ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಷ್ಟಕಾರ್ಪಣ್ಯ ಮುಕ್ತ ಜೀವನ—ನಂಬತಕ್ಕ ವಾಗ್ದಾನ

ಕಷ್ಟಕಾರ್ಪಣ್ಯ ಮುಕ್ತ ಜೀವನ—ನಂಬತಕ್ಕ ವಾಗ್ದಾನ

ಕಷ್ಟಕಾರ್ಪಣ್ಯ ಮುಕ್ತ ಜೀವನ—ನಂಬತಕ್ಕ ವಾಗ್ದಾನ

“[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”—ಪ್ರಕಟನೆ 21:4.

ಎಂಥ ಮನಮುಟ್ಟುವ ವಾಗ್ದಾನ! ಆದರೆ ಅದನ್ನು ನಂಬಬಹುದೇ? ಪ್ರಥಮ ಮಾನವ ಆದಾಮನಿಗೆ ಕೊಡಲಾದ ಒಂದು ಎಚ್ಚರಿಕೆಯನ್ನು ತೆಗೆದುಕೊಳ್ಳಿ. ತನ್ನ ಮಾತನ್ನು ಕೇಳದೇ ಹೋದರೆ ಆದಾಮ ಸಾಯುವುದು ಖಂಡಿತ ಎಂದಿದ್ದನು ದೇವರು. (ಆದಿಕಾಂಡ 2:17) ಅದೇ ನಡೆಯಿತು. ದೇವರು ಹೇಳಿದಂತೆಯೇ ಅವನು ಸತ್ತುಹೋದನು. ಆದಾಮನ ಇಡೀ ಸಂತತಿಗೂ ಮರಣ, ಕಷ್ಟಕಾರ್ಪಣ್ಯಗಳು ಬಳುವಳಿಯಾಗಿ ಸಿಕ್ಕಿದವು. ದೇವರು ಹೇಳಿದ್ದನ್ನು ಮಾಡುತ್ತಾನೆಂಬುದಕ್ಕೆ ಇದು ಸಾಕ್ಷಿ. ಹಾಗಾಗಿ ಭೂಮಿಯ ಮೇಲೆ ಆರಂಭದಲ್ಲಿದ್ದ ಪರಿಪೂರ್ಣ ಸ್ಥಿತಿಗತಿಯನ್ನು ಪುನಃ ತರುವೆನೆಂದು ಆತನು ಕೊಟ್ಟಿರುವ ವಾಗ್ದಾನವನ್ನು ನಂಬಲು ಇದಕ್ಕಿಂತ ಹೆಚ್ಚಿನ ಕಾರಣ ಬೇಕೇ?

ಅಷ್ಟೇ ಅಲ್ಲ, ಹಿಂದಿನ ಲೇಖನದಲ್ಲಿ ಚರ್ಚಿಸಿದಂತೆ ದೇವರಲ್ಲಿ ಅನುಕಂಪ, ಪ್ರೀತಿ, ನ್ಯಾಯದಂಥ ಗುಣಗಳಿವೆ. ನಮ್ಮಲ್ಲೂ ಅದೇ ಗುಣಗಳಿರುವುದರಿಂದ ಕಷ್ಟಕಾರ್ಪಣ್ಯಗಳಿಗೆ ಅಂತ್ಯ ತರಲು ಬಯಸುತ್ತೇವೆ. ಲೋಕ ಘಟನೆಗಳೂ ಜನರ ಮನೋಭಾವಗಳೂ ದೇವರು ಕ್ರಮಕೈಗೊಳ್ಳುವ ಸಮಯ ಹೆಚ್ಚು ದೂರದಲ್ಲಿಲ್ಲ ಎಂದು ರುಜುಪಡಿಸುತ್ತವೆ.— “ಈ ಸಂಗತಿಗಳು ಯಾವಾಗ ಸಂಭವಿಸುವವು?” ಎಂಬ ಚೌಕ ನೋಡಿ.

ಕಷ್ಟಕಾರ್ಪಣ್ಯಗಳಿಂದ ನಮ್ಮನ್ನು ಬಿಡಿಸಲು ಯೆಹೋವ ದೇವರೊಬ್ಬನೇ ಸಂಪೂರ್ಣ ಸಮರ್ಥ ಎಂದು ಏಕೆ ಹೇಳುತ್ತೇವೆ? ಆತನು ತನ್ನ ಮಗ ಯೇಸುವಿನ ಮೂಲಕ ಏನು ಮಾಡಬಲ್ಲನು ಎಂದು ನೋಡೋಣ. ಕಷ್ಟಸಂಕಟಗಳನ್ನು ಬುಡಸಮೇತ ಕಿತ್ತುಹಾಕಲು ಆತನು ಈಗಾಗಲೇ ಯಾವ ಏರ್ಪಾಡುಗಳನ್ನು ಮಾಡಿದ್ದಾನೆ ಎಂದು ನೋಡೋಣ.

ವೈಯಕ್ತಿಕ ಆಯ್ಕೆಗಳು. ನಮ್ಮ ಪೂರ್ವಜ ಆದಾಮ ಒಂದು ಆಯ್ಕೆ ಮಾಡಿದ. ಅದರ ಘೋರ ಪರಿಣಾಮಗಳನ್ನು ಅವನ ಇಡೀ ಸಂತತಿ ಅನುಭವಿಸುತ್ತಾ ಇದೆ. “ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ” ಎಂದು ಯೇಸುವಿನ ಶಿಷ್ಯ ಪೌಲ ಬರೆದನು. (ರೋಮನ್ನರಿಗೆ 8:22) ಇದಕ್ಕೆ ದೇವರು ಕೊಡುವ ಪರಿಹಾರದಲ್ಲಿ ಕಿಂಚಿತ್ತೂ ಅನ್ಯಾಯವಿಲ್ಲ. ಅದು ದೇವರ ಕನಿಕರದಿಂದ ತುಂಬಿದ ಸರಳ ಏರ್ಪಾಡಾಗಿದೆ. “ಪಾಪವು ಕೊಡುವ ಸಂಬಳ ಮರಣ, ಆದರೆ ದೇವರು ಕೊಡುವ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನ ಮೂಲಕವಾಗಿರುವ ನಿತ್ಯಜೀವ” ಎನ್ನುತ್ತದೆ ರೋಮನ್ನರಿಗೆ 6:23.

ಪರಿಪೂರ್ಣ ಮನುಷ್ಯನಾಗಿದ್ದ ಯೇಸು ಯಾವ ಪಾಪವನ್ನೂ ಮಾಡಲಿಲ್ಲ. ಆತನು ಯಾತನಾ ಕಂಬದ ಮೇಲೆ ತನ್ನ ಜೀವತೆತ್ತನು. ದೇವರ ಮಾತಿಗೆ ಬೆಲೆಕೊಡುವ ಮಾನವಕುಲಕ್ಕೆ ಪಾಪ-ಮರಣಗಳ ಶಾಪದಿಂದ ಬಿಡುಗಡೆ ಹೊಂದುವ ಮಾರ್ಗವನ್ನು ಇದು ತೆರೆಯಿತು. ಪಾಪದ ಬಿಗಿಮುಷ್ಟಿಯಿಂದ ಮುಕ್ತವಾದ ಲೋಕದಲ್ಲಿ ಅನಂತಕಾಲ ಬದುಕುವ ಪ್ರತೀಕ್ಷೆ ನಮ್ಮ ಮುಂದಿದೆ. ತಪ್ಪು ಆಯ್ಕೆಗಳನ್ನು ಮಾಡಲು ಕಾರಣವಾಗಿರುವ ಆನುವಂಶಿಕ ಪಾಪ ನಮ್ಮಲ್ಲಿರುವುದಿಲ್ಲ. ಬೇಕುಬೇಕೆಂದೇ ಬೇರೆಯವರಿಗೆ ಕಷ್ಟ ಕೊಡುವ ಜನರೂ ಇರುವುದಿಲ್ಲ. ಏಕೆಂದರೆ “ಕೆಡುಕರು ತೆಗೆದುಹಾಕಲ್ಪಡುವರು.”—ಕೀರ್ತನೆ 37:9.

ಅನಿರೀಕ್ಷಿತ ಘಟನೆಗಳು ಮತ್ತು ಲೋಪದೋಷಗಳು. ದೇವರು ನೇಮಿಸಿರುವ ರಾಜ ಯೇಸು ಕ್ರಿಸ್ತ ನೈಸರ್ಗಿಕ ಶಕ್ತಿಗಳನ್ನೂ ನಿಯಂತ್ರಿಸಬಲ್ಲನು. ಕ್ರಿ.ಶ. ಒಂದನೇ ಶತಮಾನದಲ್ಲಿ ಯೇಸು ಮತ್ತು ಅವನ ಶಿಷ್ಯರು ಒಂದು ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ಏನು ನಡೆಯಿತೆಂದು ಗಮನಿಸಿ. “ಭಯಂಕರವಾದ ಬಿರುಗಾಳಿಯು ಎದ್ದು ಅಲೆಗಳು ದೋಣಿಗೆ ಬಡಿದು ಒಳಗೆ ನುಗ್ಗಿದ್ದರಿಂದ ಅದು ಮುಳುಗುವುದರಲ್ಲಿತ್ತು.” ಶಿಷ್ಯರು ಯೇಸುವಿನ ಸಹಾಯ ಕೇಳಿದಾಗ “ಅವನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ, ‘ಷ್‌! ಸುಮ್ಮನಿರು!’ ಎಂದು ಹೇಳಿದನು. ಆಗ ಬಿರುಗಾಳಿಯು ನಿಂತು ಎಲ್ಲವೂ ಶಾಂತವಾಯಿತು.” ಶಿಷ್ಯರಿಗೆ ಇದನ್ನು ನಂಬಲಿಕ್ಕೇ ಆಗಲಿಲ್ಲ. “ಗಾಳಿಯೂ ಸಮುದ್ರವೂ ಇವನ ಮಾತುಗಳನ್ನು ಪಾಲಿಸುತ್ತವಲ್ಲಾ?” ಎಂದು ಪರಸ್ಪರ ಮಾತಾಡಿಕೊಂಡರು.—ಮಾರ್ಕ 4:37-41.

ದೇವರ ಮಾತಿನಂತೆ ನಡೆಯುವವನು ಯೇಸುವಿನ ಆಳ್ವಿಕೆಯಡಿ “ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು.” (ಜ್ಞಾನೋಕ್ತಿ 1:33) ಇದರರ್ಥ ನೈಸರ್ಗಿಕ ವಿಪತ್ತುಗಳು ನಮ್ಮನ್ನು ಕಾಡುವುದಿಲ್ಲ. ನಮ್ಮ ಪೃಥ್ವಿಯ ದುರುಪಯೋಗವೂ ಆಗುವುದಿಲ್ಲ. ಕಟ್ಟಡಗಳನ್ನು ಕಟ್ಟುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುವುದು. ಜನರು ನೈಸರ್ಗಿಕ ಶಕ್ತಿಗಳ ಎಚ್ಚರಿಕೆಗಳನ್ನು ಅಸಡ್ಡೆ ಮಾಡುವುದಿಲ್ಲ. ಮಾನವನಿಂದ ಉಂಟಾಗುವ ಬೇರೆ ಅನಾಹುತಗಳೂ ಅಲ್ಲಿರವು. ಅವಘಡಗಳೂ ಸಂಭವಿಸುವುದಿಲ್ಲ.

ಅನಿರೀಕ್ಷಿತ ಘಟನೆಗಳಿಂದ ಉಂಟಾಗಿರುವ ವೇದನೆಯನ್ನು ತಾನು ನೀಗಿಸಬಲ್ಲೆ ಎಂದು ಯೇಸು ಭೂಮಿಯಲ್ಲಿದ್ದಾಗಲೇ ತೋರಿಸಿಕೊಟ್ಟನು. “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ” ಎಂದನವನು. (ಯೋಹಾನ 11:25) ನೈಸರ್ಗಿಕ ವಿಪತ್ತುಗಳಲ್ಲಿ ಜೀವ ಕಳೆದುಕೊಂಡ ಲಕ್ಷಾಂತರ ಮಂದಿಯನ್ನು ಜೀವಂತವಾಗಿ ಎಬ್ಬಿಸುವ ಶಕ್ತಿಯೂ ಮನಸ್ಸೂ ಆತನಿಗಿದೆ. ಇದನ್ನು ಹೇಗೆ ನಂಬುವುದು? ಯೇಸು ಭೂಮಿಯಲ್ಲಿದ್ದಾಗ ಸತ್ತುಹೋಗಿದ್ದ ಕೆಲವರನ್ನು ಜೀವಂತವಾಗಿ ಎಬ್ಬಿಸುವ ಮೂಲಕ ನಮ್ಮ ಭರವಸೆಗೆ ಆಧಾರ ಕೊಟ್ಟನು. ಅಂಥ ಮೂರು ಉದಾಹರಣೆಗಳು ಬೈಬಲಿನಲ್ಲಿ ದಾಖಲಾಗಿವೆ.—ಮಾರ್ಕ 5:38-43; ಲೂಕ 7:11-15; ಯೋಹಾನ 11:38-44.

“ಈ ಲೋಕದ ಅಧಿಪತಿ.” “ಮರಣವನ್ನು ಉಂಟುಮಾಡಶಕ್ತನಾದವನನ್ನು ಅಂದರೆ ಪಿಶಾಚನನ್ನು . . . ಇಲ್ಲದಂತೆ ಮಾಡಲು” ಕ್ರಿಸ್ತ ಯೇಸುವನ್ನು ದೇವರು ನೇಮಿಸಿದ್ದಾನೆ. (ಇಬ್ರಿಯ 2:14) “ಈಗ ಈ ಲೋಕಕ್ಕೆ ನ್ಯಾಯತೀರ್ಪಾಗುತ್ತಿದೆ; ಈಗ ಈ ಲೋಕದ ಅಧಿಪತಿಯು ಹೊರಗೆ ಹಾಕಲ್ಪಡುವನು” ಎಂದು ಯೇಸು ಘೋಷಿಸಿದನು. (ಯೋಹಾನ 12:31) ಆತನು ಲೋಕದ ಮೇಲೆ ಪಿಶಾಚನ ಕರಿನೆರಳು ಬೀಳದಂತೆ ಮಾಡುವ ಮೂಲಕ ‘ಪಿಶಾಚನ ಕೆಲಸಗಳನ್ನು ಭಂಗಗೊಳಿಸುವನು.’ (1 ಯೋಹಾನ 3:8) ಪಿಶಾಚನು ಹುಟ್ಟುಹಾಕುವ ದುರಾಶೆ, ಭ್ರಷ್ಟಾಚಾರ, ಸ್ವಾರ್ಥಕ್ಕೆ ತೆರೆಬೀಳುವುದು. ಅಂಥ ಮಾನವ ಸಮಾಜ ಎಷ್ಟು ಸೊಗಸಾಗಿರುವುದಲ್ಲವೇ! (g11-E 07)

[ಪುಟ 9ರಲ್ಲಿರುವ ಚೌಕ]

 “ಈ ಸಂಗತಿಗಳು ಯಾವಾಗ ಸಂಭವಿಸುವವು?”

ಶಿಷ್ಯರು ಯೇಸುವಿನ ಬಳಿ ಬಂದು, “ಈ ಸಂಗತಿಗಳು ಯಾವಾಗ ಸಂಭವಿಸುವವು ಮತ್ತು ನಿನ್ನ ಸಾನ್ನಿಧ್ಯಕ್ಕೂ [ದುಷ್ಟ] ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು?” ಎಂದು ಕೇಳಿದರು. (ಮತ್ತಾಯ 24:3) ಯೇಸು ಕೊಟ್ಟ ಉತ್ತರ ಮತ್ತು ಆತನ ಮರಣದ ನಂತರ ದೇವರು ಬರೆಯಿಸಿದ ಇತರ ಭವಿಷ್ಯವಾಣಿಗಳು ಕಷ್ಟಕಾರ್ಪಣ್ಯಗಳ ಅಂತ್ಯ ಸಮೀಪಿಸುತ್ತಿರುವಾಗ ಏನು ಸಂಭವಿಸುವುದೆಂದು ತಿಳಿಸುತ್ತವೆ. * ಇಂದು ನಡೆಯುತ್ತಿರುವ ಘಟನೆಗಳು ಮತ್ತು ಚಾಲ್ತಿಯಲ್ಲಿರುವ ಮನೋಭಾವಗಳೊಂದಿಗೆ ಕೆಳಕಂಡ ಭವಿಷ್ಯವಾಣಿಗಳನ್ನು ಹೋಲಿಸಿ ನೋಡಿ.

● ಜಗತ್ತಿನೆಲ್ಲೆಡೆ ಯುದ್ಧಗಳುಮತ್ತಾಯ 24:7; ಪ್ರಕಟನೆ 6:4.

● ಕ್ಷಾಮ ಮತ್ತು ರೋಗಲೂಕ 21:11; ಪ್ರಕಟನೆ 6:5-8.

● ಭೂಮಿಯ ಕೆಡಿಸುವಿಕೆಪ್ರಕಟನೆ 11:18.

● ‘ಹಣಪ್ರೇಮಿಗಳು’2 ತಿಮೊಥೆಯ 3:2.

● ‘ಹೆತ್ತವರಿಗೆ ಅವಿಧೇಯರು’2 ತಿಮೊಥೆಯ 3:2.

● ‘ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರು’2 ತಿಮೊಥೆಯ 3:4.

ಕಷ್ಟಕಾರ್ಪಣ್ಯ ಮುಕ್ತ ಜೀವನ ಬೇಗನೆ ಸಿಗಲಿದೆ ಎಂಬುದರ ಬಗ್ಗೆ ಹೆಚ್ಚನ್ನು ತಿಳಿಸಲು ಯೆಹೋವನ ಸಾಕ್ಷಿಗಳು ಸಿದ್ಧರಿದ್ದಾರೆ. ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಅನುಕೂಲವಾದ ಬೇರೊಂದು ಸ್ಥಳದಲ್ಲಿ ನಿಮ್ಮೊಂದಿಗೆ ಬೈಬಲ್‌ ಅಧ್ಯಯನ ಮಾಡಲು ಅವರು ಸಂತೋಷಪಡುವರು. ದಯವಿಟ್ಟು ನಿಮ್ಮ ಊರಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ ಅಥವಾ ಪುಟ 5ರಲ್ಲಿರುವ ಸೂಕ್ತ ವಿಳಾಸಕ್ಕೆ ಬರೆಯಿರಿ ಅಥವಾ ನಮ್ಮ ವೆಬ್‌ ಸೈಟ್‌ www.watchtower.org ಅನ್ನು ನೋಡಿ.

[ಪಾದಟಿಪ್ಪಣಿ]

^ ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ ಪುಸ್ತಕದ “ನಾವು ‘ಕಡೇ ದಿವಸಗಳಲ್ಲಿ’ ಜೀವಿಸುತ್ತಿದ್ದೇವೊ?” ಎಂಬ 9ನೇ ಅಧ್ಯಾಯ ನೋಡಿ.