ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಯುವಜನರು

ನಿಮಗ್ಯಾರೂ ಸ್ನೇಹಿತರೇ ಇಲ್ಲ ಅಂತ ಅನಿಸುತ್ತಾ?

ನಿಮಗ್ಯಾರೂ ಸ್ನೇಹಿತರೇ ಇಲ್ಲ ಅಂತ ಅನಿಸುತ್ತಾ?

ಸಮಸ್ಯೆ

“ನನಗೆ ಇಬ್ಬರು ಫ್ರೆಂಡ್ಸ್‌ ಇದ್ದರು, ಅವರಿಬ್ಬರೂ ಯಾವಾಗಲೂ ಜೊತೆಯಲ್ಲೇ ಇರುತ್ತಿದ್ದರು. ನನ್ನನ್ನು ಮಾತ್ರ ಕರೀತಾನೇ ಇರಲಿಲ್ಲ. ಯಾವಾಗಲೂ ನನ್ನ ಹತ್ರ ಬಂದು ‘ನಾವೆಷ್ಟೊಂದು ಎಂಜಾಯ್‌ ಮಾಡಿದ್ವಿ ಗೊತ್ತಾ’ ಅಂತ ಹೇಳುತ್ತಿದ್ದರು. ಒಂದು ಸಲ, ಅವರಲ್ಲೊಬ್ಬಳಿಗೆ ನಾನು ಫೋನ್‌ ಮಾಡಿದಾಗ ಬೇರೆ ಯಾರೋ ಫೋನ್‌ ಎತ್ತಿದರು. ಇನ್ನೊಬ್ಬ ಫ್ರೆಂಡೂ ಅಲ್ಲೇ ಇದ್ದಾಳೆ ಅಂತ ನನಗೆ ಗೊತ್ತಾಯಿತು. ಅವರಿಬ್ರೂ ಖುಷಿ ಖುಷಿಯಾಗಿ ಮಾತಾಡುತ್ತಾ ಇದ್ದದ್ದು, ನಗುತ್ತಿದ್ದದ್ದು ನನಗೆ ಕೇಳಿಸ್ತು. ಆಗ ನನಗೆ ಮುಂಚೆಗಿಂತ ಹೆಚ್ಚು ಬೇಜಾರಾಯ್ತು, ನನಗ್ಯಾರೂ ಇಲ್ಲ ಅಂತ ಅನಿಸ್ತು.”—ಮರಿಯಾ. *

‘ನನಗ್ಯಾರೂ ಇಲ್ಲ, ನಾನು ಒಂಟಿ’ ಅಂತ ನಿಮಗೆ ಯಾವತ್ತಾದರೂ ಅನಿಸಿದೆಯಾ? ಇಂಥ ಸಮಸ್ಯೆ ಇರುವುದಾದರೆ ನೀವೇನು ಮಾಡಬೇಕು ಅಂತ ಬೈಬಲ್‌ ಒಳ್ಳೆಯ ಸಲಹೆ ಕೊಡುತ್ತದೆ. ಅವುಗಳನ್ನು ತಿಳಿದುಕೊಳ್ಳುವ ಮುಂಚೆ ಒಂಟಿತನದ ಬಗ್ಗೆ ಕೆಲವು ಸತ್ಯಾಂಶಗಳನ್ನು ನೋಡೋಣ.

ನಿಮಗಿದು ತಿಳಿದಿರಲಿ

ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಒಂಟಿತನ ಕಾಡುತ್ತದೆ. ನಿಮಗೆ ಎಷ್ಟು ಜನ ಸ್ನೇಹಿತರಿದ್ದಾರೆ ಅನ್ನುವುದು ಮುಖ್ಯ ಅಲ್ಲ, ಅವರು ನಿಮಗೆಷ್ಟು ಆಪ್ತರಾಗಿದ್ದಾರೆ ಅನ್ನುವುದೇ ಮುಖ್ಯ. ಸಮಾಜದಲ್ಲಿರುವ ಪ್ರಸಿದ್ಧ ವ್ಯಕ್ತಿಗಳ ಸುತ್ತ ಯಾವಾಗಲೂ ಜನರು ಮುತ್ತಿಕೊಂಡಿದ್ದರೂ ಅವರಿಗೆ ಆಪ್ತ ಸ್ನೇಹಿತರು ಇಲ್ಲದೇ ಇರಬಹುದು. ಹಾಗಾಗಿ ಅವರಿಗೆ ಸಹ ಕೆಲವೊಮ್ಮೆ ಒಂಟಿತನ ಕಾಡುತ್ತದೆ.

ಒಂಟಿತನದಿಂದ ಆರೋಗ್ಯ ಹಾಳಾಗುತ್ತದೆ. ಯಾರ ಜೊತೆಯಲ್ಲೂ ಹೆಚ್ಚು ಬೆರೆಯದೆ ಒಂಟಿಯಾಗಿದ್ದರೆ ಪರಿಣಾಮ ಏನಾಗುತ್ತದೆ ಎಂದು ತಿಳಿಯಲು ಸಂಶೋಧಕರು 148 ಅಧ್ಯಯನಗಳನ್ನು ನಡೆಸಿದರು. ಒಂಟಿಯಾಗಿರುವವರು ಇತರರಿಗಿಂತ ಬೇಗನೇ ಸಾಯುತ್ತಾರೆಂದು ಇದರಿಂದ ತಿಳಿದು ಬಂತು. ಅಷ್ಟೇ ಅಲ್ಲದೆ, ಇಂಥವರು ಬೊಜ್ಜು ಮೈಯವರಿಗಿಂತ ಎರಡು ಪಟ್ಟು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಒಂಟಿತನದ ಸಮಸ್ಯೆ ದಿನಕ್ಕೆ 15 ಸಿಗರೇಟು ಸೇದುವುದಕ್ಕೆ ಸಮ ಎಂದು ಆ ಸಂಶೋಧಕರು ಕಂಡುಹಿಡಿದಿದ್ದಾರೆ.

ಒಂಟಿತನದಿಂದ ಸುಲಭವಾಗಿ ಅಪಾಯದಲ್ಲಿ ಬೀಳುವ ಸಾಧ್ಯತೆ ಇದೆ. ಒಂಟಿ ಭಾವನೆ ಕಾಡುವಾಗ ಸಾಮಾನ್ಯವಾಗಿ ನಾವು ಯಾರನ್ನು ಬೇಕಾದರೂ ಸ್ನೇಹಿತರನ್ನಾಗಿ ಮಾಡಿಕೊಂಡು ಬಿಡುತ್ತೇವೆ. ಯುವ ಪ್ರಾಯದ ಆ್ಯಲನ್‌ ಇದನ್ನು ಒಪ್ಪಿಕೊಳ್ಳುತ್ತಾ ಹೀಗೆ ಹೇಳುತ್ತಾನೆ: “ಒಂಟಿತನ ಕಾಡುವಾಗ ‘ಯಾರೇ ಆದರೂ ಪರವಾಗಿಲ್ಲ, ಸ್ನೇಹಿತರು ಸಿಕ್ಕಿದರೆ ಸಾಕು’ ಅಂತ ನಿಮಗನಿಸುತ್ತದೆ. ಯಾರೂ ಇಲ್ಲದಿರುವುದಕ್ಕಿಂತ ಯಾರೋ ಒಬ್ಬರು ಇರುವುದು ಉತ್ತಮ ಅಂತ ನೀವು ಯೋಚಿಸಬಹುದು. ಆದರೆ ಇದರಿಂದ ನಿಮಗೆ ಅಪಾಯವಿದೆ.”

ಟಿ.ವಿ., ಮೊಬೈಲ್‌, ಕಂಪ್ಯೂಟರ್‌ಗಳಿಂದ ಪರಿಹಾರ ಸಿಗುವುದಿಲ್ಲ. “ದಿನಕ್ಕೆ ನೂರಾರು ಜನರಿಗೆ ಮೆಸೇಜ್‌ ಮಾಡಿದರೂ ನನಗೆ ಒಂಟಿತನ ಕಾಡುತ್ತದೆ” ಅಂತ ನವ್ಯ ಎಂಬ ಯುವತಿ ಹೇಳುತ್ತಾಳೆ. ತರುಣ್‌ ಎಂಬ ಹದಿವಯಸ್ಸಿನ ಹುಡುಗನಿಗೂ ಇದೇ ರೀತಿ ಅನಿಸುತ್ತದೆ. “ಮೆಸೇಜ್‌ ಮಾಡುವುದು ಕುರುಕಲು ತಿಂಡಿ ತಿಂದಂತೆ, ಆದರೆ ಸ್ನೇಹಿತರನ್ನು ಭೇಟಿಯಾಗಿ ಮಾತಾಡುವುದು ಊಟದಂತೆ. ಕುರುಕಲು ತಿಂಡಿ ತಿನ್ನಲು ರುಚಿಯಾಗಿರುತ್ತದೆ ಆದರೆ ಊಟ ಮಾಡಿದಾಗಲೇ ತೃಪ್ತಿಯಾಗುವುದು” ಎಂದು ಅವನು ಹೇಳುತ್ತಾನೆ.

ನೀವೇನು ಮಾಡಬಹುದು?

ಒಳ್ಳೇದನ್ನೇ ಯೋಚಿಸಿ. ನಿಮ್ಮನ್ನು ಮಾತ್ರ ಬಿಟ್ಟು ನಿಮ್ಮ ಫ್ರೆಂಡ್ಸ್‌ ಎಲ್ಲರೂ ಸೇರಿ ಎಂಜಾಯ್‌ ಮಾಡುತ್ತಿರೋ ಫೋಟೋವನ್ನು ನೀವು ಇಂಟರ್‌ನೆಟ್‍ನಲ್ಲಿ ನೋಡಿದಿರಿ ಎಂದಿಟ್ಟುಕೊಳ್ಳಿ. ಈಗ ನೀವು ಏನು ಯೋಚಿಸುತ್ತೀರಿ ಅನ್ನುವುದು ನಿಮ್ಮ ಕೈಯಲ್ಲೇ ಇದೆ. ಅವರು ನಿಮ್ಮನ್ನು ಬೇಕಂತನೇ ಕರೆಯಲಿಲ್ಲ ಅಂತ ಅಂದುಕೊಳ್ಳಬಹುದು ಅಥವಾ ಒಳ್ಳೆಯ ರೀತಿಯಲ್ಲೂ ಯೋಚಿಸಬಹುದು. ಅವರು ಯಾಕೆ ಕರೆಯಲಿಲ್ಲ, ಏನಾಗಿರಬಹುದು ಇದೇನೂ ನಿಮಗೆ ಗೊತ್ತಿಲ್ಲದ ಕಾರಣ ಸುಮ್ಮಸುಮ್ಮನೇ ಏನೇನೋ ಯೋಚಿಸಬೇಡಿ. ಅದರ ಬದಲಿಗೆ ಒಳ್ಳೇದನ್ನೇ ಯೋಚಿಸಿ. ಅನೇಕ ಸಾರಿ ಪರಿಸ್ಥಿತಿಯಿಂದಾಗಿ ಅಲ್ಲ, ನಾವು ಯೋಚಿಸುವ ರೀತಿಯಿಂದಲೇ ನಮಗೆ ಒಂಟಿ ಭಾವನೆ ಕಾಡುತ್ತದೆ. ಆದ್ದರಿಂದ ಅದನ್ನು ಸರಿಪಡಿಸಿಕೊಳ್ಳಿ.—ಬೈಬಲ್‌ ತತ್ವ: ಜ್ಞಾನೋಕ್ತಿ 15:15.

‘ಯಾವಾಗಲೂ ಹೀಗೇನೇ’ ಅಂತ ಯೋಚಿಸಬೇಡಿ. ಒಂಟಿ ಭಾವನೆ ಕಾಡುವಾಗ ‘ನನ್ನನ್ನು ಯಾರೂ, ಎಲ್ಲಿಗೂ ಕರೆಯುವುದೇ ಇಲ್ಲ’ ಅಥವಾ ‘ಯಾವಾಗಲೂ ನನ್ನನ್ನು ದೂರ ಇಡ್ತಾರೆ’ ಅಂತ ಯೋಚಿಸಬಹುದು. ಈ ರೀತಿ ಯೋಚಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಯಾಕೆಂದರೆ ಇದರಿಂದಾಗಿ ನಿಮಗೆ ‘ನಾನಂದರೆ ಯಾರಿಗೂ ಇಷ್ಟ ಇಲ್ಲ’ ಅಂತ ಅನಿಸುತ್ತೆ. ಆಗ ನಿಮ್ಮನ್ನು ನೀವೇ ಎಲ್ಲರಿಂದ ದೂರ ಮಾಡಿಕೊಳ್ಳುತ್ತೀರಿ. ಹೀಗೆ ನಿಮ್ಮಲ್ಲಿ ದಿನೇ ದಿನೇ ಒಂಟಿ ಭಾವನೆ ಹೆಚ್ಚಾಗುವುದರಿಂದ ನೀವು ಕುಗ್ಗಿ ಹೋಗುತ್ತೀರಿ.—ಬೈಬಲ್‌ ತತ್ವ: ಜ್ಞಾನೋಕ್ತಿ 18:1.

ನಿಮಗಿಂತ ದೊಡ್ಡವರ ಸ್ನೇಹ ಬೆಳೆಸಿ. ಬೈಬಲ್‍ನಲ್ಲಿ ದಾವೀದ ಎಂಬ ವ್ಯಕ್ತಿಯ ಉದಾಹರಣೆ ಇದೆ. ಅವನು ಯೋನಾತಾನನನ್ನು ಮೊಟ್ಟ ಮೊದಲ ಬಾರಿ ಭೇಟಿಯಾದಾಗ ಹದಿವಯಸ್ಸಿನಲ್ಲಿದ್ದ. ಯೋನಾತಾನನು ದಾವೀದನಿಗಿಂತ 30 ವರ್ಷ ದೊಡ್ಡವನು. ಇಷ್ಟೊಂದು ಅಂತರ ಇದ್ದರೂ ಅವರಿಬ್ಬರೂ ತುಂಬ ಆಪ್ತ ಸ್ನೇಹಿತರಾದರು. (1 ಸಮುವೇಲ 18:1) ನೀವು ಸಹ ದಾವೀದನಂತೆ ನಿಮಗಿಂತ ದೊಡ್ಡವರ ಸ್ನೇಹ ಮಾಡಬಹುದು. “ನನಗಿಂತ ಹೆಚ್ಚಿನ ವಯಸ್ಸಿನವರೊಂದಿಗೆ ಸ್ನೇಹ ಮಾಡುವುದು ಎಷ್ಟೊಂದು ಒಳ್ಳೆಯದೆಂದು ನನಗೆ ಇತ್ತೀಚೆಗಷ್ಟೇ ತಿಳಿಯಿತು. ನನಗಿಂತ ತುಂಬ ದೊಡ್ಡವರು ಸಹ ನನ್ನ ಆಪ್ತ ಸ್ನೇಹಿತರಾಗಿದ್ದಾರೆ. ಅವರು ನಮ್ಮಂತೆ ಚಂಚಲರಾಗಿರುವುದಿಲ್ಲ, ಎಲ್ಲಾ ಸಮಯದಲ್ಲೂ ಪ್ರೌಢರಾಗಿ ಯೋಚಿಸುತ್ತಾರೆ” ಎಂದು 21 ವಯಸ್ಸಿನ ಕಿಯಾರ ಹೇಳುತ್ತಾಳೆ.—ಬೈಬಲ್‌ ತತ್ವ: ಯೋಬ 12:12.

ಒಬ್ಬರೇ ಇರುವುದರಿಂದ ಸಹ ಪ್ರಯೋಜನವಿದೆ ಎಂದು ನೆನಪಿನಲ್ಲಿಡಿ. ಕೆಲವರಿಗೆ 24 ಗಂಟೆನೂ ಅವರ ಜೊತೆ ಯಾರಾದರೂ ಇರಲೇ ಬೇಕು. ಒಂದು ಕ್ಷಣ ಯಾರೂ ಇಲ್ಲ ಅಂತಾದರೂ ಒಂಟಿತನ ಕಾಡುತ್ತದೆ. ಆದರೆ ನಾವು ಹಾಗಿರಬಾರದು. ಯೇಸು ಎಲ್ಲ ಜನರ ಜೊತೆ ಬೆರೆಯುತ್ತಿದ್ದನು. ಆದರೂ ಅವನು ಕೆಲವೊಂದು ಸಲ ಒಬ್ಬನೇ ಸಮಯ ಕಳೆಯುತ್ತಿದ್ದನು. (ಮತ್ತಾಯ 14:23; ಮಾರ್ಕ 1:35) ನೀವು ಸಹ ಅದೇ ರೀತಿ ಮಾಡಿ. ಒಬ್ಬರೇ ಇರಲಿಕ್ಕೇನೇ ಆಗುವುದಿಲ್ಲ ಎಂದು ಯೋಚಿಸುವ ಬದಲು, ಅಂಥ ಸಮಯದಲ್ಲಿ ನಿಮ್ಮ ಜೀವನದ ಸಂತೋಷದ ಕ್ಷಣಗಳ ಬಗ್ಗೆ ಯೋಚಿಸಿ. ನೀವು ಈ ರೀತಿ ಮಾಡುವುದಾದರೆ ಇತರರು ನಿಮ್ಮನ್ನು ಇಷ್ಟಪಡುತ್ತಾರೆ.—ಜ್ಞಾನೋಕ್ತಿ 13:20. ▪ (g15-E 04)

^ ಪ್ಯಾರ. 4 ಈ ಲೇಖನದಲ್ಲಿರುವ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.