ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ವೈವಾಹಿಕ ಜೀವನ

ಮನನೋಯಿಸದೆ ಮಾತಾಡೋದು ಹೇಗೆ?

ಮನನೋಯಿಸದೆ ಮಾತಾಡೋದು ಹೇಗೆ?

ಸವಾಲು

ಗಂಡಹೆಂಡತಿಯ ಮಧ್ಯೆ ಜಗಳವಾದರೆ ಸಾಕು ಒಬ್ಬರು ಇನ್ನೊಬ್ಬರ ಮೇಲೆ ಟೀಕೆಯ ಸುರಿಮಳೆಯನ್ನೇ ಸುರಿಸುತ್ತಾರೆ. ಇವತ್ತು ಸಂಗಾತಿಗಳ ಮಧ್ಯೆ ಈ ರೀತಿ ಮನನೋಯಿಸುವ ಮಾತುಗಳು ಸರ್ವೇ-ಸಾಧಾರಣ.

ನಿಮ್ಮ ವೈವಾಹಿಕ ಜೀವನದಲ್ಲೂ ಹೀಗೆ ನಡೆಯುತ್ತಿದೆಯಾ? ಇದಕ್ಕೆ ಖಂಡಿತ ಪರಿಹಾರ ಇದೆ. ಇದಕ್ಕೂ ಮೊದಲು, ಮನನೋಯಿಸುವಂಥ ಮಾತುಗಳನ್ನಾಡಲು ಕಾರಣಗಳೇನು? ಈ ಮಾತುಗಳಿಂದ ಆಗುವ ದುಷ್ಪರಿಣಾಮ ಏನು? ಎಂದು ಮೊದಲು ನೋಡೋಣ.

ಯಾಕೆ ಹೀಗಾಗುತ್ತೆ?

ಬೆಳೆದು ಬಂದ ರೀತಿ. ಮನನೋಯಿಸುವಂಥ ಮಾತುಗಳನ್ನು ಆಡುವ ವಾತಾವರಣದಲ್ಲೇ ಅನೇಕರು ಬೆಳೆದು ಬಂದಿರುತ್ತಾರೆ. ಹಾಗಾಗಿ ಕೆಲವು ದಂಪತಿಗಳು ತಮ್ಮ ಹೆತ್ತವರು ಉಪಯೋಗಿಸಿದ ಒರಟು ಮಾತುಗಳನ್ನೇ ಈಗ ತಮ್ಮ ಸಂಗಾತಿಗಳಿಗೂ ಉಪಯೋಗಿಸಬಹುದು.

ಮನರಂಜನೆಯ ಪ್ರಭಾವ. ಒರಟು ಮಾತುಗಳನ್ನು ಚಲನಚಿತ್ರ ಮತ್ತು ಟಿವಿ ಹಾಸ್ಯ ಕಾರ್ಯಕ್ರಮಗಳು ಹಗುರವಾಗಿ ಬಿಂಬಿಸುತ್ತಿವೆ. ಅದರಿಂದ ಯಾರಿಗೂ ತೊಂದರೆಯಿಲ್ಲ, ತಮಾಷೆಯ ಮಾತುಗಳಷ್ಟೇ ಅಂತ ವೀಕ್ಷಕನ ತಲೆಯಲ್ಲಿ ತುಂಬುತ್ತಿವೆ.

ಸಂಸ್ಕೃತಿ. ಅಧಿಕಾರ ಚಲಾಯಿಸುವ ಗಂಡಸೇ ‘ನಿಜವಾದ ಗಂಡಸು’ ಅಥವಾ ಮಹಿಳೆಯರು ತಾವು ಗಂಡಸರಿಗಿಂತ ಕಮ್ಮಿ ಇಲ್ಲ ಅಂತ ತೋರಿಸಿಕೊಡಲು ಒರಟೊರಟಾಗಿ ಮಾತಾಡಬೇಕು ಎಂದು ಸಮಾಜದಲ್ಲಿ ಕಲಿಸಲಾಗುತ್ತೆ. ಹಾಗಾಗಿ ಜಗಳವಾದಾಗ ತಾವು ಪತಿಪತ್ನಿ ಎನ್ನುವುದನ್ನೇ ಮರೆತು ಶತ್ರುಗಳಂತೆ ವರ್ತಿಸುತ್ತಾರೆ. ಹೃದಯಕ್ಕೆ ತಂಪೆರೆಯುವ ಮಾತುಗಳ ಬದಲು ಮನಸ್ಸನ್ನು ಇರಿಯುವಂಥ ಮಾತುಗಳನ್ನಾಡುತ್ತಾರೆ.

ಕಾರಣ ಏನೇ ಇದ್ದರೂ ಮನನೋಯಿಸುವಂಥ ಮಾತುಗಳು ದಂಪತಿಗಳನ್ನು ವಿವಾಹ ವಿಚ್ಛೇದನದ ತನಕ ಕೊಂಡೊಯ್ಯಬಲ್ಲದು. ಅದೂ ಅಲ್ಲದೆ ಆರೋಗ್ಯವನ್ನು ಹಾಳುಮಾಡುತ್ತೆ. ಶಾರೀರಿಕ ಏಟಿಗಿಂತ ಮಾತಿನೇಟನ್ನು ಸಹಿಸಿಕೊಳ್ಳೋದು ತುಂಬ ಕಷ್ಟ ಎನ್ನುತ್ತಾರೆ ಕೆಲವರು. ಉದಾಹರಣೆಗೆ ತನ್ನ ಗಂಡನಿಂದ ಯಾವಾಗಲೂ ಹೊಡೆತ, ಮಾತಿನೇಟು ತಿನ್ನುತ್ತಿದ್ದ ಪತ್ನಿ ಹೇಳುತ್ತಾರೆ: “ಅವರ ಹೊಡೆತಗಳನ್ನು ಹೇಗೋ ಸಹಿಸಿಕೊಳ್ಳುತ್ತಿದ್ದೆ. ಆದರೆ ಬೈಗುಳಗಳನ್ನು ಸಹಿಸಿಕೊಳ್ಳೋದು ತುಂಬ ಕಷ್ಟ ಆಗ್ತಿತ್ತು. ಅವರ ಅಂಥ ಮಾತುಗಳನ್ನು ಕೇಳೋ ಬದಲು ಹೊಡೆತನೇ ಮೇಲು ಅನಿಸ್ತಿತ್ತು.”

ಮನನೋಯಿಸುವಂಥ ಮಾತುಗಳು ನಿಮ್ಮ ಸಂಸಾರದಲ್ಲಿ ಒಡಕನ್ನು ಉಂಟುಮಾಡುತ್ತಾ ಇರೋದಾದರೆ ನೀವೇನು ಮಾಡಬಹುದು?

ಇದಕ್ಕೇನು ಪರಿಹಾರ?

ಪರಾನುಭೂತಿ ತೋರಿಸಿ. ನಿಮ್ಮ ಸಂಗಾತಿಯ ಸ್ಥಾನದಲ್ಲಿ ನಿಂತು ಆಲೋಚಿಸಿ. ನಿಮ್ಮ ಮಾತುಗಳು ಸಂಗಾತಿಯ ಮೇಲೆ ಯಾವ ಪ್ರಭಾವ ಬೀರುತ್ತಿದೆ ಅಂತ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಸಾಧ್ಯವಿರೋದಾದರೆ ಸಂಗಾತಿಯ ಮನನೋಯಿಸಿರುವ ಒಂದು ಸನ್ನಿವೇಶದ ಬಗ್ಗೆ ವಿಮರ್ಶೆ ಮಾಡಿ. ‘ನಾನು ಹಾಗಲ್ಲ ಹೀಗೆ ಹೇಳಿದ್ದು’ ಅಂತ ಸಮರ್ಥಿಸಲು ಹೋಗಬೇಡಿ. ನಿಮ್ಮ ಮಾತಿನಿಂದ ಸಂಗಾತಿಗೆ ಎಷ್ಟು ನೋವಾಗಿದೆ ಅನ್ನೋದಕ್ಕೆ ಗಮನಹರಿಸಿ. ಮನನೋಯಿಸುವ ಮಾತುಗಳ ಬದಲು ಮೃದು ಮಾತುಗಳನ್ನು ಹೇಗೆ ಆಡಬಹುದಿತ್ತು ಅಂತ ಯೋಚಿಸಿ. “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು” ಅಂತ ಹೇಳುತ್ತೆ ಬೈಬಲ್‌.—ಜ್ಞಾನೋಕ್ತಿ 15:1.

ಆದರ್ಶ ದಂಪತಿಗಳ ನಡೆನುಡಿ ಗಮನಿಸಿ. ಕೆಲವು ದಂಪತಿಗಳ ಪ್ರಭಾವದಿಂದ ನಿಮ್ಮ ಮಾತಿನ ಶೈಲಿ ಹಾಳಾಗಿ ಹೋಗಿರುವುದಾದರೆ ಒಳ್ಳೇ ಮಾದರಿಯಾಗಿರೋ ದಂಪತಿಗಳನ್ನು ಗಮನಿಸಿ. ಅವರ ಮಾತಿನ ಶೈಲಿ ಅನುಕರಿಸಲು ಯೋಗ್ಯ ಆಗಿದೆಯಾ ಅಂತ ನೋಡಿ.—ಬೈಬಲ್‌ ತತ್ವ: ಫಿಲಿಪ್ಪಿ 3:17.

ಸವಿನೆನಪುಗಳನ್ನು ಮೆಲುಕುಹಾಕಿ. ಮನನೋಯಿಸುವಂಥ ಮಾತುಗಳು ಹೃದಯದಿಂದ ಬಂದ ಮಾತೇ ಹೊರತು ಆ ಕ್ಷಣದಲ್ಲಿ ಬಾಯಿ ತಪ್ಪಿ ಬಂದ ಮಾತಾಗಿರೋದಿಲ್ಲ. ಹಾಗಾಗಿ ಸಂಗಾತಿಯ ಕಡೆಗೆ ಒಳ್ಳೇ ಭಾವನೆಗಳನ್ನು, ಅನಿಸಿಕೆಗಳನ್ನು ಬೆಳೆಸಿಕೊಳ್ಳಿ. ನೀವಿಬ್ಬರೂ ಸೇರಿ ಆನಂದಿಸಿದ ಮಧುರ ಕ್ಷಣಗಳನ್ನು ನೆನಪಿಸಿಕೊಳ್ಳಿ. ಹಳೇ ಫೋಟೋಗಳನ್ನು ನೋಡಿ. ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಘಟನೆಗಳನ್ನು, ಸಂಗಾತಿಯೆಡೆಗೆ ನಿಮ್ಮನ್ನು ಸೆಳೆದ ಸಂಗತಿಗಳನ್ನು ಆಗಾಗ್ಗೆ ಮೆಲುಕುಹಾಕಿ.—ಬೈಬಲ್‌ ತತ್ವ: ಲೂಕ 6:45.

ಬೈಯುವ ಬದಲು ಭಾವನೆಗಳನ್ನು ವ್ಯಕ್ತಪಡಿಸಿ. ಸಂಗಾತಿಯನ್ನು ಬೈಯಬೇಡಿ. ಬದಲಿಗೆ ನಿಮ್ಮ ಮೇಲಾಗಿರುವ ಪರಿಣಾಮವನ್ನು ತಿಳಿಸಿ. ಉದಾಹರಣೆಗೆ, “ಯಾವಾಗಲೂ ನೀವು/ನೀನು ಹೀಗೆ. ಏನೇ ಮಾಡೋದಾದರೂ ನನ್ನ ಮಾತ್ರ ಒಂದು ಮಾತೂ ಕೇಳಲ್ಲ” ಅಂತ ಹೇಳುವ ಬದಲು “ನನ್ನ ಕೇಳ್ದೆ ನೀವೇ/ನೀನೇ ಎಲ್ಲ ಮಾಡಿದಾಗ, ನನಗೇನು ಬೆಲೆ ಇಲ್ಲ ಅಂತ ಅನಿಸ್ತು” ಅಂತ ಒಳ್ಳೇ ರೀತಿಯಲ್ಲಿ ಹೇಳಿ.—ಬೈಬಲ್‌ ತತ್ವ: ಕೊಲೊಸ್ಸೆ 4:6.

ಯಾವಾಗ ನಿಲ್ಲಿಸಬೇಕಂತ ತಿಳಿದಿರಿ. ಸಿಟ್ಟೇರುವಲ್ಲಿ ಅಥವಾ ಮಾತು ಮಿತಿಮೀರಿ ಹೋಗುತ್ತಿರೋ ಹಾಗೆ ಅನಿಸಿದರೆ ಮಾತುಕತೆಯನ್ನು ಅಲ್ಲೇ ನಿಲ್ಲಿಸಿ. ಮಾತು ಜಗಳದ ರೂಪ ತಾಳುತ್ತಿರೋದಾದರೆ ಆ ಜಾಗವನ್ನು ಬಿಟ್ಟು ಹೊರಟು ಹೋಗೋದರಲ್ಲಿ ಏನೂ ತಪ್ಪಿಲ್ಲ. ಮನಸ್ಸು ಶಾಂತವಾದ ಮೇಲೆ ಮಾತಾಡುವುದು ತುಂಬ ಒಳ್ಳೇದು.—ಬೈಬಲ್‌ ತತ್ವ: ಜ್ಞಾನೋಕ್ತಿ 17:14.◼ (g13-E 04)

ಮನನೋಯಿಸುವಂಥ ಮಾತುಗಳು ಹೃದಯದಿಂದ ಬಂದ ಮಾತೇ ಹೊರತು ಆ ಕ್ಷಣದಲ್ಲಿ ಬಾಯಿ ತಪ್ಪಿ ಬಂದ ಮಾತಾಗಿರೋದಿಲ್ಲ