ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 1

ನಾನ್ಯಾರು?

ನಾನ್ಯಾರು?

ಪ್ರಾಮುಖ್ಯವೇಕೆ?

ನಿಮ್ಮಲ್ಲಿರುವ ಸಾಮರ್ಥ್ಯಗಳು ಮತ್ತು ಒಳ್ಳೇ ಗುಣಗಳ ಬಗ್ಗೆ ತಿಳಿದುಕೊಂಡರೆ ಒತ್ತಡ, ಸಮಸ್ಯೆಗಳು ಬಂದಾಗ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಆಗುತ್ತೆ.

ನೀವು ಈ ಜಾಗದಲ್ಲಿ ಇದ್ದಿದ್ದರೆ . . .

ಇದನ್ನು ಚಿತ್ರಿಸಿಕೊಳ್ಳಿ: ಕೇರನ್‌ ಪಾರ್ಟಿಗೆ ಬಂದು ಹತ್ತು ನಿಮಿಷ ಆಗಿದೆ.

“ಯಾಕೆ ಇಲ್ಲೇ ನಿಂತಿದ್ದೀಯಾ?” ಅಂತ ಹಿಂದಿನಿಂದ ಯಾರೋ ಮಾತಾಡಿದರು.

ತಿರುಗಿ ನೋಡಿದಾಗ ಅವಳ ಫ್ರೆಂಡ್ ಜೆಸ್ಸಿಕಾ ಕೈಯಲ್ಲಿ ಎರಡು ಬಿಯರ್‌ ಬಾಟಲ್‌ಗಳನ್ನು ಹಿಡಿದುಕೊಂಡಿದ್ದಳು. ಒಂದು ಬಾಟಲನ್ನು ಕೇರನ್‍ಳ ಮುಖದ ಮುಂದೆ ತಂದು “ತಗೋ, ನೀನಿನ್ನೂ ಚಿಕ್ಕ ಹುಡುಗಿ ಅಲ್ಲ” ಅಂತ ಹೇಳಿದಳು.

ಕೇರನ್‌ಗೆ ಬೇಡ ಅಂತ ಅನಿಸಿತು. ಆದರೆ ಜೆಸ್ಸಿಕಾ ಕೇರನ್‍ಳ ಫ್ರೆಂಡ್. ಬೇಡ ಅಂದ್ರೆ ತನ್ನನ್ನ ಹಳೇಕಾಲದವಳು ಅಂತ ನೆನಸಿಬಿಡ್ತಾಳೇನೋ ಅನ್ನೊ ಭಯ. ಇದೆಲ್ಲದ್ದಕ್ಕಿಂತ ಜೆಸ್ಸಿಕಾ ಒಬ್ಬ ಒಳ್ಳೇ ಹುಡುಗಿ. ಅವಳೇ ಕುಡಿತಿದ್ದಾಳೆ ಅಂದರೆ ಅದರಲ್ಲೇನೂ ತಪ್ಪಿರಲ್ಲ. “ಇದು ಬರೀ ಡ್ರಿಂಕ್‌, ಡ್ರಗ್ಸ್‌ ಅಲ್ವಲ್ಲಾ” ಅಂತ ಮನಸ್ಸಿನಲ್ಲೇ ಅಂದುಕೊಳ್ಳುತ್ತಾಳೆ ಕೇರನ್‌.

ಕೇರನ್‌ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದಿರಿ?

ಸ್ವಲ್ಪ ಯೋಚಿಸಿ!

ಇಂಥ ಪರಿಸ್ಥಿತಿಯಲ್ಲಿ ಒಳ್ಳೇ ನಿರ್ಧಾರ ಮಾಡಬೇಕೆಂದರೆ ನೀವ್ಯಾರು ಅಂಥ ನಿಮಗೆ ಚೆನ್ನಾಗಿ ಗೊತ್ತಿರಬೇಕು. ನಿಮ್ಮ ಸಾಮರ್ಥ್ಯಗಳೇನು, ನಿಮ್ಮ ಒಳ್ಳೇ ಗುಣಗಳೇನು ಅಂತ ನೀವು ತಿಳಿದುಕೊಳ್ಳಬೇಕು. ಈ ತಿಳುವಳಿಕೆ ನಿಮಗಿದ್ದರೆ ನೀವು ಬೇರೆಯವರ ಕೈಗೊಂಬೆ ಆಗಿರುವುದಿಲ್ಲ.—1 ಕೊರಿಂಥ 9:26, 27.

ನೀವ್ಯಾರು ಅಂತ ತಿಳಿದುಕೊಳ್ಳಬೇಕಾ? ಹಾಗಾದರೆ, ಮುಂದಿನ ಪ್ರಶ್ನೆಗಳಿಗೆ ಉತ್ತರ ಕೊಡಿ.

1 ನನ್ನ ಸಾಮರ್ಥ್ಯಗಳೇನು?

ನಿಮ್ಮಲ್ಲಿರುವ ಒಳ್ಳೇ ಗುಣಗಳು ಮತ್ತು ಸಾಮರ್ಥ್ಯಗಳ ಬಗ್ಗೆ ತಿಳಿದುಕೊಂಡರೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.

ಬೈಬಲಿನ ಉದಾಹರಣೆ: ಅಪೊಸ್ತಲ ಪೌಲ ಬರೆದಿದ್ದು: “ನಾನು ಮಾತಿನಲ್ಲಿ ನಿಪುಣನಲ್ಲದಿದ್ದರೂ ಜ್ಞಾನದಲ್ಲಿ ನಿಪುಣನಾಗಿದ್ದೇನೆ ಎಂಬುದಂತೂ ನಿಶ್ಚಯ.” (2 ಕೊರಿಂಥ 11:6) ಪೌಲನಿಗೆ ಶಾಸ್ತ್ರವಚನಗಳ ಬಗ್ಗೆ ಆಳವಾದ ಜ್ಞಾನ ಇದ್ದದರಿಂದ ಬೇರೆಯವರಿಂದ ಸವಾಲುಗಳು ಬಂದಾಗ ಅದನ್ನು ಧೈರ್ಯವಾಗಿ ಎದುರಿಸಿದನು. ಅವರು ತನ್ನನ್ನು ಟೀಕಿಸಿದಾಗ ತನ್ನ ಆತ್ಮವಿಶ್ವಾಸ ಕುಗ್ಗಿ ಹೋಗುವಂತೆ ಬಿಡಲಿಲ್ಲ.—2 ಕೊರಿಂಥ 10:10; 11:5.

ಸ್ವಪರೀಕ್ಷೆ ಮಾಡಿಕೊಳ್ಳಿ: ನಿಮ್ಮಲ್ಲಿರುವ ಒಂದು ಪ್ರತಿಭೆಯ ಬಗ್ಗೆ ಬರೆಯಿರಿ.

ನಿಮ್ಮಲ್ಲಿರುವ ಒಂದು ಒಳ್ಳೇ ಗುಣದ ಬಗ್ಗೆ ತಿಳಿಸಿ. (ಉದಾ: ಬೇರೆಯವರಿಗೆ ಸಹಾಯ ಮಾಡುತ್ತೀರಾ? ಮಾತಿಗೆ ತಕ್ಕಂತೆ ನಡೆಯುತ್ತೀರಾ? ಸಮಯಪಾಲಕರಾ?)

2 ನನ್ನ ಬಲಹೀನತೆಗಳೇನು?

ಒಂದು ಸರಪಣಿ ಎಷ್ಟೇ ಗಟ್ಟಿಯಾಗಿದ್ದರೂ ಅದರ ಕೊಂಡಿ ದುರ್ಬಲವಾಗಿದ್ದರೆ ಆ ಸರಪಣಿ ಬೇಗ ತುಂಡಾಗುತ್ತದೆ. ಅದೇ ರೀತಿ, ಬಲಹೀನತೆಗಳನ್ನು ನಿರ್ಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ.

ಬೈಬಲಿನ ಉದಾಹರಣೆ: ಪೌಲನಿಗೆ ತನ್ನ ಬಲಹೀನತೆಗಳ ಬಗ್ಗೆ ಗೊತ್ತಿತ್ತು. ಅವನು ಬರೆದಿದ್ದು: “ನನ್ನ ಹೃದಯದೊಳಗೆ ನಾನು ದೇವರ ನಿಯಮದಲ್ಲಿ ನಿಜವಾಗಿಯೂ ಆನಂದಿಸುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಇನ್ನೊಂದು ನಿಯಮವಿರುವುದನ್ನು ನಾನು ನೋಡುತ್ತೇನೆ; ಅದು ನನ್ನ ಮನಸ್ಸಿನ ನಿಯಮಕ್ಕೆ ವಿರುದ್ಧವಾಗಿ ಹೋರಾಡಿ ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ನನ್ನನ್ನು ಸೆರೆಯವನನ್ನಾಗಿ ಮಾಡುತ್ತಿದೆ.”—ರೋಮನ್ನರಿಗೆ 7:22, 23.

ಸ್ವಪರೀಕ್ಷೆ ಮಾಡಿಕೊಳ್ಳಿ: ನನ್ನಲ್ಲಿರುವ ಯಾವ ಬಲಹೀನತೆಯನ್ನು ನಾನು ಸರಿಮಾಡಿಕೊಳ್ಳಲು ಕಲಿಯಬೇಕು?

3 ನನ್ನ ಗುರಿಗಳೇನು?

ನೀವು ಒಂದು ಟ್ಯಾಕ್ಸಿಯಲ್ಲಿ ಕೂತುಕೊಂಡು ಪೆಟ್ರೋಲ್‌ ಖಾಲಿ ಆಗುವವರೆಗೂ ಸುಮ್ಮನೆ ಒಂದೇ ಸರ್ಕಲನ್ನು ಸುತ್ತುತ್ತಾ ಇರು ಅಂತ ಡ್ರೈವರಿಗೆ ಹೇಳ್ತೀರಾ? ಇಲ್ಲ ಅಲ್ವಾ. ಹಾಗೆ ಮಾಡುವುದು ಮೂರ್ಖತನ, ದುಡ್ಡು ಕೂಡ ವ್ಯರ್ಥ!

ಇದರಿಂದ ಏನು ಗೊತ್ತಾಗುತ್ತೆ? ನಿಮ್ಮ ಜೀವನದಲ್ಲಿ ಗುರಿಗಳಿದ್ದರೆ ನೀವು ಏನು ಮಾಡಬೇಕು ಅಂತ ಗೊತ್ತಿರುತ್ತೆ. ಅದನ್ನು ಮುಟ್ಟಲು ನೀವು ಬೇಕಾದ ತಯಾರಿಗಳನ್ನ ಮಾಡುತ್ತೀರ.

ಬೈಬಲಿನ ಉದಾಹರಣೆ: ಪೌಲ ಬರೆದಿದ್ದು: “ನಾನು ಗೊತ್ತುಗುರಿಯಿಲ್ಲದೆ ಓಡುತ್ತಿಲ್ಲ.” (1 ಕೊರಿಂಥ 9:26) ಅವನು ತನ್ನ ಜೀವನವನ್ನು ಸುಮ್ಮನೆ ಸಾಗಿಸಿಕೊಂಡು ಹೋಗಲಿಲ್ಲ. ಅವನಿಗೆ ಗುರಿಗಳಿದ್ದವು. ಅದನ್ನು ಮುಟ್ಟುತ್ತಾ ತನ್ನ ಜೀವನ ಸಾಗಿಸಿದ.—ಫಿಲಿಪ್ಪಿ 3:12-14.

ಸ್ವಪರೀಕ್ಷೆ ಮಾಡಿಕೊಳ್ಳಿ: ಮುಂದಿನ ವರ್ಷದಲ್ಲಿ ಮುಟ್ಟಬೇಕಂತಿರುವ ಮೂರು ಗುರಿಗಳನ್ನ ಬರೆಯಿರಿ.

4 ನನ್ನ ದೃಢ ನಂಬಿಕೆಗಳೇನು?

ನೀವ್ಯಾರು ಅಂತ ನೀವು ಚೆನ್ನಾಗಿ ತಿಳಿದುಕೊಂಡರೆ ನೀವು ಆಳವಾಗಿ ಬೇರೂರಿರುವ ಮರದಂತೆ ಇರುತ್ತೀರ. ಎಂಥಾ ಬಿರುಗಾಳಿ ಬಂದರೂ ಬಿದ್ದುಹೋಗುವುದಿಲ್ಲ

ದೃಢನಂಬಿಕೆ ಇಲ್ಲದೇ ಇದ್ದರೆ ನಾವು ಚಂಚಲರಾಗಿರುತ್ತೇವೆ. ಆಗ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಾ ಸ್ನೇಹಿತರಿಗೆ ಇಷ್ಟ ಆಗೋ ರೀತಿ ನಡೆದುಕೊಳ್ಳಲು ಪ್ರಯತ್ನಿಸುತ್ತೇವೆ. ಆದ್ರೆ ಅದು ನಿಮ್ಮ ನಿಜ ವ್ಯಕ್ತಿತ್ವ ಆಗಿರೋದಿಲ್ಲ.

ಒಂದುವೇಳೆ ದೃಢ ನಂಬಿಕೆ ಇದ್ದರೆ ಯಾರು ಏನೇ ಹೇಳಲಿ, ಏನೇ ಮಾಡಲಿ ನೀವು ನಿಮ್ಮತನವನ್ನು ಉಳಿಸಿಕೊಳ್ಳುತ್ತೀರಿ.

ಬೈಬಲಿನ ಉದಾಹರಣೆ: ಪ್ರವಾದಿ ದಾನಿಯೇಲನು ತನ್ನ ಕುಟುಂಬದಿಂದ ದೂರ ಇದ್ದರೂ ದೇವರ ನಿಯಮಗಳನ್ನು ಪಾಲಿಸಬೇಕೆಂದು ಹದಿವಯಸ್ಸಿನಲ್ಲೇ ಹೃದಯದಲ್ಲಿ ‘ನಿಶ್ಚಯಿಸಿಕೊಂಡಿದ್ದನು.’ (ದಾನಿಯೇಲ 1:8) ಹೀಗೆ ಅವನು ತನ್ನ ನಂಬಿಕೆಗಳಿಗನುಸಾರ ನಡೆದುಕೊಂಡನು. ತನ್ನತನವನ್ನು ಬಿಟ್ಟುಕೊಡಲಿಲ್ಲ.

ಸ್ವಪರೀಕ್ಷೆ ಮಾಡಿಕೊಳ್ಳಿ: ನಿಮ್ಮ ದೃಢ ನಂಬಿಕೆಗಳೇನು? ಉದಾಹರಣೆಗೆ, ನಿಮಗೆ ದೇವರ ಮೇಲೆ ನಂಬಿಕೆ ಇದೆಯಾ? ಅದಕ್ಕೆ ಕಾರಣವೇನು? ಯಾವ ಆಧಾರದ ಮೇಲೆ ದೇವರು ಇದ್ದಾನೆ ಅಂತ ನೀವು ನಂಬುತ್ತೀರಾ?

ದೇವರು ನಮಗೆ ಕೊಟ್ಟಿರುವ ನೈತಿಕ ನಿಯಮಗಳು ನಮ್ಮ ಪ್ರಯೋಜನಕ್ಕಾಗಿಯೇ ಎಂದು ನೀವು ನಂಬುತ್ತೀರಾ? ನಂಬುವುದಾದರೆ ಅದಕ್ಕೆ ಕಾರಣವೇನು?

ನೀವು, ಸ್ವಲ್ಪ ಗಾಳಿ ಬೀಸಿದಾಗ ಬಿದ್ದು ಹೋಗುವ ಎಲೆಯಾಗಲು ಇಷ್ಟಪಡುತ್ತೀರಾ ಅಥವಾ ದೊಡ್ಡ ಬಿರುಗಾಳಿ ಬಂದರೂ ದೃಢವಾಗಿ ನಿಂತಿರುವ ಮರವಾಗಲು ಇಷ್ಟಪಡುತ್ತೀರಾ? ಹಾಗಾಗಿ, ನಿಮ್ಮ ಒಳ್ಳೇ ಸಾಮರ್ಥ್ಯಗಳು ಮತ್ತು ಗುಣಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಹೆಮ್ಮರವಾಗಿರಿ. ಆಗ ನಾನ್ಯಾರು ಎನ್ನುವ ಪ್ರಶ್ನೆಗೆ ನಿಮಗೆ ಉತ್ತರ ಸಿಗುತ್ತದೆ.