ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

“ಕ್ರೂರತನ ಬಿಟ್ಟೆ, ಸಾಧುತನ ಕಲಿತೆ”

“ಕ್ರೂರತನ ಬಿಟ್ಟೆ, ಸಾಧುತನ ಕಲಿತೆ”
  • ಜನನ: 1956

  • ದೇಶ: ಕೆನಡ

  • ಹಿಂದೆ: ತುಂಬ ನಿರಾಶೆ, ಕಂಡಕಂಡ ಸ್ತ್ರೀಯರೊಂದಿಗೆ ಸಂಬಂಧ, ಕ್ರೂರಿ

ಹಿನ್ನೆಲೆ

 ನಾನು ಕೆನೆಡದಲ್ಲಿರೊ ಆಲ್ಬೆರ್ಟದ ಕಲ್ಗರಿ ಎಂಬ ನಗರದಲ್ಲಿ ಹುಟ್ಟಿದೆ. ನಾನು ಮಗುವಾಗಿದ್ದಾಗಲೇ ಅಪ್ಪಅಮ್ಮಗೆ ಡೈವೊರ್ಸ್‌ ಆಗಿತ್ತು. ಅಮ್ಮ ನನ್ನ ಎತ್ತಿಕೊಂಡು ಅಜ್ಜಅಜ್ಜಿ ಮನೆಗೆ ಬಂದುಬಿಟ್ರು. ಅಜ್ಜಅಜ್ಜಿಗೆ ನನ್ನ, ಅಮ್ಮನ್ನ ಕಂಡ್ರೆ ತುಂಬ ಪ್ರೀತಿ. ನಾನು ತುಂಬ ಖುಷಿಯಾಗಿದ್ದೆ, ನೆಮ್ಮದಿಯಾಗಿದ್ದೆ. ಆ ಬಾಲ್ಯದ ಸವಿ ನೆನಪುಗಳನ್ನ ಯಾವತ್ತೂ ಮರಿಲಿಕ್ಕೆ ಆಗಲ್ಲ.

 ನನಗೆ ಏಳು ವರ್ಷ ಇದ್ದಾಗ ನನ್ನ ಜೀವನನೇ ತಲೆಕೆಳಗೆ ಆಗೋಯ್ತು. ಅಪ್ಪಅಮ್ಮ ಮತ್ತೆ ಮದುವೆ ಆದ್ರು. ನಾವು ಅಮೆರಿಕದಲ್ಲಿರೋ ಮಿಸೌರಿಯ ಸೇಂಟ್‌ ಲೂಯಿಸ್‌ ನಗರಕ್ಕೆ ಹೋದ್ವಿ. ಸ್ವಲ್ಪ ದಿನದಲ್ಲೇ ಅಪ್ಪ ತುಂಬ ಕ್ರೂರಿ ಅಂತ ಗೊತ್ತಾಯ್ತು. ಮೊದಲನೇ ದಿನ ನಾನು ಸ್ಕೂಲಿಗೆ ಹೋಗಿ ಮನೆಗೆ ಬಂದಾಗ ಸ್ಕೂಲಲ್ಲಿ ಬೇರೆ ಮಕ್ಕಳು ತಂಟೆತಕರಾರು ಮಾಡಿದ್ದಾರೆ, ಆದ್ರೆ ನಾನು ಅವ್ರಿಗೆ ತಿರುಗಿಸಿ ಹೊಡಿಲಿಲ್ಲ ಅಂತ ಅಪ್ಪನಿಗೆ ಗೊತ್ತಾಯ್ತು. ಅಪ್ಪನಿಗೆ ಎಷ್ಟು ಕೋಪ ಬಂತಂದ್ರೆ ಆ ಮಕ್ಕಳು ಹೊಡೆದ್ದಕ್ಕಿಂತ ಜೋರಾಗಿ ನನಗೆ ಹೊಡೆದ್ರು. ಏಟಿಗೆ ತಿರುಗೇಟು ಕೊಟ್ಟೇ ಬರಬೇಕು ಅಂತ ನನಗೆ ಆಗ ಅರ್ಥ ಆಯ್ತು. ಬರೀ ಏಳು ವಯಸ್ಸಿದ್ದಾಗಲೇ ನಾನು ಬೇರೆ ಮಕ್ಕಳ ಜೊತೆ ಜಗಳಕ್ಕಿಳಿದೆ.

 ಅಪ್ಪ ತುಂಬ ಕೋಪಿಷ್ಟ ಆಗಿದ್ರಿಂದ ಆಗಾಗ ಮನೇಲಿ ಜಗಳ ಆಗ್ತಿತ್ತು. ಅಮ್ಮನಿಗೆ ಸಾಕು ಸಾಕಾಗಿ ಹೋಗಿತ್ತು. ಹಾಗಾಗಿ ಅಪ್ಪ ಬೈದಾಗ ಅಮ್ಮನೂ ಕಿರಿಚಾಡುತ್ತಿದ್ರು. ತಿರುಗಿಸಿ ಅಪ್ಪನಿಗೆ ಹೊಡಿತ್ತಿದ್ರು ಕೂಡ. 11 ವಯಸ್ಸಲ್ಲೇ ನಾನು ಡ್ರಗ್ಸ್‌ ತಗೊಳ್ತಿದ್ದೆ, ಕುಡಿತಿದ್ದೆ. ದಿನ ದಿನಕ್ಕೆ ನಾನು ರೊಚ್ಚಿಗೆದ್ದು ಬೀದಿಯಲ್ಲಿ ಜಗಳ ಮಾಡೋದು ಜಾಸ್ತಿ ಆಯ್ತು. ಹೈ ಸ್ಕೂಲ್‌ ಮುಗಿಸೋ ಅಷ್ಟರಲ್ಲಿ ತುಂಬ ಕ್ರೂರಿ ಆಗಿಬಿಟ್ಟೆ.

 ನನಗೆ 18 ವರ್ಷ ಆದಾಗ ಅಮೆರಿಕದ ನೌಕಾಪಡೆಗೆ ಸೇರಿಕೊಂಡೆ. ಜನರನ್ನ ಸಾಯಿಸೋದು ಹೇಗಂತ ಅಲ್ಲಿ ಕಲಿತೆ. ಐದು ವರ್ಷ ಆದ ಮೇಲೆ ಮಿಲಿಟರಿ ಬಿಟ್ಟೆ. ಆಮೇಲೆ ಫೆಡರಲ್‌ ಬ್ಯೂರೋ ಆಫ್‌ ಇನ್‌ವೆಸ್ಟಿಗೇಷನ್‌ ಅನ್ನೋ ತನಿಖೆ ಸಂಸ್ಥೆಯಲ್ಲಿ ಮನಃಶಾಸ್ತ್ರ ಕಲಿಯೋಕೆ ಶುರು ಮಾಡ್ದೆ. ಏಕೆಂದ್ರೆ ನನಗೊಂದು ಕೆಲಸ ಬೇಕಿತ್ತು. ಅಮೆರಿಕದ ಯೂನಿವರ್ಸಿಟಿಯಲ್ಲಿ ಓದಕ್ಕೆ ಶುರುಮಾಡ್ದೆ. ಆಮೇಲೆ ಕೆನಾಡಗೆ ಹೋದ ಮೇಲೆ ಅಲ್ಲಿ ಓದು ಮುಂದುವರಿಸಿದೆ.

 ಯೂನಿವರ್ಸಿಟಿಯಲ್ಲಿ ಇದ್ದಾಗ ನನಗೆ ಜನರ ಬಗ್ಗೆ ತುಂಬ ನಿರಾಶೆ ಆಯ್ತು. ಜನ ತುಂಬ ಸ್ವಾರ್ಥಿಗಳು ಅಂತ ಅನಿಸ್ತು. ನನಗೆ ಏನು ಮಾಡಿದ್ರೂ ತೃಪ್ತಿ ಇರ್ಲಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರನೇ ಇಲ್ಲವೇನೋ ಅಂತ ಅನಿಸ್ತು. ಜನರು ಎಲ್ಲ ಸರಿಮಾಡ್ತಾರೆ ಅಂತ ನಂಬಿದ್ದು ಬರೀ ಸುಳ್ಳು ಅಂತ ಅರ್ಥಮಾಡ್ಕೊಂಡೆ.

 ನನ್ನ ಜೀವನಕ್ಕೆ ಒಂದು ಅರ್ಥ ಇದೆ ಅಂತ ನನಗೆ ಅನಿಸಲಿಲ್ಲ. ಅದಕ್ಕೆ ದುಡ್ಡು ಮಾಡೋದು, ಕುಡಿಯೋದು, ಡ್ರಗ್ಸ್‌, ಸೆಕ್ಸ್‌ ಇದೇ ನನ್ನ ಜೀವನದಲ್ಲಿ ಮುಖ್ಯ ಆಗಿತ್ತು. ಯಾವಾಗಲೂ ನನ್ನ ತಲೆಯಲ್ಲಿ ಓಡ್ತಿದ್ದದ್ದು ಒಂದೇ ವಿಷ್ಯ, ಅದು ಯಾವ ಪಾರ್ಟಿಗೆ ಹೋಗಬೇಕು, ಯಾವಳ್‌ ಜೊತೆ ಸಂಬಂಧ ಇಟ್ಕೊಳ್ಳಬೇಕು ಅಷ್ಟೇ. ಮಿಲಿಟರಿಯಲ್ಲಿ ಇದ್ದಿದ್ರಿಂದ ಹೊಡೆದಾಟ ಬಡಿದಾಟ ಯಾವುದಕ್ಕೂ ಹೆದರುತ್ತಿರಲಿಲ್ಲ. ಸರಿ ಯಾವುದು ತಪ್ಪು ಯಾವುದು ಅಂತ ನಾನೇ ತೀರ್ಮಾನ ಮಾಡ್ತಿದ್ದೆ. ಬೇರೆಯವರು ಮಾಡೋದು ಸರಿ ಅಲ್ಲ ಅಂತ ಅನಿಸಿದ್ರೆ ‘ಯಾಕೆ ಹೀಗೆ ಮಾಡ್ದೆ?’ ಅಂತ ಕೊರಳಪಟ್ಟಿ ಹಿಡಿದು ಕೇಳ್ತಿದ್ದೆ. ನಿಜ ಹೇಳಬೇಕಂದ್ರೆ ಕ್ರೂರತನ ನನ್ನ ರಕ್ತದಲ್ಲಿ ಹರಿಯುತ್ತಿತ್ತು.

ಬದುಕನ್ನೇ ಬದಲಾಯಿಸಿತು ಬೈಬಲ್‌

 ಒಂದಿನ ನಾನು ಮತ್ತು ನನ್ನ ಫ್ರೆಂಡ್‌ ಡ್ರಗ್ಸ್‌ ತಗೊಂಡು ಅದರ ಕಿಕ್‌ ತಲೆಗೆ ಹತ್ತಿ ನನ್ನ ಮನೆ ಬೇಸ್‌ಮೆಂಟಲ್ಲಿ ನಿಂತಿದ್ವಿ. ಕಾನೂನಿಗೆ ವಿರುದ್ಧವಾಗಿ ಗಾಂಜಾನ ಬೇರೆ ಕಡೆ ಸಾಗಿಸಲಿಕ್ಕೆ ರೆಡಿ ಮಾಡ್ತಿದ್ವಿ. ಆಗ ಅವನು ನನ್ನ ಹತ್ರ ‘ನೀನು ದೇವರನ್ನ ನಂಬ್ತಿಯಾ?’ ಅಂದ. ಅದಕ್ಕೆ ನಾನು “ಈ ಲೋಕದಲ್ಲಿರೋ ಕಷ್ಟಗಳಿಗೆಲ್ಲ ಕಾರಣ ದೇವರೇ ಆಗಿರೋದಾದ್ರೆ ನನಗೆ ಅವ್ರ ಬಗ್ಗೆ ತಿಳ್ಕೊಳ್ಳೋ ಅವಶ್ಯಕತೆನೇ ಇಲ್ಲ” ಅಂದೆ. ಮಾರನೇದಿನ ನಾನು ಹೊಸ ಕೆಲ್ಸಕ್ಕೆ ಸೇರಿಕೊಂಡೆ. ಅಲ್ಲಿ ಒಬ್ಬ ಯೆಹೋವನ ಸಾಕ್ಷಿ ಇದ್ದ. ಅವನು ನನ್ನ ಹತ್ರ “ಈ ಲೋಕದಲ್ಲಿರೋ ಕಷ್ಟಗಳಿಗೆಲ್ಲ ಕಾರಣ ದೇವರೇ ಅಂತ ನೀನು ನೆನಸ್ತೀಯಾ?” ಎಂದು ಕೇಳಿದ. ಹಿಂದಿನ ದಿನ ನಾನು ನನ್ನ ಫ್ರೆಂಡ್‌ಗೆ ಏನು ಹೇಳಿದ್ನೋ ಅದ್ರ ಬಗ್ಗೆನೇ ಇವನೂ ಕೇಳ್ತಿದ್ದಾನಲ್ಲಾ ಅಂತ ತುಂಬ ಆಶ್ಚರ್ಯ ಆಯ್ತು. ನಿಜ ಏನಿರಬಹುದು ಅಂತ ತಿಳಿದುಕೊಳ್ಳೋ ಆಸಕ್ತಿನೂ ಹುಟ್ಟಿತು. 6 ತಿಂಗಳು ನಾವು ತುಂಬ ಚರ್ಚೆ ಮಾಡಿದ್ವಿ. ಜೀವನದ ಬಗ್ಗೆ ನನಗಿದ್ದ ಕಷ್ಟ ಕಷ್ಟದ ಪ್ರಶ್ನೆಗಳಿಗೆ ಅವನು ಬೈಬಲಿಂದ ಉತ್ತರ ತೋರಿಸಿದ.

 ಅಷ್ಟೊತ್ತಿಗಾಗಲೇ ನಾನು ಮತ್ತು ನನ್ನ ಗರ್ಲ್‌ ಫ್ರೆಂಡ್‌ ಒಟ್ಟಿಗೆ ಮನೆಮಾಡಿಕೊಂಡು ಇದ್ವಿ. ನಾನು ಏನೇನು ಕಲಿತಿದ್ದನೋ ಅದನ್ನ ಬಂದು ಅವಳಿಗೆ ಹೇಳ್ತಿದ್ದೆ. ಆದ್ರೆ ಅದೆಲ್ಲ ಅವಳಿಗೆ ಇಷ್ಟ ಆಗಲಿಲ್ಲ. ನಮಗೆ ಬೈಬಲ್‌ ಕಲಿಸ್ಲಿಕ್ಕೆ ಸಾಕ್ಷಿಗಳನ್ನ ಮನೆಗೆ ಕರಿದ್ದಿದ್ದೀನಿ ಅಂತ ಒಂದು ಭಾನುವಾರ ಅವಳಿಗೆ ಹೇಳ್ದೆ. ಮಾರನೆದಿನ ಕೆಲ್ಸ ಮುಗಿಸಿ ಮನೆಗೆ ಬಂದು ನೋಡಿದ್ರೆ ಅವಳು ಮನೆಲಿ ಇರೋದನ್ನೆಲ್ಲ ಗಂಟುಮೂಟೆ ಕಟ್ಟಿಕೊಂಡು ಹೋಗಿಬಿಟ್ಟಿದ್ದಳು. ನಾನು ಹೊರಗೆ ಹೋಗಿ ಜೋರಾಗಿ ಅತ್ತೆ. ಸಹಾಯ ಮಾಡಪ್ಪಾ ಅಂತ ದೇವರ ಹತ್ರ ಪ್ರಾರ್ಥನೆ ಮಾಡ್ದೆ. ಯೆಹೋವ ಅಂತ ದೇವರ ಹೆಸ್ರು ಹೇಳಿ ಪ್ರಾರ್ಥನೆ ಮಾಡಿದ್ದು ಅದೇ ಮೊದಲನೇ ಸಲ.—ಕೀರ್ತನೆ 83:18.

 ಎರಡು ದಿನ ಆದ ಮೇಲೆ ಸಾಕ್ಷಿಗಳು ಬಂದು, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದಿಂದ ನನಗೆ ಬೈಬಲ್‌ ಕಲಿಸಕ್ಕೆ ಶುರು ಮಾಡಿದ್ರು. ಅವರು ಹೋದ ಮೇಲೆ ಆ ಪುಸ್ತಕನ ಓದ್ತಾ ಹೋದೆ. ಅದೇ ರಾತ್ರಿ ಪೂರ್ತಿ ಓದಿ ಮುಗಿಸಿಬಿಟ್ಟೆ. a ಯೆಹೋವ ದೇವರ ಬಗ್ಗೆ, ಆತನ ಮಗ ಯೇಸು ಕ್ರಿಸ್ತನ ಬಗ್ಗೆ ಆ ಪುಸ್ತಕದಿಂದ ನಾನು ಏನು ಕಲಿತೆನೋ ಅದು ಮನಸ್ಸು ಮುಟ್ಟಿತು. ಯೆಹೋವನು ಕರುಣೆ ತೋರಿಸೋ ದೇವರು, ನಾವು ಕಷ್ಟ ಪಡೋದನ್ನ ನೋಡುವಾಗ ಆತನಿಗೆ ತುಂಬ ನೋವಾಗುತ್ತೆ ಅಂತ ಗೊತ್ತಾಯಿತು. (ಯೆಶಾಯ 63:9) ದೇವರು ನನ್ನನ್ನು ತುಂಬ ಪ್ರೀತಿಸ್ತಾನೆ, ಆತನ ಮಗ ಯೇಸು ನನಗೋಸ್ಕರ ತನ್ನ ಜೀವವನ್ನೇ ಕೊಟ್ಟಿದ್ದಾನೆ ಅನ್ನೋದನ್ನ ಕಲಿತು ಮನಸ್ಸು ಕರಗಿ ಹೋಯ್ತು. (1 ಯೋಹಾನ 4:10) ‘ಯಾರೂ ನಾಶ ಆಗೋದು ದೇವರಿಗೆ ಇಷ್ಟ ಇಲ್ಲ, ಎಲ್ಲರೂ ಪಶ್ಚಾತ್ತಾಪ ಪಡಬೇಕು ಅಂತ ಆತನು ಬಯಸುತ್ತಾನೆ.’ (2 ಪೇತ್ರ 3:9) ಹಾಗಾಗಿನೇ ಯೆಹೋವನು ನನ್ನ ವಿಷ್ಯದಲ್ಲೂ ತಾಳ್ಮೆ ತೋರಿಸಿದ್ದಾನೆ ಅಂತ ಹೇಳಬಹುದು. ನಾನು ಯೆಹೋವನಿಗೆ ಫ್ರೆಂಡ್‌ ಆಗಿ ಇರಬೇಕು ಅಂತ ಆತನು ಇಷ್ಟಪಡ್ತಾನೆ ಎಂದು ಅನಿಸ್ತು.—ಯೋಹಾನ 6:44.

 ಆ ವಾರದಿಂದನೇ ನಾನು ಕೂಟಗಳಿಗೆ ಹೋಗಲಿಕ್ಕೆ ಶುರು ಮಾಡ್ದೆ. ನನಗೆ ಉದ್ದ ಕೂದಲಿತ್ತು, ಕಿವಿಗೆ ಓಲೆ ಹಾಕಿಕ್ಕೊಂಡಿದ್ದೆ, ನನ್ನನ್ನ ನೋಡಿದ್ರೆ ಜನ್ರು ಹೆದರೋ ತರ ಇತ್ತು. ಆದ್ರೆ ಹೊರಗಿನವನಾಗಿದ್ದ ನನ್ನನ್ನ ತುಂಬ ದಿನ ಆದ ಮೇಲೆ ನೋಡ್ತಿರೋ ಸಂಬಂಧಿಕನ ತರ ಯೆಹೋವನ ಸಾಕ್ಷಿಗಳು ನೋಡಿದ್ರು, ಚೆನ್ನಾಗಿ ಮಾತಾಡಿಸಿದ್ರು. ನಿಜ ಕ್ರೈಸ್ತರು ಅಂದ್ರೆ ಇವರೇ. ಅಜ್ಜಅಜ್ಜಿ ಮನೆಗೆ ಪುನಃ ಬಂದಿರೋ ತರ ಅನಿಸ್ತು. ಹೇಳಬೇಕಂದ್ರೆ ಅದಕ್ಕಿಂತ ಸೂಪರ್‌ ಆಗಿತ್ತು.

 ಬೈಬಲ್‌ ಕಲಿತಾ ಹೋದ ಹಾಗೆ ನಾನು ತುಂಬ ಬದಲಾವಣೆ ಮಾಡ್ಕೊಂಡೆ. ಕೂದಲು ಕತ್ತರಿಸಿದೆ, ಲೈಂಗಿಕ ಅನೈತಿಕತೆಗೆ ಸಂಬಂಧಿಸಿದ ಎಲ್ಲ ವಿಷ್ಯಗಳನ್ನು ಬಿಟ್ಟುಬಿಟ್ಟೆ. ಡ್ರಗ್ಸ್‌, ಡ್ರಿಂಕ್ಸ್‌ ಎಲ್ಲ ಬಿಟ್ಟುಬಿಟ್ಟೆ. (1 ಕೊರಿಂಥ 6:9, 10; 11:14) ಯೆಹೋವನನ್ನ ಖುಷಿ ಪಡಿಸಬೇಕು ಅಂತ ನನ್ನಾಸೆ. ಹಾಗಾಗಿ ನಾನು ಮಾಡ್ತಿರೋ ವಿಷ್ಯ ಆತನಿಗೆ ಇಷ್ಟ ಇಲ್ಲ ಅಂತ ಗೊತ್ತಾದ್ರೆ ನನ್ನ ಹೃದಯ ಒಡೆದು ಹೋಗ್ತಿತ್ತು. ಯಾವತ್ತೂ ನನ್ನ ತಪ್ಪಿಗೆ ನೆಪ ಕೊಡ್ತಿರಲಿಲ್ಲ. ’ಇನ್ಯಾವತ್ತೂ ನಾನ್‌ ಆ ತರ ನಡ್ಕೊಳೋದಿಲ್ಲ‘ ಅಂತ ನನಗೆ ನಾನೇ ಹೇಳಿಕೊಳ್ತಿದ್ದೆ. ನನ್ನ ಯೋಚನೆನ, ನಡತೆನ ಬದಲಾಯಿಸಕ್ಕೆ ಕೂಡಲೇ ಪ್ರಯತ್ನಿಸ್ತಿದ್ದೆ. ಯೆಹೋವನು ಹೇಳಿದ ಹಾಗೆ ನಡಕೊಂಡ್ರೆ ಜೀವನದಲ್ಲಿ ಉದ್ಧಾರ ಆಗ್ತಿವಿ ಅನ್ನೋದನ್ನ ಅನುಭವದಿಂದ ತಿಳ್ಕೊಂಡೆ. ಬೈಬಲ್‌ ಕಲಿಯಕ್ಕೆ ಶುರುಮಾಡಿ 6 ತಿಂಗಳು ಆದ ಮೇಲೆ ಅಂದ್ರೆ 1989 ರ ಜುಲೈ 29 ರಂದು ನಾನು ದೀಕ್ಷಾಸ್ನಾನ ಪಡಕೊಂಡು ಯೆಹೋವನ ಸಾಕ್ಷಿಯಾದೆ.

ಸಿಕ್ಕಿದ ಪ್ರಯೋಜನಗಳು

 ನಾನು ಪೂರ್ತಿ ಬದಲಾಗೋಕೆ ಬೈಬಲ್‌ ನನಗೆ ಸಹಾಯ ಮಾಡ್ತು. ಮುಂಚೆ ಯಾರಾದ್ರೂ ನನಗೆ ಎದುರಿಸಿ ನಿಂತರೆ ಸಿಡಿದೇಳ್ತಿದ್ದೆ, ಆದ್ರೆ ಈಗ ಎಲ್ಲರ ಜೊತೆ ಶಾಂತಿಯಿಂದ ಇರಲಿಕ್ಕೆ ತುಂಬ ಪ್ರಯತ್ನ ಮಾಡ್ತೀನಿ. (ರೋಮನ್ನರಿಗೆ 12:18) ಈ ತರ ಬದಲಾವಣೆ ನನ್ನಿಂದ ಆಯ್ತು ಅಂತ ನಾನು ಹೇಳಲ್ಲ. ಇದಕ್ಕೆಲ್ಲ ಕಾರಣ ಯೆಹೋವ ದೇವರು. ಒಬ್ಬ ವ್ಯಕ್ತಿಯನ್ನ ಬದಲಾಯಿಸುವ ಶಕ್ತಿಯಿರೋ ಬೈಬಲ್‌ ಮೂಲಕ, ಪವಿತ್ರಾತ್ಮದ ಮೂಲಕ ಆತನು ನನಗೆ ತುಂಬ ಸಹಾಯ ಮಾಡಿದ್ದಾನೆ.—ಗಲಾತ್ಯ 5:22, 23; ಇಬ್ರಿಯ 4:12.

 ಈಗ ನಾನು ಡ್ರಗ್ಸ್‌, ಹಿಂಸೆ ಮತ್ತು ಅನೈತಿಕ ಆಸೆಗಳಿಗೆ ಗುಲಾಮನಾಗಿಲ್ಲ. ಯೆಹೋವನನ್ನು ಖುಷಿ ಪಡಿಸಲಿಕ್ಕೆ ನನ್ನಿಂದ ಆದಷ್ಟು ಪ್ರಯತ್ನಿಸ್ತಿದ್ದೀನಿ. ಹಾಗಾಗಿ ಆತನ ಬಗ್ಗೆ ತಿಳ್ಕೊಳಕ್ಕೆ ಬೇರೆಯವ್ರಿಗೆ ಸಹಾಯ ಮಾಡ್ತೀನಿ. ನಾನು ದೀಕ್ಷಾಸ್ನಾನ ಪಡೆದು ಕೆಲವು ವರ್ಷ ಆದ ಮೇಲೆ ಬೇರೆ ದೇಶಕ್ಕೆ ಹೋಗಿ ಅಲ್ಲೇ ಉಳ್ಕೊಂಡು ದೇವರು ಬಗ್ಗೆ ಸಾರಿದೆ. ಅನೇಕ ವರ್ಷದಿಂದ ನಾನು ತುಂಬ ಜನ್ರಿಗೆ ಬೈಬಲ್‌ ಕಲಿಸಿದ್ದೀನಿ. ಬೈಬಲ್‌ ಕಲಿತ ಮೇಲೆ ಅವರ ಜೀವನ ಹೇಗೆ ಬದಲಾಗಿದೆ ಅಂತ ನೋಡಿ ತುಂಬ ಖುಷಿಯಾಗ್ತಿದೆ. ಅಮ್ಮ ಕೂಡ ಯೆಹೋವನ ಸಾಕ್ಷಿ ಆದಾಗ ನನಗಾದ ಸಂತೋಷನ ಮಾತಲ್ಲಿ ಹೇಳಲಿಕ್ಕೆ ಆಗಲ್ಲ. ಅವರು ಸಾಕ್ಷಿಯಾಗಲಿಕ್ಕೆ ಒಂದು ಕಾರಣ ನನ್ನ ಗುಣ, ನಡತೆಯಲ್ಲಿ ಆದ ಬದಲಾವಣೆನೇ.

 ಸಾರುವ ಕೆಲಸಕ್ಕೆ ಒತ್ತು ಕೊಡುವ, ಸಭೆಯಲ್ಲಿ ಕಲಿಸುವ, ಅಲ್ಲಿ ಇರುವವರನ್ನು ನೋಡಿಕೊಳ್ಳುವ ವಿಷ್ಯದಲ್ಲಿ ತರಬೇತಿ ಕೊಡೋ ಒಂದು ಶಾಲೆಗೆ 1999 ರಲ್ಲಿ ಹೋಗಿ ಪದವಿ ಪಡೆದೆ. ಆ ಶಾಲೆಗೆ ಈಗ ‘ರಾಜ್ಯ ಪ್ರಚಾರಕರ ಶಾಲೆ’ ಎಂದು ಹೆಸರು. ಆ ವರ್ಷನೇ ನಾನು ಯೂಜಿನಿಯಳನ್ನ ಮದುವೆ ಆದೆ. ನಾವಿಬ್ರು ಗ್ವಾಟಿಮಾಲದಲ್ಲಿ ಪೂರ್ಣ ಸಮಯ ಸಾರುವ ಕೆಲಸ ಮಾಡ್ತಾ ಇದ್ದೀವಿ.

 ಈಗ ನನ್ನ ಜೀವನದಲ್ಲಿ ನಿರಾಶೆ ಇಲ್ಲ, ಸಂತೋಷ ತುಂಬಿ ತುಳುಕ್ತಿದೆ. ಲೈಂಗಿಕ ಅನೈತಿಕತೆ, ಹಿಂಸೆಯ ಬಲೆಯಿಂದ ಬಿಡುಗಡೆ ಸಿಕ್ಕಿದ್ದು ಬೈಬಲ್‌ ತತ್ವಗಳನ್ನ ಪಾಲಿಸಿದ್ರಿಂದಾನೇ. ನಿಜ ಪ್ರೀತಿ, ನೆಮ್ಮದಿನ ಈಗ ಪಡ್ಕೊಂಡಿದ್ದೀನಿ.

a ಈಗ ಯೆಹೋವನ ಸಾಕ್ಷಿಗಳು ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪುಸ್ತಕದಿಂದ ಬೈಬಲ್‌ ಕಲಿಸುತ್ತಾರೆ.