ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 2

ನಾನ್ಯಾಕೆ ನೋಡಲು ಚೆನ್ನಾಗಿಲ್ಲ?

ನಾನ್ಯಾಕೆ ನೋಡಲು ಚೆನ್ನಾಗಿಲ್ಲ?

ಪ್ರಾಮುಖ್ಯವೇಕೆ?

ಕನ್ನಡಿಯಲ್ಲಿ ನೀವು ನೋಡುವ ನಿಮ್ಮ ರೂಪಕ್ಕಿಂತ ಮುಖ್ಯವಾದ ಕೆಲವು ವಿಷಯಗಳಿವೆ.

ನೀವು ಈ ಜಾಗದಲ್ಲಿ ಇದ್ದಿದ್ದರೆ . . .

ಇದನ್ನು ಚಿತ್ರಿಸಿಕೊಳ್ಳಿ: ಜೂಲಿಯ ಕನ್ನಡಿ ಮುಂದೆ ನಿಂತು ನೋಡುತ್ತಾಳೆ. “ನಾನು ತುಂಬ ದಪ್ಪ ಇದ್ದೀನಿ, ಸಣ್ಣಗಾಗಬೇಕಪ್ಪ!” ಅಂದುಕೊಳ್ಳುತ್ತಾಳೆ. ಆದರೆ ಅವಳು “ಕಡ್ಡಿ ಥರ ಇದ್ದಾಳೆ” ಅನ್ನೋದು ಅವಳ ಅಪ್ಪ-ಅಮ್ಮ ಮತ್ತು ಸ್ನೇಹಿತೆಯರ ಅಭಿಪ್ರಾಯ.

ಜೂಲಿಯ ತಾನು ಹೇಗಾದರೂ ಮಾಡಿ “ಎರಡು ಕೆ.ಜಿ.” ತೂಕ ಕಡಿಮೆ ಮಾಡಬೇಕು ಅಂತ ಅಂದುಕೊಂಡಳು. ಅದಕ್ಕಾಗಿ ಒಂದಷ್ಟು ದಿನ ಉಪವಾಸವನ್ನೂ ಮಾಡಿದಳು . . .

ನಿಮಗೂ ಜೂಲಿಯಳ ಥರ ಅನಿಸಿದರೆ ಏನು ಮಾಡುತ್ತೀರಾ?

ಸ್ವಲ್ಪ ಯೋಚಿಸಿ!

ಅಂಕುಡೊಂಕು ಕನ್ನಡಿಯಲ್ಲಿ ಕಾಣುವ ರೂಪ ನಿಜವಾದದ್ದಲ್ಲ. ಅದೇ ರೀತಿ ನಿಮ್ಮ ಬಗ್ಗೆ ನೀವು ಅಂದುಕೊಳ್ಳುವುದು ಕೂಡ ನಿಜವಾಗಿರುವುದಿಲ್ಲ

ನಾವು ಚೆನ್ನಾಗಿ ಕಾಣಿಸಬೇಕು ಅಂತ ಆಸೆಪಡೋದರಲ್ಲಿ ಏನೂ ತಪ್ಪಿಲ್ಲ. ಹಿಂದಿನ ಕಾಲದಲ್ಲಿ ನೋಡಲು ತುಂಬ ಸುಂದರವಾಗಿದ್ದ ಎಷ್ಟೋ ಸ್ತ್ರೀ ಪುರುಷರ ಬಗ್ಗೆ ಬೈಬಲ್‌ ಹೇಳುತ್ತದೆ. ಅವರಲ್ಲಿ ಕೆಲವರು ಸಾರ, ರಾಹೇಲ, ಅಬೀಗೈಲ್‌, ಯೋಸೇಫ ಮತ್ತು ದಾವೀದ. ಅಬೀಷಗ್‌ ಅಂತೂ “ಬಹು ಸುಂದರಿ” ಆಗಿದ್ದಳು ಅಂತ ಬೈಬಲ್‌ ಹೇಳುತ್ತದೆ.—1 ಅರಸುಗಳು 1:4.

ಇಂದು ಅನೇಕ ಯುವಜನರು ತಾವು ನೋಡಲು ಚೆನ್ನಾಗಿಲ್ಲ ಅಂತ ತಲೆಕೆಡಿಸಿಕೊಂಡು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

  • ಒಂದು ಸಂಶೋಧನೆಗನುಸಾರ, 58 ಶೇಕಡದಷ್ಟು ಹುಡುಗಿಯರು ತಾವು ತುಂಬಾ ದಪ್ಪ ಇದ್ದೇವೆ ಅಂತ ಹೇಳಿದರು. ಆದರೆ ಅವರಲ್ಲಿ ನಿಜವಾಗಲೂ ದಪ್ಪಗಿದ್ದವರು 17 ಶೇಕಡದಷ್ಟು ಮಾತ್ರ.

  • ಇನ್ನೊಂದು ಸಂಶೋಧನೆಗನುಸಾರ, 45 ಶೇಕಡದಷ್ಟು ಮಹಿಳೆಯರು ತಾವು ತುಂಬಾ ದಪ್ಪಗಿದ್ದೇವೆ ಅಂದರು. ಆದರೆ ಅವರು ನಿಜವಾಗಲೂ ಎಷ್ಟು ತೂಕ ಇರಬೇಕೋ ಅದಕ್ಕಿಂತಲೂ ಕಡಿಮೆ ತೂಕವಿದ್ದರು.

  • ತೂಕ ಕಳೆದುಕೊಳ್ಳುವ ಪ್ರಯತ್ನದಲ್ಲಿ ಕೆಲವು ಯುವಜನರು ಆ್ಯನೊರೆಕ್ಸಿಯ ಅನ್ನೋ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಆ್ಯನೊರೆಕ್ಸಿಯ ಕಾಯಿಲೆ ಇದ್ದವರು ತಾವು ದಪ್ಪ ಆಗ್ತೀವೇನೋ ಅನ್ನೋ ಭಯದಿಂದ ಸರಿಯಾಗಿ ಊಟ ಮಾಡದೆ ತಮ್ಮ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಾರೆ.

ನಿಮಗೆ ಆ್ಯನೊರೆಕ್ಸಿಯದ ಲಕ್ಷಣಗಳಿವೆ ಎಂದನಿಸಿದರೆ ಅಥವಾ ಊಟ ಮಾಡಲು ಆಗದಿರುವಂಥ ಬೇರಾವುದೇ ತೊಂದರೆ ಕಾಣಿಸಿಕೊಂಡರೆ ಸಹಾಯ ಪಡೆದುಕೊಳ್ಳಿ. ಮೊದಲು, ನಿಮ್ಮ ಅಪ್ಪಅಮ್ಮನ ಹತ್ತಿರ ಅಥವಾ ಒಬ್ಬ ನಂಬಿಗಸ್ತ ಸ್ನೇಹಿತನ ಹತ್ತಿರ ಮಾತಾಡಿ. ಬೈಬಲ್‌ “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ” ಅಂತ ಹೇಳುತ್ತದೆ.—ಜ್ಞಾನೋಕ್ತಿ 17:17.

ನಿಜವಾದ ಸೌಂದರ್ಯ!

ನಿಜವಾದ ಸೌಂದರ್ಯ ಅಂದರೆ ನಮ್ಮಲ್ಲಿರುವ ಒಳ್ಳೇ ಗುಣಗಳೇ. ಉದಾಹರಣೆಗೆ, ರಾಜ ದಾವೀದನ ಮಗನಾದ ಅಬ್ಷಾಲೋಮನ ಬಗ್ಗೆ ಬೈಬಲ್‌ ಏನು ಹೇಳುತ್ತದೆಂದರೆ:

‘ಸೌಂದರ್ಯದಲ್ಲಿ ಅಬ್ಷಾಲೋಮನಂತೆ ಹೆಸರುಗೊಂಡ ಪುರುಷನು ಒಬ್ಬನೂ ಇರಲಿಲ್ಲ. ಅವನಲ್ಲಿ ಅಂಗಾಲಿನಿಂದ ನಡುನೆತ್ತಿಯ ವರೆಗೆ ಒಂದು ದೋಷವಾದರೂ ಇರಲಿಲ್ಲ.’—2 ಸಮುವೇಲ 14:25.

ಆದರೆ ಅವನಲ್ಲಿ ಬರೀ ಕೆಟ್ಟ ಗುಣಗಳೇ ತುಂಬಿಕೊಂಡಿದ್ದವು. ಅಹಂಕಾರ, ವಂಚನೆ ಮತ್ತು ದುರಾಸೆ ಅವನಲ್ಲಿತ್ತು! ಬೈಬಲ್‌ ಅವನನ್ನು ಕೊಲೆಗಾರ, ನಿಷ್ಠೆ ಮತ್ತು ನಾಚಿಕೆ ಇಲ್ಲದವನು ಎಂದು ವರ್ಣಿಸುತ್ತದೆ.

ಹಾಗಾಗಿ ಬೈಬಲ್‌ ಕೊಡುವ ಸಲಹೆ ಏನೆಂದರೆ:

“ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ.”—ಕೊಲೊಸ್ಸೆ 3:10.

“ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರದೆ . . . ಹೃದಯದ ಗುಪ್ತ ವ್ಯಕ್ತಿಯು ನಿಮ್ಮ ಅಲಂಕಾರವಾಗಿರಲಿ.” —1 ಪೇತ್ರ 3:3, 4.

ನಾವು ಚೆನ್ನಾಗಿ ಕಾಣಿಸಬೇಕು ಅಂತ ಆಸೆಪಡುವುದರಲ್ಲಿ ತಪ್ಪಿಲ್ಲ. ಆದರೆ ನಮ್ಮ ಸೌಂದರ್ಯಕ್ಕಿಂತ ನಮ್ಮಲ್ಲಿರುವ ಒಳ್ಳೇ ಗುಣಗಳು ತುಂಬ ಮುಖ್ಯ. ಕಟ್ಟುಮಸ್ತಿನ ದೇಹ ಅಥವಾ ತೆಳ್ಳಗಿನ ದೇಹ ಜನರ ಗಮನ ಸೆಳೆಯುತ್ತೆ ನಿಜ. ಆದರೆ ಇದಕ್ಕಿಂತ ಹೆಚ್ಚಾಗಿ ಜನರು ನೋಡುವುದು ಒಳ್ಳೇ ಗುಣಗಳನ್ನೇ! “ನಾವು ಸುಂದರವಾಗಿದ್ದರೆ ಜನರು ನೋಡಿ ಆಮೇಲೆ ಮರೆತುಬಿಡ್ತಾರೆ. ಜನರು ನೆನಪಿಡೋದು ನಮ್ಮ ವ್ಯಕ್ತಿತ್ವ ಮತ್ತು ಒಳ್ಳೇ ಗುಣಗಳನ್ನೇ” ಅಂತ ಫೆಲಿಸಿಯಾ ಹೇಳುತ್ತಾಳೆ.

ನಿಮ್ಮ ನೋಟದ ಬಗ್ಗೆ ಒಂದು ಕಿರುನೋಟ

‘ನಾನು ನೋಡಲು ಚೆನ್ನಾಗಿಲ್ಲ’ ಅಂತ ನಿಮಗೆ ಬೇಜಾರು ಆಗುತ್ತಾ ಇರುತ್ತಾ?

ಸೌಂದರ್ಯ ಚಿಕಿತ್ಸೆ ಅಥವಾ ಅತಿಯಾದ ಡಯಟ್‌ ಮಾಡೋದು ಬಿಟ್ಟರೆ ಬೇರೆ ದಾರಿಯಿಲ್ಲ ಅಂತ ಅನಿಸಿದ್ಯಾ?

ಯಾವುದನ್ನೆಲ್ಲ ಸರಿಪಡಿಸಿಕೊಂಡರೆ ನೀವು ಸೂಪರಾಗಿ ಕಾಣುತ್ತೀರ ಅಂತ ನಿಮಗನಿಸುತ್ತೆ? (ಗುರುತು ಹಾಕಿ.)

  • ಎತ್ತರ

  • ತೂಕ

  • ತಲೆಕೂದಲು

  • ದೇಹದ ಆಕಾರ

  • ಮುಖ

  • ಚರ್ಮದ ಬಣ್ಣ

ಮೊದಲ ಎರಡು ಪ್ರಶ್ನೆಗಳಿಗೆ ಹೌದು ಅಂತ ಗುರುತು ಹಾಕಿ, ಮೂರನೇ ಪ್ರಶ್ನೆಗೆ ಮೂರಕ್ಕಿಂತ ಜಾಸ್ತಿ ವಿಷಯಗಳಿಗೆ ಗುರುತು ಹಾಕಿದ್ದೀರಾ? ಸಾಮಾನ್ಯವಾಗಿ ಸೌಂದರ್ಯದ ಬಗ್ಗೆ ಹೆಚ್ಚು ಯೋಚಿಸುತ್ತಾ ನಾವು ಸುಮ್ಮನೆ ತಲೆಕೆಡಿಸಿಕೊಳ್ಳುತ್ತೇವೆ. ಆದರೆ ನೆನಪಿಡಿ, ನೀವು ನಿಮ್ಮಲ್ಲಿ ನೋಡುವಷ್ಟು ಕುಂದುಕೊರತೆಗಳನ್ನು ಬೇರೆಯವರು ನಿಮ್ಮಲ್ಲಿ ಖಂಡಿತ ನೋಡಲ್ಲ.1 ಸಮುವೇಲ 16:7.