ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಕಾಸವೇ? ವಿನ್ಯಾಸವೇ?

ಬೆಕ್ಕಿನ ಮೀಸೆ

ಬೆಕ್ಕಿನ ಮೀಸೆ

ಬೆಕ್ಕುಗಳು ಸಾಮಾನ್ಯವಾಗಿ ಕತ್ತಲಲ್ಲೂ ಚುರುಕಾಗಿರುತ್ತವೆ. ಅವು ಕತ್ತಲಲ್ಲಿ ಏನು ನಡೆಯುತ್ತದೆ ಎಂದು ಗ್ರಹಿಸುತ್ತವೆ. ಹೇಗೆ ಗೊತ್ತಾ? ಅವುಗಳ ಮೀಸೆ ಸಹಾಯದಿಂದ. ಒಂದು ರೀತಿಯಲ್ಲಿ, ಬೆಕ್ಕುಗಳಿಗೆ ಅವುಗಳ ಮೀಸೆ ರಾತ್ರಿಯಲ್ಲಿ ಕಣ್ಣಿನ ಥರ ಕೆಲಸ ಮಾಡುತ್ತದೆ.

ಪರಿಗಣಿಸಿ: ಬೆಕ್ಕಿನ ಮೀಸೆಗಿರುವ ಅಂಗಾಂಶ (ಟಿಶ್ಯೂ) ಅನೇಕ ನರಗಳೊಂದಿಗೆ ಜೋಡಣೆಯಾಗಿದೆ. ಈ ನರಗಳು ಎಷ್ಟು ಸೂಕ್ಷ್ಮವಾಗಿ ಕೆಲಸ ಮಾಡುತ್ತವೆ ಎಂದರೆ ಗಾಳಿಯಲ್ಲಾಗುವ ಸ್ವಲ್ಪ ಏರುಪೇರನ್ನೂ ಗ್ರಹಿಸುತ್ತವೆ. ಹಾಗಾಗಿಯೇ, ಹತ್ತಿರವಿರುವ ವಸ್ತುಗಳನ್ನು ನೋಡದೆಯೂ ಅವುಗಳನ್ನು ಗುರುತಿಸಲು ಬೆಕ್ಕುಗಳಿಂದ ಸಾಧ್ಯ.

ಬೆಕ್ಕಿನ ಮೀಸೆಗೆ ಗಾಳಿಯ ಒತ್ತಡವನ್ನು ಗ್ರಹಿಸುವ ಸಾಮರ್ಥ್ಯವಿದೆ. ಅದನ್ನು ಉಪಯೋಗಿಸಿ ತನ್ನ ಆಹಾರವನ್ನು, ಸುತ್ತಮುತ್ತಲಿನ ವಸ್ತುಗಳನ್ನು ಮತ್ತು ಅವುಗಳ ಚಲನೆಯನ್ನು ಬೆಕ್ಕು ಗುರುತಿಸುತ್ತದೆ. ಅಷ್ಟೇ ಅಲ್ಲದೆ, ಸಂದುಗಳಲ್ಲಿ ನುಸುಳುವ ಮುಂಚೆ ಅವು ಎಷ್ಟು ದೊಡ್ಡದಾಗಿವೆ, ಅವುಗಳಿಂದ ಒಳನುಗ್ಗಲು ಸಾಧ್ಯವಿದೆಯಾ ಎಂದು ಸಹ ಬೆಕ್ಕು ಗ್ರಹಿಸಬಲ್ಲದು. “ಬೆಕ್ಕುಗಳ ಮೀಸೆ ಹೇಗೆ ಕೆಲಸ ಮಾಡುತ್ತದೆ ಎಂದು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಒಂದಂತೂ ನಿಜ ಅವುಗಳ ಮೀಸೆಯನ್ನು ಕತ್ತರಿಸಿದರೆ ತಾತ್ಕಾಲಿಕವಾಗಿ ಬೆಕ್ಕುಗಳಿಗೆ ಕೈಕಾಲುಗಳೇ ಕಟ್ಟಿ ಹಾಕಿದಂತಾಗುತ್ತದೆ” ಎಂದು ಎನ್‌ಸೈಕ್ಲೋಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ.

ಬೆಕ್ಕಿನ ಮೀಸೆಗಿರುವ ಗ್ರಹಿಸುವ ಸಾಮರ್ಥ್ಯವನ್ನು ಅನುಕರಿಸುತ್ತಾ ವಿಜ್ಞಾನಿಗಳು ಅದರಂತೆ ಕೆಲಸ ಮಾಡುವ ಒಂದು ಸೂಕ್ಷ್ಮ ಸಂವೇದಕವನ್ನು ಕಂಡುಹಿಡಿದಿದ್ದಾರೆ. ಈ ಸಂವೇದಕಗಳಿಗೆ “ಇ-ವಿಸ್ಕರ್ಸ್‌” ಎಂದು ಹೆಸರು. ಇವುಗಳನ್ನು ರೋಬೋಟ್‌ಗಳಲ್ಲಿ ಅಳವಡಿಸುವುದಾದರೆ, ರೋಬೋಟ್‌ಗಳು ತಮ್ಮ ಸುತ್ತಲು ಇರುವ ವಸ್ತುಗಳನ್ನು ಪತ್ತೆ ಹಚ್ಚಬಲ್ಲವು. “ಹ್ಯೂಮನ್‌-ಮೆಷಿನ್‌ ಯೂಸರ್‌ ಇಂಟರ್‌ಫೇಸ್‌ಗಳನ್ನು, ಉತ್ಕೃಷ್ಟ ರೋಬೋಟ್‌ಗಳನ್ನು ತಯಾರಿಸುವಾಗ ಮತ್ತು ಜೀವವಿಜ್ಞಾನಕ್ಕೆ ಸಂಬಂಧಪಟ್ಟ ವಸ್ತುಗಳನ್ನು ತಯಾರಿಸುವಾಗ ಇ-ವಿಸ್ಕರ್ಸನ್ನು ಅಳವಡಿಸಿದರೆ ತುಂಬಾನೇ ಉಪಯುಕ್ತವಾಗಿರುತ್ತದೆ” ಎಂದು ಬರ್ಕ್ಲಿ ಎಂಬಲ್ಲಿನ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿಜ್ಞಾನಿ ಅಲಿ ಜಾವೆ ಹೇಳುತ್ತಾರೆ.

ನೀವೇನು ನೆನಸುತ್ತೀರಿ? ಬೆಕ್ಕಿನ ಮೀಸೆ ವಿಕಾಸವಾಗಿ ಬಂತೇ ಅಥವಾ ಅದನ್ನು ಸೃಷ್ಟಿಕರ್ತ ದೇವರು ವಿನ್ಯಾಸಿಸಿದನೇ? ▪ (g15-E 04)