ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 7

ದೇವರ ರಾಜ್ಯ ಅಂದರೇನು?

ದೇವರ ರಾಜ್ಯ ಅಂದರೇನು?

1. ದೇವರ ರಾಜ್ಯ ಅಂದರೇನು?

ಯೇಸುವನ್ನು ಒಬ್ಬ ಒಳ್ಳೇ ರಾಜನನ್ನಾಗಿ ಮಾಡುವುದು ಯಾವುದು?​—ಮಾರ್ಕ 1:40-42

ದೇವರ ಸರ್ಕಾರವೇದೇವರ ರಾಜ್ಯ. ಸ್ವರ್ಗದಿಂದ ಆಳುವ ಅದು ಭೂಮಿಯಲ್ಲಿರುವ ಎಲ್ಲಾ ಸರ್ಕಾರಗಳನ್ನು ಉರುಳಿಸಿ ಸ್ವರ್ಗದಲ್ಲೂ ಭೂಮಿಯಲ್ಲೂ ದೇವರ ಉದ್ದೇಶವನ್ನು ಈಡೇರಿಸುವುದು. ಇದು ನಿಜಕ್ಕೂ ಸಿಹಿಸುದ್ದಿ. ಏಕೆಂದರೆ ಜನರು ಇಂದು ಒಳ್ಳೆಯ ಸರ್ಕಾರ ಬರಬೇಕೆಂದು ಆಶಿಸುತ್ತಿದ್ದಾರೆ. ದೇವರ ಸರ್ಕಾರ ಮಾನವರ ಎಲ್ಲಾ ಅಗತ್ಯಗಳನ್ನು ಪೂರೈಸಿ ಭೂಮಿಯಲ್ಲಿ ಒಗ್ಗಟ್ಟು ಐಕ್ಯತೆಯನ್ನು ತರುವುದು.​ದಾನಿಯೇಲ 2:44; ಮತ್ತಾಯ 6:9, 10; 24:14 ಓದಿ.

ಒಂದು ರಾಜ್ಯ ಅಂದಮೇಲೆ ಆಳ್ವಿಕೆ ನಡೆಸಲು ಒಬ್ಬ ರಾಜ ಇರಲೇಬೇಕು. ದೇವರು ಯಾರನ್ನು ರಾಜನಾಗಿ ನೇಮಿಸಿದ್ದಾನೆ ಗೊತ್ತೆ? ತನ್ನ ಮಗನಾದ ಯೇಸು ಕ್ರಿಸ್ತನನ್ನು.​ಪ್ರಕಟನೆ 11:15 ಓದಿ.

ವಿಡಿಯೊ ನೋಡಿ ದೇವರ ರಾಜ್ಯ ಅಂದರೇನು?

2. ಯೇಸು ನಿಜಕ್ಕೂ ಒಬ್ಬ ದಕ್ಷ ರಾಜನೇಕೆ?

ದೇವಪುತ್ರ ಯೇಸುವಿಗೆ ಮಾನವರ ಮೇಲೆ ಅಪಾರ ಪ್ರೀತಿಯಿದೆ. ಸದಾ ನೀತಿ ನ್ಯಾಯದ ಪರ ವಹಿಸುವ ಸ್ವಭಾವ ಆತನದ್ದು. (ಮತ್ತಾಯ 11:28-30) ಅವನು ಸ್ವರ್ಗದಿಂದ ಭೂಮಿಯನ್ನು ಆಳುವುದರಿಂದ ಮಾನವರ ಸಂಕಷ್ಟಗಳನ್ನು ಹೋಗಲಾಡಿಸುವ ಅಪಾರ ಶಕ್ತಿ ಆತನಿಗಿದೆ. ಮೃತಪಟ್ಟ ನಂತರ ಅವನು ಪುನರುತ್ಥಾನಗೊಂಡು ಸ್ವರ್ಗಕ್ಕೆ ಹೋದನು. ರಾಜ್ಯಾಧಿಕಾರ ಸಿಗುವ ವರೆಗೂ ದೇವರ ಬಲಗಡೆ ಆಸೀನನಾಗಿದ್ದನು. (ಇಬ್ರಿಯ 10:12, 13) ನಂತರ ದೇವರು ಅವನಿಗೆ ಪಟ್ಟಾಭಿಷೇಕ ಮಾಡಿದನು.​ದಾನಿಯೇಲ 7:13, 14 ಓದಿ.

3. ಯೇಸುವಿನ ಜೊತೆ ಬೇರೆ ಯಾರು ಆಳ್ವಿಕೆ ನಡೆಸುವರು?

ಪವಿತ್ರ ಜನರ ಅಥವಾ ಭಕ್ತಜನರ ಒಂದು ಗುಂಪು ಯೇಸುವಿನೊಂದಿಗೆ ಭೂಮಿಯನ್ನು ಆಳುವುದು. (ದಾನಿಯೇಲ 7:27) ಇವರು ಸ್ವರ್ಗದಿಂದ ಆಳುವುದಾದರೂ ಮನುಷ್ಯರೊಳಗಿಂದ ಆಯ್ಕೆಯಾಗುತ್ತಾರೆ. ಈ ಪೈಕಿ ಮೊದಲು ಆಯ್ಕೆಯಾಗಿದ್ದು ಯೇಸುವಿನೊಂದಿಗಿದ್ದ ಆಪ್ತ ಶಿಷ್ಯರು. ಯೆಹೋವ ದೇವರು ಇಂದಿನ ವರೆಗೂ ದೇವಭಕ್ತ ಸ್ತ್ರೀಪುರುಷರನ್ನು ಆಯ್ಕೆ ಮಾಡುತ್ತಿದ್ದಾನೆ. ಅವರು ಸಹ ಯೇಸುವಿನಂತೆ ಪುನರುತ್ಥಾನಗೊಂಡು ಅದೃಶ್ಯ ಶರೀರಿಗಳಾಗಿ ಸ್ವರ್ಗಕ್ಕೆ ಹೋಗುತ್ತಾರೆ.​ಯೋಹಾನ 14:1-3; 1 ಕೊರಿಂಥ 15:42-44 ಓದಿ.

ಎಷ್ಟು ಮಂದಿ ಸ್ವರ್ಗಕ್ಕೆ ಹೋಗುತ್ತಾರೆ? ಯೇಸು ಅವರನ್ನು ‘ಚಿಕ್ಕ ಹಿಂಡು’ ಎಂದು ಹೇಳಿದನು. (ಲೂಕ 12:32) ಅವರ ಒಟ್ಟು ಸಂಖ್ಯೆ 1,44,000 ಆಗಿದ್ದು ಯೇಸುವಿನೊಂದಿಗೆ ಭೂಮಿಯನ್ನು ಆಳುವರು.​ಪ್ರಕಟನೆ 14:1 ಓದಿ.

4. ಯೇಸು ಆಳ್ವಿಕೆ ಆರಂಭಿಸಿದಾಗ ಏನಾಯ್ತು ಗೊತ್ತೆ?

ದೇವರ ರಾಜ್ಯ ಇಸವಿ 1914ರಲ್ಲಿ ಆಳ್ವಿಕೆ ಆರಂಭಿಸಿತು. * ಯೇಸು ಅಧಿಕಾರ ಸ್ವೀಕರಿಸಿದ ಕೂಡಲೇ ಸೈತಾನ ಹಾಗೂ ಅವನ ದೆವ್ವಗಳನ್ನು ಸ್ವರ್ಗದಿಂದ ಭೂಮಿಗೆ ತಳ್ಳಿದನು. ಆ ಸೋಲಿನಿಂದ ಕುಪಿತನಾದ ಸೈತಾನ ಭೂಮಿಯ ಎಲ್ಲಾ ಕಡೆ ಸಮಸ್ಯೆ ಉಂಟುಮಾಡಲು ತೊಡಗಿದನು. (ಪ್ರಕಟನೆ 12:7-10, 12) ಅಂದಿನಿಂದ ಮಾನವರ ಸಂಕಷ್ಟಗಳು ಹೆಚ್ಚುತ್ತಲೇ ಇವೆ. ಯುದ್ಧ, ಆಹಾರದ ಕೊರತೆ, ಅಂಟುರೋಗ, ಭೂಕಂಪ ಇವೆಲ್ಲ ದೇವರ ರಾಜ್ಯ ಶೀಘ್ರದಲ್ಲೇ ಭೂಮಿಯಲ್ಲಿ ಆಡಳಿತ ವಹಿಸುವುದು ಎನ್ನುವ “ಸೂಚನೆ” ಆಗಿದೆ.​ಲೂಕ 21:7, 10, 11, 31 ಓದಿ.

5. ದೇವರ ರಾಜ್ಯ ಏನನ್ನು ಸಾಧಿಸುತ್ತದೆ?

ದೇವರ ಸರ್ಕಾರದ ಕುರಿತು ಇಂದು ಜಗತ್ತಿನಾದ್ಯಂತ ಎಲ್ಲಾ ಜನರಿಗೆ ತಿಳಿಸಲಾಗುತ್ತಿದೆ. ಆ ಮೂಲಕ ದೇವರ ರಾಜ್ಯವು ಬೇರೆ ಬೇರೆ ರಾಷ್ಟ್ರಗಳಲ್ಲಿರುವ ಅಸಂಖ್ಯ ಮಾನವರ ಮಧ್ಯೆ ಪ್ರೀತಿಯ ಬಾಂಧವ್ಯವನ್ನು ಬೆಸೆಯುತ್ತಿದೆ. ಲಕ್ಷಾಂತರ ಮಂದಿ ದೇವರ ರಾಜ್ಯದ ಪ್ರಜೆಗಳಾಗಿ ಯೇಸುವಿನ ಆಡಳಿತಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಮಾನವ ಸರ್ಕಾರಗಳನ್ನು ನಾಶಗೊಳಿಸುವ ಸಮಯದಲ್ಲಿ ದೇವರ ರಾಜ್ಯವು ಭೂಮಿಯಲ್ಲಿರುವ ತನ್ನ ಪ್ರಜೆಗಳನ್ನು ರಕ್ಷಿಸುವುದು. ಹಾಗಾಗಿ ದೇವರ ರಾಜ್ಯದ ಪ್ರಜೆಗಳಾಗಲು ಇಷ್ಟಪಡುವವರು ಯೇಸುವಿನ ಆಡಳಿತಕ್ಕೆ ಅಧೀನತೆ ತೋರಿಸಲು ಕಲಿತುಕೊಳ್ಳಬೇಕು.​ಪ್ರಕಟನೆ 7:9, 14, 16, 17 ಓದಿ.

ಯೇಸು ಈ ಭೂಮಿಯನ್ನು 1,000 ವರ್ಷ ಆಳುತ್ತಾನೆ. ಮಾನವರನ್ನು ದೇವರು ಸೃಷ್ಟಿ ಮಾಡಿದಾಗ ಈ ಭೂಮಿ ಮೇಲಿದ್ದ ಶಾಂತಿ ನೆಮ್ಮದಿಯ ಪರಿಸ್ಥಿತಿಯನ್ನು ದೇವರ ರಾಜ್ಯ ಮತ್ತೆ ಇಡೀ ಭೂಮಿಯಲ್ಲಿ ತರುವುದು. ಸಾವಿರ ವರ್ಷ ಆಳಿದ ನಂತರ ಯೇಸು ತನ್ನ ಅಧಿಕಾರವನ್ನು ದೇವರಿಗೆ ವಾಪಸ್ಸು ಕೊಡುವನು. (1 ಕೊರಿಂಥ 15:24-26) ದೇವರ ರಾಜ್ಯದ ಕುರಿತ ಈ ಎಲ್ಲಾ ಸಿಹಿಸುದ್ದಿಯನ್ನು ನೀವು ಯಾರ್ಯಾರಿಗೆ ತಿಳಿಸಲು ಇಷ್ಟಪಡುತ್ತೀರಿ?​ಕೀರ್ತನೆ 37:10, 11, 29 ಓದಿ.

 

^ ಪ್ಯಾರ. 6 ಇಸವಿ 1914ರ ಕುರಿತು ಬೈಬಲ್‌ ನುಡಿದ ಭವಿಷ್ಯವಾಣಿ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 215ರಿಂದ 218 ನೋಡಿ.