಗುಗಳನ್ನ, ಕಾರುಗಳನ್ನ ನೋಡುವಾಗ ‘ಇದನ್ನ ಯಾರು ಮಾಡಿದರು?’ ಅಂತ ಯೋಚಿಸ್ತೀನಿ. ಉದಾಹರಣೆಗೆ ಕಾರ್‌. ಅದು ಚೆನ್ನಾಗಿ ಓಡಬೇಕಂದರೆ, ಅದರಲ್ಲಿರೋ ಚಿಕ್ಕ ಚಿಕ್ಕ ಪಾರ್ಟ್ಗಳು ಕೂಡ ಸರಿಯಾಗಿ ಕೆಲಸ ಮಾಡಬೇಕು. ಹಾಗಾಗಿ ಇದನ್ನ ಬುದ್ಧಿವಂತರೇ ಮಾಡಿದ್ದಾರೆ ಅನ್ನೋದರಲ್ಲಿ ಸಂಶಯ ಇಲ್ಲ. ಕಾರನ್ನ ಮಾಡೋಕೆ ಒಬ್ಬರು ಇರಬೇಕಂದ್ರೆ ಮನುಷ್ಯರನ್ನು ಮಾಡಕ್ಕೂ ಒಬ್ಬರು ಇರಲೇಬೇಕಲ್ವಾ?”—ರಿಚರ್ಡ್‌.

“ವಿಜ್ಞಾನದ ಬಗ್ಗೆ ನಾನು ಕಲಿತಾ ಹೋದ ಹಾಗೆ ವಿಕಾಸವಾದ ನಿಜ ಅಲ್ಲ ಅಂತ ಗೊತ್ತಾಗುತ್ತಿದೆ . . . ಸೃಷ್ಟಿಕರ್ತ ಇದ್ದಾನೆ ಅನ್ನೋದಕ್ಕೆ ನನಗೆ ಬೇಕಾದಷ್ಟು ಸಾಕ್ಷಿಗಳು ಸಿಕ್ಕಿವೆ, ಅದರ ಮುಂದೆ ವಿಕಾಸವಾದಕ್ಕೆ ಇರೋ ಸಾಕ್ಷಿಗಳು ಏನೇನೂ ಅಲ್ಲ.”—ಆ್ಯಂಥನಿ.

ಇದರ ಬಗ್ಗೆ ಯೋಚಿಸಿ

ಅನೇಕ ವರ್ಷಗಳಿಂದ ಸಂಶೋಧನೆ ಮಾಡಿದರೂ ಎಲ್ಲಾ ವಿಜ್ಞಾನಿಗಳು ವಿಕಾಸವಾದವನ್ನು ಒಪ್ಪುವಂಥ ಸಾಕ್ಷಿಗಳು ಸಿಗುತ್ತಿಲ್ಲ. ವಿಜ್ಞಾನಿಗಳೇ ಒಪ್ಪುತ್ತಿಲ್ಲ ಅಂದಮೇಲೆ ವಿಕಾಸವಾದವನ್ನು ನೀವು ಒಪ್ಪದೇ ಇದ್ದರೆ ತಪ್ಪಾಗುತ್ತಾ?